ನೀನಾವೆಡೆ ಓಡುತ್ತಿರುವೆ, ಓ ಪಾಪಿ ಮನುಷ್ಯನೆ.


ಆಂಖೋನ್ ಕೆ ಸಾಗರ್
ಹೋಂಟೋನ್ ಕೆ ಸಾಗರ್
ಲೇ ಡೂಬೇ ಹಮೇ…

ಪಾಕಿಸ್ತಾನ ಮೂಲದ ‘ಫ್ಯೂಜೋನ್’ ಬ್ಯಾಂಡಿನ ಹಾಡು ಕೇಳುತ್ತ ಮೈಮರೆತಿದ್ದೇನೆ. ಮನೆಯವರೆಲ್ಲ ಬೇಸತ್ತುಹೋಗಿ ಈಗೀಗ ಊಟಕ್ಕೆ, ತಿಂಡಿಗೆ ಕರೆಯುವುದನ್ನು ಕೂಡ ಬಿಟ್ಟುಬಿಟ್ಟಿದ್ದಾರೆ. ನನಗೆ ಆಗಾಗ ತಗುಲಿಕೊಳ್ಳುವ ದರವೇಶಿತನದ ರೋಗ ಕಳೆದ ತಿಂಗಳಿನಿಂದ ಜಾಸ್ತಿಯಾಗಿರುವುದೇ ಇದಕ್ಕೆ ಕಾರಣ ಎಂದು ನನ್ನ ಭಾವನೆ. ಹೀಗಾದಾಗೆಲ್ಲ ವಟವಟ ಎಂದು ಸಾಮಾನ್ಯವಾಗಿ ತಿರುಗುತ್ತಿರುವ ನನ್ನ ಮಾತು ಕಡಿಮೆಯಾಗುತ್ತದೆ. ಊಟತಿಂಡಿಗಳ ಪರಿವೆ ಇರುವುದಿಲ್ಲ. ಇದ್ದಕ್ಕಿದ್ದಹಾಗೆ ಏನೋ ನೆನೆಸಿಕೊಂಡು ಎದ್ದುಹೋಗಿಬಿಡುತ್ತೇನೆ. ಮಧ್ಯರಾತ್ರಿಯಲ್ಲಿ ಎದ್ದುಕೂತು ಹಾಡು ಗುನುಗುವುದೋ, ಕೇಳುವುದೋ, ಇಲ್ಲವೇ ದೀಪ ಹಚ್ಚಿಕೊಂಡು ಬರೆಯುವುದೋ ಮಾಡುತ್ತ ಇರುತ್ತೇನೆ. ನನ್ನವ ಒಂದು ನಿಟ್ಟುಸಿರು ಬಿಟ್ಟು ನಕ್ಕು ಮಗ್ಗುಲು ಬದಲಾಯಿಸಿ ತನ್ನ ಮಗುವಿನಂತಹ ನಿದ್ದೆಗೆ ಜಾರುತ್ತಾನೆ. ಅವನೊಬ್ಬನಿಗೆ ಮಾತ್ರ ಇದೆಲ್ಲ ಚೆನ್ನಾಗಿ ಅರ್ಥವಾಗುತ್ತದೆ.

