ಹೀಗೆ ಯೋಚಿಸುವುದು ತಪ್ಪೋ ಸರಿಯೊ?

 

ಕೆಲವೊಂದು ವಿಷಯಗಳು ಬೇಡವೆಂದರು ನಮ್ಮ ಮೆದುಳಿನೊಳಗೆ ಅಚ್ಚೊತ್ತಿದ ಹಾಗೆ ಕೂತುಬಿಡುತ್ತವೆ. ಮರೆಯಲೇ ಆಗದು. ‘ಅದೆಷ್ಟು ಹಳೇದನ್ನೆಲ್ಲ ನೆನಪಿಡ್ತೀ!’ ಎನ್ನುವ ನನ್ನ ಸ್ನೇಹಿತರಿಗೆ ನಾನು ವಿಪರೀತ ಮರೆಯುವುದು ನಾನು ಬೇಕೆಂದೇ ಮಾಡುವ ತಮಾಷೆ ಎಂದು ಎಷ್ಟೋ ಸಾರಿ ಅನಿಸಿದ್ದಿದೆ. ಇದು ನನಗೂ ಬಿಡಿಸಲಾರದ ಕಗ್ಗಂಟು. ಹಾಗೆ ನಾನು ನೆನಪಿಟ್ಟುಕೊಂಡಿರುವ ಒಂದು ದಿನ ಎಂದರೆ ನಾನು ಒಂದನೆ ಕ್ಲಾಸಿಗೆ ಸೇರಿದ ದಿನ.

ಕ್ಲಾಸಿನೊಳಗೆ ಟೀಚರೊಬ್ಬರು ಬಂದರು. ಕೆಂಪುಬಣ್ಣದ ಒಡಲಿನ ಮೇಲೆ ಬಿಳಿಯ ಪೋಲ್ಕಾಡಾಟುಗಳಿದ್ದ ಸೀರೆಯುಟ್ಟಿದ್ದ ಅವರು ನನಗೆ ವಿಚಿತ್ರವಾಗಿ ಕಂಡುಬಂದು ನಾನು ಅವರನ್ನೆ ಪಿಳಿಪಿಳಿ ಕಣ್ಣುಬಿಡುತ್ತ ನೋಡುತ್ತಿದ್ದೆ. ಒಂದು ರಿಜಿಸ್ಟರು ಬಿಚ್ಚಿದ ಅವರು, ‘ಮಕ್ಕಳೆ, ಒಬ್ಬೊಬ್ಬರಾಗಿ ನಿಮ್ಮ ನಿಮ್ಮ ಹೆಸರು, ತಂದೆಯ ಹೆಸರು, ಜಾತಿ ಹೇಳಿ ನೋಡೋಣ! ‘ ಅಂದರು. ‘ನೀನು ಯಾವ ಜಾತಿ? ‘ ನನ್ನ ಪಕ್ಕದಲ್ಲಿ ಕೂತಿದ್ದ ಹುಡುಗಿಯೊಬ್ಬಳು ನನ್ನನ್ನು ಕೇಳಿದಳು. ನಾನು ಅವಳನ್ನು ತಿರುಗಿ ಕೇಳಿದೆ, ‘ಹಂಗಂದ್ರೆ? ‘ ನನಗೆ ಆಗ ನಿಜಕ್ಕೂ ಗಾಬರಿಯಾಯಿತು. ಏನು ಹೇಳುವುದು? ಜಾತಿ ಅಂದರೆ ಏನಿರಬಹುದು? ಆ ವೇಳೆಗಾಗಲೆ ನನಗೆ ಕನ್ನಡ ಚೆನ್ನಾಗಿ ಓದಲು ಬರೆಯಲು ಬರುತ್ತಿತ್ತು. ದಿನಪತ್ರಿಕೆ, ಮ್ಯಾಗಜೀನುಗಳನ್ನು ಅರ್ಥವಾಗದಿದ್ದರು ಸ್ಪಷ್ಟವಾಗಿ ಓದುತ್ತಿದ್ದೆ. ಅಮ್ಮ ಮಗಳು ಕಲಿಯಲಿ ಎಂದು ಆಗಷ್ಟೆ ಆಂಗ್ಲ ಕಲಿಸಲು ಆರಂಭಿಸಿದ್ದರು. ಅಗೊ, ನನ್ನ ಸರದಿ ಬಂದೇಬಿಟ್ಟಿತು. ನನ್ನ ಹೆಸರು ನನ್ನ ತಂದೆಯ ಹೆಸರು ಹೇಳಿ ಸುಮ್ಮನೆ ನಿಂತೆ. ಟೀಚರು ‘ಯಾವ ಜಾತಿ ಹೇಳು? ‘  ಅಂದರು. ನಾನು ಜೈಕಾರ ಹಾಕುವವಳ ಹಾಗೆ ಕೈ ಮೇಲೆತ್ತಿ ‘ನಾನು ಕನ್ನಡ ಇಂಗ್ಲಿಷ್ ಜಾತಿ! ‘ ಎಂದು ಘೋಷಿಸಿದೆ. ಟೀಚರು ಬಿದ್ದೂ ಬಿದ್ದೂ ನಗಲು ಪ್ರಾರಂಭಿಸಿಬಿಡಬೇಕೆ? ನನ್ನ ಪ್ರಕಾರ ನಾನು ಕಲಿಯುತ್ತಿದ್ದ ಭಾಷೆಯೆ ನನ್ನ ಜಾತಿಯಾಗಿತ್ತು. ಕೊನೆಗೆ ಟೀಚರು ‘ಮಗೂಗೆ ಜಾತಿ ಯಾವುದು ಅಂತ ಹೇಳಲಿಕ್ಕೆ ಗೊತ್ತಿಲ್ಲ. ಹೇಳಿಕೊಡಿ ‘ ಎಂದು ಅಮ್ಮನಿಗೆ ಹೇಳಿಕಳಿಸಿದರಂತೆ. ‘ಒಂದನೆ ಕ್ಲಾಸಿನ ಮಕ್ಕಳಿಗೆ ಜಾತಿ-ಗೀತಿ ಅಂತ ಕೇಳುವುದ್ಯಾಕಂತೆ? ಅವಕ್ಕೇನು ತಿಳಿಯತ್ತೆ ? ‘ ಎಂದು ಅವತ್ತು ಸಂಜೆ ಅಮ್ಮ ಜೋರಾಗಿ ರೇಗುತ್ತಿದ್ದರು. ‘ಈ ಹುಡುಗಿ ಲಿಟರೇಚರ್ ಓದತ್ತೆ ಅಂತ ಆವಾಗ್ಲೇ ಭವಿಷ್ಯ ಹೇಳಿಕೊಂಡುಬಿಟ್ಟಿತ್ತು! ‘ ಎಂದು ನೆನೆಸಿ ಈಗಲು ನಗುತ್ತಿರುತ್ತಾರೆ.

ನನಗೆ ಮಾತ್ರ ನನ್ನ ಪಕ್ಕ ಕೂತು ನನ್ನ ಜಾತಿ ಕೇಳಿದ ಹುಡುಗಿಯೆ ನೆನಪಾಗುತ್ತಾಳೆ. ಆಕೆಯ ಸಣ್ಣ ಪ್ರಶ್ನೆಯನ್ನ ನಾನು ಇನ್ನುವರೆಗೂ ಮರೆಯಲಾಗಿಲ್ಲ. ಒಂದನೆ ಕ್ಲಾಸಿಗೆ ಆಗಷ್ಟೆ ಕಾಲಿಟ್ಟಿದ್ದ ಪುಟ್ಟ ಹುಡುಗಿಯೊಬ್ಬಳು ಜಾತಿಯ ಬಗ್ಗೆ ಅರಿತಿರಬಹುದಾದರೆ ಎಷ್ಟರಮಟ್ಟಿಗೆ ಆ ಮಗುವಿನ ದೈನಂದಿನ ಜೀವನದಲ್ಲಿ ‘ಜಾತಿ’ ಎಂಬ ಪದ ಬಳಸಲ್ಪಟ್ಟಿರಬಹುದು? ಅದನ್ನು ಯಾವ ರೀತಿ ಆ ಮಗುವಿಗೆ ಆಕೆಯ ಹಿರಿಯರು ತಿಳಿಸಿಕೊಟ್ಟಿರಬಹುದು?

ನನಗೆ ಇವೆಲ್ಲ ಈಗಲು ತಿಳಿಯುವುದಿಲ್ಲ. ಭಾರತ ಒಂದು ಜಾತ್ಯತೀತ ರಾಷ್ಟ್ರವಾಗಿದೆ ಎಂದು ಏಳನೇ ಕ್ಲಾಸಿನ ಸಮಾಜಶಾಸ್ತ್ರ ಪಠ್ಯದಲ್ಲಿ ಎಂದೋ ಕಲಿತ ವಾಕ್ಯಕ್ಕೆ ನಾನು ಈವತ್ತು ಭೂತಕನ್ನಡಿಯೇನು ಮೈಕ್ರೋಸ್ಕೋಪಿಟ್ಟು ಹುಡುಕಿದರು ಪ್ರೂಫು ದೊರಕುವದಿಲ್ಲ. ಯಾವುದೆ ಅಪ್ಲಿಕೇಶನ್ನುಗಳಿಗೆ ಬಯೋಡಾಟಾ ಬರೆವಾಗ ನನ್ನ ರಾಷ್ಟ್ರೀಯತೆಯ ಬಗೆಗೆ ಬರೆವಾಗ ಎಷ್ಟು ಹೆಮ್ಮೆಯೆನಿಸುತ್ತದೋ ಅದೇ ಕಾಲಮ್ಮಿನ ಕೆಳಗೆ ನನ್ನ ಜಾತಿಯನ್ನು ನಮೂದಿಸಲೇಬೇಕಾಗಿ ಬಂದಾಗ ಅಷ್ಟೆ ಗಲಿಬಿಲಿ,ಹಿಂಸೆ ಆಗಿದ್ದಿದೆ. ಜಾತಿಗೆ ಬೆಲೆಕೊಡದೆ ಪ್ರೇಮೆವಿವಾಹವಾದ ನನ್ನಿಬ್ಬರು ಸ್ನೇಹಿತರ ಬಗ್ಗೆ ಇತರರು ಆಡಿದ ಕುಹಕದ ಮಾತುಗಳನ್ನು ಕೇಳಿ ಬೇಸರಿಸಿಕೊಂಡಿದ್ದೇನೆ. ಜಾತಿ ನೋಡಿ ಸ್ನೇಹ ಬೆಳೆಸುವವರು, ಪ್ರೇಮಿಸುವವರನ್ನು ನೋಡಿ ಅಚ್ಚರಿಯುಕ್ಕಿದ್ದಿದೆ. ಸ್ನೇಹಿತನೊಬ್ಬ ಜಾತಿಜಗಳವನ್ನು ಸಮರ್ಥಿಸಿ ಮಾತನಾಡಿದಾಗ ಆತ ಮನುಷ್ಯನೆ ಅಲ್ಲವೆನಿಸಿ ಅವತ್ತಿಗೇ ಆತನ ಜತೆ ಸ್ನೇಹಕ್ಕೆ ಒಂದು ಪೂರ್ಣವಿರಾಮ ಕೊಟ್ಟು ಸುಮ್ಮನಾಗಿದ್ದೇನೆ. ಮನೆಗೆ ಕರೆದು ನೀರು ಕೊಡುವ ಮುನ್ನ ಜಾತಿ ವಿಚಾರಿಸುವ ಮನೆಗಳಲ್ಲಿ ಏನೊ ನೆಪಹೂಡಿ ಊಟ ಮಾಡದೆ ಎದ್ದುಬಂದಿದ್ಡೇನೆ. ನೇರವಾಗಿ ಕೇಳುವ ಸೌಜನ್ಯ ತೋರಿದವರಿಗೆ ಅಷ್ಟೆ ನೇರವಾಗಿ ಅದು ತೀರ ಪರ್ಸನಲ್ ವಿಚಾರವೆಂದು ವಿವರಿಸಿ ಹೇಳಿದ್ದೇನೆ.

