
ಮಿಕ್ ಡೇವಿಸ್ ನಿರ್ದೇಶನದ ಚಲನಚಿತ್ರ ‘ಮೌಡಿಗ್ಲಿಯಾನಿ’ (‘Modiglani’ – ಇಟಾಲಿಯನ್ ಹಾಗೂ ಫ್ರೆಂಚ್ ಉಚ್ಛಾರಣೆಗೆ ಅನುಗುಣವಾಗಿ) 2004ರಲ್ಲಿ ಬಿಡುಗಡೆಯಾದಾಗ ವಿಮರ್ಶಕರೆಲ್ಲ ಅದನ್ನು ವಿಪರೀತವಾಗಿ ಟೀಕಿಸಿದರು. ಇಡೀ ಚಲನಚಿತ್ರ ಜಾಳುಜಾಳಾಗಿದೆ, ಬಿಬಿಸಿ ಚ್ಯಾನೆಲ್ಲಿಗೋಸ್ಕರ ನಿರ್ಮಿಸಿದಂತಿದೆ, ಅತಿ ಕೆಟ್ಟದಾಗಿದೆ, ಮೌಡಿಗ್ಲಿಯಾನಿಯನ್ನು ಬರೆ ಒಬ್ಬ ಹುಚ್ಚುಕಲಾವಿದನೆಂಬಂತೆ ಚಿತ್ರೀಕರಿಸಲಾಗಿದೆ – ಹೀಗೇ ಮುಂತಾದ ಹಲವಾರು ಅಪವಾದಗಳು ಚಲನಚಿತ್ರದ ಬಗ್ಗೆ ಕೇಳಿಬಂದವು. ನನ್ನ ಮಟ್ಟಿಗೆ ಹೇಳುವದಾದರೆ ಹೆಸರಾಂತ ವಿಮರ್ಶಕರ ಮಾತುಗಳನ್ನ ನಂಬಿ ನಾನು ಬಹಳ ಸಾರಿ ಮೋಸಹೋಗಿರುವದುಂಟು. ಕೆಲವರು ಒಂದು ಚಲನಚಿತ್ರವನ್ನು ಹೇಗೆಹೇಗೆಲ್ಲ ಕೆಟ್ಟಕೆಟ್ಟದಾಗಿ ಬೈಯಲು ಸಾಧ್ಯ ಅಂತ ತಿಳಿದುಕೊಳ್ಳಲು ಕೂಡ ನಾನು ಇಂತಹ ವಿಮರ್ಶೆಗಳನ್ನ ಓದಿ ತುಂಬ ಹೊತ್ತು ನಗಾಡುವುದು ಇದೆ. ನನಗೆ ಮೌಡಿಗ್ಲಿಯಾನಿಯ ಹೆಸರು ಪರಿಚಯವಾದದ್ದು ನನ್ನ ಮೆಚ್ಚಿನ ಕವಯಿತ್ರಿಯೊಬ್ಬಳು ಆತನ ಪ್ರೇಯಸಿಯಾಗಿದ್ದಳು ಅನ್ನುವ ಕಾರಣದಿಂದಾಗಿ. ಮೌಡಿಗ್ಲಿಯಾನಿ ಒಬ್ಬ ಪ್ರಖ್ಯಾತ ಕಲಾವಿದ, ವ್ಯಾನ್ಗೋನ ಜೀವನಕ್ಕೆ ಆತನ ಬದುಕನ್ನು ಹೋಲಿಸಲಾಗುತ್ತದೆ ಎಂದು ಕೂಡ ಎಲ್ಲೊ ಓದಿದೆ. ಆತನ ಕೆಲ ಚಿತ್ರಗಳ ಬಗ್ಗೆ, ಆತನ ಶೈಲಿಯ ಬಗ್ಗೆ ಕೂಡ ಕೊಂಚ ಮಾಹಿತಿ ದಕ್ಕಿತು. ಆಮೇಲೊಂದು ತಮಾಷೆಯಾಯಿತು. ಹೀಗೇ ಒಂದು ದಿನ ಚ್ಯಾನೆಲ್ ಸರ್ಫ್ ಮಾಡುತ್ತಿದ್ದಾಗ ಅದೇ ಹೆಸರಿನ ಚಲನಚಿತ್ರ ಶುರುವಾಗಿಬಿಡಬೇಕೆ? ಸುಮ್ಮನೆ ಕುತೂಹಲಕ್ಕೆ ಕೂತು ನೋಡಿದೆ. ಬರೆಯಲೆಬೇಕು ಅನ್ನಿಸಿತು.
