ಕುವೆಂಪು ಮತ್ತು ನನ್ನ ಬದಲಾದ ‘ಇಮೇಜು’

ಯುನಿವರ್ಸಿಟಿಯಲ್ಲಿದ್ದಾಗ ನಮ್ಮ ಬೈಠಕ್ಕುಗಳು, ಗಲಾಟೆ, ಗೆಳೆತನ, ಪ್ರೇಮ, ವಿರಸ, ಗಾಸಿಪ್ ಏನು ನಡೆಯಬೇಕೆಂದರು ಕ್ಯಾಂಪಸ್ಸಿನ ಕುವೆಂಪುರವರ ದೊಡ್ಡದಾದ ಮೂರ್ತಿಯ ಸುತ್ತಮುತ್ತಲೆ ನಡೆಯಬೇಕಿತ್ತು. ಕ್ಯಾಂಪಸ್ಸಿಗೆ ಹೊಸತಾಗಿ ಬಂದ ಜೂನಿಯರ್ ಬ್ಯಾಚಿನ ಹುಡುಗಿಯರನ್ನು ನೋಡಲು ಠಳಾಯಿಸುವ ಹುಡುಗರು, ಶೇಷಣ್ಣನ ಕ್ಯಾಂಟೀನಿನಲ್ಲಿ ಟೀ ಕುಡಿದುಕೊಂಡು ಮಶ್ಕಿರಿ ಮಾಡಿಕೊಂಡು ಕಾಲಕಳೆಯುವ ಗೆಳೆಯರ ಗುಂಪುಗಳು, ಮೈದಾನದಲ್ಲಿ ಆಡುವವರ ಕೇಕೆ, ಸುಮ್ಮನೆ ಕಲ್ಲುಬೆಂಚುಗಳ ಮೇಲೆ ಕೂತು ಹರಟೆ ಕೊಚ್ಚುವವರು, ಇಬ್ಬಿಬ್ಬರೆ ಅಲ್ಲಿಇಲ್ಲಿ ಓಡಾಡಿಕೊಂಡು ತಾವು ಪ್ರೇಮಿಗಳೆಂದು ಸಾರುವ ಜೋಡಿಗಳು..ಹಾಗೂ ಇದನ್ನೆಲ್ಲ ಮೌನವಾಗಿ ನಿಂತು ನೋಡುವ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪನವರು.

ನಾವು ಹೊಸತಾಗಿ ಕ್ಯಾಂಪಸ್ಸಿಗೆ ಬಂದಾಗ ಅಲ್ಲಿನ ಇತರ ಎಲ್ಲ ಕಟ್ಟಡ, ಜನರು ಹಾಗೂ ಮರಗಿಡಗಳ ಜತೆಗೇ ಕುವೆಂಪುರವರೂ ನಿಗೂಢವಾಗಿ ಕಂಡಿದ್ದರು. ಅವರಿರುವ ದೊಡ್ಡ ಕಲ್ಲುಕಟ್ಟೆ ಸೀನಿಯರುಗಳ ಸ್ವತ್ತಾಗಿದ್ದಿದ್ದೂ ಒಂದು ಬಲವಾದ ಕಾರಣ. ಸಂಜೆಗಳಲ್ಲಿ ಆರಾಮವಾಗಿ ಕುವೆಂಪುರವರ ಕಾಲಬುಡದಲ್ಲಿ ಕೂತುಕೊಂಡು ಅವರು ನಡೆಸುವ ಮಾತುಕತೆಗಳ ಬಗ್ಗೆ ನಮಗೆ ಎಲ್ಲಿಲ್ಲದ ಕುತೂಹಲ. ಆದರೆ ನಾವೇನಾದರೂ ಅಪ್ಪಿತಪ್ಪಿ ಆ ಕಟ್ಟೆಯ ಮೆಟ್ಟಿಲು ಹತ್ತಿದರೂ ಸೀನಿಯರುಗಳ ಕೆಂಗಣ್ಣಿಗೆ ಗುರಿಯಾಗುವ ಭಯ. ನಾವುಗಳು ಸ್ವಲ್ಪ ನಿರ್ಭಿಡೆಯಿಂದ ನಡೆದುಕೊಂಡರೆ ನಮ್ಮ ವಿಭಾಗಗಳಲ್ಲಿ ಹೊಸಬರಿಗೆ ನೀಡಲಾಗುವ ‘ವೆಲ್ಕಂ’ ಸಮಯದಲ್ಲಿ ತೊಂದರೆಯಾಗಬಹುದು ಎಂದು ಎಲ್ಲರು ಮಾತನಾಡಿಕೊಳ್ಳುತ್ತಿದ್ದರು. ಅದಕ್ಕೆ ತಕ್ಕಂತೆ ಹಿರಿಯ ವಿದ್ಯಾರ್ಥಿಗಳೂ ಕೂಡ (ಮೊದಲ ಕೆಲವು ದಿನಗಳವರೆಗೆ..)ನಾವು ಕಂಡರೂ ಕಾಣದಂತೆ ವರ್ತಿಸುತ್ತಿದ್ದರು.

