ಒಬ್ಬ ಮರ್ಯಾದಸ್ಥ ಮಹಿಳೆ (A Respectable Woman – Kate Chopin)

ಕೇಟ್ ಶೋಪಿನ್(ಹುಟ್ಟುನಾಮ ಕ್ಯಾಥರೀನ್ ಓ’ಫ್ಲಾಹರ್ಟಿ, ಫೆಬ್ರುವರಿ 7, 1850 – ಆಗಸ್ಟ್  22, 1904)ಳನ್ನು 20ನೇ ಶತಮಾನದ ಸ್ತ್ರೀವಾದಿ ಲೇಖಕಿಯರಲ್ಲಿ ಅಗ್ರಗಾಮಿಯೆಂದು ಪರಿಣಿಸಲಾಗುತ್ತದೆ. ಆಕೆಯ ಪ್ರಮುಖ ಕಥೆಗಳೆಂದರೆ – ‘ಡಿಸೈರೀಸ್ ಬೇಬಿ’, ‘ದ ಸ್ಟೋರಿ ಆಫ್ ಆನ್ ಅವರ್’, ಹಾಗೂ ‘ದ ಸ್ಟಾರ್ಮ್’. ಇದಲ್ಲದೆ ಆಕೆ ಕಾದಂಬರಿಗಳನ್ನೂ ರಚಿಸಿದ್ದಾಳೆ. ಕೇಟ್‌ಳ ಕಥೆಗಳು ಅಮೆರಿಕಾದ ಲೂಯಿಸಿಯಾನಾ ಪ್ರಾಂತ್ಯದಲ್ಲಿ ಕೇಂದ್ರಿತವಾಗಿವೆ. ಆಕೆಯ ಸ್ಥಳೀಕ ಕಥಾನಿರೂಪಣಾ ಶೈಲಿ ಬಹಳ ವಿಶಿಷ್ಟವಾಗಿದೆ. ಕೇಟಳ ಸಾವಿನ ನಂತರ ಆಕೆಯನ್ನು ಅಂದಿನ ಪ್ರಮುಖ ಲೇಖಕಿಯೆಂದು ಗುರುತಿಸಲಾಯಿತು.
ಮಿಸೆಸ್ ಬರೋಡಾಗೆ ಸೊಲ್ಪ ಕೋಪ ಬಂದುಬಿಟ್ಟಿತ್ತು. ಆಕೆಯ ಗಂಡ ತನ್ನ ಸ್ನೇಹಿತನಾದ ಪೂರ್ಣಚಂದ್ರನನ್ನು ಒಂದೆರಡುವಾರ ತಮ್ಮ ಪ್ಲಾಂಟೇಶನ್ನಿನಲ್ಲಿ ಕಳೆಯೋಕೆ ಆಹ್ವಾನಿಸಿದ್ದೇ ಇದಕ್ಕೆ ಕಾರಣ.
ಆ ಚಳಿಗಾಲ ಅವರುಗಳು ತಮ್ಮ ಮನೆಯಲ್ಲಿ ಸಿಕ್ಕಾಬಟ್ಟೆ ಆದರಾತಿಥ್ಯ ನಡೆಸಿದ್ದರು ಮತ್ತು ಬೆಂಗಳೂರಿನಲ್ಲಿಯೂ ಸುಮಾರು ದಿನಗಳ ಕಾಲ ಪಾರ್ಟಿ, ಕುಡಿತ, ಅದೂ ಇದೂ ಅಂತ ಎಲ್ಲಾ ರೀತಿಯಲ್ಲಿ ವ್ಯರ್ಥವಾಗಿ ಕಳೆದಿದ್ದೂ ಆಗಿತ್ತು. ಈಗ ಆಕೆ ಕೊಂಚ ವಿಶ್ರಾಂತಿ ಮತ್ತು ಗಂಡನ ಜತೆಗೆ ಅಡ್ಡಿತಡೆಗಳಿಲ್ಲದ ಸರಸ ಸಲ್ಲಾಪದ ದಿನಗಳನ್ನ ಬಯಸಿ ಎದುರು ನೋಡುತ್ತಿದ್ದಾಗ ಆತ ಈ ಪೂರ್ಣಚಂದ್ರ ಒಂದೆರಡು ವಾರಗಳ ಕಾಲ ತಮ್ಮೊಂದಿಗೆ ಇರಲಿರುವನೆಂಬ ಸುದ್ದಿ ಕೊಟ್ಟ.
