ಮಳೆ ಬಂತು ಗಿಳಿ ಪೋ ಪೋ ಪೋ..

 

picture-poem courtesy: www.theprophyria.blogspot.com

ಹೊರಗೆ ಮಳೆ ಸುರಿಯುತ್ತಿರೋವಾಗ ಸುಡುಸುಡು ಕಾಫಿ ಹೀರುತ್ತ ಕಿಟಕಿ ಬದಿಯಲ್ಲಿ ಕುಳಿತುಕೊಂಡು ಮಳೆಹನಿಗಳು ನೆಲಕ್ಕೆ ಬೀಳೋದನ್ನೇ ದಿಟ್ಟಿಸಿಕೊಂಡು ಕೂತಿರುತ್ತಿದ್ದೆ. ಅಮ್ಮ ಅದೇನು ತಂದ್ರಾವಸ್ಥೆಯಲ್ಲಿ ಅಲುಗಾಡದೆ ಕೂತ್ಕೊಂಡಿರ್ತೀಯೋ ಕಾಣೆ!! ಎಂದು ಗೊಣಗುವುದೂ ಕೇಳುತ್ತ ಇರಲಿಲ್ಲ. ಜೀರುಂಡೆಗಳ ಜಿರಿಜಿರಿ ಸದ್ದು, ಮನೆಯ ಉಣಗಲ್ಲಿನ ಮುಂದೆ ಇದ್ದ ಮಳೆನೀರಿನ ಚರಂಡಿಯಲ್ಲಿ ಹರಿಯುವ ನೀರಿನ ಬುಳುಬುಳು, ತೆಂಗಿನಗರಿಗಳ ಮೇಲೆ ಬೀಳುವ ಮಳೆಹನಿಗಳ ಟಪಟಪ ಗಲಾಟೆ, ಮಿಂಚು-ಗುಡುಗುಗಳ ‘ನೀನಾದಮೇಲೆ ನಾನು’ ಜಗಳ, ದೂರದಲ್ಲೆಲ್ಲೋ ಮನೆಯೊಂದರ ಚಿಮಣಿಯಿಂದ ಸುರುಳಿಯಾಗೇಳುವ ಹೊಗೆ, ಅಡಿಗೆಮನೆಯಿಂದ ತೇಲಿಬರುವ ಸಾರಿನ ಒಗ್ಗರಣೆಯ ಘಮಲು…ಎಲ್ಲವೂ ಸೇರಿಕೊಂಡು ನನ್ನನ್ನ ಒಂದುರೀತಿಯ ವಿಚಿತ್ರ ಅಸಹಾಯಕ ಸ್ಥಿತಿಗೆ ತಳ್ಳುತ್ತಿದ್ದವು. ಆ ಸ್ಥಿತಿಯಲ್ಲಿ ಸುಮ್ಮನೆ ಹೊರಗೆ ದಿಟ್ಟಿಸಿಕೊಂಡು ಕುಳಿತುಕೊಳ್ಳುವುದಲ್ಲದೆ ಇನ್ನೇನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ.
ಅಮ್ಮ ಫೋನು ಮಾಡಿದಾಗ ’ಈಗೆಲ್ಲ ಮೊದಲಿನ ಹಾಗೆ ಮಳೆ ಇಲ್ಲ ಕಣೆ’ ಅನ್ನುತ್ತಾರೆ. ಮಲೆನಾಡಿನಲ್ಲಿ ಹೆಚ್ಚೂಕಡಮೆ ವರ್ಷದ ಆರೇಳು ತಿಂಗಳೂ ಮಳೆ ಸುರಿಯುವುದನ್ನೆ ನೋಡುತ್ತ ಕಳೆಯುತ್ತಿದ್ದ ನನಗೆ ಹಳಹಳಿ. ಮಳೆ ಅಂದರೆ… ನಮ್ಮ ಪಾಲಿಗೆ ರೈನ್ ಕೋಟು, ರೈನ್ ಬೂಟು ತೊಟ್ಟು, ಪುಟ್ಟ ಕೊಡೆ ಹಿಡಿದು ಸ್ಲೇಟಿನಲ್ಲಿ ಬರೆದಿದ್ದ ಮನೆಪಾಠ ಅಳಿಸಿಹೋಗದಂತೆ ಎಚ್ಚರವಹಿಸುತ್ತ ಶಾಲೆಗೆ ಹೋಗುವುದು. ಸ್ಲೇಟು ಅಳಿಸಲು ದಾರಿಬದಿಯಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಕಾಂಡ ಚಿವುಟಿದರೆ ನೀರು ಒಸರುವ ‘ನೀರುಗಿಡ’ಗಳನ್ನು ಕಿತ್ತು ಚಿನ್ನದಷ್ಟು ಜೋಪಾನವಾಗಿಟ್ಟುಕೊಳ್ಳುವುದು. ನಮ್ಮ ಮುಂದೆ ನಡೆದುಹೋಗುವ ಗೆಳತಿಯರ ಯೂನಿಫಾರಂ ಲಂಗಗಳಿಗೆ ಕೆಸರು ಸಿಡಿಸಿ ಕೂಗಾಡುವುದು. ಶಾಲೆ ಬಿಡುವ ವೇಳೆಗೆ ಸರಿಯಾಗಿ ಹೇಳಿಕಳಿಸಿದಂತೆ ಬಂದು ಸುರಿಯುವ ಮಳೆಯನ್ನು ಶಪಿಸುತ್ತ ಇಷ್ಟವಿರದಿದ್ದರೂ ವಿಧಿಯಿಲ್ಲದೆ ರೈನ್ ಕೋಟು, ಬೂಟು ಹಾಕಿಕೊಂಡು ಜಾರಿಬೀಳದ ಹಾಗೆ ಮೆಲ್ಲನೆ ನಡೆಯುವುದು. ಆಗೀಗ ನಮ್ಮ ಅದೃಷ್ಟಕ್ಕೆ ದೊಡ್ಡ ಮಳೆ ಬಂದ ಕೂಡಲೆ ಸ್ಕೂಲಿನಲ್ಲಿ ‘ಮಳೆರಜ’ ಘೋಷಿಸಲಾಗುತ್ತಿತ್ತು. ಆಗಂತೂ ನಮ್ಮ ಸಂತೋಷಕ್ಕೆ ಸೀಮೆಯೇ ಇಲ್ಲ!!! ’ಹೋಓಓಓಓಓಓ’ ಎಂದು ಗಂಟಲು ಹರಿಯುವಂತೆ ಕೂಗುತ್ತ ದೊಡ್ಡಮೈದಾನದ ಕಡೆ ಓಟ. ಮಳೆ ಬಂದಾಗೆಲ್ಲ ಕೆರೆಯಂತೆ ಕೆಂಪುನೀರು ತುಂಬಿಸಿಕೊಳ್ಳುವ ಊರ ಮೈದಾನ ನಮಗೆ ದೊಡ್ಡ ಸಮುದ್ರದಂತೆ ಕಾಣುತ್ತಿತ್ತು. ಊರಮಧ್ಯ ಹರಿಯುವ ಭದ್ರಾನದಿಯಲ್ಲಿ ನೆರೆ ಬಂದರೆ ಕೇಳುವುದೇ ಬೇಡ! ಅಪ್ಪನ ಕೈಹಿಡಿದುಕೊಂಡು ಸೇತುವೆಗೆ ಹೋಗಿ ಭದ್ರೆಯ ರೌದ್ರಾವತಾರವನ್ನ ನೋಡಿಬರುವುದೇ ಒಂದು ದೊಡ್ಡ ಸಾಹಸಯಾನ.
