ಎಚ್.ಎಚ್. ಮನ್ರೋ(ಸಾಕಿ)(1870-1916)
ಮೂಲಕಥೆ: ಮಿಸೆಸ್ ಪ್ಯಾಕೆಲ್‌ಟೈಡ್ಸ್ ಟೈಗರ್
ಲೇಖಕರ ಬಗ್ಗೆ ಮಾಹಿತಿ:‘ಸಾಕಿ’ (ಡಿಸೆಂಬರ್ 18, 1870 – ನವೆಂಬರ್ 13, 1916) ಎಂಬ ಬರಹನಾಮದಿಂದ ಪರಿಚಿತರಾಗಿರುವ ಬ್ರಿಟಿಶ್ ಬರಹಗಾರ ಹೆಕ್ಟರ್ ಹ್ಯೂ ಮನ್ರೋರ ಕಥೆಗಳು ಎಡ್ವರ್ಡಿಯನ್ ಸಮಾಜದ ವಿಡಂಬನೆ ಮಾಡುತ್ತಿದ್ದವು. ಸಣ್ಣಕಥೆಗಳ ಸರದಾರನೆಂದು ಪರಿಗಣಿಸಲಾಗುವ ಇವರನ್ನು ಓ. ಹೆನ್ರಿ ಮತ್ತು ಡೊರೋಥಿ ಪಾರ್ಕರ್‌ಗೆ ಹೋಲಿಸಲಾಗುತ್ತದೆ. ಆತ ತನ್ನ ಕಥೆಗಳ ಪಾತ್ರಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತ ಹೋಗುತ್ತಾರೆ. ‘ದ ಓಪನ್ ವಿಂಡೋ’ ಅವರ ಅತ್ಯಂತ ಪ್ರಸಿದ್ಧ ಸಣ್ಣಕಥೆ. ಆಸ್ಕರ್ ವೈಲ್ಡ್, ಲೂಯಿಸ್ ಕ್ಯಾರೊಲ್ ಮತ್ತು ರುಡ್ಯಾರ್ಡ್ ಕಿಪ್ಲಿಂಗರಿಂದ ಪ್ರಭಾವಿತರಾಗಿದ್ದ ಸಾಕಿ, ಪಿ.ಜಿ.ವೋಡ್‌ಹೌಸ್‌ರ ಮೇಲೆ ಅಪಾರ ಪ್ರಭಾವ ಬೀರಿದರು. ಕಥೆಗಳಲ್ಲದೆ ಅವರು ನಾಟಕಗಳನ್ನೂ ಬರೆದರು.

ಟೈಗರ್ ಲಿಲಿ ಹೂವು
ಒಂದು ಹುಲಿಯನ್ನು ಬೇಟೆಯಾಡಬೇಕೆನ್ನುವುದು ಶ್ರೀಮತಿ ಶರ್ಮಾಳ ಮನೋಕಾಮನೆಯೂ ಗುರಿಯೂ ಆಗಿದ್ದಿತು. ಕೊಲ್ಲುವ ಇಚ್ಛೆ ಅವಳಲ್ಲಿ ಇದ್ದಕ್ಕಿದ್ದ ಹಾಗೆ ಹುಟ್ಟಲಿಲ್ಲ ಅಥವಾ ಆಕೆ ಕಾಡನ್ನು ತೊರೆಯುವಾಗ ತಾನು ಕಂಡಿದ್ದಕ್ಕಿಂತ ಹೆಚ್ಚು ಕ್ಷೇಮವಾಗಿ, ಸಂಪೂರ್ಣವಾಗಿ ಬಿಡುವೆನೆಂದಾಗಲೀ, ಒಂದು ಕಾಡುಪ್ರಾಣಿಯನ್ನು ಕೊಂದು ಅಲ್ಲಿನ ಪ್ರತಿ ಮಿಲಿಯ ಜನಸಂಖ್ಯೆಗೆ ಇರುವ ಕಾಡುಪ್ರಾಣಿಗಳ ಒಂದು ದಶಮಾಂಶದಷ್ಟು ಭಾಗವನ್ನು ಕಡಿಮೆಗೊಳಿಸುತ್ತಿರುವೆನೆಂದಾಗಲೀ ಯೋಚನೆ ಬರಲಿಲ್ಲ. ಹುಲಿಯ ಹೆಜ್ಜೆಗಳೆಡೆ ಆಕೆಗೆ ಇದ್ದಕ್ಕಿದ್ದಂತೆ ಉಂಟಾದ ಬಲವಾದ ಸೆಳೆತಕ್ಕೆ ಮೂಲ ಕಾರಣ ಬೇರೆಯೇ ಇತ್ತು- ಕೆಲ ಸಮಯದ ಹಿಂದೆ ಶ್ರೀಮತಿ ಸುರುಚಿ ವರ್ಮಾಳನ್ನ ಅಲ್ಜೀರಿಯನ್ ವಿಮಾನಚಾಲಕನೊಬ್ಬ ಏರೋಪ್ಲೇನಿನಲ್ಲಿ ಕೂರಿಸಿಕೊಂಡು ಹನ್ನೊಂದು ಮೈಲಿ ದೂರ ಕರೆದುಕೊಂಡು ಹೋಗಿದ್ದು ಮತ್ತು ಆಕೆ ಅದರ ಸುದ್ದಿ ಬಿಟ್ಟು ಮತ್ತೇನನ್ನೂ ಮಾತನಾಡದೇ ಇದ್ದದ್ದು; ಇದಕ್ಕೆ ತಕ್ಕ ಪ್ರತ್ಯಸ್ತ್ರವೆಂದರೆ ವೈಯುಕ್ತಿಕವಾಗಿ ಶ್ರಮಪಟ್ಟು ಗಳಿಸಿದ ಹುಲಿಯ ಚರ್ಮ ಮತ್ತು ಪ್ರೆಸ್ ಚಿತ್ರಗಳ ಮಹಾಪೂರ. ಶ್ರೀಮತಿ ಶರ್ಮಾ ಈಗಾಗಲೇ ಕರ್ಜನ್ ರೋಡಿನ ತನ್ನ ಮನೆಯಲ್ಲಿ ತಾನು ವಿಶೇಷವಾಗಿ ಶ್ರೀಮತಿ ಸುರುಚಿ ವರ್ಮಾಳಿಗಾಗಿಯೇ ನೀಡಲಿರುವ ಲಂಚ್ ಪಾರ್ಟಿ, ಅಲ್ಲಿ ಪ್ರದರ್ಶಿಸಲಾಗಿರುವ ಹುಲಿಚರ್ಮದ ಕಂಬಳಿ ಎಲ್ಲರ ಮಾತಿನ ವಿಷಯವಾಗಿರುವುದು, ಇತ್ಯಾದಿಗಳ ಬಗ್ಗೆ ಸಾಕಷ್ಟು ಕಲ್ಪನೆಗಳನ್ನು ಮಾಡಿಕೊಂಡಿದ್ದಳು. ಶ್ರೀಮತಿ ಸುರುಚಿ ವರ್ಮಾಳ ಮುಂದಿನ ಹುಟ್ಟುಹಬ್ಬದಂದು ತಾನು ಆಕೆಗೆ ನೀಡಲಿರುವ ಹುಲಿಯುಗುರಿನ ಬ್ರೋಚ್‌ನ ವಿನ್ಯಾಸವನ್ನೂ ಮನಸ್ಸಿನಲ್ಲಿಯೇ ರೂಪಿಸಿಕೊಂಡಿದ್ದಳು. ಮುಖ್ಯವಾಗಿ ಹಸಿವು ಮತ್ತು ಪ್ರೇಮಗಳಿಂದ ಈ ಪ್ರಪಂಚವು ಪ್ರಭಾವಿತವಾಗಿದೆ ಎಂದು ಭಾವಿಸಲಾಗುತ್ತದೆಯಾದರೂ ಇದಕ್ಕೆ ಶ್ರೀಮತಿ ಶರ್ಮಾ ಒಂದು ಅಪವಾದವಾಗಿದ್ದಳು; ಆಕೆಯ ಚಲನವಲನಗಳು ಮತ್ತು ಉದ್ದೇಶಗಳು ಶ್ರೀಮತಿ ಸುರುಚಿ ವರ್ಮಾಳ ಬಗ್ಗೆ ಆಕೆಗಿದ್ದ ದ್ವೇಷದಿಂದ ನಿರ್ದೇಶಿಸಲ್ಪಡುತ್ತ ಇದ್ದವು.
