‘ಅಗ್ನಿಯ ನದಿ’ ಆನಿ ಆಪಾ

ನನ್ನ ‘ಆನಿ’ ಆಪಾ (ಆಪಾ – ಅಕ್ಕ) ತೀರಿಹೋಗಿ ಹತ್ತಿರ ಹತ್ತಿರ ಒಂದು ವರುಷ ಕಳೆಯಿತು.  ಇನ್ನೂ ನೆನಪಿದೆ ಆ ದಿನ ನನಗೆ. ಅಮ್ಮ ಫೋನು ಮಾಡಿ ‘ಕುರ್ರತುಲೈನ್ ಹೈದರ್ ಹೋಗಿಬಿಟ್ರಲ್ಲ!!’ ಎಂದು ಪೇಚಾಡಿಕೊಂಡರು. ನಾನು ಸುಮ್ಮನೆ ಕಟ್ಟೆಯ ಮೇಲೆ ಕುಳಿತು ಆಗೀಗ ಇಣುಕುತ್ತಿದ್ದ ಬಿಸಿಲು ಕಾಯಿಸಲು ಹವಣಿಸುತ್ತ ಇದ್ದೆ. ನನ್ನವ ‘ಅಲ್ಲ, ನಿಂಗೆ ಏನೂ ಅನ್ನಿಸ್ತ ಇಲ್ವ?’ ಎಂದು ಟೀಕಿಸಿದ. ಅವರಾರೂ ‘ಆನಿ’ ಆಪಾ ಬರೆದಿರುವುದನ್ನು ಓದಿಲ್ಲ. ಆದರೆ ಆಕೆಯ ಪುಸ್ತಕಗಳ ಬಗ್ಗೆ ನನಗಿರುವ ಪ್ರೀತಿ, ಹುಚ್ಚು ಅವರಿಗೆ ತಿಳಿದಿದೆ. ತೇಜಸ್ವಿಯವರು ತೀರಿಕೊಂಡ ದಿನ ಕಾಲುಸುಟ್ಟ ಬೆಕ್ಕಿನ ಹಾಗೆ ನಾನು ಓಡಾಡಿರುವುದನ್ನು ನೋಡಿರುವ ಅವರಿಗೆ ನಾನು ಹಾಗೆ ನಿರುಮ್ಮಳವಾಗಿ ಇರುವುದು ನೋಡಿ ಹೇಗೆಹೇಗೊ ಅನ್ನಿಸಿರಬೇಕು.

