ಈ ಬುಧವಾರ, ಗುರುವಾರ ಮತ್ತು ಶುಕ್ರವಾರ ನಮ್ಮ ಭಾರತೀಯ ಇತಿಹಾಸದಲ್ಲೆ ಅತ್ಯಂತ ಕರಾಳ ದಿನಗಳು ಅನ್ನಿಸಿಕೊಂಡವು. ನಿನ್ನೆ ಗುರುವಾರದ ಸುದ್ದಿ ಚ್ಯಾನೆಲುಗಳಲ್ಲಿ ಮುಂಬಯಿಯ ಹೆಮ್ಮೆಗಳಲ್ಲೊಂದಾದ ತಾಜ್ ಹೊತ್ತಿ ಉರಿಯುವುದನ್ನು, ಛತ್ರಪತಿ ಶಿವಾಜಿ ಟರ್ಮಿನಸ್ಸಿನಲ್ಲಿ ನಮ್ಮ ಮಕ್ಕಳ ರಕ್ತ ನೀರಿನ ಹಾಗೆ ಹರಿದಿರುವುದನ್ನು, ಲಿಯೋಪಾಲ್ಡ್ ಕೆಫೆಯ ಗೋಡೆಗಳಲ್ಲಿ ತತ್ತರಬಿತ್ತರ ಹರಡಿದ ಗುಂಡಿನ ಗುರುತುಗಳನ್ನು, ನರಿಮನ್ ಹೌಸಿನ ಕಿಟಕಿಗಳ ಮುರಿದ ಗಾಜುಗಳ ಹಿಂದಿನ ಆತಂಕವನ್ನು, ಒಬೆರಾಯ್ ಟ್ರಿಡೆಂಟಿನ ಗಾಂಭೀರ್ಯ ಭೀತಿಗೆಡೆಮಾಡಿಕೊಟ್ಟಿರುವುದನ್ನು ನನ್ನ ಕರ್ಮವೆಂಬ ಹಾಗೆ ನೋಡುತ್ತ ಕುಳಿತಿದ್ದೆ. ಮಧ್ಯಕ್ಕೆ ಸಿಲ್ಲೀ ಪ್ರಶ್ನೆಗಳನ್ನು ಕೇಳುತ್ತ ಅಸಂಬದ್ಧ ಕಮೆಂಟರಿ ಉದುರಿಸುತ್ತಿದ್ದ ಟಿವಿ ವರದಿಗಾರರ ಮೇಲೂ ಸಿಟ್ಟು ಬರದಷ್ಟು ಮೆದುಳಿಗೆ ಗರಬಡಿದಂತಾಗಿತ್ತು. ಆದರೆ ಈವತ್ತು ಬೆಳಗ್ಗೆ..
ಜನರ ಮೇಲೆ ಬುಲೆಟು ಸಿಡಿಸುವಾಗ, ಗ್ರೆನೇಡು ಎಸೆಯುವಾಗ ನಗುತ್ತಿದ್ದ, ಬೈಗುಳ ಸುರಿಸುತ್ತಿದ್ದ, ಮಕ್ಕಳು, ಹೆಂಗಸರು, ಕೊನೆಗೆ ನಾಯಿಗಳನ್ನೂ ಬಿಡದ, ಯಾವುದಾದರು ಕಾಲೇಜಿಗೆ ಹೋಗುವ ಹುಡುಗನ ಥರದ ಈ ಕೋಲ್ಡ್ ಬ್ಲಡೆಡ್ ಆತಂಕವಾದದ ಹೊಸ ಚಹರೆ ನನ್ನಲ್ಲಿ ನಡುಕ, ಕೋಪ ಎರಡನ್ನೂ ಹುಟ್ಟಿಸಿತು. ಭೊರೆಂದು ಬಿಕ್ಕಿಬಿಕ್ಕಿಅ ಳುತ್ತಲೆ ಇಡ್ಡೇನೆ.. ಏನಾಗುತ್ತ ಇದೆ ಇದೆಲ್ಲ? ಇಷ್ಟು ಸುಲಭವಾಗಿ ಹೇಗೆ ನುಗ್ಗಿಬಂದರು ಅವರು? ಅನ್ಯಾಯವಾಗಿ ಬಲಿಯಾದ ಪೊಲೀಸು ಪಡೆಯ ಸಮರ್ಥ ಆಫೀಸರುಗಳ ಕೊರತೆಯನ್ನು ದೇಶಕ್ಕೆ, ಅವರ ಕುಟುಂಬಗಳಿಗೆ ಯಾರು ತುಂಬಿಕೊಡುತ್ತಾರೆ? ಸತ್ತ ಕಂದಮ್ಮಗಳು, ಮಕ್ಕಳು ಏನು ಅನ್ಯಾಯ ಮಾಡಿದ್ದವು? ಎಷ್ಟು ಮನೆಗಳ ದೀಪಗಳು ಆರಿದವೊ? ಏನು ಮಾಡಬೇಕು ನಾವು? ಯಾಕೆ ಹೀಗಾಯಿತು ಮಾರಣಹೋಮ? ಮತ್ತೆ ಇದನ್ನು ರಾಜಕಾರಣಿಗಳು ತಮ್ಮ ವೋಟುಬ್ಯಾಂಕ್ ತುಂಬಲು ಬಳಸುತ್ತಾರೆ. ಒಂದಿಷ್ಟು ಸೈಕೊಪಾತಿಕ್ ಕೊಲೆಗಾರರಿಂದ ಒಂದಿಡೀ ಕೋಮಿನ ಜನ ಪ್ರತಿದಿನವೂ ಭೀತಿಯಲ್ಲಿ ಜೀವನ ಸಾಗಿಸಬೇಕಾಗಿ ಬರುತ್ತದೆ. ಸುಮ್ಮನೆ ಹಿಂಸೆ ಬೆಳೆಯುತ್ತದೆ. ಭಯೋತ್ಪಾದನೆ ಅಟ್ಟಹಾಸದಲ್ಲಿ ಜೀವನಕ್ಕೆ ಬೆಲೆಯೇ ಇಲ್ಲದಾಗುತ್ತದೆ..
ನನ್ನ ಪದಗಳು ಧೃತಿಗೆಟ್ಟು ಕೂತಿವೆ. ಕೊಂಚಕೊಂಚವಾಗಿ ಎಲ್ಲವನ್ನೂ ಬಾಚಿ ಒಟ್ಟುಮಾಡಿಕೊಂಡು ಪ್ರತಿಭಟಿಸುತ್ತಿದ್ದೇನೆ. ಇದು ನಮಗೆ ಬೇಡ. ಇನ್ನು ಹೆಚ್ಚಿಗೆ ನೋಡಲಾಗದು. ಇದು ಕೂಡದು.
ಚಿತ್ರಕೃಪೆ: www.graphics8.nytimes.com
ಟೀನಾ ಅವರೇ,
ನೀವು ಹೇಳಿದ್ದು ಅಕ್ಷರಶಃ ನಿಜ.. ರಾತ್ರಿಯಿಡೀ ನಿದ್ದೆ ಬರಲಿಲ್ಲ.. ಬಂದ ಜೊಂಪಿನಲ್ಲೂ ಗುಂಡಿನ ಸದ್ದು… ಇಷ್ಟು ದಿನ ಅಪ್ಯಾಯಮಾನವಾಗಿದ್ದ ಕೆಂಪು ಬ್ಲಾಂಕೆಟ್ ಇವತ್ತಿಗಾಗಲೇ ರಕ್ತದ ಬಣ್ಣ ಎನಿಸಹತ್ತಿದೆ… ಸುಮ್ಮನೇ ಕೂತು ಟೀವಿಯಲ್ಲಿ ನೋಡುವುದರ ಹೊರತು ಏನೂ ಮಾಡಲಾರೆವು ಎಂಬ ಸತ್ಯ ಇಂಥ ಸಂದರ್ಭಗಳಲ್ಲಿ ತುಂಬಾ ನೋವು ಕೊಡುತ್ತದೆ. ಮನಸಿನ ತುಂಬಾ ಅದೇ ಚಿತ್ರವಿದ್ದರೂ ಹೆಚ್ಚು ಬರೆಯಲು ಸಾಧ್ಯವಾಗುತ್ತಿಲ್ಲ.. ಕಣ್ಣ ಕಂಬನಿ ಮುತ್ತು ಹೆಪ್ಪುಗಟ್ಟಿಹುದು..