ಪರಿಸ್ಥಿತಿಗಳು ಅನುಕೂಲಕರವಾಗಿ ಪರಿಣಮಿಸಿದವು. ಶ್ರೀಮತಿ ಶರ್ಮಾ ಹೆಚ್ಚು ಶ್ರಮಪಡದೆ ಹುಲಿಯನ್ನು ಗುಂಡಿಕ್ಕಿ ಕೊಲ್ಲುವ ಅವಕಾಶಕ್ಕಾಗಿ ಸಾವಿರ ರೂಪಾಯಿಗಳ ಬೆಲೆಸೂಚನೆ ನೀಡಿದ್ದಳು, ಮತ್ತು ಪಕ್ಕದ ಹಳ್ಳಿಯೊಂದರಲ್ಲಿಯೇ ಗೌರವಯುತವಾದ ಪೂರ್ವಚರಿತ್ರೆಯನ್ನು ಹೊಂದಿದ, ಹೆಚ್ಚುತ್ತಿದ್ದ ವಯಸ್ಸಿನ ತೊಂದರೆಗಳಿಂದಾಗಿ ಕಾಡುಪ್ರಾಣಿಗಳನ್ನು ಬೇಟೆಯಾಡುವುದನ್ನು ಬಿಟ್ಟು ಸಣ್ಣಪುಟ್ಟ ಸಾಕುಪ್ರಾಣಿಗಳಿಗೆ ತನ್ನ ಹಸಿವನ್ನು ಸೀಮಿತಗೊಳಿಸಿಕೊಂಡಿದ್ದ ಪ್ರಾಣಿಯೊಂದರ ಬೇಟೆಯನ್ನು ಎಲ್ಲರೂ ಬೆಂಬಲಿಸುತ್ತಿದ್ದಾಗಿ ತಿಳಿದುಬಂದಿತು. ಸಾವಿರ ರೂಪಾಯಿಗಳನ್ನು ಸಂಪಾದಿಸುವ ಸಂಭಾವ್ಯತೆಯು ಹಳ್ಳಿಗರ ಕ್ರೀಡಾ ಮತ್ತು ವಾಣಿಜ್ಯ ಪ್ರವೃತ್ತಿಗಳನ್ನು ಉತ್ತೇಜಿಸಿದ್ದವು; ಅಕಸ್ಮಾತ್ ಹುಲಿಯು ಹೊಸ ಬೇಟೆಗಳನ್ನು ಹುಡುಕಿಕೊಂಡು ಹೊಸ ಸ್ಥಳಗಳೆಡೆ ಅಲೆಯಲಾರಂಭಿಸಿದರೆ ಕೂಡಲೇ ಹಿಂದಿರುಗಿ ಸುದ್ದಿ ನೀಡುವ ಸಲುವಾಗಿ ಸ್ಥಳೀಯ ಕಾಡಿನ ಹೊರವಲಯದಲ್ಲಿ ಮಕ್ಕಳನ್ನು ಹಗಲೂ ರಾತ್ರಿ ಕಾವಲಿರಿಸಲಾಯಿತು, ಮತ್ತು ತಾನಿರುವ ಜಾಗದ ಬಗ್ಗೆ ಹುಲಿಯನ್ನು ಸಂತೃಪ್ತನಾಗಿರಿಸುವ ಸಲುವಾಗಿ ಕಡಿಮೆಬೆಲೆಯ ಮೇಕೆಗಳನ್ನು ಬೇಕೆಂತಲೇ ಅಜಾಕರೂಕತೆಯಿಂದ ಅಲ್ಲಿ ಇಲ್ಲಿ ಬಿಡಲಾಯಿತು. ಉಳಿದಿದ್ದ ಒಂದೇ ಒಂದು ಆತಂಕವೆಂದರೆ ಮೇಮ್‌ಸಾಹೇಬರ ಬೇಟೆಗೆ ಮುನ್ನವೇ ಹುಲಿ ತನ್ನ ಮುದಿವಯಸ್ಸಿನ ದೆಸೆಯಿಂದ ಪ್ರಾಣತೊರೆದರೆ, ಎನ್ನುವುದು. ಹೊಲಗದ್ದೆಗಳ ಕೆಲಸದ ನಂತರ ತಮ್ಮ ಮಕ್ಕಳನ್ನೆತ್ತಿಕೊಂಡು ಕಾಡು ದಾಟುತ್ತಿದ್ದ ತಾಯಂದಿರು ಎಲ್ಲಿ ಈ ಗೌರವಾನ್ವಿತ ಮಂದೆಗಳ್ಳನ ವಿಶ್ರಾಂತಿಯ ನಿದ್ದೆಯನ್ನು ಭಂಗಮಾಡುವೆವೋ ಎಂಬ ಭಯದಿಂದ ತಮ್ಮ ಹಾಡುಗಳನ್ನು ನಿಲ್ಲಿಸಿಬಿಡುತ್ತಿದ್ದರು.