ಹೀಗಿರುವಾಗ ಒಂದು ದಿನ ಹೀಗಾಯಿತು. ನಾನು ಕವಿತೆ ಬರೆಯುತ್ತೇನೆ ಎಂದು ನಮ್ಮ ವಿಭಾಗದ ಒಬ್ಬ ಸೀನಿಯರ್ ವಿದ್ಯಾರ್ಥಿಗೆ ತಿಳಿದುಬಂತು. ಅವ ಹೌದೆ ಎಂದು ಕೇಳಿದ. ನಾನು ಹೂಂ ಎಂದೆ. ಆತನೂ ಚೆನ್ನಾಗಿ ಬರೆಯುತ್ತಾನೆಂದು ಹೆಸರಿದ್ದುದರಿಂದ ನಾನು ನನ್ನ ಬರಹದ ಕೆಲವು ಸ್ಯಾಂಪಲ್ಲುಗಳನ್ನು ಆತನಿಗೆ ತೋರಿಸುವುದೆಂದು ತೀಮರ್ಮಾನವಾಯಿತು. ಸಂಜೆ ನನ್ನ ಒಂದೆರಡು ಕವನಗಳನ್ನು ಆತನಿಗೆ ಲೈಬ್ರರಿಯಲ್ಲಿ ಕೊಟ್ಟೆ. ಆತ ಅವನ್ನು ಓದಿ, ‘ನಾನು ನಿನ್ನ ಕವನಗಳ ಬಗ್ಗೆ ಒಂದೆರಡು ಮಾತು ಹೇಳಬೇಕಿದೆ.’ ಎಂದ. ಸರಿ ಎಂದು ಮಾತನಾಡುತ್ತ ಲೈಬ್ರರಿಯಿಂದ ಹೊರಗೆ ಬಂದು ಕುಳಿತೆವು. ಕವಿತೆಗಳ ನಡುವೆ ಸಮಯ ಕಳೆದದ್ದೆ ತಿಳಿಯಲಿಲ್ಲ. ಚರ್ಚೆ ಮುಗಿಯಿತು. ನಾವು ಅಲ್ಲಿಯತನಕ ಕೂತದ್ದು ಕುವೆಂಪು ಕಟ್ಟೆಯ ಮೇಲೆ ಎಂದು ಆಗ ನನಗೆ ಅರಿವಾಯಿತು. ಸುಮಾರುಜನ ಹಿರಿಯ ಹಾಗು ನನ್ನ ಬ್ಯಾಚಿನ ವಿದ್ಯಾರ್ಥಿಗಳು ನನ್ನನ್ನು ವಿಚಿತ್ರವಾಗಿ ನೋಡುತ್ತ ಇದ್ದರು. ನಾನು ಒಳೊಳಗೆ ಸಣ್ಣ ಆತಂಕವಿದ್ದರೂ ಏನೂ ಆಗಿಲ್ಲವೆಂಬಂತೆ ಆರಾಮವಾಗಿ ಹಾಸ್ಟೆಲ್ಲಿಗೆ ಹೋದೆ.

