ಡಿಸೆಂಬರ್ ಮೆಲುಕುಗಳು

pic-solan-women20in20fog1

‘ಬೂಹೂ!’ ಎಂದು ಆಕೆ ಅಳುತ್ತ ಇದ್ದಳು ಮತ್ತು ಆಕೆಯನ್ನು ನೋಡುತ್ತ ನನಗೆ ಯಾಕೊ ನಗೆ ಉಕ್ಕಿ ಉಕ್ಕಿ ಬರುತ್ತ ಇತ್ತು. ಆಕೆಯ ಹುಡುಗ ಕಾಣಲು ಬರುತ್ತೇನೆ ಎಂದು ಹೇಳಿ ಕೈಕೊಟ್ಟಿದ್ದ. ನನಗೆ ಈ ಥರದ ‘ಸೊರಬರ’ ಪ್ರಸಂಗಗಳು ಇತ್ತೀಚೆಗೆ ಹೆಚ್ಚಾಗಿ ಮುಜುಗರ ಬರಿಸುತ್ತವೆ. ಟಿಶ್ಯೂ ಪೇಪರಿನ ಬಾಕ್ಸು ಆಕೆಯ ಕೈಗಿತ್ತು ನೋಡಿದೆ. ಉಹೂಂ. ಧಾರೆ ಜೋರಾಗಿ ಉಕ್ಕಲಾರಂಭಿಸಿತೆ ವಿನಃ ಕಡಿಮೆಯಾಗುವ ಹಾಗೆ ಕಾಣಲೆ ಇಲ್ಲ. ಒಂದು ಲೋಟ ನೀರು. ಒಳ್ಳೆಯ ಮದ್ದು. ‘ಮುಖ ತೊಳಕೋ, ಫ್ರೆಶ್ ಅನ್ಸತ್ತೆ’ ಎಂದು ಎದ್ದು ಹೋಗಿ ಎರಡು ಕಪ್ ಬಿಸಿಬಿಸಿ ಟೀ ಮಾಡಿಕೊಂಡು ಬಂದೆ. ಆಕೆ ಅಳಿಸಿಹೋಗಿದ್ದ ಐಲೈನರು ಹಚ್ಚಿಕೊಳ್ಳುತ್ತ ಇದ್ದಳು. ಆಕೆಯ ಕಣ್ಣ ರೆಪ್ಪೆಗಳ ಉದ್ದಕ್ಕು ಹಾವಿನಂತೆ ಹಬ್ಬಿದ್ದ ಕರಿಯ ಗೆರೆಯನ್ನೆ ನೋಡುತ್ತ ನಿಂತೆ. ‘ಅಳು ಎಂದರೆ ಅಳಿಸಿಹೋದ ಐಲೈನರು’ ಅನ್ನಿಸಿ ಮತ್ತೆ ನಗು ಉಕ್ಕಿತು. ಟೀ ಕುಡಿದು ‘ಹೊರಡ್ತೀನಿ. ಆಫೀಸಿಗೆ ಹೋಗ್ಬೇಕು.’ ಎಂದು ಹೊರಟಳು. ಆಕೆಯ ದುಃಖ ಆಫೀಸಿನ ಮೆಟ್ಟಿಲು ಹತ್ತುವವರೆಗಷ್ಟೆ ಸೀಮಿತವಾಗಿರುವುದೆ ಎಂದು ಯೋಚನೆ ಮಾಡಿದೆ.

