
ಕೆಲವು ಹಳೇ ನೆನಪುಗಳು ಎಷ್ಟೊಂದು ವಿಚಿತ್ರವಾಗಿರುತ್ತವೆ ಅಲ್ವೇ? ಆಚೆಗೆ ತಳ್ಳಿಬಿಡೋಣ ಅಂದರೂ ಬಿಡದೆ ಕಾಡುತ್ತಲೆ ಇರುತ್ತವೆ! ಈಗ ನಾನು ಹೇಳೋಕೆ ಹೊರಟಿರೋ ಸಂಗತಿನೂ ಹಾಗೇನೆ, ಅದು ಎಷ್ಟು ಹಳೇದು ಅಂದರೆ ಇನ್ನೂ ಅದು ಇಷ್ಟೊಂದು ಸ್ಪಷ್ಟವಾಗಿ ನನ್ನ ನೆನಪುಗಳಿಗೆ ತಗುಲಿಹಾಕಿಕೊಂಡಿರೋದು ಯಾಕೆ ಅಂತಲೇ ನನಗೆ ಅರ್ಥವಾಗ್ತಾ ಇಲ್ಲ. ಅದಾದಮೇಲಿಂದ ನಾನು ಅದೆಷ್ಟೋ ಭೀಕರ ಘಟನೆಗಳನ್ನ ಕಣ್ಣಾರೆ ನೋಡಿದೀನಿ, ಆದರೆ ಈ ಪುಷ್ಪವಲ್ಲಿಯ ಮುಖ ದಿನಕ್ಕೊಂದು ಸಾರಿಯಾದರೂ ನನ್ನ ಕಣ್ಣೆದುರು ಬಂದೇ ಬರುತ್ತದಲ್ಲ ಅಂತನ್ನೋದು ವಿಚಿತ್ರ ಅನ್ನಿಸ್ತದೆ. ಆಕೆಯ ಮುಖ ಇನ್ನೂ ನನ್ನ ನೆನಪಲ್ಲಿ ಹಾಗೇ ಇದೆ, ನಾನು ಬಹಳಾ ವರ್ಷಗಳ ಹಿಂದೆ ಹತ್ತೋ, ಹನ್ನೆರಡೋ ವಯಸ್ಸಿನಲ್ಲಿ ಆಕೆಯನ್ನು ಕಂಡಿದ್ದ ಹಾಗೇ.
ಅವಳು ಒಬ್ಬ ದರ್ಜಿಯಾಗಿದ್ದಳು ಮತ್ತು ಪ್ರತಿ ಗುರುವಾರ ನನ್ನ ಅಪ್ಪ ಅಮ್ಮನ ಮನೆಗೆ ಅದೂ ಇದೂ ಬಟ್ಟೆ ಹೊಲಿಯುವುದಕ್ಕೋಸ್ಕರ ಬರುವಳು. ನನ್ನ ತಂದೆತಾಯಂದಿರ ಮನೆ ಹಳ್ಳಿಕಡೆಯಲ್ಲಿ ‘ತೊಟ್ಟಿಮನೆ’ ಅಂತ ಕರೀತಾರಲ್ಲ, ಆ ಥರದ ಹೆಂಚಿನ ಮನೆ. ಅದಕ್ಕೆ ಹೊಂದಿಕೊಂಡ ಹಾಗೆ ಮೂರುನಾಲ್ಕು ತೋಟಗಳಿದ್ದವು.
ನಮ್ಮ ಹಳ್ಳಿ ಸುಮಾರು ದೊಡ್ಡದೇ, ಹೆಚ್ಚೂಕಡಿಮೆ ಸಣ್ಣ ಮಾರುಕಟ್ಟೆ ಟೌನೇ ಅನ್ನಬಹುದು. ನಮ್ಮ ಮನೆಯಿಂದ ಹಳ್ಳಿಗೆ ಸುಮಾರು ನೂರು ಯಾರ್ಡ್ ಅಂತರ. ಊರ ನಟ್ಟನಡುವೆ ಒಂದು ದೇವಸ್ಥಾನ, ಭಾಳ ಹಳೇದು, ಕಲ್ಲಿನದು. ಸಮಯ ಕಳೀತಾ ಕಲ್ಲಿನ ಬಣ್ಣವೇ ಗೊತ್ತಾಗದಹಾಗೆ ಕಪ್ಪಗಾಗಿಬಿಟ್ಟಿತ್ತು.
