ಒಬ್ಬ ಜಗಳಗಂಟನ ನೆನಪು..ಆಆಹ್.. ಕ್ಷೀ…!!

ಈವತ್ತು ನಾನೂ ಪಕ್ಕಾ ಬೆಂಗಳೂರಿಗಳಾಗಿಬಿಟ್ಟೆ. ಆಗಾಗ್ಗೆ ಮನೆ ಶಿಫ್ಟು ಮಾಡುವದು ನನ್ನ ಪ್ರಕಾರ ‘ಬೆಂಗಳೂರಿಗ’ ಅನ್ನಿಸಿಕೊಳ್ಳುವದಕ್ಕೆ ಬೇಕಾಗಿರುವ ಪ್ರಮುಖ ಕ್ವಾಲಿಟಿ. ಬಾಡಿಗೆಮನೆಯ ಧೂಳು, ಜಿರಲೆಮೊಟ್ಟೆಗಳು, ಕಸ, ಇತ್ಯಾದಿಯನ್ನೆಲ್ಲ ಹುಮ್ಮಸ್ಸಿನಿಂದ ಜಾಡಿಸಿ ಕ್ಲೀನು ಮಾಡಿ ಮುಗಿವ ವೇಳೆಗೆ ಅಲರ್ಜಿಯಾಗಿ ಫಜೀತಿ ಬೇಡ ಅನ್ನಿಸಿಬಿಟ್ಟಿತು. ಪದೇ ಪದೇ ವರ್ಗಾವಣೆ ಆಗುವವರ ಪಾಡು ಹೇಗೋ ಅಂದುಕೊಳ್ಳುತ್ತ ಇದ್ದೆ. ಪ್ರಸನ್ನ, ಅದೇ ನನ್ನ ಹಳೆಯ ದುಶ್ಮನ್, ಮರೆತೇಹೋಗಿದ್ದವ ಧುತ್ತನೆ ನೆನಪಾದ.

ನನ್ನನ್ನು ಐದನೇ ಕ್ಲಾಸಿಗೆ ನಮ್ಮೂರ ಸರ್ಕಾರೀ ಶಾಲೆಗೆ ಸೇರಿಸಿದರು. ಐದನೇ ಕ್ಲಾಸಿನಲ್ಲಿ ಮೂರು ವಿಭಾಗಗಳು. ಪ್ರತಿ ವಿಭಾಗದಲ್ಲಿ ಕಡಿಮೆ ಎಂದರೂ ಎಪ್ಪತ್ತೈದು ಮಕ್ಕಳು. ಟೀಚರುಗಳು ಯಾವಾಗಲೂ ಕಿರುಚಿಕೊಂಡೇ ಮಾತನಾಡಬೇಕಿತ್ತು. ಅಲ್ಲಿ ಹುಡುಗ ಹುಡುಗಿಯರು ಪ್ರತ್ಯೇಕವಾಗಿ ಕೂರುತ್ತಿರಲಿಲ್ಲ. ಮೊದಲನೆ ದಿನವೆ ಬೆಂಚಿನಲ್ಲಿ ನನ್ನ ಪಕ್ಕ ಕೂತಿದ್ದವರು ಬಿ.ಕೆ. ಪ್ರಸನ್ನ ಮತ್ತು ಸೆಲೆಸ್ತೀನ್ ಪಿರೇರಾ. ಆವತ್ತಿನಿಂದ ನಾನು ಸೆಲೆಸ್ತೀನಳ ಜತೆ ಎಷ್ಟು ಜಾಸ್ತಿ ಸ್ನೇಹ ಮಾಡಿಕೊಂಡೆನೋ ಪ್ರಸನ್ನನೊಡನೆ ಅಷ್ಟೇ ಜಗಳವಾಡುತ್ತ ಇದ್ದೆ. ಕ್ಲಾಸಿನೊಳಗೆ ನುಗ್ಗಿದೆವೋ ಇಲ್ಲವೋ, ನಮ್ಮ ಕಾದಾಟ ಶುರು. ಬೋರ್ಡು ಒರೆಸಿದ ಡಸ್ಟರನ್ನು ಅವ ನನ್ನ ಮೇಲೆ ಎಸೆದರೆ ನಾನು ಆಟದ ಮೈದಾನದಿಂದ ಮರಳು ತಂದು ಅವನ ತಲೆಯ ಮೇಲೆ ಸುರಿಯುತ್ತಿದ್ದೆ. ಪಿಲ್ಚೆಂಡಿನಾಟದಲ್ಲಿ ನನ್ನ ಫೇಮಸ್ ಪೆಟ್ಟು ಪ್ರಸನ್ನನಿಗೆ ಮಾತ್ರ ಮೀಸಲಾಗಿರುತ್ತ ಇತ್ತು. ಶನಿವಾರ ನಾನು ಧರಿಸುತ್ತಿದ್ದ ಬಿಳಿಯ ಯೂನಿಫಾರ್ಮಿನ ಮೇಲೆ ಇಂಕು ಸಿಡಿಸುವ ಯಾವ ಅವಕಾಶವನ್ನೂ ಪ್ರಸನ್ನ ಮಿಸ್ ಮಾಡಿಕೊಳ್ಳುತ್ತಲೇ ಇರಲಿಲ್ಲ. ಎಲ್ಲವೂ ಮುಗಿದುಹೋಗಿ ಇನ್ನೇನು ಕೂದಲು ಹಿಡಿದು ಜಗ್ಗಾಡುವ ಪರಿಸ್ಥಿತಿ ಬಂದಾಗ ಪಿ.ಟಿ. ಮೇಷ್ಟರಾಗಿದ್ದ ಲಿಂಗಮರಿಯಪ್ಪನವರು ಇಂಟರ್ಫಿಯರ್ ಮಾಡಿ ಸಂತಸದಿಂದ ನಮ್ಗಿಬ್ಬರಿಗೂ ಸರಿಸಮವಾಗಿ ತಪರಾಕಿಗಳನ್ನು ದಯಪಾಲಿಸುತ್ತಿದ್ದರು. ಪರೀಕ್ಷೆಗಳಲ್ಲಿ ನನಗಿಂತ ಆತನಿಗೆ ಅರ್ಧ ಅಂಕ ಜಾಸ್ತಿ ದೊರಕಿದರೂ ಟೀಚರೊಡನೆ ನನ್ನ ವಾಗ್ವಾದ ಆರಂಭವಾಗುತ್ತಿತ್ತು.