ನಿಮ್ಮ ಬರಹದಲ್ಲಿ ಮಡುಗಟ್ಟಿರುವ ನೋವು ನಮ್ಮ ಹೃದಯದ ಭಾವಗಳಿಗೆ ಜೀವ ಕೊಟ್ಟಂತಿದೆ. ನಿಜ, ಕೆಲವು ಸೈಕೊಪಾತ್ ಗಳ ಕೃತ್ಯಕ್ಕೆ ಇಡೀ ಕೋಮಿನ ಜನಗಳು ಭಯದ ನೆರಳಲ್ಲಿ ಬದುಕಬೇಕಿದೆ. ಎಲ್ಲಕ್ಕಿಂತ ಮೊದಲು ನನ್ನಲ್ಲಿ ಮೂಡಿದ ಪ್ರಶ್ನೆಗಳು ಇಂತಹ ಪ್ರತಿಷ್ಟಿತ ಹೋಟೆಲ್ ಗಳ ಒಳಗೆ ಅವರಿಗೆ ಪ್ರವೇಶ ಹೇಗೆ ಸಿಕ್ಕಿತು? ಅಷ್ಟೊಂದು ಶಸ್ತ್ರಾಸ್ತ್ರಗಳ ಜೊತೆ.ಪತ್ರಿಕೆಗಳಲ್ಲಿ ಟೀವಿ ಚಾನೆಲ್ ಗಳಲ್ಲಿ ಗನ್ ಹಿಡಿದ ಉಗ್ರನ ಚಿತ್ರವನ್ನು ಹೀರೋನನ್ನು ತೋರಿಸುವಂತೆ ತೋರಿಸುತ್ತಿವೆ.ಇಷ್ಟೆಲ್ಲಾ ಕಾರ್ಯಾಚರಣೆಯಾದರೂ ನಮ್ಮವರು ಹಿಡಿದಿರುವ ಅಥವಾ ಕೊಂದ ಉಗ್ರಗಾಮಿಗಳ ಸಂಖ್ಯೆ ಎರಡಂಕಿಯ ಸಂಖ್ಯೆಯನ್ನು ಮೀರಿಲ್ಲ. ಎಲ್ಲಕ್ಕಿಂತ ದುಃಖದ ಸಂಗತಿ ರಾಜಕಾರಣಿಗಳು ಇದನ್ನು ವೋಟ್ ಬ್ಯಾಂಕಿಗೆ ಬಳಾಸಿಕೊಳ್ಳಲು ತುದಿಗಾಲಲ್ಲಿ ನಿಂತಿರುವುದು.
ಟೀನಾ,
ಸಾಮಾನ್ಯ ಪ್ರಜೆಗಳಾದ ನಮ್ಮ ಕಣ್ಣಿಗೆ ಕಾಣುವದು ರಕ್ತ. ಮನಮೋಹನ ಸಿಂಗರ ಕಣ್ಣಿಗೆ ಕಾಣುವದು ವೋಟು. ಅಂದ ಮೇಲೆ ನಾವು ಅನುಭವಿಸಲೇ ಬೇಕು.
ಟೀನಾ,
ಮನದಂತೆ ಪದಗಳೂ ಮರಗಟ್ಟಿವೆ..
ಯಾರಿಗೆ ಬೇಕಂದರೆ ಅವರಿಗೆ ವೋಟು ನೀಡುತ್ತೇವೆ.. ಇಂಥ ಸಮಯದಲ್ಲಿ ದಯವಿಟ್ಟು ರಾಜಕೀಯ ಮಾಡಬೇಡಿ ಎನ್ನುವಷ್ಟು ಮನಸ್ಸು ದುರ್ಬಲವಾಗಿದೆ.
ಭಾರತದ ಇಂಟೆಲಿಜೆನ್ಸ್ ಇಷ್ಟು ನಿರ್ವೀರ್ಯವಾಗಿದೆಯೆ?