ಸರೀ, ಪ್ರತಿ ಗುರುವಾರ ಪುಷ್ಪವಲ್ಲಿ ಬೆಳಗ್ಗೆ ಆರೂವರೆ ಏಳುಗಂಟೆಗೇ ಹಾಜರಾಗಿಬಿಡೋಳು. ಬರ್ತಾ ಇದ್ದ ಹಾಗೇ ಹೊಲಿಗೆಮೆಶೀನಿದ್ದ ರೂಮಿಗೆ ನುಗ್ಗಿ ಕೂಡಲೆ ಕೆಲಸ ಶುರುಮಾಡಿಬಿಡೋಳು. ತೆಳ್ಳಗೆ ಎತ್ತರಕ್ಕೆ ಇದ್ದ ಅವಳಿಗೆ ಗಡ್ಡ ಇತ್ತು, ಅಥವಾ ಮುಖದ ಮೇಲೆ ಹೆಚ್ಚಿಗೆ ಕೂದಲಿತ್ತು ಅನ್ನಬಹುದು. ಅಚ್ಚರಿಪಡಿಸುವಷ್ಟು ಹೆಚ್ಚಿಗೆ ಗಡ್ಡ ಇದ್ದ ಅವಳ ಮುಖದ ಮೇಲಿನ ಕೂದಲು ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಗುಂಪುಗುಂಪಾಗಿ ಯಾರೋ ಹುಚ್ಚು ಮನುಷ್ಯ ಆ ಅಗಲ ಮುಖದ ಮೇಲೆ ಕೂದಲನ್ನ ಹೊಲಿದಿರುವ ಹಾಗೆ ಬೆಳೆದುಕೊಂಡು ಮಿಲಿಟರಿ ಅಧಿಕಾರಿಯೊಬ್ಬ ಹೆಣ್ಣುವೇಷ ಹಾಕಿದ ಹಾಗೆ ಕಾಣುತ್ತ ಇತ್ತು. ಆಕೆಯ ಮೂಗಿನ ಮೇಲೂ, ಮೂಗಿನಡಿಯಲ್ಲೂ, ಮೂಗಿನ ಸುತ್ತಲೂ, ಗದ್ದದ ಮೇಲೂ, ಕೆನ್ನೆಗಳ ಮೇಲೂ ಕೂದಲಿತ್ತು ಮತ್ತು ಸಾಮಾನ್ಯವಾಗಿ ಇರುವುದಕ್ಕಿಂತ ಬಹಳ ಜಾಸ್ತಿ ದಪ್ಪ ಮತ್ತು ಉದ್ದವಿದ್ದ ಆಕೆಯ ಹುಬ್ಬುಗಳ ಕೂದಲು ಸಾಕಷ್ಟು ಬೆಳ್ಳಿಬಣ್ಣಕ್ಕೆ ತಿರುಗಿದ್ದು ಯಾರೊ ಅಲ್ಲಿ ಮಿಷ್ಟೇಕು ಮಾಡಿಕೊಂಡು ಒಂದು ಜೊತೆ ಮೀಸೆಗಳನ್ನ ಅಂಟಿಸಿದಾರೇನೋ ಅನ್ನಿಸುವ ಹಾಗೆ ಕಾಣುತ್ತಿದ್ದವು.
ಅವಳು ಕುಂಟುತ್ತಿದ್ದಳಾದರೂ ಅದು ಕುಂಟರು ಸಾಮಾನ್ಯವಾಗಿ ಕುಂಟುವ ರೀತಿಯಿರದೆ ಕುರಿಗಳು ಏನನ್ನಾದರೂ ಹತ್ತುವಾಗ ಕುಂಟುವ ರೀತಿ ಇರುತ್ತಿತ್ತು. ಸರಿಯಾಗಿರುವ ಕಾಲಿನ ಮೇಲೆ ತನ್ನ ದೊಡ್ಡ, ಕಂಪಿಸುವ ದೇಹವನ್ನು ಊರುವಾಗಲೆಲ್ಲ ಆಕೆ ಒಂದು ಬೃಹತ್ ಅಲೆಯ ಮೇಲೆ ಸವಾರಿ ಮಾಡಲು ತಯಾರಾಗುತ್ತಿರುವಳೇನೋ ಅನ್ನಿಸುವುದು, ಮತ್ತೆ ಆಕೆ ಅಚಾನಕ್ಕಾಗಿ ಯಾವುದೋ ಗಹ್ವರವೊಂದರಲ್ಲಿ ಮುಳುಗಿ ಮಾಯವಾಗುವ ಹಾಗೆ ಧುಮ್ಮಿಕ್ಕಿ ನೆಲಕ್ಕಿಳಿಯುವಳು. ಆಕೆಯ ನಡಿಗೆ ಚಂಡಮಾರುತದಲ್ಲಿ ಸಿಕ್ಕಿಹಾಕಿಕೊಂಡ ಹಡಗಿನ ಹಾಗಿರುತ್ತಿತ್ತು. ಆಕೆ ಯಾವಾಗಲೂ ತಲೆಯಮೇಲೆ ಹೊದ್ದುಕೊಂಡಿರುವ ಸೆರಗು ಪ್ರತಿಸಾರೆ ಕುಂಟುವಾಗಲೂ ಹಾರಾಡಿಕೊಂಡು ದಿಗಂತದುದ್ದಕ್ಕೂ ಉತ್ತರದಿಂದ ದಕ್ಷಿಣಕ್ಕೆ, ದಕ್ಷಿಣದಿಂದ ಮತ್ತೆ ಉತ್ತರಕ್ಕೆ ಪ್ರಯಾಣಿಸುವ ಥರ ಭಾಸವಾಗುತ್ತ ಇತ್ತು.