ಉರ್ದುಸಾಹಿತ್ಯದ ಮಹಾರಥಿ ಲೇಖಕಿಯೆಂದು ಪರಿಗಣಿಸಲಾಗಿರುವ ಕುರ್ರತುಲೈನ್ ಹೈದರರನ್ನು ಎಲ್ಲರು ಪ್ರೀತಿಯಿಂದ ಕರೆಯುತ್ತಿದ್ದಿದ್ದೆ ‘ಆನಿ ಆಪಾ’ ಎಂದು. ನಾವು ಮಿಲನ್ ಕುಂದೇರಾ, ಗೇಬ್ರಿಯೆಲ್ ಗಾರ್ಸಿಯಾ ಮಾರ್ಕ್ವೆಜ್, ಮ್ಯಾಜಿಕ್ ರಿಯಲಿಸಂ ಎಂದೆಲ್ಲ ಹೇಳಿಕೊಂಡು ಓಡಾಡುತ್ತೇವೆ. ಮಾರ್ಕ್ವೆಜನ ‘ಒನ್ ಹಂಡ್ರೆಡ್ ಇಯರ್ಸ್ ಆಫ್ ಸಾಲಿಟ್ಯೂಡ್’ ಬಗ್ಗೆ ಅಕೆಡೆಮಿಕ್ಕಾಗಿ ಮಾತಾಡಿಕೊಳ್ಳುತ್ತೇವೆ. ಹಿಸ್ಪಾನಿಕ್ ಸಾಹಿತ್ಯಕ್ಕೆ, ಮತ್ತು ವಿಶ್ವಸಾಹಿತ್ಯಕ್ಕೆ ಮಾರ್ಕ್ವೆಜ್ ನೀಡಿದ ಅತ್ಯಪೂರ್ವ ಕೊಡುಗೆಯೆಂದು 1967ರಲ್ಲಿ ಹೊರಬಂದ ‘ಒನ್ ಹಂಡ್ರೆಡ್..’ ಅನ್ನು ಕೊಂಡಾಡಲಾಗುತ್ತದೆ. ಆದರೆ 1959ರಲ್ಲಿಯೆ ಕುರ್ರತುಲೈನ್ ಉರ್ದುವಿನಲ್ಲಿ ಬರೆದ ‘ಆಗ್ ಕಾ ದರಿಯಾ’ ಎಂಬ ಬೃಹತ್ ಕಾದಂಬರಿಯಲ್ಲಿ ಮ್ಯಾಜಿಕ್ ರಿಯಲಿಸಮ್ಮಿನ ಜತೆಗೇ ಉತ್ತಮವಾದ ಹೊಳಹುಗಳಿವೆ. ಓದುತ್ತ ಹೋದಂತೆ ಮಾರ್ಕ್ವೆಜನೇ ಬಹುಶಃ ಆಕೆಯಿಂದ ಪ್ರಭಾವಿತನಾಗಿದ್ದನೇನೊ ಎನ್ನುವಂತೆ ಭಾಸವಾಗುತ್ತದೆ! ಈ ಕಾದಂಬರಿಯನ್ನು ಬಹಳಕಾಲ ಯಾರಿಂದಲು ಭಾಷಾಂತರಿಸಲೂ ಸಾಧ್ಯವಾಗಲಿಲ್ಲ. 1998ರಲ್ಲಿ ಹೈದರ್ ತಾವೆ ಕೂತುಕೊಂಡು ಇದನ್ನು ಆಂಗ್ಲಕ್ಕೆ ‘ರಿವರ್ ಆಫ್ ಫೈರ್’ ಆಗಿ ಅನುವಾದಿಸಿ ಪ್ರಕಟಿಸಿದರು. ಆಗ ಎಲ್ಲರಿಗು ಆಕೆ ರಚಿಸಿದ ಸಾಹಿತ್ಯದ ಆಳ, ಮಹತ್ವ ಅರಿವಾಯಿತು. ’ನಮ್ಮ ಪ್ರಾದೇಶಿಕ ಭಾಷೆಗಳ ಸಾಹಿತ್ಯ ಎಷ್ಟೊಂದು ಸಮೃದ್ಧವಾಗಿದೆ! ಆದರೆ ಆಂಗ್ಲಭಾಷೆಯಲ್ಲಿ ಬರೆದವರಿಗೆ ದೊರಕುವ ಮಾನ್ಯತೆ ಇತರ ಭಾರತೀಯ ಭಾಷೆಗಳ ಬರಹಗಾರರಿಗೆ ದೊರಕುವುದೇ ಇಲ್ಲ. ಎಲ್ಲ ಮಲತಾಯಿ ಧೋರಣೆ!” ಎಂದು ನನ್ನ ಹಿರಿಯ ಸ್ನೇಹಿತರೊಬ್ಬರು ಆಗಾಗ ಬೇಸರಿಸುತ್ತ ಇರುತ್ತಾರೆ ಮತ್ತು ಇದು ನಿಜ ಕೂಡ.