ರಾತ್ರಿ ಊಟದ ವೇಳೆ ಸುಮಾರು ಗೆಳತಿಯರು ಬಂದು ನನ್ನ ಧೈರ್ಯವನ್ನು ಅಭಿನಂದಿಸಿದರು. ಕೆಲವರು ನಾನು ಅಲ್ಲಿ ಕೂತದ್ದು, ಅದೂ ಒಬ್ಬ ಸೀನಿಯರ್ ಹುಡುಗನೊಡನೆ –  ಸರಿಯಲ್ಲವೆಂದೂ, ನನ್ನ ಇಮೇಜಿಗೆ ತೊಂದರೆಯಾಗಬಹುದೆಂದೂ ಮಾತನಾಡಿದರು. ನನ್ನದೊಂದು ‘ಇಮೇಜು’ ಕೂಡ ಇತ್ತು ಹಾಗೂ ಅದು ಸಂಜೆಯ ನಂತರ ಬದಲಾಯಿತು ಎಂದು ನನಗೆ ತಿಳಿಯಿತು. ಕೆಲವು ಹಿರಿಯ ಹುಡುಗಿಯರು ನನ್ನ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದು ನನ್ನ ಕಿವಿಗೆ ಬಿತ್ತು.

ನಾನು ಮಾರನೆಯ ದಿನ ಸಂಜೆ ಒಂದು ಕೆಲಸ ಮಾಡಿದೆ. ನನ್ನ ಶಿವಮೊಗ್ಗೆಯಿಂದ ಬರುವ ಕೆಲವು ಸ್ನೇಹಿತೆಯರೊಡನೆ ಬೇಕೆಂದೆ ಕಟ್ಟೆಯ ಮೇಲೆ ಕುಳಿತು ಅವರ ಬಸ್ಸು ಬರುವ ತನಕ ಹರಟೆ ಹೊಡೆದೆ. ಅವರು ನನ್ನ ತರಲೆಯನ್ನೆಲ್ಲ ಖುಶಿಯಾಗಿ ಆನಂದಿಸಿ ಹೋದರು. ಮಾರನೆಯ ದಿನ ನನ್ನ ಕ್ಲಾಸಿನ ಸ್ನೇಹಿತೆಯರನ್ನು ಎಳೆದುಕೊಂಡು ಹೋದೆ. ಬಹಳ ಗಾಬರಿಯಾದರೂ ಅವರಿಗೂ ಒಂದು ಬಗೆಯ ಥ್ರಿಲ್ಲೆನಿಸಿತು. ಆಮೇಲೆ ನಾವು ಯಾರ ಪರಿವೆಯೂ ಇಲ್ಲದೆ ಕುವೆಂಪುರವರ ಬಳಿ ಕೂರಲಾರಂಭಿಸಿದೆವು. ಮೆಲ್ಲಮೆಲ್ಲನೆ ಇತರ ಗೆಳೆಯರೂ ಶಾಮೀಲಾದರು. ಆಮೇಲೆ ನಮ್ಮ ಮಾಸ್ಟರ್ಸ್ ಕೋರ್ಸು ಮುಗಿಯುವವರೆಗೂ ನಮ್ಮ ಸಂಜೆಗಳ ಕವಿತಾವಾಚನಗಳಲ್ಲಿ, ಚರ್ಚೆ, ಗುದ್ದಾಟ, ಹರಟೆ, ಸಂಭ್ರಮಗಳಲ್ಲಿ ಕುವೆಂಪುರವರ ದಿವ್ಯಮೌನ ಇದ್ದೇ ಇರುತ್ತಿತ್ತು. ಏನೆ ಇರಲಿ, ನಾನು ಅಂದು ಮೊದಲ ಬಾರಿಗೆ ಆ ಕಟ್ಟೆಯ ಮೇಲೆ ಪರಿವೆಯಿಲ್ಲದೆ ಅಚಾನಕ್ಕಾಗಿ ಕೂತದ್ದು, ಆ ಮೂಲಕ ಒಂದು ಸಣ್ಣ ನಿಯಮವನ್ನು ಮುರಿದದ್ದು ನನ್ನ ‘ಇಮೇಜ’ನ್ನು ಬದಲಾಯಿಸಿದ್ದಂತೂ ಸತ್ಯ.

