Education is a progressive discovery of our own ignorance – Will Durant
’ನಾನು ಎಲ್ಲೇ ಸಿಕ್ಕಿದರು ವಂದಿಸುವುದು ಬೇಡ. ನನ್ನ ಕ್ಲಾಸಿನಲ್ಲಿ ನಿಮಗೆ ಇಷ್ಟ ಬಂದ ಕಡೆ ಕೂರಬಹುದು, ಕಾಫಿ, ಜ್ಯೂಸ್ ತರಬಹುದು, ಚ್ಯೂಯಿಂಗ್ ಗಂ ಅಗಿಯಬಹುದು. ನನ್ನ ಕ್ಲಾಸಿನಲ್ಲಿ ಹೇಗಾದರು ಇರಿ, ಆದರೆ ಪಾಠದ ಬಗ್ಗೆ ಮಾತನಾಡಲು ಆಗಲಿಲ್ಲವೆಂದರೆ ಆಚೆ ಹೊರಡಲು ತಯಾರಾಗಿರಿ.’ -ಎಂ.ಎ ಕ್ಲಾಸಿನ ಮೊದಲನೆ ದಿನ ಅಧ್ಯಾಪಕರೊಬ್ಬರು ನಮಗೆ ಹೀಗೆ ಹೇಳಿದಾಗ ನಾವು ಕಂಗಾಲಾಗಿದ್ದು ನಿಜ. ಅಲ್ಲಿಯತನಕ ‘ಗುರುವಿನ ಗುಲಾಮನಾಗುವತನಕ..’ ಅನ್ನುವ ಸಾಂಪ್ರದಾಯಿಕ ಶಿಕ್ಷಣಕ್ಕೆ ಒಗ್ಗಿಕೊಂಡಿದ್ದವರು ನಾವು. ಉತ್ತರಕ್ಕೆ ತಡವರಿಸಿದರೆ ಕೂಡಲೆ ಲೈಬ್ರರಿಗೆ ಓಡಿಹೋಗಿ ಉತ್ತರಕ್ಕೆ ರೆಫರೆನ್ಸು ಮಾಡಿಕೊಂಡು ವಾಪಾಸು ಬರಬೇಕಿತ್ತು. ಅಪ್ಪಿತಪ್ಪಿ ಅವರಿಗೆ ವಂದಿಸಿದರೆ ಮಾರನೆದಿನ ಟೀಕೆ ಕಾದಿರುತ್ತಿತ್ತು. ಅದರ ಜೊತೆಗೇ ಒಂದು ಕವಿತೆಯನ್ನು ಎಷ್ಟು ತರಹ ಓದಬಹುದು, ಒಂದು ಕಥೆ ಎಷ್ಟೆಲ್ಲ ಹೇಳದೆಯೆ ಏನೆಲ್ಲ ಹೇಳುತ್ತದೆ, ಕಾರ್ಟೂನುಗಳೂ ಉತ್ತಮ ಸಾಹಿತ್ಯವೇನೇ, ವಾಗ್ವಾದಗಳು ಜಗಳದ ರೂಪ ಪಡೆಯದೆಯೆ ಹೇಗೆ ಆರೋಗ್ಯಕರವಾಗಿರಬಹುದು, ವಿಮರ್ಶೆ ಹೇಗೆ ನಮ್ಮೆಲ್ಲರ ನಡುವಿಂದಲೆ ಹುಟ್ಟಿಬಂತು… ಹೀಗೆಲ್ಲ ಅವರ ತರಗತಿಯಲ್ಲಿ ದೊರೆತ ಶಿಕ್ಷಣ ಅಮೂಲ್ಯ. ಮೊದಮೊದಲು ಬದಲಾವಣೆಗೆ ಹೊಂದಿಕೊಳ್ಳಲು ಹಿಂಸೆಪಟ್ಟ ನಾವು ಎರಡು ವರುಷಗಳ ನಂತರ ಬೇರೆಯೆ ತರಹದ ಮನುಷ್ಯರಾಗಿ ಹೊಮ್ಮಿದ್ದು ಅಷ್ಟೇ ನಿಜ. ತನ್ನ ವಿದ್ಯಾರ್ಥಿಗಳ ಚಿಂತನೆ ಹಾಗೂ ಜೀವನವನ್ನೆ ಬದಲಿಸಿದ ಇಂತಹದೇ ಒಬ್ಬ ಅಪರೂಪದ ಅಧ್ಯಾಪಕನ ಕಥೆ ‘ಡೆಡ್ ಪೊಯೆಟ್ಸ್ ಸೊಸೈಟಿ’.