ಪ್ರಸನ್ನನ ತಂದೆ ಪೊಲೀಸು ಇಲಾಖೆಯಲ್ಲಿದ್ದವರು. ನಾವು ಆರನೇ ಕ್ಲಾಸಿನಲ್ಲಿರುವಾಗ ಅವರಿಗೆ ವರ್ಗಾವಣೆಯಾಯಿತು. ಡಿಸೆಂಬರಿನಲ್ಲಿ ಎಂದು ನೆನಪು. ಪ್ರಸನ್ನ ಇನ್ನು ಹೋಗುತ್ತಾನೆ ಎಂದು ಗೊತ್ತಾದಾಗಿಂದ ನಾವು ಜಗಳ ಆಡುವುದನ್ನೆ ಬಿಟ್ಟೆವು. ನನಗೆ ಒಂದೊಂದು ಸಾರಿ ಜಗಳ ಆಡಬೇಕು ಅನ್ನಿಸಿದರೂ ಪ್ರಸನ್ನನ ಸಪ್ಪೆಮುಖದಲ್ಲಿ ಆ ಹಳೆಯ ತುಂಟತನ ಕಾಣದೆ ಸುಮ್ಮನಾಗುತ್ತ ಇದ್ದೆ. ಶಾಲೆಗೆ ಟಿ.ಸಿ. ಇಸಿದುಕೊಳ್ಳಲು ಬಂದ ಪ್ರಸನ್ನನ ಅಪ್ಪ ಅವನನ್ನು ಕರೆದುಕೊಂಡು ಹೋಗುವ ಮುನ್ನ ನನ್ನನ್ನು ಹೊರಕರೆದು ಚೆನ್ನಾಗಿ ಓದಬೇಕೆಂದು ಹೇಳಿ ತಲೆಸವರಿ ಕಳಿಸಿದರು. ಅವರ ಪಕ್ಕದಲ್ಲಿ ಪ್ರಸನ್ನ ಹುಳ್ಳಗೆ ಕಣ್ಣುತುಂಬಿಕೊಂಡು ನಿಂತಿದ್ದ. ನಾನು ಆವರೆಗೆ ಹಿಂದಿ ಸಿನೆಮಾಗಳನ್ನು ಹಚ್ಚಿಕೊಂಡಿರಲಿಲ್ಲವಾದ್ದರಿಂದ ’ಹಾ ಪ್ರಸನ್ನಾ!!’ ಎಂದು ಮುಂತಾಗಿ ಕೂಗಿ ಅಳುವ ಅವಶ್ಯಕತೆಯೇನು ನನಗೆ ಕಾಣಲಿಲ್ಲ. 