ನನಗೆ ಪುಷ್ಪವಲ್ಲಿಯಮ್ಮ ಅಂದರೆ ತುಂಬ ಇಷ್ಟವಿತ್ತು. ಬೆಳಗ್ಗೆ ಎದ್ದತಕ್ಷಣ ಹೊಲಿಗೆಮಿಶೀನಿನ ಕೋಣೆಗೆ ಓಡಿಹೋಗಿ ಅಲ್ಲಿ ಆಕೆ ತನ್ನ ಕಾಲಡಿ ಬೆಚ್ಚಗಾಗಲೆಂದು ಚಾಪೆಯೊಂದನ್ನಿಟ್ಟುಕೊಂಡು ಕೆಲಸದಲ್ಲಿ ನಿಮಗ್ನಳಾಗಿರುವುದನ್ನೆ ನೋಡುತ್ತ ನಿಲ್ಲುವೆ. ನಾನು ಬಂದ ತಕ್ಷಣ ಆಕೆ ನನಗೆ ಆ ಚಳಿ ತುಂಬಿದ ದೊಡ್ಡ ಕೋಣೆಯಲ್ಲಿ ಶೀತವಾಗಬಾರದೆಂದು ತನ್ನ ಚಾಪೆಯನ್ನು ಕೊಡುವಳು.
“ಇದು ನಿನ್ನ ತಲೆಯಿಂದ ರಕ್ತ ಕೆಳಗೆ ಹರಿಯೋಹಾಗೆ ಮಾಡತ್ತೆ” ಅವಳು ನನಗೆ ಹೇಳುವಳು.
ತನ್ನ ಉದ್ದುದ್ದನೆಯ, ವಕ್ರವಾದ ಪರಿಣತ ಬೆರಳುಗಳಿಂದ ಬಟ್ಟೆಯನ್ನು ಹೊಲಿಯುತ್ತ, ತನ್ನ ಕನ್ನಡಕದ ಹಿಂದಿನ ಕಣ್ಣುಗಳಿಂದ ದಿಟ್ಟಿಸುತ್ತ ಆಕೆ ನನಗೆ ಕಥೆ ಹೇಳುವಳು. ವಯಸ್ಸು ಆಕೆಯ ದೃಷ್ಟಿಯನ್ನು ಮಸುಕಾಗಿಸಿತ್ತಾದರೂ ನನಗೆ ಆಕೆಯ ಕಣ್ಣುಗಳು ಅಗಾಧವಾಗಿ, ಇರುವುದಕ್ಕಿಂತ ಎರಡುಪಟ್ಟು ದೊಡ್ಡದಾಗಿವೆಯೇನೊ ಅನ್ನಿಸುತ್ತಿದ್ದವು.
ಆಕೆ ನನಗೆ ಹೇಳುತ್ತಿದ್ದ ಸಂಗತಿಗಳು ಮತ್ತು ಅದರಿಂದ ವಿಚಲಿತವಾಗುತ್ತಿದ್ದ ನನ್ನ ಹೃದಯವನ್ನು ನೆನಪಿಸಿಕೊಳ್ಳುವುದಾದರೆ ಆಕೆ ವಿಶಾಲ ಹೃದಯದ ಬಡಹೆಂಗಸಾಗಿದ್ದಳು ಅನ್ನಿಸುತ್ತದೆ. ಹಳ್ಳಿಯಲ್ಲಿ ಏನೇನು ನಡೆಯುತ್ತಿತ್ತು ಎಂದು ಆಕೆ ನನಗೆ ತಿಳಿಸುವಳು. ದೊಡ್ಡಿಯಿಂದ ತಪ್ಪಿಸಿಕೊಂಡ ಹಸುವೊಂದು ಮಲ್ಲಪ್ಪನ ಮಿಲ್ಲಿನ ಬಳಿ ಮಿಶೀನು ತಿರುಗುವುದನ್ನೆ ನೋಡುತ್ತ ನಿಂತಿದ್ದಿದ್ದು, ಚರ್ಚಿನ ಗೋಪುರದ ಮೇಲೆ ಒಂದು ಮೊಟ್ಟೆ ಸಿಕ್ಕಿದ್ದು ಮತ್ತು ಅದನ್ನು ಅಲ್ಲಿಡಲು ಯಾವ ಪ್ರಾಣಿ ಅಲ್ಲಿಯವರೆಗೆ ಹೋಗಿತ್ತು ಎಂದು ಯಾರಿಗೂ ಅರ್ಥವಾಗದೇ ಇದ್ದಿದ್ದು, ಮಳೆಯಲ್ಲಿ ನೆನೆದು ಒದ್ದೆಯಾದವೆಂದು ಒಣಹಾಕಿದ್ದ ಪಿಳ್ಳಯ್ಯನ ಸಾಕ್ಸುಗಳನ್ನು ಕದ್ದುಕೊಂಡುಹೋದ ಭಿಕ್ಷುಕನನ್ನೊಬ್ಬನನ್ನು ಸುಮಾರು ಹದಿನೈದು ಮೈಲಿಗಳವರೆಗೆ ಫಾಲೋ ಮಾಡಿ ಅವನ್ನು ವಾಪಾಸು ತೆಗೆದೊಕೊಂಡು ಬಂದ ಅವನ ನಾಯಿಯ ವಿಚಿತ್ರ ಕಥೆ.. ಇಂತಹ ಕಥೆಗಳನ್ನೆಲ್ಲ ಆಕೆ ನನಗೆ ಹೇಗೆ ಹೇಳುತ್ತಿದ್ದಳೆಂದರೆ ನನ್ನ ಮನಸ್ಸಿನಲ್ಲಿ ಅವು ಮರೆಯಲಾಗದ ನಾಟಕಗಳಂತೆ, ಅದ್ದೂರಿಯಾದ ನಿಗೂಢ ಕವಿತೆಗಳಂತೆ ಮತ್ತು ಕವಿಗಳು ಹುಟ್ಟುಹಾಕಿದ ಅಪೂರ್ವ ಕಥೆಗಳಂತೆ ತೋರುತ್ತಿದ್ದವು ಮತ್ತು ಇವನ್ನೆಲ್ಲ ಸಂಜೆ ನನ್ನಮ್ಮ ನನಗೆ ಹೇಳುತ್ತಿದ್ದಳಾದರೂ ಅವು ಆ ರೈತಾಪಿ ಹೆಂಗಸು ಹೇಳುತ್ತಿದ್ದ ಸಂಗತಿಗಳ ರುಚಿ, ಸಂಪೂರ್ಣತೆ ಅಥವಾ ಚೈತನ್ಯವನ್ನು ಹೊಂದಿರಲಿಲ್ಲ.
