ಮಾರ್ಚ್ ಎಂಟನ್ನು ಮೀರಿ ನಿಂತ ಹೆಂಗಸರು

1155-15372african-life-i-posters1

ಇವತ್ತು ಮಾರ್ಚ್ ಎಂಟು. ಬೆಳಗ್ಗಿನಿಂದ ಸುಮಾರು ಸ್ನೇಹಿತರು ಎಸ್ಸೆಮ್ಮೆಸ್, ಫೋನು, ಇ-ಮೇಲ್ ಮಾಡಿ ‘ಹ್ಯಾಪಿ ವಿಮೆನ್ಸ್ ಡೇ!!’ ವಿಶ್ ಮಾಡಿದ್ದಾರೆ. ಯುನಿವರ್ಸಿಟಿಯಲ್ಲಿರುವಾಗ ‘ಟಾಂಬಾಯ್’ ಇಮೇಜು ಇದ್ದ ನಾನು ಇದೇ ದಿನ ಸೀರೆಯುಟ್ಟುಕೊಂಡು ಹೋಗಿ ಎಲ್ಲರಿಗೆ ಶಾಕ್ ನೀಡಿದ್ದು ನೆನಪಾಗುತ್ತಿದೆ. ಅವತ್ತು ಡಿಪಾರ್ಟ್ಮೆಂಟಿನಲ್ಲಿ ಟೀನಾ, ಇವತ್ತು ನೀನೂ ‘ವುಮನ್’ ಅಂತ ತಿಳಿಯಿತು!’  ’ಲೇಡಿಬಾಂಡ್ ಇನ್ ಎ ಸ್ಯಾರಿ!’ ಎಂದೆಲ್ಲ ಗೆಳೆಯರು ತಮಾಷೆ ಮಾಡಿ ನಗಾಡಿದ್ದರು. ಗೆಳತಿ ಗೀತಾ ಮಾತ್ರ ನಾನು ವಿಶ್ ಮಾಡಿದಾಗ ಹೆಣ್ಣಾಗಿ ಹುಟ್ಟಿದ್ದನ್ನ ಪ್ರತೀದಿನ ರಿಗ್ರೆಟ್ ಮಾಡ್ತೀನಿ ಕಣೆ! ನೋ ಹ್ಯಾಪಿ ವಿಮೆನ್ಸ್ ಡೇ ಫಾರ್ ಮಿ ಅಂದಿದ್ದು ಮರೆಯಲಾಗುತ್ತಲೇ ಇಲ್ಲ. ಐರನಿ ಅಂದರೆ ಅವಳೂ ಇವತ್ತು ನಮ್ಮ ನಡುವೆ ಇಲ್ಲ. ಎಷ್ಟು ಹೆಣ್ಣುಮಕ್ಕಳು ಇವತ್ತು ತಾವು ಹೆಣ್ಣಾಗಿ ಹುಟ್ಟಿದ್ದನ್ನು ಹಳಿದುಕೊಂಡು ಬದುಕುತ್ತಿದ್ದಾರೋ? ನನ್ನ ಪ್ರೀತಿಯ ಮೂವರು ಹೆಂಗೆಳೆಯರು ಮಾತ್ರ ಸಾವಿರ ಅಡ್ಡಿತಡೆಗಳಿದ್ದರೂ ಸೆಲ್ಫ್ ಪಿಟಿಯಲ್ಲಿ ಮುಳುಗದೆ ತಮ್ಮದೇ ರೀತಿಯಲ್ಲಿ ಬದುಕುತ್ತ ಇದ್ದಾರೆ… * * * *