ಈ ಮನುಷ್ಯನ ಬಗ್ಗೆ ಆಕೆ ಬಹಳಷ್ಟು ಕೇಳಿದ್ದಳಾದರೂ ಆತನನ್ನು ಭೇಟಿಯಾಗಿದ್ದಿಲ್ಲ. ಕಾಲೇಜಿನಲ್ಲಿ ಆಕೆಯ ಗಂಡನ ಸಹಪಾಠಿಯಾಗಿದ್ದು ಈಗ ಪತ್ರಕರ್ತನಾಗಿದ್ದ ಪೂರ್ಣಚಂದ್ರ ಜನರ ಜತೆ ಅಷ್ಟೇನೂ ಬೆರೆಯುತ್ತಿರಲಿಲ್ಲವಾಗಿದ್ದು ಆಕೆ ಇಲ್ಲಿಯವರೆಗೆ ಆತನನ್ನು ಭೇಟಿಯಾಗದಿದ್ದುದಕ್ಕೆ ಇದ್ದ ಕಾರಣಗಳಲ್ಲಿ ಬಹುಶಃ ಒಂದಾಗಿತ್ತು ಅನ್ನಿಸುತ್ತದೆ. ಆದರೆ ತನಗೇ ಅರಿವಿಲ್ಲದ ಹಾಗೆ ಆಕೆ ಅವನ ಒಂದು ಇಮೇಜನ್ನ ತನ್ನ ಮನಸ್ಸಿನಲ್ಲಿ ಕಟ್ಟಿಕೊಂಡಿದ್ದಳು. ಆಕೆಯ ಪ್ರಕಾರ ಪೂರ್ಣಚಂದ್ರನೆಂದರೆ ಎತ್ತರವಾಗಿದ್ದು, ತೆಳ್ಳಗೆ, ಸಿನಿಕನಾಗಿರುವ, ಕನ್ನಡಕ ಹಾಕಿಕೊಂಡು ತನ್ನ ಜೇಬುಗಳೊಳಗೆ ಕೈಗಳನ್ನು ಇಳಿಬಿಟ್ಟ ಒಬ್ಬ ಮನುಷ್ಯ. ಈ ಕಲ್ಪನೆಯ ಮನುಷ್ಯ ಆಕೆಗೆ ಇಷ್ಟವೇ ಇರಲಿಲ್ಲ. ಪೂರ್ಣಚಂದ್ರ ನಿಜವಾಗಿ ತೆಳ್ಳಗಿದ್ದರೂ ಬಹಳ ಎತ್ತರವೂ ಇರಲಿಲ್ಲ ಅಥವಾ ಸಿನಿಕಪ್ರವೃತ್ತಿಯವನಾಗಿರಲಿಲ್ಲ; ಆತ ಕನ್ನಡಕ ಹಾಕುತ್ತ ಇರಲಿಲ್ಲ ಮತ್ತೆ ತನ್ನ ಕೈಗಳನ್ನ ಜೇಬುಗಳಲ್ಲಿ ಇಳಿಬಿಟ್ಟುಕೊಳ್ಳುತ್ತಲೂ ಇರಲಿಲ್ಲ. ಆತನನ್ನು ಮೊದಲಬಾರಿಗೆ ಭೇಟಿಯಾದಾಗ ಮಿಸೆಸ್ ಬರೋಡಾಗೆ ಆತ ಮೆಚ್ಚುಗೆಯಾದ ಕೂಡಾ.
ಆದರೆ ಆಕೆ ಪೂರ್ಣಚಂದ್ರನನ್ನು ಮೆಚ್ಚಿಕೊಂಡಿದ್ದು ಯಾಕೆ ಎಂದು ತನಗೆ ತಾನೇ ಪ್ರಶ್ನೆ ಹಾಕಿಕೊಳ್ಳಲು ಸೊಲ್ಪ ಪ್ರಯತ್ನಪಟ್ಟಾಗಲೂ ತೃಪ್ತಿಕರ ಉತ್ತರ ಕೊಟ್ಟುಕೊಳ್ಳುವುದು ಆಕೆಗೆ ಸಾಧ್ಯವಾಗಲಿಲ್ಲ. ಆಕೆಯ ಗಂಡ ಯಶವಂತ ಆಗಾಗ ತನ್ನಲ್ಲಿದೆ ಅಂತ ಹೇಳಿಕೊಳ್ಳುವ ಜಾಣತನ ಅಥವಾ ಭರವಸೆ ಮೂಡಿಸುವ ಗುಣಗಳನ್ನಾಗಲೀ ಈತನಲ್ಲಿ ಆಕೆಗೆ ಕಂಡುಹಿಡಿಯಲಿಕ್ಕೇ ಆಗಲಿಲ್ಲ. ಇದಕ್ಕೆ ವಿರುದ್ಧವಾಗಿ ಅತಿಥಿಯನ್ನು ಮನೆಗೆ ಹೊಂದಿಕೊಳ್ಳುವಂತೆ ಮಾಡುವ ಆಕೆಯ ಆತುರದ ಚಟಪಟ ಮಾತುಗಾರಿಕೆ ಮತ್ತು ಯಶವಂತನ ನೇರ ಮಾತುಕತೆಯ ಆತಿಥ್ಯದೆದುರು ಪೂರ್ಣಚಂದ್ರ ಮೂಕಪ್ರೇಕ್ಷಕನ ಹಾಗೆ ಕೂತೇ ಇದ್ದ. ಆಕೆಯ ಜತೆ ಆತನ ನಡವಳಿಕೆ ಒಬ್ಬ ಮಹಿಳೆ ಹೇಗೆ  ಬಯಸುವಳೋ ಹಾಗೇ ಇತ್ತಾದರೂ ಆತ ಆಕೆಯಿಂದ ಮೆಚ್ಚುಗೆ ಅಥವಾ ಗೌರವ ಪಡೆಯುವ ಯಾವ ವಿಶೇಷ ಪ್ರಯತ್ನವನ್ನೂ ಮಾಡಲಿಲ್ಲ.