ಹುಣ್ಣಿಮೆಯ, ಮೋಡರಹಿತವಾದ ಆ ಮಹಾರಾತ್ರಿಯೂ ಕೆಲದಿನಗಳಲ್ಲಿಯೇ ಆಗಮಿಸಿತು. ಅನುಕೂಲವಾದ ಜಾಗದಲ್ಲದ್ದ ಮರವೊಂದರ ಮೇಲೆ ಅಟ್ಟಣಿಗೆಯೊಂದನ್ನ ನಿರ್ಮಿಸಲಾಗಿದ್ದು, ಅದರ ಮೇಲೆ ಶ್ರೀಮತಿ ಶರ್ಮಾ ಮತ್ತು ಆಕೆಯ ಸವೇತನ ಸಂಗಾತಿ(ಪೇಯ್ಡ್ ಕಂಪ್ಯಾನಿಯನ್)ಯಾಗಿದ್ದ ಮಿಸ್ ರೇಣು ಹೊಂಚುಹಾಕುತ್ತ ಮುದುಡಿ ಕುಳಿತುಕೊಂಡಿದ್ದರು. ಸರಿಯಾದ ಅಂತರದಲ್ಲಿಯೇ ಅರೆಕಿವುಡಾಗಿದ್ದ ಹುಲಿಗೂ ನೀರವ ರಾತ್ರಿಯೊಂದರಲ್ಲಿ ಕೇಳುವಷ್ಟು ಜೋರಾಗಿ, ನಿಲ್ಲದೆಯೇ ಅರಚಬಲ್ಲ ಸಾಮರ್ಥ್ಯದ ಮೇಕೆಯೊಂದನ್ನು ಕಟ್ಟಿಹಾಕಲಾಗಿತ್ತು. ಪಕ್ಕಾ ಗುರಿಯುಳ್ಳ ರೈಫಲ್ ಮತ್ತು ಸಣ್ಣ ಸೈಜಿನ ಇಸ್ಪೀಟುಕಾರ್ಡ್‌ಗಳೊಂದಿಗೆ ಆ ಆಟಗಾರ್ತಿಯು ತನ್ನ ಶಿಕಾರಿ ಬರುವುದನ್ನೆ ಕಾಯುತ್ತಿದ್ದಳು.
“ನಮಗೇನಾದರೂ ಅಪಾಯವಾದ್ರೆ? ” ಮಿಸ್ ರೇಣು ಉಸುರಿದಳು.
ನಿಜವಾಗಿ ಆಕೆಗೆ ಕಾಡುಪ್ರಾಣಿಯ ಬಗ್ಗೆ ಕೊಂಚವೂ ಭಯವಿರಲಿಲ್ಲ, ಆದರೆ ತನಗೆ ನೀಡಲಾದ ಹಣಕ್ಕೆ ತಕ್ಕುದಾದ್ದಕ್ಕಿಂತ ಒಂದು ಅಣುವಷ್ಟು ಹೆಚ್ಚಿನ ಸೇವೆಯನ್ನು ಮಾಡಬೇಕಾಗಿ ಬರಬಹುದೆನ್ನುವುದರ ಬಗ್ಗೆ ಮಾತ್ರ ಆಕೆಗೆ ಮರಣಭೀತಿಯಿದ್ದಿತು.
“ನಾನ್ಸೆನ್ಸ್,” ಶ್ರೀಮತಿ ಶರ್ಮಾ ಹೇಳಿದಳು; “ಇದು ಬಹಳಾ ಮುದಿಯಾಗಿರೋ ಹುಲಿ. ಬಯಸಿದರೂ ಅದು ಇಲ್ಲಿಯವರೆಗೆ ಹಾರೋಕೆ ಸಾಧ್ಯವೇ ಇಲ್ಲ.”
“ಅದು ಮುದಿಹುಲಿ ಅಂತಾದ್ರೆ ನೀವು ಅದನ್ನ ಇನ್ನೂ ಕಡಿಮೆ ಬೆಲೆಗೆ ತಕ್ಕೋಬಹುದು ಅನ್ನಿಸುತ್ತೆ ನನಗೆ. ಸಾವಿರ ರೂಪಾಯಿ ಬಹಳಾನೇ ಜಾಸ್ತಿಯಾಯ್ತು.”