ಆವತ್ತೇ ಕೊನೆ. ಆಮೇಲಿನಿಂದ ನಾನು ಪ್ರಸನ್ನನನ್ನು ನೋಡೇ ಇಲ್ಲ. ಅವರ ತಂದೆ ಆಗಾಗ ಊರಿಗೆ ಬರುತ್ತಿದ್ದವರು ಅಪ್ಪ ಅಮ್ಮನ ಬಳಿ ನನ್ನ ಓದಿನ ಬಗ್ಗೆ ವಿಚಾರಿಸುತ್ತಿದ್ದರಂತೆ. ಯಾವಾಗಲೋ ಪ್ರಸನ್ನ ಅಮ್ಮನಿಗೆ ಭೇಟಿಯಾಗಿದ್ದನಂತೆ. ’ಎಷ್ಟು ಎತ್ತರ ಆಗಿದಾನೆ!’ ಅಂದಿದ್ದರು ಅಮ್ಮ. ಪ್ರಸನ್ನನಿಗೆ ಇಂಜಿನಿಯರಿಂಗ್ ಸೀಟು ಸಿಕ್ಕಿದ್ದು ಗೊತ್ತಾಗಿ (ಪಿ.ಯು.ಸಿ.ಯಲ್ಲಿ ಧಿಮಾಕು ತೋರಿಸಿ ಸೈನ್ಸು ತೆಗೆದುಕೊಂಡು ಮ್ಯಾಥ್ಸಿನಲ್ಲಿ ಡುಮುಕಿ ಹೊಡೆಯುವುದರಿಂದ ಹೇಗೋ ಪಾರಾಗಿದ್ದ) ನನಗೆ ವಿಪರೀತ ಸಿಟ್ಟು ಬಂದಿತ್ತು. ದಾರಿಯಲ್ಲೆಲ್ಲೊ ಸಿಕ್ಕಿದ ಸೆಲೆಸ್ತೀನಳಿಗೆ ಹೇಳಿದರೆ “ಒಳ್ಳೇದಾಗಲಿ ಬಿಡು.” ಎಂದು ದೊಡ್ಡ ಹೆಂಗಸಿನ ಹಾಗೆ ಹೇಳಿ ಮನಸ್ಸಿಗೆ ಪಿರಿಪಿರಿ ಮಾಡಿದ್ದಳು.

ಒಂದರ ಹಿಂದೊಂದು ಸಾಲಾಗಿ ಬರುವ ಸೀನುಗಳ ನಡುವೆ ಇದೆಲ್ಲ ನೆನಪಾಯಿತು. ಅಲ್ಲ, ಪ್ರಸನ್ನ ಎಷ್ಟು ಸಾರೆ ಅವರಪ್ಪನ ಹಿಂದೆ ಊರುಬಿಟ್ಟು ಊರು ಸುತ್ತಿರಬಹುದು? ಆಗೆಲ್ಲ ಅವನಿಗೂ ಧೂಳು ಅಲರ್ಜಿ, ಜ್ವರಗಿರ ಆಗಿದ್ದಿರಬಹುದು. ಪ್ರತಿ ಸಾರಿ ಹೊಸ ಜಾಗ, ಹೊಸ ಶಾಲೆ, ಹೊಸ ಗೆಳೆಯರು, ಹೊಸ ಜಗಳ. ಹಿಂಸೆಯಾಗಿದ್ದಿರಬೇಕೊ ಏನೊ.

ಈಗ ಸೆಲೆಸ್ತೀನ್ ಪಿರೇರಾಳಿಗೆ ಮದುವೆಯಾಗಿ ಮಕ್ಕಳಾಗಿವೆ. ಬಿ.ಕೆ.ಪ್ರಸನ್ನ ಎಲ್ಲಿಯೋ ಎಂಜಿನಿಯರಾಗಿದ್ದಾನೆ. ನಾನು ಇಲ್ಲಿ ಬೆಂಗಳೂರಿನಲ್ಲಿ ಸಂಸಾರ ಹೂಡುವ ಹವಣಿಕೆಯಲ್ಲಿ ಸೀನು ಬರಿಸಿಕೊಂಡು ಇದನ್ನೆಲ್ಲ ಯೋಚಿಸಿಕೊಂಡು ಕೂತಿದ್ದೇನೆ.