‘ಮೌಡಿ’ ಅಂದರೆ ಫ್ರೆಂಚ್ ಭಾಷೆಯಲ್ಲಿ ‘ಶಾಪ’ ಎಂದು ಅರ್ಥ ಬರುತ್ತದಂತೆ. ಇಟಲಿಯಿಂದ ಪ್ಯಾರಿಸಿಗೆ ಬಂದು ನೆಲೆಸಿದ ಕಲಾವಿದ ಅಮೇದಿಯೋ ಕ್ಲಮೆಂತ್ ಮೌಡಿಗ್ಲಿಯಾನಿಯನ್ನು ಪ್ಯಾರಿಶಿಯನರು ‘ಮೌಡಿ’ ಎಂದೇ ಕರೆದರು. ಚಲನಚಿತ್ರ ಮೌಡಿಗ್ಲಿಯಾನಿಯ ಶಾಪಗ್ರಸ್ತ ಜೀವನದ ಕೊನೆಯ ಕೆಲ ವರುಷಗಳನ್ನು ಮಾತ್ರ ನೋಡುಗರಿಗೆ ಒದಗಿಸುತ್ತದೆ. ಚಲನಚಿತ್ರದ ಒಂದು ಫ್ಲ್ಯಾಶ್ ಮೌಡಿಗ್ಲಿಯಾನಿಯ ಹುಟ್ಟನ್ನು ತೋರಿಸುತ್ತದೆ. ಸ್ಥಳ, ಇಟಲಿದೇಶದ ಟಸ್ಕನಿಯ ಲಿವೋರ್ನೊ. ಮೌಡಿಗ್ಲಿಯಾನಿಯ ತಂದೆ ಲೇವಾದೇವಿಯಲ್ಲಿ ದುಡ್ಡನ್ನೆಲ್ಲ ಕಳೆದುಕೊಂಡಿದ್ದಾನೆ. ಮನೆಯ ಎಲ್ಲ ವಸ್ತುಗಳನ್ನು ಹರಾಜು ಹಾಕಲು ಪೊಲೀಸರು ಮನೆಯೊಳಗೆ ನುಗ್ಗಿದ್ದಾರೆ. ಇಡಿ ಮನೆ ಖಾಲಿಯಾಗಿದೆ. ಮೌಡಿಗ್ಲಿಯಾನಿಯ ತಾಯಿಯ ಹೆರಿಗೆ ಮಂಚದ ಮೇಲೆ ಮನೆಯ ಆಳೊಬ್ಬ ಆತುರಾತುರವಾಗಿ ಬೇಕಾದ ಸಾಮಾನುಗಳನ್ನೆಲ್ಲ ಒಟ್ಟುತ್ತಿದ್ದಾನೆ. ಟಸ್ಕನಿಯ ಕಾನೂನಿನ ಪ್ರಕಾರ ಗರ್ಭಿಣಿಯ ಅಥವ ಹೆರಿಗೆಯಾಗುತ್ತಿರುವ ಹೆಂಗಸಿನ ಸಾಮಾನುಗಳನ್ನು ಸರ್ಕಾರ ವಶಪಡಿಸಿಕೊಳ್ಳುವಂತಿಲ್ಲ. ಇನ್ನೊಂದು ಫ್ಲ್ಯಾಶಿನಲ್ಲಿ ಮನೆಯ ಗೋಡೆಯ ಮೇಲೆ ಚಿತ್ರ ಬರೆದು ನುರಿತ ಕಲಾವಿದನಂತೆ ಕೆಳಗೆ ಸಹಿ ಮಾಡುವ ಪುಟ್ಟ ಅಮೇದಿಯೊ.
