ಪಡಖಾನೆಯ ಹುಡುಗಿ – ಬೆನ್ನ ತಿರುಗಿಸುವ ಪಯಣಕೆ ಮುನ್ನ

ಮತ್ತೊಮ್ಮೆ ಸಿಲುಕಿಕೊಂಡಿರುವೆ
ಹಳೆಯ ಮೋಹವೊಂದರ ತೆಕ್ಕೆಯಲಿ..
ಹಾಡುಗಳ ಹುಡುಕಿಕೊಂಡು ಹೊರಟಿರುವೆ
ಅರಿಯದ ಜಾಡುಗಳೆಡೆಯಲ್ಲಿ
ಕೆರೆದಂಡೆಯ ಮುರುಕುಮಂಟಪ
ಕುಣಿವಭಂಗಿಯ ಕಲ್ಲದೇವತೆಗಳು
ನಡುನೀರ ಬೆತ್ತಲುಗಪ್ಪು ಮರಗಳು
ಹಾದಿಬದಿ ಗುಲ್ಮೊಹರ್ ಹೂವು
ಎಲ್ಲದಕು ಕಣ್ಣರಳಿಸಿ ನಿಂತ ನಾವು
ಮೊದಲ ಬಾರಿಗೆಂಬಂತೆ ಕಣ್ಣು ತಪ್ಪಿಸುತ್ತ
ಮಾತುಮಾತಿಗೂ ಬೆವೆತು
ಬಾಯಾರಿ ತಹತಹಿಸುತ್ತ
ನಮ್ಮೊಳಗಿನ ಹಾಡುಗಳ
ಒರಟುತನ ಹುಡುಕುತ್ತ ಕಾಯುತ್ತ
ನಮ್ಮ ಸೆಡವುಗಳಿಗೆ ಹೊಸದೊಂದು
ಹೆಸರಿಡಲು ಯತ್ನಿಸುತ್ತ..
..ಹೀಗೆ ಸಿಲುಕಿಕೊಂಡಿರುವೆ
ಹಳೆಯ ಮೋಹವೊಂದರ ತೆಕ್ಕೆಯಲಿ..

ನಿನ್ನ ಒರಟು ಬೆರಳುಗಳು
ಕಿಕ್ಕಿರಿದ ಬೀದಿಗಳ ನೆವಮಾಡಿ
ನನ್ನ ಕೊರಳ ನೇವರಿಸುವಾಗ
ಈ ಹಾದಿ ಮುಗಿವುದ
ನೆನೆಸಿ ವಿಹ್ವಲಳಾಗುವೆ
ಈ ಉತ್ಕಟ ಘಳಿಗೆಗಳು, ಮಾತುಗಳು..
ನಿನ್ನುಸಿರ ಏರಿಳಿತ..
ಸುಡದೆ ಒಳಗಿಳಿಯದ ಬಟ್ಟಲು..
ಮೋಡ ಮುಸುಕಿದ ಒದ್ದೆ ಸಂಜೆ..
ಗಡಿಯಾರದೊಡನೆ ನನ್ನ ಗುದ್ದಾಟ..
ಬೆನ್ನ ತಿರುಗಿಸುವ ಪಯಣಕೆ ಮುನ್ನ
ದಯಮಾಡಿ ಹೇಳು ಇವನೆ,
ಆ ಕೊನೆಯಿರದ ಬೇಸರಗಳ ನಗರಿಗೆ
ಆ ಬಯಕೆ ತೀರದ ಬದುಕಿಗೆ
ನಾವು ತಿರುಗಿ ಹೋಗಲೆಬೇಕೆ?

 

 ಚಿತ್ರ: ನಾನೇ ಬರ್ದದ್ದು!! (ಕಾಪಿರೈಟ್ ನನ್ನದು.)