ಪ್ಲಾಂಟೇಶನ್ನಿಗೆ ಬಂದು ಇರಲಾರಂಭಿಸಿದ ಮೇಲೆ ಆತನಿಗೆ ವಿಶಾಲವಾದ ಪೋರ್ಟಿಕೋದಲ್ಲಿದ್ದ ಕಾರಿಂಥಿಯನ್ ಶೈಲಿಯ ಕಂಬದ ನೆರಳಿನಲ್ಲಿ ಕೂತುಕೊಂಡು ಆರಾಮವಾಗಿ ಸಿಗಾರ್ ಸೇದುತ್ತಾ ಯಶವಂತನ ಸಕ್ಕರೆ ಬೆಳೆಯುವ ಅನುಭವಗಳ ಬಗ್ಗೆ ಆಸಕ್ತಿಯಿಂದ ಕೇಳುತ್ತಾ ಇರುವುದು ಇಷ್ಟವೇನೋ ಅನ್ನುವ ಥರ ಕಾಣತೊಡಗಿತು.
ಕಬ್ಬಿನ ಗದ್ದೆಗಳನ್ನು ಸವರುತ್ತ ಬರುವ ಸುಗಂಧಪೂರಿತ ಗಾಳಿ ಅತನನ್ನು ಬೆಚ್ಚಗೆ, ವೆಲ್ವೆಟಿನಂತೆ ಸವರಿದಾಗೆಲ್ಲ ಆತ ಆಳವಾದ ಸಂತೃಪ್ತಿಯೊಡನೆ “ಇದೇ, ಇದನ್ನೇ ನಾನು ಬದುಕು ಅಂತ ಕರೆಯೋದು,” ಎಂದು ಉಸುರುವನು. ಆತನಿಗೆ ತನ್ನ ಕಾಲುಗಳಿಗೆ ಮೈ ತಿಕ್ಕಿಕೊಳ್ಳುತ್ತ ಬಳಿ ಬರುವ ದೊಡ್ಡ ನಾಯಿಗಳ ಜತೆ ಆತ್ಮೀಯವಾಗಿ ವರ್ತಿಸುವುದು ಬಹಳ ಖುಶಿಕೊಡುತ್ತಿತ್ತು. ಮೀನು ಹಿಡಿಯುವುದು ಆತನಿಗೆ ಇಷ್ಟವಿದ್ದಹಾಗೆ ಕಾಣಲಿಲ್ಲ ಮತ್ತು ಯಶವಂತ ಮೊಲದ ಶಿಕಾರಿ ಮಾಡಲು ಕರೆದಾಗಲೂ ಅವನು ಅಂತಹಾ ಆಸಕ್ತಿಯನ್ನೇನೂ ತೋರಲಿಲ್ಲ.
ಮಿಸೆಸ್ ಬರೋಡಾಳಿಗೆ ಪೂರ್ಣಚಂದ್ರನ ವ್ಯಕ್ತಿತ್ವ ಒಗಟಿನಂತೆ ಕಂಡುಬಂದರೂ ಆಕೆಗೆ ಆತ ಇಷ್ಟವಾದ. ಆತ ಒಬ್ಬ ಪ್ರೀತಿಪಾತ್ರನಾದ, ಸೌಮ್ಯ ವ್ಯಕ್ತಿಯಾಗಿದ್ದ. ಕೆಲವು ದಿನಗಳ ನಂತರ, ಆತನನ್ನು ಮೊದಲ ದಿನ ಕಂಡಿದ್ದಕ್ಕಿಂತ ಒಂದು ಚೂರೂ ಜಾಸ್ತಿ ಅರ್ಥಮಾಡಿಕೊಳ್ಳಲು ಅಸಾಧ್ಯ ಅನಿಸಿದಾಗ ಅದರ ಬಗ್ಗೆ ವಿಚಾರಮಾಡುವುದನ್ನ ಬಿಟ್ಟರೂ ಆಕೆಯೊಳಗಿನ ಕಿರಿಕಿರಿ ಕಡಿಮೆಯಾಗಲಿಲ್ಲ. ಇದೇ ಮೂಡಿನಲ್ಲಿ ಅವಳು ತನ್ನ ಅತಿಥಿ ಮತ್ತು ಗಂಡನನ್ನು ಹೆಚ್ಚಾಗಿ ಏಕಾಂತದಲ್ಲಿರಲು ಬಿಟ್ಟು ಹೋಗಿಬಿಡುತ್ತಿದ್ದಳು. ಇದರಿಂದಲೂ ಪೂರ್ಣಚಂದ್ರನಿಗೆ ಬೇಸರವಾಗದೇ ಇರುವುದನ್ನು ಕಂಡು ಆಕೆ ಬೇಕೆಂದೇ ತನ್ನನ್ನು ಅವನ ಮೇಲೆ ಹೇರತೊಡಗಿದಳು; ಉದಾಹರಣೆಗೆ  ಆತ ಮಿಲ್ ಕಡೆಗೆ ಅಥವಾ ಆಲೆಮನೆಯ ಕಡೆಗೆ ಏಕಾಂತವಾಗಿ ವಾಕ್ ಹೊರಟಾಗ ಇವಳೂ ಜತೆಗೆ ಹೋಗುವಳು. ಆತ ತನ್ನ ಸುತ್ತ ತನಗರಿವಿಲ್ಲದೆಯೇ ನಿರ್ಮಿಸಿಕೊಂಡಿದ್ದ ಗಾಂಭೀರ್ಯವನ್ನು ಮುರಿಯಲು ಆಕೆ ಎಡೆಬಿಡದೆ ಪ್ರಯತ್ನಿಸಿದಳು.