ನಾನು ಹೀಗೆ ಯೋಚಿಸುವುದು ತಪ್ಪೋ ಸರಿಯೊ ನನಗೆ ತಿಳಿದಿಲ್ಲ. ಆದರೆ ಭಕ್ತಿಯಿಂದ ದೇವಸ್ಥಾನಗಳಿಗೆ ಹೋಗಿಬರುವ ಹಿಂದೂಗಳಲ್ಲದ ಸ್ನೇಹಿತರನ್ನು ಕಂಡಿದ್ದೇನೆ. ಗುಟ್ಟಾಗಿ ಕುಂಕುಮ, ಸ್ಟಿಕರುಗಳನ್ನು ಹಣೆಗಿಟ್ಟುಕೊಂಡು ಸ್ನೇಹಿತೆಯರಿಗೆ ತೋರಿಸಿ ಸಂತಸಪಟ್ಟುಕೊಳ್ಳುವ ಮುಸಲ್ಮಾನ ಸ್ನೇಹಿತೆಯರನ್ನು ನೊಡಿದ್ದೇನೆ. ರಂಜಾನಿನ ತಿಂಗಳಲ್ಲಿ ತಮ್ಮ ಮುಸಲ್ಮಾನ ಸ್ನೇಹಿತೆಯರೊಡನೆ ಉಪವಾಸ ವ್ರತವಿಟ್ಟ ಮುಸಲ್ಮಾನರಲ್ಲದ ಹುಡುಗಿಯರು ನನಗೆ ಪರಿಚಯವಿದ್ದಾರೆ. ಪ್ರತೀ ಭಾನುವಾರ ಚರ್ಚಿಗೆ ಹೋಗಿ ಕ್ಯಾಂಡಲು ಹೊತ್ತಿಸಿ ಮಂಡಿಯೂರಿ ಬರುತ್ತಾಳೆ ಕ್ರಿಶ್ಚಿಯನ್ನಳಲ್ಲದೆ ನನ್ನ ಗೆಳತಿ. ತಾನು ಕಟ್ಟಾ ಸಸ್ಯಾಹಾರಿಯಾಗಿದ್ದೂ ಜತೆಗಿನ ಗೆಳೆಯರು ಮಾಂಸಾಹಾರ ಮಾಡುತ್ತ ಇದ್ದರೆ ಮುಖ ಸಿಂಡರಿಸಿಕೊಂಡು ಎದ್ದುಹೋಗದ ಗೆಳೆಯನ ಬಗ್ಗೆ ನನಗೆ ಅಪಾರ ಗೌರವವಿದೆ. ಇವರ ಪೈಕಿ ಯಾರ ಮನಸ್ಸಿನಲ್ಲು ಭೀಕರವಾದ ಆದರ್ಶಗಳಿಲ್ಲ, ಒಣ ಆಡಂಬರದ ಭಾವನೆಗಳು ಇವರ ಹತ್ತಿರವೂ ಸುಳಿದಿಲ್ಲ. ಆದರೆ ನಮ್ಮ ಸುತ್ತಮುತ್ತಲೂ ಇನ್ನೊಂದು ರೀತಿಯ ಹುಡುಗಹುಡುಗಿಯರು ಇದ್ದಾರೆ. ಭಿಡೆಯಿಲ್ಲದೆ ಎಲ್ಲರಂತೆ ನಕ್ಕುನಲಿಯುವ ಇವರು ತಂತಮ್ಮ ಜಾತಿ, ಧರ್ಮಗಳ ವಿಷಯ ಬಂದೊಡನೆಯೆ ರೇಜಿಗೆ ಹುಟ್ಟಿಸುವಷ್ಟು ಅಪರಿಚಿತರಾಗಿಬಿಡುತ್ತಾರೆ. ನನಗೆ ರಾಷ್ಟ್ರಪ್ರೇಮದ ಬಗೆಗಿನ ದೊಡ್ಡದೊಡ್ಡ ಮಾತುಗಳು ಅರ್ಥವಾಗುವದೇ ಇಲ್ಲ. ಅರ್ಥವಾಗುತ್ತಿರುವುದೇನೆಂದರೆ ಕೆಲವು ದಶಕಗಳ ಹಿಂದೆ ಇದ್ದಿರದ ಅಭದ್ರತೆಯ ಭಾವನೆ ಎಲ್ಲರನ್ನು ಕಾಡಿಸುತ್ತಿದೆ ಅನ್ನುವದು. ಅರ್ಥವಾಗುತ್ತಿರುವುದೇನೆಂದರೆ ಇನ್ನು ಕೆಲವೇ ವರುಷಗಳಲ್ಲಿ ನನ್ನ ಹಾಗೆ ಯೋಚಿಸುವವರು ಬಹುಶಃ ಐಡಿಯಲಿಸ್ಟ್ ರೆಲಿಕ್ಕುಗಳಾಗಿ ಉಳಿದುಹೋಗಬಹುದು ಅನ್ನುವದು.

ನನ್ನ ಮಗಳಿಗೆ ಅವಳ ಜಾತಿಯ ಬಗ್ಗೆ ಯಾರಾದರು ಕೇಳಿದರೆ ಅವಳು ಏನು ಉತ್ತರ ಕೊಡಬಹುದು? 

ಚಿತ್ರಕೃಪೆ: http://www.theharmonyinstitute.org
 

Advertisements

39 thoughts on “ಹೀಗೆ ಯೋಚಿಸುವುದು ತಪ್ಪೋ ಸರಿಯೊ?

 1. ಈ ಅನುಭವ ನಂಗೂ ಆಗಿತ್ತು! ಸ್ಕೂಲಿಗೆ ಸೇರಿಸೋವಾಗ indian ಅಂತಷ್ಟೆ ಹಾಕಿದ್ರು ಅಪ್ಪ. ಆದ್ರೆ ನಮ್ಮ ಜಾಣ ಟೀಚರುಗಳು ತಾವೇ ಆ ಕಾಲಮ್ ತುಂಬಿಟ್ಟುಬಿಟ್ರು!:)) ಜಾತಿ ನಂಗೆ ತುಂಬಾ ಗೊಂದಲಗೊಳಿಸೋ ವಿಷ್ಯ. ಜಾತಿಯ ಮೇಲೆ discriminate ಮಾಡೋದು ನನ್ನ ಆತ್ಮಸಾಕ್ಷಿಗೆ ವಿರುದ್ಧ. ಆದ್ರೂ ಕೆಲವು ಸಂದರ್ಭಗಳಲ್ಲಿ ಜಾತಿಯ ಕಾರಣಕ್ಕೆ ಬಂದಿರೋ ಕೆಲವು ಅಭ್ಯಾಸಗಳು ಬಿಡೋದು ಕಷ್ಟವಾಗುತ್ತೆ. ಎಲ್ಲೋ ಒಂದುಕಡೆ ಅದರ cultural aspect – ಯಾವುದೋ ಹಬ್ಬದ ಆಚರಣೆಯೋ, ಊಟ-ತಿಂಡಿ preferenceಗಳೋ ನನಗೆ ಬೇಕನ್ನಿಸತ್ವೆ. ಆದ್ರೆ ಅದು ಒಂದು heirarchical ವಿಷ್ಯ ಆಗದೇ ಪರ್ಸನಲ್ ಸ್ಪೇಸಿಗೆ ಸೀಮಿತವಾಗಿರಬೇಕು ಅನ್ನಿಸುತ್ತೆ…ಹಾಗೆ ಉಳಿಯೋದು ಕಷ್ಟ ಅಂತಲೂ ಅನ್ನಿಸುತ್ತೆ. ಒಟ್ಟಿನಲ್ಲಿ ಕನ್‌ಫ್ಯೂಶನ್!

 2. Hello Madam,
  This caste system is part of our life, i think not only in India but else where in the world also.
  I want to know about my colleague’s cast and the cultural differences we have. i have seen, even after being friends for years many will not know about cultures and rituals of other.
  i think for that matter knowing about cast, its cultural aspects. its strength( may be political or economical if they don’t belong to your state ) etc is not wrong.
  for ex how many of us will know about marriage , or death rituals of other cast people who may be our friends or neighborers.
  i am very much interested in knowing about these things.but i have seen many people hisitating to tell about this . i will also not force them .

 3. ಟೀನಾ,

  ಒಂದಲ್ಲ ಮಾರಾಯ್ತಿ, ಏಳನೇ ತರಗತಿಯಲ್ಲಿ ನನಗೆ ಈ ಅನುಭವ ಆಗಿತ್ತು! ರೆಜಿಸ್ಟರ್ ನಲ್ಲಿ ಎಲ್ಲರ ಜಾತಿ ಬರೆಯುವಾಗ ನನಗೆ ನನ್ನ ಜಾತಿ ಗೊತ್ತಿಲ್ಲ ಎಂಬ ಕಾರಣಕ್ಕೆ ಕ್ಲಾಸಿನ ಎಲ್ಲರ ಮುಂದೆ ಮುಖ ಕೆಂಪು ಮಾಡಿಕೊಳ್ಳುವ ಪರಿಸ್ಥಿತಿ ಆವತ್ತು. ಮನೆಗೆ ಹೋಗಿ ಅಮ್ಮನ ಬಳಿ ಗೋಳಾಡಿದ್ದೆ, ‘ನಿನ್ನಿಂದ್ಲೇ ಆಗಿದ್ದು’ ಎಂದೂ ದೂರಿದ್ದೆ! ‘ಅದನ್ನು ತಿಳಕೊಂಡ್ರೇನು ಹೊಟ್ಟೆ ತುಂಬಲ್ಲ ಬಿಡೆ’ ಎಂದು ಅಮ್ಮ ಗದರಿದ್ದರ ಅರ್ಥ ಆ ದಿನವಂತೂ ಆಗಿರಲಿಲ್ಲ. ಈಗ… ಹೊಟ್ಟೆ ತುಂಬಲ್ಲ ಅನ್ನೋದು ತಿಳಿದಿದೆ, ಹಾಗಿದ್ರೂ ಅದ್ಯಾಕೆ ಬೇಕು ಎನ್ನೋದು ಅರ್ಥವಾಗಿಲ್ಲ.

 4. ಜಾತಿ ನಮ್ಮ ಹಿರಿಯರಿಗೆ ಅನಿವಾರ್ಯವಾಗಿತ್ತೆನೋ?

  ಹೇಳಿಕೊಳ್ಳಲು ನಾವು “ಜ್ಯಾತ್ಯಾತಿತ” ರಾಷ್ಟ್ರದ ಪ್ರಜೆಗಳು..ಆದರೆ ಹುಟ್ಟಿದ ಮರುಕ್ಷಣದಿಂದಲೇ ಜಾತಿಯನ್ನು ಅನಿವಾರ್ಯ ಮಾಡಿಬಿಡುತ್ತದೆ ಅದೇ “ಜ್ಯಾತ್ಯಾತಿತ” ರಾಷ್ಟ್ರದ ಘನ ಸರ್ಕಾರ. ಜನನ ನೊಂದನಿಯಿಂದ ಹಿಡಿದು ಮರಣ ನೊಂದನಿಯವರೆಗೂ. ಕೆಲವೊಮ್ಮೆ ಜಾತಿ ಕಾರಣದಿಂದ ಅವಕಾಶ ವಂಚಿತನಾದಗಲೂ ಈ ಜ್ಯಾತ್ಯಾತಿತೆಯ ಬಗ್ಗೆ ಗೊಂದಲಗೊಂಡಿದ್ದು ಇದೆ

  -ಶೆಟ್ಟರು

 5. ಜಾತಿ!
  ನಾನು ಈ ಬಗ್ಗೆ ‘ಬಾಲ್ಯ ಕಾಲದ ತಪ್ಪು ತಿಳುವಳಿಕೆಗಳು’ ನಲ್ಲಿ ಬರೆದ್ಕೊಂಡಿದ್ದೆ. ನಂಗೆ ಐದನೇ ಕ್ಲಾಸಿಗೆ ಬಂದ್ರೂನು ಜಾತಿ ಅಂದ್ರೇನು ಗೊತ್ತಿರ್ಲಿಲ್ಲ. ಶಿವಮೊಗ್ಗದಿಂದ ತೀರ್ಥಳ್ಳಿಗೆ ಬಂದಾಗ ಮೊತ್ತಮೊದಲು ‘ನೀನು ಯಾವ ಜಾತಿ?’ ಅನ್ನುವ ಪ್ರಶ್ನೆ ಎದುರಾಗಿತ್ತು. ಆಗ ವಿಪರೀತ ತಡಬಡಾಯಿಸಿ ಹೋಗಿದ್ದೆ!
  ನನ್ನ ಮಗು ಕೇಳತ್ತೆ, ‘ಅಮ್ಮ ಇವರ್ದು ಇದೇ ಜಾತಿ ಅಂತ ಹೆಂಗೆ ಗೊತ್ತಗತ್ತೆ?’ ಮತ್ತೂ ಕೆಳಾತ್ತೆ, ‘ಹಿಂದೂ ಇದ್ದಹಾಗೆ ಮುಂದೂ ಅಂತಾನೂ ಜಾತಿ ಇದೆಯಾ?’
  ಈ ಮುಗ್ಧತೆ ನಿರಂತರವಾಗಿ ಉಳಿದರೆ ಎಷ್ಟು ಚೆಂದ ಅಲ್ವಾ?