ಕುರ್ರತುಲೈನ್ ಹೈದರ್ ಹುಟ್ಟಿದ್ದು 1927ರ ಆಧುನಿಕ ಲಿಬರಲ್ ಮುಸ್ಲಿಂ ಕುಟುಂಬವೊಂದರಲ್ಲಿ. ತಂದೆತಾಯಿ ಇಬ್ಬರೂ ಕಾದಂಬರಿಕಾರರು. ಮನೆಯಲ್ಲಿ ತುಂಬಿತುಳುಕುತ್ತ ಇದ್ದ ಸಾಹಿತ್ಯಾಸಕ್ತಿ. ತಂದೆಯ ವರ್ಗಾವಣೆಯ ಕೆಲಸದಿಂದಾಗಿ ಹೈದರ್ ತನ್ನ ಬಾಲ್ಯ ಮತ್ತು ಹರೆಯದ ಹೆಚ್ಚುಸಮಯವನ್ನು ಭಾರತದ ಎಲ್ಲೆಡೆ ಕಳೆದರು. ಕೊನೆಗೆ ಲಖನೌನ ಪ್ರತಿಷ್ಠಿತ ‘ಇಸಬೆಲ್ಲಾ ಥೋಬರ್ನ್’ ಕಾಲೇಜಿಗೆ ಸೇರಿದ ಹೈದರ್ ತನ್ನ ಸೌಂದರ್ಯ, ಆಧುನಿಕ ವಿಚಾರಧಾರೆ ಮತ್ತು ಶಿಫಾನ್ ಸೀರೆಗಳಿಂದ ಕ್ಯಾಂಪಸಿನಲ್ಲಿ ವಿಖ್ಯಾತರಾದರು. ಉರ್ದು ಸಾಹಿತ್ಯದಲ್ಲಿ ‘ಆಧುನಿಕ ಯುವತಿ’ಯನ್ನು ಗ್ಲಾಮರಿನೊಂದಿಗೆ ಪರಿಚಯಿಸಿದ್ದು ಈಕೆಯೆ. ಪಾರ್ಟಿಶನ್ನಿನ ಸಮಯದಲ್ಲಿ ಪಾಕಿಸ್ತಾನಕ್ಕೆ ಹೋಗಿ ನೆಲೆಸಿದ ಕುರ್ರತುಲೈನ್ ಗೆ ಅಲ್ಲಿ ಬಹಳಕಾಲ ಇರಲಾಗಲಿಲ್ಲ. ಬ್ರಿಟನ್ನಿಗೆ ಹೋಗಿ ಅಲ್ಲಿ ಸಾಹಿತ್ಯ, ರೇಡಿಯೊ ಎಂದು ಕೆಲವು ಸಮಯವಿದ್ದ ಆಕೆ ಮರಳಿದ್ದು ತನ್ನ ನೆಚ್ಚಿನ ಭಾರತಕ್ಕೆ. ಇದೇ ಸಮಯದಲ್ಲಿ ಬರೆದ ‘ಆಗ್ ಕಾ ದರಿಯಾ’ದಲ್ಲಿ ನಮ್ಮ ದೇಶದ ಸಂಸ್ಕೃತಿ, ಪರಂಪರೆಗಳ ನಿರಂತರ ಹರಿವೇ ಮುಖ್ಯ ವಸ್ತುವಾಗಿದೆ. ಕ್ರಿಸ್ತಪೂರ್ವ ನಾಲ್ಕನೇ ಶತಮಾನದ ಯುವ ಬೌದ್ಧ ಸನ್ಯಾಸಿ ಹರಿಶಂಕರ ಮತ್ತು ಗುರುಕುಲವೊಂದರ ವಿದ್ಯಾರ್ಥಿ ಗೌತಮ ನೀಲಾಂಬರ ಸಾಕೇತದ ಕಾಡೊಂದರಲ್ಲಿ ಭೇಟಿಯಾಗುವುದರೊಂದಿಗೆ ಪ್ರಾರಂಭವಾಗುವ ಕಾದಂಬರಿ, ಮೌರ್ಯರ ಆಳ್ವಿಕೆ, ಮೊಘಲರು, ಆಂಗ್ಲರನ್ನು ದಾಟಿಕೊಂಡು, ಸ್ವಾತಂತ್ರ್ಯ, ದೇಶದ ಇಬ್ಭಾಗ, ಆನಂತರದ ಪರಿಸ್ಥಿತಿಗಳವರೆವಿಗೆ ಬಂದುನಿಂತು ಆಧುನಿಕ ಹರಿಶಂಕರ ಮತ್ತು ಗೌತಮ ನೀಲಾಂಬರರು ಅದೇ ಜಾಗದಲ್ಲಿ ಬೇರೊಂದು ಶತಮಾನದಲ್ಲಿ ಬೇರಾರಂತೆಯೊ ಭೇಟಿಯಾಗುವುದರೊಂದಿಗೆ ಕೊನೆಗೊಳ್ಳುತ್ತದೆ. ಮಧ್ಯದಲ್ಲಿ ಬರುವ ಕಮಲ್, ಚಂಪಾ, ನಿರ್ಮಲಾ, ಯಕ್ಷಿಣಿಯ ಮೂರ್ತಿ, ಸರಯೂನದಿ ಮುಂತಾದ ಪಾತ್ರಗಳು ಗೌತಮ, ಹರಿಯರಂತೆಯೆ ಬದಲಾಗುವ ಪ್ರತಿ ಕಾಲಘಟ್ಟದಲ್ಲಿಯೂ ಬೇರೆಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರೆಲ್ಲದರ ಮಧ್ಯೆ ಹರಿಯುವುದು ಇತಿಹಾಸ. ಕುರ್ರತುಲೈನರಿಗೆ  ಸಲ್ಲಬೇಕಾದ ವಿಶ್ವವಿಖ್ಯಾತಿ ತಡವಾಗಾದರು ಆಕೆ ಬದುಕಿದ್ದಾಗಲೆ ದೊರಕಿದ್ದು ಸಂತಸದ ವಿಚಾರ.