1959ರ ಕಾಲದ ಕಥೆ ಇದು. ವರ್ಮಾಂಟಿನ ವೆಲ್ಟ್ಟನ್ ಅಕ್ಯಾಡೆಮಿ ಒಂದು ಪ್ರತಿಷ್ಠಿತ ವಿದ್ಯಾಸಂಸ್ಥೆ. ಇಲ್ಲಿ ಕಲಿಯುವವರು ಅಮೆರಿಕದ ಸಿರಿವಂತ ಪರಿವಾರಗಳ ಹುಡುಗರು. ಸಂಪ್ರದಾಯ, ಘನತೆ, ಶಿಸ್ತು, ಉತ್ಕೃಷ್ಟತೆಗಳನ್ನೆ ಧ್ಯೇಯವಾಗಿರಿಸಿಕೊಂಡ ಶಾಲೆಯಲ್ಲಿ ಹೊಸದಾಗಿ ಸೇರಿಕೊಳ್ಳುವ ಹುಡುಗರು ನೀಲ್, ಟಾಡ್, ನಾಕ್ಸ್, ಚಾರ್ಲಿ, ರಿಚರ್ಡ್, ಸ್ಟೀವನ್ ಮತ್ತು ಜೆರಾರ್ಡ್. ಮೊದಲನೆ ದಿನ ಶಾಲೆಯ ಪ್ರಾಂಶುಪಾಲ ಗೇಲ್ ನೋಲನ್(ನಾರ್ಮನ್ ಲಾಯ್ಡ್) ಹುಡುಗರಿಗೆ ಅಕ್ಯಾಡೆಮಿಯ ಪಕ್ಕಾ ಸಾಂಪ್ರದಾಯಿಕ ಶಿಕ್ಷಣಕ್ರಮದ ಬಗ್ಗೆ ಪರಿಚಯ ನೀಡುತ್ತಾನೆ. ಆದರೆ ಹೊಸ ಆಂಗ್ಲ ಅಧ್ಯಾಪಕ ಜಾನ್ ಕೀಟಿಂಗ್(ರಾಬಿನ್ ವಿಲಿಯಮ್ಸ್) ಹುಡುಗರನ್ನು ತನ್ನ ವಿಚಾರಗಳಿಂದ ದಿಗ್ಮೂಢರನ್ನಾಗಿಸುತ್ತಾನೆ. ಕ್ಲಾಸಿನ ಮೊದಲನೆ ದಿನ ರಾಗವಾಗಿ ಶಿಳ್ಳೆಹಾಕುವ ಮೂಲಕ ಪಾಠವನ್ನು ಮನನ ಮಾಡಲಾಗುತ್ತದೆ. ಕವಿತೆಯ ಬಗ್ಗೆ ಆಂಗ್ಲಸಾಹಿತ್ಯ ಪರಿಣಿತನೊಬ್ಬ ಬರೆದಿರುವ ಪ್ರಬಂಧವೊಂದನ್ನು ಓದುವಂತೆ ನೀಲ್ ಗೆ ಹೇಳುವ ಜಾನ್ ಕೀಟಿಂಗ್, ಪ್ರಬಂಧದ ಗಣಿತಾತ್ಮಕ ಯಾಂತ್ರಿಕತೆಯನ್ನು ಎತ್ತಿತೋರಿಸಿ ಆ ಪ್ರಬಂಧವನ್ನು ಹರಿದುಹಾಕಲು ಹುಡುಗರಿಗೆ ತಿಳಿಸುತ್ತಾನೆ!! ವಿದ್ಯಾರ್ಥಿಗಳನ್ನು ಡೆಸ್ಕಿನ ಮೇಲೆ ಹತ್ತಿನಿಂತು ಪ್ರಪಂಚವನ್ನು ಬೇರೆಯೆ ರೀತಿಯಲ್ಲಿ ನೋಡಲು, ತಮ್ಮ ಪೂರ್ವಗ್ರಹಗಳಿಂದ ಹೊರಬರಲು ಉತ್ತೇಜಿಸುತ್ತಾನೆ. ಹುಡುಗರು