ಎನ್ನ ನಿಜಬಿಂಬವ ತೋರಿಸೆ, ಕನ್ನಡಿಯೆ

ಸಂಜೆ ವಾಕಿಂಗ್ ಹೋಗಿದ್ದಾಗ ಅಕಸ್ಮಾತ್ತಾಗಿ ಪಾರ್ಕಿನಲ್ಲಿ ಇವಳು ಹ್ಯಾಪುಮೋರೆ ಹಾಕಿಕೊಂಡು ಅಡ್ಡಾಡುತ್ತಿದ್ದುದು ಕಾಣಿಸಿ ಖುಶಿಯಾಯಿತು. ಖುಶಿಯೆಂದರೆ ಅವಳು ಹ್ಯಾಪುಮೋರೆ ಹಾಕಿಕೊಂಡಿದ್ದಕ್ಕಲ್ಲ, ಅವಳ ಜೊತೆ ಸಿಕ್ಕಿತಲ್ಲ ಅನ್ನುವುದಕ್ಕೆ.

’ಏನೆ? ಏನಾಯಿತೆ?’ ಅಂದೆ. 

’ಮಗೂಗೆ ಜ್ವರ, ಕೆಮ್ಮಲು. ಇವರು ಡಾಕ್ಟರ ಹತ್ತಿರ ಕರ್ಕೊಂಡು ಹೋಗಿದಾರೆ.’ ಅಂದಳು. ಮನಸ್ಸಿಗೆ ವೇದನೆಯೆನಿಸಿದರು ಆಕೆಯ ಮೂಡು ಸರಿಹೋಗಿಸಲು ಅಲ್ಲ,”ಅದೆಲ್ಲ ಈ ಸೀಸನ್ನಲ್ಲಿ ಮಾಮೂಲು. ಅದಕ್ಕೆಲ್ಲ ಯೋಚ್ನೆ ಮಾಡೋದೆ? ಎರಡು ದಿನ ಇರತ್ತೆ, ಹೋಗತ್ತೆ.’ ಅಂತೆಲ್ಲ ಹೇಳಿ ನೋಡಿದೆ.

ಇದ್ದಕ್ಕಿದ್ದಂತೆ ನನ್ನೆಡೆ ತಿರುಗಿದ ಆಕೆ ”ಟೀನಾ, ನಂಗೆ ಶುಗರ್ರಂತೆ, ಹೈಪರ್ಟೆನ್ಷನ್ ಆಗಿದೆಯಂತೆ. ನಂ ಫ್ಯಾಮಿಲೀಲಿ ಯಾರ್ಗೂ ಇಲ್ಲ. ನಂಗೆ ಅದ್ಯಾಕೆ ಬಂತೊ?’ ಎಂದು ಬಾಂಬು ಸಿಡಿಸಿ ಸುಮ್ಮನಾದಳು. ಅವಾಕ್ಕಾದ ನಾನು ಏನೂ ಹೇಳಲು ತೋಚದೆ ಸುಮ್ಮನೆ ಕಾಲುನೋಡುತ್ತ ನಡೆಯತೊಡಗಿದೆ. ಇಷ್ಟು ಸಣ್ಣವಯಸ್ಸಿನಲ್ಲಿ ಹೇಳಕೇಳದೆ ಕಾಲಿಟ್ಟ ಈ ಹೊಸಖಾಯಿಲೆ ಆಕೆಯ ನೆಮ್ಮದಿ ಹಾಳು ಮಾಡಿದ್ದು ಸ್ಪಷ್ಟವಾಗಿತ್ತು.