ತೆಹಮಿನಾ ಮದುವೆಯಾಗಿದ್ದು ಪಾಕಿಸ್ತಾನದ ರಾಜಕೀಯ ನಾಯಕನೊಬ್ಬನನ್ನು. ಮದುವೆಯಾದಂದಿನಿಂದ ಆಕೆ ಪ್ರತಿದಿನವೂ ತನ್ನ ಹೆಣ್ಣುಜನ್ಮದ ಅಸಹಾಯಕತೆಯನ್ನು ಹಳಿದುಕೊಂಡೇ ಕಳೆದಳು ಎನ್ನಬಹುದು. ಪ್ರಪಂಚದ ಕಣ್ಣಿಗೆ ಆಕೆಯ ಗಂಡ ಪ್ರಸಿದ್ಧ ಜನನಾಯಕ. ತೆಹಮಿನಾಳಿಗೆ ಮಾತ್ರ ಆತನ ನಿಜರೂಪ ತಿಳಿದಿತ್ತು. ಅತನೊಬ್ಬ ವಿಕೃತಕಾಮಿ. ತನ್ನ ಮಾತನ್ನು ಪಾಲಿಸದೆ ಹೋದರೆ ತೆಹಮಿನಾಳನ್ನು ಮೈಯೆಲ್ಲ ಬಾಸುಂಡೆ ಬರುವಂತೆ ಹೊಡೆಯುವ ರಾಕ್ಷಸ. ಆಕೆಯೆದುರೇ ಆಕೆಯ ತಂಗಿಯೊಡನೆ ಅಫೇರ್ ಇಟ್ಟುಕೊಂಡು ಈಕೆಯನ್ನು ಮೂಲೆಯಲ್ಲಿಟ್ಟವ. ಈಕೆ ಸುಮ್ಮನಿರಲಿಲ್ಲ. ತನಗಾದ ಪ್ರತಿಯೊಂದು ಅನ್ಯಾಯವನ್ನೂ ಎದುರಿಸಿ ನಿಂತಳು. ಕೊನೆಗೆ ತಾಳಲಾಗದಾಗ ಗಂಡನೆನಿಸಿಕೊಂಡವನನ್ನು ಬಿಟ್ಟು ಬಂದಳು. ತನ್ನ ಸ್ವಾತಂತ್ರ್ಯದ ಸಂಕೇತವನ್ನು ತೋರಲು ಆತನಿಗೆ ಬಹಳ ಪ್ರಿಯವಾಗಿದ್ದ ತನ್ನ ನೀಳಗೂದಲನ್ನು ಕತ್ತರಿಸಿ ಎಸೆದಳು. ಆತನ ಒಂದೊಂದು ದೌರ್ಜನ್ಯವನ್ನೂ ‘ಮೈ ಫ್ಯೂಡಲ್ ಲಾರ್ಡ್’ ಎಂಬ ಪುಸ್ತಕ ಬರೆದು ಜಗತ್ತಿಗೇ ಸಾರಿದಳು. ಎದುರಾದ ಯಾವ ಬೆದರಿಕೆಗಳಿಗೂ ಜಗ್ಗದ ತೆಹಮಿನಾ ದುರಾನಿ ಇಂದಿಗೂ ಪಾಕಿಸ್ತಾನದ ಹೆಣ್ಣುಮಕ್ಕಳ ರಾಜಕೀಯ, ಸಾಂಸ್ಕೃತಿಕ, ಧಾರ್ಮಿಕ ಶೋಷಣೆಯ ಬಗ್ಗೆ ‘ಬ್ಲಾಸ್ಫೆಮಿ’ಯಂತಹ ಅಪರೂಪದ ಪುಸ್ತಕಗಳನ್ನು ಬರೆಯುತ್ತ, ತನ್ನಂತೆ ದೌರ್ಜನ್ಯಕ್ಕೊಳಗಾದ ಅನೇಕ ಹೆಣ್ಣುಮಕ್ಕಳಿಗೆ ಸಹಾಯಹಸ್ತ ನೀಡುತ್ತಾ ಇದ್ದಾಳೆ.