 6. It’s a rather complex issue. ಮೇಲೆ ಶ್ರೀ ಹೇಳಿದ ಹಾಗೆ, we cannot wish away certain things. ಜಾತಿಗೆ ಹೊಂದಿಕೊಂಡಂತೆ ಕೆಲವು ಸಂಗತಿಗಳು ಬಂದಿರುತ್ತವೆ; ನಮ್ಮ ವ್ಯಕ್ತಿತ್ವದ ಅಂಗವಾಗಿರುತ್ತವೆ. ಹೀಗಾಗಿ ಅದು ಎಲ್ಲೋ ಒಂದು ಕಡೆ ಇದ್ದೇ ಇರುತ್ತದೆ: ನಾವಾಡುವ ಭಾಷೆಯಲ್ಲಿ, ಅಡುಗೆ ಊಟಗಳಲ್ಲಿ, ಆಚರಣೆಗಳಲ್ಲಿ. ಈ ವಿವಿಧತೆ ನಮಗೆ ಖುಶಿ ಕೊಡುತ್ತದೆ. ಆದರೆ ಇಂಥ ವಿವಿಧತೆಯ ಜೊತೆಗೇ discriminationನ ಸಮಸ್ಯೆಗಳು ತಲೆದೋರುತ್ತವೆ. ಜಾತಿಸೂಚಕವಾದ ಎಷ್ಟೋ ಸಂಗತಿಗಳು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಎಲ್ಲೆಡೆಗೆ ಇರುವಾಗ, ಅವನ್ನು ಕೇವಲ ಸಾಂಸ್ಕೃತಿಕ ಸಂದರ್ಭಗಳಲ್ಲಿ ಗಮನಿಸಿ ಇನ್ನುಳಿದ ಸಮಯದಲ್ಲಿ ಗಮನಿಸದೇ ಇರುವಂಥ filterಗಳು ನಮ್ಮಲ್ಲರಲ್ಲಿವೆಯೇ? ಇರಲು ಸಾಧ್ಯವೇ? ಇದಕ್ಕೆ ವಿರುದ್ಧವಾಗಿ ಎಲ್ಲವನ್ನೂ homogenise ಮಾಡೋಣ, ಯಾಕೆ ಇಷ್ಟು ವಿವಿಧತೆ ಬೇಕು? ಅದರಿಂದ ಬರಿ ಜಗಳಗಳೆ — ಇಂಥ ವಾದಗಳನ್ನೂ ಒಪ್ಪಲು ಸಾಧ್ಯವಿಲ್ಲ. ಸುಲಭ ಸಮಸ್ಯೆಯಲ್ಲ. ಆದರೆ ಹೆಚ್ಚು ಹೆಚ್ಚು ಜನ ಸುಶಿಕ್ಷಿತರಾದರೆ ಸಮಸ್ಯೆ ಕಡಿಮೆಯಾಗಬಹುದು.

 7. ಮಾನವನ ಇತಿಹಾಸದ ಪ್ರಾರಂಭದ ದಿನಗಳಲ್ಲಿ ಅವರು ಮಾಡುವ ಕೆಲಸಗಳನ್ನು ಸುಲಭವಾಗಿ ಗುರುತಿಸುವ ಸಲುವಾಗಿ ರೂಪಿತವಾದ ವರ್ಗಗಳು ನಂತರದ ದಿನಗಳಲ್ಲಿ ಹತ್ತು ಹಲವು ಕೊನಗಳಲ್ಲಿ ಬೆಳೆಯುತ್ತಾ ಜಾತಿ ಉಪಜಾತಿಗಳಾಗಿ ಕವಲೋಡೆದು ತಮ್ಮ ತಮ್ಮಲ್ಲೆ ಹಲವಾರು ಸಿದ್ಧಾಂತಗಳನ್ನ ವಾದಿಸುತ್ತ ಒಬ್ಬರೊನ್ನೊಬ್ಬರು ಕಾಲೆಯುವ ಮಟ್ಟಕೆ ತಲುಪಿದೆ ಸಂಗತಿ ನಮ್ಮ ಇತಿಹಾಸ ಗಮನಿಸಿದಾಗ ತಿಳಿಯೊದು. ಶ್ರೀ ಮತ್ತು ಚಕೋರರ ಅನಿಸಿಕೆಯಂತೆ ಇವತ್ತಿನ ಸಂಕಿರ್ಣ ಸಾಮಾಜಿಕ ಪರಿಸ್ಥಿಯಲ್ಲಿ ಎಲ್ಲರೂ ಒಂದೆ ಚೌಕಟ್ಟಿನಲ್ಲಿ ಇರಬೇಕು ಅನ್ನೊದು ಪ್ರಾಕ್ಟಿಕಲ್ ಅಲ್ಲ. ಜಾತಿ ಧರ್ಮ ಇವೆಲ್ಲವು ಅವರವರ ವಯಕ್ತಿಕ ಆಚರಣೆಯ ಚೌಕಟ್ಟನ್ನು ಮೀರದೆ ಇದ್ದರೆ ಎಲ್ಲರೊಂದಿಗೂ ಯಾವುದೆ ಜಗಳಗಲಿಲ್ಲದೆ ಬದುಕ ಬಹುದು ಅನ್ನಿಸುತ್ತದೆ. ನಮ್ಮ ಸಮಾಜದಲ್ಲಿ ಆಗುತ್ತಿರುವ ಇತ್ತಿಚಿನ ಬೆಳವಣಿಗೆಗಳನ್ನ ಗಮಿಸಿದರೆ ಈ ಜಾತಿ ಪದ್ದತಿಯ ಪ್ರಭಾವ ಕಡಿಮೆ ಆಗುತ್ತಿರುವುದು ಸ್ಪಷ್ಟವಾಗುತ್ತೆ, ಇದು ಒಂದು ಒಳ್ಳೆಯ ಸಂಕೇತ ಅನ್ನಬಹುದು. ಒಂದೆ ಸೂರಿನಡಿಯಲ್ಲಿ ಯಾವುದೆ ತಕರಾರಿಲ್ಲದೆ ೭ ಜನ ಮಿತ್ರರು ೩ ವರ್ಷಗಳಿಂದ ಬದುಕುತ್ತಿದ್ದೇವೆ ನಮ್ಮಲ್ಲಿ ವಿವಿದ ಆಚರಣೆಗಳುಂಟು ಮತ್ತು ಆಹಾರ ಪದ್ದತಿಗಳುಂಟು ನನಗದೆ ಖುಷಿ…. 🙂

  -ಅಮರ

 8. Registration- Seminar on occasion of kannadasaahithya.com 8th year Celebration

  Dear All,

  On the occasion of 8th year celebration of Kannada saahithya. com we are arranging one day seminar at Christ college.

  As seats are limited interested participants are requested to register at below link.

  Please note Registration is compulsory to attend the seminar.

  If time permits informal bloggers meet will be held at the same venue after the seminar.

  For further details and registration click on below link.

  http://saadhaara.com/events/index/english

  http://saadhaara.com/events/index/kannada

  Please do come and forward the same to your like minded friends

 9. ಪ್ರೀತಿಯ ಟೀನಾ,

  ನನ್ನ ಬಾಲ್ಯದಲ್ಲೂ ಈ ಬಗೆಯ ಅನುಭವಗಳಾಗಿವೆ. ಆಗ ತಮಾಶಿ, ಅಚ್ಚರಿ, ಹೊಸ ವಿಷಯ ತಿಳಿದುಕೊಂಡ ಗಮ್ಮತ್ತಿಗೆ ಒಳಗಾಗಿದ್ದರೆ, ಬೆಳೆಯುತ್ತ ಬಂದ ಮೇಲೆ ಅದರ ಕೆಸರೆರಚಾಟ ಅಸಹ್ಯ ತಂದಿದೆ. ಹಿಂದಿನ ವಿಷಯ ಅಂತ ಸಾರಾಸಗಟಾಗಿ ಅದನ್ನು ತಳ್ಳಿಹಾಕುವುದಾಗಲಿ ಅಥವಾ ಮೈಮೇಲೆಳೆದುಕೊಳ್ಳುವುದಾಗಲೀ, ಎರಡೂ ತೀರಾ ಪ್ರಕೋಪದ ಪರಿಸ್ಥಿತಿ ಅಂತ ನನ್ನಭಿಪ್ರಾಯ. ನಮ್ಮ ಹೆಚ್ಚಿನ ಆಚಾರಗಳಿಗೆ ವ್ಯಾವಹಾರಿಕ ಮತ್ತು ವೈಜ್ಞಾನಿಕ ಕಾರಣಗಳೇ ನೆಲಗಟ್ಟು. ಆದರೆ ಕಾಲ ಕಳೆದಂತೆ ಅವನ್ನು ವಿಶ್ಲೇಷಿಸದೆ ಅಜ್ಜ ನೆಟ್ಟ ಆಲದ ಮರಕ್ಕೇ ಜೋತುಬಿದ್ದವರು, ಅಥವಾ ನೆರಳು ನೀಡುವ ಮರದ ಬೇರನ್ನೆ ಕಿತ್ತೆಸದವರೇ ಹೆಚ್ಚು. ನೀವು ಹಾಗಿಲ್ಲ ಅಂತ ಗೊತ್ತಾಗಿ ತುಂಬ ಖುಶಿ.

  ಧಾರ್ಮಿಕ ಭಾವನೆಗಳು ಮನುಷ್ಯತ್ವವನ್ನ, ವ್ಯಕ್ತಿತ್ವವನ್ನ ಗೌರವಿಸುವಷ್ಟು ಶಿಷ್ಟವಾಗಿದ್ದರೆ ಅದೇ ಶ್ರೇಷ್ಠ ಧರ್ಮ ಅಂತ ನನ್ನ ಭಾವನೆ. ಅಥವಾ ಯಾವುದೇ ಧಾರ್ಮಿಕ ಜಾತೀಯ ಒಲವು ಇಲ್ಲದಲೆ ಇದ್ದೂ ಉಳಿದವರ ಭಾವನೆಗಳಿಗೆ ವ್ಯಕ್ತಿಗತ ಅಭಿಪ್ರಾಯಗಳಿಗೆ ಮುಖ ಸಿಂಡರಿಸದೆ ಗೌರವಿಸುವ ಮನೋಭಾವವಿದ್ದರೆ ಅದೇ ಅತ್ಯುತ್ತಮ ಸಹಬಾಳ್ವೆ ಅಂತ ಕೂಡಾ ಅನಿಸುತ್ತೆ. ಜಾತಿ ಅನ್ನುವುದನ್ನೇ ಅಡಗಿಸಿಟ್ಟು ಮಕ್ಕಳನ್ನು ಬೆಳೆಸಲಾಗುವುದಿಲ್ಲ. ಅದರ ಬಗ್ಗೆ ಪಾಸಿಟಿವ್ ಆದ ವಿಷಯಗಳನ್ನ ಹೇಳಿ ಮಕ್ಕಳನ್ನು ಬೆಳೆಸುವುದು ಒಳ್ಳೆಯದು ಅನ್ನಿಸುತ್ತೆ. ಇಲ್ಲವಾದಲ್ಲಿ ಅವರು ಈ ವಿಷಯದ ಬಗ್ಗೆ ಅನಾವಶ್ಯಕ ಸಿನಿಕತನ ಅಥವಾ ಫೆನಾಟಿಸಿಸಮ್ ಬೆಳೆಸಿಕೊಳ್ಳುತ್ತಾರೆನೋ ಅಂತ ಹೆದರಿಕೆ.

  ಚಕೋರ ಅವರೆ, ಸುಶಿಕ್ಷಿತತೆ ಎರಡು ಅಲಗಿನ ಕತ್ತಿಯಾಗಿ ಬಿಟ್ಟಿದೆ. ಸೌಜನ್ಯವಿಲ್ಲದ ಯಾವುದೂ ಒಳ್ಳೆಯದನ್ನು ಉಂಟುಮಾಡುವುದಿಲ್ಲ. ಕುಟಿಲರು ಸುಶಿಕ್ಷಿತತೆಯನ್ನೇ ತಮ್ಮ ಅಸ್ತ್ರವನ್ನಾಗಿಸಿ ಪರಸ್ಪರ ದೂಷಣೆ ಮತ್ತು ಘಾಸಿಗೊಳಿಸುವಿಕೆಯಲ್ಲಿ ತೊಡಗುತ್ತಾರೆ. ಸಹಜೀವನದ ಸವಿ ಬಲ್ಲವನೇ ಬಲ್ಲ ಅಲ್ಲವಾ. ವೈವಿಧ್ಯತೆ ನಮ್ಮ ಉಳಿವಿನ ಮೂಲ. ನೀವು ಬರೆದ ಇತರ ವಿಷಯಗಳು ತುಂಬ ನಿಜ.

