ಹಿರೋಶಿಮಾ, ನಾಗಾಸಾಕಿ – ಈಗ ನಾವು?

ಅರವತ್ತಮೂರು ವರುಷಗಳ ಹಿಂದೆ, ಸರಿಸುಮಾರು ಇದೇ ವಾರ..

ಜಪಾನೀಯರಿಗೆ ಮನುಷ್ಯನ ಕರಾಳಹಸ್ತ ಹರಿಬಿಟ್ಟ ಕತ್ತಲೆಯ ಅರಿವಾಗಿದ್ದು ಆಗಲೆ.

ಹಿರೋಶಿಮಾದ ಮೇಲೆ ಮೊದಲ ಅಣುಬಾಂಬ್ ‘ಲಿಟ್ಲ್ ಬಾಯ್’ ಅನ್ನು ಅಮೆರಿಕಾದ ಯುದ್ಧವಿಮಾನವೊಂದು 1945ರ ಆಗಸ್ಟ್ 6ರಂದು ಹಾಕಿದಾಗ ಅಕಿರಾ ಒನೋಗಿಗೆ ಹದಿನಾರು ವಯಸ್ಸು. ಸ್ಫೋಟದ ಜಾಗದಿಂದ ಕೇವಲ 1.2 ಕಿಮೀ ದೂರವಿದ್ದ ಆತನ ಮನೆಗೆ ವೇರ್ ಹೌಸೊಂದು ಅಡ್ಡವಿದ್ದುದರಿಂದ ಆತನ ಕುಟುಂಬ ಪಾರಾದರೂ ಕಷ್ಟ ತಪ್ಪಲಿಲ್ಲ.  ಕೇವಲ ಎರಡೇ ದಿನಗಳ ನಂತರ ಆಗಸ್ಟ್ 9ರಂದು ನಾಗಾಸಾಕಿಯಲ್ಲಿ ‘ಫ್ಯಾಟ್ ಮ್ಯಾನ್’ ಹೆಸರಿನ ಇನ್ನೊಂದು ಅಣುಬಾಂಬು ಸ್ಫೋಟವಾಯಿತು. ಲೆಕ್ಕವಿಲ್ಲದಷ್ಟು ಅಮಾಯಕ ಜನ ದಾರುಣವಾಗಿ ಸಾವಿಗೀಡಾದರು. ಅಣುವಿಕಿರಣಕ್ಕೆ ಒಳಗಾಗಿ ಬದುಕುಳಿದ ಅಕಿರಾನಂತಹ ಜಪಾನೀ ನಾಗರೀಕರು ‘ಹಿಬಾಕುಷ’ರೆಂಬ ಹಣೆಪಟ್ಟಿ ಅಂಟಿಸಿಕೊಂಡು ಬಹಿಷ್ಕೃತರಂತೆ ಜೀವನ ಸಾಗಿಸಬೇಕಾಯಿತು. ಆತ ಸಂದರ್ಶನವೊಂದರಲ್ಲಿ ಹೇಳುತ್ತಾನೆ: ’ನಾನು ನೆಲದಲ್ಲಿ ಮಲಗಿಕೊಂಡು ಓದುತ್ತಿದ್ದೆ. ಮೊದಲು ನನಗೆ ಟ್ರೈನಿನ ಚಕ್ರಗಳು ಉಜ್ಜಿ ಉಂಟಾಗುವ ನೀಲಿ ಬೆಳಕು ಕಂಡಿತು. ಆಮೇಲೆ ಹಬೆಯಂತಹ ಅಲೆಯೊಂದು ಬಂದು ನನ್ನನ್ನು ಬಹಳದೂರ ಎತ್ತಿ ಅಪ್ಪಳಿಸಿತು. ಏನೂ ಕಾಣುತ್ತಿರಲಿಲ್ಲ. ಕಣ್ಣಿಗೆ ಮೆತ್ತಿದ್ದ ಮಣ್ಣು ಕಸ ಸರಿಸಿ ಹೊರಬಂದರೆ ಎದುರುಮನೆಯ ಮತ್ಸುಮೊಟೊ ಕುಟುಂಬದ ಯಜಮಾನ ಬೆತ್ತಲೆಯಾಗಿ ನಿಂತಿದ್ದರು. ಅವರ ಮೈಮೇಲಿನ ಬಟ್ಟೆ ಚಿಂದಿಯಾಗಿ ಚರ್ಮವೆಲ್ಲ ಸುಲಿದುಬರುತ್ತಿತ್ತು. ಆಗ ಹುಡುಗಿಯೊಬ್ಬಳು ಓಡಿಬಂದು ತನ್ನ ತಾಯಿಗೆ ಸಹಾಯ ನೀಡಲು ಬೇಡಿಕೊಂಡಳು. ಹೋದರೆ ಆಕೆಯ ತಾಯಿಯ ಮೇಲೆ ದೊಡ್ಡ ದಿಮ್ಮಿಯೊಂದು ಬಿದ್ದು ಆಕೆ ಅರೆಜೀವವಾಗಿದ್ದಳು. ಬೆಂಕಿ ಹರಡಲಾರಂಭಿಸಿದ್ದರಿಂದ ಬೇರೆ ದಾರಿಗಾಣದೆ ಆಕೆಗೆ ನಮ್ಮ ಗೌರವ ಅರ್ಪಿಸಿ ಅಲ್ಲಿಂದ ಹೊರಡಬೇಕಾಯಿತು. ಆಗ ಕಪ್ಪು ಮಳೆ ಸುರಿಯಿತು. ಬೆಂಕಿ ಈ ಮಳೆಗೆ ಆರಲೇ ಇಲ್ಲ! ನದಿಯ ತುಂಬ ಹೆಣಗಳು ತೇಲುತ್ತಿದ್ದವು. ಸೊಂಟದವರೆಗು ಕಾಲೊಂದು ಕತ್ತರಿಸಿಹೋಗಿದ್ದ ಪುಟ್ಟಹುಡುಗನೊಬ್ಬ ಕುಂಟುತ್ತ ಸೇತುವೆ ದಾಟಲು ಪ್ರಯತ್ನ ಮಾಡುತ್ತಿದ್ದ. ಇಂದಿಗು ನಾನು ಟ್ರೈನಿನ ಚಕ್ರದ ಬೆಂಕಿ ಕಂಡರೆ ಬೆದರುತ್ತೇನೆ. ನಾನು ಇಂದಿಗೂ ಕಿಟಕಿಯ ಬಳಿ ಕೂರುವುದಿಲ್ಲ, ಏಕೆಂದರೆ ಅಂದು ನಾನು ಕಂಡ ಬಹಳಷ್ಟು ಹೆಣಗಳಿಗೆ ಅವರ ಮನೆಗಳ ಕಿಟಕಿಬಾಗಿಲುಗಳ ಗಾಜಿನತುಂಡುಗಳು ಚುಚ್ಚಿಕೊಂಡಿದ್ದವು.’

