ಹಳೆಯ ಪರಿಚಿತ ಪರಿಮಳ

 

“The body of Benjamin Franklin
Printer,
Like the covering
Of an old book
Its contents torn out
And stript of its lettering
And gilding
Lies here, food for worms;
But the work
Shall not be lost,
It will (as he believed)
Appear once more,
In a new
And more beautiful edition,
Corrected and amended
By the author.”
Epitaph for Benjamin Franklin 

ಹಳೆಯ ಪುಸ್ತಕಗಳು ಯಾವಾಗಲು ನಾನು ಕಂಡಿರದ ಯಾವುದೊ ಊರಲ್ಲಿ ಇರಬಹುದಾದ ಕಡಲತೀರವನ್ನ ನೆನಪಿಸುತ್ತವೆ.

ಇದು ನಡೆದಿದ್ದು ಇವತ್ತೆ. ನಡುದಿನ. ನಾನು ಯಾವುದೊ ಗಮ್ಮತ್ತಿನಲ್ಲಿ ಹಿಡಿಯಬೇಕಾದ ದಾರಿ ಬಿಟ್ಟು ಇನ್ನೊಂದರ ಕಡೆಗೆ ಕಾಲು ಹಾಕಿದಾಗ. ಇಂತಹ ಆಕಸ್ಮಿಕಗಳೆ ಅಲ್ಲವೆ ನಮಗೆ ಥ್ರಿಲ್ ಅನ್ನುವ  ಅನುಭಾವದ ಪರಿಚಯ ಮಾಡಿಕೊಟ್ಟಿರುವುದು? ಅಪ್ಪ ಅಮ್ಮನಿಗೆ ಅರಿವಾಗದಂತೆ ಗುಟ್ಟಾಗಿ ನಾವು ಶಾಲಾ ಕಾಲೇಜು ಹಂತಗಳಲ್ಲಿ ನಡೆಸಿದ ತರಲೆಗಳನ್ನೆ ನಾವು ಹೆಚ್ಚಾಗಿ ನೆನಪಿಸಿಕೊಳ್ಳುವುದು. ಈಗ ನನ್ನ ಬಗ್ಗೆ ನೀವು ಇಲ್ಲಸಲ್ಲದ ಗುಮಾನಿ ಹತ್ತಿಸಿಕೊಂಡು ಹಿಂಸೆ ಮಾಡಿಕೊಳ್ಳುವುದಕ್ಕೆ ಮುನ್ನ ನಾನು ಬೆಂಗಳೂರ ಬಸವೇಶ್ವರನಗರದ ಕಟ್ಟಡವೊಂದರ ಬೇಸ್ಮೆಂಟಿನಲ್ಲಿ ಅಕಸ್ಮಾತ್ತಾಗಿ ಕಂಡುಕೊಂಡ ಒಂದಿಷ್ಟು ಪುಸ್ತಕಗಳ ಬಗ್ಗೆ ನಿಮಗೆ ಹೇಳಬೇಕು ಅನ್ನಿಸ್ತಾ ಇದೆ.

ನಾನು ಈಚೆಕಡೆ ಫುಟ್ ಪಾತಿನಲ್ಲಿ ನಡೆಯುತ್ತಿದ್ದೆ. ನಾನು ಹಿಂದೊಮ್ಮೆ ಹ್ಯಾರಿಪಾಟರನ ಥರವೆ ಇದ್ದ, ಹ್ಯಾರಿಪಾಟರ್ ಸಿಡಿಗಳನ್ನ ಮಾರುತ್ತಿದ್ದ ಹುಡುಗನ ಕಂಡಿದ್ದ ಬೇಕರಿಯ ಬಳಿಯ ಜಾಗವೆ ಅದು. ಆ ಜಾಗಕ್ಕು ನನಗು ಏನೊ ವಿಶೇಷ ಅಫಿನಿಟಿ ಇರಬೇಕೆಂದು ಕಾಣುತ್ತದೆ. ಸರಿಯಾಗಿ ಆ ಜಾಗಕ್ಕೆ ಬಂದಾಗಲೆ ನನಗೆ ಕೆಂಪು ಹಳದಿ ಬಣ್ಣದ ಆ ಪುಟ್ಟ ಬ್ಯಾನರು ಕಂಡಿದ್ದು. ನನಗೆ ಒಂದು ನಿಮಿಷ ಅದು ಬರೆ ಬ್ಯಾನರು ಮಾತ್ರ ಆಗಿರದೆ ಇನ್ನೇನೇನೊ ಆಗಿರುವಂತೆ ಅನ್ನಿಸಿತು. ಬೇರೆಯವರ ಕಣ್ಣಿಗೆ ಅದು ಹೇಗೆ ಕಾಣುತ್ತಿತ್ತೊ ಅದರ ಉಸಾಬರಿ ಬೇಡ. ನನಗೆ ಕಂಡಿದ್ದು ನನಗೆ ಕಂಡಿತು ಅಂತ ಹೇಳಲು ಕಾಸು ಕೊಡಬೇಕೆ? ನೀವೇನೆ ಅಂದರು ಚಿಂತೆಯಿಲ್ಲ.