  ಪ್ರೀತಿಯಿಂದ
  ಸಿಂಧು

 10. namaste,
  jaathi, dharma, raarstreeyathe ethyadi parikalpanegalu kelavu janara anukoolakkagi huttuhakidanthavu. ee mithya parikalpanegalinda anukoolakkintha anaanukoolave hechhu.aadaru ee parikalpanegala brameyalli naavi, neevu matthu smaaja mulugi maanaviyatheyannu
  marethiddeve!

  charles darvinna ” vikaasavada”nnu oodiyu naavu bari pranigaligitha kiilagiddeve: naavu yochisaballa manava pranigale?

  danyavaadagalu inthi nimma
  ravikumar.a

 11. ಹಳ್ಳಿಗಳಲ್ಲಿ, ಕೆಳವರ್ಗದ (ಆರ್ಥಿಕವಾಗಿ) ಜನರಲ್ಲಿ ಜಾತಿ ಎಂಬುದು ತೀರಾ ಸಹಜವಾದ ಸಂಗತಿಯಾಗಿ ಚಲಾವಣೆಯಾಗುವುದನ್ನು, ಧರ್ಮದ ಕಟ್ಟುಪಾಡುಗಳು ಬೇರೊಂದು ಅರ್ಥವನ್ನೇ ಪಡೆಯುವುದನ್ನು ನೋಡುವಾಗ, ಹಿಂದೂ-ಮುಸ್ಲೀಮರಿಬ್ಬರೂ ಹಬ್ಬಗಳನ್ನು ಒಟ್ಟಾಗಿ ಮಾಡುವುದನ್ನು ನೋಡಿದಾಗ ನನಗೆ ನಮ್ಮ ಜಾತಿ ಸಮಸ್ಯೆಗೆ ಕಾರಣ ನಾವು ಒಬ್ಬರನ್ನೊಬ್ಬರು ಅವಲಂಬಿಸದೆ ದ್ವೀಪವಾಗುತ್ತಿರುವುದು ಎನ್ನಿಸುತ್ತದೆ. ಸಾಮಾಜಿಕ ಜೀವನದಲ್ಲಿ ಈ ಅವಲಂಬನೆ ಎಷ್ಟು ಗಾಢವಾಗಿರುತ್ತದೆಯೋ ಅಷ್ಟರ ಮಟ್ಟಿಗೆ ಜಾತಿ ಅಪ್ರಸ್ತುತವಾಗುತ್ತದೆ.

 12. ಒಂದು ಕಾಲದಲ್ಲಿ ನಿಮ್ಮ ಹಾಗೆ ನಾನೂ ತುಂಬ ತಲೆಕೆಡಿಸಿಕೊಂಡಿದ್ದೆ. ಕೊನೆಗೆ ನಾನೇನು ತಿಳಿದಿದ್ದೆ ಅಥವಾ ನೋಡಿದ್ದೆ, ಎಲ್ಲವನ್ನೂ ಮರೆತು ನೆಮ್ಮದಿ ಕಂಡೆ. ಈಗ ನಾನು ಅಂದುಕೊಳ್ಳುವುದು – ಜಗತ್ತಿನಲ್ಲಿ ಎರಡು ಜಾತಿ ಇದೆ – ಮನುಷ್ಯ ಜಾತಿ ಮತ್ತು ಮನುಷ್ಯರಲ್ಲದ ಜಾತಿ.
  ಇನ್ನೂ ಹೇಳಬೇಕೆಂದರೆ ಹೆಣ್ಣು ಜಾತಿ ಮತ್ತು ಗಂಡು ಜಾತಿ. (ನಮಗೆ ಬೇಡದಿದ್ದರೂ ಈ ಜಾತಿ ಬೇಧ ಎಲ್ಲೆಡೆಯೂ ಕಂಡು ಬರುತ್ತದೆ, ಪ್ರಕೃತಿಯೇ ಹುಟಿಸಿರುವ ಜಾತಿಬೇಧವಾದ ಕಾರಣ ಸ್ವೀಕರಿಸಲೇಬೇಕು)
  ಆದರೆ ಹೆಚ್ಚಾಗಿ ಜಾತಿಯ ಹಿನ್ನೆಲೆಯಿಂದಲೇ ಬರುವ ಸಸ್ಯಾಹಾರ – ಮಾಂಸಾಹಾರ ಪದ್ಧತಿಗಳ ಬಗ್ಗೆ ಮಾತ್ರ ನನಗೆ ನನ್ನದೇ ಆದ ಬದಲಾಯಿಸಲಾರದ ದೃಷ್ಟಿಕೋನ ಇದೆ. ಅದು ಹೇಗೆಯೇ ಬಂದಿರಲಿ, ಇಂದಿನ ದಿನಕ್ಕೆ ಸಸ್ಯಾಹಾರ ಎಲ್ಲಾ ದೃಷ್ಟಿಯಿಂದ ಒಳ್ಳೆಯದು ಅಂತ ನನ್ನ ಅಭಿಪ್ರಾಯ.

 13. namskara,

  On the occasion of 8th year celebration of Kannada saahithya. com we are arranging one day seminar at Christ college.

  As seats are limited interested participants are requested to register at below link.

  Please note Registration is compulsory to attend the seminar.

  If time permits informal bloggers meet will be held at the same venue after the seminar.

  For further details and registration click on below link.

  http://saadhaara.com/events/index/english

  http://saadhaara.com/events/index/kannada

  Please do come and forward the same to your like minded friends

 14. Society has changed – or that is what we want to believe but it hasn’t in reality. If not for a govt school/job now we do not need the tag of caste now. But it can never be evaded from India. 3 years ago I had visited Toronto on office trip and was astonished to find that there is a group of kannadigas – the group is formed on a particular subcaste of a caste! We are divided always based on language, religion, caste, likes, dislikes etc etc! I feel we are adding many dimensions to our life. Behave accordingly in whichever dimesnions we are present at given point of time!

 15. ಈ ಜಾತಿಯ ಹಣೆಪಟ್ಟಿ ನಮ್ಮೆಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಎಂದಾದರೊಮ್ಮೆ ಕಾಡಿಯೇ ಇರುತ್ತದೆ.

  ತುಂಬಾ ನೋವು ಕೊಡುವ ವಿಚಾರ ವಿದ್ಯಾವಂತರೆನಿಸಿಕೊಂಡವರೂ ಇದೇ ವಿಷಯವಾಗಿ ಮಾತಾಡಿಕೊಳ್ಳುವಾಗ, “ಸ್ವಜನ ಪಕ್ಷಪಾತ” ಮಾಡುವಾಗ. ಮನೆಗೆ ಬಂದವರಿಗೆ ನೀರೋ ಕಾಫಿಯೋ ಕೊಡಲು ಹಿಂದೆ-ಮುಂದೆ ನೋಡುವಾಗ, ಹಿಂದುಳಿದ ವರ್ಗದವರೆಂದು ಕರೆಸಿಕೊಳ್ಳುವ ವ್ಯಕ್ತಿಯೊಬ್ಬನಿಗೆ ಮನೆಯೊಳಗಿನ ಲೋಟದಲ್ಲಿ ನೀರೂ ಕೊಡಲು ನಿರಾಕರಿಸುವಾಗ!! ಯಾವ ದಿಕ್ಕಿಗೆ ಸಾಗುತ್ತಿದ್ದೇವೆ ನಾವು?

  ಬೆಳೆಯುತ್ತಿದ್ದ ಹಾಗೆ ನನ್ನ ಸ್ನೇಹವರ್ಗದಲ್ಲಿ ಸಸ್ಯಾಹಾರಿಗಳೂ ಮಾಂಸಾಹಾರಿಗಳೂ ಇದ್ದರು. ನಮ್ಮ ಪಕ್ಕದ ಮನೆಯಲ್ಲಿದ್ದ ನನ್ನ ಸ್ನೇಹಿತೆ ಮೀನು-ಕೋಳಿ ಮುಂತಾದವನ್ನು ತೊಳೆದು ಸ್ವಚ್ಛಗೊಳಿಸುತ್ತಿದ್ದರೆ ನನ್ನ ಜೊತೆ ಮಾತಾಡಲು ನಿರಾಕರಿಸುತ್ತಿದ್ದ ವಿಷಯ ನನಗೆ ಮೊದ ಮೊದಲು ಗೊತ್ತಾಗದೆ ಗೊಂದಲವಾಗಿತ್ತು. ನಂತರ ನಾನೇ ಅವಳ ಸಂಕೋಚವನ್ನು ನಿರ್ಲಕ್ಷಿಸಿ ಅವಳೊಡನೆ ಹರಟೆಗೆ ನಿಲ್ಲುತ್ತಿದ್ದೆ. ಇದು ನಮ್ಮ ಸ್ನೇಹಕ್ಕೆ ಹೊಸ ಕೊಂಡಿ ಸೇರಿಸಿತ್ತು. ಆದರೂ, ಅವರ ಮನೆಯಲ್ಲಿ ನಾನು ಊಟ ಮಾಡುವ, ಹಾಲು-ಕಾಫಿ ಕುಡಿಯುವ ಬಗ್ಗೆ ನಮ್ಮ ಕೆಲವು ನೆಂಟರಲ್ಲಿ ಅಸಮಾಧಾನ ಇನ್ನೂ ಇದೆ. ಅದಕ್ಕೆ ಪರಿಹಾರ ನನ್ನ ಕೈಯಲ್ಲಂತೂ ಸದ್ಯಕ್ಕಿಲ್ಲ ಎಂಬ ನೋವಿದೆ. ಏನು ಮಾಡಲಿ?

  ಇವನ್ನೆಲ್ಲ ಮೀರಿ ಭಾರತ ಹೇಗೆ ಜಾತ್ಯಾತೀತ ರಾಷ್ಟ್ರವಾದೀತು?

 16. ಟೀನಾ ಅವರೇ,

  ನನಗೆ ಹತ್ತಿರದವರಲ್ಲಿ ಒಬ್ಬರು ಅ೦ತರ್ಜಾತಿ ವಿವಾಹವಾಗಿದ್ದಾರೆ. ಅವರ ಏಳನೇ ತರಗತಿಯಲ್ಲಿ ಓದುವ ಮಗಳು ಮೊನ್ನೆ ನನ್ನಲ್ಲಿ ತಾನು ಯಾವ ಜಾತಿ ಎ೦ದು ನನ್ನಲ್ಲಿ ಕೇಳಿದಳು. ಏಕೆ೦ದರೆ ಅಪ್ಪನ ಕಡೆಯವರು ಒ೦ದು ಜಾತಿ ಹಾಕಿದರೆ, ಅಮ್ಮನ ಕಡೆಯವರು ಮತ್ತೊ೦ದು ಜಾತಿ ಹಾಕುತ್ತಾರೆ ಎ೦ದಳು. ಶಾಲೆಯಲ್ಲಿ ಫ್ರೆ೦ಡ್ಸ್ ತಮಾಷೆ ಮಾಡುತ್ತಾರ೦ತೆ. ಎಷ್ಟು ವಿಷಾದನೀಯ ನೋಡಿ.
  ಒಳ್ಳೆಯ ಬರಹ.

 17. ಸ್ನೇಹಿತರಿಗೆ ನಮಸ್ಕಾರ!!
  Whoa!! ಈ ಪೋಸ್ಟು ಹಾಕುವಾಗ ಬಹಳ ಯೋಚನೆ ಮಾಡಿದೆ – ಯಾರಾದ್ರೂ ಓದ್ತಾರೋ ಇಲ್ವೋ ಅಂತ!!
  ಇಲ್ಲಿ ನೋಡಿದ್ರೆ ಅಭಿಪ್ರಾಯಗಳ ಮಹಾಪೂರವೆ ಹರಿದು ಬಂದಿದೆ. ಅದಕ್ಕೆ ಬ್ಲಾಗು ನನಗೆ ಹೆಚ್ಚು ಪ್ರಿಯವಾಗೋದು. ಇಲ್ಲಿ ಸಿಗುವ ನೇರ ಅಭಿಪ್ರಾಯ, ನಡೆಯುವ ಚರ್ಚೆಗಳು ಬೇರಾವ ಮಾಧ್ಯಮದಲ್ಲು ಕಾಣುವದಿಲ್ಲ. ನಿಮಗೆಲ್ರಿಗೂ ಭಾಳ ಭಾಳ ಥ್ಯಾಂಕ್ಸು!!