ಮರುಕೋರಿಕೆ (Pingback): ಜವಾಬ್ದಾರಿಯುತ ಮನುಷ್ಯರು ಸಾಕಷ್ಟಿದ್ದಾರೆ… « ಓ ನನ್ನ ಚೇತನಾ…
ಟೀನಾ
ನಿಮ್ಮ ಬರಹಕ್ಕೆ ಬಂದ ಪ್ರತಿಕ್ರಿಯೆಯಲ್ಲಿ ರಂಜಿತ್ ರವರು ನೋವಿನಿಂದ ಬರೆದ ಮಾತಿಗೆ ಪ್ರತಿಕ್ರಿಯಿಸುತ್ತಿದ್ದೇನೆ. ಟಿವಿಯಲ್ಲಿ ಮುಂಬಯಿ ದುರಂತಕ್ಕೆ ಕಾರಣವಾದ ನಮ್ಮ ವ್ಯವಸ್ಥೆಯ ಬಗ್ಗೆ ಒಂದು ಸಂದರ್ಶನ ನೋಡುತ್ತಿದ್ದೆ. ಬೆಂಕಿ, ಹೊಗೆಯುಗುಳುತ್ತಿದ್ದ ತಾಜ್ ನೊಳಗೆ ನುಗ್ಗುವ ನಮ್ಮ ಕಮ್ಯಾಂಡೋಗಳಿಗೆ ಕನಿಷ್ಟ ಬೆಂಕಿ ಹೊಗೆಯಿಂದ ರಕ್ಷಿಸಿಕೊಳ್ಳಲು ಮುಖಕ್ಕೆ ಹಾಕಿಕೊಳ್ಳುವ ಮಾಸ್ಕ್ ಸಹ ಇಲ್ಲ ಎಂಬ ಸತ್ಯಾಂಶವನ್ನು ಮುಂದಿಟ್ಟರು. ಇನ್ನು ಇಂಟೆಲಿಜೆನ್ಸ್ ವಿಷಯಕ್ಕೆ ಬಂದರೆ ಅವರು ಈ ಬಗ್ಗೆ ತಿಳಿಸಿದ್ದರೂ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿದೆ ಎಂಬುದಾಗಿ ಪತ್ರಿಕೆಗಳಲ್ಲಿಯೇ ವರದಿಯಾಗಿದೆ.ಒಟ್ಟಿನಲ್ಲಿ ನಮ್ಮ ದೇಶದಲ್ಲಿ ಜಾತಿ, ಮತ ರಾಜಕಾರಣ ಮಾಡುವ ರಾಜಕಾರಣಿಗಳೇ ಸುಪ್ರೀಂ ಪವರ್.
ಇದೇ ಬುಧುವಾರ ಸಾಯಂಕಾಲ ೬ ಗಂಟೆಗೆ ಇದೇ ತಾಜ್ ಹೋಟೆಲಿನ ಎದುರಿನಲ್ಲಿರುವ “ಗೇಟ ವೇ ಅಫ್ ಇಂಡಿಯಾ” ಬಳಿ ನಾವೆಲ್ಲ ಸೇರಿ ನಮ್ಮನ್ನಾಳುವವರನ್ನು ಕೇಳುವವರಿದ್ದೆವೇ, “ನಮ್ಮ ಜೀವದ ಬೆಲೆ ಎಷ್ಟು?”..
ನೀವು ಬರುತ್ತಿರಲ್ಲಾ, ನಾವಿಗ ಎಚ್ಚೆತ್ತಿದ್ದೆವೆ, ಮತ್ತೆ ಹೋಸ ಮಾದರಿಯಾಗಬೇಕಾಗಿದೆ ನಮಗೆ, ನಮ್ಮ ಸಹನೆಯ ಕಟ್ಟೆ ಒಡೆದಿದೆ. ನಾವಿನ್ನು ಬಯೊತ್ಪಾದಕರನ್ನು ಮತ್ತು ನಮ್ಮ ರಾಜಕಾರಣಿಗಳನ್ನು ಪ್ರತಿಸಲದಂತೆ ನಮ್ಮ ಜೀವ ತೆಗೆದುಕೊಂಡು ಹೋಗಲು ಬಿಡುವುದಿಲ್ಲ. ಎನಾದರೂ ಮಾಡಬೇಕಾಗಿದೆ, ನಾವಿಗ ಸುಮ್ಮನಿರುವುದಿಲ್ಲ ಎಂದು ತಿಳಿಸಬೇಕಾಗಿದೆ, ನಮ್ಮ ನಾಯಕರಿಗೆ, ನಮ್ಮನ್ನಾಳುವವರಿಗೆ, ನಮ್ಮ ರಾಜಕಾರಣಿಗಳಿಗೆ ನಮ್ಮ ಸಿಟ್ಟು, ಅವರ ಮೇಲಿರುವ ನಮ್ಮ ಬೇಸರ ತಿಳಿಸಬೇಕಾಗಿದೆ, ನಾವಿಗ ತೋರಿಸಬೇಕಾಗಿದೆ ನಾವೆಷ್ಟು ನೊಂದಿದ್ದೆವೆ, ನಮ್ಮ ಸಹನೆ ತಿರಿಹೋಗಿದೆ. ಈಗ ನಮ್ಮ ಕೋಪ, ಸುಸ್ತು, ನಿರಾಶೆ ಎಲ್ಲವನ್ನು ನಮ್ಮನ್ನಾಳುವರಿಗೆ ತೋರಿಸಬೇಕಾಗಿದೆ.