ಇಲ್ಲಿ ಪುಸ್ತಕಗಳು ಮಾರಾಟಕ್ಕಿದೆ – ಅನ್ನುವ ಭಾಗ ಮಾತ್ರ ನನಗೆ ಕಂಡಿದ್ದು. ಅಂಗಡಿ ಎಲ್ಲಿ ಎಂದು ಕಣ್ಣು ಕಿರಿದುಮಾಡಿ ನೋಡಿದೆ. ಫುಟ್ಪಾತಿನ ಲೆವೆಲಿಗಿದ್ದ ಬ್ಯಾನರಿನಡಿಯಲ್ಲಿ ಅಂಗಡಿ ಹೂತುಹೋಗಿತ್ತು. ರೋಡು ಕ್ರಾಸುಮಾಡುವಾಗೆಲ್ಲ ಒಂದಲ್ಲಾ ಒಂದು ವಾಹನದಡಿಯಲ್ಲಿ ಬರುವ ಗಾಬರಿಯಲ್ಲಿ ಸುಮಾರು ಚಾಲಕರಿಂದ ಬೈಯಿಸಿಕೊಳ್ಳುವ ನಾನು ಒಂದೇಟಿಗೆ ಅದು ಹೇಗೆ ಆಚೆಬದಿಗೆ ಹೋದೆನೊ ತಿಳಿಯಲಿಲ್ಲ. ಈ ಕಾರ್ಟೂನುಗಳಲ್ಲಿ ‘ಸುಯ್ಯಾಂವ್’ ಅನ್ನುವ ಸೌಂಡಿಗೆ ಟಾಮೊ ಜೆರಿಯೊ ಅನಾಯಾಸವಾಗಿ ಇಗೊ ಇಲ್ಲಿಂದ ಅಗೊ ಅಷ್ಟು ದೂರ ಹೋಗಿಬಿಟ್ಟಿರುತ್ತವಲ್ಲ ಹಾಗೆಯೆ ಅನ್ನಿಸಿತು. ಹೂತುಹೋಗಿದ್ದ ಅಂಗಡಿಯೊಳಗೆ ಇಳಿದೆ. ಅಂಗಡಿಯಾಕೆ ಒಬ್ಬಳೆ ಧೂಳುಹೊಡೆಯುತ್ತ ಇದ್ದಳು. ಸುಮ್ಮನೆ ನೋಡಿದೆ. ಇದಕ್ಕೆ ಇಷ್ಟು.. ಇದಕ್ಕೆ ಇಷ್ಟು.. ಎಂದು ಹೇಳಿ ಆಕೆ ಪುನಃ ಧೂಳು ಹೊಡೆದು ಎಲ್ಲ ಓರಣ ಮಾಡುವುದರಲ್ಲಿ ತಲ್ಲೀನಳಾದಳು. ನನ್ನ ಗೋಣಿಯಂತಹ ಬ್ಯಾಗಿನ ಬಗ್ಗೆ ಕಣ್ಣು ಕಿರಿದಾಗುವದಿರಲಿ, ಹುಬ್ಬು ಕೂಡ ಹಾರಲಿಲ್ಲ. ನಾನು ಒಂದನ್ನ ಆರಿಸಿದೆ. ಬಿಡಿಸಿದೆ. ಕಡಲಿನ ಪರಿಮಳದಂಥದೆ ಏನೊ ಒಂದು ಮೂಗಿಗೆ ಅಡರಿತು. ಪುಟಗಳನ್ನ ಬೆರಳ ತುದಿಗೆ ಇಟ್ಟು ಚರ್ರನೆ ಜಾರಿಸಿದೆ. ಅಲೆಗಳ ‘ವ್ಹೂಶ್!’ ಕೇಳಿತು. ಅದೆ ಪರಿಚಿತ ಹಳೆಯ ಪರಿಮಳದ ಮೋಹಕ್ಕೆ ಸಿಕ್ಕಿ ನಿಂತುಕೊಂಡಿದ್ದೆ. ಯಾರೊ ನನ್ನನ್ನೆ ನಿರುಕಿಸುತ್ತ ಇದ್ದಾರೆ ಅನ್ನಿಸಿತು. ಕತ್ತು ಹೊರಳಿಸಿದೆ. ಅವಳು ಧೂಳು ಹೊಡೆಯುವದನ್ನು ಬಿಟ್ಟು ನನ್ನನ್ನೆ ನೋಡುತ್ತಿದ್ದಳು. ತನ್ನ ಅಂಗಡಿಗೆ ಬಂದು ಪುಸ್ತಕದ ಪರಿಮಳ ಆಘ್ರಾಣಿಸುತ್ತ ನಿಲ್ಲುವವರನ್ನ ಆಕೆ ನೋಡಿರಲಿಕ್ಕಿಲ್ಲ. ಆಕೆಯ ತುಟಿಯಂಚಿನಲ್ಲಿ ಮಿಂಚಿದ ಪುಟ್ಟ ನಗು ವೈರಸ್ಸಿನ ಹಾಗೆ ನನಗೂ ಅಂಟಿಕೊಂಡಿತು.