ಮದುವೆಯ ಒಂದು ವರುಷದ ನಂತರ ಮಗು. ಆಮೇಲೆ ಅಡಿಗೆಮನೆ, ಗಂಡನ ಟಿಫಿನುಬಾಕ್ಸು, ಜೋಡಿಸಾಕ್ಸು, ಮನೆಯ ಒಪ್ಪ ಓರಣ, ಸೀರಿಯಲ್ಲುಗಳು, ಖರ್ಚಿನ ಲೆಕ್ಕದ ಪುಸ್ತಕ, ನಿದ್ದೆ. ಆಗೀಗ ಒಂದು ಮದುವೆ, ನಾಮಕರಣ, ಗೃಹಪ್ರವೇಶ.. ತಾನು ಕನ್ನಡಿ ನೋಡಿದ ದಿನಗಳನ್ನು ಎಣಿಸಬಹುದು ಎಂದು ಆಕೆಯೆ ಹೆಮ್ಮೆಯಿಂದ ಹೇಳಿಕೊಳ್ಳುತ್ತ ಇದ್ದುದಿತ್ತು. ಮನೆಯಲ್ಲಿ ಇರುವ ಗೇಣುದ್ದ ಕನ್ನಡಿಗು ಒಂದು ಕಸೂತಿಯ ಪರದೆ. ಕನ್ನಡಿ ನೋಡದಿದ್ದರ ಪರಿಣಾಮ ಆಕೆಯ ಬೆಳೆವ ಮೈಯ ಬೊಜ್ಜು ಆಕೆಗೆ ಕಾಣಿಸಲೆ ಇಲ್ಲ. ಮನೆಯ ಹಿರಿಯರು, ಸ್ನೇಹಿತರು ’ಸೈನ್ ಆಫ್ ಪ್ರಾಸ್ಪರಿಟಿ’ ಎಂದು ಪರಿಗಣಿಸಿ ಆಕೆಗೆ ಎಂದೂ ಬೊಜ್ಜಿನ ಬಗ್ಗೆ ಕಾಳಜಿಯಿರಲಿ ಎಂದು ಎಚ್ಚರಿಕೆ ನೀಡಲಾರದೆ ಹೋದರು. ಆಕೆಗೆ ಪದೆಪದೇ ತಲೆತಿರುಗುವುದು ಪ್ರಾರಂಭವಾಗಿ ವೈದ್ಯರ ಬಳಿ ಹೋದಾಗ ಮಧುಮೇಹದ ವರದಿ ಕೈಗೆ ಬಂದಿತು. ಆಕೆ ಏನನ್ನು ದೂಷಿಸಲಿ ಎಂದು ತೀರ್ಮಾನಿಸಲು ಅಗದೆ ಪೆಚ್ಚಾಗಿದ್ದಳು.

 ಎರಡು ದಿನಗಳ ಹಿಂದಷ್ಟೆ ಡಯೆಟಿಶಿಯನ್ನೊಬ್ಬರು ನನ್ನ ಜತೆ ಮಾತನಾಡುತ್ತ ’ಹೆಂಗಸರು ಮದುವೆಯಾಗಿದ್ದೆ ತಡ, ತಮ್ಮ ಫುಡ್ ಡಯೆಟ್, ಸೌಂದರ್ಯಪ್ರಜ್ನೆ ಎಲ್ಲಾನೂ ಮರೆತೇ ಬಿಡ್ತಾರೆ. ನಿಜ ಹೇಳಿ ಟೀನಾ, ನೀವು ಕಾಲೇಜು ದಿನಗಳಲ್ಲಿದ್ದಷ್ಟೆ ಮುತುವರ್ಜಿ ವಹಿಸಿ ಡ್ರೆಸ್, ಮೇಕಪ್ ಮಾಡ್ತೀರ? ಎಣ್ಣೆತಿಂಡಿ ಅವಾಯ್ಡ್ ಮಾಡ್ತೀರ? ನಿಮ್ಮ ಇಷ್ಟದ ರೀತಿಯ ಬಟ್ಟೆ ತೊಟ್ಟುಕೋತೀರಾ?’ ಎಂದು ಪ್ರಶ್ನೆ ಹಾಕಿದಾಗ ಯಾಕೊ ವಾದಮಾಡಲು ಪದಗಳು ಸಿಕ್ಕಿರಲಿಲ್ಲ.