* * * *

ವಾಂಗರಿ ಮಥಾಯಿ 2004ರಲ್ಲಿ ನೊಬೆಲ್ ಪ್ರಶಸ್ತಿ ಪಡೆದುಕೊಂಡಾಗ ಆಕೆಯನ್ನು ಬಲ್ಲವರಿಗೇನೂ ಅಚ್ಚರಿಯಾಗಲಿಲ್ಲ. ಅಮೆರಿಕ, ಜರ್ಮನಿಗಳಲ್ಲಿ ಓದು ಮುಗಿಸಿದ ಆಕೆ ಅಲ್ಲಿಯೇ ಆರಾಮವಾಗಿರಬಹುದಾಗಿತ್ತು. ತನ್ನ ನೆಲ ಕೀನ್ಯಾದ ಸೆಳೆತ ಬಲವಾಗಿತ್ತು. ತನ್ನ ದೇಶ ಮರಗಳ್ಳರ, ಪ್ರಾಣಿಹಂತಕರ ಹಾವಳಿಗೆ ತುತ್ತಾಗಿ ಬಡವಾಗುತ್ತಿರುವುದನ್ನು ನೋಡಿ ನೋವಾಯಿತು. ಆಕೆ ಆರಂಭಿಸಿದ ‘ಗ್ರೀನ್ ಬೆಲ್ಟ್ ಚಳುವಳಿ’ಯ ಮೂಲಕ ಕೀನ್ಯಾದಾದ್ಯಂತ ಮೂವತ್ತು ಮಿಲಿಯನ್ ಗಿಡಮರಗಳನ್ನು ನೆಡಲಾಯ್ತು. ಜನರು ಆಕೆಯನ್ನು ಪ್ರೀತಿಯಿಂದ ‘ಟ್ರೀ ವುಮನ್’ ಎಂದು ಕರೆದರು. ಗಂಡ ‘ಈಕೆಯಷ್ಟು ಗಟ್ಟಿ ಮನಸ್ಸಿನ ಹೆಂಗಸಿನ ಜತೆ ಬದುಕಲಾಗದು’ ಎಂಬ ಕಾರಣ ನೀಡಿ ಆಕೆಗೆ ಡೈವೋರ್ಸ್ ನೀಡಿದ. ತನ್ನ ನಿಲುವು, ಸಿದ್ಧಾಂತಗಳ ದೆಸೆಯಿಂದ ಹಲವಾರು ಬಾರಿ ಮಾರಣಾಂತಿಕ ಹಲ್ಲೆಗೊಳಗಾಗಿರುವ ವಾಂಗರಿ ಸುಮಾರು ಬಾರಿ ಜೈಲಿಗೂ ಹೋಗಿಬಂದದ್ದುಂಟು. ಕೀನ್ಯಾದ ರಾಜಕೀಯ ರಂಗದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ವಾಂಗರಿಯ ಪ್ರಕಾರ ಪ್ರಕೃತಿಯ ಬಗ್ಗೆ ಹೆಣ್ಣಿಗಿರುವ ಕಾಳಜಿ ಬೇರಾರಿಗೂ ಇಲ್ಲ.