ಮನೆಯೊಳಗೆ ನುಗ್ಗಿದರೆ ಕೆಸರುತುಂಬಿದ ಕೈಕಾಲುಮುಖಾದಿಗಳನ್ನು ಸೋಪು, ಪ್ಲಾಸ್ಟಿಕ್ ಗುಂಜು ಹಾಕಿ ಉಜ್ಜಿ ತೊಳೆದು, ಸ್ವೆಟರು-ಕಾಲುಚೀಲಗಳೊಳಗೆ ನಮ್ಮನ್ನು ತುಂಬಿಸುವ ಅಮ್ಮನ ‘ಪ್ರೀತಿ’ ಭಯಹುಟ್ಟಿಸುತ್ತಿತ್ತು. ’ಯೇನೂ ಬೇಡಾ!!!’ ಎಂದು ಕೂಗಾಡಲು ತೆಗೆಯುವ ನಮ್ಮ ಬಾಯಿಗಳನ್ನು ಅಮ್ಮ ದೊಡ್ಡ ಅಲ್ಯೂಮಿನಿಯಂ ಡಬ್ಬಗಳಲ್ಲಿ ತುಂಬಿಸಿಡುತ್ತಿದ್ದ ತಿಂಡಿಗಳನ್ನು ಉಪಯೋಗಿಸಿ ಭದ್ರವಾಗಿ ಮುಚ್ಚಿಬಿಡುತ್ತಿದ್ದರು. ರವೆಯುಂಡೆ, ಪುರಿಯುಂಡೆ, ನುಚ್ಚಿನುಂಡೆ, ಕರ್ಜಿಕಾಯಿ, ಬೇಸನ್ ಲಾಡು, ಕಾಯಿಬರ್ಫಿ, ಚಕ್ಕುಲಿ, ಕೋಡುಬಳೆ, ಶಂಕ್ರಪೊಳೆ – ಮುಂತಾದ ತಿಂಡಿಗಳು ಮನೆಯ ತುಂಟಪೋರರನ್ನು ಮಣಿಸಲು ಸದಾ ಸಿದ್ಧವಿರುತ್ತಿದ್ದವು. ಜತೆಗೆ ಹಪ್ಪಳ ಸಂಡಿಗೆಗಳ ಸಡಗರ ಬೇರೆ. ಮಳೆಯಲ್ಲಿ ನೆನೆದು ಶೀತವಾದರೆ ಕುಡಿಯಲು ಕೊಡುತ್ತಿದ್ದ ಕರಿಮೆಣಸಿನ ಸಾರು, ಕಷಾಯಗಳನ್ನು ನೆನೆಸಿದರೆ ಇವತ್ತಿಗೂ ಬೆವರುತ್ತೇನೆ. ನಿಲ್ಲದಲೆ ಲೀಕಾಗುವ ಆಕಾಶ ನೋಡುತ್ತ ಕಿಟಕಿಯ ಬಳಿ ಕೂತು ನಾವು ಮಕ್ಕಳು ಹಾಡುತ್ತಿದ್ದ ’ಮಳೆ ಬಂತು ಗಿಳಿ ಫೋ ಪೋ ಪೋ’ ಹಾಡು ಮಳೆಯ ಸದ್ದಿನ ಜತೆ ಪೈಪೋಟಿ ನಡೆಸುತ್ತಿತ್ತು.
ಹತ್ತಿರ ಹತ್ತಿರ ಎಪ್ಪತ್ತು-ಎಂಭತ್ತು ವರ್ಷದ ನಮ್ಮ ಮನೆಯ ಹೆಂಚುಗಳು ಮಳೆಯೊಡನೆ ಯುದ್ಧನಡೆಸಿ ಸುಸ್ತಾದಾಗ ಸಣ್ಣ ಬಿರುಕುಗಳೆಡೆಯಿಂದ ಮನೆಯೊಳಗೆ ಮಳೆ ತೊಟ್ಟಿಕ್ಕಲಾರಂಭಿಸುತ್ತಿತ್ತು. ಆಗೆಲ್ಲ ನಾನೇ ಇನ್ಚಾರ್ಝ್. ಕೈಗೆ ದೊರಕಿದ ಪಾತ್ರೆಗಳನ್ನು ಹಿಡಿದುಕೊಂಡು ಮಳೆನೀರು ಬೀಳುವಲ್ಲೆಲ್ಲ ಇಡಬೇಕಿತ್ತು. ಪಾತ್ರೆಗಳ ಸಂಖ್ಯೆ ಹೆಚ್ಚಾದಂತೆ ಅಪ್ಪನಿಗೆ ಸುದ್ದಿ ಹೋಗುತ್ತಿತ್ತು. ಅರ್ಥಾತ್ ಮುಂದಿನ ಚಳಿಗಾಲದಲ್ಲಿ ಮನೆಗೆ ಹೊಸ ಮಾಡು ಬರುತ್ತಿತ್ತು. ಇದೆಲ್ಲ ಮುಗಿಯಿತು ಅಂದರೆ ಮರ ಬೀಳುವ ಯೋಚನೆ. ನಮ್ಮ ಮನೆಯ ಮುಂದೆ ಒಂದು ಮಾವಿನ ತೋಪು. ಅದರಲ್ಲಿ ಮಾವಿನ ಮರಗಳ ಜೊತೆಗೇ ಹಲಸು, ಸಿಲ್ವರ್, ದೇವದಾರು, ಗೇರು ಮರಗಳೂ ಹೇರಳವಾಗಿದ್ದವು. ಮಳೆಯ ಪ್ರಕೋಪಕ್ಕೆ ಸಿಲುಕಿ ಪ್ರತಿ ವರುಷವೂ ಒಂದಲ್ಲ ಒಂದು ಮರ ಬೀಳುವುದು ನಡೆಯುತ್ತಿತ್ತು. ಮನೆಯ ಮೇಲೇ ಬೀಳುವಂತೆ ಬೆಳೆದು ನಿಂತಿದ್ದ ಆ ಬೃಹತ್ ಮರಗಳ ಬಗೆಗೆ ಅಮ್ಮನಿಗೆ ವಿಪರೀತ ಭಯ. ಜೋರು ಮಳೆಗಾಳಿಗೆ ಆ ಮರಗಳು ತಾರಾಮಾರಾ ತೂಗಾಡುವುದನ್ನು ನೋಡಿ ಭಯಬೀಳದವರು ನಿಜವಾಗಿ ಶೂರರೇ ಸರಿ! ಗುಡುಗು ಮಿಂಚು ಜೋರಾದ ಹಾಗೆ ಅಮ್ಮ ಕಿಟಕಿ-ಬಾಗಿಲು ಮುಚ್ಚಿ, ನಮ್ಮನ್ನೆಲ್ಲ ಮನೆಯ ಮಲಗುವ ಕೋಣೆಗೆ ಸೇರಿಸಿಬಿಡುತ್ತಿದ್ದರು. ಅಲ್ಲಿ ಮಂಚದ ಮೇಲೆ ಬೆಚ್ಚಗೆ ಕಂಬಳಿ ಹೊದ್ದುಕೊಂಡು ಮಂಕಿಕ್ಯಾಪ್ ಹಾಕಿಕೊಂಡು ಕೂತ ನಮಗೆ ‘ಮರ ಬಿದ್ದು ಮನೆ ಎರಡು ಪೀಸಾದರೆ’ ಎಂದು ಒಳೊಳಗೇ ಕಾಡುತ್ತಿದ್ದ ಆತಂಕ ಅಮ್ಮ ಹೇಳುತ್ತಿದ್ದ ರಸವತ್ತಾದ ಕತೆಗಳ ನಡುವೆಯೆಲ್ಲೋ ಕಳೆದುಹೋಗಿಬಿಡುತ್ತಿತ್ತು.