ಚಳಿಗಾಳಿ ಮುಖಕ್ಕೆ ರಾಚಿತು. ಕಿಟಕಿ ಮುಚ್ಚಿದೆ. ಮನೆಗಳು ಬೆಚ್ಚಗಿರಬೇಕು. ಅಪ್ಪ ಚಳಿಗಾಲದಲ್ಲಿ ಬೆಳಜಾವ ತಾನೆದ್ದ ಮೇಲೆ ತನ್ನ ಕಂಬಳಿಯನ್ನು ನಮಗೆ ಹೊದಿಸಿ ಹೋಗುತ್ತ ಇದ್ದರು. ನಾವು ತಲೆಪೂರ್ತಿ ಕಂಬಳಿ ಹೊದ್ದು ಅದರೊಳಗೆ ಹೊಡೆದಾಟ ನಡೆಸುತ್ತ ಇರುತ್ತಿದ್ದೆವು. ನೀರೊಲೆಗೆ ಉರಿ ಹಾಕಿ ನಮ್ಮನ್ನೆಬ್ಬಿಸಿದ ಮೇಲೆ ನಾವು ಮಂಕಿಕ್ಯಾಪು ಹಾಕಿಕೊಂಡು ಅಂಗಳದಲ್ಲಿ ಬೀಳುತ್ತಿದ್ದ ಮಂಜು ನೋಡುತ್ತ ಉಫ್ ಉಫ್ಫೆಂದು ಊದಿ ನಮ್ಮ ಬಾಯಿಂದ ಬರುವ ಹಬೆಯನ್ನು ನೋಡುತ್ತ ನಾವು ಸಿಗರೇಟು ಸೇದುತ್ತಿದ್ದೇವೆಂದು ಭಾವಿಸಿಕೊಂಡು ಸಂತಸಪಡುತ್ತಿದ್ದೆವು. ಆಮೇಲೆ ತೆಂಗಿನಸಸಿಗಳಿಗೆ ನೀರು ಹಣಿಸಬೇಕು. ಅದೆಲ್ಲ ಆದಮೇಲೆ ಸ್ನಾನ, ತಿಂಡಿ, ಸ್ಕೂಲು.. ನಮ್ಮ ದಿನಕ್ಕೊಂದು ಲಯಬದ್ಧತೆಯಿತ್ತು. ತುಂಟತನ ಮೇರೆಮೀರಿದರೆ ಬೀಳುವ ಏಟುಗಳಿಗೆ ನೋವಾಗಿ ಅಳು ಬರುತ್ತಿತ್ತೆ ವಿನಃ ದುಃಖ ಅಂದರೆ ಏನೆಂದು ನಮಗೆ ಗೊತ್ತೇ ಇರಲಿಲ್ಲ. ಕಾಲೇಜಿನಲ್ಲಿ ಗೆಳತಿಯರೆಲ್ಲ ‘ನೀನು ಯಾಕೆ ಅಳೊಲ್ಲ?’ ಎಂದು ಕೇಳಿದರು ನಕ್ಕುಬಿಡುತ್ತ ಇದ್ದೆ.

ಮೊನ್ನೆ ಸಂಜೆ ಯಾಕೊ ಸ್ವೆಟರು ಹಾಕಲು ಕೇಳದೆ ಮೊಂಡಾಟ ಮಾಡುತ್ತ ಇದ್ದ ಮಗಳ ಮೇಲೆ ರೇಗಿದೆ. ದುಃಖಿಸೀ ದುಃಖಿಸೀ ಅತ್ತಳು. ‘ನೀನು ನಂಗೆ ಬೈದ್ರೆ ನಾನು ತುಂಬಾ ಅಳ್ತೀನಿ. ಮನೇ ಬಿಟ್ಟು ಚಿಕ್ಕಪ್ಪನ ಮನೆಗೆ ಹೋಗ್ತೀನಿ.’ ಅಂದಳು. ನನಗೆ ತಲೆಯ ಮೇಲೆ ಪಟ್ಟನೆ ಬಾರಿಸಿದ ಹಾಗಾಗಿ ಸುಮ್ಮನೆ ಕೂತೆ. ಏನು ಹೇಳಲಿ ಇಂಥ ಮಗುವಿಗೆ? ‘ಎಲ್ಲದನ್ನೂ ಚೆಂದ ಮಾಡಿಕೋಬೇಕು ಕಣವ್ವಾ, ಇದು ಆಗದೆ ಇರೋ ಕೆಲಸ ಏನಲ್ಲ’ ಮಂಜು ಯಾವಾಗಲು ಹೇಳುವುದು ನೆನಪಾಯಿತು. ಅವಳ ಬಳಿ ಹೋದೆ. ‘ಎಷ್ಟು ಹೊತ್ತಿಗೆ ಮನೆಬಿಟ್ಟು ಹೋಗ್ತೀ?’ ಕೇಳಿದೆ. ಮುಖ ಉಬ್ಬಿಸಿಕೊಂಡು, ‘ಈಗ ಕತ್ತಲಾಗಿದೆ, ಚಳಿ. ನಾಳೆ ಬೆಳಿಗ್ಗೆ ಹೋಗ್ತೀನಿ’ ಅಂದಳು. ನಾನು ಹುಬ್ಬು ಹಾರಿಸಿದೆ. ಕೆಟ್ಟಕೆಟ್ಟ ಮುಖ ಮಾಡಿದೆ. ಇಬ್ಬರೂ ನಕ್ಕೆವು. ಅವಳು ಸ್ವೆಟರು ಹಾಕಿಸಿಕೊಂಡಳು. ನಾನು ಮೊನ್ನೆ ಮೈಸೂರಿಗೆ ಸ್ವೆಟರಿಲ್ಲದೆ ಹೋಗಿ ಯಾವುದೊ ದುಃಖಕ್ಕೆ ಸಿಲುಕಿ ಮತ್ತೂ ಚಳಿ ಕೊರೆವ ವೊಲ್ವೋ ಬಸ್ಸಿಗೆ ಹತ್ತಿ ಬಂದಿದ್ದು ನೆನಪಾಯಿತು. ಆವತ್ತು ಕೂತು ನಾಲಕ್ಕು ಸಾಲು ಬರೆದಿದ್ದೆ…