  ನಿಮ್ಮೆಲ್ಲರ ಮಾತುಗಳನ್ನ ಓದಿ ಬಹಳ ಖುಶಿಯಾಯಿತು. ನನ್ನ ಯೋಚನೆಯಾಚೆಯ ಕೆಲವು ಆಯಾಮಗಳೂ ಎಟುಕಿದವು, ಕುಟುಕಿದವು. ಸುಮಾರು ಎಂಟು ವರುಷಗಲ ಹಿಂದೆ ಬರೆದಿದ್ದ ಮೂಲ ಬರಹವನ್ನ ಇಲ್ಲಿ ಅಪ್ ಡೇಟ್ ಮಾಡಿ ಹಾಕಿದ್ದು. ಅಂದಿಗಿಂತ ಇಂದು ಸ್ಥಿತಿ ಭಿನ್ನವಾಗೇನಿಲ್ಲ ಅನ್ನೋದು ವಿಷಾದನೀಯ. ಚರ್ಚೆಗೆ ಸಂಬಂಧಿಸಿದ ಹಾಗೆ ಒಂದೆರಡು ಮಾತು, ನನ್ನದೂನೂ:

  ಇಲ್ಲಿ ನಾನು ನಮ್ಮ ಜಾತಿ ಪದ್ಧತಿಯ ಮೂಲದ ಬಗ್ಗೆ, ಅದರ ಬಣ್ಣ, ವೈವಿಧ್ಯತೆಗಳ ಬಗ್ಗೆ ನೆಗಟಿವ್ ಆಗಿ ಮಾತನಾಡುತ್ತ ಇಲ್ಲ. ಇದೆಲ್ಲ ಒಂದೇ ದಿನಕ್ಕೆ ಅಳಿಸಿಹೋಗಬೇಕು, ನಮ್ಮದು ಏನೂ ಇಲ್ಲದ bland ಸಮಾಜವಾಗಿಬಿದಬೇಕು ಅನ್ನುವಂಥಾ ಯಾವುದೇ ಯೋಚನೆ ಸದ್ಯದವರೆಗೆ ನನಗೆ ಬಂದಿಲ್ಲ!!

  ಸುಧೇಶ್,
  ನೀವು ಹೇಳಿದ ಮಗುವಿನ ಬಗ್ಗೆ ಓದಿ ಬಹಳ ಹಿಂಸೆ ಅನ್ನಿಸಿತು .ಈ ರೀತಿಯ ಪರಿಸ್ಥಿತಿ ಎದುರಿಸುವ ಮಕ್ಕಳು ಯಾವ ಅತಂತ್ರಕ್ಕೆ ಒಳಗಾಗಬಹುದು? ಈ ಬಗ್ಗೆ ಅಂತರ್ಜಾತೀಯ ವಿವಾಹವಾಗುವ ತಂದೆತಾಯಂದಿರು ಮೊದಲೆ ತೀರ್ಮಾನ ಮಾಡಿಕೊಳ್ಳುವುದು ಒಳಿತು ಅನ್ನಿಸ್ತದೆ ನನಗೆ. ತಮ್ಮ ನಡುವಿನ ವೈರುಧ್ಯಗಳನ್ನ ಮಕ್ಕಳ ಮೇಲೆ ಹೇರುವುದರಲ್ಲಿ ಯಾವ ಅರ್ಥವೂ ಇಲ್ಲ.

  ಸುಪ್ತದೀಪ್ತಿ,
  ಈ ಬಗ್ಗೆ ನೀವು ಹೇಳಿರೋ ಮಾತುಗಳು ನೂರಕ್ಕೆ ನೂರರಷ್ಟು ನಿಜ. ನಿಮ್ಮ ಸ್ನೇಹಿತೆಯನ್ನ ನೀವು ಕಾಣುವ ಬಗ್ಗೆ ಓದಿ ನಿಮ್ಮ ಬಗ್ಗೆ ಆದರ ಮೂಡಿತು. ಧನ್ಯವಾದ, ಹೀಗಿರುವುದಕ್ಕೆ!!

  Radhika,
  I was amused reading about the Toronto incident. Our caste, instead of becoming our cultural strength, is turning out to be our weakness. Instead of bringing out our best , it is showing the ugly part. It is our own doing. The representatives we elected have done this and we have supported them to a large extent. I agree with you when you say that we only want to believe that the society has changed. I personally do not think that it has. if it has, only a very small chunk of it is showing the signs, thats all!!

  ಗಂಗಾಧರಯ್ಯನವರೆ,
  ನನಗೆ ಪೂರ್ತಿಯಾಗಿ ಅರ್ಥವಾಗಲಿಲ್ಲ!!

  ಶ್ರೀ,
  ನಾನೂ ನಿಮ್ಮ ಹಾಗೇ ಪರ್ಸನಲ್ ನಂಬಿಕೆಗಳಲ್ಲಿ ಸಮಾಧಾನ ಉತ್ತರ ಕಂಡುಕೊಳ್ಳಲು ಯತ್ನಿಸುತ್ತ ಇದೇನೆ. ನೀವು ಆಗಲೆ ಕಂಡುಕೊಂಡುಬಿಟ್ಟಿದೀರ ಅಷ್ಟೆ!! ನಿಮ್ಮ perceptionಗಳನ್ನ ನಾನು ಗೌರವಿಸುತ್ತೇನೆ.

  ಸುಪ್ರೀತ್,
  ನೀವು ಹೇಳುವದು ಸುಮಾರು ಮಟ್ಟಿಗೆ ನಿಜ. ಸುಮಾರು ಆರ್ಥಿಕವಾಗಿ ಹಿಂದುಳಿದ ಸಾಮಾಜಿಕ ವರ್ಗಗಳಲ್ಲಿ ಜಾತಿ ಹಾಗಿರಲಿ, ಲಿಂಗತಾರತಮ್ಯ ಕೂಡ ಕಡಿಮೆ ಅಥವಾ ಇಲ್ಲದಿರುವುದು ನೋಡಿ ನಾನು ಬಹಳ ಸರ್ತಿ ಥ್ರಿಲ್ಲಾಗಿದ್ದುಂಟು. ನಾವು ದ್ವೀಪಗಳಾಗುತ್ತಿರುವುದರ ಬಗೆಗಿನ ನಿಮ್ಮ ಮಾತು ಸುಪರ್ಬ್!! ನಗರಗಳಲ್ಲಿರುವ ನಾವುಗಳು ಬಹಳ ಆತ್ಮಶೋಧನೆ ಮಾಡಿಕೊಳ್ಳಬೇಕಿದೆ.

  ಸಿಂಧು,
  ನಾನು ಹೇಳಬೇಕೆನಿಸಿದ್ದ ಬಹಳಷ್ಟು ವಿಚಾರಗಳನ್ನ ನೀವೆ ಬಹಳ ಸರಳ, ಸುಂದರ ರೀತಿಯಲ್ಲಿ ಹೇಳಿದೀರಿ. ನಾನು ನಿಮಗೆ ಹೇಗೆ ಥ್ಯಾಂಕ್ಯೂ ಹೇಳಲಿ? ನನ್ನ ’ಸೃಷ್ಟಿ’ಗೆ ಈಗಲೆ ಈ ವಿಚಾರ ಹೇಳುವ ಧೈರ್ಯ ನನಗಿಲ್ಲ, ಆದರೆ ನಿಮ್ಮ ವಿಚಾರಗಳು ಬಹಳ ಸರಿಯೆನ್ನಿಸಿದವು.

  ಅಮರ,
  ನಿಮ್ಮ ಸ್ನೇಹಿತರ ಬಗ್ಗೆ ಓದಿ ಬಹಳ ಖುಶಿಯಾಯ್ತು. ನಿಮ್ಮೆಲ್ಲರಿಗು ಕಂಗ್ರಾಟ್ಸ್!!

  ಚೇತ್,
  ನೀನು ಹೇಳಿರೋ ಎಲ್ಲ ಮಾತುಗಳೂನು ಸರಿ. ಎಲ್ಲ ಸಾಮಾಜಿಕ issueಗಳಿಗೂ ಎರಡು ಮುಖ ಇದ್ದೇ ಇರತ್ತೆ. ಆದರೆ ಎಲ್ಲವನ್ನ ಒಳಗೊಂಡು, ಗೌರವಿಸಿಕೊಂಡು, ಅಸಹನೆ ತೋರಿಸದೆ ಬದುಕುವದನ್ನ ನಮ್ಮ ಜನರೇಶನ್ನು ಕಲಿತರೆ ಒಳ್ಳೇಯದು ಅನಿಸತ್ತೆ. ಎಲ್ಲದಕ್ಕು ಸಿಡಿದು ಬೀಳೋದು – ಉದಾಹರಣೆಗೆ ಮೂವೀಗಳನ್ನೆ ತಗೊ, ನೀನೆ ಜೋಧಾ ಅಕ್ಬರ್ ಬಗ್ಗೆ ಬರ್ದಿದೀ. ಇಂಥ ಸಣ್ಣತನಗಳ ಬಗ್ಗೆ ನಾನು ಹೇಳೋದು. ಬಹಳ ರೆಸ್ಪಾನ್ಸಿಬಲ್ ಸ್ಥಾನದಲ್ಲಿರೋ ’ದೊಡ್ಡ’ ಮನುಷ್ಯರ ಬಾಯಿಗಳಿಂದ ತಮ್ಮಜಾತಿಯ ಬಗ್ಗೆ ಸಣ್ಣ, ಸಂಕುಚಿತ ಮಾತುಗಳನ್ನ ಕೇಳಿ ನಾನು ಭಯಬಿದ್ದುಹೋಗಿದ್ದಿದೆ ಕಣೆ!! ಯಾಕೊ ,ಎಲ್ಲ ಸುಧಾರಿಸ್ತಿದೆ ಅಂತ ಧೈರ್ಯ ತಂದ್ಕೊಳೋಕೇ ಅಗ್ತಿಲ್ಲ ಮಾರಾಯಿತಿ.

  ಶೆಟ್ಟರೆ,
  ನಿಮ್ಮ ಕಹಿ ಅನುಭವಗಳ ಆಳದ ಅರಿವಿದೆ ನನಗೆ. ಬೇಸರ. ಇನ್ನೇನೂ ಹೇಳಲಾರೆ.

  ಶ್ರೀಮಾತಾ ಮತ್ತು ಶ್ರೀಪ್ರಿಯೆ,
  ನಿಮ್ಮ ಗೊಂದಲ ನನ್ನದೂನೂ ಆಗಿತ್ತು!! 🙂 Potatoes of the same sack, aren’t we?

  Manjunath,
  I respect the intentions behind your curiosity. But people out there, most of the time, never have such good intentions when they ask us. Moreover, I think, if you want to do research on this issue, your approach is bound to be very different. I have had very bitter experiences, having been a product of an inter-religious marriage and myself being one to have tread the same path. Nevertheless, such incidents have increased my determination to stand against them or face them. I agree, we are defined by our diversity. Why do we forget that this diversity is the result of intermingling of so many races and religions? Isn’t diversity another name for continual change and evolution in the process? If diversity comes to a standstill, it’s very definition would be wrong!! kindly refer to Supreeth’s comment. i consider that an answer to your comment. Thank you for your observations.

  ತ್ಯಾಂಕುಗಳೊಂದಿಗೆ,
  ಟೀನಾ.

 18. Tina
  thats true . I remember one article by Vaidehi on the same .
  i want to tell u one funny but nice thing.
  My uncle is an small astrologer. There is a village called Rasanagi in Jevargi Taluk ,Gulbarga Dist. here there is a famous hanuman temple. he often goes there. some time when i am there in the town i also visit that place
  the villagers will often come meet him for their problems like the buffalo is lost or child has got fever and even after showing to doctor nothing has changed,
  my uncle also give the solution like search for buffalo in the north dir , or the child is feared of some thing .through some rotti and coin etc
  this incident happened when one day i was with him.
  there came a lady who was complaining that her husband has started drinking more and not concentrating on the work, and asked my mama to help.
  my uncle told her to do seva for hanuman for 8 weeks and after that to go to Koodi darga on amavasya.
  then i came to know that the lady was a muslim. i think she obediently fallowed my mama’s suggestions
  i feel this is the basic human nature. as we become more and more city centered we become islands in all the ways .
  there fore only all the caste or communal organizations are active in cities only.see how these simple things get complicated.
  i think i could only express this much in words.
  i have just started to express my ideas or reactions in written and now i feel it is very much difficult . it is easy to express in words.
  thanks for ur reply
  Manjunath

 19. Dear Manjunath,
  That was a wonderful incident and I am extremely glad that you shared it with us. I feel elated when one of my readers does that occasionally.
  I too come from a village which was once very harmonious in terms of religion. Now it has turned into a politicians’ playground. I doubt if the essence of harmony still exists. The younger blood does not lend ears to the old age wisdom anymore. I remember, during ganesha festival, there were Burkha-clad Muslim women who used to visit the place. They used to pay the ‘Harake’ to the lord which they had promised in return for favours granted. Likewise, there used to be no objections in Muslim households to send their kids to Yoga or Bharathanatyam classes conducted in the Markandeshwara temple backyard. Nowadays, nobody there dares to dream of such things.
  For me on a personal level, caste must be limited to being a cultural practice and never interfere in politics, education or workplace or any public arena for that matter. We can never run away from our roots nor should we allow them to gnaw away our humane conscience. Looks like wishful thinking. Phew.