ಮತ್ತೆಲ್ಲ ಚಿತ್ರದುದ್ದಕ್ಕು ಕಾಣಬರುವದು ಮೊದಲನೆ ಮಹಾಯುದ್ಧ ನಂತರದ ಪ್ಯಾರಿಸ್, ಅಲ್ಲಿಯ ರಾತ್ರಿಜೀವನ, ಕಲ್ಲುಹಾಸಿನ ಬೀದಿಗಳು, ಅಲ್ಲಿನ ಕಲಾವಿದರೆಲ್ಲ ಒಟ್ಟುಸೇರುತ್ತಿದ್ದ ಸುಪ್ರಸಿದ್ಧ ಕೆಫೆ ಮತ್ತು ಮೌಡಿಗ್ಲಿಯಾನಿಯ ಅವಸಾನ. ಮೌಡಿಯ ನೋವುಗಳು ಹಲವಾರು ಬಗೆಯವು. ಬಾಲ್ಯದಿಂದಲು ಟಿ.ಬಿ.ಯಿಂದ ನರಳುತ್ತಿದ್ದ ಮೌಡಿಗ್ಲಿಯಾನಿಗೆ ತಾನು ಹೇಗಿದ್ದರು ಬೇಗದಲೆ ಸಾಯುವವ ಎಂದು ತಿಳಿದಿದ್ದು ಆತ ಹಲವಾರು ದುಶ್ಚಟಗಳಿಗೆ ತನ್ನನ್ನು ಒಡ್ಡಿಕೊಳ್ಳಲು ಕಾರಣವಾಯಿತು. ಪ್ಯಾಬ್ಲೋ ಪಿಕಾಸೋನ ಸಮಕಾಲೀನನಾಗಿದ್ದ ಮೌಡಿಗ್ಲಿಯಾನಿಗೆ ಪಿಕಾಸೊನ ಬಗ್ಗೆ ವಿಚಿತ್ರವಾದ ಅಸಹನೆ. ಕೆಫೆ ರೊತೊಂದ್‌ನಲ್ಲಿ ಪಿಕಾಸೋನನ್ನು ಮೌಡಿಗ್ಲಿಯಾನಿ ಬಹಿರಂಗವಾಗಿ ಗೇಲಿ ಮಾಡಿದರೆ, ಪಿಕಾಸೋ ಔತಣಕೂಟವೊಂದರಲ್ಲಿ ಮೌಡಿಯನ್ನು ಕತ್ತಿಯಿಂದ ಇರಿದು ರಕ್ತಹರಿಸುವೆನೆಂದು ನಾಟಕೀಯವಾಗಿ ಘೋಷಿಸುತ್ತಾನೆ. ಇಬ್ಬರದೂ ಒಂದು ತರಹದ ಪ್ರೇಮ-ದ್ವೇಷಗಳ ಸಂಬಂಧ. ಪ್ಯಾರಿಸಿನ ಪ್ರತಿಷ್ಠಿತ ವಾರ್ಷಿಕ ಕಲಾಸ್ಪರ್ಧೆಯಲ್ಲಿ ಮೌಡಿಗ್ಲಿಯಾನಿ ಭಾಗವಹಿಸುವಂತೆ ಆತನ ಸ್ನೇಹಿತರು ಮಾಡುವ ಪ್ರಯತ್ನವೆಲ್ಲ ವ್ಯರ್ಥವಾಗುತ್ತದೆ. ಇಂಥ ಸ್ಪರ್ಧೆಗಳೆಲ್ಲ ತನ್ನ ಸಾಮಥ್ರ್ಯವನ್ನು ಅಳೆಯಲಾರವು ಎಂದು ನಂಬಿದವ ಮೌಡಿ. ತನ್ನ ಜೀವನದ ಬೆಲೆಬಾಳುವ ವರುಷಗಳನ್ನು ವ್ಯಯ ಮಾಡದಂತೆ ಪ್ರೇರೇಪಿಸಲು ಪಿಕಾಸೊ ಮೌಡಿಗ್ಲಿಯಾನಿಯನ್ನು ತನ್ನ ಕಾರಿನಲ್ಲಿ ಒಂದೆಡೆ ಕರೆದೊಯ್ಯುತ್ತಾನೆ. ವೈಭವೋಪೇತ ಬಂಗಲೆಯೊಂದನ್ನು ಪ್ರವೇಶಿಸುವ ಮೌಡಿಗ್ಲಿಯಾನಿಗೆ ಹಣ್ಣುಹಣ್ಣು ಮುದುಕನಾಗಿ ಕುಂಚ ಹಿಡಿವ ಶಕ್ತಿ ಕಳೆದುಕೊಂಡಿರುವ ಮಹಾನ್ ಕಲಾವಿದ ರೆನ್ವಾ ಕಂಡುಬರುತ್ತಾನೆ. ರೆನ್ವಾನ ಮನೆಯಿಂದ ಮರಳುವ ವೇಳೆ ಪಿಕಾಸೊ ಮತ್ತು ಮೌಡಿಗ್ಲಿಯಾನಿಯ ನಡುವೆ ನಡೆವ ಸಂಭಾಷಣೆ, ಗೇಲಿಮಾತು ಅವರ ಸಂಬಂಧದ ಪ್ರತೀಕಗಳಂತೆನ್ನಿಸುತ್ತವೆ.