ಇದಲ್ಲದೆ ಹೈದರ್ ಬರೆದಿರುವ, ಕಥೆಗಳು, ನಾಟಕ ಇತ್ಯಾದಿಗಳನ್ನು ಓದುತ್ತಿದ್ದರೆ ಆಕೆಯ ಯೋಚನೆ ಎಷ್ಟು ‘ಗ್ಲೋಬಲ್’ ಆಗಿತ್ತು ಎಂದು ಅನ್ನಿಸತೊಡಗುತ್ತದೆ. ಆಕೆಯ ರಚನೆಗಳನ್ನು ‘ಮುಸ್ಲಿಂ ಮಹಿಳಾ ಸಾಹಿತ್ಯ’ ಎಂದು ಬ್ರ್ಯಾಂಡ್ ಮಾಡುವಂತೆಯೆ ಇಲ್ಲ. ಮದುವೆಯಾಗದೆ ಉಳಿದ ಹೈದರ್ ಬಹಳ ‘ಮೂಡೀ’ ವ್ಯಕ್ತಿಯೆನಿಸಿದರು ಸಾಹಿತ್ಯದ ಬಗ್ಗೆ ಸಂವಾದ ನಡೆಸುವುದೆಂದರೆ ಸಂತಸದಿಂದ ತಯಾರಾಗಿಬಿಡುತ್ತಿದ್ದರು. ಅವರ ಪತ್ರಿಕೋದ್ಯಮಿ ಗೆಳೆಯರ ಬಳಗದಲ್ಲಿ ಸದಾ ತನ್ನ ಹೊಳಹುಗಳ ಆಣಿಮುತ್ತುಗಳನ್ನುದುರಿಸುತ್ತ ಜನಪ್ರಿಯವಾಗಿದ್ದರು. ಕ್ಯಾಲಿಫೋರ್ನಿಯಾ, ವಿಸ್ಕಾನ್ಸಿನ್, ಶಿಕಾಗೋ ಮೊದಲಾದ ಹಲವಾರು ವಿಶ್ವವಿದ್ಯಾನಿಲಯಗಳ ಸಂದರ್ಶಕ ಪ್ರಾಧ್ಯಾಪಕಿಯಾಗಿದ್ದ ಹೈದರ್ ಗಳಿಸಿದ ಪ್ರಶಸ್ತಿಗಳು – ಪದ್ಮಶ್ರೀ, ಪದ್ಮಭೂಷಣ, ಜ್ಜಾನಪೀಠ, ಸಾಹಿತ್ಯ ಅಕಾಡೆಮಿ, ಸೋವಿಯೆತ್ ಲ್ಯಾಂಡ್ ನೆಹರೂ, ಗಾಲಿಬ್ – ಒಂದೇ ಎರಡೇ?