  You have expressed so much. I am glad u did. Why don’t you start writing in Kannada? U can start using Baraha software.
  regards,
  Tina

 20. ಆಯ್ತ್ರಿ. ಯಕ್ಕಾ
  ಪ್ರಯತ್ನ ಮಾಡ್ತಿನಿ. ನನಗ ಕುಂತ ಟೈಪ್ ಮಾಡೂದಂದ್ರ ಬ್ಯಾಸರ. ಅದೂ ಅಲ್ದೆ ಒಂದೊಂದು ಪದಾ ಹುಡಕಿ ಕನ್ನಡದಾಗ ಟೈಪ್ ಮಾಡುದಂದ್ರ ಭಾರಿ ಬ್ಯಾಸರ .ಬಿಡ್ಲೆ ಯಪ್ಪಾ ಎದಕ? ಸುಮ್ ಕುಂದ್ರು ಅಂತ ಅನಸ್ತದ. ಅದಕ್ಕಾ ನಾ ಎಲ್ಲಾ ಬ್ಲಾಗ್ ನಾಗಿಂದ ಲೆಖನಾ ಒದಿದ್ರು ವಟ್ಟ ಹೇಳುದಿಲ್ಲ. ಆದ್ರ ನಿಮ್ಮ ಈ ಲೇಖನಾ ಓದಿದಮ್ಯಾಲ ಖರೆನೆ ಛಂದ ಮತ್ತ ಅಗದಿ ಖರೆ ಅನಸ್ತು. ಅದಕ್ಕ ಉತ್ತರ ಕೊಟ್ಟೆ.

  ಮಂಜುನಾಥ

 21. arrrrrgh! ಇಲ್ಲಿ ತುಂಬಾ discriminate ಮಾಡ್ತಿದೀರಾ, ಒಂದ್ ಕಣ್ಣಿಗೆ ಬೆಣ್ಣೆ, ಒಂದ್ ಕಣ್ಣಿಗೆ ಸುಣ್ಣ ಹಾಕ್ತಿದೀರ, ನಾನು ಇದನ್ನ ಒಪ್ಪಲ್ಲ, ಧರಣಿ ಕೂರ್ತೀನಿ! ನೂರುಕನಸಿನವ್ರನ್ನ ಮಾತ್ರ ಶ್ರೀ ಅಂತೀರಾ ಇರೋದೆಲ್ಲ ಬಿಟ್ಟಿರೋವ್ರನ್ನ ಪೂರ್ತಿ ಹೆಸ್ರು ಕರ್ದು tease ಮಾಡ್ತೀಾ! ಇದ್ಯಾವ್ ನ್ಯಾಯ!! ಏನೂ ಕನ್ಫ್ಯೂಶನ್ ಇರಲ್ಲ, ನಂನಂ ಬ್ಲಾಗ್ ಲಿಂಕುಗಳು ನಂ ಕಮೆಂಟುಗಳ್ ಜೊತೆ ಇರತ್ವೆ. ಒಂದ್ಸಲ ’ಶ್ರೀ’ ಮೇಲೆ ಕ್ಲಿಕ್ ಮಾಡಿದ್ರೆ ಆಯ್ತು, ಯಾರು ಕನಸು ಕಾಣೊವ್ರು, ಯಾರು ಬಿಟ್ಟಿರೋವ್ರು ಗೊತ್ತಾಗುತ್ತೆ. ಆ ನೆಪಕ್ಕೆ ಹಿಂಗೆಲ್ಲಾ ಮೋಸ ಮಾಡ್ಬಾರ್ದು. ಅದು ತಪ್ಪು, human rights violationnu. ಮೇನಕಾ ಗಾಂಧಿಗೆ ಹೇಳ್ತೀನಿ(ನಂಗೆ ಮನುಷ್ಯ & ಮನುಷ್ಯರಲ್ಲದ ಎರಡ್ ಜಾತಿಗಳ್ ಬಗ್ಗೆ ಸಲ್ಪ ಕನ್ಫೀಶನ್ – ಅದಿಕ್ಕೇ 😉 ) ಮತ್ತೆ ಶ್ರೀಪ್ರಿಯೆ ಅವ್ರ್ದು ಏನೂ ಕನ್‌ಫ್ಯೂಶನ್ ಇಲ್ಲ, ಅವ್ರ್ಗೆ ನಾವಿಬ್ರೂ ಇಷ್ಟ! 😀

 22. ಮಂಜುನಾಥ್,
  ಅಂತೂ ಕನ್ನಡ ಕುಟ್ಟೋ ಥರ ಆದ್ರಲ್ಲ, ಛಲೋ ಆತು ಬಿಡ್ರಿ!! ಆಮೇಲೆ ನಿಮ್ಮ ಥರದ ಕನ್ನಡ ಕಲೀಬೇಕು ಅಂತ ಭಾಳ ಆಸೆ ನನಗೆ. ಆಗಲೆ ಚಕೋರ ಅವ್ರು ಕೊಂಚ ತರಬೇತಿ ಕೊಡತಾ ಇದಾರೆ. ಹೀಂಗೇ ಬರೀತಿರಿ. ನಮಗ ಅಭ್ಯಾಸ ಆದಂಗ ಆಗ್ತದ, ನಿಮಗ ಆರಾಮವಾಗಿ ಕನ್ನಡ ಕುಟ್ಟೋದು ಬರ್ತದ!!

  ಡ್ರೀಂ ಶ್ರೀ,
  ನಂಗೂ ಸುಮಾರು ಸಾರಿ ನಿಮ್ಮಗಳ ಬಗ್ಗೆ ತಲೇ ಪರಚ್ಕೊಳೋ ಥರ ಆಗಿದೆ. ಆಮೇಲೆ ಫೀಮೇಲುಗಳಲ್ದೆ ಇನ್ನೊಬ್ರು ಮೇಲು ಶ್ರೀನಿಧಿ ಕೂಡ ಇದಾರಲ್ಲಪ್ಪ!! ಬ್ಲಾಗುಗಳಲ್ಲು ಲಕ್ಷ್ಮಿ ಕಾಲು ಮುರ್ಕೊಂಡು ಕೂತಿದಾಳೆ ಅನ್ನೋಕೆ ಇದೇ ಸಾಕ್ಷಿ!! ಏನಾರ ಮಾಡ್ಬೇಕಲ್ಲ. ಸರಿ. ನೀವು ನೀವುಗಳೆ ನಿಂನಿಮಗೆ ಒಂದೊಂದು ಅಡ್ಡ ಹೆಸರು ಇಟ್ಕೊಂಬಿಡಿ. ಪ್ರಾಬ್ಲಮೇ ಸಾಲ್ವ್ ಆಗೋಗತ್ತೆ!!!

  ಮಾತಾ ಶ್ರೀ,
  ನೀವು ಮೇನಕಾ ಗಾಂಧಿ ಹತ್ರ ಹೇಳ್ತೀರಾ? ಹೇಳಿ ಹೇಳಿ, ನಮ್ಮಪ್ಪ ಪೋಲೀಸು ಗೊತ್ತಾ!! 😉 (ಸ್ಕೂಲಲ್ಲಿ ಹೀಗೇ ಹೇಳ್ತಿದ್ವಿ!!) ನಂಗೇನೋ ನಿಂ ಪೂರ್ತಿ ಹೆಸ್ರೇ ತುಂಬ ಇಷ್ಟ. ಅಷ್ಟ್ರ ಮೇಲೂ ಸರೋಗ್ಲಿಲ್ಲ ಅಂದ್ರೆ ನಿಮ್ಗೊಂದು ಹೊಸಾ ಅಡ್ಡಹೆಸ್ರು ನೀವೆ ಸಜೆಸ್ಟು ಮಾಡ್ಬಿಡಿ. ನಾನು ತಲೆಕೂದ್ಲು ಕಿತ್ಕಳದು ತಪ್ಪತ್ತೆ. ಇಲ್ಲಾಂದ್ರೆ ನನ್ನ ಹೇರ್ ಇಂಪ್ಲಾಂಟ್ ಬಿಲ್ಲುಗಳನ್ನ ನೀವು ಎಲ್ಲಾರು ಶ್ರೀಗಳೇ ಸೇರಿ ಭರಿಸ್ಬೇಕಾಗತ್ತೆ. ನೀವು ಧರಣಿ ಕೂತ್ರೆ ಕೂರ್ರಿ, ನಾನೂ ನಿಮ್ಮೆದುರ್ಗೆ ಪೆಂಡಾಲು ಹಾಕಿ ಪ್ರೊಟೆಸ್ಟು ಮಾಡ್ತೀನಿ – ನೀವುಗಳೆಲ್ಲ ನಮ್ಮಂಥ ಪಾಪದ ಬ್ಲಾಗರುಗಳ ಮೇಲೆ inflict ಮಾಡಿರುವ ಮಾನಸಿಕ ಆಘಾತದ ಬಗ್ಗೆ ಹಲಲೊ ಕುಲಲೊ ಅಂತ ಕೂಗಾಡ್ತೀನಿ!!
  ಎಂಗೆ? 🙂

  -ಟೀನಾ

 23. Dream SHREE – ಒಮ್ಮಡಿ ಶ್ರೀ,
  Maata Shree – ಇಮ್ಮಡಿ ಶ್ರೀ,
  Shrinidhi – ಮುಮ್ಮಡಿ ಶ್ರೀ,
  Shripriye – ನಾಲ್ವಡಿ ಶ್ರೀ
  It may be bit difficult initially. However, once we start using the above names regularly it will become easier, I believe. I will change the blog link titles in my blogroll. Request fellow bloggers to do the same.

  BTW, Who is this – ‘ಶ್ರೀಡಿಯೆನ್’? – in your blogroll?

 24. JB,
  Think of the devil!! I was just thinking of summoning you for your kind opinion regarding this grave issue, and you arrive as if u knew my mind!! Thanx.
  Brilliant names, by the way. I will also direct all the would-be parents in search of ‘Hatke’ names for their kids to you. I am sure, they will be thrilled!!

  ShreeDN is DreamShree.

 25. ’ನೂರು ಕನಸಿನ ಶ್ರೀ ’, ’ಸುಮ್ಮನೆ ಶ್ರೀ ’ಅಂತ ಅಭ್ಯಾಸ ಮಾಡ್ಕೋಂಡಿದ್ದೇನೆ. ಈ ’ಸುಮ್ಮನೆ ಶ್ರೀ’ ಇಲ್ಲಾ ಅಂದ್ರೆ ಸುಮ್ಮನೆ ಇರೋಲ್ಲ . 🙂

  ಶ್ರೀಪ್ರಿಯ, ಶ್ರೀನಿಧಿ ಇನ್ನೂ ಏನೂ ತಕರಾರು ಮಾಡಿಲ್ಲ.

 26. ಟೀನಾ ಅವರೆ,

  ನೀವು ಹೇಳಿದ್ದು ಅಕ್ಷರಶ: ಸತ್ಯ. ಅ೦ತರ್ಜಾತೀಯ ಮದುವೆಯಾದ ತ೦ದೆತಾಯಿಗಳು ಜಾತಿ ಪ್ರೇಮ ಮೀರಿ ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಅ೦ತರ್ಜಾತಿ ವಿವಾಹವಾದ ನನ್ನ ಅಕ್ಕ ಇದರ ಬಗ್ಗೆ ಈಗಲೇ ನಿರ್ಧಾರ ತೆಗೆದುಕೊ೦ಡಿದ್ದಾಳೆ.

 27. ಅಲ್ಲಾ, ನಾನು ನನ್ ಪಾಡಿಗೆ ಸುಮ್ನಿದ್ರೆ ಎಳ್ಕಂಬಂದ್ರಲಪಾ!