ಚಿತ್ರಕೃಪೆ: www.copywriterscrucible.com

Advertisements

26 thoughts on “ಒಬ್ಬ ಜಗಳಗಂಟನ ನೆನಪು..ಆಆಹ್.. ಕ್ಷೀ…!!

 1. ಸುಧನ್ವ,
  🙂 ನೀವು ಹೇಳಿರೋದು ಕರೆಕ್ಟ್. ಆದರೆ ಒಂದು ಪುಟ್ಟ ಕರೆಕ್ಷನ್. ಇದನ್ನ ಮಾತ್ರಾ ಅಲ್ಲ, ಬಾಕಿ ಯಾವ ಪೋಸ್ಟನ್ನೂ ಬ್ಲಾಗಿಗೆ ’ತುಂಬಿಸೋಕೆ’ ನನಗೆ ಕಷ್ಟ ಅನ್ನಿಸಿಯೇ ಇಲ್ಲ!! ಎಲ್ಲಾದನ್ನೂ ಸುಲಭವಾಗಿಯೆ ಬರೆದು ಒಟ್ತಾ ಬಂದಿದೀನಿ. ನೀವು ಅದು ಹ್ಯಾಗೆ ಕಷ್ಟಪಟ್ಟು ಬ್ಲಾಗ್ ತುಂಬಿಸ್ತೀರೋ, ಅಥವ ಬ್ಲಾಗ್ ತುಂಬಿಸೋಕೆ ಯಾವ ಥರದ ’ಕಷ್ಟ’ಪಡಬೇಕೋ ಇದನ್ನೆಲ್ಲ ಸವಿವರವಾಗಿ ತಿಳಿಸಿ. ನನಗೆ ಆಸಕ್ತಿ ಇದೆ!!
  -ಟೀನಾ.

 2. ಬಹಳ ಸುಲಲಿತವಾದ ಬರಹ ಕಣೇ. ನಿನ್ನ ಕನ್ನಡ ಪದಗಳ ಬಳಕೆ ಇಷ್ಟವಾಯ್ತು. ಬಹಳ ಕಡಿಮೆ ಜನರಲ್ಲಿ ಇಂಥದನ್ನ ನೋಡಿದೇನೆ ನಾನು.
  ಒಳ್ಳೆ ಬಾಯಾರಿದಾಗ ತಣ್ಣಗಿನ ತಿಳಿ ನೀರು ಕುಡಿದಾಗ ಆಗುವ ಅನುಭೂತಿಯನ್ನ ಈ ‘ಏನೂ ಹೇಳದ’ ಫ್ಲ್ಯಾಶ್ ಬ್ಯಾಕಿನ ಬರಹ ಕಟ್ಟಿಕೊಟ್ಟಿತು.
  ಅಂತೂ ಮನೆ ಖಾಲಿ ಮಾಡಿ ಬ್ಲಾಗ್ ತುಂಬಿಸಿದೀಯ! ರೆಸ್ಟ್ ತೊಗೋ!!

 3. ಟೀನಾ ಮೇಡಂ,
  ನೀವು, ನಿಮ್ಮ ಆಪ್ತ ಗೆಳತಿ ಎಲ್ಲಾ ಹಿಂದಿನ ಜನ್ಮದಲ್ಲಿ ಯಾವುದೋ “ಜೂ”ನಲ್ಲಿ ವಾರಡನ್ ಆಗಿ ಪ್ರಾಣಿಗಳಿಗೆ ಕೊಡಬಾರದ ಹಿಂಸೆ ಕೊಟ್ಟಿದ್ದೀರಾ ಅನ್ನಿಸತ್ತೆ. ಅದಕ್ಕೆ ನಿಮಗೆ ಈ ಜನ್ಮದಲ್ಲಿ ಜಿರಳೆ,ಇಲಿಗಳ ಕಾಟ! ಬರಹ ಮಸ್ತ್ ಮಜವಾಗಿದೆ. ಈಗಲಾದರೂ ಇಲಿ, ಜಿರಳೆ ಇರುವ ಏರಿಯಾ ಬಿಟ್ಟು ಬೇರೆ ಕಡೆ ಮನೆ ಹುಡುಕಿ!