ಎಂಟು ವರ್ಷಗಳ ಹಿಂದೆ ಇದೇ ಸಮಯದಲ್ಲಿ ಮೈಸೂರಿನ ರೆಸ್ಟುರಾವೊಂದರ ಮೂಲೆಯಲ್ಲಿ ಕೂತು ನಾನು ಆತನಲ್ಲಿ ಇದುವರೆಗೆ ಏನು ಕಂಡೆ, ಇದರಿಂದ ನನಗೇನು ಫಾಯಿದೆ ಎಂದು ಮುಂತಾಗಿ ಒಂದು ಕ್ಷಣವೂ ತೂಕಹಾಕಲು ಹೋಗದೆ ಸುಮ್ಮನೆ ಒದರಿದ್ದೆ – ’ನನಗೆ ಇದೆಲ್ಲ ಸಾಕಾಗಿದೆ, ಯಾವಾಗ ಮದುವೆಯಾಗೋಣ?’ ಆತ ರೆಪ್ಪೆಯನ್ನೂ ಮಿಟುಕಿಸದೆ ಅದೇ ಪ್ರಶ್ನೆಗೋಸ್ಕರ ವರುಷಗಳಿಂದ ಕಾಯುತ್ತ ಇದ್ದವನಂತೆ ಸಣ್ಣಗೆ ನಕ್ಕಿದ್ದ. ಆತ ಧರಿಸಿದ್ದ ಕಪ್ಪು ಟೀಶರ್ಟಿನ ಮೇಲಿದ್ದ ‘ಸ್ಪೀಡ್ ಡೆಮನ್’ ಎಂಬ ಗಾಥಿಕ್ ಶೈಲಿಯ ಲೇಬಲ್ಲನ್ನೆ ದಿಟ್ಟಿಸುತ್ತ ಆತಂಕದಿಂದ ಅವನ ಉತ್ತರಕ್ಕೆ ಕಾಯುತ್ತಿದ್ದ ನನಗೆ ಲೈಫಿನಲ್ಲಿ ಮೊದಲ ಬಾರಿಗೆ ಗಲಿಬಿಲಿ ತುಂಬಿದ ನಾಚಿಕೆಯಂಥ ಭಾವನೆಯಾಗಿತ್ತು. ‘ಓ ಮೆರೇ ದಿಲ್ ಕೆ ಚೈನ್.. ಚೈನ್ ಆಯೆ ಮೆರೆ ದಿಲ್ ಕೊ ದುವಾ ಕೀಜಿಯೇ..’ ನೆನಪಾಗಿ ನಕ್ಕಿದ್ದೆ. ಆಗ ಧ್ವನ್ಯಾಲೋಕದಲ್ಲಿ ಪೇಯಿಂಗ್ ಗೆಸ್ಟ್ ಆಗಿದ್ದ ನನಗೆ ಪ್ರೊ.ಸಿಡಿಎನ್ ಒಂದು ಮುಂಜಾವ ಜತೆಕೂತು ಟೀ ಕುಡಿಯುತ್ತಿರುವಾಗ ಅ ಹುಡುಗ ಯಾರು ಎಂದು ಸೂಕ್ಷ್ಮವಾಗಿ ಕೇಳಿದರು. ಇತರರಿಂದ ಅವರ ಮೂಡುಗಳ ಬಗ್ಗೆ ತರತರಹದ ಕಥೆಗಳನ್ನು ಕೇಳಿ ಬೇಕಾದಷ್ಟು ವಾರ್ನಿಂಗುಗಳನ್ನು ಅದಾಗಲೇ ಪಡೆದಿದ್ದ ನಾನು ಬೆವೆತುಹೋಗಿದ್ದೆ. ಆದರೆ ಸುಳ್ಳುಹೇಳಲು ಧೈರ್ಯಬರದೆ ಉಗುಳುನುಂಗುತ್ತ ನಿಜ ಹೇಳಿಬಿಟ್ಟೆ. ಎಲ್ಲವನ್ನೂ ತಲೆಯಾಡಿಸುತ್ತ ಕೇಳಿದ ಅವರು ’ಮೈಸೂರಿನಲ್ಲಿ ಒಬ್ಬಳೆ ಇರುತ್ತಿದ್ದೀಯ, ಹುಷಾರಾಗಿರು’ ಎಂದಷ್ಟೆ ಹೇಳಿ ಯಾವುದೋ ಪತ್ರ ಬರೆಯಲು ಕುಳಿತರು. ಬದುಕಿದೆಯಾ ಬಡಜೀವವೆ ಎಂದು ಅಲ್ಲಿಂದ ಓಟಕಿತ್ತೆ. ನನ್ನ ತಂದೆತಾಯಂದಿರ ಒಪ್ಪಿಗೆಯಿಲ್ಲದೆಯೆ ಮದುವೆ ನಿಶ್ಚಯವಾದಾಗ ಪ್ರೊಫೆಸರರ ಆಶೀರ್ವಾದ ಪಡೆಯಲು ಹೋಗಿದ್ದೆವು. ಪ್ರೊ.ಸಿಡಿಎನ್ ಮತ್ತು ಅವರ ಪತ್ನಿಯವರು ಆಶೀರ್ವದಿಸಿ ನನ್ನ ತಂದೆತಾಯಂದಿರನ್ನು ಒಲಿಸಿಕೊಳ್ಳಬೇಕೆಂದು ಬುದ್ಧಿವಾದ ಹೇಳಿದರು. ನಾನೂ ಇವನೂ ಮುಖಮುಖ ನೋಡಿಕೊಂಡು ಸುಮ್ಮನಾಗಿದ್ದೆವು.