ರಾಷ್ಟ್ರೀಯತೆ ಅಥವಾ ಪಂಗಡಗಳು ಯಾವುದೇ ಇರಲಿ, ಮಿಸ್ ರೇಣು ಸಾಮಾನ್ಯವಾಗಿ ಹಣದ ಬಗ್ಗೆ ರಕ್ಷಿಸುವ ಹಿರಿಯಕ್ಕನ ಥರದ ಮನೋಭಾವನೆಯನ್ನ ಹೊಂದಿದ್ದಳು. ಆಕೆಯ ಉತ್ಸಾಹಪೂರ್ಣ ಮಧ್ಯಸ್ಥಿಕೆಯಿಂದಾಗಿ ಎಷ್ಟೋಸಾರಿ ದೆಹಲಿಯ ಯಾವುದೋ ಹೋಟೆಲಿನಲ್ಲಿ ಟಿಪ್ಸ್ ನೀಡುವುದರಲ್ಲಿ ಪೋಲಾಗಬಹುದಾಗಿದ್ದ ಹಣ ಉಳಿತಾಯವಾಗಿತ್ತು, ಮತ್ತು ಕಡಿಮೆ ದಯೆಯುಳ್ಳವರು ಹಣ ನೀಡುವಂತಹ ಪರಿಸ್ಥಿತಿಗಳಲ್ಲೂ ಕೂಡ ಆಕೆಯ ಬಳಿಯಿದ್ದ ಹಣ ಆಕೆಗೇ ಅಂಟಿಕೊಂಡಿರುತ್ತ ಇತ್ತು. ಮಾರುಕಟ್ಟೆಯಲ್ಲಿ ಹುಲಿಯ ಅಲ್ಪಾವಶೇಷಗಳ ಬೆಲೆಯ ತಗ್ಗುವಿಕೆಯ ಬಗ್ಗೆ ಆಕೆ ಮಾಡುತ್ತಿದ್ದ ಯೋಚನೆಗಳು ಅದೇ ಪ್ರಾಣಿ ಅಲ್ಲಿ ಪ್ರತ್ಯಕ್ಷವಾಗಿದ್ದರಿಂದಾಗಿ ಮಾಯವಾದವು. ಕಟ್ಟಿಹಾಕಿದ್ದ ಮೇಕೆಯನ್ನು ಕಾಣುತ್ತಲೆ ಹುಲಿಯು ಲಭ್ಯವಿದ್ದ ಆಡಗುದಾಣಗಳ ಉಪಯೋಗವನ್ನು ಪಡೆದುಕೊಳ್ಳುವುದರ ಬದಲಾಗಿ, ದೊಡ್ಡ ಆಕ್ರಮಣ ಮಾಡುವ ಮೊದಲು ಸಣ್ಣ ವಿಶ್ರಾಂತಿಯೊಂದನ್ನು ಪಡೆದುಕೊಳ್ಳುವ ಸಲುವಾಗಿ ತನ್ನ ನಾಲ್ಕೂ ಕಾಲುಗಳನ್ನು ಅಗಲಕ್ಕೆ ಚಾಚಿ ಬಿದ್ದುಕೊಂಡಿತು.
“ಅದಕ್ಕೆ ಖಾಯಿಲೆಯಾಗಿದೆ ಅಂತ ನಂಗನ್ನಿಸುತ್ತೆ” ಮಿಸ್ ರೇಣು ಹಿಂದಿಯಲ್ಲಿ ಜೋರಾಗಿ ಪಕ್ಕದ ಮರದ ಮೇಲೆ ಹೊಂಚುಹಾಕಿ ಕುಳಿತಿದ್ದ ಗ್ರಾಮದ ಮುಖಂಡನಿಗೆ ಕೇಳಲೆಂದು ಹೇಳಿದಳು.
“ಹುಶ್!” ಶ್ರೀಮತಿ ಶರ್ಮಾ ಹೇಳಿದಳು. ಮತ್ತು ಅದೇ ಹೊತ್ತಿಗೆ ಹುಲಿಯು ತನ್ನ ಶಿಕಾರಿಯೆಡೆ ತೆವಳಲು ಆರಂಭಿಸಿತು.
“ಈಗ, ಈಗ!” ಮಿಸ್ ರೇಣು ಸ್ವಲ್ಪ ಸಡಗರದಿಂದ ಪ್ರೋತ್ಸಾಹಿಸಿದಳು; “ಅದು ಮೇಕೆಯನ್ನ ಮುಟ್ಟಲಿಲ್ಲಾ ಅಂದರೆ ಅದಕ್ಕಾಗಿ ನಾವು ಬೆಲೆ ತೆರಬೇಕಾಗಿಲ್ಲ.” (ಮೇಕೆಯ ಬೆಲೆ ಪ್ರತ್ಯೇಕವಾಗಿತ್ತು.)
ಜೋರಾದ ಶಬ್ದದೊಡನೆ ರೈಫಲ್ ಸಿಡಿಯಿತು, ಮತ್ತು ಆ ಬೃಹತ್ ಗಾತ್ರದ ಕಂದುಹಳದಿ ಬಣ್ಣದ ಪ್ರಾಣಿಯು ಒಂದುಕಡೆಗೆ ನೆಗೆದು ಪಕ್ಕಕ್ಕೆ ಹೊರಳಿ ಸಾವಿನ ನಿಶ್ಚಲತೆಯನ್ನು ಪಡೆದುಕೊಂಡಿತು. ಕ್ಷಣವೊಂದರಲ್ಲಿ ಸಂಭ್ರಮಗೊಂಡ ಸ್ಥಳೀಯರ ಗುಂಪೊಂದು ಜಮಾಯಿಸಿ, ಅವರ ಕೂಗುಗಳಿಂದ ಹಳ್ಳಿಗೆ ಸುದ್ದಿ ತಲುಪಿ, ಹಲವಾರು ಟಾಮ್-ಟಾಮ್ಗಳನ್ನು ಬಾರಿಸುವುದರ ಮೂಲಕ ವಿಜಯೋತ್ಸವವನ್ನು ಆಚರಿಸಲಾಯಿತು. ಅವರ ವಿಜಯ ಮತ್ತು ಸಂಭ್ರಮಗಳು ಶ್ರೀಮತಿ ಶರ್ಮಾಳ ಹೃದಯದಲ್ಲಿಯೂ ಪ್ರತಿಧ್ವನಿಸಿದವು; ಕರ್ಜನ್ ರೋಡಿನ ಲಂಚ್ ಪಾರ್ಟಿ ಈಗಾಗಲೇ ಬಹಳ ಹತ್ತಿರವಾದಂತೆ ಭಾಸವಾಗತೊಡಗಿತು.
ಮೇಕೆಯು ಕೆಟ್ಟದಾದ ಬುಲೆಟ್ ಗಾಯವೊಂದರಿಂದ ಸಾವಿಗೆ ಹತ್ತಿರವಾಗಿದೆಯೆಂದೂ, ಹುಲಿಯ ಮೇಲೆ ರೈಫಲಿನ ಕೆಲಸದ ಯಾವ ನಿಶಾನೆಯೂ ಇಲ್ಲವೆಂದೂ ಕಂಡುಹಿಡಿದು ಆಕೆಯ ಗಮನ ಸೆಳೆದವಳು ಮಿಸ್ ರೇಣು ಆಗಿದ್ದಳು. ತಪ್ಪಾದ ಪ್ರಾಣಿ ಗುಂಡೇಟಿಗೆ ಗುರಿಯಾಗಿತ್ತು, ಮತ್ತು ಶಿಕಾರಿಯ ಪ್ರಾಣಿಯು ಇದ್ದಕ್ಕಿದ್ದಂತೆ ಉಂಟಾದ ರೈಫಲಿನ ಶಬ್ದಕ್ಕೆ ಬೆಚ್ಚಿ ಹೃದಯಾಘಾತದಿಂದ ಅಸುನೀಗಿತ್ತು. ಶ್ರೀಮತಿ ಶರ್ಮಾಳಿಗೆ ಈ ವಿಷಯದಿಂದ ಅಸಮಾಧಾನವುಂಟಾಯಿತಾದರೂ ಅದು ಕ್ಷಮಾರ್ಹವಾದ ತಪ್ಪಾಗಿತ್ತು, ಏನೆಂದರೂ ಹುಲಿಯು ಅವಳದಾಗಿತ್ತು, ಮತ್ತು ಸಾವಿರ ರೂಪಾಯಿಗಳನ್ನು ಪಡೆಯಲು ಕಾತುರದಿದಿದ್ದ ಗ್ರಾಮಸ್ಥರು ಆಕೆಯೇ ಹುಲಿಗೆ ಗುಂಡಿಕ್ಕಿದಳೆಂಬ ಸುಳ್ಳನ್ನು ಸಂತಸದಿಂದ ಅನುಮೋದಿಸಿದರು. ಹೇಗಿದ್ದರೂ ಮಿಸ್ ರೇಣು ಆಕೆಯ ಸವೇತನ ಸಂಗಾತಿಯಾಗಿದ್ದವಳು. ಆದ್ದರಿಂದ ಶ್ರೀಮತಿ ಶರ್ಮಾ ಹಗುರವಾದ ಹೃದಯದಿಂದ ಕ್ಯಾಮೆರಾಗಳನ್ನು ಎದುರಿಸಿದಳು ಮತ್ತು ಆಕೆಯ ಚಿತ್ರವು ‘ನವದೆಹಲಿ ವೀಕ್’ನ ‘ವಾರದ ಚಿತ್ರ’ ವಿಭಾಗದಿಂದ ತನ್ನ ಕೀರ್ತಿಯನ್ನು ಎಲ್ಲೆಡೆಗೆ ಹರಡಿತು. ಶ್ರೀಮತಿ ಸುರುಚಿ ವರ್ಮಾಳ ಬಗ್ಗೆ ಹೇಳಬೇಕೆಂದರೆ, ಆಕೆ ಹಲವಾರು ವಾರಗಳವರೆಗೆ ‘ನವದೆಹಲಿ ವೀಕ್’ ಅನ್ನು ನೋಡಲೂ ನಿರಾಕರಿಸಿದಳು ಮತ್ತು ಹುಲಿಯ ಹಲ್ಲಿನ ಬ್ರೋಚ್‌ನ ಉಡುಗೊರೆಗೆ ಪ್ರತಿಯಾಗಿ ಆಕೆ ಕಳುಹಿಸಿದ ಧನ್ಯವಾದಪತ್ರವು ಅದುಮಿಟ್ಟ ಭಾವನೆಗಳಿಗೆ ಮಾದರಿಯಾಗಿದ್ದಿತು. ಲಂಚ್ ಪಾರ್ಟಿಯನ್ನು ಆಕೆ ನಿರಾಕರಿಸಿದಳು; ಕೆಲವು ಎಲ್ಲೆಗಳನ್ನು ದಾಟಿದರೆ ಅದುಮಿಟ್ಟ ಭಾವನೆಗಳೂ ಅಪಾಯಕಾರಿಯಾಗಿಬಿಡುವ ಸಾಧ್ಯತೆಗಳಿವೆ.