* * * *

ಎಂಭತ್ತರ ಗೌರಜ್ಜಿಯ ಮನೆಗೆ ಮಧ್ಯರಾತ್ರಿ ಒಂದು ಗಂಟೆಗೆ ಹೋಗಿಳಿದರೂ ಬಿಸಿಬಿಸಿ ಊಟ ಬಡಿಸಿಯಾರು. ಬೇಡವೆಂದರೆ ಬಾಯಿಗೆ ಬಂದ ಬೈಗುಳ ತಿನ್ನಲು ತಯಾರಾಗಿರಬೇಕು. ಅವರ ಮನೆಯಲ್ಲಿ ಅನ್ನ ಬಡಿಸಲು ಸೌಟು ಉಪಯೋಗಿಸುವುದಿಲ್ಲ – ಕೈಯಲ್ಲಿ ಭರ್ತಿ ಅನ್ನ ಪಾತ್ರೆಯಿಂದ ತಟ್ಟೆಗೆ ತಳ್ಳುತ್ತಾರೆ!! ಕೋಳಿ ಕೆದಕಿದ ಹಾಗೆ ತಿನ್ನುವ ನನ್ನಂಥವರು ಅವರ ಮನೆಯ ಊಟಕ್ಕೆ ಡಿಸ್ಕ್ವಾಲಿಫೈಡ್!! ಯಾರದೇ ಮದುವೆ, ಮುಂಜಿ, ನಾಮಕರಣ ಏನೇ ಇರಲಿ, ಮೈಸೂರ ಒಕ್ಕಲಗೇರಿಯ ಆಕೆಯ ಪುಟ್ಟಮನೆಗೆ ಕರೆ ಹೋಗುತ್ತದೆ. ಗೌರಜ್ಜಿ ಗಲಾಟೆ ಮಾಡುತ್ತಲೆ ತಪ್ಪದೆ ಹಾಜರಾಗುತ್ತಾರೆ. ಕೇರಿಯ ತುಂಬಾ ಗೌರಜ್ಜಿ ಹೆರಿಗೆಮಾಡಿಸಿ, ನೀರುಹಾಕಿ, ತುತ್ತುಣಿಸಿ ಬೆಳೆಸಿಕೊಟ್ಟವರೇ ಇರುವುದು. ಪ್ರತಿ ಹಬ್ಬದಲ್ಲಿಯೂ ತಿಳಿದವರನ್ನೆಲ್ಲ ಕರೆದು ಊಟ ಹಾಕುತ್ತಾರೆ. ಯಾವುದೇ ಇನ್ಕಮ್ ಇಲ್ಲದ ಗೌರಜ್ಜಿ ಇದನ್ನೆಲ್ಲ ಹೇಗೆ ಮಾಡಬಹುದೆಂದು ಒಮ್ಮೊಮ್ಮೆ ಯೋಚನೆ ಬರುತ್ತದೆ. ಹೃದಯದ ಕಾಯಿಲೆಯಿಟ್ಟುಕೊಂಡೂ ಹೃದಯವಂತರಾಗಿರುವ ಗೌರಜ್ಜಿಯಂಥವರು ಎಷ್ಟಿದ್ದಾರು?

* * * *

ಹೀಗೆ ನನ್ನ ಪ್ರೀತಿಯ ಮಹಿಳೆಯರನ್ನೆಲ್ಲ ಧ್ಯಾನಿಸಿಕೊಂಡು ಕೂತಿದ್ದೇನೆ. ಮಗಳು ಗಂಧದಕಡ್ಡಿ ಹಿಡಿದುಕೊಂಡು ಅತ್ತಿಂದಿತ್ತ ಓಡಾಡುತ್ತಿದ್ದಾಳೆ. ಮನೆತುಂಬ ಸಿಹಿಸಿಹಿ ಪರಿಮಳ. ಅವಳಿಗೆ ಆಟ. ಅವಳನ್ನು ಕರೆದು ತಬ್ಬಿಕೊಂಡು ‘ಹ್ಯಾಪಿ ವಿಮೆನ್ಸ್ ಡೇ ಶೋನೂ!!’ ಅಂದೆ. ಅರ್ಥವಾಗದಿದ್ದರೂ ‘ಥ್ಯಾಂಕ್ಯೂ ಮಮ್ಮಿ!!’ ಅಂದು ಕೆನ್ನೆಗೊಂದು ಮುತ್ತು ಕೊಟ್ಟಳು.

ಸ್ಪೆಶಲ್ ನೋಟ್: ಅಂದಹಾಗೆ ಇದು ನನ್ನ ನೂರನೆ ಪೋಸ್ಟು. ನನಗೇ ಆಶ್ಚರ್ಯವಾಗುವ ಹಾಗೆ ಬರೆಸುತ್ತ ಹೋದ ನಿಮಗೆಲ್ಲ ಸಾವಿರ ಧನ್ಯವಾದ.