“ಯಾವಾಗ ಹೋಗುತ್ತಾನವನು-ನಿಮ್ಮ ಸ್ನೇಹಿತ?” ಒಂದು ದಿನ ಆಕೆ ಯಶವಂತನನ್ನು ಕೇಳಿದಳು. “ನನ್ನ ಮಟ್ಟಿಗೆ ಹೇಳೋದಾದರೆ ನನಗೆ ಸಿಕ್ಕಾಬಟ್ಟೆ ಬೇಸತ್ತುಹೋಗಿದೆ ಅವನಿಂದ.”
“ಇನ್ನೊಂದು ವಾರದವರೆಗೂ ಇಲ್ಲ ಡಿಯರ್. ನಂಗೆ ಅರ್ಥವಾಗ್ತಾ ಇಲ್ಲ; ಅವನು ನಿಂಗೇನೂ ತೊಂದರೆ ಕೊಡ್ತಾ ಇಲ್ಲ.”
“ಇಲ್ಲ. ತೊಂದರೆ ಕೊಟ್ರೇ ಅವನನ್ನ ಜಾಸ್ತಿ ಮೆಚ್ಚಿಕೋಬಹುದು; ಅವನು ಬೇರೆಯೋರ ಹಾಗಿದ್ದರೆ, ನಾನು ಅವನ ಆರಾಮ ಮತ್ತೆ ಮನರಂಜನೆಗೆ ಏನಾದರೂ ಏರ್ಪಾಡು ಮಾಡುವ ಹಾಗಿದ್ದರೆ.”
ಯಶವಂತ ತನ್ನ ಮಡದಿಯ ಮುದ್ದು ಮುಖವನ್ನ ತನ್ನ ಬೊಗಸೆಯ ಮಧ್ಯ ಇರಿಸಿ ಆಕೆಯ ಯೋಚನಾಕ್ರಾಂತ ಕಣ್ಣುಗಳನ್ನು ಮೃದುವಾಗಿ ನಗುತ್ತ ದಿಟ್ಟಿಸಿದ.
ಅವರಿಬ್ಬರೂ ಮಿಸೆಸ್ ಬರೋಡಾಳ ಡ್ರೆಸಿಂಗ್ ರೂಮಿನಲ್ಲಿ ಕೊಂಚ ಆಪ್ತವಾದ ಮಾತುಕತೆ ನಡೆಸುತ್ತ ಇದ್ದರು.
“ನನ್ನ ಹೆಣ್ಣೆ, ನೀನು ಎಷ್ಟೊಂದು ಆಚ್ಚರಿ ಉಂಟುಮಾಡುತ್ತೀ,” ಆತ ಆಕೆಗೆ ಹೇಳಿದ. “ನೀನು ಮಾಮೂಲು ಪ್ರಸಂಗಗಳಲ್ಲೂ ಹೇಗೆ ನಡೆದುಕೊಳ್ತೀಯ ಅಂತ ನಾನೂ ಕೂಡ ಹೇಳೋಕೆ ಸಾಧ್ಯವಾಗೋದಿಲ್ಲ.” ಆತ ಆಕೆಗೆ ಮುತ್ತೊಂದನ್ನು ನೀಡಿ ತನ್ನ ಕಫ್ಲಿಂಕ್ ಹಾಕಿಕೊಳ್ಳಲು ಕನ್ನಡಿಯ ಕಡೆ ತಿರುಗಿಕೊಂಡ.
“ನೀನು ನೋಡು ಹೇಗಿದೀಯ,” ಆತ ಮುಂದುವರೆಸಿದ, “ಆ ಪಾಪದ ಪೂರ್ಣಚಂದ್ರನ ಬಗ್ಗೆ ಇಲ್ಲಸಲ್ಲದ ಗಲಾಟೆ ಮಾಡ್ತಾ ಇದೀಯ, ಅವ ಇದನ್ನ ಬಯಸಲಿಕ್ಕೇ ಇಲ್ಲ.”