ನಮ್ಮ ಪೀಳಿಗೆಯ ಯುವಜನರು ನಮಗೇ ಕೇಳಿಕೊಳ್ಳಬೇಕಾದ ಹಲವಾರು ಪ್ರಶ್ನೆಗಳಿವೆ. ಮೊದಲನೆಯದು ನಮ್ಮ ಅಳಿಯುತ್ತಿರುವ ಪರಿಸರದ ಬಗ್ಗೆ ನಾವೇನು ಮಾಡುತ್ತಿದ್ದೇವೆ ಎನ್ನುವುದು. ಅದಕ್ಕೆ ಸಂಬಂಧಿಸಿದಂತೆಯೆ ಎರಡನೆಯ ಪ್ರಶ್ನೆಯೆಂದರೆ ನಮಗೆ ಪರಮಾಣು ತಂತ್ರಜ್ನಾನದ ಅವಶ್ಯಕತೆ ಇದೆಯೆ ಎಂಬುದು. ಮೊತ್ತಮೊದಲ ಅಣುಬಾಂಬ್ ತಯಾರಿಸಿದ ಒಪೆನ್ಹೈಮರ್ ಜರ್ಮನಿಯ ಸರ್ವಾಧಿಕಾರಿ ಹಿಟ್ಲರನ ದಬ್ಬಾಳಿಕೆ ತಾಳಲಾಗದೆ ಅಮೆರಿಕಾಗೆ ಓಡಿಬಂದವ. ಇಂತಹ ಅನೇಕ ವಿಜ್ನಾನಿಗಳ ಭಯದ ಪರಿಣಾಮವಾಗಿ ಹುಟ್ಟಿಕೊಂಡ ತಂತ್ರಜ್ನಾನವೊಂದು ಇಂದು ನಮ್ಮ ಮನುಜಕುಲವನ್ನೆ ಸರ್ವನಾಶದ ಅಂಚಿಗೆ ತಂದು ನಿಲ್ಲಿಸಿದೆ. ಇದು ನಮ್ಮೊಳಗಿರುವ ಅಭದ್ರತೆಯ ಭಾವನೆಯ ಫಲವಾಗಿದೆ ಎಂದರೆ ಸುಳ್ಳಲ್ಲ.