ನನಗೆ ಹಳೆಯ ಪುಸ್ತಕಗಳ ಬಗ್ಗೆ ವಿಪರೀತ ಮೋಹ. ನನ್ನ ಬಳಿ ಇರುವ ಅತ್ಯಂತ ಹಳೆಯ ಪುಸ್ತಕ ಎಂದರೆ ಸ್ವಾತಂತ್ರ್ಯಪೂರ್ವದಲ್ಲಿ ಮುದ್ರಿಸಲಾದ ಯಾವುದೊ ಹೆಂಗಸಿನ ಹೆಸರಿರುವ ಅರ್ಧ ಹೆಬ್ಬೆಟ್ಟಿನಷ್ಟುದ್ದದ ಒಂದು ಡಿಕ್ಷನರಿ. ಇನ್ನು ಯುರೋಪಿಯನ್ ಇತಿಹಾಸವನ್ನ ಓದುತ್ತ ಹಿಂದಕ್ಕೆ ಹೋದರೆ ಪುಸ್ತಕಗಳ ಸುತ್ತಮುತ್ತಲು ಸಾಮ್ರಾಜ್ಯಗಳು, ಚಳುವಳಿಗಳು ಹುಟ್ಟಿ ಅವಸಾನವಾಗಿರುವುದು ಕಂಡುಬರುತ್ತವೆ. ಹದಿನಾರನೆಯ ಶತಮಾನದ ವೇಳೆ. ರೆನೆಸಾನ್ಸ್ ಕಾಲ. ಪುಸ್ತಕಗಳು ಎಲ್ಲರಿಗೂ ಎಟುಕುವಂತಿರಲಿಲ್ಲ. ಮುದ್ರಣ ತಂತ್ರಜ್ನಾನದಲ್ಲಿ ಹಲವಾರು ಬೆಳವಣಿಗೆಗಳಾಗುತ್ತ್ತಿದ್ದರು ಆಗಿನ ಪ್ರಮುಖ ಧಾರ್ಮಿಕ ಮತ್ತು ರಾಜಕೀಯ ‘ಸಂಸ್ಥೆ’ ಆಗಿದ್ದ ಚರ್ಚು ಆಧುನಿಕ ವಿಜ್ನಾನ ಹಾಗೂ ವಿಚಾರಧಾರೆಗಳನ್ನು ಒಳಗೊಂಡ ಪುಸ್ತಕಗಳ ಮೇಲೆ ನಿಷೇಧ ಹೇರಿತ್ತು. ಯುರೋಪಿನ ‘ಮುದ್ರಣ ರಾಜಧಾನಿ’ ಎನಿಸಿಕೊಂಡಿದ್ದ, ಸಾವಿರಾರು ಹೊಸ ಪುಸ್ತಕಗಳನ್ನು ಮುದ್ರಿಸುವುದೆ ಅಲ್ಲದೆ ಯುರೋಪಿನ ಎಲ್ಲೆಡೆಯಿಂದ ಆಮದು ಮಾಡಿಕೊಂಡು ಹಂಚುತ್ತಿದ್ದ ಏಕೈಕ ನಗರವಾಗಿದ್ದ ವೆನಿಸ್ ಚರ್ಚಿನ ಕೆಂಗಣ್ಣಿಗೆ ಗುರಿಯಾಗಿತ್ತು. ಮಾರ್ಟಿನ್ ಲೂಥರನ ಪ್ರಟೆಸ್ಟೆಂಟ್ ವಿಚಾರಧಾರೆಯ ಪುಸ್ತಕಗಳಿಂದ ಪ್ರಭಾವಿತರಾಗಿದ್ದ ವೆನಿಸಿನ ಫ್ರಾನ್ಸೆಸ್ಕನ್ ಪಾದ್ರಿ ಬಾಲ್ದೊ ಲುಬೆರ್ತಿನೊ ಹಾಗೂ ಕಾನೂನು ವಿದ್ಯಾರ್ಥಿ ಪಾಂಪೋನಿಯೊ ಅಲ್ಜೀರಿಯೊರನ್ನು ಇಂಕ್ವಿಸಿಶನ್ (ವಿಚಾರಣೆ) ನಡೆಸಿ, ಸುಮಾರು ಹದಿನಾಲ್ಕು ವರುಷಗಳ ಕಾಲ ಕಠಿಣ ಸೆರೆಯಲ್ಲಿಟ್ಟು ಅವರ ವಿಚಾರಗಳನ್ನು ಬದಲಿಸುವ ಯತ್ನ ನಡೆಯಿತು. ಇದು ವಿಫಲವಾದಾಗ ಪಾದ್ರಿ ಲುಬೆರ್ತಿನೊರ ಕಾಲಿಗೆ ಕಲ್ಲುಕಟ್ಟಿ ಸಮುದ್ರಕ್ಕೆ ಎಸೆಯಲಾಯಿತು ಮತ್ತು ಅಲ್ಜೀರಿಯೊನನ್ನು ಕುದಿಯುತ್ತಿದ್ದ ಎಣ್ಣೆ, ಟಾರು ಮತ್ತು ವಿನೆಗರ್ ತುಂಬಿದ್ದ ಹಂಡೆಯಲ್ಲಿ ತಳ್ಳಲಾಯಿತು. ಸುಮಾರು ವರುಷಗಳ ಕಾಲ ಚರ್ಚಿನ ಕಣ್ಣಿಗೆ ಬೀಳದಂತೆ ಗುಟ್ಟಾಗಿ ಪುಸ್ತಕಗಳನ್ನು ಕಳ್ಳಸಾಗಾಣಿಕೆ ಮಾಡಿಸಿ ಮುದ್ರಿಸುತ್ತಿದ್ದ ವೈದ್ಯಕೀಯ ವಿದ್ಯಾರ್ಥಿ ಜೆರೊಲ್ಯಾಮೊ ದನ್ಜೆಲಿನೊನ ವಿಚಾರಣೆಯ ನಂತರ ಆತನ ದೇಹವೂ ಯಾರಿಗೂ ದಕ್ಕಲಿಲ್ಲ. ಇವರನ್ನ್ಲು ಯಾರೂ ನೆನಪಿಡದಿದ್ದರು ಇವರೆಲ್ಲ ತಮ್ಮ ಪುಸ್ತಕಪ್ರೀತಿಗಾಗಿ, ಅವುಗಳು ಹುಟ್ಟಿಸಿದ ನಂಬಿಕೆಗಳಿಗಾಗಿ ಪ್ರಾಣ ತೆತ್ತವರು. ಇವೆಲ್ಲವನ್ನು ತನ್ನ ಕುಂಚದಲ್ಲಿ ಸೆರೆಹಿಡಿಯುವ ಎದೆಗಾರಿಕೆ ತೋರಿಸಿದ ಮಹಾನ್ ಕಲಾಕಾರ ಗೋಯಾನನ್ನು ನೆಪೊಲಿಯನ್ನನ ಅವಸಾನದ ನಂತರದಲ್ಲಿ ಸಾರ್ವಜನಿಕವಾಗಿ ಅವಮಾನಿಸಲಾಯಿತು. ಇವತ್ತು ನಮ್ಮ ಜನರೇಶನ್ನಿಗೆ ಪುಸ್ತಕಗಳೆಂದರೆ ಎಲ್ಲಿಲ್ಲದ ಅವಜ್ನೆ. ಎಲ್ಲ ಕಂಪ್ಯೂಟರಿನ, ಇಂಟರ್ನೆಟಿನ ಇನ್ಸ್ಟಂಟ್ ಮಾಹಿತಿಗೆ ಮೊರೆಹೋಗುವವರೆ. ಸುಮಾರು ಜನರಿಗೆ ಪ್ರತಿಷ್ಟಿತ ಪುಸ್ತಕದಂಗಡಿಗಳ ಟಾಪ್ ಟೆನ್ ಲಿಸ್ಟಿನಲ್ಲಿರುವವು ಮಾತ್ರ ಪುಸ್ತಕಗಳು.. ಇಲ್ಲಿ ಯಾರದೊ ಕಂಡು ಕೇಳಿರದ ಹಳೆಯ ಪುಸ್ತಕವೊಂದನ್ನು, ಅದರ ಮಾರ್ಜಿನಿನ ಯಾರದೊ ಕೈಬರಹದ ಮಸುಕಾದ ಕಮೆಂಟುಗಳನ್ನು ಪ್ರೀತಿಯಿಂದ ನೇವರಿಸುತ್ತ ನಿಂತುಕೊಂಡಿರುವ ನಾನು ಎಂಥ ಹುಚ್ಚಿ, ಅಲ್ಲವೆ?