ಮೊದಲು ಹಿಂಜರಿದರು ನಂತರ ಖುಶಿಯಾಗಿ ಮುಂದೆ ಬರುತ್ತಾರೆ. ಅಧಿಕಾರ ದೊರಕುವುದು ಅದನ್ನು ಚಲಾಯಿಸಲು ಮಾತ್ರವಲ್ಲ, ಅದರಿಂದ ಇತರರು ಬೆಳೆಯಲು ಮಾರ್ಗದರ್ಶನ, ಸಹಾಯ ನೀಡಬೇಕೆನ್ನುವುದು ಅವರು ಕೀಟಿಂಗನಿಂದ ಕಲಿಯುವ ಅತ್ಯಮೂಲ್ಯ ಪಾಠ.
ನಿಜವಾದ ಅರ್ಥದಲ್ಲಿ ಬೆಳೆಯತೊಡಗುತ್ತಾರೆ ವೆಲ್ಟನಿನ ಹುಡುಗರು. ಕೀಟಿಂಗನ ಶಿಕ್ಷಣ ಅವರನ್ನು ಹೊಸದೇನನ್ನಾದರು ಮಾಡುವಂತೆ ಪ್ರೇರೇಪಿಸುತ್ತದೆ. ಕೀಟಿಂಗ್ ವೆಲ್ಟನಿನ ವಿದ್ಯಾರ್ಥಿಯಾಗಿದ್ದಾಗ ಹುಟ್ಟುಹಾಕಿದ್ದ ‘ಡೆಡ್ ಪೊಯೆಟ್ಸ್ ಸೊಸೈಟಿ’ ಎಂಬ ರಹಸ್ಯ ಸಂಘವನ್ನು ಈ ಹುಡುಗರು ಪುನರ್ರಚಿಸುತ್ತಾರೆ. ವೆಲ್ಟನಿನಲ್ಲಿ ಒಂದು ಸಣ್ಣ ಕ್ರಾಂತಿಯೇ ನಡೆದುಹೋಗುತ್ತದೆ. ಟಾಡ್ ತನಗೆ ಸರಿತೋಚದ್ದನ್ನು ನಿರಾಕರಿಸುವ ಧೈರ್ಯ ತೊರುತ್ತಲೆ ತನ್ನೊಳಗೆ ಅಡಗಿದ್ದ ಲೇಖಕನನ್ನು ಹೊರಹಾಕುತ್ತಾನೆ. ತನ್ನ ಆಲಸೀಪ್ರವೃತ್ತಿಯನ್ನು ಬಿಡುವ ಚಾರ್ಲಿ ತನ್ನ ವ್ಯಕ್ತಿಸ್ವಾತಂತ್ರ್ಯವನ್ನು ತೋರುವ ಹಂಬಲದಲ್ಲಿ ಕಾಲೇಜಿನಲ್ಲಿ ಹುಡುಗಿಯರಿಗೂ ಪ್ರವೇಶ ನೀಡಬೇಕೆಂದು ಸಾರುತ್ತಾನೆ. ನೀಲ್ ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಮೊದಲಸಾರಿ ಶೇಕ್ಸ್ ಪಿಯರನ ‘ಎ ಮಿಡ್ಸಮರ್ ನೈಟ್ಸ್ ಡ್ರೀಂ’ ನಾಟಕ ಸೇರಿ ಅಮೋಘವಾಗಿ ಅಭಿನಯಿಸುತ್ತಾನೆ. ನಾಕ್ಸ್ ರಮ್ಯತೆಯ ಬಗೆಗೆ ಅಡಗಿಸಿಟ್ಟಿದ್ದ ತನ್ನ ಒಲವನ್ನು