ನಮಗೆ ಯುದ್ಧಗಳು ಬೇಕೆ? ಬೀದಿಯಲ್ಲಿ ಹೋಗುತ್ತಿರುವ ಮಗುವನ್ನು ಕೇಳಿದರೂ ಉತ್ತರ ‘ಬೇಡ’ ಎಂದೇ ಆಗಿರುತ್ತದೆ. ಹಾಗೆಂದ ಮೇಲೆ ನಾವು ಮಿಲಿಟರಿ ಬಜೆಟ್ ಎಂದು ಕೋಟಿಗಟ್ಟಲೆ ಹಣ, ಅದರಲ್ಲು ಪರಮಾಣುವಿಜ್ನಾನ ವಿಭಾಗಕ್ಕೆ ಲೆಕ್ಕವಿಲ್ಲದಷ್ಟು ದುಡ್ಡನ್ನು ಏಕೆ ವ್ಯಯ ಮಾಡುತ್ತಿದ್ದೇವೆ? ಯುದ್ಧಗಳೆಂದರೆ ಅಪಾರ ಸಾವುನೋವು, ಆಸ್ತಿಪಾಸ್ತಿ ಹಾನಿಯಷ್ಟೆ ಅಲ್ಲ, ಯುದ್ಧಗಳಿಂದ ಜೀವಸಂಕುಲದ ಮೇಲುಂಟಾಗುವ ದುಷ್ಪರಿಣಾಮಗಳು ಹಲವಾರು ದಶಕಗಳವರೆಗು ಉಳಿದುಕೊಳ್ಳುತ್ತವೆ. ನಮ್ಮ ಇನ್ಸೆಕ್ಯುರಿಟಿಯನ್ನೋ ಕಾರಣವಾಗಿಟ್ಟುಕೊಂಡು ಬರುವ ಪೀಳಿಗೆಗಳನ್ನು ಅಪಾಯಕ್ಕೊಡ್ಡುವ ಹಕ್ಕು ನಮಗೆ ಇದೆಯೆ? ಅಮೆರಿಕಾದ ಜನರು ಇಂದಿಗೂ ತನ್ನ ವಿಯೆಟ್ನಾಂ ಮತ್ತು ಹಿರೋಶಿಮಾ-ನಾಗಸಾಕಿ ಪ್ರಕರಣಗಳ ಹೆಸರೆತ್ತಿದರೆ ನಾಚಿಕೆಯಿಂದ ತಲೆತಗ್ಗಿಸುತ್ತಾರೆ.