….ನನ್ನ ಕೈಲಿ ಮೆಕ್ಸಿಕನ್ ಲೇಖಕಿ ಲಾರಾ ಎಸ್ಕ್ವಿರೆಲಳ ‘ಲೈಕ್ ವಾಟರ್ ಫಾರ್ ಚಾಕೊಲೆಟ್’. ಕಿರಣನಿಗೆ ಫೋನು ಮಾಡಿದೆ. ನನ್ನ ಥರವೆ ಪುಸ್ತಕಗಳ ಬಗ್ಗೆ ಪ್ರಾಣ ಬಿಡುವ ಇನ್ನೊಂದು ಪ್ರಾಣಿ. ‘ಯು ವೋಂಟ್ ಬಿಲೀವ್ ವ್ಹಾಟ್ ಐ ಗಾಟ್!!’ ಅಂದೆ. ಚೆಕಾಫ್, ಭಾರತಿ ಮುಖರ್ಜಿ, ಮೈಕೆಲ್ ಒಂದಾತ್ಯೆ, ಆಡೆನ್, ಆಮಿ ಟಾನ್, ಜಾಕ್ ಲಂಡನ್.. ಲಿಸ್ಟು ಹೇಳುತ್ತಲೆ ಆಕಡೆಯಿಂದ ‘ಎಲ್ಲಿ ಮಾರಾಯಿತಿ? ನಾನೂ ಬರ್ತೀನಿ!!’ ಎಂದು ಕೂಗಾಡಲು ಶುರುಮಾಡಿದ. ಸೃಷ್ಟಿಗೆಂದು ಒಂದಿಷ್ಟು ಮಕ್ಕಳ ಪುಸ್ತಕ ಕೊಂಡೆ. ಎತ್ತಿಕೊಂಡು ಹೋಗಲಾರದಷ್ಟು ಭಾರವಾಗಿತ್ತು ಪುಸ್ತಕಗಳ ಚೀಲ. ಇನ್ನು ಇಲ್ಲಿದ್ದರೆ ನನ್ನ ಪರ್ಸು ಖಾಲಿಯಾಗುವುದು ಗ್ಯಾರಂಟಿ ಅಂದುಕೊಂಡು ಕೌಂಟರಿನ ಕಡೆ ಕಾಲು ಹಾಕಿದೆ. ಹೊಟ್ಟೆ ಇದ್ದಕ್ಕಿದ್ದಂತೆ ಚುರುಚುರು ಅನ್ನಲಾರಂಭಿಸಿತು.