ಏಳನೆ ಕ್ಲಾಸು ಮುಗಿದ ನಂತರ ರೈನ್ ಕೋಟುಗಳು ಹೋಗಿ ಕೈಗೆ ಛತ್ರಿಗಳು ಎಟುಕಿದವು. ಆಹಹ.. ಅದೇನು ಸಂತಸ ನಮಗೆ!! ನಾವು ಇದ್ದಕ್ಕಿದ್ದಂತೆ ಆರಡಿ ಬೆಳೆದಷ್ಟು ಹೆಮ್ಮೆ. ನಡಿಗೆಯಲ್ಲಿ ಅದೇನೋ ಡೌಲು. ಮಳೆಯಲ್ಲಿ ಛತ್ರಿ ಗರಗರನೆ ತಿರುಗಿಸಿ ಪಕ್ಕದಲ್ಲಿ ನಡೆಯುವವರ ಮೇಲೆ ನೀರು ಹಾರಿಸುವುದೇನು, ಛತ್ರಿಯೊಳಗೆ ಗೆಳತಿಗೆ ಕೊಡಲು ತಿಂಡಿ ಬಚ್ಚಿಟ್ಟುಕೊಂಡು ಹೋಗುವುದೇನು, ‘ಛತ್ರಿಜಗಳ’ ಎಂಬ ವಿಶೇಷ ಕದನವನ್ನು ನಮಗಾಗದವರೊಂದಿಗೆ ನಡೆಸುವುದೇನು, ಮಳೆಯಲ್ಲಿ ನೆನೆದುಕೊಂಡು ಹೋಗುವ ಗೆಳತಿಯರಿಗೆ ‘ಛತ್ರಿಲಿಫ್ಟ್’ ನೀಡುವುದೇನು… ಛತ್ರಿ ಕಳೆದುಹಾಕಿಕೊಂಡು ಮನೆಯಲ್ಲಿ ಬೈಯಿಸಿಕೊಳ್ಳುವುದೇನು…ಹೀಗೆಲ್ಲ ತರಲೆ ನಡೆಸುತ್ತ ಯಾವಾಗ ಕಾಲೇಜಿಗೆ, ಹಾಸ್ಟಲ್ ಜೀವನಕ್ಕೆ ಬಡ್ತಿ ಪಡೆದೆನೋ ತಿಳಿಯಲೇ ಇಲ್ಲ.
ಹಾಸ್ಟೆಲ್ಲಿನ ಒಂಟಿತನ. ಜತೆಯಲ್ಲಿ ಇದ್ದಕ್ಕಿದ್ದಂತೆ ಧಾರಾಕಾರವಾಗಿ ಸುರಿದು ಮಂಗಮಾಯವಾಗುವ ದಕ್ಷಿಣ ಕನ್ನಡದ ಮಳೆ. ಅಂಥ ಮಳೆಯಲ್ಲೂ ತಡೆಯಲಾರದ ಸೆಖೆ. ಮಲೆನಾಡಿನ ಹಳ್ಳಿಯಿಂದ ಬಂದ ನನಗೆ ಅಯೋಮಯ. ಬೇಸರ ಕಳೆಯಲು ತರತರಹದ ತರಲೆ. ನಮ್ಮ ‘ಸೀಕ್ರೆಟ್ ಮಿಶನ್’ ಎಂದರೆ ವಾಚ್ಮನ್ ರಾಜಣ್ಣನ ಕಣ್ಣು ತಪ್ಪಿಸಿ ಬೆಳಜಾವ ಐದುಗಂಟೆಗೆಲ್ಲ ಎದ್ದು ಹಾಸ್ಟೆಲ್ಲಿನ ಕಾಂಪೌಂಡಿನಲ್ಲಿ ಮಳೆಯೇಟಿಗೆ ಬಿದ್ದ ಕಾಟುಮಾವಿನಹಣ್ಣುಗಳನ್ನು ಆಯಲು ಛತ್ರಿ, ಟಾರ್ಚಿ ಹಿಡಿದು ಹೋಗುವುದು. ವೀಕೆಂಡ್ ಶಾಪಿಂಗ್ ಸಮಯದಲ್ಲಿ ಹೊರಗೆ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದೆ ಹೋಟೆಲೊಂದಕ್ಕೆ ನುಗ್ಗಿ ಐಸ್ಕ್ರೀಂ ಆರ್ಡರ್ ಮಾಡಿದಾಗ ವೆಯಿಟರನ ಮುಖ ಹುಳ್ಳಗಾದದ್ದು ನೋಡಿ ಗೆಳತಿಯರೊಡನೆ ನಕ್ಕಿದ್ದುಂಟು. ಕಾಲೇಜಿನಲ್ಲಿ ಎಲ್ಲರೊಡನೆ ಲವಲವಿಕೆಯಿಂದ ಬೆರೆಯುತ್ತ ಚಟುವಟಿಕೆಯಿಂದಿದ್ದ ಹುಡುಗನೊಬ್ಬ ಅದೇ ವರ್ಷ ಸಿಡಿಲು ಬಡಿದು ಕರಕಾದಾಗ ಮಳೆಗಾಲದ ಮೊದಲ ಕಹಿ ಅನುಭವ.
ನನ್ನ ಆಪ್ತಸ್ನೇಹಿತೆ ನಿಶಾಳ ಪರಿಚಯವಾದದ್ದೂ ಮಳೆಯಿಂದಲೇ. ಶಿವಮೊಗ್ಗೆಯಲ್ಲಿ ಡಿಗ್ರಿ ಕಾಲೇಜು ಸೇರಿದ ಮೊದಲ ದಿನ. ಹಾಸ್ಟಲ್ಲಿಗೆ ಹೊರಡಲೆಂದು ಹೊರಹೋದರೆ ಜೋರಾಗಿ ಮಳೆ ಸುರಿಯಲು ಶುರುವಾಗಬೇಕೆ? ಸುಮ್ಮನೆ ನಿಂತಿದ್ದೆ. ಕ್ಲಾಸಿನಲ್ಲಿ ನನ್ನ ಮುಂದಿನ ಬೆಂಚಿನಲ್ಲಿ ಕುಳಿತಿದ್ದ ಹುಡುಗಿಯೊಬ್ಬಳು ಬಳಿಬಂದು, ’ಛತ್ರಿ ಇಲ್ವಾ? ಬಾ. ನಿನ್ ಹಾಸ್ಟೆಲ್ ಜಯನಗರದಲ್ಲಲ್ವಾ? ಬೆಳಿಗ್ಗೆ ಬರೋವಾಗ ನೋಡ್ದೆ. ನಾನೂ ಆಕಡೇನೇ ಹೋಗೋದು’ ಎಂದಳು. ಇಬ್ಬರೂ ಮಳೆಯಲ್ಲಿ ಅರ್ಧ ನೆನೆದುಕೊಂಡು ನಮ್ಮನಮ್ಮ ಗೂಡು ತಲುಪುವಷ್ಟರಲ್ಲಿ ಎಷ್ಟೋ ವರುಷಗಳ ಪರಿಚಯವೇನೋ ಎನಿಸುವಷ್ಟು ಆತ್ಮೀಯತೆ ಬೆಳೆದುಬಿಟ್ಟಿತ್ತು. ನಾವು ಹಾಸ್ಟೆಲ್ಲಿನ ಗೆಳತಿಯರು ಕೂಡಿ ಜೋಗಕ್ಕೆ ಹೋದಾಗ ಶರಾವತಿಯ ದಂಡೆಯಲ್ಲಿ ಸುರಿಯುವ ಮಳೆಯಲ್ಲಿ ಕುಣಿದು ಕುಪ್ಪಳಿಸಿದ್ದು ನೆನೆದು ನಗು ಉಕ್ಕುತ್ತದೆ.