ಪೋಷಿಸತೊಡಗುತ್ತಾನೆ, ಬುದ್ಧಿಜೀವಿಯಾಗಿದ್ದ ಸ್ಟೀವನ್ ತನ್ನ ಭಾವನೆಗಳನ್ನು ತೆರೆದಿಡಲು ಕಲಿಯುತ್ತಾನೆ. ಈ ಬದಲಾವಣೆಗಳು ಕಾಲೇಜಿನ ಅಧಿಕಾರದ ಚುಕ್ಕಾಣಿ ಹಿಡಿದಿರುವವರಿಗೆ ಸರಿಕಾಣುವದಿಲ್ಲ. ಚಾರ್ಲಿಯ ವಿಚಿತ್ರ ಅಪೇಕ್ಷೆಯ ಬಗ್ಗೆ ತನಿಖೆ ನಡೆಸುವ ಪಾಂಶುಪಾಲ ನೋಲನ್ ಚಾರ್ಲಿಯ ಹಿಂದೆ ಇರುವವರಾರು ಎಮದು ತಿಳಿದುಕೊಳ್ಳಲು ಯತ್ನಿಸಿ ವಿಫಲನಾಗುತ್ತಾನೆ. ನೀಲ್ ನ ತಂದೆ ಆತನನ್ನು ವೆಲ್ಟನ್ ಅಕ್ಯಾಡೆಮಿಯಿಂದ ತೆಗೆದು ಮಿಲಿಟರಿ ಕಾಲೇಜಿಗೆ ಕಳಿಸಲು ಯತ್ನಿಸಿದಾಗ ಸಹಿಸದ ನೀಲ್ ತಂದೆಯ ರಿವಾಲ್ವರ್ ಬಳಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ನೀಲ್ ನ ತಂದೆ ಆತನ ಸಾವಿನ ಬಗ್ಗೆ ಶಾಲೆಯಲ್ಲಿ ತನಿಖೆ ನಡೆಯಿಸುತ್ತಾನೆ. ನೋಲನ್ ನೀಲ್ ನ ಗೆಳೆಯ ರಿಚರ್ಡನಿಂದ ‘ಡೆಡ್ ಪೊಯೆಟ್ಸ್ ಸೊಸೈಟಿ’ಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳುತ್ತಾನೆ. ಕೀಟಿಂಗನನ್ನು ನೀಲ್ ನ ಸಾವಿಗೆ ಜವಾಬ್ದಾರನಾಗಿ ಮಾಡಿ ಹುದ್ದೆಯಿಂದ ಅಮಾನತುಗೊಳಿಸಲಾಗುತ್ತದೆ. ರಿಚರ್ಡನ ದ್ರೋಹದ ಬಗ್ಗೆ ತಿಳಿದು ಆತನ ಮೇಲೆ ಆಕ್ರಮಣ ಮಾಡುವ ಚಾರ್ಲಿಯನ್ನು ವೆಲ್ಟನಿನಿಂದ ಹೊರದೂಡಲಾಗುತ್ತದೆ. ಕೀಟಿಂಗನ ಪ್ರಯತ್ನ ವ್ಯರ್ಥವಾಗುವುದೆ? ವೆಲ್ಟನಿನ ಶಿಕ್ಷಣ ಸಂಪ್ರದಾಯದ ಮುಷ್ಟಿಯಲ್ಲಿ ಸಿಕ್ಕಿ ನಲುಗಿಹೋಯಿತೆ? ಮುಂತಾದ ಪ್ರಶ್ನೆಗಳು ನೋಡುಗರನ್ನು ಬಾಧಿಸುತ್ತವೆ.