ಇಂತಹದೇ ಒಂದು ಗುರುವಾರ ಬೆಳಿಗ್ಗೆಯಿಡೀ ವಲ್ಲಿಯಮ್ಮನ ಮಾತು ಕೇಳುತ್ತ ಕಳೆದು ತೋಟದ ಹಿಂದಿನ ಕಾಡಿನಲ್ಲಿ ಆಳುಗಳ ಜತೆ ನೆಲ್ಲೀಕಾಯಿಗಳನ್ನು ಆರಿಸಿದ ಮೇಲೆ ನನಗೆ ವಲ್ಲಿಯಮ್ಮನ ಕೋಣೆಗೆ ಮತ್ತೆ ಹೋಗಬೇಕೆನಿಸಿತು. ಆ ದಿನ ಇನ್ನೂ ನನಗೆ ನಿನ್ನೆ ನಡೆದ ಹಾಗೆ ನೆನಪಿದೆ.
ಹೊಲಿಗೆಕೋಣೆಯ ಬಾಗಿಲು ದೂಡಿದಾಗ ಆ ದರ್ಜಿ ಮುದುಕಿ ಕುರ್ಚಿಯ ಬಳಿಯ ನೆಲದ ಮೇಲೆ ಬಿದ್ದಿರುವುದು ನನಗೆ ಕಾಣಿಸಿತು. ಆಕೆಯ ಮುಖ ಬೋರಲಾಗಿತ್ತು ಮತ್ತು ಆಕೆಯ ಕೈಗಳು ಉದ್ದಕ್ಕೆ ಚಾಚಿದ್ದವು. ಆದರೆ ಒಂದು ಕೈಯಲ್ಲಿ ಸೂಜಿ ಮತ್ತು ಇನ್ನೊಂದು ಕೈಯಲ್ಲಿ ಒಂದು ಶರ್ಟು ಹಾಗೇ ಇದ್ದವು. ಆಕೆಯ ಹೆಚ್ಚು ಉದ್ದನೆಯ ಕಾಲು ಆಕೆ ಕೂತಿದ್ದ ಕುರ್ಚಿಯಡಿ ಚಾಚಿಕೊಂಡಿತ್ತು ಮತ್ತು ಆಕೆಯಿಂದ ದೂರ ಉರುಳಿಕೊಂಡು ಹೋಗಿದ್ದ ಕನ್ನಡಕ ಗೋಡೆಯ ಬಳಿ ಹೊಳೆಯುತ್ತಿತ್ತು.
ನಾನು ಜೋರಾಗಿ ಕಿರುಚುತ್ತಾ ಅಲ್ಲಿಂದ ಓಡಿಹೋದೆ. ಅವರೆಲ್ಲ ಓಡುತ್ತ ಬಂದರು ಮತ್ತು ಕೆಲವೇ ನಿಮಿಷಗಳಲ್ಲಿ ವಲ್ಲಿಯಮ್ಮ ಸತ್ತುಹೋದರೆಂದು ನನಗೆ ತಿಳಿಸಿದರು.
ನನ್ನ ಬಾಲಹೃದಯವನ್ನು ಹಿಡಿದಲ್ಲಾಡಿಸಿದ ಆ ಅಗಾಧ, ಮನೋಭೇದಕ, ದಾರುಣವಾದ ನೋವನ್ನು ವಿವರಿಸಲಾರೆ. ನಾನು ಮೆಲ್ಲಗೆ ಹಜಾರಕ್ಕೆ ಹೋಗಿ ದೊಡ್ಡ, ಹಳೆಯ ಕುರ್ಚಿಯೊಂದರ ಆಳಗಳಲ್ಲಿ ಅವಿತು ಕೂತುಕೊಂಡು ಅಳತೊಡಗಿದೆ. ಅಲ್ಲಿಯೇ ನಾನು ಸುಮಾರುಹೊತ್ತು ಕೂತಿರಬೇಕು, ಏಕೆಂದರೆ ರಾತ್ರಿಯಾಯಿತು. ಇದ್ದಕ್ಕಿದ್ದಂತೆ ಅಲ್ಲಿಗೆ ಯಾರೋ ಒಂದು ದೀಪ ಹಿಡಿದುಕೊಂಡು ಬಂದರು..ಅವರಿಗೆ ನಾನು ಕಾಣಿಸಿರಲಿಕ್ಕಿಲ್ಲ..ಮತ್ತು ನನಗೆ ನನಗೆ ಪರಿಚಿತವಿದ್ದ ವೈದ್ಯರ ದನಿಯು ನನ್ನ ಅಪ್ಪ, ಅಮ್ಮನ ಜತೆ ಮಾತನಾಡುವುದು ನನಗೆ ಕೇಳತೊಡಗಿತು.