…ಇಲ್ಲೀಗ ಕುಳಿತು ಇವತ್ತಿನ ಮಳೆ ಯಾವಾಗ ಬಂದೀತೋ ಎಂದು ಕಾಯುತ್ತಿದ್ದೇನೆ. ಮಗಳಿಗೆ ಈ ವೀಕೆಂಡು ಪೇಪರ್ ದೋಣಿ ಮಾಡಿಕೊಡಬೇಕು. ಮನೆಯೆದುರು ಹರಿವ ನೀರಲ್ಲಿ ತೇಲಿಸಿ ಅವಳು ಕುಣಿವುದ ಮನಸಾರೆ ನೋಡಬೇಕು.. 

ಅಷ್ಟು ವರ್ಷ ಮಳೆ ಸುಮ್ಮನೆ ನೆಲದ ಮೇಲಷ್ಟೆ ಸುರಿಯಲಿಲ್ಲ. ಮನದೊಳಗೂ ಸುರಿದಿರಬೇಕು.

Advertisements

29 thoughts on “ಮಳೆ ಬಂತು ಗಿಳಿ ಪೋ ಪೋ ಪೋ..

 1. ನಿಜ, ಹೊರಗೆ ಮಳೆ ಸುರಿದಾಗಲೆಲ್ಲಾ ಮನದ ತುಂಬಾ ನೆನಪಿನ ಅಲೆಗಳು. ಬಹುಶಃ ಮಲೆನಾಡಿನಲ್ಲಿ ಬೆಳೆದವರಿಗೆಲ್ಲಾ ಮಳೆಯ ನೆನಪುಗಳು ಬಹಳ ಕಾಡಿಸುತ್ತವೆ.
  ಬಹಳ ಆಪ್ತವಾದ ಬರಹ. ಧೋ ಎಂಬ ಮಳೆಯಲ್ಲಿ ಬಿಸಿಬಿಸಿ ಹಲಸಿನಕಾಯಿ ಹಪ್ಪಳ ಸುಟ್ಟು ತಿಂದಂಥಾ ಅನುಭೂತಿ ಆಯ್ತು ಓದಿ. ಶಂಕ್ರೆಪೊಳೆ ಎಲ್ಲಾ ನೆನೆಸ್ಕೊಂಡು ಬಾಯಲ್ಲಿ ನೀರು ಬಂತು 😦
  ಮತ್ತೆ ಊರಿಗೆ ಕರೆದುಕೊಂಡು ಹೋಗಿದ್ದಕ್ಕೆ ಧನ್ಯವಾದಗಳು

  ಮಧು

 2. ಮನೆಯೊಳಗೆ ನುಗ್ಗಿದರೆ ಕೆಸರುತುಂಬಿದ ಕೈಕಾಲುಮುಖಾದಿಗಳನ್ನು ಸೋಪು, ಪ್ಲಾಸ್ಟಿಕ್ ಗುಂಜು ಹಾಕಿ ಉಜ್ಜಿ ತೊಳೆದು, ಸ್ವೆಟರು-ಕಾಲುಚೀಲಗಳೊಳಗೆ ನಮ್ಮನ್ನು ತುಂಬಿಸುವ ಅಮ್ಮನ ‘ಪ್ರೀತಿ’ ಭಯಹುಟ್ಟಿಸುತ್ತಿತ್ತು. ’ಯೇನೂ ಬೇಡಾ!!!’ ಎಂದು ಕೂಗಾಡಲು ತೆಗೆಯುವ ನಮ್ಮ ಬಾಯಿಗಳನ್ನು ಅಮ್ಮ ದೊಡ್ಡ ಅಲ್ಯೂಮಿನಿಯಂ ಡಬ್ಬಗಳಲ್ಲಿ ತುಂಬಿಸಿಡುತ್ತಿದ್ದ ತಿಂಡಿಗಳನ್ನು ಉಪಯೋಗಿಸಿ ಭದ್ರವಾಗಿ ಮುಚ್ಚಿಬಿಡುತ್ತಿದ್ದರು. ha ha ha ha ha……:-)))))))Am just visualising this….

  -Prasad.