ಆಗ ಕಾಲೇಜಿಗೆ ಹೊರಡುವುದೆ ಒಂದು ಸಂಭ್ರಮ. ಕ್ಲಾಸಿನಲ್ಲಿ ಪ್ರತಿದಿನ ಬೆಳಗ್ಗೆ ಫ್ಯಾಶನ್ ಪೆರೇಡು. ಉಡುಪಿಗೆ ತಕ್ಕ ಕಮೆಂಟುಗಳು. ಸ್ಯಾರಿ ಡೇ, ಎಥ್ನಿಕ್ ಡೇ, ಜೀನ್ಸ್ ಡೇ…ಕನ್ನಡಿಯಿಲ್ಲದೆ ದೋಣಿ ಸಾಗದು ಅನ್ನುವ ಹಾಗಿತ್ತು. ’ನಿನ್ನ ಮದುವೆಗೆ ಸೊಂಟಕ್ಕೆ ಸಿಗಿಸಲು ಒಂದು ಬಿದಿರುಗಳ, ಅದರ ತುದಿಯಲ್ಲಿ ಒಂದು ಕನ್ನಡಿ, ಬಾಚಣಿಗೆ ಕಟ್ಟಿ ಪ್ರೆಸೆಂಟ್ ಮಾಡ್ತೇವೆ’ ಎಂದು ಗೆಳತಿಯರು ರೇಗಿಸುತ್ತಿದ್ದುದು ನೆನಪಾಗಿ ಸಣ್ಣಗೆ ನಕ್ಕೆ.

 ಪಾರ್ಕಿನ ಗೆಳತಿ ಹೇಳುತ್ತಿದ್ದಳು, ’ಸ್ವಲ್ಪ ದಿನ, ಆಮೇಲೆ ಹೊಂದಿಕೊಳ್ತೇನೆ.. ಈ ಮಾತ್ರೆ, ಚೆಕಪ್, ಊಟ.. ಆಮೇಲೆ ಅಡ್ಜಸ್ಟ್ ಆಗ್ಬಿಡತ್ತಂತೆ, ನಮ್ಮಾಂಟಿ ಹೇಳಿದ್ರು..” ತನಗೆ ತಾನೆ ಕಂಡುಕೊಂಡ ಸಮಾಧಾನ. ಮಂಕುಹೆಂಗಸೆ, ಎಲ್ಲ ಬಿಡು, ಮೊದಲು ನಿಲುವುಗನ್ನಡಿಯೊಂದನ್ನ ಕೊಂಡುಕೊ ಎಂದು ಹೇಳಬೇಕು ಅನ್ನಿಸಿತು. ಪ್ರತಿದಿನ ವಾಕಿಂಗ್ ಮಾಡಲು ಪುಗಸಟ್ಟೆ ಸಲಹೆ ನೀಡಿ ಹೊರಟೆ.

ಚಿತ್ರಕೃಪೆ: www.imagekind.com, Painting by Norman Rockwell

Advertisements

11 thoughts on “ಎನ್ನ ನಿಜಬಿಂಬವ ತೋರಿಸೆ, ಕನ್ನಡಿಯೆ

 1. ಟೀನಾ,
  ಇದು ನಿಜಕ್ಕೂ ಆಘಾತಕಾರಿ ಸಂಗತಿ(ಅವರಿಗೆ ಮಧುಮೇಹ ಬಂದದ್ದು, ಬಿಪಿ ಬಂದದ್ದಕ್ಕಿಂತ). ಹುಡುಗಿಯರು ಹೆಂಗಸರಾಗಿ ಬದಲಾದಾಗ ತಮ್ಮ ಸೌಂದರ್ಯ ಪ್ರಜ್ಞೆ, ಜೀವನೋತ್ಸಾಹ ಎಲ್ಲವನ್ನ ಮರೆತುಬಿಡುವುದು ಖೇದಕರ. ಮದುವೆಯಾಗಿ ಮಕ್ಕಳಾಗಿ, ಮಕ್ಕಳೂ ಒಂದು ಹಂತಕ್ಕೆ ಬಂದ ನಂತರ ಜೀವನದಲ್ಲಿ ಇನ್ನೇನಿದೆ ಅನ್ನೋ ವೇದಾಂತ ಹೇಳೋ ಹಂತಕ್ಕೆ ಮನಸ್ಸು ಹೊಂದಿಬಿಡುತ್ತಾರೆ. ಅಖಂಡ ಜೀವನೋತ್ಸಾಹವೇ ಜೀವನದ ಅದಮ್ಯ ಚೇತನ. ಕಂಫರ್ಟ್ ಝೋನ್ ಅಂತ ಕರಿಯೋ ಮನೆ, ಮಕ್ಕಳು, ಆರ್ಥಿಕ ಸದೃಢತೆ ಇವೆಲ್ಲಾ ಬಂದಾದ ಮೇಲೆ ೩೫ರ ಆಸುಪಾಸಿನಲ್ಲಿ ಒಂದು ನಿರಾಸಕ್ತಿ ಬಂದುಬಿಡುತ್ತದೆ. ಇದು ಮಾನಸಿಕ ಕ್ಲೇಷಕ್ಕೆ, ಒಂದು ರೀತಿಯ ಅಸಮಾಧಾನಕ್ಕೆ, ಯಾವುದೋ ಬೇಸರಕ್ಕೆ, ಜೀವನ ನಿರಾಸಕ್ತಿಗೆ ಕಾರಣವಾಗುತ್ತದೆ.