ಚಿತ್ರಕೃಪೆ: www1.istockphotos.com
 

Advertisements

16 thoughts on “ಕುವೆಂಪು ಮತ್ತು ನನ್ನ ಬದಲಾದ ‘ಇಮೇಜು’

 1. ಕುವೆಂಪು ವಿವಿಯಲ್ಲಿ (ಶಂಕರಘಟ್ಟದಲ್ಲಿ ) ಓದುವ ಅವಕಾಶ ಸಿಗಲಿಲ್ಲ. ಆದರೆ ನಾಲ್ಕು ದಿನಗಳ ಮಟ್ಟಿಗೆ ವಿವಿಯಲ್ಲಿ ಉಳಿದಿದ್ದಾಗ ನಮಗೆ ಕುವೆಂಪು ಪ್ರತಿಮೆ ಇದ್ದ ಜಾಗವೆ ಹರಟೆ ಕಟ್ಟೆ. ಅಲ್ಲಿ ಕೂತು ಮಿತ್ರರು ಫೋಟೋ ತೆಗೆಸಿಕೊಂಡಿದ್ದೆವು.
  ಅಂದಹಾಗೆ ಕುವೆಂಪು ಹೇಗೆಲ್ಲಾ ಪ್ರಭಾವ ಬೀರ್ತಾರೆ ನೋಡಿ..!!

 2. ಪ್ರೀತಿಯ ಟೀನಾ,

  ತುಂಬ ಇಷ್ಟವಾಯಿತು. ನಿಮ್ಮ ಹಿಂದಿನ ಬರಹವೂ ತುಂಬ ಹಿಡಿಸಿತು. ಒಟ್ಟಿಗೇ ಕಮೆಂಟ್ ಮಾಡುತ್ತಿರುವುದಕ್ಕೆ ಕ್ಷಮೆಯಿರಲಿ.

  ಜ್ವರಬಂದಾಗ ನಿಮ್ಮನ್ನು ಅಮ್ಮನಂತೆ ನೋಡಿಕೊಳ್ಳುವ ನಿಮ್ಮ ಸಂಗಾತಿಯ ಕೆನ್ನೆಗೆ ಈ ಗೆಳತಿಯ ಒಂದು ಹೂಮುತ್ತು ನನ್ನ ಪರವಾಗಿ ತಲುಪಿಸಿಬಿಡಿ. ಇಬ್ಬರೂ ತುಂಬ ಇಷ್ಟವಾಗಿಬಿಟ್ಟಿದೀರಿ. ಇದಕ್ಕಾಗಿ ಸೃಷ್ಟಿ ಏನಾದ್ರೂ ಸಿಟ್ ಮಾಡ್ಕೊಂಡ್ರೆ ಅವಳಿಗಿನ್ನೊಂದು ಸಿಹಿಮುತ್ತು ಕೊಟ್ಬಿಡಿ.

  ಶಂಕರಘಟ್ಟದ ಬಗ್ಗೆ ಗೆಳೆಯರಿಂದ ಕೇಳಿದ್ದೆ. ನೋಡಿಲ್ಲ. ಈಗ ನೋಡಿದಂತೇ ಅನಿಸಿತು. ನಿಮ್ಮ ಸೂಕ್ಶ್ಮಗ್ರಾಹ್ಯತೆ ಮತ್ತು ವಿವರಣೆ ಬಹಳ ಹಿಡಿಸುತ್ತದೆ ನನಗೆ. ಅದಕ್ಕೆ ಪುಟವಿಡುವುದು ನಿಮ್ಮ ಬರಹದೊಳಗಿನ ನಿಸ್ಪ್ರಹತೆ.