ಮೈಸೂರಿಗೆ ಡಿಸೆಂಬರ್ ಕಾಲಿಟ್ಟಿದೆ..

…ಸಂಜೆಯ ಘಳಿಗೆ
ತೆಳುಮಂಜಿನ ಪರದೆ
ಬೀದಿದೀಪಗಳಿಗೂ
ಹೊತ್ತಿಕೊಳ್ಳಲು ನಾಚಿಕೆ
ಟೆಂಟುಗಳೊಳಗಿನ ಮಕ್ಕಳಿಗೆ
ಅಲ್ಲಾಡಲೂ ಬೇಸರ..
ಹರಕು ಕಂಬಳಿಯೊಳಗೆ
ಚಳಿ ನುಗ್ಗಿಬಿಟ್ಟರೆ!
***

ಸೆಟೆದುನಿಂತ
ನೀಲಗಿರಿ ಮರಗಳ ಪಕ್ಕ
ವಾಕಿಂಗ್ ಶೋಕಿಯ ಜನ
ಹರೆಯದ ಬಿಸಿನೋಟದ
ಹುಡುಗ ಹುಡುಗಿಯರು
ಸಂಧ್ಯಾರಾಗ ಹಾಡುವ
ಅಜ್ಜಿ ತಾತಂದಿರು
ಕೊಬ್ಬು ಕರಗಿಸಲು ಪಾಡು ಪಡುವ
ಆಫೀಸು ಹೆಂಗೆಳೆಯರು..
***

ನೋಡುತ್ತ
ಮನೆಯಲಿರುವ ಮಗಳ
ಸುರುಳಿಗೂದಲ ನೆನೆಯುತ್ತ
ಲಹರಿಯಲ್ಲಿ
ನಡೆಯುತ್ತೇನೆ.

ಮೈಸೂರಿಗೆ
ಡಿಸೆಂಬರ್
ಕಾಲಿಟ್ಟಿದೆ.

ಚಿತ್ರಕೃಪೆ: www.upstateartists.com

Advertisements

20 thoughts on “ಡಿಸೆಂಬರ್ ಮೆಲುಕುಗಳು

 1. ಇದನ್ನು ನಿಮ್ಮ ಕನ್ನದಟೈಮ್ಸ್ ನ ಅಂಕಣದಲ್ಲಿ ಓದಿದ ನೆನಪು….. ಡಿಸೆಂಬರ್ ತಿಂಗಳಿಗೆ ಸರಿಯಾಗಿ ಬರಹ ಹಾಕಿದ್ದೀರ… ಥ್ಯಾಂಕ್ಸ್ ..!!

 2. ಬರಹ, ಕವನ ಎರಡೂ ಸೊಗಸಾಗಿವೆ. ಕೊರೆವ ಛಳಿಗೆ ಒಂದು ಕಪ್ ಶುಂಠಿ/ ಮಸಾಲಾ ಟೀ ಹೀರಿದ ಹಾಗೆ.
  ಧನ್ಯವಾದ.

  <>????
  ಯಾಕೆ ಸುಧನ್ವ? ಅಪ್ಪಂದಿರಿಗೂ ಆ ಭಾಗ್ಯ ಇದೆ, ಯಾರು ಬೇಡಾಂದೋರು?
  ಅಮ್ಮಂದಿರು ನೆನೆಸಿಕೊಂಡು ಅದನ್ನು ಹೇಳಿಕೊಳ್ಳುತ್ತೇವೆ. ಅಪ್ಪಂದಿರಿಗೆ ಯಾಕೋ ಸಂಕೋಚ… ಹೌದಾ?

 3. ಗುರು,
  ಧನ್ಯವಾದಗಳು.