“ಗಲಾಟೆ!” ಆಕೆ ತೀಕ್ಷ್ಣವಾಗಿ ನುಡಿದಳು. “ನಾನ್ಸೆನ್ಸ್! ನೀವು ಹೀಗೆ ಹೇಳಬೋದಾದ್ರೂ ಹೇಗೆ? ಗಲಾಟೇನೇ, ನಿಜ್ವಾಗ್ಲೂ! ಆದ್ರೆ ನೀವೇ ಹೇಳಿದ್ರಲ್ಲಾ, ಅವ ಬಹಳ ಜಾಣ ಅಂತ.”
“ಹೌದು, ಅವ ಜಾಣನೇ. ಆದರೆ ಪಾಪದ ಮನುಷ್ಯ, ವಿಪರೀತ ಕೆಲಸದಿಂದ ದಣಿದುಹೋಗಿದಾನೆ. ಅದಕ್ಕೇ ನಾನು ಅವನಿಗೆ ಒಂದು ವಿಶ್ರಾಂತಿ ತಗೊ ಅಂತ ಹೇಳಿದ್ದು.”
“ನೀವೇ ಹೇಳ್ತಿದ್ರಲ್ಲ, ಅವನು ಬಹಳ ಐಡಿಯಾಗಳನ್ನ ಹೊಂದಿರೋ ಮನುಷ್ಯ ಅಂತ,” ಅವಳು ಸುಮ್ಮನಾಗದೆ ಮತ್ತೆ ಕೊಂಕು ನುಡಿದಳು. “ನಾನು ಅವ ಕುತೂಹಲ ಮೂಡಿಸೋವಂಥ ವ್ಯಕ್ತಿಯಾಗಿರಬಹುದು ಅನ್ಕೊಂಡಿದ್ದೆ, ಹೋಗ್ಲಿ. ನಾನು ಬೆಳಗ್ಗೆ ನನ್ನ ಬೇಸಿಗೆಯ ಗೌನುಗಳನ್ನ ಫಿಟಿಂಗ್ ಮಾಡಿಸೋಕೆ ಸಿಟಿಗೆ ಹೋಗ್ತಿದೀನಿ. ಮಿ. ಪೂರ್ಣಚಂದ್ರ ಹೋದ ಮೇಲೆ ನನಗೆ ಸುದ್ದಿ ಕಳಿಸಿ. ನಾನು ನನ್ನ ದಾಕ್ಷಾಯಿಣಿ ಚಿಕ್ಕಮ್ಮ ಇದಾರಲ್ಲ, ಅವರ ಮನೇಲಿ ಉಳ್ಕೋತಿದೀನಿ.”
ಆ ರಾತ್ರಿ ಆಕೆ ಕಲ್ಲುಹಾಸಿನ ವಾಕ್‌ವೇಯ ಬದಿಯಲ್ಲಿ ದೇವದಾರು ಮರದ ಕೆಳಗಿದ್ದ ಬೆಂಚೊಂದರ ಮೇಲೆ ಒಬ್ಬಂಟಿಯಾಗಿ ಕುಳಿತುಕೊಂಡಳು.
ಆಕೆಯ ಯೋಚನೆಗಳು ಅಥವಾ ಉದ್ದೇಶಗಳು ಯಾವತ್ತೂ ಇಷ್ಟು ಗೋಜಲಾಗಿದ್ದೇ ಇಲ್ಲ. ಅವುಗಳಿಂದ ಆಕೆಗೆ ತನ್ನ ಮನೆಯನ್ನು ಬೆಳಗ್ಗೆ ಬಿಟ್ಟುಹೊರಡಬೇಕೆಂಬ ವಿಶಿಷ್ಟ ತುಡಿತವನ್ನು ಬಿಟ್ಟರೆ ಬೇರೆ ಏನನ್ನೂ ಅರಿಯಲಾಗಲೇ ಇಲ್ಲ.