 4. ಟೀನಾ,

  ನಿಮ್ಮ ಈ ನೆನಪಿನ ಬರಹವನ್ನೋದಿ ನನಗೂ ನನ್ನ ಬಾಲ್ಯದ ಒಂದು ಘಟನೆ ನೆನಪಾಯಿತು. ಬೇಜಾರಾಗಬೇಡಿ ಅನ್ನುತ್ತಾ ಅದನ್ನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ 🙂

  ನಾನೂ ಆಗ ಐದನೆಯ ತರಗತಿಯಲ್ಲಿದ್ದೆ. ಆ ಶಾಲೆಯಲ್ಲಿ ಐದನೆಯ ತರಗತಿಯ ನಂತರ ಬೇರೆ ಶಾಲೆಗೆ ಹೋಗಬೇಕಾಗಿತ್ತು. ಮೂರನೆಯ ತರಗತಿಯಲ್ಲಿರುವಾಗ ಹೊಸ ಹುಡಗನೊಬ್ಬ ನನ್ನ ತರಗತಿಗೆ ಸೇರಿದ. ಅವನ ಹೆಸರು `ಅಲ್ತಫ್’ ಎಂದು. ಅದೇಕೋ ಕಾಣೆ ಅವನ ಮಂಗಾಟ, ಓದುವಿಕೆಯಲ್ಲಿ ಅವನು ತೋರುತ್ತಿದ್ದ ಉಡಾಫೆತನ, ಎಲ್ಲರ ಎದುರೂ ತಾನೊಬ್ಬ ದಾದಾನ ಹಾಗೆ ಫೋಸ್ ಕೊಡುತ್ತಿದ್ದುದನ್ನು ನೋಡಿ ನನಗೆ ತುಂಬಾ ಕಿರಿಕಿರಿ ಆಗುತ್ತಿತ್ತು. ಆಗ ನಾನು ಕ್ಲಾಸ್ ಲೀಡರ್ ಆಗಿದ್ದೆ.. ಬಿಡುವಿನ ವೇಳೆಯಲ್ಲಿ ಗಲಾಟೆ ಮಾಡುವ ಮಕ್ಕಳ ಹೆಸರನ್ನು ಬರೆದು ಟೀಚರಿಗೆ ಕೊಡುವ ಕೆಲಸ ನನ್ನದಾಗಿತ್ತು. (ನನಗೆ ಬಹಳ ಪ್ರೀತಿಪಾತ್ರ ಕೆಲಸವಾಗಿತ್ತು ಅದು.. ಇದರಿಂದಾಗಿ ಹೆಚ್ಚಿನ ಹುಡುಗ/ಹುಡುಗಿಯರು ನನ್ನ ಗೆಳೆತನವನ್ನು ಮಡೆಯಲು ಮುಂದಾಗಿದ್ದೌ ಕೂಡಾ 🙂 ) ನಾನಾಗ ಸುಮ್ಮಸುಮ್ಮನೆ ಅವನ ಹೆಸರು ಬರೆದುಕೊಟ್ಟು ಟೀಚರಿಂದ ಬೈಯಿಸುತ್ತಿದ್ದೆ.(ಈಗ ಎಣಿಸಿಕೊಂಡರೆ ತುಂಬಾ ಬೇಜಾರಾಗುತ್ತೆ)