  ಮೊದ ಮೊದಲು ಅಗಸ ಗೋಣಿ ಥಟ್ಟು ಎತ್ತಿ ಒಗೆದ ಅನ್ನೋ ಮತು ಸತ್ಯವಾಗುತ್ತದೆ. ಮದುವೆಯಾದ ಹೊಸತರಲ್ಲಿ ಜೀವನದಲ್ಲಿ, ದಾಂಪತ್ಯದಲ್ಲಿ ಇರುವ ಆಸಕ್ತಿ ಕಳೆಗುಂದುತ್ತಾ ಬಂದುಬಿಡುವುದು ಸಹಜ. ಅದರೆ, ಅದೆಲ್ಲವೂ ತಾವು ಮಾಡಿಕೊಂಡಿದ್ದೇ ಅನ್ನೋದನ್ನ ಹಲ ಜನ ಮರೆತುಬಿಡುತ್ತಾರೆ. ಜಗತ್ತನ್ನ, ತಮ್ಮ ಭವಿಷ್ಯವನ್ನ ಹಳಿಯುತ್ತಾರೆ. ಮೊದ ಮೊದಲು ಅತಿಯೆನಿಸುವ ಸೌಂದರ್ಯ ಪ್ರಜ್ಞೆ ಇರೋದು ನಂತರದಲ್ಲಿ ಒಂದು ಸಮ ತೂಕದ ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕೂ ಆಸಕ್ತಿ, ಸಮಯ ಮೀಸಲಿಡುವುದಿಲ್ಲ. ಉತ್ತಮವಾಗಿ ತಮ್ಮನ್ನ ತಾವು ಹೇಗೆ ಪ್ರೆಸೆಂಟ್ ಮಾಡಿಕೊಳ್ಳುವುದು ಎಂಬುದನ್ನೂ ಮರೆತುಬಿಡುತ್ತಾರೆ. ಸೌಂದರ್ಯ ಪ್ರಜ್ಞೆ ಎಂದರೆ, ಜೀವನಾಸಕ್ತಿ ಎಂದರೆ ಬರೀ ಮೇಕಪ್ ಬಗ್ಗೆ ನಾ ಹೇಳುತ್ತಿಲ್ಲ. ಗಂಡ ಬರುವ ಸಮಯಕ್ಕೆ ಮದುವೆಯಾದ ಹೊಸತರಲ್ಲಿ ಬಾಗಿಲ ಬಳಿ ಕಾಯುವ ತವಕ ಮದುವೆಯಾಗಿ ಹಲ ವರ್ಷಗಳ ನಂತರ ಮರೆಯಾಗುತ್ತದೆ. ಆದರೆ, ಮಹಿಳೆಯರು ೩೫ರ ಆಸುಪಾಸಿನಲ್ಲಿ ಅದ್ಯಾವ ಮಟ್ಟಿಗೆ ದಾಂಪತ್ಯದಲ್ಲಿ, ಗಂಡನಲ್ಲಿ, ಜೀವನದಲ್ಲಿ ನಿರಾಸಕ್ತಿ ಹೊಂದುತ್ತಾರೆಂದರೆ, ಸಂಸಾರಕ್ಕಿಂತ ಆತ್ಮೀಯ ಸಂಬಂಧಗಳಿಗಿಂತ ಧಾರಾವಾಹಿಯ ಕಚಡಾ ಪಾತ್ರಗಳ ಬಗ್ಗೆ ಪುಂಖಾನು ಪುಂಖವಾಗಿ ಮಾತಾಡುತ್ತಾರೆ.