ಮೌಡಿ - ನಿಜಜೀವನದ ಭಾವಚಿತ್ರ
ನಿರ್ಗತಿಕ ಕಲಾವಿದ ಸ್ನೇಹಿತರೊಂದಿಗೇ ಮಶ್ಕಿರಿ ಮಾಡಿಕೊಂಡು ಬೀದಿಬೀದಿ ತಿರುಗುವ ಮೌಡಿಗ್ಲಿಯಾನಿಯದು ನಾಳೆಯೆ ಇಲ್ಲ ಎನ್ನುವಂತೆ ಬಾಳುವ ಬೊಹೀಮಿಯನ್ ಬದುಕು. 1917ರ ಸುಮಾರಿಗೆ ಆತನಿಗೆ ಪರಿಚಯವಾದ ಹುಡುಗಿ ಝಾನ್. ಆಕೆಯ ಜತೆ ಕಳೆದ ವರುಷಗಳು ಮೌಡಿಗ್ಲಿಯಾನಿಯ ಜೀವನದ ಅತ್ಯಂತ ಪ್ರಮುಖ ಕಾಲಘಟ್ಟ. ಬೂರ್ಜ್ವಾ ಕ್ಯಾಥೊಲಿಕ್ ಕುಟುಂಬದ ಝಾನ್ ಯಹೂದಿಯಾಗಿದ್ದ ಮೌಡಿಗ್ಲಿಯಾನಿಯನ್ನು ಪ್ರೇಮಿಸಿದ್ದು, ಆತನೊಂದಿಗಿರುವುದು ಆಕೆಯ ಕುಟುಂಬದವರ ವಿರೋಧಕ್ಕೆ ಕಾರಣವಾಗುತ್ತದೆ. ಝಾನಳಿಗೆ ಒಂದು ಹೆಣ್ಣುಮಗುವೂ ಆಗುತ್ತದೆ. ಆದರೆ ಮೌಡಿಗೆ ತನ್ನ ವ್ಯಸನಗಳೇ ಹೆಚ್ಚು. ಝಾನ್ ಆತನಿಂದ ಕೆಲಕಾಲ ದೂರವಾಗುತ್ತಾಳೆ. ಇದೇ ವೇಳೆಗೆ ಅತಿಯಾಗಿ ಮಾದಕವಸ್ತು ಸೇವಿಸಿ ಮತ್ತನಾಗಿರುವ ಮೌಡಿಯನ್ನು ಸೆರೆಮನೆಗೆ ಹಾಕಲಾಗುತ್ತದೆ. ಜತೆಗೇ ಪ್ರಿಯ ಸ್ನೇಹಿತನ ಸಾವು ಕಂಗೆಡಿಸುತ್ತದೆ. ಈ ಸಮಯದಲ್ಲಿ ಬಿಂಬಿಸಲಾಗಿರುವ ಮೌಡಿಯ ನೋವು, ಅಸಹಾಯಕತೆಗಳಿಗೆ ಉಪಮೆಯೇ ಸಿಗದು. ಮೌಡಿಗ್ಲಿಯಾನಿಗೆ ಮಗುವನ್ನು ನೋಡಿಕೊಳ್ಳಲು ಶಕ್ತಿಯಿಲ್ಲವೆಂಬ ಕಾರಣ ನೀಡಿ ಝಾನಳ ಕುಟುಂಬ ಮಗುವನ್ನು ದೂರದೂರಿನ ಕಾನ್ವೆಂಟೊಂದಕ್ಕೆ ಸೇರಿಸುತ್ತದೆ. ಈಗ ಮೌಡಿ ಅಸಹಾಯಕ. ಹಣ ಬೇಕಾಗಿ ಬಂದಾಗ ಆತ ವಿಧಿಯಿಲ್ಲದೆ ವಾರ್ಷಿಕ ಕಲಾಸ್ಪರ್ಧೆಗೆ ಹೆಸರು ನೋಂದಾಯಿಸುತ್ತಾನೆ. ಆತನ ಹಿಂದೆಯೆ ಪಿಕಾಸೋ ಮತ್ತು ಕಲಾವಿದರ ಬಳಗದ ರಿವೆರಾ, ಸುತೀನ್ ಮುಂತಾದ ಸುಪ್ರಸಿದ್ಧ ಕಲಾವಿದರೆಲ್ಲರೂ!! ಈಗ ಮೌಡಿ ಗೆಲ್ಲಲೇಬೇಕು, ತನ್ನ ಪ್ರೀತಿಯ ಮಗಳಿಗಾಗಿ. ಪುನಹ ಗರ್ಭಿಣಿಯಾಗಿರುವ ಝಾನಳನ್ನೆ ಕ್ಯಾನ್ವಾಸಿಗೆ ಇಳಿಸುತ್ತಾನೆ. ಮೊತ್ತಮೊದಲಬಾರಿಗೆ ತನ್ನ ಜೀವನದ ಬಗ್ಗೆ ತೀವ್ರವಾಗಿ ಆಲೋಚಿಸುವ ಮೌಡಿ ಝಾನಳನ್ನು ಮದುವೆಯಾಗಲು ಬಯಸುತ್ತಾನೆ.