 3. ಟೀನಾ ಅವರೆ…
  ಈ ಮಲೆನಾಡಿನ ಮಳೆ, ರೈನ್’ಕೋಟ್, ಅದಾದ ಮೇಲೆ ಹೈಸ್ಕೂಲ್ ಮೆಟ್ಟಿಲು ಹತ್ತುವಾಗ ಕೈಗೆ ಬಂದ ಛತ್ರಿ ಎಲ್ಲವುಗಳ ಬಗ್ಗೆ ಆಹಾ….ಎಷ್ಟು ಸುಂದರವಾಗಿ ಚಿತ್ರಿಸಿದ್ದೀರ. ಥರಥರದ ತಿಂಡಿಗಳ ಬಗ್ಗೆ ಬೇರೆ ಕೇಳಿ ನಂಗೂ ಅವೆಲ್ಲ ಬೇಕು ಅನ್ನಿಸ್ತಿದೆ. ಅವನ್ನೆಲ್ಲ ನೀವೊಬ್ರೇ ತಿಂದ್ರೆ ಹಲ್ಲುನೋವು ಖಂಡಿತ ಬರತ್ತೆ.
  ಹಾಗೇ ಪೇಪರ್ ಬೋಟ್ ಮಾಡೋಕೆ ಪೇಪರ್ ನಾನ್ ತರ್ತೀನಿ, ನೀವು ದೋಣಿ ಮಾಡಿ, ಮಕ್ಕಳು, ನಾವು ಎಲ್ರೂ ಮಳೆಯಲ್ಲಿ ಕಾಗದದ ದೋಣಿಯ ಜೊತೆ ನೆನೆಯೋಣ. 🙂
  ಚಂದದ ಬರಹ ಕೊಟ್ಟು ಸವಿಸವಿ ನೆನಪನ್ನ ಹಂಚಿಕೊಂಡಿದ್ದಕ್ಕೆ ಥ್ಯಾಂಕ್ಸ್.

 4. beautiful … Tina ,

  ನಿಮ್ಮ ಮಳೆಯ ಕಥೆ ತುಂಬಾ ತುಂಬಾ ಚೆನ್ನಾಗಿದೆ.
  ಇಲ್ಲಿ ( ಅಮೇರಿಕೆಯಲ್ಲಿ ) … ಇನ್ನೂ ಮಳೆ ಬಿದ್ದಿಲ್ಲ. ಹೇಗಿರುತ್ತೆ ಅಂತಲೂ ಗೊತ್ತಿಲ್ಲ. ಬೇಸಗೆ ಇನ್ನೂ ಹೋಗಿಲ್ಲ … ಚಳಿಗಾಲ ಹತ್ರ ಬರ್ತಾ ಇದೆ.
  ನಮ್ಮೂರಿನ ತರಹ ಜೋರಾಗೇನೂ ಇಲ್ಲಿ ಮಳೆ ಬೀಳೊಲ್ಲ ಅಂತ ಕೇಳಿದ್ದೀನಿ.
  ಆದ್ರೂ … ಮಳೆಗಾಲದ ಮಜಾನೇ ಬೇರೆ ಅಲ್ವಾ.
  thanks Tina for your write-up. It was nostalgic.

 5. ಟೀನಾ,
  ಬಹಳ ವರ್ಷಗಳ ನಂತರ ಮಳೆಯಲ್ಲಿ ಅದ್ದಿ ಹೋದ ಅನುಭವವಾಯಿತು. ನಾವು ಕಂಡ ಬಾಲ್ಯದ ಮಳೆಗಾಲ ಪ್ರಾಯಶ ನಮ್ಮ ಇಂದಿನ ಪೀಳಿಗೆಯ ಅನುಭವಕ್ಕೆ ಬಂದಿರಲು ಸಾಧ್ಯವಿಲ್ಲ. ಆದರೂ, ಈ ಎಲ್ಲಾ ವಿಷ್ಯಗಳನ್ನು ಓದಿದ ಮೇಲೆ ಎನ್ನ ಮನಸು, ನನ್ನ ಬಾಲ್ಯ ಕಾಲದ ಮಳೆಗಾಲದಲ್ಲಿ ನೆನೆದು ಬಂತು. ನಾನು ಮತ್ತು ನನ್ನ ತಂಗಿ ಈ ಎಲ್ಲಾ ಆಟಗಳ ಜೊತೆಗೆ ಇನಷ್ಟು ಆಟಗಳನ್ನು ಆಡಿ ಖುಷಿ ಪಟ್ಟಿದ್ದೇವೆ. ಒಟ್ಟಿನಲ್ಲಿ ಲೇಖನ ಓದಿದ ನಂತರ , ಮಳೆ ನಿಂತು ಹೋದ ಮೇಲೆ ಆದ ಅನುಭವವಾಯಿತು. ಯಾಂತ್ರಿಕತೆಯ ಮಡುವಿನಲ್ಲಿ ನಿತ್ಯ ನರಳುತ್ತಿರುವ ನಮಗೆಲ್ಲಾ ಈ ನಾಸ್ತಾಲ್‌ಜಿಯ ಒಂದು ಚೆತೋಹಾರಿ ಟಾನಿಕ್ ಆಗಿ ಬಿಡುತ್ತೆ.
  thanks for the good one.

 6. Tina,

  Nice article. I think it is not “’ಮಳೆ ಬಂತು ಗಿಳಿ ಫೋ ಪೋ ಪೋ” it is a game from Tamil nadu, which has these line “Mall Vandhu Killi Po” meaning Come slowly and pinch (loose translation) that I have seen kids playing even during normal times.

 7. ನಾನು ಕನ್ನಡ ಹನಿಗಳ ಬಳಗದಿಂದ ವಿನಂತಿಸಿಕೊಳ್ಳುತ್ತಿರುವುದೇನೆಂದರೆ, ನಮ್ಮ ಕನ್ನಡ ಹನಿಗಳು ಹಾಸ್ಯ್, ಕವನ, ಹನಿಗವನ ಇನ್ನೂ ಹತ್ತು ಹಲವನ್ನು ಹೊಂದಿದೆ.

  http://kannadahanigalu.com/

  ನೀವು ಮೀಕ್ಷಿಸಿ, ನಿಮ್ಮ ಬ್ಲಾಗ್‍ನಲ್ಲಿ ಪ್ರಕಟಿಸುವಿರಾ, ಹಾಗೆಯೇ ಕನ್ನಡ ಹನಿಗಳಲ್ಲಿಯು ನಿಮ್ಮ ಬ್ಲಾಗ್‍ನ್ನು ಪ್ರಕಟಿಸುತ್ತೇವೆ.

  ದಯವಿಟ್ಟು ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಾಗಳಿಗೆ ನಮಗೆ ಬರೆದು ತಿಳಿಸಿ.

  ಧನ್ಯವಾದಗಳೊಂದಿಗೆ…..