ಚಿತ್ರಕೃಪೆ: www.trilogy.brynmawr.edu 
 

Advertisements

10 thoughts on “ಹಳೆಯ ಪರಿಚಿತ ಪರಿಮಳ

 1. “ಇವತ್ತು ನಮ್ಮ ಜನರೇಶನ್ನಿಗೆ ಪುಸ್ತಕಗಳೆಂದರೆ ಎಲ್ಲಿಲ್ಲದ ಅವಜ್ನೆ. ಎಲ್ಲ ಕಂಪ್ಯೂಟರಿನ, ಇಂಟರ್ನೆಟಿನ ಇನ್ಸ್ಟಂಟ್ ಮಾಹಿತಿಗೆ ಮೊರೆಹೋಗುವವರೆ”

  ನೀವು ಮಆನ್ ಬುಕ್ಕು ಪ್ರೇಮಿ ಅಂತ ಒಪ್ಕಳಾಣ. ಆದ್ರೆ ನಮ್ ಐಕ್ಳಿಗೆ ಯಾಕ್ ಬಯ್ಯಾದು? ನಮ್ ಜನರೇಸನ್ನಾಗೆ ಮಆನ್ ಬುಕ್ಕು ಪ್ರೇಮಿಗಳು ತುಂಬಾ ಅವ್ರೆ. ಕಾಸು ಕೊಟ್ಟು ಓದಾ ಏಟ್ ಮಂದಿ ಅವ್ರೆ ಗೊತ್ತಾ? ನಮ್ ಜನರೇಸನ್ ಬಗ್ಗೆ ಜನರಲೈಜು ಮಾಡ್ತೀವ್ರಾ? ಯಾಕೊ ಇದು ನಿಮಗೆ ಸರಿ ಓಗಾವಲ್ದು, ಕಣಕ್ಕೋ.