  ಐದನೆಯ ತರಗತಿಯ ಕೊನೆಯ ದಿನ ಬಂದಾಗ ಆತ ನನ್ನ ಬಳಿ ಬಂದು..”ನೀನು ನನ್ನ ತುಂಬಾ ಚುಡಾಯಿಸಿದ್ದಿ. ಹೀಗೇ ಮಾಡಿದ್ದಕ್ಕೆ ತೂಫಾನ್ ಬಂದು ನಿನ್ನ ಹೊತ್ತೊಯ್ಯುವುದು ನೋಡು” ಎಂದು ಬಿಟ್ಟ. ನನಗಾಗ ಅಲ್ಪಸ್ವಲ್ಪ ಹಿಂದಿ ಬರುತ್ತಿತ್ತದರೂ ಈ ಉರ್ದು ಶಬ್ದವಾದ ತೂಫಾನ್ ಅರ್ಥವೇ ತಿಳಿದಿರಲಿಲ್ಲ! ರಾತ್ರಿಯೆಲ್ಲ ಅದನ್ನೇ ನೆನೆದು ಬೆಳಗಾಗುವಾಗ ಜ್ವರವೇ ಬಂದಿತ್ತು. ಕೊನೆಗೆ ಅಪ್ಪ ನನ್ನ ವಿಚಾರಿಸಿ, ತೂಫಾನ್ ಅಂದರೆ ಬಿರುಗಾಳಿ ಅಷ್ಟೇ ಭೂತವೇನಲ್ಲಾ ಎಂದು ಹೇಳೀದಾಗಲೇ ನಾನು ನಿರಾಳವಾಗಿದ್ದು.

  ಈಗಲೂ ನನಗೆ ನ್ಯೂಸ್ ನಲ್ಲಿ “ತೂಫಾನ್ ಕಿ ಸಂಭಾವನಾ ಹೈ” ಎಂದು ಹೇಳುವುದನ್ನು ಕೇಳಿದಾಗಲೆಲ್ಲಾ ಅಲ್ತಾಫ್ ನೆನಪಾಗುತ್ತಾನೆ. ಐದನೆಯ ತರಗತಿಯ ಕೊನೆಯದಿನವೇ ನಾನಾತನನ್ನು ಕೊನೆಯಬಾರಿ ನೋಡಿದ್ದು. ಪಕ್ಕದಲ್ಲೇ ಇದ್ದ ಆರನೆಯ ತರಗತಿಯ ಶಾಲೆಗೆ ಆತ ಬರಲೇ ಇಲ್ಲ!

 5. ಟೀನಾ…
  ಬರಹ ಇಷ್ಟವಾಯ್ತು. ಹೀಗೆಯೇ ಬಾಲ್ಯ ಒಂದಲ್ಲ ಒಂದುರೀತಿಯಲ್ಲಿ ನಮ್ಮನ್ನು ಹಿಂಬಾಲಿಸುತ್ತಿರುವ ನೆನಪು ಸದಾ…ಅಲ್ಲವೆ?
  ನಿಮ್ಮ ಶಾಲಾದಿನಗಳ ಬಗ್ಗೆ ಓದಿ ನನ್ನ ಶಾಲಾದಿನಗಳೂ ನೆನಪಾದವು. 🙂

 6. ಮೊನ್ನೆ ಮೊನ್ನೆ ದೆಹಲಿಯಲ್ಲಿ ಹಳೆ ಮನೆ ಬದಲಾಯಿಸಿ ಹೊಸ ಮನೆಗೆ ಶಿಫ್ಟ್ ಆದ ಮೇಲೆ ಮತ್ತೆ ಏನೋ ಮರೆತಂತಾಗಿ ಮರಳಿ ಹೋದೆ.

  ೧. ಶಾರದಾ ಕ್ಯಾಲೆಂಡರ್ (ಗೋಡೆಯ ಮೇಲೆ)
  ೨. ಕನ್ನಡ ಸಂಘದ “ಅಭಿಮತ” ಜುಲೈ ಸಂಚಿಕೆ
  ೩. ದೆಹಲಿ ಜಿ ಎಸ್ ಬಿ ಸಮಾಜದ ಮೀಟಿಂಗ್ ನೋಟೀಸ್

  ಇವೆಲ್ಲ ಅಲ್ಲಿ ಇದ್ದವು. ಮನೆ ಖಾಲಿ ಹೊಡೆಯುತ್ತಿದ್ದರೂ ಮೇಲಿನ ಮೂರು ವಸ್ತುಗಳು ಈ ಮನೆಯಲ್ಲಿ ಯಾರು ವಾಸ ಮಾಡುತ್ತಿದ್ದರು ಅನ್ನುವುದನ್ನು ಸಾರಿ ಹೇಳುತ್ತಿದ್ದವು.

  ನಿಮ್ಮ ಬರಹ ಅದನ್ನು ಮತ್ತೆ ನೆನಪು ಮಾಡಿತು.