 8. * ಮಧು,
  ನೀವೂ ಮಲೆನಾಡಾ? ಯಾವ ಊರು ನಿಮ್ಮದು?
  * ಪ್ರಸಾದ್,
  ವಿಶುವಲೈಸ್ ಮಾಡಿ ನಗಾಡಿದಿರಾ? ನಾವು ಚರ್ಮ ಉರಿಸ್ಕೊಂಡು ಕಿರ್ಚಾಡ್ತಿದ್ವಿ!!
  *ಶಾಂತಲಾ, ಶ್ರೀದೇವಿ
  ಈಗ ನನ್ನ ಪೇಪರ್ ಬೋಟ್ ಬಿಸ್ನೆಸ್ಸಿಗೆ ನೀವು ಮಟೀರಿಯಲ್ ಪ್ರೊವೈಡರ್ಸ್. ಸರೀನಾ?
  ಚಂದ ಇರೋದು ಅಲ್ಲ? ನಾವು ಕೂತು ಪೇಪರ್ ಬೋಟು ಮಾಡಿ ತೇಲಿಸ್ತ ಇದ್ರೆ.. 😉
  *ಹೇಮಾ,
  ಅಲ್ಲಿ ಮಳೆ ಸುರೀತಿರುವಾಗ ನನಗೊಂದು ಪತ್ರ ಬರೆದುಬಿಡಿ, ಅಲ್ಲಿ ಹ್ಯಾಗಿದೆ ಹೇಳಿ.
  *ಸಂತೋಷ,
  ನನಗೆ ನಾಸ್ಟಾಲ್ಜಿಯಾ ಕೊಂಚ ಜಾಸ್ತಿ. ನಿಮಗೆ ಚೇತೋಹಾರಿ ಅನ್ನಿಸಿದ್ದು ನನಗೆ ಸಂತಸ.
  *ನೀಲಿಹೂವಿನ ಒಡೆಯರೆ,
  ಇಲ್ಲಿ ಬಂದು ಓದಿದ್ದಕ್ಕೆ ನಿಮಗೂ ಧನ್ಯವಾದ.
  *ಮಯೂರ,
  ಈ ಹಾಡನ್ನ ನನ್ನಂಥ ಸಾವಿರಾರು ಮಲೆನಾಡ ಮಕ್ಕಳು ಅವರವರ ಬಾಲ್ಯದ ದಿನಗಳಲ್ಲಿ ಹಾಡುತ್ತ ಅವರ ಮುಂದಿನ ಜನರೇಶನ್ನುಗಳಿಗೆ ಪಾಸು ಮಾಡುತ್ತ ಬಂದಿದಾರೆ. ನೀವು ಹೇಳಿದ ತಮಿಳು ಹಾಡು ಇದರ ಮೂಲ ಆಗಿರಬಹುದು. ಭಾಷೆಯಿಮ್ದ ಭಾಷೆಗೆ ಜನಪದದ ಸೊಬಗು ಹರಿದುಬರುವಾಗ ಅದರ ರಾಗ ಹಾಗೇ ಉಳಿದುಕೊಂಡು ಅರ್ಥ ಸಂಪೂರ್ಣ ಬದಲಾಗುವುದು ವಂಡರ್ಫುಲ್ ಅನ್ಸತ್ತೆ ನನಗೆ. ಯಾವುದು ಯಾವುದರ ಮೂಲವೊ. ಒಟ್ಟಿನಲ್ಲಿ ಚಂದ ಮಾಡಿಕೊಳ್ಳುತ್ತ ಕಳೆಯದೆ ಉಳಿಸುತ್ತ ಬಂದರೆ ಒಳ್ಳೆಯದು. ಮಾಹಿತಿಗಾಗಿ ಧನ್ಯವಾದ.
  *ಸುಧನ್ವ,
  ನನ್ನ ಬಾಯಿ ಕೈಯಿ ಎರಡಕ್ಕು ಬಹುಶಃ ಕನೆಕ್ಷನ್ ಇದೆ. ಅದಕ್ಕೇ ಬರಿಯೋಕೆ ಕೂತರೆ ಒಂದೇ ಸಮ ರಾಶಿ ಹೇಳಿಕೊಂಡುಬಿಡಬೇಕು ಅನ್ನಿಸಿಬಿಡುತ್ತೆ!! 🙂
  ಹರಿ,
  ಸ್ಕೇಲ್ ಡೌನ್ ಮಾಡಕ್ಕೆ ನೋಡಿದೆ ಕಣ್ರಿ, ಅದ್ಯಾಕೊ ಅಕ್ಷರ ಅಂಟಿಕೊಡಹಾಗೆ ಕಾಣಕ್ಕೆ ಶುರುವಾದ್ವು. ನಂಗೆ ಕವಿತೆ ಸಿಕ್ಕಾಬಟ್ಟೆ ಇಷ್ತವಾಗಿತ್ತು. ಹಾಕ್ಲೇಬೇಕು ಅಂತ ರಚ್ಚೇಲಿ ಹಿಂಗೇ ಹಾಕ್ದ್ದೆ ನೋಡಿ!!

 9. ನೆನಪಿನ ಓಣಿಯಲ್ಲಿ ಸಾಗುವ ಬರಹ ಚೆನ್ನಾಗಿದೆ –

  ಆದ್ರೆ “ಮಳೆ ಬಂತು ಗಿಳಿ ಫೋ ಪೋ ಪೋ’ ಹಾಡು ಮಳೆಯ ಸದ್ದಿನ ಜತೆ ಪೈಪೋಟಿ ನಡೆಸುತ್ತಿತ್ತು.” – ಈ ಮಾತು ಕೇಳಿ ಆಶ್ಚರ್ಯವಾಯಿತು. ನಿಜವಾಗೂ ಹಾಗೆ ಹೇಳ್ತಿದ್ದಿರಾ?

  ಈ ಆಟ “ಮಳ್ಳ ವಂದು ಕಿಳ್ಳಿ ಪೋ ಪೋ ಪೋ” (ಮೆತ್ತಗೆ ಬಂದು ಕಿಳ್ಳಿ ಹೋಗು)..ಎಂದಲ್ಲವೇ?

  ಮತ್ತೆ ಮೇಲೆ ಹೇಮಶ್ರೀ ಅವರು ಬೇ ಏರಿಯಾ ಮಳೆಯನ್ನ ನೋಡಿಲ್ಲ ಅಂತ ಬರ್ದಿದಾರೆ. ನಿಜವಾಗಿ ಇಲ್ಲಿಯ ಮಳೆಗಾಲ ನಮ್ಮೂರಿನ ಸೋನೇಮಳೆಗಾಲವೇ. ಓಡಾಡಕ್ಕೆ ರೇಜಿಗೆ, ಆದ್ರೆ ಕೆರೆ ಕಟ್ಟೆ ತುಂಬೋದಕ್ಕೆ ಸಾಲದು – ಆ ತರಹ ಅಷ್ಟೇ!