  ಶರತ್,
  ಕರೆಕ್ಟ್. 🙂

  ಸುಧನ್ವ,
  ನಿಮಗೆ ರುಚಿಯೆನ್ನಿಸಿತಲ್ಲ!! ಸಾಕು ಮಾರಾಯರೆ!! ಅಮ್ಮಂದಿರ ಭಾಗ್ಯಕ್ಕೆ ಸಾಟಿಯಿಲ್ಲ. ಆದರೆ ಸುಪ್ತದೀಪ್ತಿ ಹೇಳುವ ಹಾಗೆ ನಮ್ಮನೇಲಿ ಇಬ್ರೂ ಹೀಗೇ ಇದೀವಿ, ಭಾಗ್ಯವಂತರಾಗಿ!!

  ಜ್ಯೋತಿ,
  ಖುಶಿಯಾಯಿತು, ನೀವು ಇಲ್ಲಿ ಬಂದದ್ದಕ್ಕೆ!! ಮಸಾಲಾ ಟೀ ಸವಿದದ್ದಕ್ಕೆ!!

  ವಿಕಾಸ,
  ಯಾಕಪ್ಪ ಕಾಟ ಕೊಡ್ತೀರಿ? ನೆನಪಾಗಿದ್ರೆ ಹೇಳಿರೂವೆ. ಆದರೆ ನಮ್ಮ ಚಳಿಗಾಲಗಳ ಅಪೂರ್ವ ಅನುಭವಕ್ಕೆ ಸಾಟಿಯಾಗುವ ಯಾವ ಕವಿತೇನೂ ಇನ್ನೂ ನಂಗೆ ಓದಕ್ಕೆ ಸಿಕ್ಕಿಲ್ಲ. ಏನೋ ನಂಗೆ ಗೊತ್ತಿರೋದ್ನ ನಿಮ್ಮ ಜೊತೆ ಹಂಚಿಕೊಂಡ್ರೆ ಅದ್ಕೂ ನಿಮ್ಮಂಥ ತಂಟೆಕೋರರ ಗಲಾಟೆ!!
  ಬೈದಾಯ್ತು. ಸಮಾಧಾನಾನಾ? 🙂

 4. ’ಮಸಾಲಾ ಟೀ ಸವಿದದ್ದಕ್ಕೆ!!……ಹ್ಮ್ಮ್… ಮಸಾಲೆ ದೋಸೆ ಬಗ್ಗೆ ಪ್ರಸ್ತಾಪಿಸ್ತಿದಿರೇನೋ ಅನ್ಕೊಂಡೆ. ಹ್ಮ್…

  ವಿಕಾಸ್-ಗೆ ಯಾಕೆ ಬೈತಿದೀರಾ? ನಾನು ಕವನ ನೋಡಿ, ಯಾವ್ದೋ ಒಳ್ಳೆ ಇಂಗ್ಲಿಷ್ ಕವನದ ಅನುವಾದ ಇರ್ಬೇಕು ಅನ್ಕೊಂಡೆ. ಆದ್ರೆ ಓದಿ ಪೂರೈಸಿದಾಗ ಇದು ನಿಮ್ಮದೆ ಅಂತ ಗೊತ್ತಾಯ್ತು 🙂

 5. ಟೀನಾ,

  ನಿಮ್ಮ ಮಗಳು ‘ಈಗ ಕತ್ತಲಾಗಿದೆ, ಚಳಿ. ನಾಳೆ ಬೆಳಿಗ್ಗೆ ಹೋಗ್ತೀನಿ’ ಅಂದಿದ್ದು ನನಗೆ, ಈ ಹಿಂದೆ TV ಯಲ್ಲಿ “ಜಿಲೆಬಿ” ಹುಡುಗ “ನಾನು ಮನೆ ಬಿಟ್ಟು ಹೋಗ್ತೀನಿ ” ಅಂತ ಹಟ ಹಿಡಿದು, ನಂತರ “ಜಾನಾ ತೋ ಹೈ ಮಗರ್ ಬೀಸ್ ಪಚ್ಚಿಸ್ಸ ಸಾಲ್ ಕೇ ಬಾದ್” ಅಂತ ಹೇಳುತಿದ್ದ advertisement ಜ್ಞಾಪಕ ಕ್ಕೆ ಬಂತು.

  -ಪ್ರಸಾದ್.