 2. ಎಲ್ರೀಈಈಈಈ ಅಂಗ್ಡೀಈಈಈಈಈಈ? ನಂಗೆ ಹಳೇ ಪುಸ್ತಕಗ್ಳು ಅಂದ್ರೆ ಪ್ರಾಣ! ಅದ್ರಲ್ಲೂ ಮಾರ್ಜಿನ್ನಲ್ಲಿ ಕಥೆ ಹೇಳೋ ಅಂಥವು ಅಂದ್ರೆ ಕೇಳೋದೇ ಬೇಡ! ಏನೋ ಆ ಪುಟ್ಟ ಪುಟ್ಟ ಸ್ಕ್ರಿಬ್ಲಿಂಗ್ಸ್‌ನಲ್ಲಿ ತೆರೆದುಕೊಳ್ಳೋ ಇನ್ನೊಂದು ಪ್ರಪಂಚ ತುಂಬಾ ಇಷ್ಟ ಆಗುತ್ತೆ… ಇರ್ಲಿ ಬಸ್ವೇಶ್ವರ ನಗರದಲ್ಲಿ ಎಲ್ಲಿ ಅಂಗ್ಡಿ ಮೊದ್ಲು ಹೇಳಿ!

 3. ತಮ್ಮಾ, ಬಾಗ್ವತ್ರೆ,
  ಬೇರೆ ಇಸ್ಯಾ ಆಗಿದ್ರೆ ಬೇರೇನೆ ಮಾತಾಗಿರೋದು.. ಆದ್ರೆ ನಾ ಮಾಡಿರೋ ಜನರಲೈಸೇಸನ್ನಿನಾಗೆ ತೆಪ್ಪೈತೆ ಅಂತ ಅದೇಗೆ ಏಳ್ತೀರ? ಇಂಟರ್ನೆಟು ಬಂದಮ್ಯಾಗೆ ನೀವು ಅದೇಟು ಜನಕ್ಕೆ ಕೂತು ಪೆನ್ನು,ಪೇಪರಿಟ್ಟುಕೊಂಡು ಕಾಜಗ ಬರೆದು ಕಳ್ಸೀರಿ? ಮಾಯ್ತಿ ಬೇಕಾದಾಗೆಲ್ಲ ಏಟು ಸಾರಿ ನಿಮ್ಮೂರ್ ಲೈಬ್ರರಿ ಒಸಿಲು ತುಳಿದೀರಿ? ನಾನೇನೂ ನಾನೇ ಮಹಾ ಬುಸ್ತಕಪ್ರೇಮಿ ಅಂತಂದಿಲ್ಲ ಸೋಮಿ, ನಾನೂ ಇದೆಲ್ಲದ್ಕ ಸಿಕ್ಕಾಕಂಡು ಬಾಳ ಬದ್ಲಾಗೇನಿ. ನಮ್ಮ ಜನರೇಸನ್ನು ಅಂದ್ರೆ ನಾನೂ ನೀವೂ ಎಲ್ಲಾ ಬತ್ತೀವಿ. ಪುಸ್ಕ ತಗಳರಿದಾರೆ ಆದ್ರೆ ಸೇಕಡಾವಾರು ಎಷ್ಟದರೆ ಯೇಚ್ನೆ ಮಾಡಿ. ಅಸ್ಟಕ್ಕೂವೆ ಅಪ್ವಾದ ಇಲ್ಲದ ಜನರಲೈಸೇಸನ್ನು ಇದ್ದೀತ ಯೋಳಪ್ಪ!! ಬಾರಿ ಜಗ್ಳಗಂಟ ತಮ್ಮಾನಪ್ಪ ನೀವು!!

  ಚೇತನಾ,
  ಹಿಹಿಹಿಹಿ…ಸ್ವಾರಿ ಕಣೆಮ.
  ನಿಂಜೊತೆ ಎಲ್ಲ ಪುಸ್ತಕ ಶೇರ್ ಮಾಡ್ತೀನಲ್ಲ!!