ಅವರಿಗೆ ಕೂಡಲೆ ಹೇಳಿಕಳಿಸಲಾಗಿತ್ತು ಮತ್ತು ಅವರು ಸಾವಿನ ಕಾರಣವನ್ನು ವಿವರಿಸುತ್ತಿದ್ದಿದ್ದು ನನಗೇನೂ ಅರ್ಥವಾಗಲಿಲ್ಲ. ಆಮೇಲೆ ಅವರು ಕೂತುಕೊಂಡು ಕೊಂಚ ಕಾಫಿ ಮತ್ತು ಬಿಸ್ಕೀಟುಗಳನ್ನು ಸೇವಿಸಿದರು.
ಆವರು ಮಾತನಾಡುತ್ತಲೇ ಇದ್ದರು ಮತ್ತು ಅಂದು ಅವರು ಹೇಳಿದ್ದು ಸಾಯುವವರೆಗೂ ನನ್ನ ಮನಸ್ಸಿನಿಂದ ಮರೆಯಾಗಲಿಕ್ಕಿಲ್ಲ. ನಾನು ಅವರು ಹೇಳಿದ ಮಾತುಗಳನ್ನು ಅಂತೆಯೇ ಪುನರಾವರ್ತಿಸಬಲ್ಲೆ ಅನ್ನಿಸುತ್ತದೆ ನನಗೆ.
“ಆಹ್!!” ಆತ ಹೇಳಿದರು. “ಪಾಪದ ಹೆಂಗಸು! ನಾನು ಇಲ್ಲಿಗೆ ಬಂದ ದಿನವೇ ಆಕೆ ಕಾಲು ಮುರಿದುಕೊಂಡದ್ದು. ನಾನು ಡ್ಯೂಟಿ ಮುಗಿಸಿ ಕೈತೊಳಿದಿರಲಿಕ್ಕೂ ಇಲ್ಲ, ಅರ್ಜೆಂಟಾಗಿ ಹೇಳಿಕಳಿಸಿದರು. ಬಹಳ ಕೆಟ್ಟ ಕೇಸಾಗಿತ್ತು ಅದು, ಬಹಳ ಕೆಟ್ಟದಾಗಿತ್ತು ಸ್ಥಿತಿ.”
“ಆಗ ಅವಳಿಗೆ ಹದಿನೇಳು ವರ್ಷ ಮತ್ತು ಚೆಂದದ ಹುಡುಗಿ, ಬಲು ಚೆಂದ! ಯಾರಾದರು ನಂಬ್ತಾರೆಯೆ? ನಾನು ಅವಳ ಕಥೇನ ಇದಕ್ಕೆ ಮುಂಚೆ ಹೇಳಿಯೇ ಇಲ್ಲ; ನಿಜ ಹೇಳಬೇಕೆಂದರೆ ಇದು ನನಗೆ ಮತ್ತು ಇನ್ನೊಂದು ವ್ಯಕ್ತಿಗೆ ಮಾತ್ರ ಗೊತ್ತಿರುವುದು, ಹಾಗೂ ಆ ವ್ಯಕ್ತಿ ಈಗ ಈ ಕಡೆಯಲ್ಲೆಲ್ಲು ವಾಸವಾಗಿಲ್ಲ. ಈಗ ಆಕೆ ಸತ್ತುಹೋಗಿರೋದರಿಂದ ನಾನು ಈ ವಿಷಯದ ಬಗ್ಗೆ ಮಾತನಾಡಬಹುದು ಅಂತ ಕಾಣುತ್ತೆ.
ಹಳ್ಳಿಗೆ ಆ ಅಸಿಸ್ಟೆಂಟ್ ಟೀಚರ್ ವಾಸವಾಗಿರಲು ಆಗಷ್ಟೆ ಬಂದಿದ್ದ; ನೋಡಲು ಚೆನ್ನಾಗಿದ್ದ ಅವ ಮಿಲಿಟರಿಯವನ ಹಾಗಿದ್ದ. ಎಲ್ಲ ಹುಡುಗಿಯರೂ ಅವನ ಹಿಂದೆಯೇ ಬಿದ್ದಿದ್ದರೂ ಅವನು ಮಾತ್ರ ತಾತ್ಸಾರದಿಂದಲೆ ಇದ್ದ. ಇದಲ್ಲದೆ ಅವನಿಗೆ ತನ್ನ ಮೇಲಧಿಕಾರಿಯಾಗಿದ್ದ ಶಾಲಾ ಮಾಸ್ತರ ಮುದುಕ ಗೌರೀಶನ ಬಗ್ಗೆ ಬಹಳ ಭಯವಿತ್ತು. ಈ ಗೌರೀಶ ಯಾವಾಗಲೂ ಹಾಸಿಗೆಯಿಂದೇಳುವಾಗ ಎಡಬದಿಗೇ ಏಳುತ್ತಿದ್ದ ಎನ್ನುವ ಹಾಗಿದ್ದ.