 10. ಟೀನಾ ನಾನು ದೆಹಲಿಯಿಂದ ಬರೆಯುತ್ತಿದ್ದೇನೆ. ಮಳೆಯೆಂದರೆ ಇಲ್ಲಿ ಅಷ್ಟಕ್ಕಷ್ಟೇ. ಈ ಸರ್ತಿ ಇಲ್ಲಿಯೂ ಸಾಕಷ್ಟು ಮಳೆ ಬಿದ್ದಿದೆಯಾದರೂ ಸೆಕೆ , ಹುಮಿಡಿಟಿ ತಪ್ಪಿಲ್ಲ. ನಿಮ್ಮ ಬರೆಹ ಓದಿ ಮಳೆಯೆಲ್ಲಿ ನೆನದಂತಾಯಿತು, ಜೊತೆಗೆ ಊರಿನ ಮಳೆ, ಸುಟ್ಟು ತಿನ್ನುತ್ತಿದ್ದ ಬಿಸಿ ಬಿಸಿ ಹಪ್ಪಳ, ಉಪ್ಪು ಹಾಕಿ ಕುದಿಸಿದ ಹಸೀ ನೆಲಗಡಲೆ ಇತ್ಯಾದಿ ತಿಂಡಿ ಬಾಯಲ್ಲಿ ನೀರೂರಿಸಿದವು. ನನ್ನ ತವರೂರು ಧಾರವಾಡ.
  ಧನ್ಯವಾದಗಳು. ಪ್ರೀತಿಯಿಂದಾ..

 11. ಸವಿಸವಿಯಾದ ನೆನೆಪುಗಳು. ನಿಮ್ಮ ಬರಹ ನನ್ನನ್ನು ಬಾಲ್ಯಕ್ಕೆ ಎಳೆದೊಯ್ಯಿತು. ಬರಹ ಓದಿ ಮುಗಿಸಿದ ಮೇಲೆ ಮನದಲ್ಲಿ ಏನೋ ಖಾಲಿಖಾಲಿಯಾದ೦ತೆ ಆಯಿತು. ನಮ್ಮ ಊರಿನಲ್ಲೂ ಹೀಗೆ ಮಳೆ ಬರುತ್ತಿತ್ತು. ಗದ್ದೆಯ ಬದುವಿನಲ್ಲಿ ಕೆಸರಿನಲ್ಲಿ ’ಕೆಸರಾಟ’ ಆಡುತ್ತಾ, ಒಬ್ಬರ ಮೇಲೊಬ್ಬರು ನೀರು ಚಿಮ್ಮಿಸುತ್ತಾ ಶಾಲೆಗೆ ಹೋಗುತ್ತಿದ್ದ ಆ ದಿನಗಳ ನೆನಪುಗಳು….
  “ಅಷ್ಟು ವರ್ಷ ಮಳೆ ಸುಮ್ಮನೆ ನೆಲದ ಮೇಲಷ್ಟೆ ಸುರಿಯಲಿಲ್ಲ. ಮನದೊಳಗೂ ಸುರಿದಿರಬೇಕು.” ತು೦ಬಾ ಇಷ್ಟವಾದ ಸಾಲುಗಳು.

 12. ಟೀನಾ,

  ಬೇ ಏರಿಯಾದಲ್ಲಿ ಮಳೆಯೇ ಇಲ್ಲ ಅಂತ ಹಲುಬಿಕೊಂಡು ಕೆನಡಾ ಗಡಿಯಲ್ಲಿರುವ ನ್ಯೂ ಹ್ಯಾಂಪ್ಷೈರ್ ಗೆ ಹೋಗಿದ್ದೆ. ಮಲೆನಾಡಿನಂತೆ ಹಚ್ಚ ಹಸಿರಾಗಿರುವ ಆ ಜಾಗದಲ್ಲಿ ನಾ ಹೋದಾಗಲೇ ಧಾರಾಕಾರ ಮಳೆ! ಮಗುವಿನ ನಗುವಿನಂತಹ ಹಿತವಾದ ಸೋನೆ; ಆಗೀಗ ಅದರ ರಚ್ಚೆಯಂತೆ ರಾಚುವ ಜಡಿಮಳೆ… ಮಳೆಯ ನಾನಾ ಅವತಾರಗಳನ್ನು ನೋಡಿ ಸಿಕ್ಕಾಪಟ್ಟೆ ದಿನಗಳಾಗಿತ್ತು. ಎಲ್ಲರ ಕಣ್ಣು ತಪ್ಪಿಸಿ ಅಷ್ಟೋಇಷ್ಟೋ ನೆನೆದು ಬಂದೆ. ಆದ್ರೆ ನೀವು ಹೇಳಿದಂತೆ ಹಪ್ಪಳ, ಸಂಡಿಗೆ, ನುಚ್ಚಿನುಂಡೆ, ರವೆಯುಂಡೆಗಳು ಮಾತ್ರ ಇರಲಿಲ್ಲ ಮಾರಾಯ್ತಿ. 😦

 13. ನೀಲಾಂಜನ,
  ನಿಮ್ಮ ಪ್ರಶ್ನೆಗೆ ಮೇಲೆಯೆ ಇರುವ ನನ್ನ ಕಮೆಂಟಿನಲ್ಲಿ ಉತ್ತರ ಸಿಗತ್ತೆ ಅಂದ್ಕೋತೀನಿ.
  ಅಲ್ಲಿಯ ಮಳೆ ಬಗ್ಗೆ ಹೇಳಿದ್ದಕ್ಕೆ ನಿಮಗೂ ಹೇಮಾಗೂ ಧನ್ಯವಾದ!!
  ರೇಣುಕಾ,
  ಇಲ್ಲಿಣುಕಿದ್ದಕ್ಕೆ ಧನ್ಯವಾದ. ನನಗೆ ನಿಮ್ಮ ಊರಿನ ಥರದ ಕನ್ನಡ ಮಾತು ಕಲೀಬೇಕು ಅನ್ನಿಸ್ತದೆ. ಮತ್ತೆ ನಿಮ್ಮ ಊರಿನ ಸ್ನೇಕುಗಳು ( 🙂 ) ಬಾಯಲ್ಲಿ ನೀರೂರಿಸಿದವು.
  ಸುಧೇಶ್, ಸುನಾಥ್, ಸಿರಿ,
  ನಿಮ್ಮ ಮೂರೂ ಜನರ ಪೀಲಿಂಗುಗಳೂ ಒಂದೇ ಥರ ಇದಾವಲ್ಲ!! ತ್ಯಾಂಕೂ!!
  ಬ್ಯಾಗ್ವತ್ರೆ,
  ವಿ-ಬಾಗಕ್ಕೋಗಿ ನೋಢಿದ್ರೆ ಹೆಲ್ಲ ಹಿದಾವಲ್ಲ!! ಹೇನು ಮಾರಾಯ್ರೆ, ಹಿದೂ ಘೊತ್ತಾಘಲ್ಲ ಹಂದ್ರೆ ಹೇನು?
  ಶ್ರೀ,
  Not another one again!! ನಂಖೈಲಿ ಈ ಟಾರ್ಚರು ತಡಿಯೋಕಾಗಲ್ಲ!! ಯಾವ ಶ್ರೀ ನೀವು? ಯಾರೂಊಊಊಊ? ಮೆಯಿಲ್ ಐಡಿಗುಳ್ನ ಬಟ್ಟೆ ಬದಲಾಯ್ಸಿದ್ ಹಾಗೆ ಬದಲಾಯ್ಸಿದ್ರೆ ನಂ ಗತಿ ಏನಾಗ್ಬೇಕು?
  ಚೇತೂ,
  ಕೇತುವಿನ ತರಹ ಹಿಂದೆ ಬಿದ್ದಿದೀ. ಆಗ್ಲೆ ಪೋಸ್ಟು ಮಾಡಿದೀನಿ ನೋಡು.
  ಚಂದಿನ,
  ನಂಗೂನೂವೆ ನಗು ಬಂತು ಕಣ್ರಿ. ಆದ್ರೆ ಇದು ಇರ್ತಾ ಇದ್ದಿದ್ದೆ ಹಾಗೆ!!