ನಮ್ಮ ನಾಗರೀಕತೆ ತಂತ್ರಜ್ನಾನದಲ್ಲಿ ಹಿಂದೆಂದೂ ತಲುಪಿರದ ಉನ್ನತಮಟ್ಟವನ್ನು ಇಂದು ತಲುಪಿದೆ. ಕಳೆದ ಒಂದು ಶತಮಾನದಲ್ಲಿ ಮನುಜಕುಲವು ಸಂಪರ್ಕ ಮಾಧ್ಯಮ, ಯಾನ, ವೈದ್ಯಕೀಯ ಹೀಗೆ ಮುಂತಾಗಿ ಎಲ್ಲ ಕ್ಷೇತ್ರಗಳಲ್ಲಿ ಅಪಾರಸಾಧನೆ ಮಾಡುತ್ತಲೆ ಇನ್ನೊಂದೆಡೆ ಬೆಳವಣಿಗೆಯ ಹೆಸರಿನಲ್ಲಿ ತನ್ನ ಕಾಲ ಮೇಲೆ ಕೊಡಲಿ ಹಾಕಿಕೊಳ್ಳುತ್ತಿದೆ. ಪರಮಾಣು ಅಸ್ತ್ರಗಳ ಬಳಕೆಯ ವಿರುದ್ಧ ಪ್ರತಿಭಟನೆ ಕೇವಲ ‘ಗ್ರೀನ್ ಪೀಸ್’ನಂಥ ಸಂಸ್ಥೆಗಳ ಜವಾಬ್ದಾರಿಯಾಗುಳಿದಿದೆ. ಭಾರತ ಒಂದು ಅಸ್ತ್ರ ಪರೀಕ್ಷಿಸಿದರೆ ಪಾಕಿಸ್ತಾನ ಹಠತೊಟ್ಟು ಎರಡು ಅಸ್ತ್ರ ಪರೀಕ್ಷೆ ಮಾಡುತ್ತದೆ. ಇದಕ್ಕೆ ವ್ಯಯವಾಗುವ ಕೋಟಿಗಟ್ಟಲೆ ಹಣವನ್ನು ಶಿಕ್ಷಣಕ್ಕೊ, ಬಡಜನರ ಏಳಿಗೆಗೊ ಉಪಯೋಗಿಸಿದರೆ? ತಾನು ಅಧಿಕಾರಕ್ಕೆ ಬಂದ ಕೆಲವು ದಿನಗಳ ನಂತರ ಇರಾನಿನ ಅಧ್ಯಕ್ಷ ಮಹಮೂದ್ ಅಹ್ಮದಿನೆಜಾದ್ ನಮ್ಮ ದೇಶದಲ್ಲಿ ಪರಮಾಣು ತಂತ್ರಜ್ನಾನವನ್ನು ಶಾಂತಿಯುತವಾಗಿ ಬಳಕೆ ಮಾಡಲಾಗುವುದು ಎಂದು ಸಾರಿದರು. ಈಗ ಅಮೆರಿಕಾದ ಆರೋಪವೊಂದರ ಪ್ರಕಾರ ಇರಾನಿನ ಬಳಿ ಗೋಪ್ಯವಾಗಿ ತಯಾರಿಸಲಾದ ಪರಮಾಣು ಅಸ್ತ್ರಗಳಿವೆ. ಅಹ್ಮದಿನೆಜಾದ್ ಇದನ್ನು ಅಲ್ಲಗೆಳೆಯುತ್ತ ಇಲ್ಲ. ದೂರದ ಮಾತಿರಲಿ, ನಮ್ಮ ಹತ್ತಿರದ ರಶ್ಯಾದಲ್ಲಿ ಉಂಟಾದ ಚೆರ್ನೊಬಿಲ್ ರಿಯಾಕ್ಟರ್ ದುರಂತವನ್ನು ಮರೆಯಲು ಸಾಧ್ಯವೇ ಇಲ್ಲ.

ಯಾವುದೇ ತಂತ್ರಜ್ನಾನ ಒಳ್ಳೆಯದೆ ಅಥವಾ ಕೆಟ್ಟದೆ ಎಂದು ನಿರ್ಧರಿಸುವುದು ನಮ್ಮ ಕೆಲಸವಲ್ಲ. ಈ ಮೊದಲು ಪರಮಾಣು ವಿಜ್ನಾನವನ್ನು ಸಂಪೂರ್ಣ ವಿರೋಧಿಸುತ್ತಿದ್ದ ಬ್ರಿಟಿಶ್ ಪರಿಸರತಜ್ನ ಜೇಮ್ಸ್ ಲವ್ಲಾಕ್ ಇಂದು ಪರಿಸರವನ್ನು ಉಳಿಸುವಲ್ಲಿ ಪರಮಾಣು ವಿಜ್ನಾನ ಮಾತ್ರ ಪ್ರಮುಖ ಪಾತ್ರ ವಹಿಸಬಲ್ಲದು ಎಂದು ನಂಬುತ್ತಾರೆ. ಅಮೆರಿಕಾ ಒಂದರಲ್ಲೆ 130 ಅಣುವಿದ್ಯುಚ್ಛಕ್ತಿ ಸ್ಥಾವರಗಳು ತಣ್ಣಗೆ ಕಾರ್ಯನಿರ್ವಹಿಸುತ್ತಿವೆ. ಆದರೆ ನ್ಯೂಕ್ಲಿಯರ್ ತಂತ್ರಜ್ನಾನದ ವಿರುದ್ಧ ಇರುವ ಕೆಲವು ಅಂಶಗಳೆಂದರೆ:
1. ಇದು ಅತಿ ದುಬಾರಿಯಾದುದು
2. ಸ್ಥಾವರಗಳ ಸುತ್ತಮುತ್ತ ನೆಲೆಸುವುದು ಜೀವಕ್ಕೆ ಅಪಾಯಕಾರಿ
3. ಅಣುಸ್ಥಾವರಗಳ ತ್ಯಾಜ್ಯ ಸಾವಿರಾರು ವರ್ಷ ಅಳಿಯದು
4. ಅಣುಸ್ಥಾವರಗಳ ಮೇಲೆ ಆತಂಕವಾದಿಗಳ ದಾಳಿ ನಡೆದರೆ ಕಷ್ಟ
5. ಅಣು ಇಂಧನವನ್ನು ಅಣ್ವಸ್ತ್ರ ತಯಾರಿಸಲು ಬಳಸಬಹುದು

