
ನಿಜಜೀವನದಲ್ಲಿ ಮೈಕೆಲ್ ತನ್ನ ಅಪ್ಪ ಅಮ್ಮಂದಿರೊಂದಿಗೆ.. ಗೇಮ್ ಒಂದರ ಸಂದರ್ಭದಲ್ಲಿ..
ಬೆಂಗಳೂರಿನ ಬೀದಿಗಳಲ್ಲಿ ನಮ್ಮನಮ್ಮ ವಾಹನಗಳಲ್ಲಿ ಕೂತು ಓಡಾಡುವಾಗ ಕಳೆದುಹೋದ ಭಾವ ಹೊತ್ತು ಅದೂ ಇದೂ ಮಾರಿಕೊಂಡು ತಿರುಗಾಡುವ ಎಷ್ಟೊಂದು ಮಕ್ಕಳನ್ನು ನಾವು ನೋಡಿಲ್ಲ? ನಮ್ಮ ಮನೆಯ ಮಗು ಸಣ್ಣದೊಂದು ತರಚುಗಾಯ ಮಾಡಿಕೊಂಡರು ಒದ್ದಾಡುವ ನಾವು ತೊಂದರೆಯಲ್ಲಿರುವ ನೂರಾರು ಮಕ್ಕಳನ್ನು ಕಂಡೂ ಕಾಣದ ಹಾಗೆ ಮುಂದೆ ಸಾಗುತ್ತೇವೆ. ಪ್ರತಿದಿನ ಬೆಳಗ್ಗೆ ನಾವು ದಿನಪತ್ರಿಕೆಗಳಲ್ಲಿ ಕೊಂಚ ದುಡ್ಡು ವಿನಿಯೋಗಿಸಿ ಹಸಿದ ಮಕ್ಕಳಿಗೆ ಊಟ, ವಿದ್ಯೆ ನೀಡುವಂತೆ ಕೋರುವ ಜಾಹೀರಾತುಗಳನ್ನು ಕಾಣುತ್ತೇವೆ. ಹಾಗೇ ಮುಂದಿನ ಪುಟಕ್ಕೆ ಹೋಗುತ್ತೇವೆ. ಎಷ್ಟೋ ಮನೆಗಳಲ್ಲಿ ಸಣ್ಣ ಮಕ್ಕಳನ್ನು ಕೆಲಸಕ್ಕಿಟ್ಟುಕೊಂಡಿರುವುದನ್ನು ನೋಡಿಯೂ ನೋಡದಂತೆ ಇದ್ದುಬಿಡುತ್ತೇವೆ. ಇಂತಹ ಮಕ್ಕಳಿಗೆಲ್ಲ ಸರಿಯಾದ ಶಿಕ್ಷಣ, ಸೂರು, ಹೊಟ್ಟೆತುಂಬ ಊಟ ದೊರಕಿದರೆ ಇವರ ನಡುವಿನಿಂದ ಅದೆಂತಹ ಪ್ರತಿಭೆಗಳು ಹೊರಹೊಮ್ಮುವವೊ? ಹೀಗೂ ಆಗಬಹುದು ಅನ್ನುವುದಕ್ಕೆ ಒಂದು ಚಲನಚಿತ್ರ ಸಾಕ್ಷಿಯಾಗಿದೆ.
ಮತ್ತು ಅದಕ್ಕೆ 2010ರ ಆಸ್ಕರ್ ಪ್ರಶಸ್ತಿ ದೊರಕಿದೆ.