ಮುದುಕ ಗೌರೀಶ ಅದಾಗಲೇ ಈಗ ಸತ್ತುಹೋಗಿದಾಳಲ್ಲ, ಅದೇ ಪುಷ್ಪವಲ್ಲಿಯನ್ನ ಕೆಲಸಕ್ಕಿಟ್ಟುಕೊಂಡಿದ್ದ, ಅದು ಆವಾಗ ಆಕೆಯ ಹೆಸರು, ಆಮೇಲೆ ಆಕೆಗೆ ಈಗ ವಲ್ಲಿಯಮ್ಮ ಅಂತ ನೀವೆಲ್ಲ ಕರೀತೀರಲ್ಲ ಆ ಆಡ್ಡಹೆಸರು ಬಂದಿದ್ದು. ಯುವ ಅಸಿಸ್ಟೆಂಟ್ ಮಾಸ್ತರ ಈ ಚೆಂದದ ಹುಡುಗಿಯನ್ನ ತನಗಾಗಿ ಆಯ್ದುಕೊಂಡ ಮತ್ತು ಆ ಹುಡುಗಿಯೂ ಈ ತಾತ್ಸಾರಮನೋಭಾವದ ಯೋಧ ತನ್ನನ್ನು ಆಯ್ಕೆಮಾಡಿಕೊಂಡದ್ದನ್ನೆ ಗೌರವ ಎಂದು ಭಾವಿಸಿದಳು. ಏನಾದರಾಗಲಿ, ಆಕೆ ಆತನನ್ನು ಪ್ರೇಮಿಸತೊಡಗಿದಳು ಮತ್ತು ಆತ ಆಕೆಯನ್ನು ದಿನದ ಹೊಲಿಗೆ ಕೆಲಸವೆಲ್ಲ ಮುಗಿದ ನಂತರ ಶಾಲೆಯ ಹಿಂದೆಯೇ ಇದ್ದ ಹುಲ್ಲಿನ ಬಣವೆಯಲ್ಲಿ ಮೊದಲ ಬಾರಿಗೆ ಭೇಟಿಯಾಗಲು ಬರುವಂತೆ ಮನವೊಲಿಸಿದ.
ಅವಳು ಮನೆಗೆ ಹೋಗುವವಳ ಹಾಗೆ ನಟಿಸಿದಳು ಮತ್ತು ಕೆಳಗೆ ಹೋಗುವುದಕ್ಕೆ ಬದಲಾಗಿ ಅವಳು ಮೇಲೆ ಹೋಗಿ ತನ್ನ ಪ್ರಿಯತಮನಿಗಾಗಿ ಕಾಯುತ್ತ ಹುಲ್ಲಿನಲ್ಲಿ ಅಡಗಿಕೊಂಡಳು. ಕೆಲ ಸಮಯದಲ್ಲೆ ಆತನೂ ಬಂದ, ಮತ್ತು ಆಕೆಯ ಬಳಿ ಚೆಂದದ ಮಾತುಗಳನ್ನಾಡಲು ತೊಡಗಿದ. ಆಗ ಬಣವೆಯಿದ್ದ ಕೊಟ್ಟ್ತಿಗೆಯ ಬಾಗಿಲು ತೆರೆದುಕೊಂಡಿತು ಮತ್ತು ಅಲ್ಲಿ ಕಾಣಿಸಿಕೊಂಡ ಶಾಲಾ ಮಾಸ್ತರ ಕೇಳಿದ
“ಅಲ್ಲೇನು ಮಾಡ್ತಿದೀಯ ಸುಧಾಕರ?”.
ತಾನು ಸಿಕ್ಕಿಹಾಕಿಕೊಳ್ಳುವುದು ಖಚಿತವೆಂದುಕೊಳ್ಳುತ್ತ ಆ ಯುವಕ ಮಾಸ್ತರನ ಯುಕ್ತಿಯೆಲ್ಲ ಎತ್ತಲೋ ಹಾರಿಹೋಯಿತು ಮತ್ತು ಅವ ಪೆದ್ದುಪೆದ್ದಾಗಿ ಉತ್ತರಿಸಿದ: ‘ನಾನು ಹುಲ್ಲಿನ ಮೇಲೆ ಮಲಕೊಂಡು ಕೊಂಚ ವಿಶ್ರಾಂತಿ ತಗೊಳೋಣ ಅಂತ ಬಂದೆ, ಅಷ್ಟೆ ಸಾರ್.’
ಆ ಕೊಟ್ಟಿಗೆ ಬಲು ದೊಡ್ಡದಾಗಿತ್ತು ಮತ್ತೆ ಅಲ್ಲಿ ಸಿಕ್ಕಾಬಟ್ಟೆ ಕತ್ತಲಿತ್ತು. ಸುಧಾಕರ ಆ ಹುಡುಗಿಯನ್ನ ಒಂದು ಕಡೆ ದೂಕಿ ಹೇಳಿದ: ‘ಆಕಡೆಗೆ ಹೋಗಿ ಅವಿತುಕೋ. ನನ್ನ ಪರಿಸ್ಥಿತಿ ಚೆನ್ನಾಗಿಲ್ಲ, ಆದ್ರಿಂದ ದೂರ ಹೋಗಿ ಬಚ್ಚಿಟ್ಟುಕೋ’
ಈ ಪಿಸುಗುಟ್ಟುವಿಕೆಯನ್ನ ಕೇಳಿಸಿಕೊಂಡ ಶಾಲಾಮಾಸ್ತರ ಮುಂದುವರಿಸಿದ: ‘ಯಾಕೆ, ಅಲ್ಲಿ ನೀನೊಬ್ಬನೇ ಇಲ್ಲಾಂತ ಕಾಣುತ್ತೆ.’