 7. ನಿಮ್ ಮುಂದಿನ ಪೋಸ್ಟ್ನಿನಲ್ಲೇನಾದ್ರೂ ಸೀನುವ ಸೀನ್ ಇದ್ರೆ ಮೊದ್ಲೆ ಹೇಳಿಬಿಡಿ. ಇನ್ನು ನಾನು ಹುಷಾರಾಗಿರ್ತೀನಿ. ಕರ್ಚೀಫ್ ಇಟ್ಕೊಂಡೆ ನಿಮ್ ಪೋಸ್ಟ್ ಓದೋದ್ ಇನ್ನು ನಾನು 🙂

 8. ಹೈ,

  ಮೊದಲ ಬಾರಿಗೆ ನಿಮ್ಮ ಬ್ಲಾಗ್ ನೋಡುತ್ತಿದ್ದೇನೆ. ತುಂಬಾ ಖುಷಿಯಾಯಿತು 🙂
  ಸಮಯ ಸಿಕ್ಕರೆ ನನ್ನದನ್ನೂ ಓದಿ… ನಾನು ಈ ಬ್ಲಾಗು ಪ್ರಪಂಚಕ್ಕೆ ತುಂಬಾ ಹೊಸಬಳು. ಓದಿ ನಿಮ್ಮ ಅನಿಸಿಕೆ ತಿಳಿಸಿ.

 9. ಆಹ್! ಚೆನ್ನಾಗಿದೆ. ಪ್ರಸನ್ನ ಶಾಲೆ ಬಿಟ್ಟು ಹೋಗುವಾಗ ಹಿಂದೆ ಸಿನಿಮಾ ಥರ ನಿಮಗೆ ಹಾ ಪ್ರಸನ್ನ ಅಂತ ಅಳಬೇಕು ಅನ್ನಿಸದಿದ್ದರೂ, ಕನ್ನಡ ಸಿನಿಮಾ ಥರ ನಿಮ್ಮೀ ಬ್ಲಾಗು ಓದಿ ಆ ಪ್ರಸನ್ನ ನಿಜವಾಗಿಯೂ ಪ್ರಸನ್ನ ಚಿತ್ತನಾಗಿ, ಹಳೆ ನೆನಪಿನಿಂದ ಮತ್ತನಾಗಿ ಬಂದು ನಿಮ್ಮನ್ನು ಕಾಣಲಿ…
  ಲೇಖನ ಅಥವಾ ಕತೆ ಚೆನ್ನಾಗಿತ್ತು…

 10. Naan Helbekaagirodanna Illi Yaaru Helilla..So ivarigella Tumbaane thyaaanksu..:) Full Odida Mele Nanagannisiddu Neevyaake illivargu Ondu Sala Haaage SUmmmane anthaaralla? hagaadru Betti aaglikke prayatnisillla? nimge Hale nenapu KaaDolva? Sumne Tamaashegaadru Prasanna no athava avanu Maduveyaagidre avana Makkalanno Kaaleledu Bandu Bidodalva?..Hangella Olle Geletanagalanna Mismaadkobaardu Teena mem alva?..Nodi nanassu maadipa…

  Matte Ulidante edanna 3 saarti Odikonde..Helida reethi asht channagittu nimma Yella barahagalante ne…

  Nim
  somu

 11. ಹಮ್ಮ್…… ಶಾಲೆಯ ದಿನಗಳ ಕಿತಾಪತಿಗಳ ನೆನಪಾಯಿತು, ನಿಮ್ಮ ಲೇಖನ ಓದಿ..
  ನೆನಪುಗಳು.. ಸವಿ ನೆನಪುಗಳು
  ಬಂದಾಗ ಬೇಸರವಾಗುವುದು..
  ಆ ದಿನಗಳು.. ಆ ಕ್ಷಣಗಳು..
  ಇನ್ನಿಲ್ಲವೆಂದು!

  ನೆನಪುಗಳು.. ಕಹಿ ನೆನಪುಗಳು
  ಬಂದಾಗ ಸಂತಸವಾಗುವುದು..
  ಆ ದಿನಗಳು.. ಆ ಕ್ಷಣಗಳು..
  ಇನ್ನಿಲ್ಲವೆಂದು!

  ನಿಮ್ಮ ಮೇಲಿನ ನೆನಪುಗಳು ಸವಿ ನೆನೆಪುಗಳೋ, ಕಹಿ ನೆನಪುಗಳೋ, ತಿಳಿಯದು… ತಿಳಿಸಿದರೆ ಸಂತೋಷ! 🙂

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s