 6. “ಇನ್ನೊಂದೇ ವಾರ. ಬೆಂಗಳೂರಿಗೆ ವಾಪಾಸು.
  ಒಂದ್ರಾಶಿ ಹೇಳೋದಿದೆ, ಅಷ್ಟೆ ನಿಮ್ಮಿಂದ ಕೇಳೋದಿದೆ. ಸುಮಾರು ಹೊಸಾ ಬ್ಲಾಗುಗಳು ಶುರುವಾಗಿವೆಯಂತೆ.”

  ಒಂದ್ರಾಶಿ ಹೇಳೋದಿದೆ ಅಂತಾ ಹೇಳಿದ್ರಿ ..!!
  ನೀವು ಊರಿಂದ ಬಂದು ಒಂದು ತಿಂಗಳಾದ್ರೂ ಏನು ಬರೆದೆ ಇಲ್ಲ ನಿಮ್ಮ ರಜಾ ದಿನಗಳ ಸಾಹಸ ಸವಾರಿಗಳ ಬಗ್ಗೆ ..??
  ಶರತ್ ಚಂದ್ರ

 7. ಸುನಿಲ್,
  ನೀವು ಇಲ್ಲಿ ಭೇಟಿನೀಡಿದ್ದಕ್ಕೆ ನಾನು ನಿಮಗೆ ಧನ್ಯವಾದ ಹೇಳಬೇಕು!!

  ಜಗ್ಲಿ ಭಾಗವತ ಅಲಿಯಾಸ್ ಮಸಾಲೆದೋಸೆಕುಮಾರ್ ಅವ್ರೆ,
  ನಿಮ್ಗೋಳು ನೋಡ್ಲಾರೆ ಸಾಮೀ ನೋಡ್ಲಾರೆ. ಅತ್ಲಾಗೊಂದ್ಸಾರೆ ಬೆಂಗ್ಳೂರಿಗ್ ಬಂದ್ಬಿಡಿ ಸಾರೂ.. ಎಂಟಿಯಾರಲ್ಲೆ ಸೂಪರ್ ಮಸಾಲೆದೋಸೆ ಕೊಡ್ಸಣ. ’ಮಸಾಲ”..ಅಂತಾನೂ ಅನ್ನೋಹಾಗಿಲ್ವಲ್ಲ ಮಾರರೆ..ಅದೆಲ್ಲಿಂದಾನೋ ಡುಂ ಅಂತ ವಕ್ರಿಸ್ಕೊಂಬಿಡ್ತೀರಲ!!
  ಆದ್ರು ವಾಸ್ ಮಿಸ್ಸಿಂಗ್ ಯೂ!! ಖುಶ್ಯಾತು ಬಂದಿದ್ಕೆ!!
  ಕವಿತೆಯ ಬಗ್ಗೆ ಬರೆದ ಮಾತುಗಳಿಗೆ ತ್ಯಾಂಕು.

  ಪ್ರಸಾದ್,
  ಬಹುಶಃ ಮಕ್ಳೆಲ್ಲ ಹಾಗೇ ಅಂತ್ಕಾಣತ್ತೆ. ಹೆದ್ರಿಸ್ತವೆ, ಓಡೋಗಲ್ಲ!!

  ಮಹೇಶ,
  🙂 too!!

  ಶರತ್,
  ಅಲ್ರೀ, ನಾನು ರಜೇಲಿ ಸಾಹಸ,ಸವಾರಿ ಮಾಡಿದೆ, ಅದ್ನೆಲ್ಲ ನಿಮ್ಗೆ ಹೇಳ್ತೀನಿ ಅಂದಿದ್ನಾ? ಹಾಗೆಲ್ಲ ಹೇಳಿದ ನೆನಪಿಲ್ಲ ನನಗೆ!! ಮತ್ತೆ ಯಾವ ಸಾಹಸಾನೂ ಮಾಡಲಿಲ್ಲ ನಾನು. ವಾಪಾಸು ಬಂದ ಮೇಲೆ ಸುಮಾರು ಪೋಸ್ಟುಗಳ್ನೆಲ್ಲ ಹಾಕಿದೀನಿ. ಏನೂ ಬರ್ದೆ ಇಲ್ಲ ಅನ್ನೋಹಾಗಿಲ್ಲ ನೀವು. ನನಗಿಷ್ಟವಾದ ಬ್ಲಾಗುಗಳಲ್ಲೆಲ್ಲ ಬಂದ ಮೇಲೆ ಕಮೆಂಟುಗಳ ಮೂಲಕ ಹೇಳುವುದನೆಲ್ಲ ಹೇಳುತ್ತಲೆ ಇದೀನಿ!! ಎನಿವೇ, ಭಾಗ್ವತ್ರ ಜತೆ ನನ್ ತಲೆ ತಿನ್ನೋಕೆ ನೀವೂ ಒಬ್ರು ಸೇರ್ಕೊಂಡ್ರಿ ಅಂತಾಯ್ತು!! 🙂

  ಸುನಾಥರೆ,
  ನಿಮ್ಮ ಬೆಚ್ಚಗಿನ ಕಮೆಂಟಿನಿಂದಲೆ ತಿಳಿಯಿತು!!

