ಪೋರಬಂದರದ ಆತ್ಮ ಹುಡುಕುತ್ತ…

ಎರಡು ದಿನಗಳಿಂದ ನನಗೆ ರಾಜುಭಾಯಿಯ ಬಕವಾಸ್ ಕೇಳಿಕೇಳೀ ಸಾಕಾಗಿಹೋಗುತ್ತ ಬಂದಿತ್ತು. ರಾಜುಭಾಯಿಗಿಂತ ಪೀಚಲುಮನುಷ್ಯ ಇರುವದು ಸಾಧ್ಯವೇ ಇಲ್ಲ ಎಂದು ನಾನು ಆಣೆ ಮಾಡಿ ಹೇಳಬಲ್ಲೆ. ಅವನ ರೊಮ್ಯಾನ್ಸುಗಳ ಕಥೆಗಳೂ ಕೂಡ ಅವನ ದೇಹದ ಪರಿಸ್ಥಿತಿಯಿಂದ ವಿಚಲಿತಗೊಂಡು ತತ್ತರಿಸುತ್ತ ಸ್ವತಂತ್ರವಾಗಲು ಕಾತರಿಸಿಕೊಂಡಿದ್ದವು ಎಂದು ಕಾಣುತ್ತದೆ. ಫಾರಿನ್ನಿನಿಂದ ಬಂದಿದ್ದ ಹೆಂಗಸೊಬ್ಬಳು ಈತನಲ್ಲಿ ಅನುರಕ್ತಳಾದ ಕಥೆಯಿಂದ ಹಿಡಿದು ಗರ್ಬಾ ನೃತ್ಯಗಳ ಸುಪರ್ಫಿಶಿಯಲ್ ಪ್ರೇಮಪ್ರಸಂಗಗಳ ತನಕ ಎಲ್ಲವನ್ನೂ ಕೇಳಲೆಬೇಕಾಗಿದ್ದ ವಿಶೇಷಕರ್ಮ ನನಗೆ ಒದಗಿ ಬಂದಿತ್ತು. ಜತೆಗೆ ಗುಜರಾತಿನಲ್ಲಿ ಅತ್ಯಂತ ವ್ಯಾಪಕವಾಗಿರುವ ಪಿಡುಗಾದ ಪಾನ್ ಬೀಡಾಗಳ ಕಾಟ ಬೇರೆ. ರಾಜು, ಶಶಿ ಇಬ್ಬರೂ ನಾಳೆ ಬೆಳಗಾದರೆ ಪರಪಂಚದ ಬೀಡಾಸ್ಟಾಕೇ ಮುಗಿದುಹೋಗಿಬಿಡುವುದೊ ಎಂಬ ಆತಂಕ ಇರುವವರ ಹಾಗೆ ಬೀಡಾ ಅಗಿಯುವುದು, ಉಗಿಯುವುದು ನಡೆಸುತ್ತ ಇದ್ದರು. ಬೀಡಾ ಅಂಗಡಿಗಳೋ, ನಮ್ಮ ಕಿರಾಣಿ ಅಂಗಡಿಯಲ್ಲಿರುವ ಸಾಮಾನುಗಳಿಗಿಂತ ಹೆಚ್ಚಿನ ವಸ್ತುಗಳಿಂದ ಸುಸಜ್ಜಿತವಾಗಿ ಕಂಗೊಳಿಸುತ್ತ ಇದ್ದವು. ಮಗಳು ‘ಮಾ, ಇನ್ನೆಷ್ಟು ದೇವಸ್ಥಾನ ನೋಡಬೇಕೂ? ನಂಗೆ ಜನ್ರು ಎಲ್ಲ ನೂಕಾಡಿ ಕಾಲು ತುಳೀತಾರೆ..ನಾನು ಬರೊಲ್ಲಾಆಆ..’ ಎಂದು ರಾಗ ಎಳೆಯುತ್ತ ಇದ್ದಳು. ಮಾರವಾಡದ ಗ್ರಾಮೀಣ ಹೆಂಗಸರ ಬಲಪ್ರದರ್ಶನದ ಅರಿವು ನನಗೂ ಆಗಲೆ ಆಗಿದ್ದರಿಂದ ನನಗೂ ಹೂಂಗುಟ್ಟಬೇಕು ಅನಿಸುತ್ತಿತ್ತು. ಕ್ರಿಸ್ಮಸ್ ರಜಕ್ಕೆ ಗುಜರಾತಿನ ಜಾಮನಗರಕ್ಕೆ ನನ್ನ ಮೈದುನನ ಮನೆಗೆ ಭೇಟಿನೀಡಿದ್ದ ನಾವು ಸುತ್ತಮುತ್ತಲ ವಿಶೇಷಸ್ಥಳಗಳನ್ನು ನೋಡಲು ಹೊರಟಿದ್ದೆವು. ನನ್ನ ಮದುವೆಯಾದಂದಿಂದ ಕಾಟಕೊಡುವದರಲ್ಲಿ ಡಾಕ್ಟರೇಟು ಪದವಿ ಪಡೆಯುವಂತೆ ಆಗಿದ್ದ ನನ್ನ ಮೈದುನ ‘ಈ ಡ್ರೈವರನ್ನೇ ಕರಕೊಂಡು ಹೋಗಿ..’ ಎಂದು ನಗುತ್ತ ರೆಕಮೆಂಡೇಶನ್ನು ನೀಡಿದಾಗಲೆ ನಾನು ಮುಂದೆ ಬರಲಿದ್ದ ಅಪಾಯವನ್ನು ಗ್ರಹಿಸಬೇಕಾಗಿತ್ತು.
’ನೋಡಿ ರಾಜುಭಾಯಿ, ನಾನು ಇಲ್ಲಿ ಈ ಟ್ರಿಪ್ಪಿಗೆ ಬಂದಿರುವುದೆ ಪೋರಬಂದರಿನ ಸಲುವಾಗಿ. ನೀವು ನನಗೆ ಗಾಂಧೀಜಿ ಹುಟ್ಟಿದ ಮನೆ ಸರಿಯಾಗಿ ತೋರಿಸಿಬಿಡಬೇಕು. ಇಲ್ಲದಿದ್ದರೆ ನಿಮ್ಮ ಪೇಮೆಂಟಿಂದ ಅರ್ಧ ಕಟ್!!’ ಎಂದು ರಾಜುಭಾಯಿಯನ್ನು ಬೆದರಿಸಿದ್ದೆ. ಕಳೆದೆರಡು ದಿನಗಳ ನನ್ನ ಅಬ್ನಾರ್ಮಲ್ ಮೌನದಿಂದ ಬೇಸತ್ತಿದ್ದ ಆತ ನನ್ನನ್ನು ಪ್ರಸನ್ನಗೊಳಿಸಲು ಇದೇ ಸಮಯವೆಂದು ಖಾತ್ರಿ ಮಾಡಿಕೊಂಡು ತನ್ನ ಕೆಂಪುಹಲ್ಲುಗಳನ್ನು ತೋರಿಸುತ್ತ, ’ಅರೆ ಬೆಹನ್ ಜೀ. ಆಪ್ ಡೋಂಟ್ ವರಿ ಕರೋಜಿ. ನಾನು ನಿಮಗೆ ಬರೆ ಗಾಂಧೀಜಿ ಮನೆಯೇನು, ಇವತ್ತು ಪೋರಬಂದರದ ಆತ್ಮವನ್ನೆ ತೋರಿಸ್ತೇನೆ. ದಂಗಾಗಿಬಿಡಬೇಕು ನೀವು. ಮುಂದಿನ ವರುಷ ಬಂದು ಟೂರ್ ಹೋಗಲಿಕ್ಕೆ ನನ್ನನ್ನೆ ಹುಡುಕ್ತೀರ ನೋಡಿ!!’ ಅಂದ. ಮಾಧವಪುರದ ಹಸಿರು ಬಿಸಿಲ ದಾರಿಗೆ ತಂಪು ಹುಯ್ಯುತ್ತ ಇತ್ತು. ಪೋರಬಂದರು ಪ್ರವೇಶಿಸುವ ಮುನ್ನ ದಾರಿಯುದ್ದ ಹರಡಿರುವ ಚಂದದ ಬೀಚುಗಳು. ಕಂಡಲ್ಲೆಲ್ಲ ಇಳಿದು ಮನಸಾರ ಆನಂದಿಸಿದ್ದಾಯಿತು. ವಿಪರೀತ ಕುಸಿಯುತ್ತ ಇದ್ದ ಮಳಲನ್ನೂ ಲೆಕ್ಕಿಸದೆ ನೀರಿಗೆ ನುಗ್ಗಿ ದೊಡ್ಡ ಶಂಖ, ಚಿಪ್ಪುಗಳನ್ನ ಆಯ್ದಿದ್ದಾಯಿತು. ಮಗಳ ಮುಖ ಅರಳಿದ್ದು ನೋಡಿ ನಮಗು ಸಮಾಧಾನ. ಹಾಗೂ ಹೀಗೂ ಅರ್ಧ ದಿನವೇ ಬೀಚುಗಳಲ್ಲಿ ಕಳೆದುಹೋಯಿತು. ಇನ್ನು ಲೇಟಾದರೆ ಗಾಂಧೀಜಿ ಮನೆ ತಪ್ಪಿಹೋದೀತು, ಸಂಜೆ ಆರು ಗಂಟೆಗೆ ಪ್ರವೇಶ ಮುಗಿದುಹೋಗುತ್ತದೆ ಎಂದು ಶಶಿ ಎಚ್ಚರಿಸಿದಾಗ ಗಡಿಬಿಡಿ.
’ಮ್ಯಾಡಂಜೀ, ನಿಮ್ಮನ್ನ ಒಂದು ಜಾಗಕ್ಕೆ ಕರ್ಕೊಡುಹೋಗಿ ಚಾಯ್ ಕುಡಿಸ್ತೇನೆ. ಅಂತಹ ಚಾಯ್ ನೀವು ಪ್ರಪಂಚದಲ್ಲೆ ಎಲ್ಲೂ ಕುಡಿದಿರಲಿಕ್ಕಿಲ್ಲ. ಬೀಚಲ್ಲಿ ಓಡಾಡಿ ಸುಸ್ತಾಗಿದೀರಿ. ಈ ಸೂಪರ್ ಚಾಯ್ ಕುಡಿದು ಫಟಾಫಟ್ ಫ್ರೆಶ್ ಆಗಿಬಿಡಿ!’ ಅನ್ನುತ್ತಲೆ ರಾಜು ನಮ್ಮನ್ನು ಒಂದು ನೂರು ವರುಷಗಳ ಪುರಾತನ ಪಳೆಯುಳಿಕೆಯಂತೆ ಕಾಣುತ್ತಿದ್ದ ಚಾದುಕಾನಿನ ಬಳಿ ನಿಲ್ಲಿಸಿದ. ಅಂಗಡಿಯವ ಆಗಷ್ಟೆ ಹಾಲು ಕುದಿಸಿದ್ದವ ರಾಜುವನ್ನು ನೋಡುತ್ತಲೆ ಹರುಷದಿಂದ ಒಂದು ಕೂಗು ಹಾಕಿ ನಾಲಕ್ಕು ಚಹಾ ಕಳಿಸಿಕೊಟ್ಟ. ಒಂದು ಗುಟುಕು ಹೀರುತ್ತಲೆ ಶಶಿ, ’ರಾಜು, ಇನ್ನೂ ನಾಲಕ್ಕು ಹೇಳಿಬಿಡು!’ ಅಂದರು. ಅಷ್ಟು ಸ್ವಾದಿಷ್ಟವಾಗಿತ್ತು ಚಹಾ. ಅಲ್ಲೆ ಬದಿಯಲ್ಲಿ ಒಂದು ಅಂಗಡಿಯಲ್ಲಿ ಒಂದು ತರಹ ಗಬ್ಬು ವಾಸನೆ. ನಾಲಕ್ಕೈದು ಜನ ದಾರಗಳನ್ನು ಗೂಟಗಳಿಗೆ ಹಾಕಿ ಬಣ್ಣ ಉಜ್ಜುತಾ ಇರುವುದು ಕಾಣುತ್ತಿತ್ತು. ರಾಜು “ಇನ್ನೇನು ಸಂಕ್ರಾಂತಿ ಬಂತಲ್ಲಾ, ಅವತ್ತೆ ಇಲ್ಲೆಲ್ಲ ಗಾಳಿಪಟದ ಹಬ್ಬ. ಈಕಡೆ ಪೋರಬಂದರಿನ ಗಾಳಿಪಟಗಳು ಬಹಳ ಫೇಮಸ್. ನಾನೂ ಜಾಮನಗರದಿಂದ ಅವತ್ತು ಇಲ್ಲಿ ಬಂದುಬಿಡ್ತೇನೆ, ಪಟಹಾರಿಸೋದಕ್ಕೆ!!” ಎಂದು ಗಾಡಿ ಹೊರಡಿಸಿ ಒಂದು ಅಂಗಡಿಯ ಎದುರು ನಿಲ್ಲಿಸಿದ. ನಾವು ಕನಸುಮನಸಿನಲ್ಲೂ ಊಹಿಸಲಾರದಷ್ಟು ಬಣ್ಣ, ಡಿಜೈನುಗಳ ಗಾಳಿಪಟಗಳು ಅಲ್ಲಿದ್ದವು. ಆ ಅಂಗಡಿಯೋ, ನಮ್ಮಲ್ಲಿಯ ರೇಶಿಮೆಸೀರೆ ಮಾರುವ ವೈಭವೋಪೇತ ಮಳಿಗೆಗಳಂತೆ ಮಿಂಚುತ್ತಿತ್ತು.
gandhiji-house

ಗಾಂಧೀಜಿಯವರ ಮನೆ

ಗಾಂಧೀಜಿಯವರ ಹುಟ್ಟಿದ ಮನೆ ತಲೆಬಾಗಿಲು ತಲುಪುವ ತನಕ ಆ ಮನೆ ಅಲ್ಲಿದೆ ಎಂದು ತಿಳಿಯುವುದೇ ಇಲ್ಲ. ಅಷ್ಟೊಂದು ಜನಭರಿತ ಜಾಗವದು. ಒಂದು ಕಿರಿದಾದ ಓಣಿ. ರಾಶಿ ವಾಹನಗಳು. ಈ ಶತಮಾನದ್ದಲ್ಲವೆಂದು ಕಂಡರು ಮಜಬೂತಾಗಿ ನಿಂತಿರುವ ಕಟ್ಟಡಗಳು. ಇಲ್ಲೆಲ್ಲ ಪುಟ್ಟಗಾಂಧಿ ಓಡಾಡಿರಬೇಕಲ್ಲ ಎಂದು ಕಲ್ಪಿಸಿಕೊಂಡರೇನೆ ಖುಶಿಯಾಗುತ್ತಿತ್ತು. ಪುಣ್ಯಕ್ಕೆ ಗಾಂಧೀಜಿಯವರ ಮನೆಯಿರುವ ಜಾಗವನ್ನು ಸುಮಾರುಮಟ್ಟಿಗೆ ಚೆನ್ನಾಗಿಯೆ ಕಾಯ್ದಿರಿಸಿಕೊಳ್ಳಲಾಗಿದೆ. ಪುಟ್ಟಪುಟ್ಟ ಕೋಣೆಗಳು, ಪುಟ್ಟ ಕಿಟಕಿಗಳು, ಬಿಸಿಲುಮಚ್ಚು, ಓದುವ ಕೋಣೆ, ಹೆಂಗಸರ ಕೋಣೆ, ಇಕ್ಕಟ್ಟಾದ ಪ್ಯಾಸೇಜುಗಳು. ಆಗಿನ ಕಾಲಕ್ಕೆ ಅನುಕೂಲಸ್ಥರ ಮನೆಯ ಹಾಗೆ ಕಾಣುತ್ತದೆ. ಗಾಂಧೀಜಿ ಹುಟ್ಟಿದ ಜಾಗವನ್ನು ರಂಗೋಲೆ, ಹೂಗಳಿಂದ ಅಲಂಕರಿಸಿದ್ದಾರೆ. ನೋಡುತ್ತ ಇದ್ದರೆ ಮನಕ್ಕೆ ಏನೋ ತಂಪು ಆವರಿಸಿದ ಹಾಗೆನಿಸಿ ಸುಮ್ಮನೆ ನಿಂತುಕೊಂಡಿದ್ದೆವು. ಅಲ್ಲಿದ್ದ ಎಲ್ಲರೂ. ಮತ್ತೆ ಗಾಂಧೀಜಿಯ ಅಪರೂಪದ ಜಿತ್ರ, ಮನೆಯ ವಸ್ತುಗಳಿರುವ ಮ್ಯೂಸಿಯಂ. ಅಲ್ಲೇ ಒಬ್ಬ ಮನುಷ್ಯ, ಗ್ಯಾರಂಟಿ ಬರಹಗಾರನಿರಬೇಕು, ನನ್ನ ಬಳಿ ಬಂದು ನಿಂತು ಜೋರಾಗಿ – ‘ಆತಂಕದ ಮೋಡಗಳ ಎಡೆಯಿಂದಲೆ ಅಲ್ಲವೆ ಬೆಳಕಿನ ಕಿರಣಗಳು ಉದಯಿಸುವುದು? ಇವನೂ ಹೀಗೆಯೆ ಬಂದ. ನಿರೀಕ್ಷೆ ಮಾಡೋಣ, ನಿರೀಕ್ಷೆ ಮಾಡೋಣ..’ ಎಂದು ನಾಟಕೀಯವಾಗಿ ಹೇಳಿ ಹೊರಟುಹೋದ. ರಾಜುಭಾಯಿ “ನಿಮಗೆ ಅವರು ಗೊತ್ತಾ ಬೆಹನ್ ಜೀ?” ಎಂದು ಆತಂಕದಿಂದ ಕೇಳಿದ. ಇಲ್ಲ ಅಂದೆ. “ಈ ರೈಟರ್ ಲೋಗ್ ಹೀಗೆಯೆ. ಸ್ವಲ್ಪ ಹುಚ್ಚರಿರ್ತಾರೆ. ಅವರ ತಪ್ಪಿಲ್ಲ. ಮಾ ಸರಸ್ವತಿಯ ಭಕ್ತಿ ಮಾಡುವವರು ಹೀಗೆಯೆ. ಅಕ್ಷರದಲ್ಲಿ ಕಳೆದುಹೋಗಿರ್ತಾರೆ” ಎಂದು ಸಿಂಪಥಿ ವ್ಯಕ್ತಪಡಿಸಿದ. ಶಶಿ ಬಾಯಿಗೆ ಕೈಮರೆಮಾಡಿಕೊಂಡು ನಗತೊಡಗಿದರು.
santokbens-house

ಚಿತ್ರದಲ್ಲಿ ಕಾಣುವ ಕಾಂಪೌಂಡಿನ ಹಸಿರುಮನೆ ಸಂತೋಕ್ ಬೆನಳದು

ಪೋರಬಂದರದ ಇತಿಹಾಸದ ಜತೆಗೇ ಗಾಂಧೀಜಿಯವರಂತೆಯೆ ಇನ್ನೊಂದು ಹೆಸರೂ ಸೇರಿಕೊಂಡಿದೆ. ಅದು ಸಂತೋಕ್ ಬೆನ್ ಜಡೇಜಾಳದು. ಒಂದು ಕಾಲದಲ್ಲಿ ಇಡೀ ಪೋರಬಂದರನ್ನೆ ಟೆರರೈಜ್ ಮಾಡಿದ್ದ ಹೆಸರದು. ಈಗಲು ಅಲ್ಲಿ ಸಂತೋಕ್ ಬೆನಳ ಹೆಸರೆತ್ತಿದರೆ ಜನ ಬೆದರುತ್ತಾರೆ. ತನ್ನ ಗಂಡನ ಮರಣಾನಂತರ ಮಾಫಿಯಾಲೋಕದಲ್ಲಿ ಪ್ರವರ್ಧಮಾನಕ್ಕೇರಿದ ಈಕೆ ಮಾಡಿಸಿದ ಕೊಲೆಗಳಿಗೆ ಲೆಕ್ಕವೇ ಇಲ್ಲ, ಆಕೆಯ ಮನೆಯ ಎದುರಲ್ಲಿ ಪೋರಬಂದರದ ದೊಡ್ಡ ಡ್ರೈನೇಜಿದೆ. ಅದರೊಳೆಗ ಯಾರೋ ನುಸುಳಲು ಆಗದಷ್ಟು ಕೊರಚಲು, ಮುಳ್ಳುಕಂಟಿ ಅಲ್ಲಿ ತುಂಬಿಕೊಂಡಿವೆ. ಸಂತೋಕ್ ಬೆನ್ ತನಗಾಗದವರನ್ನು ಕೊಲ್ಲಿಸಿ ಹೆಣಗಳನ್ನು ಇಲ್ಲಿಯೆ ದೂಕಿಸುತ್ತಿದ್ದಳಂತೆ. ಇನ್ನುವರೆಗು ಸುಮಾರು ಹೆಣಗಳು ಪತ್ತೆಯಾಗಿಲ್ಲ. ಆಕೆಯ ಗ್ಯಾಂಗಿನ ಹುಡುಗರು ಸಂಜೆಹೊತ್ತು ತಿರುಗಾಡುವಾಗ ಹುಡುಗಿಯರು ಮನೆಗಳಲ್ಲಿ ಅಡಗಿಕೂರುತ್ತ ಇದ್ದರಂತೆ. ಆಕೆಯ ಹಿರಿಸೊಸೆಯನ್ನು ಆಕೆಯ ಎರಡನೆ ಮಗನೆ ಬರ್ಬರವಾಗಿ ಕೊಂದ. ಇಬ್ಬರೂ ಮಗಂದಿರು ಜೈಲುಹವಾ ತಿಂದರು. ಒಬ್ಬ ತಪ್ಪಿಸಿಕೊಂಡು ಭೂಗತನಾದ. ಶಬನಾ ಆಜ್ಮಿ ಅಭಿನಯದ ‘ಗಾಡ್ ಮದರ್’ ಚಲನಚಿತ್ರ  ಸಂತೋಕ್ ಬೆನಳನ್ನು ಆಧರಿಸಿದ್ದು ಎನ್ನಲಾಗುತ್ತದೆ. ಸಂತೋಕ್ ಜೈಲಿನಲ್ಲಿದ್ದಾಳೆಂದು ಕೆಲವರು ಹೇಳಿದರೆ ಕೆಲವರು ಬೇಲ್ ಪಡೆದು ರಾಜಕೋಟದಲ್ಲಿದ್ದಾಳೆಂದು ಹೇಳುತ್ತಾರೆ. ಪೋರಬಂದರದಲ್ಲಿ ಆಕೆಯ ಎರಡು ಮನೆಗಳಿವೆ. ರಾಜು ಈ ಕಥೆಯನ್ನೆಲ್ಲ ಹೇಳಿ “ನಾವು ವಾಪಸು ಹೋಗೋ ದಾರಿಯಲ್ಲೆ ಅವಳ ಮನೆ ಇದೆ, ಇಲ್ಲೇ ಸೊಲ್ಪ ಮುಂದೆ ತೋರಿಸ್ತೀನಿ.” ಅಂದ. ನಾನು ಕ್ಯಾಮೆರಾ ತೆಗೆದೆ. ರಾಜುವಿನ ಮುಖದಲ್ಲಿ ಅಲ್ಲಿಯತನಕ ಇಲ್ಲದ ಭೀತಿ ಕಾಣಿಸಿತು. “ನೋಡಿ ಬೆಹನ್ ಜೀ, ನಾನು ಗಾಡಿ ನಿಲ್ಲಿಸೋಕಾಗೊಲ್ಲ. ಕೊಂಚ ಸ್ಲೋ ಮಾಡ್ತೀನಿ. ಹಿಂದೆ ಕೂತು ಕ್ಲಿಕ್ ಮಾಡಿ. ಅವರಿಗೆ ಇದು ಯಾರ ಗಾಡಿ ಅಂತ ಗೊತ್ತುಮಾಡೋಕೆ ಹೆಚ್ಚು ಸಮಯ ಬೇಕಾಗಲ್ಲ. ಆಮೇಲೆ ನಾನು.. ಬಿಡಿ. ಅಂಥ ಜನ ಅವರು.” ಎಂದು ವಾಹನದ ವೇಗ ಕಡಿಮೆ ಮಾಡಿದ. ನಾನು ಕಿಟಕಿ ಗಾಜು ಸ್ವಲ್ಪವೇ ಕೆಳಗಿಳಿಸಿ ಕ್ಲಿಕ್ಕಿಸಿದೆ.