ಮಿಸೆಸ್ ಬರೋಡಾಳಿಗೆ ಅಷ್ಟು ಹೊತ್ತಿಗೆ ಕಲ್ಲುಹಾದಿಯ ಮೇಲೆ ಹೆಜ್ಜೆಸಪ್ಪಳ ಕೇಳಿಬಂತು; ಅದರೆ ಕತ್ತಲೆಯಲ್ಲಿ ಸಮೀಪಿಸುತ್ತಿರುವ ಒಂದು ಸಿಗಾರಿನ ಬೆಳಕು ಮಾತ್ರ ಕಾಣುತ್ತಿತ್ತು. ಅದು ಪೂರ್ಣಚಂದ್ರನೇ ಅನ್ನುವುದು ಆಕೆಗೆ ತಿಳಿಯಿತು, ಏಕೆಂದರೆ ಯಶವಂತ ಯಾವತ್ತೂ ಸಿಗಾರ್ ಸೇದಿದವನಲ್ಲ. ಆಕೆ ಕತ್ತಲೆಯಲ್ಲಿ ಆತನ ಗಮನ ಸೆಳೆಯದಿರಲು ಪ್ರಯತ್ನಿಸಿದಳಾದರೂ ಆಕೆಯ ಬಿಳಿಯ ಗೌನ್ ಆತನಿಗೆ ಆಕೆಯ ಇರವನ್ನು ಸಾರಿತು. ಆತ ತನ್ನ ಸಿಗಾರನ್ನು ಬಿಸುಟು ಆಕೆಯ ಪಕ್ಕ ಬೆಂಚಿನ ಮೇಲೆ ಆಸೀನನಾದ, ಅಕೆ ಏನು ಹೇಳುವಳೋ ಎಂಬ ಸಂಶಯವಿಲ್ಲದವನ ಹಾಗೆ.
“ನಿಮ್ಮ ಪತಿ ಇದನ್ನು ನಿಮಗೆ ಕೊಡಲು ತಿಳಿಸಿದರು, ಮಿಸೆಸ್ ಬರೋಡಾ,” ಆತ ಆಕೆ ಯಾವಾಗಲೂ ತನ್ನ ತಲೆ ಮತ್ತು ಹೆಗಲುಗಳನ್ನು ಬೆಚ್ಚಗಿಡಲು ಬಳಸುವ ತೆಳ್ಳಗಿನ, ಬಿಳಿಯ ಸ್ಕಾರ್ಫೊಂದನ್ನು ನೀಡುತ್ತ ನುಡಿದ. ಆಕೆ ಧನ್ಯವಾದದ ಮಾತೊಂದನ್ನು ಉಸುರಿ ಸ್ಕಾರ್ಫನ್ನು ಪಡೆದುಕೊಂಡು ತನ್ನ ತೊಡೆಯ ಮೇಲಿಟ್ಟುಕೊಂಡಳು.
ಆತ ರಾತ್ರಿಯ ಹವೆ ಋತುವಿನ ಮೇಲೆ ಬೀರಬಹುದಾದ ಪ್ರತಿಕೂಲ ಪರಿಣಾಮದ ಬಗ್ಗೆ ತನ್ನ ಸಾಮಾನ್ಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ. ಆಮೇಲೆ ಕತ್ತಲೆಯೊಳಗೆ ನೆಟ್ಟದೃಷ್ಟಿಯಿಂದ ನೋಡುತ್ತಾ, ತನಗೆ ತಾನೇ ಅನ್ನುವಂತೆ ಗುಣುಗುಣಿಸಿದ:
“ದಕ್ಷಿಣ ಗಾಳಿಗಳ ರಾತ್ರಿ-ಹಲವು ಮಹಾ ನಕ್ಷತ್ರಗಳ ರಾತ್ರಿ! ಇನ್ನೂ ತಲೆದೂಗುತ್ತಿರುವ ರಾತ್ರಿ…”
ಈ ರಾತ್ರಿಯ ಬಗೆಗಿನ ಅಪೂರ್ಣ ಮಾತನ್ನು ಪೂರ್ಣಗೊಳಿಸಲು ಯತ್ನಿಸಲಿಲ್ಲ. ಆ ಮಾತು ನಿಜವಾಗಿ ಅವಳಿಗೆ ಹೇಳಿದ್ದಾಗಿರಲೂ ಇಲ್ಲ.
ಪೂರ್ಣಚಂದ್ರ ಯಾವುದೇ ಲೆಕ್ಕದಲ್ಲಿಯೂ ಸಂಕೋಚದ ಮನುಷ್ಯನಾಗಿರಲಿಲ್ಲ, ಏಕೆಂದರೆ ಆತ ಅತಿಯಾದ ಆತ್ಮಪ್ರಜ್ಞೆಯುಳ್ಳವನೂ ಆಗಿರಲಿಲ್ಲ. ಆತನ ಗಾಂಭೀರ್ಯವು ಆತನ ಮನಸ್ಥಿತಿಗಳಿಗೆ ತಕ್ಕಂತೆ ಇರುತ್ತಿತ್ತೇ ವಿನಃ ತೋರಿಕೆಯದ್ದಾಗಿರಲಿಲ್ಲ. ಮಿಸೆಸ್ ಬರೋಡಾಳ ಪಕ್ಕ, ಅಲ್ಲಿ ಕೂಳಿತುಕೊಂಡಾಗ ಆತನ ಮೌನ ಆ ಹೊತ್ತು ಕರಗಿತು.