ಜೀವನವನ್ನು ತನ್ನದೆ ರೀತಿಯಲ್ಲಿ ವ್ಯಾಖ್ಯಾನಿಸಿ, ಅದೇ ರೀತಿ ಬಾಳಿದ ನನ್ನ ‘ಆನಿ’ ಆಪಾ ಇಂದು ಇಲ್ಲ. ನನಗೆ ಅದನ್ನು ಜೀರ್ಣ ಮಾಡಿಕೊಳ್ಳಲಾಗುತ್ತಿಲ್ಲವೊ, ಅಥವಾ ನಾನೆ ಕೊರಡಿನ ತರಹ ಆಗಿದ್ದೇನೊ ತಿಳಿಯುತ್ತ ಇಲ್ಲ. ಸುಮ್ಮನೆ ಅಡ್ಡಾಡಿಕೊಂಡಿದ್ದೇನೆ, ಆಕೆಯ ನೂರಾರು ಪಾತ್ರಗಳ ವೈಭವಯುತ ಮೆರವಣಿಗೆಯ ನಡುವೆ ಎಲ್ಲೊ. ಅಲ್ಲೆ ಒಮ್ಮೆಯಾದರು ಆಕೆಯನ್ನು ಭೇಟಿಯಾಗಬಹುದು ಎಂಬ ಆಸೆ ಹೊತ್ತು.
 

ಚಿತ್ರಕೃಪೆ: ಜ್ಜಾನ

www.i16.tinypic.com/520td79.jpg

Advertisements

13 thoughts on “‘ಅಗ್ನಿಯ ನದಿ’ ಆನಿ ಆಪಾ

 1. ನಮಸ್ತೆ ಟೀನಾ, ಜಿಟಿ ಜಿಟಿ ಮಳೆಗೆ ಬೆಚ್ಚಗೆ ಹೊದ್ದು ಕರುಂ-ಕುರುಮ್ ಜಗಿದು, ಬಿಸಿ ಬಿಸಿ ಹಬೆಯಾಡುವ ಕಾಫೀ ಯನ್ನು ಸಿಪ್ ಮೇಲೆ ಸಿಪ್ ಹೀರುತ್ತಾ ಓದಿಸಿಕೊಂಡು ಹೋಗುತ್ತದೆ ನಿಮ್ಮ ಬರಹಗಳು. ಬದುಕು, ಅನುಭವ ಯಾವುದೇ ಭಾವನೆಗಳಿಗೆ ಸ್ಪಂದಿಸಾದಂತೆ ಮಾಡಿ ನಮ್ಮನ್ನು ಕೊರಡನ್ಣಾಗಿಸುತ್ತದೆ. ಕೆಲವೊಮ್ಮೆ ನಿತ್ಯ ಬದುಕಿನ ಬೇಕು- ಬೇಡ ಗಳಿಗೆ ಸ್ಪಂದಿಸುವದು ಅತೀ ಹಿಂಸೆಯಾಗಿಬಿಡುತ್ತೆ. ಆಸೆ ಜೀವಂತವಾಗಿರುವ ತನಕ ಬದುಕಲ್ಲಿ ನಿರಾಶೆಯ ಛಾಯೆ ಕಾಣಸಿಗಡು.

  all the best. waiting for the new one.

 2. ನಿನ್ನ ಓದಿಗೆ ನೀನೇ ಸಾಟಿ.
  ಅಂದಹಾಗೆ, ಪುಸ್ತಕ ನಿನ್ನ ಬಳಿ ಇದೆಯಾ? ಇಲ್ಲವಾದರೆ ಕೊಳ್ಳಲಿಕ್ಕೆ ಎಲ್ಲಿ ಸಿಗುತ್ತದೆ ತಿಳಿಸು.

 3. ಸಂತೋಷ್,
  🙂

  ಜೋಗಿಯವರೆ,
  ನನಗೆ ಗೊತ್ತಿರುವ ಮಟ್ಟಿಗೆ ಇದು ಕನ್ನಡಕ್ಕೆ ಅನುವಾದ ಆಗಿಲ್ಲ, ಅಗಿದ್ದಿದ್ದರೆ ದೊಡ್ಡ ಸುದ್ದಿಯಾಗಿರೋದು ಎಂದು ನನ್ನ ಭಾವನೆ!!