ಚಲನಚಿತ್ರದ ಕೊನೆಯ ಭಾಗ. ನೋಲನ್ ಹುಡುಗರಿಗೆ ಆಂಗ್ಲ ಸಾಹಿತ್ಯ ಕಲಿಸುತ್ತಿದ್ದಾನೆ ಕೀಟಿಂಗ್ ಹರಿದುಹಾಕಲು ಉತ್ತೇಜಿಸಿದ ಪ್ರಬಂಧವನ್ನೆ ತರಗತಿಯಲ್ಲಿ ಓದಲಾಗುತ್ತಿದೆ. ಕೀಟಿಂಗ್ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ತರಗತಿ ಪ್ರವೇಶಿಸುತ್ತಾನೆ. ಇದ್ದಕ್ಕಿದ್ದಂತೆ ಟಾಡ್ ಎದ್ದುನಿಂತು ಕೀಟಿಂಗನಲ್ಲಿ ತಾವು ಆಡಳಿತಮಂಡಳಿಯ ಪಕ್ಷ ವಹಿಸಿದ್ದಕ್ಕಾಗಿ ಕ್ಷಮೆ ಯಾಚಿಸುತ್ತಾನೆ. ಕುಪಿತ ನೋಲನ್ ಟಾಡನಿಗೆ ಕಾಲೇಜಿನಿಂದ ಹೊರಹಾಕುವ ಬೆದರಿಕೆ ಒಡ್ಡುತ್ತಾನೆ. ಆದರೂ ಸುಮ್ಮನಾಗದ ಟಾಡನ ಜತೆಗೆ ತರಗತಿಯ ಹುಡುಗರೆಲ್ಲ ಸೇರಿಕೊಳ್ಳುತ್ತಾರೆ. ತಮ್ಮ ಡೆಸ್ಕುಗಳ ಮೇಲೆ ಹತ್ತಿನಿಂತು ಕೀಟಿಂಗನನ್ನು ‘ಓ ಕ್ಯಾಪ್ಟನ್! ಮೈ ಕ್ಯಾಪ್ಟನ್!’ (ವಾಲ್ಟ್ ವಿಟ್ಮನ್ ಲಿಂಕನನ ಬಗ್ಗೆ ಬರೆದ ಸುಪ್ರಸಿದ್ಧ ಕವಿತೆಯ ಸಾಲು) ಎಂದು ಸಂಬೋಧಿಸುತ್ತಾರೆ. ಎಲ್ಲರನ್ನೂ ಹೊರದೂಡಲು ಸಾಧ್ಯವಿಲ್ಲದಲೆ ನೋಲನ್ ಅಸಹಾಯಕನಾಗಿ ನಿಲ್ಲುತ್ತಾನೆ. ಕೀಟಿಂಗನ ಮುಖದ ಮೇಲೆ ತೆಳುನಗೆಯೊಂದು ಮೂಡುತ್ತದೆ.
ಚಿತ್ರಕೃಪೆ: www.ingebjorg.dk
good writing … keep writing…
ಟೀನಾ ಮೇಡಮ್,
ಇದೇ ಲೇಖನವನ್ನು ನಾನು ವಿ.ಕ ವಿಶೇಷಾಂಕದಲ್ಲಿ ಓದಿದ್ದೆ. ತುಂಬಾ ಚೆನ್ನಾಗಿ ಬರೆದಿದ್ದೀರಿ….ನಿಮ್ಮ ಲೇಖನಗಳ ಸ್ಫೂರ್ತಿಯಿಂದಾಗಿ ನಾನು children of heavan ಸಿನಿಮಾ ಬಗ್ಗೆ ಬರೆದಿದ್ದೇನೆ…ಅದನ್ನು ಸಾದ್ಜ್ಯವಾದರೆ ಅವಧಿ, ಕನ್ನಡ ಭ್ಲಾಗರ್ಸ್ ನಲ್ಲಿ ನೋಡಿ….