ಆತ ಕೇಳಲು ಸಹ್ಯವಾದ ಮೆಲುವಾದ ಸಂಕೋಚಪೂರಿತ ಗಡಸುದನಿಯಲ್ಲಿ ಬಿಚ್ಚುಮನಸ್ಸಿನಿಂದ ಆತ್ಮೀಯವಾಗಿ ಮಾತನಾಡತೊಡಗಿದ. ಆತ ತಾನೂ ಯಶವಂತನೂ ಒಬ್ಬರಿಗೊಬ್ಬರು ಬಹಳ ಆತ್ಮೀಯವಾಗಿದ್ದ ಕಾಲೇಜು ದಿನಗಳ ಬಗ್ಗೆ ಮಾತನಾಡಿದ; ಗುರಿಯಿಲ್ಲದ, ಅಚ್ಚ ಮಹತ್ವಾಕಾಂಕ್ಷೆಗಳ ಮತ್ತು ವಿಶಾಲ ಉದ್ದೇಶಗಳನ್ನು ಹೊಂದಿದ್ದ ದಿನಗಳ ಬಗ್ಗೆ ಮಾತನಾಡಿದ. ಈಗ ತನ್ನಲ್ಲಿ ಏನೂ ಉಳಿದಿಲ್ಲ, ಈಗಿನ ವ್ಯವಸ್ಥೆಯ ಜತೆಗೆ ತಾತ್ವಿಕ ಹೊಂದಾಣಿಕೆ-ಅಂದರೆ ಅಸ್ತಿತ್ವಕ್ಕೆ ಅವಶ್ಯಕವಿರುವಷ್ಟು ಬಯಕೆ ಮಾತ್ರ, ಆಗೀಗ ನೈಜ ಬದುಕಿನ ಅರಿವು ತಾಕುತ್ತದೆ, ಈಗ ತಾನು ಅನುಭವಿಸುತ್ತಿರುವುದು ಅದನ್ನೇ, ಎಂದು ಹೇಳಿದ.
ಆಕೆಯ ಮನಸ್ಸಿಗೆ ಆತ ಹೇಳುತ್ತಿದ್ದ ವಿಚಾರಗಳು ಎಲ್ಲೋ ಸೊಲ್ಪ ಅರ್ಥವಾದಂತೆ ಇದ್ದವು. ಆಕೆಯ ದೇಹ ಮಾತ್ರ ಆ ಘಳಿಗೆಯಲ್ಲಿ ಎಲ್ಲವನ್ನೂ ಹಿಂದಕ್ಕೆ ತಳ್ಳಿ ಮೇಲುಗೈ ಪಡೆಯಿತು. ಆಕೆ ಆತನ ಮಾತುಗಳ ಬಗ್ಗೆ ಯೋಚನೆ ಮಾಡುತ್ತಿರಲೇ ಇಲ್ಲ, ಬದಲಾಗಿ ಆತನ ದನಿಯ ವಿವಿಧ ನಾದಗಳನ್ನು ಆಸ್ವಾದಿಸುತ್ತಿದ್ದಳು. ಆಕೆಗೆ ಕತ್ತಲೆಯಲ್ಲಿ ತನ್ನ ಕೈಚಾಚಿ ತನ್ನ ಬೆರಳುಗಳ ಸೂಕ್ಷ್ಮ ತುದಿಗಳಿಂದ ಆತನ ಮುಖವನ್ನೋ ತುಟಿಯನ್ನೋ ಸ್ಪರ್ಶಿಸುವ ಬಯಕೆಯುಂಟಾಯಿತು. ಆಕೆ ಆತನ ಬಳಿಸರಿದು ಆತನ ಕೆನ್ನೆಯ ಹತ್ತಿರ ಏನನ್ನೋ ಹೇಳಲು ಇಚ್ಚಿಸಿದಳು- ಏನೆಂದು ಆಕೆಗೆ ಅರಿವಿರಲಿಲ್ಲ- ಆಕೆ ಒಬ್ಬ ಮರ್ಯಾದಸ್ಥ ಮಹಿಳೆಯಾಗಿರದಿದ್ದರೆ ಹೇಗೆ ಮಾಡಬಹುದಾಗಿತ್ತೋ, ಥೇಟ್ ಹಾಗೆಯೇ.
ಆತನ ಹತ್ತಿರ ಸರಿಯುವ ಇಚ್ಚೆ ಹೆಚ್ಚಾಗುತ್ತ ಹೋದ ಹಾಗೆ ಆಕೆ ನಿಜವಾಗಿ ಆತನಿಂದ ದೂರ ಸರಿಯಲಾರಂಭಿಸಿದಳು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೆ, ಬಹಳ ಒರಟು ವರ್ತನೆ ಅನ್ನಿಸದಿರುವ ಹಾಗೆ, ಆಕೆ ಎದ್ದು ಆತನನ್ನು ಒಂಟಿಯಾಗಿ ಬಿಟ್ಟುಹೋದಳು.
ಆಕೆ ಮನೆಯನ್ನು ತಲುಪುವ ಮುನ್ನವೇ ಪೂರ್ಣಚಂದ್ರ ಹೊಸ ಸಿಗಾರೊಂದನ್ನು ಹಚ್ಚಿ ರಾತ್ರಿಯ ಬಗ್ಗೆ ಅಪೂರ್ಣವಾಗುಳಿದಿದ್ದ ತನ್ನ ಸಾಲುಗಳಿಗೆ ಅಂತ್ಯ ಕಾಣಿಸಿದ.