  ಚೇತೂ,
  ನಾನು ಮನೆಗೆ ಬರೋವಾಗ ಇದ್ನ ಮತ್ತೆ ’ಬ್ರೋಕನ್ ಬ್ಯಾಂಗಲ್ಸ್’ ನ ತರ್ತೇನೆ ಕಣೆ. ಓದಿದ್ ಮೇಲೆ ನೀನು ತಗೊಂಡೇ ತಗೊತೀಯ. ಯಾಕಂದ್ರೆ ಒಂದು ಸಾರಿ ಓದಿದ್ರೆ ಓದಿದ ಹಾಗೇ ಅನ್ಸಲ್ಲ. ಎಲ್ಲ ದೊಡ್ಡ ಬುಕ್ ಸ್ಟೋರುಗಳಲ್ಲೂ ಇದು ಸಿಗತ್ತೆ. ಬರಕ್ಕೆ ಮುಹೂರ್ತ ನೋಡಬೇಕು ಇನ್ನು!!

 4. ಟೀನಾ ಅವರೇ…..

  ನಿಮ್ಮ ಬರಹದ ವಿಷಯಗಳಲ್ಲಿ ಎನಾದರೂ ನಾವೀನ್ಯತೆ ಇದ್ದೇ ಇರುತ್ತದೆ. ಈ ಬರಹ ಕೂಡ ಇದಕ್ಕೆ ಹೊರತಲ್ಲ. ಇದನ್ನು ಕೊ೦ಡು ಓದಲು ಪ್ರಯತ್ನಿಸುತ್ತೇನೆ.
  ತು೦ಬಾ ಥ್ಯಾ೦ಕ್ಸ್ ಉತ್ತಮ ಬರಹಕ್ಕಾಗಿ ಮತ್ತು ಮಾಹಿತಿಗಾಗಿ.
  ಕನ್ನಡ ಸಾಹಿತ್ಯ .ಕಾ೦ ಕಾರ್ಯಕ್ರಮಕ್ಕೆ ನೀವು ಬ೦ದಿದ್ದ ಹಾಗಿರಲಿಲ್ಲ.

 5. ಗಂಗಾಧರಯ್ಯನವರಿಗೆ ಹಾಗೂ ಸುದೇಶ್ ಗೆ,
  ನನಗೆ ಇಷ್ಟವಾದುದನ್ನ ನಿಮಗೆ ಹೇಳುತ್ತೇನೆ ಅಷ್ಟೆ!! ನೀವು ಮೆಚ್ಚಿದಿರಿ. ನನಗೆ ಸಂತೋಷ. ಸುದೇಶ್, ನಾನು ಕನ್ನಡ ಸಾಹಿತ್ಯ.ಕಾಂ ಕಾರ್ಯಕ್ರಮದ ದಿನ ತುಮಕೂರಿನಲ್ಲಿರಬೇಕಾಗಿ ಬಂತು. ಹಾಗಾಗಿ..

  ಚಕೋರ,
  ನಾನು ಸಪ್ನಾದಿಂದ ಕೊಂಡುಕೊಂಡ ‘Kali for Women’ ಮುದ್ರಣಾಲಯದ ಪೇಪರ್ ಬ್ಯಾಕ್ ಪುಸ್ತಕದ ಬೆಲೆ ಸುಮಾರು ಮುನ್ನೂರು ರೂಪಾಯಿಗಳು ಎಂದು ನೆನಪು. You can buy it here when you come back next month.

 6. hi ,
  thanks tina for your comments in my blog.

  ನಾನು ಅದೇ ಹೇಮಶ್ರೀ .
  ಬೆಂಗಳೂರಿನಲ್ಲಿದ್ದೆ. ಇಷ್ಟು ದಿನ. ಈಗ ಅಮೇರಿಕಾದಲ್ಲಿದ್ದೇನೆ. ಮದುವೆಯಾಗಿ.
  http://www.bashasayed.com ಗೆ ಭೇಟಿ ನೀಡಿ. u find my soul mate zabeer’s paintings in his homepage .

  ಶ್ರೀದೇವಿ ಡಿ ಎನ್ ನನ್ನ ಕ್ಲಾಸ್ ಮೇಟ್ ಮತ್ತು ಗೆಳತಿ.
  ಮೋಹನ್ ಮತ್ತು ನಾನು family friends.
  ನಾನು ಮಂಗಳೂರಿನವಳು.

  keep writing.

  take care

  – Hemashree

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s