  ಈ ಜಾತಿ ಸಮಸ್ಯೆಗಿಂತ “ಶ್ರೀ” ಸಮಸ್ಯೆ ಬಲು ಘೋರವೂ, ಚಿಂತಾಜನಕವೂ ಆದಂತಿದೆ!:)
  ಮತ್ತೆ ನನ್ನ ಮುಮ್ಮಡಿ ಗಿಮ್ಮಡಿ ಅಂದ್ರೆ ಸುಮ್ನಿರಲ್ಲ ನಾನು ಜೇಬೀಯವರೇ:)

  ಇನ್ ಬಿಟ್ವೀನು, ಟೀನಾ ಮೇಡಮ್, ನಿಮ್ಮ ಆರ್ಟಿಕಲ್ಲು ಸೊಗಸಾಗಿದೆ. ಈ ಜಾತಿ ಡಿಫರೆನ್ಸಿನ ಬಗ್ಗೆ ನಾನ್ ಬರಿಯೋಕೆ ಹೋದ್ರೆ ಸುಮಾರಿದೆ. ಹುಟ್ಟಿದ್ದಾಗಿಂದ ಹತ್ತನೇ ಕ್ಲಾಸು ಮುಗಿವವರೆಗೆ, ಕ್ರಿಶ್ಚಿಯನ್ ಕುಟುಂಬಗಳ ಜೊತೆಗೇ ಬೆಳದು – ಅವರ ಎಲ್ಲ ಆಚಾರ ವಿಚಾರಗಳನ್ನ ಅರೆದು ಕುಡಿದಿದ್ದೆ! ಚರ್ಚಿನಲ್ಲಿ ಪ್ರಾರ್ಥಿಸುವ ವರೆಗೂ! ಆಮೇಲೆ, ಅಪ್ಪ ಪಕ್ಕದ ಹಳ್ಳಿಯಲ್ಲಿ ಜಮೀನು ಖರೀದಿಸಿದರು, ಮತ್ತು ಸುತ್ತ ಇರೋದು ಅಪ್ಪಟ ಬ್ರಾಹ್ಮಣ ಕುಟುಂಬಗಳು. ನನಗಾದ ಸಾಂಸ್ಕೃತಿಕ ಕನ್ಫ್ಯೂಷನ್ ಬಗ್ಗೆ, ಹೇಳಿ ಪ್ರಯೋಜನವಿಲ್ಲ!

 28. SHREE ಯವರೇ,

  ನೀವು ಯಾವ “ಶ್ರೀ” ಎ೦ದು ನನಗೆ ಗೊತ್ತಾಯ್ತು್! ನೀವು ನೂರು ಕನಸಿನವರು. ಏಕೆ೦ದರೆ ನೀವು ’ಶ್ರೀ” ಅನ್ನು ಆ೦ಗ್ಲದಲ್ಲಿ ಬರೆಯುತ್ತೀರಾ….
  ಇರುವುದೆಲ್ಲ ಬಿಟ್ಟು ನಡೆದವರು (ಅವರು ಶ್ರೀ ಪ್ರಿಯೆಯೋ ಅಥವಾ ಶ್ರೀ ಮಾತೆಯೋ ಎ೦ದು ನನಗೂ ಕ೦ಫ್ಯೂಷನ್) ’ಶ್ರೀ’ ಯನ್ನು ಕನ್ನಡದಲ್ಲೇ ಬರೆಯುತ್ತಾರೆ.
  ಇನ್ನು ಶ್ರೀ ನಿಧಿಯವರು ಅವರ ಹೆಸರನ್ನು ಪೂರ್ಣವಾಗಿ ಬರೆಯುತ್ತಾರೆ.

 29. ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನ್ನಂತವರಿಗೆ ‘ನನ್ನ ಜಾತಿ ಯಾವುದು?’ ಎಂಬಂತಹ ಪ್ರಶ್ನೆ ಉದ್ಭವಿಸಲೇ ಇಲ್ಲ. ಮನೆಗೆ ಕೆಲಸಕ್ಕೆ ಬರುವ ಆಳುಮಕ್ಕಳು ಮನೆಯೊಳಗೆ ಬರುವುದಿಲ್ಲ; ಬಂದರೂ ಅವರು ವಾಸ್ತುಬಾಗಿಲು ದಾಟುವುದಿಲ್ಲ, ದೇವರ ಮನೆ-ಅಡುಗೆ ಮನೆಗಳಿಗೆ ಬರುವುದಿಲ್ಲ. ಶಾಲೆಯ ಗೆಳೆಯರನ್ನೂ ಮನೆಯೊಳಗೆ ಕರೆತರುವಂತಿಲ್ಲ. ಹರಿಜನರನ್ನಂತೂ ಇನ್ನೂ ನಮ್ಮೂರ ಕಡೆ ಅಸ್ಪೃಶ್ಯರನ್ನಾಗಿ ಕಾಣುತ್ತಾರೆ.

  ದೊಡ್ಡವನಾದಂತೆ ದೃಷ್ಟಿಕೋನವೂ ವಿಶಾಲವಾಗುತ್ತಾ ನನ್ನದೇ(?) ಸಿದ್ಧಾಂತ-ಆದರ್ಶ ಗಳನ್ನು ಬೆಳೆಸಿಕೊಂಡು, ‘ಜಾತಿ-ಬೇಧ ಮಾಡೋದು ತಪ್ಪು’ ಅಂತೆಲ್ಲ ಹೇಳಿ ಮನೆಯವರಿಂದ ಬೈಯಿಸಿಕೊಂಡು, ಆಮೇಲೆ ಜಾತಿ ಎಂದರೇನು ಎಂಬುದೇ ಮರೆವಾಗುವಂತಹ ವಿಶಾಲ ಬೆಂಗಳೂರಿಗೆ ಬಂದು ಕಳೆದು ಹೋಗಿ, ಈಗ ಊರಿಗೆ ಹೋದಾಗ ಮಾತ್ರ ಪಾಲಿಸಲೇ ಇರಲಾಗದ ಅನಿವಾರ್ಯ ವ್ಯವಸ್ಥೆಯಾಗಿ ಉಳಿದಿದೆ ಇದು.

  ಆದರೂ ಆರ್ಕುಟ್ಟಿನಲ್ಲಿ ನನ್ನ ಜಾತಿಯ ಕಮ್ಯೂನಿಟಿ ಕಂಡಾಗ, ಜಾತಿಯಿಂದಾಗಿಯೇ ಬಂದಿರುವ ವಿಶಿಷ್ಟ ಸೊಗಡಿನ ಕನ್ನಡ ಭಾಷೆ – ಅದನ್ನು ಯಾರಾದರೂ ಆಡುವುದು ಅಚಾನಕ್ಕಾಗಿ ಕಿವಿಗೆ ಬಿದ್ದಾಗ -ಒಂದು ಆಪ್ಯಾಯಮಾನ ಭಾವ ಪುಟಿದೇಳುತ್ತದಲ್ಲ, ಆಗೆಲ್ಲ ಅದು ನನ್ನ ಜಾತಿಯ ಬಗೆಗಿನ ವ್ಯಾಮೋಹವೇನಾ? ಇನ್ನೂ ಮೀರಲಾಗದ ನನ್ನ ಮಿತಿಯಾ? ಎಂದಾದರೂ ಮೀರಿಯೇನಾ? ಎಂಬೆಲ್ಲ ಪ್ರಶ್ನೆಗಳು ಉದ್ಭವಿಸಿಬಿಡುತ್ತವೆ.

  ಮಾತ್ರ, ಯಾರಾದರೂ ಸ್ನೇಹ ಬೆಳೆಸಲಿಕ್ಕಾಗಿ ನನ್ನ ಜಾತಿಯನ್ನು ಕೇಳಿದರೆ, ಅಥವಾ ಈ ಜಾತಿಯಿಂದಾಗಿಯೇ ತಾವು ದೊಡ್ಡವರು ಎಂಬಂತೆ ಮಾತಾಡುವುದು ಕಂಡರೆ, ಅಥವಾ ಜಾತಿ ಜಾತಿ ಅಂತ ಯಾವಾಗಲೂ ಬಡಬಡಿಸುವವರನ್ನು ಕಂಡರೆ ಅಸಹ್ಯವಾಗುತ್ತದೆ, ಈಗ.

 30. ಟೀನಾ ಮೇಡಂ, ನಿಮ್ಮಪ್ಪ ಪೋಲೀಸಾದ್ರೆ ನಮ್ಮಪ್ಪ ಬಿಜೆಪಿ;).ನಂಗೆ ಪೂರ್ತಿ ಹೆಸ್ರು ಹಿಡ್ದು ಕರ್‌ದ್ರೆ ಡ್ರೀಂಶ್ರೀಗೂ ಪೂರ್ತಿ ಹೆಸ್ರು ಹಿಡ್ದೇ ಕರೀಬೇಕು. ಅವ್ರ್ಗೆ ಮಾತ್ರ ಬೆಣ್ಣೆ ಹಚ್ಚಂಗಿಲ್ಲ, ಇಲ್ಲಂದ್ರೆ ನಾವ್ ಶ್ರೀರಾಂಪುರದವ್ರು ಬೇರೆ, ನಮ್ಮ್ ಉಡುಗ್ರನ್ನ ಕಳ್ಸ್ಬಿಡ್ತೀವಿ ಮ್ಯಾಟರ್ ಸೆಟಲ್ ಮಾಡಕ್ಕೆ! ಮನಸ್ವಿನಿ ಕೊಟ್ಟೀದಾರೆ ನೋಡಿ, ಸಿಂಪಲ್ ಸಲ್ಯೂಶನ್ನು(ಅವ್ರು ಬ್ಲಾಗರ್ಸ್ ಮೀಟ್‌ನಲ್ಲಿ ಡ್ರೀಂಶ್ರೀಗೆ ಹಿಂಗೇ ಬೆಣ್ಣೆ ಹಚ್ಚಿ, ನಂಗೆ ಸುಣ್ಣ ಹಚ್ಚೋಕೆ ಟ್ರೈ ಮಾಡಿ ಈಗ ಬುದ್ಧಿ ಕಲ್ತಿದಾರೆ;) ).
  ಇಷ್ಟರ ಮೇಲೆ ಇದೆಲ್ಲಾ ಡ್ರೀಂಶ್ರೀದೇ ಕಿತಾಪತಿ! ನಾನೇನೋ ಅಚ್ಚಕನ್ನಡದಲ್ಲಿ ಹೆಸ್ರು ಬರೆಯೋಕೆ ಷುರು ಮಾಡಿದ್ದೇ ಅವ್ರು ಹಿಂಗೆ ಇಲ್ದಿರೋ ಪ್ರಾಬ್ಲಂ ತಂದ್‍ಹಾಕೋಕೆ ಕಾರಣ ಅಂತ ಕ.ರ.ವೇ.ಯವ್ರಿಗೆ ಹೇಳಿ ರಿಪೇರಿ ಮಾಡ್ಸ್‌ಬೇಕಾಗುತ್ತೆ!! ಅಲ್ಲಾ, ಸುಮ್ನೆ ಕಾಮೆಂಟ್ ಹಾಕೋವಾಗ ನಂ ನಂ ಬ್ಲಾಗ್ ಯು ಆರ್ ಎಲ್ ಆ ಫೀಲ್ಡಿನಲ್ಲಿ ತುಂಬ್ಸಿದ್ರೆ ಆಯ್ತಪ್ಪ, ಅದು ಹಾಕ್ದೆನೆ ಕಂಡ್‌ಹಿಡೀರಿ ನೋಡಣಾ ಅಂತ ಯಾಕೆ ತರ್ಲೆ ಮಾಡ್ಬೇಕು? ಇಲ್ಲಿ ಇರೋ ನಾವು -ಇನ್ನು ಮೂರು ಶ್ರೀಗಳು – ಹಾಕಿಲ್ವಾ!
  ಇನ್ನು ಭಾಗ್ವತ್ರೇ, ಶ್ರೀನಿಧಿ ಹೇಳಿರೋದ್ ಸರೀಗ್ ಓದ್ಕಳಿ, ಹಿಮ್ಮಡಿ ಮುಮ್ಮಡಿ ಎಲ್ಲಾ ಆಗಕಿಲ್ಲ! ನಿಂ ಮಾತ್ ಕೇಳ್ಕೊಂಡ್ ಟೀನಾನೂ ಹಂಗೇ ಹಾಕಿದಾರೆ, ಹಿಂಗೆಲ್ಲಾ ಕಿಚಾಯ್ಸಿದ್ರೆ ನಾಲ್ಕು ಶ್ರೀ ಸೇರಿ ‍action ತಗೋತೀವಿ(ಡ್ರೀಂಶ್ರೀನೂ ನಮ್ಮ ಪಾರ್ಟಿನೇ ಈ ವಿಷ್ಯಕ್ಕೆ). ಈಗ ಶ್ರೀ ಕನ್‌ಫೀಶನ್ ಸಾಲ್ವ್ ಆಗಿರ್ಬೇಕು ಎಲ್ಲಾರ್ಗೂ(ಇಲ್ಲಾಂದ್ರೆ ಸರಿಯಿರಲ್ಲ!).ಜಾತಿ ಕನ್ಫೀಶನ್ ಮುಂದುವರ್ಸಿ:D

 31. ಜಾತಿ ಹುಟ್ಟಿನಿಂದ ಬರುವುದೇ? ಜಾತಿ ಎನ್ನುವುದು ನಾವು ಮಾಡಿಕೊಂಡದ್ದಲ್ಲವೇ? ಹಾಗೆಯೇ ಜಾತಿಯೇ ಇಲ್ಲ ಎಲ್ಲರೂ ಮಾನವರು ಎಂದು ತಿಳಿಯಲಾಗುವುದಿಲ್ಲವೇ?