 2. ನಮಸ್ತೆ ಟೀ,
  ಬರಹ ಇಷ್ಟವಾಯ್ತು.. ಓದಿದ ಮೇಲೆ ಕನ್ನಡಿಗೆ ಎಂಥ ಶಕ್ತಿ ಅಲ್ಬಾ ಅನಿಸಿತು..
  ನಮ್ಮ ಭ್ರಮೆಗಳನ್ನು ತೋರಿಸುತ್ತೆ, ನಮಗೆ ಕನಸು ಕಟ್ಟಿಕೊಡುತ್ತೆ..
  ಅದೆಷ್ಟು ಸತ್ಯ, ಇದೆಷ್ಟು ಸುಳ್ಳು, ಕನ್ನಡಿ ಮುಂದೆ ಎಲ್ಲಾ ಬಟಾಬಯಲು..
  ಹೀಗೆ ಏನೆನು ಹೊಳೆಸಿತು ನಿಮ್ಮ ಬರಹ..
  ಕನ್ನಡಿ ಬಗ್ಗೆ ಫ್ರೆಂಚ್ ಕಥೆಗಾರ ಒಂದು ಸುಂದರ ಕಥೆ ಬರೆದಿದ್ದಾನೆ ದಿ ಮಿರರ್ ಅಂತಾ..ಓದಿ..

 3. ಟೀನಾ ಅವರೆ,

  ಲೇಖನ ತುಂಬಾ ಇಷ್ಟವಾಯಿತು. ಹದಿವಯಸ್ಸಿನಲ್ಲಿ “ಕನ್ನಡಿ ಮುಂದಷ್ಟು ಹೊತ್ತು ಬರೆಯದಿರುವ ಕವನ..” ಎಂದು ಹಾಡಿದ ಮನಸ್ಸು.. ವರುಷಗಳು ಕಳೆದು ಸಂಸಾರದಲ್ಲಿ ಮುಳುಗಿದಾಗ “ಕನ್ನಡಿ ಮುಂದಷ್ಟು ಹೊತ್ತು ಆಗದಿರುವ ಕೆಲಸ” ಎನ್ನುತ್ತದೆ. ಮಾಟಗಾತಿಯ ಬಳಿ ಇದ್ದ ಸತ್ಯ ಹೇಳುವ ಮಾಯದ ಕನ್ನಡಿ ಎಲ್ಲ ಹುಡುಗಿಯರ/ಹೆಂಗಸರ ಬಳಿ ಇದ್ದಿದ್ದರೆ ಎಷ್ಟು ಚೆನ್ನಾಗಿತ್ತು ಅಲ್ಲವೇ? 🙂

 4. ತುಂಬಾ ತುಂಬಾ ಚೆನ್ನಾಗಿದೆ. ಒಂದು ಸಣ್ಣ ಪ್ರಸಂಗ, ಒಂದು ಸಣ್ಣದು ಎಣಿಸುವ ಸಮಸ್ಯೆ, ಎಸ್ಟು ಸರಳ ಪರಿಹಾರ. ಕನ್ನಡಿ ನೋಡಲು ಸಮಯವಿಲ್ಲದ ಗೆಳತಿ ಕನ್ನಡಿ ನೋಡಿದ್ದರೆ ಸಮಸ್ಯೆಯೇ ಇರುತಿರಲಿಲ್ಲವೇನೋ. ತುಂಬಾ ತುಂಬಾ ಚೆನ್ನಾಗಿದೆ.