  ಪ್ರೀತಿಯಿಂದ
  ಸಿಂಧು

 3. ’ಕಟ್ಟಾ ಶಿಷ್ಯೆ’ ಅನ್ನುವ ಪದ ಕೇಳಿದ್ದೆ. ’ಕಟ್ಟೆ (ಕುವೆಂಪು) ಶಿಷ್ಯೆ’ ಆನ್ನುವ ಪದ ಇವತ್ತೇ ಓದಿದ್ದು,

 4. ನೆನಪಿನಂಗಳದಿಂದ ಮಧುರ ಸ್ಮೃತಿಗಳನ್ನ ಹೆಕ್ಕಿ ತೆಗೆದು, ನೆನಪಿನ ದೋಣಿಯಲಿ ಹುಟ್ಟು ಹಾಕಿ ದೂರತೀರದ ಯಾನಕ್ಕೆ ಮನಸುಗಳನ್ನ ಅಣಿಗೊಳಿಸುತ್ತಿರುವ ಟೀನಾರವರಿಗೆ ಧನ್ಯವಾದಗಳು.

  ಸ್ಮರಣಿಕೆಯಲ್ಲಿನ ಗತಕಾಲದ ವೈಭವವನ್ನ ಕಣ್ಣ ಪಟಲದ ಮುಂದೆ ಸಾದೃಶ್ಯಪಡಿಸುವ ಅವ್ಯಕ್ತ ಕಲೆ ನಿಮಗೊಲಿದಿದೆ.

  ನಿಮ್ಮಿಂದ ಮತ್ತಷ್ಟು ಮಧುರಾನುಭೂತಿಯ ಬರಹಗಳ ನಿರೀಕ್ಷೆಯಲ್ಲಿ…

  ಗಣೇಶ್.

 5. ಅಲೆಮಾರಿ,
  ’ಕುವೆಂಪು ಎಫೆಕ್ಟ್’ ಬಗ್ಗೆ ನಾವು ಬಹಳ ಚರ್ಚೆ ಮಾಡಿದೇವೆ. ಕುವೆಂಪು ವಿಶ್ವವಿದ್ಯಾನಿಲಯದ ಕ್ಯಾಂಪಸ್ಸಿನಲ್ಲಿ ಓದಿದ ಯಾರೂ ಅವರ ವಿಶೇಷ ಪ್ರಭಾವವನ್ನ ಅಲ್ಲಗೆಳೆಯಲಿಕ್ಕೆ ಸಾಧ್ಯವೇ ಇಲ್ಲ!! ತಮಾಷೆ ಅಂದರೆ ನಾನು ಅಲ್ಲಿ ಯಾವ ಫೋಟೋನೂ ತೆಗೆಸಿಕೊಂಡಿಲ್ಲ, ಸ್ನೇಹಿತರ ಜತೆ ತೆಗೆಸಿಕೊಂದಿದ್ರೂ ನನ್ನ ಬಳಿ ಯಾವದೂ ಇಲ್ಲ!! ನೀವೆ ಅದೃಷ್ಟಶಾಲಿಗಳು!!

  ಸಿಂಧು,
  ನಿಮ್ಮ ಅಪ್ಪಣೆಯನ್ನ ಪಾಲಿಸಲಾಗಿದೆ. ನಿಮ್ಮ ಅಕ್ಕರೆ ಪ್ರೀತಿಗೆ ಶರಣು!!! ನೀವು ಭಾಳ ಒಳ್ಳೆ ಅಮ್ಮ ಆಗ್ತೀರ!!

  ’ಶ್ರೀ’ಯುತ ಭಾಗ್ವತ್ರೆ,
  ಕಟ್ಟಾಶಿಷ್ಯೆಯಾಗಲಿಕ್ಕಾಗಲಿಲ್ಲವಲ್ಲ ಅನ್ನೋ ದುಃಖಕ್ಕೇನೆ ಕಟ್ಟೆಶಿಷ್ಯೆಯಾಗಿದ್ದು!! ಅವ್ರ ಕಾಲಧೂಳು ತಾಕಿಯಾದರು ನಾವು ಉದ್ಧಾರ ಆಗೋಣ ಅಂತ!!

  ತೇಜಸ್ವಿನಿ,
  ನಿಮಗೆ ಇಷ್ಟವಾಯಿತಲ್ಲ? ಅದೇ ಖುಶಿ.

  Mr. Ravi Hanj,
  Prof. Javed was the first person I met after my admission to the University, as he was the hostel warden. He is a wonderful individual, who puts anyone at ease with his warmth and gentle manners. I used to admire the way he addressed us. During his tenure as the warden, he looked after us well, never interfered in our departmental or personal matters, thus gaining our respect. Because of people like him, memories of the KuVemPu University will always be green.
  Thank you for reading my post. Keep visiting.

  ಗಣೇಶ್,
  ಬಹುಶಃ ಈಗಿನ ಬೋರಿಂಗ್ ಜೀವನ ನನ್ನನ್ನ ಗತಕಾಲಸ್ಮರಣೆಗೆ (ನಾನು ಬೊಚ್ಚುಬಾಯಿಯ ಮುದುಕಿಯಾಗಲು ಬಹಳ ಕಾಲ ಬಾಕಿ ಇದ್ದರು!!) ಪ್ರೇರೇಪಿಸಿದೆ ಅಂದುಕೊಳ್ಳುತ್ತೇನೆ. ನಿಮ್ಮ ನಿರೀಕ್ಷೆಗಳನ್ನ ಹುಸಿಮಾಡದಿರಲು ನನ್ನ ಕೀಬೋರ್ಡು ಸನ್ನದ್ಧವಾಗಿದೆ!! ಧನ್ಯವಾದ.

  – ಟೀನಾ

 6. ಗಂಗಾಧರಯ್ಯನವರೆ,
  ಹಾಗೆ ನೋಡಿದರೆ ನನ್ನದು ಕೊಂಚ ಕೀಟಲೆಯ ಸ್ವಭಾವವೇ ಅನ್ನಬಹುದು. ನಿಮ್ಮನ್ನ ಮೊದಲ ಸಾರಿ ಭೇಟಿಯಾದಾಗ ಮಾಡಿದ್ದ ಕೀಟಲೆ ನೆನಪಿದೆಯೆ? 🙂
  -ಟೀನಾ

 7. ಟೀನಾ,
  ನೀವು ಹೀಗೆ ಹೊಸ ಹೊಸ ವಿಚಾರಗಳ ಬಗ್ಗೆ ಸೊಗಸಾಗಿ ಮೊಗೆ ಮೊಗೆದು ಬರೆದು ಹಾಕುತ್ತಿದ್ದರೆ, ನಿಮ್ಮ ಕೀ ಬೋರ್ಡ್ ಸರ್ವ ಸನ್ನದ್ಧವಾಗಿಟ್ಟುಕೊಳ್ಳುತ್ತಿದ್ದರೆ, ನನಗೆ ಒಂದು ಪಂಚ್ ಲೈನ್ ಬರೆಯಬೇಕೆಂದೆನಿಸುತ್ತಿದೆ ಮತ್ತು ನಿಮ್ಮನ್ನ ಹಾರೈಸಬೇಕೆನ್ನಿಸುತ್ತದೆ..!