ಇವಾಗಷ್ಟೆ ಗೆಳತಿ ಶಮ ನಂದಿಬೆಟ್ಟ ಆಹ್ವಾನಿಸಿದ್ದ ಬಸವೇಶ್ವರನಗರದಲ್ಲೆ ನಡೆಯುತ್ತಿರುವ ‘ಮಾತೃ ಉತ್ಸವ’ಕ್ಕೆ ಹೋಗಿ ಬಂದೆ. ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ಚೆಕಪ್, ಸಲಹೆ ಮತ್ತು ಔಷಧ ವಿತರಣೆ, ಸಾಂಸ್ಕೃತಿಕ ಕಾರ್ಯಕ್ರಮಗಳು, ಯೋಗಾಸನ ಪ್ರದರ್ಶನ, ರಂಗೋಲಿ ಸ್ಪರ್ಧೆ.. ಒಂದೇ ಎರಡೆ? ಬಿಸಿಲು ಲೆಕ್ಕಿಸದೆ ಜನರೂ ಕಿಕ್ಕಿರಿದು ನೆರೆದಿದ್ದರು. ದಂಗಾಗುವಂತೆ ಆಯಿತು. ಪ್ರತಿ ವರುಷವೂ ಇಂತಹದೊಂದು ಅರ್ಥಪೂರ್ಣ ಕಾರ್ಯಕ್ರಮ ನಡೆಸುವ ‘ಪುನಂ’ ಪರಿವಾರಕ್ಕೆ ಶುಭಹಾರಯಿಕೆಗಳು. ಅವರಂಥವರ ಸಂತತಿ ಹೆಚ್ಚಲಿ.

ಚಿತ್ರಕೃಪೆ: ಒಂದು ಸೌಥ್ ಆಫ್ರಿಕನ್ ಗ್ರೀಟಿಂಗ್ ಕಾರ್ಡು.

Advertisements

15 thoughts on “ಮಾರ್ಚ್ ಎಂಟನ್ನು ಮೀರಿ ನಿಂತ ಹೆಂಗಸರು

 1. ಟೀನಾ ಮೇಡಮ್,

  ನಿಮಗೆ ” women’s day” ಶುಭಾಶಯಗಳು…..

  ಈ ದಿನ ನಿಮ್ಮದಾಗಲಿ ಅಂತ ನನಗೆ ಆರೈಸಲು ಇಷ್ಟವಾಗುವುದಿಲ್ಲ….ಏಕೆಂದರೆ ಇದೊಂದೇ ದಿನ ನಿಮ್ಮದಲ್ಲ…..ಪ್ರತಿಕ್ಷಣ, ನಿಮಿಷ, ಗಂಟೆ, ದಿನ, ತಿಂಗಳು, ವರ್ಷಗಳು…ಎಲ್ಲಾ ನಿಮ್ಮವೇ….ನಿಮಗಿಷ್ಟ ಪಟ್ಟಂತೆ ಇರಲು ಇವೆ.. ಪ್ರತಿಕ್ಷಣ ಪ್ರೀತಿಯಿಂದ ಇರಿ…. ಅದರ ನೆಪದಲ್ಲಿ ಪ್ರೀತಿಸಿ…..ಪ್ರೀತಿ ಹಂಚಿ…ನಿಮ್ಮನ್ನು ಪ್ರೀತಿಸಿಕೊಳ್ಳಿ……[ಇದರಲ್ಲಿ ನಮ್ಮ ಸ್ವಾರ್ಥವಿದೆ. ನೀವು ಚೆನ್ನಾಗಿದ್ದರೆ ನಮ್ಮನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತೀರಿ…..ತಾಯಿ, ಅಕ್ಕ-ತಂಗಿ, ಪುಟ್ಟ ಮಗುವಿನ ಹಾಗೆ ನಮನ್ನೂ ಪ್ರೀತಿಸುತ್ತೀರಿ…] ನಿಮ್ಮ ಪತಿ-ಮಕ್ಕಳನ್ನು… ಭಂದು ಭಾಂದವರವನ್ನು ಪ್ರೀತಿಸಿ…ಗೆಳೆಯರನ್ನು ಪ್ರೀತಿಸಿ…ಸಮಯವಿದ್ದರೆ ನಮ್ಮೆಡೆಗೂ ಒಂದಿಡಿ ಪ್ರೀತಿ…ತೋರಿಸಿ…..