ಅದಕ್ಕಾಗಿ ಇದೇ ಬುಧುವಾರ, ದಿಸೆಂಬರ್ ೩ರ ಸಾಯಂಕಾಲ ೬ ಗಂಟೆಗೆ “ಗೇಟ ವೇ ಅಫ್ ಇಂಡಿಯಾ” ಬಳಿ ನಾವೆಲ್ಲ ಸೇರಲಿದ್ದೆವೆ, ನಮ್ಮ ಹಕ್ಕನ್ನು ಕೇಳಲು, “ಹೆದರಿಕೆ ಇಲ್ಲದೇ ಬದುಕುವ” ಹಕ್ಕಿಗಾಗಿ. ನಮ್ಮೆಲ್ಲರ ಬದುಕಿಗಾಗಿ ನಮ್ಮ ಬಳಿ ಒಂದು ಸಂಜೆಯಿಲ್ಲವೇ?
Right to LIVE fearlessly. Lets devote one evening of our life to it.
ಕಾಯುವೆ ನಿಮಗಾಗಿ, ಹೋರಾಡಲು ಕೈ ಹಿಡಿದು…
ಪ್ರೀತಿಯಿರಲಿ
ಶೆಟ್ಟರು, ಮುಂಬಯಿ
ಇವತ್ತು ಪತ್ರಿಕೆಯಲ್ಲಿ ಒಂದು ಸುದ್ದಿ ಇತ್ತು. ಕಮ್ಯಾಂಡೋಗಳಿಗೆ ಕೊಟ್ಟಿದ್ದ ಬುಲೆಟ್‌ಪ್ರೂಫ್ ಜ್ಯಾಕೆಟ್ ತುಂಬಾ ಕಳಪೆಯಾಗಿತ್ತಂತೆ… ಅದನ್ನು ಓದುತ್ತಿದ್ದಂತೆ ಚೀನಾ ಯುದ್ಧದ ಸಂದರ್ಭದಲ್ಲಿ ಸೈನಿಕರಿಗೆ ಕನಿಷ್ಟ ಹಿಮದ ಮೇಲೆ ಪ್ರತಿಫಲಿಸುವ ಸೂರ್ಯ ಕಿರಣಗಂದ ರಕ್ಷಣೆ ಕೊಡೋ ಕನ್ನಡಕ ಕೂಡಾ ಲಭ್ಯವಿಲ್ಲದ ಅವಸ್ಥೆಯನ್ನು ಹಿಮಾಲಯನ ಬ್ಲಂಡರ್‌ನಲ್ಲಿ ಓದಿದ್ದು ನೆನಪಾಯ್ತು… ಅದು ೧೯೬೨ರ ಮಾತು… ಇದು ೨೦೦೮ರ ಕೊನೆ… ಎಲ್ಲಿ ಬದಲಾಗಿದೆ ನಮ್ಮ ವ್ಯವಸ್ಥೆ…. ನಾವು ಚಂದ್ರನ ಮೇಲೆ ಹೋದೆವು… ಮುಂದುವರಿದೆವು…ಅಂತ ಹೆಮ್ಮೆ ಪಡೋದೋ…ಅಥವ ದೇಶಕ್ಕಾಗಿ ಪ್ರಾಣ ಪಣ ಒಡ್ಡಿ ಹೋರಾಡುವ ಸೈನಿಕನ ದುಸ್ಥಿತಿಗೆ ಸಂಬಂಧಿಸಿದಂತೆ ಇನ್ನೂ ಅಲ್ಲೇ ಇದ್ದೇವೆ ಅಂತ ಮರುಗುವುದೋ ಅರ್ಥವಾಗುತ್ತಿಲ್ಲ.
ಪಾಪ ಯೋಧರು… ಪಾಪಿ ರಾಜಕಾರಣಿಗಳು
ಇದನ್ನು ಬದಲಿಸೋದು ಹ್ಯಾಗೆ… ಕನಿಷ್ಟ ಅದನ್ನು ವಿರೋಧಿಸಿ ನಮ್ಮ ಪ್ರತಿಭಟನೆ ತೋರಿಸೋದನ್ನದ್ರು ನಾವು ಮಾಡ್ಬೇಕಲ್ವಾ?