ಧನ್ಯವಾದಗಳು…
ಹಿಂದೊಮ್ಮೆ ಈ ಸಿನೆಮಾ ನೋಡಿ ತುಂಬಾ ಮೆಚ್ಚಿಕೊಂಡಿದ್ದೆ. ಮೊನ್ನೆ ತಾನೆ ಮತ್ತೊಮ್ಮೆ ನೋಡಲು ಶುರು ಮಾಡಿದೆ. ಆ ಶಾಲೆಯನ್ನು ನೋಡುತ್ತಿದ್ದರೆ ನನ್ನ ‘ಅಳಿಕೆ’ಯಲ್ಲಿನ ದಿನಗಳು ನೆನಪಾಗುತ್ತಿದ್ದವು. 🙂
ಸುಪ್ರೀತ್
i like your blog ! 🙂 See my new blog : http://www.plsuinfo.wordpress.com
cinima nodida haage anisithu..
adbhutha cinima bagge sogasai barediddeeri..
ee thara cinimagalu yelli siguthhave madam?
ಪ್ರೀತಿಯ ಟೀನ ಮೇಡಮ್
ನನ್ನ ಹೊಸ ಪುಸ್ತಕ ‘ಅಮ್ಮ ಹೇಳಿದ ಎಂಟು ಸುಳ್ಳುಗಳು’ ಇದೇ ಏಪ್ರಿಲ್ ೨೬ರಂದು ಬಿಡುಗಡೆಯಾಗಲಿದೆ.
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ, ಬೆಳಗ್ಗೆ ೧೦.೩೦ಕ್ಕೆ ಕಾರ್ಯಕ್ರಮ ಆರಂಭವಾಗಲಿದೆ. ಹೆಸರಾಂತ ಚಿತ್ರನಟ ಶ್ರೀ ಪ್ರಕಾಶ್ ರೈ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ.
ಅಂದು ನಮ್ಮೊಂದಿಗೆ ಹೆಸರಾಂತ ಕವಿ-ಸಾಹಿತಿಗಳು, ಸಾಂಸ್ಕೃತಿಕ ಲೋಕದ ಗಣ್ಯರು ಹಾಜರಿರುತ್ತಾರೆ. ರಮೇಶ್ಚಂದ್ರ ,ಉಪಾಸನಾ ಮೋಹನ್, ಪಂಚಮ್ ಹಳಿಬಂಡಿ, ಅರ್ಚನಾ ಉಡುಪ, ರಮೇಶ್ಚಂದ್ರ ಮುಂತಾದವರಿಂದ ಮಧುರ ಭಾವಗೀತೆ ಗಾಯನವಿರುತ್ತದೆ.
ಪುಸ್ತಕ ಬಿಡುಗಡೆಯ ನೆಪದಲ್ಲಿ ಚೆಂದದ ಹಾಡು ಕೇಳೋಣ. ಚತುರ್ಭಾಷಾ ಕಲಾವಿದ ಪ್ರಕಾಶ್ ರೈ ಅವರ ಅದ್ಭುತದ್ಭುತ ಎಂಬಂಥ ಮಾತುಗಳಿಗೆ ಕಿವಿಯಾಗೋಣ.
ನೆಪ ಹೇಳಬೇಡಿ : ದಯವಿಟ್ಟು ಬನ್ನಿ.
ಸ್ಥಳ: ರವೀಂದ್ರ ಕಲಾಕ್ಷೇತ್ರ.
ಸಮಯ: ಬೆಳಗ್ಗೆ ೧೦.೩೦.
ದಿನಾಂಕ: ಏಪ್ರಿಲ್ ೨೬, ಭಾನುವಾರ
ಅದ್ಭುತವಾಗಿ ಬರೆದಿದೀರ. ನನಗೆ ಅತೀ ಇಷ್ಟವಾದ ಕೆಲವೇ ಸಿನಿಮಾಗಳಲ್ಲಿ ಇದೊಂದು. ರಾಬಿನ್ ವಿಲಿಯಮ್ಸ್ ನಿಜಕ್ಕೂ ಮಾಂತ್ರಿಕನೇ!
ಆದ್ರೆ ವಿಪರ್ಯಾಸವೆಂದರೆ ಇಂಥಾ ಒಂದು ಮೇರು ಕೃತಿಯನ್ನ ನಮ್ಮೋರು ತಂದು ‘ಮೊಹಬ್ಬತೇಂ’ ಹೆಸರಲ್ಲಿ ಹಾಳುಗೆಡವಿದ್ದು.