  ಮತ್ತೊಮ್ಮೆ ಅಭಿನಂದನೆಗಳು…..

  ಪ್ರತಿಕ್ಷಣದಲ್ಲೂ ಪ್ರೀತಿಯಿಂದ….

  ಶಿವು…..

  ಮತ್ತೆ.,

  ನಿಮ್ಮ ನೂರನೇ ಲೇಖನಕ್ಕೆ ನಿಮಗೆ ಅಭಿನಂದನೆಗಳು…ಮತ್ತು ಇದು ನಿಜಕ್ಕೂ ಮಹಿಳಾ ದಿನಾಚರಣೆಗೆ ಅರ್ಥಪೂರ್ಣ ಲೇಖನ…ತೆಹಮಿನಾಳ…ದೈರ್ಯ…..ವಾಂಗರ್ ಮಥಾಯಿಳ….ಕಾಳಜಿ…..ಗೌರಜ್ಜಿಯ ತುಂಬು ಪ್ರೀತಿ….ಓದಿ ಎಲ್ಲಾ ಮಹಾ ತಾಯಂದಿರ ನೆನಪಾಯಿತು…..

  ನಿಮಗೆ ಅಭಿನಂದನೆಗಳು….

 2. ಸಾಲುಮರದ ತಿಮ್ಮಕ್ಕ ಎಂದು ಪ್ರಸಿದ್ಧಳಾದ ಪ್ರಶಸ್ತಿವಿಜೇತೆ ತಿಮ್ಮಕ್ಕ ‘ಸುಧಾ’ ವಾರಪತ್ರಿಕೆಗೆ ಕೊಟ್ಟ ಸಂದರ್ಶನದಲ್ಲಿ “ನಾನು ಹೆಣ್ಣಾಗಿ ಹುಟ್ಟಿದ್ದಕ್ಕೆ ನನಗೆ ಬೇಸರವಾಗಿದೆ” ಎನ್ನುವ ಅರ್ಥದ ಮಾತನ್ನು ಹೇಳಿದ್ದಳು.

 3. ಟೀನಾ.. ನನ್ನ ಆಹ್ವಾನಕ್ಕೆ ಅಲ್ಲಿವರೆಗೂ ಬಂದು ಹೋದಿರಲ್ಲ ಖುಷಿಯಾಯ್ತು.. infact ನೀವು ವಿಶ್ ಮಾಡಿದಾಗಲೇ ನಂಗೆ ಮಹಿಳಾ ದಿನ ನೆನಪಾಗಿದ್ದು. ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆಯಿದೆ ನಂಗೆ (ಇಂದಿಗೂ ‘ಟಾಂಬಾಯ್’ ಆಗಿದ್ದರೂ ಕೂಡ !!!)..

  ಈ ದಿನಕ್ಕೆ ತುಂಬಾ ಚಂದದ ಬರಹ.. ತುಂಬಾ ಇಷ್ಟ ಆಯ್ತು.. ಅಂದ ಹಾಗೆ ನೀವೊಮ್ಮೆ ಮಾತೃ ಮಂದಿರಕ್ಕೂ ಬರಬೇಕು… ನಿಮ್ಮ ಪುಟ್ಟಿಯ ಜತೆ.. ಬಿದುವಿದ್ದ ಭಾನುವಾರ ಕರೆ ಮಾಡಿ ಹೋಗಿ ಬರೋಣ .. ನಮಗಿಂತ ಹೆಚ್ಚಾಗಿ ಮಕ್ಕಳು ನೋಡಿ ಅರ್ಥ ಮಾಡಿಕೊಬೇಕಾದ್ದು ಬಹಳಷ್ಟಿದೆಯಲ್ಲಾ…

  ನಿಮ್ಮ ಹಾಗೆ ಬ್ಲಾಗ್ ಜಗತ್ತಿನಲ್ಲಿ ಭೇಟಿಯಾದ ಇನ್ನಿಬ್ಬರು ಹುಡುಗರು ಬಂದ್ರು.. ಅಕ್ಕಾ ಅಂದ್ರು …. ರಕ್ತದಾನವನ್ನೂ ಮಾಡಿ ಹೋದರು.. ಅದೇ ಅಮ್ಮನ ಹಬ್ಬದ ಸಾರ್ಥಕತೆ ಎನಿಸಿತು..