ಬೆಳಜಾವ ನಾಲ್ಕು ಗಂಟೆ. ಇದನ್ನೆಲ್ಲ ಥೇಟು ದರವೇಶಿಯ ಥರ ಧ್ಯಾನಿಸಿಕೊಂಡು ಕುಳಿತಿದ್ದೇನೆ. ಮಗಳು ಕನಸು ಕಾಣುತ್ತ ‘ಸುಂ ಸುಂ ಸಾ.. ಜೇನುನೊಣ ಬಾ..’ ಎಂಬ ಹಾಡೊಂದನ್ನು ಜೊಲ್ಲುಸುರಿಯುವ ಬಾಯಲ್ಲಿ ತೊದಲುತ್ತ ಇದ್ದಾಳೆ. ನನಗೆ ಇವಳು ನನ್ನ ತರಹವೇನೇ ಎನ್ನಿಸಿ ಸ್ಥಬ್ದಳಾಗಿದ್ದೇನೆ. ಇಲ್ಲಿಯವರೆಗಿನ ನನ್ನ ಕೋಪ, ತಟವಟ, ಹುಚ್ಚುತನಗಳನ್ನೆಲ್ಲ ಸಾವಿರಾರುಸಾರಿ ತಡೆದು, ಜ್ವರಗಳಲ್ಲಿ ಅಮ್ಮನಂತೆ ಸಂತಯಿಸಿ, ಮಲಗುವ ಮುನ್ನ ಮೂಗಿಗೆ ಟೈಗರ್ ಬಾಮು ಹಚ್ಚದಿದ್ದರೆ ಮಾರನೆ ದಿನ ಮಾತು ಬಿಡುವವನ ಪ್ರೀತಿ ಎಂದಿಗೂ ನನಗೆ ಅರ್ಥವಾಗದು ಅನ್ನಿಸುತ್ತದೆ. ಕೆಲಕಾಲದ ಹಿಂದೆ ಮೈಸೂರಿನಲ್ಲಿ ಸ್ನೇಹಿತನೊಬ್ಬನ ಮೇಲೆ ತೀರಾ ಇಂಪಲ್ಸಿವ್ ಆಗಿ ಕೋಪಮಾಡಿಕೊಂಡು ಜಗಳವಾಡಿ ಮೊಬೈಲು ಸ್ವಿಚ್ ಆಫ್ ಮಾಡಿಕೊಂಡು ದಿನವೆಲ್ಲ ಸುಮ್ಮನೆ ಬೀದಿಗಳಲ್ಲಿ ಅಲೆದಾಡಿ, ’ಯು ಆರ್ ಬಿಹೇವಿಂಗ್ ಲೈಕ್ ಅ ರೆಚೆಡ್ ವುಮನ್’ ಎಂದು ಮುಂತಾಗಿ ಬಲ್ಲವರೊಬ್ಬರ ಕೈಲಿ ಬೈಯಿಸಿಕೊಂಡ ಮೇಲೆ ಹಗುರವೆನ್ನಿಸಿ ಸುಮ್ಮನಾದ ಹೆಣ್ಣು ನಾನು. ನನ್ನ ಪುನಃ ಪುನಃ ತಪ್ಪುಗಳನ್ನ ಮಾಡಿ ಯಾರ ಕೈಲಾದರು ಬಾಯಿಗೆ ಬಂದಹಾಗೆ ಅನ್ನಿಸಿಕೊಳ್ಳುವ ಬುದ್ಧಿ.