  Have faith – in something. It makes life worthwhile.
  ಟೀನಾ.

 14. ಮಳೆ

  ಮಳೆ ಬಂತು ಮಳೆ, ಧೋ ಅಂತ ಮಳೆ
  ನಿಲ್ಲದ, ಲಯ ಬಿಡಲೊಲ್ಲದ ಮಳೆ
  ರಸ್ತೆ ಗುಂಡಿಗಳ ಕೊಂಡಿಯ ಸೇರಿಸಿ
  ಹುಚ್ಚಾಪಟ್ಟೆ ಚಚ್ಚುವ ಮಳೆ

  ಅರ್ಧ ತಾಸಿನ ಬರಗಾಲದ ನಂತರ
  ತನು ಮನ ತಣಿಸುವ ಮೋಹಕ ಮಳೆ
  ಕುತೂಹಲ ಕೆರಳಿಸಿ, ಕಲರವ ಮೂಡಿಸಿ
  ಸುರಿಯುತ ಸುರಿಯುವ ಸೋನೆಮಳೆ

  ಮಾರನೆ ದಿನಕೆ ಅಲ್ಪವಿರಾಮ
  ಆಗಸಕಾಗ ತುಸು ಆರಾಮ
  ಗೆಳೆಯರೊಂದಿಗೆ ಹರಟೆಗೆ ಕೂತರೆ
  ತರಾಟೆಗೆ ಶುರುವಿಟ್ಟ ಜೋರು ಮಳೆ

  ( ಮೊದಲ ಪ್ರಯತ್ನ ಕ್ಷಮೆಯಿರಲಿ )

  – ಚಂದಿನ
  http://www.koogu.blogspot.com

 15. ಚಂದಿನ,
  ಇದು ನಮ್ದೇ ಯಾವುದೋ ಮಕ್ಕಳ ಮಳೆ ಹಾಡಿದ್ದ ಹಾಗಿದೆಯಲ್ಲ!!
  ನಮ್ಮ ಕನ್ನಡದ ಸವಿ ಹೋಗದೆ ಇರುವ ಹಾಗೆ ಚೆಂದಾಗಿ ಅನುವಾದಿಸಿದೀರಿ.
  Take a bow from here!
  ಪುನಹ ಪುನಹ ಓದಿ ಖುಷಿಪಟ್ಟೆ.
  -ಟೀನಾ

 16. ಮಳೆ ನಿಂತು ಚಳಿಗಾಲದಲ್ಲಿ ಹೋಗಿ ಮಲೆನಾಡು ಪೋಟೊ ತೆಗೆದಿದ್ದೆ. ನಿಮ್ಮ ಮಳೆಗಾಲದ ಫೋಟೊನಾ ಬರವಣಿಗೆಯಲ್ಲಿ ಬರೆದು ಮಳೆಗಾಲದ ಫೋಟೊ ತೆಗೆಯಲಿಕ್ಕೆ ಸಿರಸಿಗೆ
  ಗೆಳೆಯನ ಮನೆಗೆ ಹೋಗಬೇಕೆನಿಸುತ್ತಿದೆ. ಬರವಣಿಗೆ ಚೆನ್ನಾಗಿದೆ. ಇಷ್ಟ ಆಯ್ತು.

  ಶಿವು.ಕೆ
  http:/chaayakannadi.blogspot.com
  http://www.flickr.com/photos/shivuimages

 17. ಟೀನಾ,

  ನಮಸ್ಕಾರ. ಆಗೀಗ ನಿಮ್ಮ ಬ್ಲಾಗಿಗೆ ಬಂದುಹೋಗಿದ್ದೇನೆ.
  ಈ ಬರೆಹ ಓದೋವಾಗ ಅನಿಸಿದ್ದು , ಅದೆಷ್ಟು ಸಾಮ್ಯವಿದೆ ನಮ್ಮ ಅನುಭವಗಳಲ್ಲಿ ಅನ್ನೋದು. ಬಹುಶಃ ಎಲ್ಲ ಮಲೆನಾಡಿಗರದೂ ಇಂಥದೇ ಅನುಭವ ಇರಬೇಕಲ್ವಾ? ನನ್ನ ” ಮಳೆಗಾಲದ ನೆನಪುಗಳನ್ನು ” ಓದಿದ ಸುಧೇಶ ಹೇಳಿದ್ದು ನಂಗೆ ” ಟೀನಾ ಅವರೂ ಇಂಥದೇ ನೆನಪುಗಳನ್ನು ಹಂಚಿಕೊಂಡಿದಾರೆ ” ಅಂತ .

  ಚೆನಾಗಿ ಬರ್ದಿದೀರ. ನನ್ನ ಬ್ಲಾಗಿಗೂ ಬನ್ನಿ ಒಮ್ಮೆ.

 18. ನಮಗೂ ಮಳೆಗೂ ಯಾವಾಗ್ಲೂ ಆಗಿ ಬಂದಿಲ್ಲಾ.. ಮಳೆ ಆದ್ರೆ ಹೊರಗೆ ಸುತ್ತಾಡಲು ಕಿರಿಕಿರಿ ಅನ್ನೊದು ಕಾರಣವಾದರೆ ನಮ್ ಕ್ರಿಕೆಟ್ಟಿಗೂ ರಜಾ ಕೊಡಬೇಕಾಗುತ್ತಿತ್ತು ಆನ್ನೋದು ಪ್ರಮುಖ ಕಾರಣ.. ಮಳೆ ಆದ್ರೆ ಇಡಿ ಅಬ್ಬೀಗೇರಿಯ ತುಂಬಾ ಕೆಸರೋ ಕೆಸರು.. ದಾರಿ ಯಾವುದಯ್ಯಾ ಸ್ವ್ರರ್ಗಕ್ಕೆ ಅನ್ನೋದನ್ನು ಅಬ್ಬಿಗೇರಿಯಲ ಮಳೆಗಾಲದಲ್ಲಿನೇ ಬರೆದಿರಬೇಕು.. ಇನ್ನೂ ಬೆಂಗಳೂರಲ್ಲಿ ಮಳೆ ಆದ್ರಂತೂ ಮನೆ ಮುಟ್ಟುವುದು ಒಂದೆರಡು ಗಂಟೆ ತಡ ಆಗುತ್ತದಾದುರಿಂದ ಇಲ್ಲೂ ಮಳೆ ಅಂದರೆ ಭಯ ಆಗುತ್ತೆ..

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s