 4. ನಾನು ನನ್ನ ಎಂಬಿಎ ವಿದ್ಯಾರ್ಥಿಗಳಿಗೆ ಮುಕ್ತವಾದ, ಹಿಂಜರಿಕೆಯಿಲ್ಲದ, ಮುಂದಿನ ಪರಿಣಾಮಗಳ ಬಗ್ಗೆ ಚಿಂತಿಸದೆ “Poetry for poetry’s sake” ಎಂಬಂತಹ ಬರಹಗಳನ್ನು ನಿಮ್ಮ ಬರಹಗಳನ್ನು ಓದಿ ಅವರು ಹೇಗೆ ಬರೆಯಲು ಆರಂಭಿಸಬಹುದು ಎಂದು ಹೇಳಿದ್ದೇನೆ.
  ಹೀಗೇ ಬರೆಯುತ್ತಿರಿ. countless…
  ಝುಂಪಾ ಲಾಹಿರಿಯ ಕಥೆ ಕಾದಂಬರಿಗಳನ್ನು ಓದಿದಾಗಲೆಲ್ಲಾ ನನಗನ್ನಿಸುತ್ತದೆ… A man can never express life in such accurate terms with such deep expressions of keen observations ಅನಿಸಿಬಿಟ್ಟಿದೆ. ನಿಮ್ಮ ಬರಹಗಳು ಈ ಮಾತುಗಳಿಗೆ ಹತ್ತಿರವಾಗುತ್ತವೆ ಒಮ್ಮೊಮ್ಮೆ.

 5. ನವೀನ್, ಪ್ರಿಯಾ, ಅನಿವಾಸಿ, ಸದಾನಂದ್, ವಿಜಯ್, ಶಮ, ಮರಿಯಾ, ವೇಣು, ಸುನಾಥ, ಸುಶ್ರುತ, ಶಿವು, ರಂಜಿತ್,
  ನಿಮ್ಮ ಅಕ್ಕರೆಯ ಮಾತುಗಳಿಗೆ ವಂದಿಸುತ್ತೇನೆ. ಮೊದಲೆ ಹೇಳಿದ ಹಾಗೆ ನಿಮ್ಮ ಇಂಥ ಮಾತುಗಳೆ ನನಗೆ ಅರಿವಿಲ್ಲದಂತೆ ಬರೆಸಿಕೊಂಡು ಹೋಗುತ್ತಿರುವುದು.ನಿಮ್ಮಿಂದಲೆ ನನಗೆ ಎಷ್ಟೊ ಹೊಸ ವಿಷಯಗಳು ತಿಳಿಯುವುದು.

  ನವೀನ್, ಧನ್ಯವಾದ. ನನ್ನ ಬರಹಗಳು ಉದಾಹರಿಸುವಂತೆ ಇವೆಯೊ ಇಲ್ಲವೊ, ತಿಳಿಯುವಷ್ಟು ಅರಿವಿಲ್ಲ ನನಗೆ. ಆದರೆ ನನ್ನ ಸ್ನೇಹಿತರಿಬ್ಬರು – ಒಬ್ಬರು ಮಂಗಳೂರಿನಲ್ಲಿ, ಇನ್ನೊಬ್ಬರು ಶಿವಮೊಗ್ಗೆಯಲ್ಲಿ ನೀವು ಹೇಳಿದಂಥವೇ ಮಾತುಗಳನ್ನ ನನ್ನ ಬರಹಗಳ ಬಗ್ಗೆ ಹೇಳಿದ್ದರು. ಹೆಚ್ಚು ಹೆಚ್ಚು ಬರೆಯಲು ಪ್ರಯತ್ನಿಸುತ್ತೇನೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s