ಕಿವಿಗಳಲ್ಲಿ ‘ಜಿ. ಲವ್’ ಎಂಬ ಗಾಜಿನಂಥ ಕಣ್ಣುಗಳ ಸ್ಫುರದ್ರೂಪಿ ಹಾಡುಗಾರ ಹಾಡಿರುವ ‘ಓ ಸಿನರ್ ಮ್ಯಾನ್, ವೇರ್ ಡು ಯು ರನ್ ಟು?’ ಎಂಬ ಹಾಡು ಸುಮ್ಮನೆ ಓಲಾಡುತ್ತಿದೆ.

ಚಿತ್ರಕೃಪೆ: http://www.thebiscuitfactory.com  
 

Advertisements

9 thoughts on “ನೀನಾವೆಡೆ ಓಡುತ್ತಿರುವೆ, ಓ ಪಾಪಿ ಮನುಷ್ಯನೆ.

 1. ನಾನು ಆತನಲ್ಲಿ ಇದುವರೆಗೆ ಏನು ಕಂಡೆ, ಇದರಿಂದ ನನಗೇನು ಫಾಯಿದೆ ಎಂದು ಮುಂತಾಗಿ ಒಂದು ಕ್ಷಣವೂ ತೂಕಹಾಕಲು ಹೋಗದೆ ಸುಮ್ಮನೆ ಒದರಿದ್ದೆ – ’ನನಗೆ ಇದೆಲ್ಲ ಸಾಕಾಗಿದೆ, ಯಾವಾಗ ಮದುವೆಯಾಗೋಣ?’ ಆತ ರೆಪ್ಪೆಯನ್ನೂ ಮಿಟುಕಿಸದೆ ಅದೇ ಪ್ರಶ್ನೆಗೋಸ್ಕರ ವರುಷಗಳಿಂದ ಕಾಯುತ್ತ ಇದ್ದವನಂತೆ ಸಣ್ಣಗೆ ನಕ್ಕಿದ್ದ.

  ishta aada saalugaLu…..:-)

 2. ಇಲ್ಲಿಯವರೆಗಿನ ನನ್ನ ಕೋಪ, ತಟವಟ, ಹುಚ್ಚುತನಗಳನ್ನೆಲ್ಲ ಸಾವಿರಾರುಸಾರಿ ತಡೆದು, ಜ್ವರಗಳಲ್ಲಿ ಅಮ್ಮನಂತೆ ಸಂತಯಿಸಿ, ಮಲಗುವ ಮುನ್ನ ಮೂಗಿಗೆ ಟೈಗರ್ ಬಾಮು ಹಚ್ಚದಿದ್ದರೆ ಮಾರನೆ ದಿನ ಮಾತು ಬಿಡುವವನ ಪ್ರೀತಿ ಎಂದಿಗೂ ನನಗೆ ಅರ್ಥವಾಗದು ಅನ್ನಿಸುತ್ತದೆ…

  nimma intaha barahagale nannannu nimma barahada abhimAniyAgisiddu

 3. ಚಂದ ಇದೆ. ತುಂಬಾ ಇಷ್ಟ ಆಯ್ತು.