  ನಿಮ್ಮ ಅಂತರಾಳವನ್ನ ಅಭಿವ್ಯಕ್ತಿಸಲು ನಿಮ್ಮ ಕೀಬೋರ್ಡು, ಮೌಸು ಇನ್ನಷ್ಟು ಹರಿತವಾಗಲೆಂದು ಬಯಸುವ…
  🙂
  ನಿಮ್ಮವ
  ಗಣೇಶ್

 8. ಹಾಯ್ ಟೀನಾ,
  ಶೇಷಣ್ಣನ ಕ್ಯಾಂಟೀನ್, ಕುವೆಂಪು ಪ್ರತಿಮೆ, ಹಾಗು ಶಂಕರಘಟ್ಟದ ಘಟನೆಗಳನ್ನು ನೆನಪಿಸುವಂತೆ ಬರೆದಿದ್ದೀರ. ನೀವೂ ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಓದಿದ್ದಾ?. ಸುಮಾರು ಒಂದು ದಶಕದ ಹಿಂದೆ ನಾನು ಕುವೆಂಪು ವಿ ವಿ ಯಲ್ಲಿ ಓದುತ್ತಿದ್ದ ಲಲಾಮ! (ಆದರೆ ಕವಿತೆ ಹಾಗೂ ಕವಿತಾ – ಇವೆರಡರ ಸುದ್ದಿಗೂ ಹೋದವನಲ್ಲ). ಇದೀಗ ಕಾರ್ಯ ನಿಮಿತ್ತ ದೇಶಾಂತರ ತಿರುಗುತ್ತಿರುವ ನನಗೆ ಕುವೆಂಪು ವಿ ವಿ ಒಂದು ನೆನಪು ಮಾತ್ರ!.
  ನಿಮ್ಮ ಬರಹ ಓದಿದಾಗ ಬದುಕಿನ ಗತ ಪುಟಗಳನ್ನೆಲ್ಲಾ ತಿರುವಿಹಾಕಿದನ್ತಾಯಿತು.

  Dr.D.M.Sagar

 9. ಕವಿ ಕುವೆಂಪು ಹೇಳಿದ್ದು. ಎಲ್ಲಿಯೂ ನಿಲ್ಲದಿರು ಮನೆಯನೆಂದೂ ಕಟ್ಟದಿರು. ಕೊನೆಯನೆಂದೂ ಮುಟ್ಟದಿರು ಎಂದಿರುವಾಗ ಕುವೆಂಪು ಅವರ ಕಟ್ಟೆಯ ಮೇಲೆ ಕೂಡಲು ಏಕೆ ಭಯ ? ಕವಿ ಕುವೆಂಪು ಇದ್ದೀದ್ದರೂ ಸಹ ತಮ್ಮ ನಡಾವಳಿಕೆಯನ್ನು ಪ್ರೀತಿಯಿಂದ ಕಾಣುತ್ತಿದ್ದರು. ತಾವು ಅಲ್ಲಿ ಕುಳಿತು ಮಾತಾಡಿದ್ದು, ಅವರು ಇಷ್ಟ ಪಡುತ್ತಿದ್ದ ಕವಿತೆ ಎಂಬುದೆ ಇಲ್ಲಿ ಬಹು ಮುಖ್ಯ.- ವಿಶ್ವಾರಾಧ್ಯ ಸತ್ಯಂಪೇಟೆ

  • ವಿಶ್ವಾರಾಧ್ಯ,
   ನಿಮ್ಮ ಮಾತಿಗೆ ಉತ್ತರ ಬಹುಶಃ ಈ ನನ್ನ ಲೇಖನದಲ್ಲಿಯೆ ಇದೆ!! ಹೊಸದಾದ ಜಾಗಕ್ಕೆ ಮೊದಲ ಬಾರಿ ಹೋದಾಗ ಯಾರೇ ಆಗಲಿ, ಒಂದು ಬಗೆಯ ಹಿಂಜರಿಕೆ, ಅಂಜಿಕೆ ಇದ್ದೇ ಇರುತ್ತದೆ ಮತ್ತು ಅದು ಸ್ವಾಭಾವಿಕವಲ್ಲವೆ? ಆ ಭಯವನ್ನು ತೊಲಗಿಸಿಕೊಂಡ ಬಗ್ಗೆಯೆ ಈ ಲೇಖನ ಬರೆದಿರುವುದು. ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದಗಳು!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s