ಕರ್ಜನ್ ರೋಡಿನ ಮನೆಯಿಂದ ಹುಲಿಯ ಚರ್ಮದ ಕಂಬಳಿಯು ಆಕೆಯ ಹೊಸಾ ಬಂಗಲೆಗೆ ಪಯಣಿಸಿತು ಮತ್ತು ಅಲ್ಲಿನ ಜನರ ಮೆಚ್ಚುಗೆಗೆ ಪಾತ್ರವಾಯಿತು. ಅಲ್ಲಿನ ದೊಡ್ಡ ಪಾರ್ಟಿಯೊಂದಕ್ಕೆ ಶ್ರೀಮತಿ ಶರ್ಮಾ ಡಯಾನಾ ದೇವತೆಯ ಕಾಸ್ಟ್ಯೂಮ್ ಧರಿಸಿ ಹೋದಾಗ ಅದು ಆಕೆಗೆ ತಕ್ಕುದಾಗಿ ಕಂಡಿತು. ಆದರೆ ರಾಜೀವ್ ಮೆಹ್ತಾ ಆದಿಯುಗದ ಥೀಮಿನ ಡ್ಯಾನ್ಸ್ ಪಾರ್ಟಿಯೊಂದನ್ನು ಆಯೋಜಿಸಿ ಅದರಲ್ಲಿ ಎಲ್ಲರೂ ತಾವು ಬೇಟೆಯಾಡಿದ ಪ್ರಾಣಿಗಳ ಚರ್ಮಗಳನ್ನು ಧರಿಸಬೇಕೆಂದು ಸೂಚಿಸಿದ್ದು ಆಕರ್ಷಕವಾಗಿದ್ದರೂ, ಶ್ರೀಮತಿ ಶರ್ಮಾ ನಿರಾಕರಿಸಿದಳು. “ನನ್ನ ಪರಿಸ್ಥಿತಿ ಸಣ್ಣ ಮಗುವೊಂದರ ಹಾಗಿರಬಹುದು” ರಾಜ್ ಹೇಳಿಕೊಂಡ, “ಒಂದೆರಡು ಕೆಟ್ಟ ಮೊಲದ ಚರ್ಮಗಳಷ್ಟೇ ಇರೋದು ನನ್ನ ಕೈಲಿ, ಆದರೆ,”.. ಡಯಾನಾ ದೇವತೆಯ ದೇಹದ ಅಳತೆಯ ಮೇಲೆ ಆಸೆಯ ಕಣ್ಣೋಟ ಬೀರುತ್ತ ಆತ ಹೇಳಿದ, “ನಾನೂ ಆ ನೃತ್ಯ ಮಾಡುತ್ತಿರೋ ರಶ್ಯನ್ ಯುವಕನಷ್ಟೇ ಸದೃಢನಾಗಿದೀನಿ.”
“ನಿಜವಾಗಿ ಅಲ್ಲಿ ಏನು ನಡೀತೂ ಅಂತ ಗೊತ್ತಾದರೆ ಎಲ್ಲರಿಗೂ ಎಷ್ಟು ತಮಾಷೆ ಅನ್ನಿಸಬಹುದು,” ಮಿಸ್ ರೇಣು ಆ ಪಾರ್ಟಿ ನಡೆದ ಕೆಲದಿನಗಳ ಬಳಿಕ ಹೇಳಿದಳು.
“ನೀನು ಹೇಳ್ತಾ ಇರೋದರ ಅರ್ಥವೇನು?” ಶ್ರೀಮತಿ ಶರ್ಮಾ ಆತುರವಾಗಿ ಕೇಳಿದಳು.