  ಶ್ರೀ,
  ಪವಿತ್ರಾ ಪ್ಯಾರಡೈಸ್ ಆಪೋಸಿಟ್ ಒಂದು ರೆಲಯನ್ಸ್ ಫ್ರೆಶ್ ಇದೆಯಲ್ಲ, ಅದೇ ಬಿಲ್ಡಿಂಗಿನ ಬೇಸ್ಮೆಂಟಿನಲ್ಲಿ ಈ ಸೇಲ್ ಹಾಕಿದ್ದಿದ್ದು. ಈ ವಾರದವರೆಗು ಇರತ್ತೆ ಅಂದಿದ್ರು. ನೋಡಿ. 🙂

  -ಟೀನಾ

 4. ನಿಮ್ಮ ಪುಸ್ತಕ ಪ್ರೀತಿಗೆ ಥ್ಯಾಂಕ್ಸ್.

  ಅಂದ ಹಾಗೆ ನಿಮ್ಮಲ್ಲಿರುವ ಆ ಸ್ವಾತಂತ್ರ್ಯ ಪೂರ್ವ ಪುಸ್ತಕವನ್ನೊಮ್ಮೆ ಸ್ಕ್ಯಾನ್ ಮಾಡಿ ಇಲ್ಲಿ ತೋರಿಸುವುದಾದರೆ ನೋಡಿದ ನಾವೂ ಧನ್ಯ! (ಜಾಗೃತೆ, ಮತ್ತೆ ಹಾಗೆ ಮಾಡಹೋಗಿ ಪುಸ್ತಕ ಹರಿದು ಆಮೇಲೆ ನನ್ನ ಬೈಬೇಡಿ).

  ಹ್ಯಾರಿಪಾಟರಿನ ಸಿಡಿ ಮತ್ತು ತದೃಪಿ ಹುಡುಗನಂಥವರು ಆಗಾಗ್ಗೆ ಸಿಗುತ್ತಿರಲಿ.

  -ಜಿತೇಂದ್ರ

 5. ಲೇಖನ ಚೆನ್ನಾಗಿದೆ. ನಿಮ್ಮ ಪುಸ್ತಕ ಪ್ರೀತಿ ಕಂಡು ಖುಷಿಯಾಯಿತು. ನನ್ನಂತೆ ಹಳೆ ಪುಸ್ತಕದಂಗಡಿಗೆ ಹೋಗಿ ಪರ್ಸು ಬರಿದು ಮಾಡಿಕೊಳ್ಳುವಂಥ ಸಮಾನ ಧರ್ಮೀಯರು ನೀವೆಂದು ಡಬಲ್ ಖುಷಿಯಾಯಿತು. ಭಾಗ್ವಾತ್ರಿಗೆ ಕೊಟ್ಟ ಉತ್ತರವಂತೂ ಖಂಡಾಪಟ್ಟೇ ಖುಷಿ ಕೊಡ್ತು.

 6. ಸಮಯ ಮಾಡ್ಕೊಂಡು ಉತ್ತರಿಸ್ತೀನಿ…

  “ಭಾಗ್ವಾತ್ರಿಗೆ ಕೊಟ್ಟ ಉತ್ತರವಂತೂ ಖಂಡಾಪಟ್ಟೇ ಖುಷಿ ಕೊಡ್ತು….”
  ನೋಡಿ ಅಕ್ಕಾವ್ರೆ, ನಮ್ಮಿಂದ ಏಟ್ ಜನಕ್ಕೆ ಕುಸಿ ಅಗ್ತೆತೆ 🙂 ನೀವು ಬರೆಯೋದ್ಕೂ, ನಾವ್ ಕಾಲ್ ಎಳೆಯೋದ್ಕೂ ಸರಿ ಓಯ್ತು 🙂

 7. ಜಿತೇಂದ್ರ,
  ಸ್ಕ್ಯಾನ್ ಮಾಡಲು ಆಗುತ್ತದೆಯೆ ನೋಡುತ್ತೇನೆ. ನೀವು ಹೇಳಿದಹಾಗೆ ಬಹಳ ಎಚ್ಚರ ವಹಿಸಬೇಕು. ಚಿನ್ನದ ಹಾಗೆ ಕಾಪಾಡಿಕೊಂಡು ಬಂದಿದೀನಿ ಕಣ್ರಿ ಅದನ್ನ!!