 5. ಟೀನಾರೇ,
  ಒಳ್ಳೆ ಲೇಖನ. ಕನ್ನಡಿಯ ಶಕ್ತಿಗಿಂತ ನಮ್ಮೊಳಗೆ ನಾವಿಳಿದು ನೋಡಬೇಕೆಂಬ ಮಾತಿದೆ. ಅದಾಗಬೇಕು. ಜತೆಗೆ ನಿಮ್ಮ ಉದ್ಯಾನವನದ ಗೆಳತಿಗೆ ಹೇಳಿ. ಆತಂಕ ಪಡಬೇಕಿಲ್ಲ. ಇವತ್ತು ಶುಗರ್ ಒಂದು ಕಾಯಿಲೆ ಅಲ್ಲ. ಒಂದಿಷ್ಟು ಯೋಗ, ನಡಿಗೆ ಇತರೆ ಅಭ್ಯಾಸಗಳನ್ನು ರೂಢಿಸಿಕೊಂಡರೆ ಸಾಕು, ಬಾಯಿಗೆ ಬ್ರೇಕ್ ಹಾಕ್ಬೇಕು. ನನ್ನ ಕಸಿನ್ ಒಬ್ಬಳಿಗೂ ಇಂಥದೇ ತೊಂದರೆ ಇತ್ತು. ಒಮ್ಮೆ ಸಿಕ್ಕಾಪಟ್ಟೆ ಗೋಳಾಡಿಕೊಂಡಳು. ಈಗ ನಿಧಾನಕ್ಕೆ ಅಭ್ಯಾಸ ಮಾಡಿಕೊಂಡಿದ್ದಾಳೆ. ದಿನವೂ ಒಂದಿಷ್ಟು ವಾಕಿಂಗ್, ಸಂಜೆ ಮೇಲೆ ಸ್ವಲ್ಪ ಯೋಗ ಹಾಗೂ ಇತಿ-ಮಿತಿ ಆಹಾರ ಸೇವಿಸ್ತಿದ್ದಾಳೆ. ಬಹಳ ದಿನಗಳ ನಂತರ ಇತ್ತೀಚೆಗಷ್ಟೇ ಅವಳ ಮನೆಗೆ ಹೋಗಿದ್ದೆ. ಅಂದಿನ ಖಿನ್ನತೆ ಹೋಗಿತ್ತು, ಹೊಸ ಉತ್ಸಾಹ ಮೂಡಿತ್ತು. ನನಗೆ ನಿಜಕ್ಕೂ ಖುಷಿಯಾಯಿತು. ಕಾಯಿಲೆ ಬರುವ ಮುನ್ನ ಎಚ್ಚರಿಕೆ ವಹಿಸಬೇಕು, ಸರಿ. ಆಗದಿದ್ದರೆ ಬಂದ ಮೇಲಾದರೂ ಎಚ್ಚರವಾಗಿರಬೇಕು, ಹೌದು ತಾನೇ.
  ಒಳ್ಳೆ ಲೇಖನಕ್ಕೆ ಧನ್ಯವಾದ. ಅಂದ ಹಾಗೆ ಹೊಸ ಫಿಲ್ಮ್ ಯಾವುದು ನೋಡಿದ್ರಿ, ಬರ್ದೇ ಇಲ್ಲಾ !
  ನಾವಡ

 6. ಮದುವೆ ಆಗ್ತಿದ್ದಂಗೆ priyorities change ಆಗುತ್ತೆ ಅಂತ ಗೊತ್ತು. ಆದ್ರೆ ಅಲಂಕಾರದಲ್ಲೂ ಆಸಕ್ತಿ ಕಳ್ಕೊತಾರೆ ಅಂದ್ರೆ ಆಶ್ಚರ್ಯ ಆಗತ್ತೆ. bcoz dressing up is not for others, its for ourself ಅಲ್ವ? ಅದು ನಮಗೆ confidence ಕೊಡುತ್ತೆ ಅನ್ಸತ್ತೆ ನಂಗೆ. I loveee dressing…

 7. ಇಷ್ಟು ದಿನ ಬೇರೆಯವರ ಬ್ಲಾಗುಗಳಲ್ಲಿ ನಿಮ್ಮ ಕಾಮೆಂಟುಗಳನ್ನು ಓದ್ತಾ ಇದ್ದೆ ಅಷ್ಟೇ! ಇವತ್ತು ‘ಕನ್ನಡಪ್ರಭ’ದ ದೆಸೆಯಿಂದ ನಿಮ್ಮ ಜ್ಝೋನಿಗೆ ಬಂದು ಇಣುಕಿ ನೋಡುವ ಭಾಗ್ಯ ಸಿಕ್ತು!
  ಸಖತ್ತಾಗಿ ಬರೀತೀರ ಮೇಡಂ.
  “ಟಿಫಿನುಬಾಕ್ಸು, ಜೋಡಿಸಾಕ್ಸು” – ವಾಹ್! ನಿಮ್ಮ ಬರವಣಿಗೆಯ ಲಹರಿಗೆ ಸೋತುಹೋದೆ!

  [ನಿಮಗೆ ಅಡ್ಡಿಯಿಲ್ಲವೆಂದು ಭಾವಿಸಿ ನಮ್ಮನೆ ಗೋಡೆ ಮೇಲೆ ನಿಮ್ಮನೆ ವಿಳಾಸ ಬರ್ಕೋತೀನಿ.]

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s