Advertisements

21 thoughts on “ಪಡಖಾನೆಯ ಹುಡುಗಿ – ಬೆನ್ನ ತಿರುಗಿಸುವ ಪಯಣಕೆ ಮುನ್ನ

 1. ಚಿತ್ರ: ನಾನೇ ಬರ್ದದ್ದು!!
  ಗೊತ್ತಾಗುತ್ತೆ ಬಿಡಿ. ಬರೆಯೋ ಅಗತ್ಯ ಇರ್ಲಿಲ್ಲ.:-)

  ಸುಮ್ನೆ ಕಾಲೆಳೆದೆ. ಕೋಪಗೊಳ್ಳುವುದನ್ನು ನಿಷೇಧಿಸಲಾಗಿದೆ. ನಿಮ್ ಬರಹಕ್ಕೆ ನೀವೆ ಚಿತ್ರ ಬರೀರಿ ಇನ್ಮೇಲೆ. ಚೆನ್ನಾಗಿರತ್ತೆ.

 2. My days among the Dead are past;
  Around me I behold,
  Where’er these casual eyes are cast,
  The mighty minds of old;
  My never-failing friends are they,
  With whom I converse day by day.
  ಇದಕೂ ಅದಕೂ ಸಂಬಂಧವಿಲ್ಲ. ಯಾಕೋ ನೆನಪಾಯಿತು.
  ಪದ್ಯ ಸೂಪರ್ರು. ನಾವೂ ಪಡಖಾನೆಯವರು.

 3. ಆ ಕೊನೆಯಿರದ ಬೇಸರಗಳ ನಗರಿಗೆ
  ಆ ಬಯಕೆ ತೀರದ ಬದುಕಿಗೆ
  ನಾವು ತಿರುಗಿ ಹೋಗಲೆಬೇಕೆ?

  ಟೀನಾ,

  ಗೊತ್ತಿರುವ ಉತ್ತರಕ್ಕೆ ಮತ್ತೊಮ್ಮೆ ಪ್ರಶ್ನಿಸುವ ‘ಹುಚ್ಚು’ ಮನಸ್ಸು. . .
  nice poem

 4. ಎರಡೇರಡು ಸಲ ಓದಿದೆ. ಈ ಕವಿತೆ ಅದ್ಯಾಕೆ ಇಷ್ಟವಾಯಿತು ಅಂತ ಮಾತ್ರ ಗೊತ್ತಿಲ್ಲ . ಪದ ಕಟ್ಟುವ ಕ್ರಿಯೆ ಚೆನ್ನಾಗಿದೆ. ಚಿತ್ರ ಬಿಡಿಸುವ ನಿಮ್ಮ ಸಾಹಸಪೂರ್ವಕ ಪ್ರಯತ್ನಕ್ಕೆ ಶುಭವಾಗಲಿ!..
  -ಜಿತೇಂದ್ರ

 5. ಪದ್ಯ ಚೆನ್ನಾಗಿದೆ. ಆದರೆ ಇನ್ನೊಂದಿಷ್ಟು work ಮಾಡಿದ್ದರೆ ಚೆನ್ನಾಗಿರ್ತಿತ್ತೇನೋ. explain ಮಾಡೋಕೆ ಇಮೇಜ್ ಗಳ ಕೊರತೆ ಎಲ್ಲಿ ಆಗಿಬಿಡುತ್ತದೆಯೋ ಅಂತ ಒಂದೇ ಉಸಿರಿನಲ್ಲಿ ಎಲ್ಲ ಹೇಳಿದಂತಿದೆ.

  ಖುಷಿಯಾದ ವಿಚಾರವೆಂದರೆ ಒಂದು ವಯಸ್ಸಿನ ನಂತರ ಮೋಹವೇನಿದ್ದರು ಅದು “ಹಳೆಯದೇ” ಎನ್ನುವ ನನ್ನ ನಂಬಿಕೆಗೆ ಇನ್ನೊಂದು ಪುರಾವೆ ಸಿಕ್ಕಿತು.