  ವಿಶಾಲಮತಿಯವರೆ,
  ಇದು ನಿಮ್ಮ ನಿಜವಾದ ಹೆಸರೋ ಅಥವಾ ಬ್ಲಾಗುಲೋಕದ ಅಗಣಿತ ಅಲಿಯಾಸುಗಳಲ್ಲಿ ನೀವೊಬ್ಬರೊ? ಇದೇ ನಿಮ್ಮ ನಿಜವಾದ ಹೆಸರಾಗಿದ್ದರೆ, ಬಹಳ ಚೆನ್ನಾಗಿದೆ. ನಾವು ಬ್ಲಾಗಿಗರಲ್ಲಿ ಸುಮಾರುಜನ ಪುಸ್ತಕಪ್ರೇಮಿಗಳಿದ್ದಾರೆ.(ಓಕೇನಾ ಕಾಲ್ ಪುಲ್ಲರ್ ಕತರ್ನಾಕ್ ಬಾಗ್ವತ್ರೆ? ಯಾಪಿ ನೌ?) ನೋಡಿ, ನಿಮಗೆ ನಾನು ಕೊಟ್ಟ ಉತ್ತರದಿಂದ ನಿಮಗೆ ಮಾತ್ರವಲ್ಲ ಸ್ವತಃ ಭಾಗ್ವತ್ರಿಗೂ ಸಂತಸ ಉಂಟಾಗಿದೆ. ನಿಮಗೆ ಸಂತಸ ಉಂಟುಮಾಡಲು ಕಾರಣಕರ್ತನಾದೆನೆಂದು ಅವ್ರಿಗೆ ಸಂತಸವಾಗಿದೆ. ಅವ್ರಿಗೆ ಸಂತಸವಾಗಲು ನಾವಿಬ್ಬರೂ ಕಾರಣವಾಗಿದ್ದೇವೆಂದು ನಾವಿಬ್ಬರೂ ಸಂತಸಪಡೋಣ. ಒಟ್ನಲ್ಲಿ ಎಲ್ರಿಗೂ ಸಂತಸ!! ಹಿಹಿ.

  ಸಂದೀಪ್,
  ನಿಜ ಕಣ್ರಿ. ಭಾಳ ಚೆನ್ನಾಗಿ ಹೇಳಿದ್ರಿ. ಸಾಧಾರಣವಾಗಿ ಸೆಕೆಂಡ್ ಹ್ಯಾಂಡ್ ಪುಸ್ತಕಗಳಲ್ಲಿ ಪೇಪರ್ ಬ್ಯಾಕ್ ಗಳೆ ಜಾಸ್ತಿ ಇರುವುದರಿಂದ ಹೀಗೆ ಇರಬಹುದು. ಹಾರ್ಡ್ ಬೌಂಡ್ ಪುಸ್ತಕಗಳನ್ನು ಮಾರುವವರು ಕಮ್ಮಿ. 🙂

 8. ಲೇಖನ ಚೆನ್ನಾಗಿದೆ.ಇಲ್ಲಿನ ಲೈಬ್ರರಿಗಳಲ್ಲಿ ಹಳೆ ಪುಸ್ತಕ ಗಳನ್ನು ತಿಂಗಳಿಗೊಂದು ಸಾರಿ ರಾಸಿ ಹಾಕಿ ಮಾರುತ್ತಾರೆ ಚೀಪಾಗಿ ಸಿಗುತ್ತೆಂದು ನಾನು ತಂದೂ ತಂದೂ ತುಂಬಿಕೊಂಡು ಮನೆಯಲ್ಲಿ ಜಾಗವಿಲ್ಲದಂತಾಗಿ ಇನ್ನು ಹಳೆ ಪುಸ್ತಕ ಕೊಳ್ಳಬೇಡ ಮಾರಾಯ್ತಿ ಅಂತ ನನ್ನ ಗಂಡ ಅಂಗಲಾಚಿ ಬೇಡಿಕೊಳ್ಳುತ್ತಿದ್ದಾರೆ!
  ಇರುವುದನ್ನೆಲ್ಲಾ ಓದಿ ಮುಗಿಸುವವರೆಗೆ ಬೇರೆಕೊಳ್ಳೋಲ್ಲ ಅಂತ ಹೇಳುತ್ತಾ ನಾನು ಕೊಳ್ಳುತ್ತಲೇ ಇದೀನಿ
  ಇವನ್ನೆಲ್ಲಾ ಇಂಡಿಯಾಗೆ ಹೇಗೆ ಸಾಗಿಸುವುದೋ ಅಂತ ಯೋಚನೆಯಾಗುತ್ತಿದೆ
  ನನ್ನ ತರ ನೀವೂ ಅಂತ ಖೂಷಿಯಾಯಿತು
  ಹಳೆಪುಸ್ತಕ ಪ್ರೇಮಿಗಳಿಗೆ ಜೈ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s