’ನಾನೊಬ್ನೇ ಇದೀನಿ ಸಾರ್ ಇಲ್ಲಿ!’
’ಇಲ್ಲ, ಯಾಕಂದ್ರೆ ನೀನು ಮಾತಾಡ್ತಾ ಇದೀಯ.’
’ನಾನು ಆಣೆ ಮಾಡಿ ಹೇಳ್ತೀನಿ ಸಾರ್’
’ನಾನು ಬೇಗದಲೆ ಕಂಡು ಹಿಡೀತೀನಿ’ ಆ ಮುದುಕ ಹೇಳಿದ ಮತ್ತೆ ಕೊಟ್ಟಿಗೆಯ ಬಾಗಿಲಿಗೆ ಎರಡೆರಡು ಬೀಗ ಹಾಕಿ ಬೆಳಕು ತರಲು ಹೊರಹೋದ.
ಇಂಥಾ ಪರಿಸ್ಥಿತಿಗಳಲ್ಲಿ ಕೆಲವೊಮ್ಮೆ ಹೇಡಿಗಳು ಕಂಡುಬರುವ ಹಾಗೆ ಆ ಯುವಕ ತನ್ನ ಸ್ಥಿಮಿತ ಕಳೆದುಕೊಂಡು ಇದ್ದಕ್ಕಿದ್ದಹಾಗೆ ಕುಪಿತನಾಗಿ ಪದೇಪದೇ ಹೇಳತೊಡಗಿದ: ‘ಬಚ್ಚಿಟ್ಟುಕೋ, ಅವನು ನಿನ್ನನ್ನ ಕಂಡುಹಿಡೀಕೂಡದು. ನಿನ್ನಿಂದ ನನ್ನ ಜೀವನವಿಡೀ ಸಂಪಾದನೆಗೆ ಸಂಚಕಾರ ಬಂದುಬಿಡತ್ತೆ; ನಿನ್ನಿಂದಾಗಿ ನನ್ನ ವೃತ್ತಿಜೀವನವೇ ಹಾಳಾಗಿಹೋಗತ್ತೆ! ಮೊದ್ಲು ಅವಿತುಕೋ!’
ಅವರಿಗೆ ಮತ್ತೆ ಬೀಗ ತೆರೆಯುವ ಸದ್ದು ಕೇಳಿಸಿತು ಮತ್ತು ಪುಷ್ಪವಲ್ಲಿ ಬೀದಿಯ ಕಡೆಗೆ ಇದ್ದ ಕಿಟಕಿಯ ಕಡೆಗೆ ಓಡಿ ಬಲುಬೇಗನೆ ಅದನ್ನು ತೆರೆದವಳೇ ತಗ್ಗಿದ ಆದರೆ ನಿರ್ಣಾಯಕ ದನಿಯಲ್ಲಿ ಹೇಳಿದಳು:
‘ಆತ ಹೋದ ನಂತರ ನೀನು ಬಂದು ನನ್ನನ್ನ ಕರೆದುಕೊಂಡು ಹೋಗಬೇಕು,’ ಮತ್ತೆ ಅವಳು ಹೊರಗೆ ಹಾರಿದಳು.
ಮುದುಕ ಗೌರೀಶಪ್ಪನಿಗೆ ಯಾರೂ ಕಾಣಲಿಲ್ಲ ಮತ್ತು ಅಚ್ಚರಿಪಡುತ್ತ ಆತ ಕೆಳಗೆ ಹೊರಟುಹೋದ! ಕಾಲುಗಂಟೆ ಕಳೆದನಂತರ ಸುಧಾಕರ ನನ್ನ ಹತ್ತಿರ ಬಂದವನೇ ತನ್ನ ಸಾಹಸದ ಬಗ್ಗೆ ತಿಳಿಸಿದ. ಆ ಹುಡುಗಿ ಎರಡನೆ ಮಹಡಿಯಿಂದ ಬಿದ್ದಿದ್ದರಿಂದ ಏಳಲಿಕ್ಕಾಗದೆ ಗೋಡೆಗೆ ಒರಗಿಕೊಂಡು ಕೂತೇ ಇದ್ದಳು. ನಾನು ಅವನ ಜತೆ ಆಕೆಯನ್ನ ಕರೆದುಕೊಂಡು ಹೋಗಲು ಹೋದೆ. ಮಳೆ ಜೋರಾಗಿ ಸುರಿಯುತ್ತಲೇ ಇತ್ತು ಮತ್ತು ಆ ದುರದೃಷ್ಟವಂತೆಯಾದ ಹುಡುಗಿಯನ್ನ ನನ್ನ ಮನೆಗೆ ಕರೆದುಕೊಂಡು ಬಂದೆ, ಏಕೆಂದರೆ ಆಕೆಯ ಬಲಗಾಲು ಮೂರು ಜಾಗಗಳಲ್ಲಿ ಮುರಿದುಹೋಗಿತ್ತು ಮತ್ತು ಮೂಳೆಗಳು ಮಾಂಸದಿಂದ ಈಚೆಗೆ ಬಂದುಬಿಟ್ಟಿದ್ದವು. ಅವಳು ನೋವಿನ ಬಗ್ಗೆ ಏನೂ ದೂರು ಹೇಳಲಿಲ್ಲ, ಆದರೆ ಶ್ಲಾಘನೀಯವೆನ್ನಬಹುದಾದ ತಾಳ್ಮೆಯೊಂದಿಗೆ ಉಸುರಿದಳು: ‘ನನಗೆ ಶಿಕ್ಷೆ ದೊರಕಿತು, ಒಳ್ಳೆಯ ಶಿಕ್ಷೆಯೇ ದೊರಕಿತು!’