  -ಟೀನಾ.

 8. ಆದ್ರು ವಾಸ್ ಮಿಸ್ಸಿಂಗ್ ಯೂ!! ……
  ಅಹೋ, ಇನ್ನು ಮುಂದೆ ನೀವು ಚಿಂತಿಸಬೇಕಾದ್ದಿಲ್ಲ. ನಾನು ನೆನೆದವರ ಮನದಲ್ಲಿ!! ಭಕ್ತಿಯಿಂದ ಕಣ್ಣುಮುಚ್ಚಿ “ಓಂ ಶ್ರೀ ಜಗಲಿ ಭಾಗವತಾಯ ನಮಃ” ಎಂದು ಪುಣ್ಯನಾಮ ಸ್ಮರಣೆಯನ್ನು ಮಾಡಿ. ನಾನು ಪ್ರತ್ಯಕ್ಷನಾಗುತ್ತೇನೆ :-))

 9. ಅಯ್ಯೋ.. ನೀವು ಊರಿಗೆ ಹೋಗಿದ್ದಿದ್ರಿಂದ ನಿಮ್ಮ “ನೆನಪಿನ ಕದವ ತೆರೆದು” ಕಾಫೀ-ಐಸ್ ಕ್ಯಾಂಡಿ-ಸ್ಕೂಲ್-ಪ್ರಸನ್ನ ಇಂಥ ಕತೆಗಳನ್ನು ಹೇಳಿ ನಮಗೂ ನಮ್ ನಮ್ ಕಥೆಗಳನ್ನೆಲ್ಲಾ ನೆನ್ಪಿಸ್ತೀರಾ ಅಂತ ಕಾಯ್ತಾ ಇದ್ದೆ. ಪರವಾಗಿಲ್ಲ ಬಿಡಿ.

  ಅಂದ್ಹಾಗೆ ನನ್ನ (ನಿಮ್ಮ ತಲೆ ತಿನ್ನೋಕೆ ) ಪಾರ್ಟ್ನರ್ ಮಾಡ್ಕೊಳ್ಳೋಕೆ ಭಾಗ್ವತ್ರು ಒಪ್ಪೋಲ್ಲ ಅನ್ಸುತ್ತೆ.!? ನೀವು ಅವ್ರು ಕೇಳಿದ್ದ ರವೆಯುಂಡೆ, ಪುರಿಯುಂಡೆ, ನುಚ್ಚಿನುಂಡೆ,…..ಇತ್ಯಾದಿ ಮೆನು ಲಿಸ್ಟ್ ನಲ್ಲಿ ಏನೂ ತಂದ್ಕೊಟ್ಟ ಹಾಗೆ ಕಾಣಲಿಲ್ಲ. ಅದಕ್ಕೆ ಹಾಗೆ ಅವರು ನಿಮ್ಮ ತಲೆ ತಿನ್ನೋದು.. 🙂

 10. ನೋಡುತ್ತ
  ಮನೆಯಲಿರುವ ಮಗಳ
  ಸುರುಳಿಗೂದಲ ನೆನೆಯುತ್ತ
  ಲಹರಿಯಲ್ಲಿ
  ನಡೆಯುತ್ತೇನೆ.

  ಮೈಸೂರಿಗೆ
  ಡಿಸೆಂಬರ್
  ಕಾಲಿಟ್ಟಿದೆ.

  ವ್ಹಾ ವ್ಹಾ….ನೆನೆಸಿಕೊಳ್ಳಬೇಕಷ್ಟೇ..ಇಲ್ಲಿ ಮಂಗಳೂರಿನಲ್ಲಿ ಧಗೆ ಮಾತ್ರ, ಛಳಿ ಇಲ್ಲ 😦 ಆದ್ರು ನಿಮ್ಮ ಬರಹದ ಆಪ್ತತೆ ಕಂಬಳಿಯೊಳಗೆ ಕುಳಿತು ಕಾಫಿ ಹೀರಿದಷ್ಟು ಖುಷಿಕೊಟ್ಟಿತು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s