  “ನನ್ನವ ಒಂದು ನಿಟ್ಟುಸಿರು ಬಿಟ್ಟು ನಕ್ಕು ಮಗ್ಗುಲು ಬದಲಾಯಿಸಿ ತನ್ನ ಮಗುವಿನಂತಹ ನಿದ್ದೆಗೆ ಜಾರುತ್ತಾನೆ. ಅವನೊಬ್ಬನಿಗೆ ಮಾತ್ರ ಇದೆಲ್ಲ ಚೆನ್ನಾಗಿ ಅರ್ಥವಾಗುತ್ತದೆ.”– ಅರ್ಥವಾಗುತ್ತದಲ್ಲ, ಮತ್ತೇನು ಬಿಡಿ. ಅದೇ ಸಂತೋಷ .

  ಇಂತಹ ಬರಹಗಳಿಂದಲೇ ನಿಮ್ಮ ಬ್ಲಾಗ್ ತುಂಬ ತುಂಬ ಇಷ್ಟವಾಗುತ್ತದೆ.

 4. ಇಂಥದ್ದೊಂದು ದರವೇಶಿ ಸ್ಥಿತಿ ಕ್ರಿಯಾತ್ಮಕ ಮನಸ್ಸುಳ್ಳವರಿಗೆ ಆಗಾಗೆ ಬರುತ್ತಲೇ ಇರುತ್ತದೆ. ನನ್ನ ಗೆಳೆಯನೊಬ್ಬ ನಡುರಾತ್ರಿಯಲ್ಲಿ ಎದ್ದು ಕುಳಿತು ಗಿಟಾರ್ ಬಾರಿಸಲು ತೊಡಗುತ್ತಿದ್ದ. ಇನ್ನೊಬ್ಬ ಮಧ್ಯರಾತ್ರಿಯಲ್ಲಿ ಇಲೆಕ್ಟ್ರಾನಿಕ್ ಸರ್ಕ್ಯೂಟ್ ನಲ್ಲಿ ಎಲ್.ಸಿ.ಡಿ ಲೈಟುಗಳನ್ನು ಮಿನುಗಿಸುತ್ತ ಕುಳಿತಿರುತ್ತಿದ್ದ.
  ಅದನ್ನು ಬಿಟ್ಟು ನೀವು ಹೇಳಿದ ಈ ಸಾಲಿನ ಬಗ್ಗೆ ನನಗೆ ಯಾಕೋ ಅಪನಂಬಿಕೆ ‘ನಾನು ಆತನಲ್ಲಿ ಇದುವರೆಗೆ ಏನು ಕಂಡೆ, ಇದರಿಂದ ನನಗೇನು ಫಾಯಿದೆ ಎಂದು ಮುಂತಾಗಿ ಒಂದು ಕ್ಷಣವೂ ತೂಕಹಾಕಲು ಹೋಗದೆ ಸುಮ್ಮನೆ ಒದರಿದ್ದೆ – ’ನನಗೆ ಇದೆಲ್ಲ ಸಾಕಾಗಿದೆ, ಯಾವಾಗ ಮದುವೆಯಾಗೋಣ?’
  ಹುಡ್ಗೀರು ವಿಚಾರಕ್ಕಿಳಿಯದೇ ತೂಗಿ ಅಳೆದು ನೋಡದೆ ಒಂದು ಹೆಜ್ಜೆಯೂ ಮುಂದೆ ಇಡೋರಲ್ಲ ಅನ್ನೋದು ನನ್ನ ಅನಿಸಿಕೆ.