ನಾನು ಸಹಾಯಕ್ಕಾಗಿ ಹೇಳಿಕಳಿಸಿದೆ ಮತ್ತು ಆಕೆಯ ಸ್ನೇಹಿತರನ್ನೂ ಕರೆಸಿದೆ ಮತ್ತು ಅವರಿಗೆಲ್ಲ ಆಕೆಯನ್ನು ನನ್ನ ಮನೆಯೆದುರಿಗೆ ಯಾವುದೋ ಗಾಡಿ ಗುದ್ದಿ ತಪ್ಪಿಸಿಕೊಂಡು ಹೊರಟುಹೋಯಿತೆಂದು ಎಂಥದೋ ಕಥೆಕಟ್ಟಿ ಹೇಳಿದೆ. ಅವರು ಅದನ್ನು ನಂಬಿದರು ಮತ್ತು ಪೊಲೀಸರು ಒಂದು ತಿಂಗಳವರೆಗೆ ಈ ಅಪಘಾತಕ್ಕೆ ಯಾರು ಕಾರಣರಿರಬಹುದು ಎಂದು ಹುಡುಕಾಡಿ ತಲೆಕೆಡಿಸಿಕೊಂಡರು.
ಅಷ್ಟೆ! ಈಗ ನಾನು ಹೇಳುವುದೇನೆಂದರೆ ಈ ಹುಡುಗಿ ಒಬ್ಬ ಹೀರೋಯಿನ್ ಮತ್ತು ಇತಿಹಾಸದಲ್ಲಿ ದೊಡ್ಡದೊಡ್ಡ ಸಾಧನೆ ಮಾಡಿದವರಷ್ಟು ದಮ್ ಇರುವವಳಾಗಿದ್ದಳು ಅಂತ.
ಅದು ಆಕೆಯ ಏಕೈಕ ಪ್ರೇಮಸಂಬಂಧವಾಗಿತ್ತು, ಮತ್ತು ಆಕೆ ಕುಮಾರಿಯಾಗಿಯೇ ಸತ್ತಳು. ಆಕೆ ಒಬ್ಬ ಹುತಾತ್ಮಳಾಗಿದ್ದಳು, ಒಂದು ಉದಾತ್ತ ಆತ್ಮವನ್ನು ಹೊಂದಿದ ಶ್ರೇಷ್ಠ ಹೆಣ್ಣಾಗಿದ್ದಳು! ಆಕೆಯನ್ನು ಬಹಳ ಗೌರವಿಸದೆ ಹೋಗಿದ್ದಲ್ಲಿ ನಾನು ಈ ಕಥೆಯನ್ನು ನಿಮಗೆ ಹೇಳುತ್ತಿರಲಿಲ್ಲ ಮತ್ತು ಆಕೆ ಬದುಕಿದ್ದಾಗ ಯಾರಿಗೂ ಹೇಳಲೂ ಇಲ್ಲ; ಯಾಕೆ ಅಂತ ನಿಮಗೆ ಅರ್ಥವಾಗಿರಬಹುದು.”
ವೈದ್ಯರು ಮಾತು ನಿಲ್ಲಿಸಿದರು; ಅಮ್ಮ ಅಳುತ್ತಿದ್ದಳು ಮತ್ತು ಅಪ್ಪ ಏನೋ ಹೇಳಿದ್ದು ನನಗೆ ಸರಿಯಾಗಿ ತಿಳಿಯಲಿಲ್ಲ; ಆಮೇಲೆ ಅವರೆಲ್ಲ ಕೋಣೆಯಿಂದ ಆಚೆ ಹೋದರು. ನಾನು ಕುರ್ಚಿಯ ಮೇಲೆ ಮಂಡಿಯೂರಿ ಕುಳಿತು ಅಳುತ್ತಲೇ ಇದ್ದೆ. ಆಗಲೆ ನನಗೆ ಭಾರವಾದ ಹೆಜ್ಜೆಗಳು ಮತ್ತು ಸ್ಟೇರ್‌ಕೇಸಿಗೆ ಏನೋ ತಗುಲುತ್ತಿರುವಹಾಗೆ ವಿಚಿತ್ರವಾದ ಸದ್ದುಗಳು ಕೇಳಿದವು.
ಅವರು ಪುಷ್ಪವಲ್ಲಿಯ ದೇಹವನ್ನು ಕೊಂಡೊಯ್ಯುತ್ತ ಇದ್ದರು.
ಚಿತ್ರಕೃಪೆ: http://www.toruiwaya.com
ಮನ ಕರಗಿಸುವ ವೃತ್ತಾಂತ.