ಹೆಸರಾಂತ ‘ಗ್ರೀನ್ ಪೀಸ್’ನ ಪರಿಸರವಾದಿ ಪ್ಯಾಟ್ರಿಕ್ ಮೂರರ ಪ್ರಕಾರ ಪರಮಾಣು ತಂತ್ರಜ್ನಾನವನ್ನು ವಿದ್ಯುತ್ ಉತ್ಪಾದನೆಯಂಥ ಅಭಿವೃದ್ಧಿಯೋಜನೆಗಳಲ್ಲಿ ಮಾತ್ರ ಬಳಸಬೇಕು. ಪರಮಾಣು ಇಂಧನ ವಿಕೃತಮನಸ್ಸಿನ ಆತಂಕವಾದಿಗಳ ಕೈಗೆಟುಕದಂತೆ ಸುರಕ್ಷೆ ಒದಗಿಸುವುದಷ್ಟೇ ಅಲ್ಲ, ದುರ್ಬಳಕೆಯ ವಿರುದ್ಧ ಅಂತರ್ರಾಷ್ಟ್ರೀಯ ಒತ್ತಡವನ್ನು ಹೇರಬೇಕು. ಆಗ ಮಾತ್ರ ನಾವು ನಮ್ಮ ಹಾಗೂ ಮುಂದಿನ ಪೀಳಿಗೆಗಳ ಭವಿಷ್ಯದ ಬಗ್ಗೆ ನಿರಾತಂಕವಾಗಿ ಇರಬಹುದು.

ಚಿತ್ರಕೃಪೆ: www.vesmirweb.net

Advertisements

3 thoughts on “ಹಿರೋಶಿಮಾ, ನಾಗಾಸಾಕಿ – ಈಗ ನಾವು?