 5. ಎಂ.ಡಿ,
  ನಿಮ್ಮ ಸ್ನೇಹಿತರ ಬಗ್ಗೆ ತಿಳಿದು ಬಹಳ ಸಂತಸ, ನಾನು ಒಬ್ಬಂಟಿಯಲ್ಲ ಎಂದು ಖಾತ್ರಿಯಾಗಿದೆ!!
  ನಿಮ್ಮ ಅನಿಸಿಕೆ ನಿಮ್ಮದು. ಅದು ನಿಮ್ಮ ಅನುಭವಗಳಿಂದ ಮೂಡಿಬಂದಿರುವಂಥದು ಅಂದುಕೊಳ್ಳುತ್ತೇನೆ. ಅದನ್ನ ನಾನು ಗೌರವಿಸುತ್ತೇನೆ. ಆದರೆ ಅದು ಸಂಪೂರ್ಣ ನಿಜವಾಗಿರಬೇಕೆಂದಿಲ್ಲವಲ್ಲ!! ಎಲ್ಲ ಹೆಂಗಸರೂ ಒಂದೇ ಥರದವರಾಗಿದ್ದಿದ್ದರೆ ಗಂಡಸರಿಗೆ ಅವರನ್ನು ಓಲೈಸುವ ವಿಧಾನಗಳನ್ನು ಹುಡುಕುವ ತೊಂದರೆಯೇ ಇರುತ್ತಿರಲಿಲ್ಲವಲ್ಲ!! ನಾನು ಮಾಡಿದ್ದನ್ನ, ನನಗೆ ಆ ಹೊತ್ತು ಅನ್ನಿಸಿದ್ದನ್ನ ನಿಮ್ಮ ಮುಂದೆ Honest ಆಗಿ ಇಟ್ಟೆ ಅಷ್ಟೆ. ಇನ್ನು ನನ್ನ ಮಟ್ಟಿಗೆ ಹೇಳುವುದಾದರೆ, ನಿಮ್ಮ ಅನಿಸಿಕೆಗೆ ಅಪವಾದವಾಗಿ ನಿಲ್ಲುವಂಥವಳು ನಾನು. ಆದರೆ ಈ ಥರದ ಡಿಸಿಶನ್ನುಗಳನ್ನ ಭಾಳ ತೂಗೀ, ಅಳೆದೂ ಸುರಿದೂ ನಿರ್ಧಾರ ತಗೋಬೇಕು ಅನ್ನೋದನ್ನ ಒಪ್ತೇನೆ. ನನ್ನ ನಿರ್ಧಾರದ ಹಿಂದೆ ಕೂಡ ಗೆಳೆತನದ ಕಂಫರ್ಟ್, ಕೆಮಿಸ್ಟ್ರಿಗಳು ಇಲ್ಲದಿರಲಿಲ್ಲ. ಆದರೆ ಆ ಸಂಜೆ, ದೊಡ್ಡ ಜಗಳಗಂಟಿಯೂ ಅಲೆಮಾರಿಯಂತಹವಳೂ ಆದ, ಮಲೆನಾಡಿನ ಕನ್ಸರ್ವೇಟಿವ್ ಹಳ್ಳಿಯೊಂದರಲ್ಲಿ ಬೆಳೆದ ನಾನು, ಈ ರೀತಿಯ ಮದುವೆಯ ನಿರ್ಧಾರ ತೆಗೆದುಕೋಬಹುದು, ಅದೂ ನಾನೆ ಬಾಯಿಬಿಟ್ಟು ಕೇಳಬಹುದು ಅಂತ ಅಂದುಕೊಂಡೇ ಇರಲಿಲ್ಲ !! I think, it came to me just like that!! (ಅಂದಹಾಗೆ ನಾನು ’Sleepless in Seattle’ ನ ದೊಡ್ಡ ಫ್ಯಾನ್!!) ನಂಗೂ ಅಂದ್ರು ಎಲ್ಲಾರೂನೂ – ’ಹೀಗೆಲ್ಲ ಅವಸರದಲ್ಲಿ ಯೋಛ್ನೆ ಮಾಡದೆ ಮದ್ವೆ ಮಾಡ್ಕೊಂಡಿದೀ, ನಾಳೆ ಪಶ್ಚಾತ್ತಾಪ ಪಡ್ತೀ’ ಅಂತ. ಇನ್ಯಾರೊ ನನ್ನ ಮದುವೆ ಒಮ್ದೇ ವರ್ಷದಲ್ಲಿ ಮುರುದ್ಬೀಳತ್ತೆ ಅಂತ ಭವಿಷ್ಯ ಹೇಳಿದ್ರು, ಮತ್ಯಾರೊ ಜಾತಿ ವಿಷ್ಯ ಎತ್ತಿ.. ಉಫ್!! ನಾವು ನಗಾಡಿ ಸುಮ್ನಾಗ್ತಿದ್ವಿ.