  ನನ್ನ ಚಿಂತನೆಯ ಪ್ರಕಾರ

  ಎಲ್ಲಿಂದಲೋ ಬಂದು ಎಲ್ಲಿಯೋ ಹೋಗುವ ಈ ದೇಹಕ್ಕೆ ಚೇತನವನ್ನು ತುಂಬುವ, ಚೇತನವನ್ನು ನಿಶ್ಚಲವಾಗಿಸುವ ಆ ಕಾಣದ ತಿಳಿಯದ, ಮಹಾನ್ ಶಕ್ತಿಯನ್ನೇ ದೈವ ಎಂದು ತಿಳಿಯಬಹುದು. ಮನ ಮತ್ತು ಆತ್ಮದ ಚಿಂತನೆಗಳೆರಡೂ ಒಂದೇ ನಿಟ್ಟಿನಲ್ಲಿ ನಡೆಯುವಂತಾದಾಗ ಮಾತ್ರ ಇದು ಸಾಧ್ಯ ಅಲ್ವೇ!

  ಏನೋ ಬರೆದೆ ಎಂದು ಕಡೆಗಣಿಸಿದರೂ ಪರವಾಗಿಲ್ಲ, ನನ್ನ ಚಿಂತನೆಯನ್ನು ಹೊರಗೆಡಹಲು ಅವಕಾಶ ಕೊಟ್ಟದ್ದಕ್ಕೆ ವಂದನೆಗಳು

  ತವಿಶ್ರೀ

 32. “ನಾವ್ ಶ್ರೀರಾಂಪುರದವ್ರು ಬೇರೆ, ನಮ್ಮ್ ಉಡುಗ್ರನ್ನ ಕಳ್ಸ್ಬಿಡ್ತೀವಿ ಮ್ಯಾಟರ್ ಸೆಟಲ್ ಮಾಡಕ್ಕೆ!…”
  “ಭಾಗ್ವತ್ರೇ, ಹಿಂಗೆಲ್ಲಾ ಕಿಚಾಯ್ಸಿದ್ರೆ ನಾಲ್ಕು ಶ್ರೀ ಸೇರಿ ‍action ತಗೋತೀವಿ(ಡ್ರೀಂಶ್ರೀನೂ ನಮ್ಮ ಪಾರ್ಟಿನೇ ಈ ವಿಷ್ಯಕ್ಕೆ). ….”

  ಸ್ಪಷ್ಟೀಕರಣ
  ಭಾಗ್ವತ್ರಿಗೂ ನನಗೂ ಯಾವುದೇ ವಾಸ್ತವಿಕ ಅಥವಾ ಕಾಲ್ಪನಿಕ ಸಂಬಂಧಗಳಿಲ್ಲ ಎಂದು ಈ ಮೂಲಕ ಸ್ಪಷ್ಟೀಕರಿಸಲಾಗುತ್ತಿದೆ. ಭಾಗ್ವತ್ರು ತುಂಬ ಒಳ್ಳೇ ಜನ. ಅವ್ರು ’ಕಿಚಾಯ್ಸೋದು’ ಅನ್ನೋ ಶಬ್ದನೇ ಕೇಳಿಲ್ವಂತೆ:-)

 33. ಟೀನಾ,

  ಒಮ್ಮಡಿ-ಮುಮ್ಮಡಿ-ಹಿಮ್ಮಡಿ… ಥೋ ಥೋ ಥೋ! ಇಷ್ಟೊಂದು ‘ಮಡಿ’ ಯಾಕೆ ತಾಯಿ? ಇಲ್ಲಿ ಜಾತಿಯನ್ನೂ ಮೀರಿದ ಸಿಕ್ಕಾಪಟ್ಟೆ ಗಂಭೀರ ಸಮಸ್ಯೆ ಈ ಪಾಟಿ ತಲೆ ತಿಂತಿದೆ ಅಂತ ನನ್ನ ಪಟ್ಣಕ್ಕೆ ಗೊತ್ತೇ ಇರ್ಲಿಲ್ವಲ್ಲಾ… ಛೇ, ಅನ್ಯಾಯ. ಆದರೂ ಜಾತಿ ಬಗ್ಗೆ ಚರ್ಚೆ ಮಾಡ್ಬೇಕಾದ್ರೆ ಇಷ್ಟೊಂದು ‘ಮಡಿ’-ಮೈಲಿಗೆ ಇಟ್ಕೊಂಡ್ರೆ ಹ್ಯಾಗೆ? 🙂
  ಅಂದ್ಹಾಗೆ, ನಾನು ನೂರು ಕನಸು ಕಂಡಿಲ್ಲ, ಇರುವುದೆಲ್ಲವ ಬಿಟ್ಟು ನಡೆದಿಲ್ಲ, lazy ಅನ್ನೋದನ್ನೂ ಒಪ್ಪಿಕೊಳ್ಳೋದಿಲ್ಲ… ಕೇವಲ ಭಾವತೀರದ ಯಾನಿ. ನನ್ನೂ ಸೇರಿದಂತೆ ಎಲ್ಲಾ ‘ಶ್ರೀ’ಗಳಲ್ಲಿ ಒಂದು ವಿನಂತಿ: ನಿಮ್ನಿಮ್ಮ ಹೆಸರನ್ನು ಪೂರ್ತಿ ಬರೀರಪ್ಪಾ/ಮ್ಮಾ.
  ಸ್ವಾಮಿ ಭಾಗ್ವತ್ರೇ… ಯಾವುದಕ್ಕೂ ಎದುರಿಗೆ ಬನ್ನಿ.

  – ಶ್ರೀಪ್ರಿಯೆ

 34. ಸ್ನೇಹಿತರೆ,
  ಈ ಮೂಲಕ ಬೆಂಗಳೂರು ನಿವಾಸಿ ವರ್ಡ್ ಪ್ರೆಸ್ ನಗರದ ಟೀನಾ ಆದ ನಾನು ಸ್ಪಷ್ಟಪಡಿಸುವುದೇನೆಂದರೆ,
  ೧. ಇಲ್ಲಿ ಯಾವ ಶ್ರೀ ಗೂ ಅವಮಾನ ಮಾಡುವ ಉದ್ದೇಶ ಇಲ್ಲ.
  ೨. ಡ್ರೀಂಶ್ರೀಯವರು ಈ ಹೆಸರಿನ ಗೋಜಲನ್ನು ಹೇಗಾದರು ಪರಿಹರಿಸಬೇಕೆಂದು ಆಡಿದ ಮಾತಿನಿಂದ ಈ ಚರ್ಚೆ ಆರಂಭವಾಯಿತು. ಇದರಲ್ಲಿ ನಮ್ಮ ದೂರದೂರದ ದುರುದ್ದೇಶಗಳು ಶಾಮೀಲಾಗಿಲ್ಲ.
  ೩. ಜಗಲಿಯ ಭಾಗವತರು ತಮ್ಮ ಸಮಾಜಸೇವೆಯ ನಡುವೆ ಬಿಡುವು ಮಾಡಿಕೊಂಡು ಸೂಚಿಸಿದ ಸುಲಭ ಸಮಾಧಾನ ಎಲ್ಲಾ ಶ್ರೀಗಳಿಗು ಅಪಥ್ಯವಾದ ಕಾರಣ ಹಳೆಯ ಗಲಿಬಿಲಿ ಮುಂದುವರೆಯುವುದೇ ಸರಿ ಎಂದು ತೀರ್ಮಾನಕ್ಕೆ ಬರಲಾಗಿದೆ.
  ೪. ಇಲ್ಲಿ ಯಾವ ’ಮಡಿ-ಮೈಲಿಗೆಗಳ’ ಪ್ರಭಾವ ಇಲ್ಲ. ಇಲ್ಲಿಯ ’ಮಡಿ’ ನಮ್ಮ ಶ್ರೀಗಳ ಬಗ್ಗೆ ಪ್ರೇಮ-ಗೌರವಗಳ ಕುರುಹೆಂದು ತಿಳಿಯಬೇಕಾಗಿ ವಿನಂತಿ.
  ೫. ಶ್ರೀರಾಮಪುರವೆಂಬ ಪವಿತ್ರ ಹೆಸರಿರುವ ಪ್ರದೇಶದಿಂದ ಈ ವಿಷಯವನ್ನು ತೀರ್ಮಾನಿಸಲು ವಿಶೇಷ ಪರಿಣತಿ ಪಡೆದಿರುವ ಯುವಜನರನ್ನು ಕಳುಹಿಸುವ ಶ್ರೀಮಾತೆಯವರ ನಿರ್ಧಾರದಿಂದ ನಾವು ಆನಂದತುಂದಿಲರಾಗಿದ್ದೇವೆ. ಎಲ್ಲರನ್ನೂ ’ಸೂಕ್ತ’ ರೀತಿಯಲ್ಲಿ ಆದರಿಸಲಾಗುವದೆಂಬ ಭರವಸೆಯನ್ನು ನೀಡುತ್ತೇವೆ. ಮಾತೆಗೆ ಜಯವಾಗಲಿ!!
  ೬.’ JBಗೂ ಜಗಲಿ ಭಾಗವತರಿಗೂ ಏನು ಸಂಬಂಧ? ’ ಎಂದು ಟಾಬ್ಲಾಯಿಡ್ ಪತ್ರಿಕೆಗಳು ಸಂಶೋಧನೆ ನಡೆಸುತ್ತಿರುವ ಸುದ್ದಿ ನಮ್ಮ ಕಿವಿಯನ್ನು ತಲುಪಿದೆ.
  ೭. ಶ್ರೀನಿಧಿ ಹಾಗೂ ಶ್ರೀಪ್ರಿಯೆಯವರ ಭಾವನೆಗಳನ್ನು ಈ ಚರ್ಚೆಯು ನೋಯಿಸಿದ್ದರೆ ಈ ಮೂಲಕೆ ಎಲ್ಲರ ಪರವಾಗಿ ಕ್ಷಮಾಪಣೆ ಕೇಳಿಕೊಳ್ಳಲಾಗುತ್ತದೆ.
  ೮. ಹೆಸರುಗಳು ಜಾತಿಯ ಬಗ್ಗೆ ಆಗುವ ಕಾಳಗಗಳಿಗಿಂತ ಘೋರವಾದ ಉತ್ಪಾತಗಳನ್ನು ಎಬ್ಬಿಸುವ ಸೂಚನೆಗಳಿರುವದರಿಂದ ಈ ಬಗ್ಗೆ ಇನ್ನು ಮುಂದೆ ಬ್ಲಾಗಿಗರು ಎಚ್ಚರವಾಗಿರಬೇಕೆಂದು ಈ ಮೂಲಕ ಸೂಚಿಸಲಾಗಿದೆ.
  ೯. 😉 🙂 😦

  – ಟೀನಾ

 35. @ಶ್ರೀಪ್ರಿಯೆ,
  “ಸ್ವಾಮಿ ಭಾಗ್ವತ್ರೇ… ಯಾವುದಕ್ಕೂ ಎದುರಿಗೆ ಬನ್ನಿ.”

  ಖಂಡಿತ. ಅದ್ಕೇನಂತೆ? ನೀವು ಎದುರುಗೊಂಡು, ಅಷ್ಟೊಂದು ಪ್ರೀತಿಯಿಂದ ಮಸಾಲೆ ದೋಸೆ ಕೊಡಿಸ್ತೀನಿ ಅನ್ನೋದಾದ್ರೆ, ಬೇಡ ಅನ್ನಕಾಗತ್ತಾ? 🙂

  ಟೀನಾ, ನೀವೂ ಬನ್ರೀ. ಮಸಾಲೆ ದೋಸೆ ಕೊಡಿಸ್ತಾರಂತೆ. by-two ಮಾಡ್ಕಳಾಣ:-)

 36. ಟೀನಾ, ಭಾಗ್ವತ್ರೆ,

  ನಿಮ್ಮೊಂದಿಗೆ ಮಸಾಲೆ ದೋಸೆ ಸವಿಯೊ ಭಾಗ್ಯವನ್ನು ಬೇಡ ಅಂತೀನ್ಯೆ? ನಾ ಬೆಂಗಳೂರು/ಮೈಸೂರಿಗೆ ಬಂದಾಗ ಖಂಡಿತಾ ಎದುರಿಗೆ ಬನ್ನಿ. 🙂

  -ಶ್ರೀಪ್ರಿಯೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s