 1. ಹೌದಲ್ಲ? ಇವತ್ತು ಮುಂದುವರೆದ ಎಲ್ಲ ರಾಷ್ಟ್ರಗಳೂ ಮತ್ತು ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿರುವಂಥವೂ ಕೂಡ ಪರಮಾಣು ಶಕ್ತ ರಾಷ್ಟ್ರಗಳಾಗಿವೆ. ಕಾರಣ ಕೇಳಿದರೆ ‘ಕೇವಲ ತಂತ್ರಜ್ಞಾನ’ ಎಂದೇ ಹೇಳುವುದಾದರೂ ವಾಸ್ತವ ಅಣ್ವಸ್ತ್ರ ತಯಾರಿಕೆಗಾಗಿಯೇ ಆಗಿರುತ್ತದೆ.
  ಅಶೋಕ ಸಾಮ್ರಾಟನ ಕಥೆಯೊಂದಿದೆ ಗೊತ್ತಾ? ಕಳಿಂಗ ಯುದ್ಧದ ಸಾವು ನೋವಿಂದ ದುಃಖಿತನಾದ ಅಶೋಕ ಅಹಿಂಸೆಯ ದಾರಿ ತುಳಿಯುತ್ತಾನೆ. ಆದರೂ ಅವನ ರಾಜ್ಯದ ಸುತ್ತ ಸೇನೆಯ ಪಹರೆ ಇರುತ್ತದೆ, ಸೈನಿಕರಿರ್ತಾರೆ. ಯಾಕೆಂದು ಕೇಳಿದರೆ, “ಶತೃಗಳು ಒಳನುಗ್ಗಬಾರದಲ್ಲ, ನನ್ನ ಜನರಿಗೂ ಹಿಂಸೆಯಾಗಬಾರದಲ್ಲ, ಅದಕ್ಕೆ’ ಅನ್ನುತ್ತಾನೆ.
  ಈ ನಿಟ್ಟಿನಲ್ಲಿ ನೋಡಿದರೆ ಭಾರತದಂತಹ ಶಾಂತ ಮನೋಭಾವದ ರಾಷ್ಟ್ರ (ಈವರೆಗಿನ ಇತಿಹಾಸದಲ್ಲಿ ನಾವಾಗಿಯೇ ಯಾರ ಮೇಲೂ ಎರಗಿದ ಪುರಾವೆಯಿಲ್ಲ) ಅಣ್ವಸ್ತ್ರ ಶಕ್ತವಾಗುವುದು ತಪ್ಪೇನಿಲ್ಲ. ಇರಾಕಿನ ಹೆಣೆ ಬರಹ ಕಂಡ ಇರಾನ್ ಕೂಡ ಅಣ್ವಸ್ತ್ರ ಇಟ್ಟುಕೊಳ್ಳುವುದರಲ್ಲಿ ತಪ್ಪಿಲ್ಲ.
  ಹಣ ಮದದಿಂದ ಮೆರೆಯುತ್ತಿರುವ ಅಮೆರಿಕಾವನ್ನು ಸದ್ಯಕ್ಕೆ ಸುಮ್ಮನಿರಿಸಲು ಇರುವ ಉಪಾಯ ಇದೊಂದೇ ಅನಿಸುತ್ತದೆ. ಆ ದೇಶದ ಬಳಿ ಹೇಗಿದ್ದರೂ ಇದೆ. ಮಿಕ್ಕೆಲ್ಲ ರಾಷ್ಟ್ರಗಳೂ ಅದಕ್ಕೆ ಸವಾಲೊಡ್ಡುವಷ್ಟು ಪ್ರಬಲವಾಗಿಬಿಟ್ಟರೆ ಅದು ಮನ್ ಮಾನಿ ಮಾಡುವುದು ಬಿಟ್ಟು ನಯವಂಚಕ ಹಾದಿ ತನ್ನದಾಗಿಸ್ಕೊಳ್ಳುತ್ತದೆ.
  ಉದಾಹರಣೆಗೆ, ನಮ್ಮ ಬುದ್ಧಿವಂತಿಕೆ, ತಾಖತ್ತು ನೋಡಿಯೇ, ಅದಕ್ಕೊಂದು ಅಂಕುಶ ಹಾಕಲೆಂದೇ ಅದು ‘ಅಣು ಒಪ್ಪಂದ’ವನ್ನು ಮುಂದಿಟ್ಟಿರುವುದು!

  ನಿಜ. ದಾರಿಯಲ್ಲಿ ಹೋಗುವ ಯಾವ ನಾಗರಿಕನಿಗೂ ಯುದ್ಧ ಬೇಡ. ನೀನು ಹೇಳಿದ ಹಾಗೆ ಅವರ್ಯಾರಿಗೂ ಯಾವ ಕಾಳಜಿಗಳೂ ಬೇಡ. ನಮಗೇನು? ಇಪ್ಪತ್ನಾಲ್ಕು ಗಂಟೆ ಕರೆಂಟು, ನೀರು, ಅಗ್ಗದ ಬೆಲೆಗೆ ಸಾಮಾನು-ಸರಂಜಾಮು ಸಿಗುತ್ತಿದ್ದರಾಯ್ತು. ನಾವೊಬ್ಬ ಜವಾಬ್ದಾರಿಯುತ ಪ್ರಜೆಗಳಾಗಲು, ದೇಶ ಕಟ್ಟುವತ್ತ ಕರ್ಯೋನ್ಮುಖರಾಗಲು ನಮ್ಮ ಮೇಲೂ ಜಪಾನಿನ ಮೇಲೆ ಬಿದ್ದ ಹಾಗೆರಡು ಬಾಂಬುಗಳು ಬೀಳಬೇಕೇನೋ!?

  ಅದೇನೇ ಇರಲಿ. ನಿಜಕ್ಕೂ ಇದೊಂದು ಸಕಾಲಿಕ, ಉತ್ತಮ ಬರಹ.
  (ನೀನಂತೂ ಈಗ ಜವಾಬ್ದಾರಿಯುತ ಪ್ರಜೆಯಾಗಿಬಿಟ್ಟೆ!! 🙂 )

  ~ ಚೇತನಾ

 2. ಚೇತೂ,

  ಒಳ್ಳೆಯ ಅಬ್ಸರ್ವೇಶನ್ನುಗಳು.