  – ಕಿರಣ್

 6. ಟೀನಾರೇ,
  ಮುರಳಿ ಕರೆದ ದಾರಿ ಹಿಡಿದು ಹೋಗಿ ವಾಪಸು ಬಂದಾಗ ಆವರಿಸಿಕೊಳ್ಳುವ ಶೂನ್ಯತೆ ಈ ಪದ್ಯ ಹುಟ್ಟಿಸಿತು. ಒಳ್ಳೆಯ ಪದ್ಯ. ಧನ್ಯವಾದ
  ನಾವಡ

 7. ಪ್ರೀತಿಯ ಟೀನಾ,

  ಕವಿತೆ ಸಿಕ್ಕಾಪಟ್ಟೆ ಹಿಡಿಸಿತು.(ಎಂದಿನಂತೆ).
  ಒಂದೊಂದು ಸಾಲೂ ನಶೆ ಹುಟ್ಟಿಸುವಂತೆ,
  ಬೇಡ ದೂರ ಹೋಗು ಎಂದು ತಳ್ಳಬೇಕಿನ್ನಿಸುವ ಮೋಹವನ್ನೆ
  ಮತ್ತೆ ಮತ್ತೆ ಗುಟುಕರಿಸುವಂತೆ
  ಹನಿಸುತ್ತಿರುವುದಕ್ಕೆ
  ನನ್ನ ಅಮಲುಗಣ್ಣಿನ ಸಲಾಮು ಹೇಳಲೆ ಸಾಕಿ..?