ಮಿಸೆಸ್ ಬರೋಡಾಳಿಗೆ ತನ್ನ ಸ್ನೇಹಿತನೂ ಆಗಿದ್ದ ತನ್ನ ಪತಿಗೆ ತನಗೆ ಉಂಟಾಗಿದ್ದ ಆ ತಪ್ಪುಬಯಕೆಯ ಬಗ್ಗೆ ಹೇಳಿಕೊಳ್ಳುವ ಬಲವಾದ ಪ್ರಲೋಭನೆಯುಂಟಾಯಿತು. ಆದರೆ ಆಕೆ ಈ ಪ್ರಲೋಭನೆಗೆ ಶರಣಾಗಲಿಲ್ಲ. ಒಬ್ಬ ಸಭ್ಯ ಮಹಿಳೆಯಾಗಿರುವುದರ ಜತೆಗೇ ಆಕೆ ಬಹಳ ವಿವೇಕವುಳ್ಳ ಮಹಿಳೆಯೂ ಆಗಿದ್ದಳು. ಜೀವನದ ಕೆಲವು ಯುದ್ಧಗಳನ್ನು ಒಂಟಿಯಾಗಿಯೇ ಮಾಡಬೇಕೆಂದು ಆಕೆಗೆ ಅರಿವಿತ್ತು.
ಯಶವಂತ ಮಾರನೇದಿನ ಬೆಳಗ್ಗೆ ಎದ್ದಾಗ, ಆತನ ಮಡದಿ ಆಗಲೇ ಹೊರಟುಹೋಗಿಯಾಗಿತ್ತು. ಆಕೆ ನಗರಕ್ಕೆ ಬೆಳಜಾವದ ಟ್ರೈನು ಏರಿ ಹೋಗಿದ್ದಳು. ಪೂರ್ಣಚಂದ್ರ ತನ್ನ ಮನೆಯಿಂದ ಹೋಗುವವರೆಗೂ ಆಕೆ ಮರಳಲಿಲ್ಲ.
ಮುಂದಿನ ಬೇಸಿಗೆಯಲ್ಲಿ ಆತನನ್ನು ವಾಪಾಸು ಕರೆಯಿಸಿಕೊಳ್ಳುವ ಬಗ್ಗೆ ಮಾತು ನಡೆಯಿತು. ಯಶವಂತನಿಗೆ ತುಂಬ ಆಶೆಯಿದ್ದರೂ ತನ್ನ ಮಡದಿಯ ಬಲವಾದ ವಿರೋಧಕ್ಕೆ ಆತ ಮಣಿಯಲೇಬೇಕಾಯಿತು.
ಆದರೆ, ಆ ವರ್ಷ ಮುಗಿಯುವ ಮುನ್ನವೇ, ಆಕೆಯೇ ತಾನಾಗಿ ಪೂರ್ಣಚಂದ್ರನನ್ನು ತಮ್ಮಲ್ಲಿಗೆ ಆಹ್ವಾನಿಸುವ ಬಗ್ಗೆ ಪ್ರಸ್ತಾಪ ಮಾಡಿದಳು. ಆಕೆಯ ಪತಿಗೆ ಈ ಸಲಹೆ ಆಕೆಯಿಂದ ಬಂದುದಕ್ಕೆ ಅಚ್ಚರಿಯೂ ಸಂತಸವೂ ಉಂಟಾಯಿತು.
“ನನಗೆ ತುಂಬ ಸಂತೋಷವಾಗಿದೆ, ನನ್ನ ಮುದ್ದು, ಕೊನೆಗೂ ಅವನ ಬಗ್ಗೆ ನಿನಗಿದ್ದ ದ್ವೇಷ ಕರಗಿತಲ್ಲ; ಆತ ನಿಜವಾಗಿ ಅದಕ್ಕೆ ಹಕ್ಕುದಾರನಾಗಿರಲಿಲ್ಲ.”
“ಓಹ್,” ಆಕೆ ಆತನ ತುಟಿಗಳ ಮೇಲೆ ದೀರ್ಘವಾದ, ನವಿರಾದ ಮುತ್ತೊಂದನ್ನೊತ್ತಿ ನಗುತ್ತ ಹೇಳಿದಳು, “ಈಗ ಎಲ್ಲವೂ ಕರಗಿಹೋಗಿದೆ! ನೀವೇ ನೋಡುವಿರಂತೆ. ಈ ಸಾರಿ ನಾನು ಆತನ ಬಳಿ ಬಹಳ ಚೆನ್ನಾಗಿ ನಡೆದುಕೊಳ್ತೀನಿ.”
*************
Advertisements

3 thoughts on “ಒಬ್ಬ ಮರ್ಯಾದಸ್ಥ ಮಹಿಳೆ (A Respectable Woman – Kate Chopin)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s