  (ನೀನಂತೂ ಈಗ ಜವಾಬ್ದಾರಿಯುತ ಪ್ರಜೆಯಾಗಿಬಿಟ್ಟೆ!! )
  I will take it as a complement.
  By the way, ಈ ಬರಹವನ್ನ ಪರಮಾಣು ನೀತಿಯ ಗಲಾಟೆ ಜೋರಾಗಿ ಶುರುವಾದಾಗ, ಅಂದರೆ ಸುಮಾರು ಒಂದು ವರುಷ ಹಿಂದೆ ಇದೇ ಸಮಯಕ್ಕೆ ಬರೆದದ್ದು!! ಸಂಜ್ಯೋತಿ ಜನವರಿಯಲ್ಲಿ ಸಿಕ್ಕಿದ್ದಾಗ ಹೇಳಿದ್ದಳು, ನೆನಪಿದೆಯಾ? ಅವೇ ಬರಹಗಳಲ್ಲೊಂದು ಇದು. ಆದರೆ ಇದು ಇವತ್ತಿಗೂ ರೆಲೆವೆಂಟ್ ಅನ್ನಿಸುತ್ತಿರೋದು ನನ್ನ ಲೇಖನಿಗೆ ಬಡಿದುಕೊಂಡ ದರಿದ್ರವೋ ಅಥವಾ ನಮ್ಮ ಕರ್ಮವೋ ಅರ್ಥವಾಗುತ್ತಿಲ್ಲ ಮಾರಾಯಿತಿ!!

 3. ಭಾರತ ಸಾವಿರಾರು ವರ್ಷಗಳಿಂದ ಆಕ್ರಮಣವನ್ನು ಎದುರಿಸುತ್ತಾ ಇದೆ, ಹಾಗೂ ಸೋಲುತ್ತಾ ಇದೆ. ಇದಕ್ಕೆ ಕಾರಣವೇನು? ಭಾರತೀಯರಲ್ಲಿ ಶೌರ್ಯ ಹಾಗು ಬಲಿದಾನಗಳ ಕೊರತೆ ಇರಲಿಲ್ಲ. ಕೊರತೆ ಇದ್ದದ್ದು modern weaponryದು. ಈ ಇತಿಹಾಸವನ್ನುಆರ್ಥೈಸಿಕೊಂಡಿದ್ದರಿಂದಲೇ, ನಮ್ಮ ಮೊದಲ ಪ್ರಧಾನಿ ನೆಹರೂ ಅಣು ತಂತ್ರಜ್ಞಾನವನ್ನು ಭಾರತಕ್ಕೆ ತಂದರು. ಶಾಂತಿಯುತ ಪರಮಾಣು ಚೈತನ್ಯ ಎನ್ನುವ ನೆವದಲ್ಲಿ, ಗುಟ್ಟಾಗಿ ಅಣುಶಸ್ತ್ರಗಳ ಉತ್ಪಾದನೆಗೆ ತಳಪಾಯ ಹಾಕಿದರು.

  ಟೀನಾ, we are living in a dangerous place. With arms or without, ಶಕ್ತ ರಾಷ್ಟ್ರಗಳು ಅಶಕ್ತ ರಾಷ್ಟ್ರಗಳನ್ನು exploit ಮಾಡುತ್ತಲೇ ಇವೆ.

  ಚೀನಾ ದೇಶಕ್ಕೆ ಈಗ international ಗೌರವ ಯಾಕಿದೆ? ಭಾರತಕ್ಕೆ ಯಾಕಿಲ್ಲ? ನಾವು ನಮ್ಮಲ್ಲೇ ಇರುವ ಭಯೋತ್ಪಾದಕರನ್ನು ಕೂಡ ಏನೂ ಮಾಡಲಾರೆವು! ಅಣು ಬಾಂಬ್ ಬಗ್ಗೆ ಇಷ್ಟು ದೊಡ್ಡದಾಗಿ ಮಾತಾಡುವ ಜಪಾನ ಯಾತಕ್ಕೆ ಅಮೇರಿಕದ ಬೂಟು ನೆಕ್ಕುತ್ತಿದೆ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s