‘ದ ಬ್ಲೈಂಡ್ ಸೈಡ್’ನ ಕಥೆ ನಿಜವಾಗಿ ನಡೆದಿದ್ದು. ಧೋ ಎಂದು ಸುರಿಯುತ್ತಿರುವ ಮಳೆಯಲ್ಲಿ ಒಂದು ರಾತ್ರಿ ತನ್ನ ಕುಟುಂಬದೊಂದಿಗೆ ಕಾರಿನಲ್ಲಿ ಮನೆಗೆ ವಾಪಾಸು ತೆರಳುತ್ತಿರುವ ಲೀ ಆನ್ ಮಳೆಯಲ್ಲಿ ನೆನೆದುಕೊಂಡು ಹೋಗುತ್ತಿರುವ ಕಪ್ಪು ಅಮೆರಿಕನ್ ಹುಡುಗನೊಬ್ಬನನ್ನು ಕಂಡು ಕಾರು ನಿಲ್ಲಿಸುತ್ತಾಳೆ. ಏನು ಕೇಳಿದರೂ ಉತ್ತರಿಸದ ಆ ಹುಡುಗನಿಗೆ ಅಂದು ರಾತ್ರಿ ಲೀ ಆನ್ ಮತ್ತವಳ ಪತಿ ಶಾನ್ ತಮ್ಮ ಮನೆಯಲ್ಲಿಯೇ ಆಶ್ರಯ ನೀಡುತ್ತಾರೆ. ಒಂದು ದಿನದ ಆಶ್ರಯ ಹಲವಾರು ದಿನಗಳವರೆಗೆ ಮುಂದುವರೆಯುತ್ತದೆ. ದೊಡ್ಡ ದೇಹದ ಮಗುವಾಗಿರುವ ಹುಡುಗ ಮೈಕೆಲ್ ಓಹೆರ್ ಬಗ್ಗೆ ಲೀ ಆನಳ ಭಾವನೆಗಳು ಕರುಣೆಯಿಂದ ಅಕ್ಕರೆಯೆಡೆಗೆ ಬದಲಾಗತೊಡಗುತ್ತವೆ. ಆಕೆಯ ಇಡೀ ಕುಟುಂಬ ಮೈಕೆಲನನ್ನು ತಮ್ಮ ಕುಟುಂಬದ ಸದಸ್ಯನಂತೆ ನಡೆಸಿಕೊಳ್ಳತೊಡಗುತ್ತಾರೆ. ಆತನನ್ನು ದತ್ತುತೆಗೆದುಕೊಳ್ಳಬೇಕೆಂದು ಬಯಸುವ ಲೀ ಆನ್ ಮೈಕೆಲನನ್ನು ಅಮೆರಿಕನ್ ಫುಟ್ಬಾಲ್ ಆಟದ ತರಬೇತಿಗೆ ಕರೆದೊಯ್ಯತೊಡಗುತ್ತಾಳೆ. ಅಲ್ಲಿ ಮೊದಮೊದಲು ಎಡವಿದರೂ ನಂತರ ಮೈಕೆಲ್ ತೋರಿಸುವ ಪ್ರಗತಿ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ.
ಆದರೆ ಎಲ್ಲವೂ ಅಂದುಕೊಂಡಷ್ಟು ಸುಲಭವಿಲ್ಲ.
ಹಾರ್ಲೆಮ್ಮಿನ ಕಪ್ಪು ಅಮೆರಿಕನ್ ಬೀದಿಗಳಿಂದ ಬಂದಿರುವ ಮೈಕೆಲ್ ಬಹಳ ಹಿಂಸಾಚಾರದಿಂದ ಕೂಡಿದ ದಿನಗಳನ್ನು ಕಂಡಿದ್ದವನು. ಆತನ ತಾಯಿಗೆ ಮದ್ಯಪಾನದ ವ್ಯಸನ. ಸುತ್ತಮುತ್ತಲು ದುಂಡಾವರ್ತಿ ಹುಡುಗರು. ಮೇಲಾಗಿ ಒಬ್ಬ ಶ್ರೀಮಂತವರ್ಗದ ಬಿಳಿಯ ಮಹಿಳೆ ಒಬ್ಬ ಕಪ್ಪುಜನಾಂಗದ ಹುಡುಗನನ್ನು ದತ್ತುತೆಗೆದುಕೊಳ್ಳುವುದೆಂದರೆ? ಹಲವಾರು ಹುಬ್ಬುಗಳು ಮೇಲೇರುತ್ತವೆ. ದತ್ತುತೆಗೆದುಕೊಳ್ಳುವಿಕೆಯನ್ನು ನಿರ್ವಹಿಸುವ ಮಹಿಳಾಧಿಕಾರಿಯೂ ಕೂಡ ಮೈಕೆಲ್ ಯಾವುದೋ ಒತ್ತಡದಲ್ಲಿದ್ದಾನೆಂದು, ಮತ್ತು ಲೀ ಆನಳ ಬಯಕೆಯ ಹಿಂದೆ ಬೇರಾವುದೋ ಲಾಭದ ದುರುದ್ದೇಶವಿದೆಯೆಂದು ಭಾವಿಸಿ ಮೈಕೆಲನ ಮೇಲೆ ಅನಾವಶ್ಯಕ ಒತ್ತಡ ಹೇರತೊಡಗುತ್ತಾಳೆ. ಮೈಕೆಲನ ಹಿಂದಿನ ಸಂಗಾತಿಗಳು ಆತನ ಬದಲಾದ ಜೀವನವನ್ನು ಕಂಡು ಹೀಯಾಳಿಸತೊಡಗುತ್ತಾರೆ. ಅವರ ಪ್ರಕಾರ ಬಿಳಿಯರು ನೀಡಿದ್ದೆಲ್ಲವೂ ಎಂಜಲೇ. ಅದನ್ನು ಸ್ವೀಕರಿಸುವುದು ಅವರಿಗೆ ಆಗಿಬರದು.