2008ರ ಕ್ರಿಸ್ಮಸಿನ ದಿನ. ಒಂದೇ ಊರು. ಒಬ್ಬ ಸಂತನ ಮನೆ. ಒಬ್ಬ ಹಂತಕಿಯ ಮನೆ. ಎಂಥಾ ಅಜಗಜಾಂತರ!! ವಾಹನ ಜಾಮನಗರದ ಕಡೆ ಧಾವಿಸತೊಡಗಿತು. ಪೋರಬಂದರದ ಆತ್ಮವು ಪಾನ್ ಅಂಗಡಿ, ಚಾಯ್, ಗಾಳಿಪಟ, ಗಾಂಧೀಜಿ ಮನೆಯ ಓಣಿ, ಸಂತೋಕಳ ಮನೆಯೆದುರ ಡ್ರೈನೇಜುಗಳ ಮೂಲಕ ಹಾದುಬಂದು ‘ಹೇಳು, ನಿಜವಾಗಿ ನನ್ನ ಕಂಡೆಯಾ?’ ಎಂದು ಅಣಕಿಸತೊಡಗಿತು. ಅದಕ್ಕೆ ಉತ್ತರಿಸಲು ಯತ್ನಿಸುತ್ತ ಕಣ್ಣುಹತ್ತಿದ್ದೇ ತಿಳಿಯಲಿಲ್ಲ. ಒಂದು ಪುಟ್ಟ ನಿದ್ದೆ ತೆಗೆದೆದ್ದರೆ, ಆಗಲೇ ಸಂಜೆ ಕಳೆದಾಗಿದೆ. ಹೊಸ ರಿಲಯನ್ಸ್ ರಿಫೈನರಿಯ ಸಾವಿರಗಟ್ಟಲೆ ಬೆಳಕುಗಳು ಮಾಯಾನಗರಿಯಂತೆ ಕಂಡವು. ನಾನು ಕಣ್ಣುಜ್ಜುತ್ತ “ರಾಜುಭಯ್ಯಾ, ಮುಂದಿನ ವರ್ಷ ಹೊಸ ಕಥೆಗಳ ಜತೆ ರೆಡಿಯಾಗಿರಿ!!” ಅಂದೆ.

Advertisements

6 thoughts on “ಪೋರಬಂದರದ ಆತ್ಮ ಹುಡುಕುತ್ತ…

  1. ನಿಮ್ಮ ಈ ಲೇಖನವನ್ನು ಭಾನುವಾರದ ಕನ್ನಡಪ್ರಭ ಸಾಪ್ತಾಹಿಕದಲ್ಲಿ ನೋಡಿದೆ. ಬಹಳ ಇಷ್ಟವಾಯಿತು. ಇಲ್ಲಿ ಚಿತ್ರಗಳನ್ನು ನೋಡಿ ಖುಷಿಯಾಯಿತು.

    ನಿಮ್ಮ ಬುಕ್ ಮತ್ತು ಚೆಕ್ ಲೇಖನವೂ ಚೆನ್ನಾಗಿದೆ

  2. >>ಗಾಂಧೀಜಿ ಹುಟ್ಟಿದ ಜಾಗವನ್ನು ರಂಗೋಲೆ, ಹೂಗಳಿಂದ ಅಲಂಕರಿಸಿದ್ದಾರೆ
    ಇದನ್ನು ಓದಿ ಚೂರು ದಿಗಿಲಾಯಿತು. ಗಾಂಧಿಯನ್ನು ಮನುಷ್ಯರನ್ನಾಗಿಯೇ ಇರಲು ಬಿಡುವರೆ ಎಂಬ ಪ್ರಶ್ನೆ. ಅವರನ್ನು ದೇವರು ಮಾಡಿ, “ನಾವು ಹುಲುಮಾನವ”ರೆಂಬ ಬೇಜವಾಬ್ದಾರಿ ಸುಲಭವಲ್ಲವೆ?!

    ಬರಹ ಇಷ್ಟವಾಯಿತು. ತುಂಬಾ ಥ್ಯಾಂಕ್ಸ್.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s