 6. ಟೀನಾ ಜಿ,
  ನಿಮ್ಮ ಬ್ಲಾಗ್ ನಲ್ಲಿ ಆಗಾಗ ನಡೆಯುತ್ತಿರುವ ವ್ಯಕ್ತಿಗತ ಅಭಿಪ್ರಾಯಗಳ ಬಗ್ಗೆ ಚರ್ಚೆಗಳ ಬಗ್ಗೆ ಓದುತ್ತಿರುತ್ತೇನೆ.
  ಇನ್ನೊಬ್ಬರ ಅನಿಸಿಕೆಯನ್ನು ಗೌರವಿಸಿ ನಿಮ್ಮ ಅನಿಸಿಕೆಯನ್ನೂ ಅಭಿವ್ಯಕ್ತಿಪಡಿಸುವ ನಿಮ್ಮ ಜಾಣ್ಮೆ ಮೆಚ್ಚುವಂಥದ್ದೆ.
  ನೀವು ನೀಡಿದ ಕಾರಣವೂ ಸರಿ(ಟೀನಾ:ನನ್ನ ನಿರ್ಧಾರದ ಹಿಂದೆ ಕೂಡ ಗೆಳೆತನದ ಕಂಫರ್ಟ್, ಕೆಮಿಸ್ಟ್ರಿಗಳು ಇಲ್ಲದಿರಲಿಲ್ಲ).
  ಹೌದು, ನೀವು ಹೇಳಿದಂತೆ ನಾನು ಅಂದುಕೊಂಡಿದ್ದು ನನ್ನ ಅನುಭವದಿಂದ ಮೂಡಿದ ಅನಿಸಿಕೆಗಳು. ಅದು ಸರ್ವಕಾಲಿಕ ಸರ್ವಾಭಿಪ್ರಾಯವಾಗಲಾರದು ಬಿಡಿ 🙂

  ಛೆ ! ಎಲ್ಲ ಹುಡುಗಿಯರಲ್ಲದಿದ್ದರೂ ಕಡೆ ಪಕ್ಷ ಬಹಳಷ್ಟು ಹುಡುಗಿಯರು ಹೀಗಾದರೆ ನಮ್ಮ ಹುಡುಗರ ಪಾಡು ಸರಳವಾಗುತ್ತೆ.
  ಅಯ್ಯೋ ಏನ್ ಕೇಳ್ತೀರಾ ಈ ಮೂಕಿ ಹುಡ್ಗೀರ ಕೊಡೋ ಗೋಳು. ವಿಷ್ಯಾ ಏನು ಅಂತಾನೆ ಗೊತ್ತಿರುವುದಿಲ್ಲ ನಮಗೆ, ಬಾಯಿ ಬಿಟ್ಟು ಹೇಳುವುದೂ ಇಲ್ಲ . ಆಮೇಲೆ ಅಕ್ಷೇಪಾರೋಪ ಸಿಟ್ಟಿನ ಶಿಕ್ಷೆ. ಕರ್ಮ ಕರ್ಮ.

  ಆ ಎಲ್ಲ ನಿಮ್ಮ ಅತೀವ ಹಿತೈಷಿಗಳ ಅಭಿಪ್ರಾಯಗಳನ್ನು ಸುಳ್ಳಾಗಲಿ, ಅವರ ಪಾಲಿನ ಒಂದು ಆ ವರ್ಷ ಬರದಿರಲೆಂದು ಹಾರೈಸುತ್ತೇನೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s