“ಅದೇ, ನೀವು ಮೇಕೆಗೆ ಗುಂಡುಹೊಡೆದು ಹುಲಿ ಹೆದರಿಕೊಂಡು ಸತ್ತುಹೋಯಿತಲ್ಲ,” ಮಿಸ್ ರೇಣು ತನ್ನ ಅಪ್ರಿಯವಾಗಿದ್ದರೂ ಹಿತಕರವಾಗಿದ್ದ ನಗೆಯೊಂದಿಗೆ ಹೇಳಿದಳು.
“ಯಾರೂ ಅದನ್ನ ನಂಬಲಾರರು,” ಶ್ರೀಮತಿ ಶರ್ಮಾ ಹೇಳಿದಳು. ಆಕೆಯ ಮುಖ ವಿನ್ಯಾಸಗಳಿದ್ದ ಪುಸ್ತಕವೊಂದರ ಪುಟಗಳಂತೆ ವೇಗವಾಗಿ ಬಣ್ಣ ಬದಲಾಯಿಸತೊಡಗಿತು.
“ಸುರುಚಿ ವರ್ಮಾ ನಂಬಿಯೇ ನಂಬುತ್ತಾಳೆ,” ಮಿಸ್ ರೇಣು ಹೇಳಿದಳು. ಶ್ರೀಮತಿ ಶರ್ಮಾಳ ಮುಖ ಬಿಳಿಚಿದ ಹಸಿರುವರ್ಣವನ್ನು ತಲುಪಿ ಹಾಗೇ ಉಳಿಯಿತು.
“ನೀನು ನಿಜವಾಗಿ ನನ್ನ ವಿಷಯ ಹೇಳುವುದಿಲ್ಲ ತಾನೆ?” ಆಕೆ ಕೇಳಿದಳು.
“ಹರಿಯಾಣದ ಹಳ್ಳಿಯೊಂದರ ಹತ್ತಿರ ನಾನು ವೀಕೆಂಡ್ ಕಳೆಯಲು ಕಾಟೇಜೊಂದನ್ನ ನೋಡಿದೀನಿ. ಹದಿನಾರೂವರೆ ಲಕ್ಷ ಅಷ್ಟೆ. ಒಳ್ಳೇ ಬೆಲೆ. ತಕರಾರೇ ಇಲ್ಲ. ನನ್ನ ಹತ್ತಿರ ದುಡ್ಡಿಲ್ಲ, ಅಷ್ಟೆ.”
***
ಮಿಸ್ ರೇಣುವಿನ ಮುದ್ದಾದ ವೀಕೆಂಡ್ ಕಾಟೇಜಿಗೆ ‘ಮೃಗಶಿರಾ’ ಎಂದು ಹೆಸರಿಡಲಾಗಿದ್ದು, ಬೇಸಿಗೆಯ ವೇಳೆಯಲ್ಲಿ ಅಲ್ಲಿಯ ತೋಟದ ಅಂಚುಗಳಲ್ಲಿ ಅರಳುವ ಟೈಗರ್-ಲಿಲಿ ಹೂವುಗಳು ಆಕೆಯ ಸ್ನೇಹಿತರ ಅಚ್ಚರಿ ಮತ್ತು ಮೆಚ್ಚುಗೆಗಳಿಗೆ ಪಾತ್ರವಾಗಿವೆ.
ಇದನ್ನೆಲ್ಲ ರೇಣು ಹೇಗೆ ನಿಭಾಯಿಸ್ತಾಳೋ ಎಂದು ಎಲ್ಲರೂ ಹೇಳುತ್ತಾರೆ.
ಶ್ರೀಮತಿ ಶರ್ಮಾ ಈಗ ದೊಡ್ಡಬೇಟೆಗಳಿಗೆ ಹೋಗುವುದಿಲ್ಲ.
“ಸಾಂದರ್ಭಿಕ ಖರ್ಚುಗಳು ಬಹಳ ಭಾರಿಯಾಗಿವೆ” ಆಕೆ ವಿಚಾರಿಸುವ ಸ್ನೇಹಿತರಲ್ಲಿ ತೋಡಿಕೊಳ್ಳುತ್ತಾಳೆ.
ಚಿತ್ರ ಕೃಪೆ: www.leslierohonczy.com
keep blogging teen.
Plzzzzzzzzzzzzzzzzzzzzzzzzzzzzzzz
ಮರುಕೋರಿಕೆ (Pingback): ಶ್ರೀಮತಿ ಶರ್ಮಾಳ ಹುಲಿ | indiarrs.net Featured blogs from INDIA.