ಈ ಎಲ್ಲಾ ಅಂತರಿಕ, ಬಾಹ್ಯ ಒತ್ತಡಗಳ ನಡುವೆಯೂ ಲೀ ಆನ್ ಮತ್ತು ಮೈಕೆಲರ ನಡುವಿನ ತಾಯಿ-ಮಗನ ಬಾಂಧವ್ಯ ಗಟ್ಟಿಯಾಗಿ ಹೊರಹೊಮ್ಮುತ್ತದೆ. ಮಾನವೀಯತೆ, ಪ್ರೇಮ, ಅಕ್ಕರೆಗಳು ಬಣ್ಣ, ಜಾತಿ, ವರ್ಗ, ಧರ್ಮ ಏನನ್ನೂ ಬಯಸುವುದಿಲ್ಲ, ಎಲ್ಲವನ್ನೂ ಮೀರಿ ನಿಲ್ಲುತ್ತವೆ ಎಂಬುದನ್ನು ‘ದ ಬ್ಲೈಂಡ್ ಸೈಡ್’ ಸಫಲವಾಗಿ ತೋರುತ್ತದೆ. ಅದರ ಜತೆಗೇ ಇಂತಹ ಸಂಬಂಧಗಳನ್ನು ಪ್ರಪಂಚ ಯಾವ ರೀತಿ ಹಳದಿಕಣ್ಣಿಂದ ನೋಡುತ್ತದೆ ಎಂಬುದೂ ಇಲ್ಲಿ ವ್ಯಕ್ತವಾಗಿದೆ. ತನ್ನ ಮಗನನ್ನು ಆತನ ಪ್ರತಿಯೊಂದು ಹೆಜ್ಜೆಯಲ್ಲಿಯೂ ಬಿಡದೆ ಬೆಂಬಲಿಸುವ ಗಟ್ಟಿಮನಸ್ಸಿನ ತಾಯಿ ಲೀ ಆನಳ ಪಾತ್ರ ನಿರ್ವಹಿಸಿರುವ ನಟಿ ಸ್ಯಾಂಡ್ರಾ ಬುಲಾಕ್‌ಗೆ ಈ ಸಾರೆಯ ಆಸ್ಕರ್ ದೊರೆತಿದ್ದು ತಾಯಂದಿರಿಗೆ ದೊರೆತ ದೊಡ್ಡ ಗೌರವ ಎನ್ನಬಹುದು.
ತನ್ನ ಮಗನನ್ನು ಒಳ್ಳೆಯ ಕಾಲೇಜಿಗೆ ಸೇರಿಸುವ ಲೀ ಆನ್ ಆತನನ್ನು ಹಾಸ್ಟೆಲಿನಲ್ಲಿ ಒಂಟಿಯಾಗಿ ಬಿಟ್ಟುಹೋಗುವಾಗ ಕಾರಿನ ಬಳಿ ಒಂಟಿಯಾಗಿ ದುಖಿಸುವ ದೃಶ್ಯ ಮತ್ತು ಆಕೆಯನ್ನು ಮೈಕೆಲ್ ತನ್ನದೇ ರೀತಿಯಲ್ಲಿ ಸಂತೈಸುವ ದೃಶ್ಯಗಳು ಮನಸ್ಸಿಗೆ ತಾಗುತ್ತವೆ. ಎಲ್ಲಿಯೂ ಅತಿಯಾದ ಭಾವಾವೇಶವಿಲ್ಲದೆ ಸಮತೋಲನವನ್ನು ಕಾಪಾಡಿಕೊಂಡು ಸಾಗುವ ಚಲನಚಿತ್ರ ಮಾನವೀಯ ಸಂಬಂಧಗಳ ವೈಶಾಲ್ಯ ಮತ್ತು ಸಂಕೀರ್ಣತೆಯನ್ನು ಅವುಗಳ ಎಲ್ಲ ಬಣ್ಣಗಳೊಂದಿಗೆ ನಮ್ಮೆದುರು ಇಡುತ್ತದೆ. ಮೈಕೆಲ್ ಓಹೆರ್‌ನ ಪಾತ್ರ ವಹಿಸಿರುವ ಕ್ವಿಂಟನ್ ಏರನ್ ತನ್ನ ಮೌನದಿಂದಲೆ ಬಹಳಷ್ಟನ್ನು ಹೇಳುತ್ತಾರೆ. ಚಲನಚಿತ್ರ ಎಲ್ಲಿಯೂ ಬೇಸರ ಹುಟ್ಟಿಸದು.
ಲೀ ಆನಳಂತಹ ವೀರ ತಾಯಂದಿರಿಗೆ ವಂದನೆಗಳು. ಆಕೆಯಂತಹವರಿಂದ ಬಹುಶಃ ನೂತನ ಸಂಸ್ಕೃತಿಗಳು ಹುಟ್ಟಿಕೊಳ್ಳುತ್ತವೆ ಮತ್ತು ಇದು ಆಕೆಯಂತಹ ಹಟಮಾರಿಗಳಿಂದ ಮಾತ್ರ ಸಾಧ್ಯ.
ಚಿತ್ರಕೃಪೆ: http://www.fanpop.com
ಟೀನಾ ಮೇಡಂ, ಚಿತ್ರವನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.ನಮ್ಮ ‘ಚಿನ್ನಾರಿ ಮುತ್ತ’ ನ ಕತೆಗೆ ಕೊಂಚ ಹೋಲುತ್ತೆ. ಅವಕಾಶ ಸಿಕ್ಕಾಗ ನೋಡುತ್ತೇವೆ.
ವಿನಾಯಕ,
ಅವಕಾಶ ಮಾಡಿಕೊಂಡು ಚಲನಚಿತ್ರ ನೋಡಿ. ತಿಳಿಸಿ.
ಭೇಟಿನೀಡಿ, ಓದಿದ್ದಕ್ಕೆ ಧನ್ಯವಾದಗಳು.
Tina avare…
film nodalu saadhyavaagadhe irabahudhu… aadare cinema dha insight annu chennagi neediddeeri.. thumba thanks.
ಧನ್ಯವಾದಗಳು ಸುಧೇಶ್.
ಬಹಳ ದಿನಗಳ ನಂತರ ಬ್ಲಾಗಿನಲ್ಲಿ ಭೇಟಿಯಾಗಿದ್ದು ಖುಶಿಕೊಟ್ಟಿತು.
ನಿಮ್ಮ ಹಳೆಯ ಬರಹಗಳನ್ನು ನೆನಪಿಸಿಕೊಂಡೆ..
Hii Tina,
Just finished watching ‘ the blind side’… I agree to your views..Very touching..Excellent movie:)
tina
‘the blind side’ cinema bagge odi mana kalukide.
mikel na baage avara aaptate..cinema nodabekenniside.
khushiyaaytu parichayisiddakke.
mattella aarama?
srujan
ಟೀನಾ ನಿಮ್ಮ ಕಳೆದ ವರ್ಷದ ಟೈಲರ‍್ ಲೇಖನದ ಬಗ್ಗೆ ಕೇಳಲು ನಿಮ್ಮ ಇ-ಮೇಲ್ ಅಥವಾ ಸಂಪರ್ಕ ಬೇಕಿತ್ತು.ನನ್ನ ಇಮೇಲ್‌ಗೆ ಕೂಡಲೇ ಸ್ಪಂದಿಸಿ. ವಿಷಯ ತಿಳಿಸುತ್ತೇನೆ