  ಪ್ರೀತಿಯಿಂದ
  ಸಿಂಧು

 8. ಶ್ರೀನಿಧಿ,
  ಡೊಡ್ಡ ಮಾತು ಹೇಳಿದೀರಿ. ನಾನು ಅರ್ಹಳೋ ಅಲ್ಲವೊ ನನಗೆ ತಿಳಿಯದು. ಧನ್ಯವಾದ.
  ಭಾಗ್ವತ್ರೆ,
  ನಿಮ್ಮ ಸೌ ಖೂನ್ ಮಾಫ್. I know you do it in good humour!! ಪ್ರಯತ್ನಿಸ್ತೇನೆ.
  ಚೇತೂ,
  ’ನಿಂಗೂ ಈ ಚಟ ಇದ್ಯಾ?’ ಅಂತ ಕೇಳಿದೀ. ಹಾಗಂದ್ರೆ ನಿಂಗೂ ಈ ಚಟ ಇದೆ ಅಂತಾಯ್ತು!! ಎಲ್ಲಿ ಸ್ಯಾಂಪಲ್ ತೋರಿಸು ಮಾರಾಯಿತಿ?
  ವಿಕಾಸ,
  ಹೂಂನಪ್ಪ ಕಂಪ್ಯೂಟರಿನಲ್ಲೆ ಬರೆದದ್ದು.
  ಜೋಗಿಯವ್ರೆ,
  ನೀವೂ ಪಡಖಾನೆಯವರು ಅಂತ ನಂಗೊತ್ತು!! ಆಮೇಲೆ ತಮಾಶಿ ಅಂದ್ರೆ ನೀವು ಕೋಟ್ ಮಾಡಿರುವ ಕವಿತೆ ನಾನು ಓದಿದ ಮೊಟ್ಟಮೊದಲ ಆಂಗ್ಲ ಕವಿತೆ. ಸೋಜಿಗ ಅನ್ನಿಸ್ತು ನಂಗೆ!!
  ಶ್ರೀದೇವಿ, ಸುಶ್ರುತ, ಜಿತೇಂದ್ರ, ಮನಸ್ವಿನಿ, ಶ್ರೀ, ವಿನಾಯಕ,
  ನಿಮ್ಮ ಅಕ್ಕರೆಯ ಪ್ರತಿಕ್ರಿಯೆಗಳಿಗೆ ಧನ್ಯವಾದಗಳು. ಹೆಚ್ಚಿಗೆ ಬರೆಯಲಿಕ್ಕೆ ನಿಮ್ಮ ಪದಗಳೆ ಪ್ರೇರಣೆಯಾಗುತ್ತಿರುತ್ತವೆ.
  ಕಿರಣ,
  ಇಲ್ಲಿ ಯಾವ ಎಕ್ಸ್ ಪ್ಲೆನೇಶನ್ನು ಕೊಡೋಕೆ ನನ್ನ ಹುಡುಗಿ ಕಾನ್ಶಿಯಸ್ಸಾಗಿ ಯತ್ನಿಸಿಲ್ಲ.
  ಇದು ಒಂದು ಅನುಭವ..ನಡೆದ ಹಾಗೆ ಹೇಳಿರುವುದು. ಇಲ್ಲಿ ಇಮೇಜರಿಗಳು ಸಿಕ್ಕಾಬಟ್ಟೆ ತುಂಬಿಕೊಂಡಿದ್ದರೆ ನನ್ನ ಹುಡುಗಿ ನೋಡುವ ದೃಷ್ಟಿಯಲ್ಲೆ extravagance ಇರಬೇಕು. ಹೇಳ್ತೀನಿ ತಡಿ ಅವಳಿಗೆ. ಆಮೇಲೆ ನೀನೇನು ನನ್ ಸುತ್ಮುತ್ತ ಇದೀಯ ಮೊದಲಿನ ಹಾಗೆ, ನನ್ ಎಡಿಟರಾಗಿರೋದಕ್ಕೆ?
  ನಿನಗೆ ಮೋಹ ಹಳೆಯದೆ ಅನ್ನೋದಕ್ಕೆ ಪುರಾವೆ ಸಿಕ್ಕಿತಾ? 😉 ಕೊರಮ, ನಿನ್ನ ಹಳೆಯ ಕವಿತೆಗಳನ್ನ ಧೂಳು ಜಾಡಿಸಿ ಕೊಡು. ಅವೂ ಇದನ್ನೆ ಹೇಳ್ತವೆ.
  ನೀನು ಸಮಯ ಮಾಡಿಕೊಂಡು ಬರೆದೆ ನೋಡು, ಅದೆ ಖುಶಿ.
  ಶ್ಯಾಮಾ,
  ನಿಮ್ಮ ಪ್ರೀತಿಗೆ ತಲೆಬಾಗುತ್ತೇನೆ.
  ಸುಧನ್ವ
  ಬಹಳ ದಿನದ ನಂತರ!! ಸಂತಸವಾಯಿತು.
  ಚಂದಿನ,
  ನಿಮ್ಮ ಮಾತುಗಳೆ ಹೊಸ ಕವಿತೆಯೊಂದರ ಆರಂಭದಂತಿವೆ!!
  ನಾವಡರೆ,
  ನಿಮಗಿಷ್ಟವಾಯಿತಲ್ಲ!!
  ಸುಧೇಶ್,
  ಇಲ್ಲಿ ನನ್ನ ಬ್ಲಾಗಿನಲ್ಲಿ ನೀವು ಸಾವಿರ ಸಾರಿ ಕಮೆಂಟಿಸಿದರೂ ನನಗೆ cliche ಅನ್ನಿಸುವುದಿಲ್ಲ. ನಿಮಗಿಷ್ಟವಾಯಿತೊ, ಇಲ್ಲವೊ ಅದನ್ನಿಲ್ಲಿ ಕೇಳೋದಕ್ಕೆ ತಾನೆ ನಾನು ಬರೆಯೋದು?
  ಸಿಂಧು,
  ನಿಮ್ಮ ಮಾತುಗಳೆ ಸಿಹಿ ಸಕ್ಕರೆಯ ಹಾಗಿರುತ್ತವೆ.
  ಮತ್ತೆ ಓದಿ ಸವಿಯಬೇಕು ಅನ್ನಿಸುತ್ತೆ.
  ನಿಮ್ಮ ಸಲಾಮಿಗೆ ನನ್ನ ಪ್ರತಿಸಲಾಮು!!
  ಪರಿಸರಪ್ರೇಮಿ,
  ನಿಮ್ಮ ಕಮೆಂಟುಗಳನ್ನ ಓದುತ್ತ ಇರುತ್ತೇನೆ. ನಿಮಗೆ ಎಲ್ಲವು ಸುಲಭವಾಗಿ ಇಷ್ಟವಾಗದು ಅಂತ ನನ್ನ ತಿಳುವಳಿಕೆ.ಹಾಗಾಗಿ ನಿಮ್ಮ ಮೆಚ್ಚುಗೆ ಇನ್ನೂ ಆಪ್ತ!!

  ಆತ್ಮೀಯತೆಯೊಂದಿಗೆ,
  ಟೀನಾ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s