ಕಲಾಸ್ಪರ್ಧೆಯ ತೀರ್ಪಿನ ಸಂಜೆ. ಎಲ್ಲರ ಪೆಯಿಂಟಿಂಗುಗಳನ್ನು ತೆರೆಹಾಕಿ ಮುಚ್ಚಲಾಗಿದೆ. ತುಂಬುಗರ್ಭಿಣಿ ಝಾನ್, ಪಿಕಾಸೋ ಮುಂತಾಗಿ ಎಲ್ಲ ಕಲಾವಿದರೂ ನೆರೆದಿದ್ದಾರೆ. ಮೌಡಿ ಮಾತ್ರ ಅಲ್ಲಿ ಇಲ್ಲ. ಆತ ಮದುವೆಯ ಲೈಸೆನ್ಸಿಗಾಗಿ ನಗರಸಭೆಯ ಕಚೇರಿಗೆ ಧಾವಿಸಿದ್ದಾನೆ. ತಾನು ವಿಜಯಿಯಾಗುವ ದಿನವೇ ಝಾನಳನ್ನು ಮದುವೆಯಾಗುವ ಹಂಬಲ ಅವನದು. ಇತ್ತಕಡೆ ಇಡೀ ಪ್ಯಾರಿಸ್ ನಗರಿಯೇ ಚಿತ್ರಪಟಗಳ ತೆರೆ ಸರಿವ ಗಳಿಗೆಯನ್ನು ಉಸಿರು ಬಿಗಿಹಿಡಿದು ಕಾದಿದೆ. ಯಾರು ಗೆಲ್ಲಬಹುದು? ಮೌಡಿ ಝಾನಳನ್ನು ಮದುವೆಯಾಗುವನೆ? ದಯವಿಟ್ಟು ಚಲನಚಿತ್ರ ನೋಡಿ.
ಮೌಡಿಗ್ಲಿಯಾನಿಯ ಪಾತ್ರವಹಿಸಿರುವ ಆಂಡಿ ಗಾರ್ಶಿಯಾ ಹಾಗೂ ಪಿಕಾಸೋ ಪಾತ್ರವಹಿಸಿರುವ ಒಮಿದ್ ಜಲೀಲಿ ಉತ್ತಮವಾಗಿ ನಟಿಸಿದ್ದಾರೆ. ಝಾನಳ ಪಾತ್ರವಹಿಸಿರುವ ಎಲ್ಸಾ ಜಿಲ್ಬರ್ಸ್ಟೀನ್ ಮೌಡಿಗ್ಲಿಯಾನಿ ರಚಿಸಿರುವ ಸುಪ್ರಸಿದ್ಧ ಪೆಯಿಂಟಿಂಗಿನ ಝಾನಳಂತೆಯೆ ಕಾಣುತ್ತಾರೆ. ಸಂಗೀತ ಚಿತ್ರ ಮುಗಿದ ಮೇಲೂ ಕಾಡುತ್ತದೆ. ಕ್ಯಾಮೆರಾ ಕೆಲಸ ಉಚ್ಛ ಕ್ವಾಲಿಟಿಯದು. ಮುಖ್ಯ ಕೊರತೆ ಎಂದರೆ ಮೌಡಿಗ್ಲಿಯಾನಿಯ ಬಗ್ಗೆ ಏನೂ ಗೊತ್ತಿರದೆ ಚಿತ್ರ ನೋಡಲು ಕೂಡುವ ಪ್ರೇಕ್ಷಕರಿಗೆ ಉಂಟಾಗಬಹುದಾದ ಗೊಂದಲ. ಆತನ ವ್ಯಸನ, ವ್ಯಕ್ತಿತ್ವ ಹಾಗು ಕಲಾಶೈಲಿಗಳ ಬಗ್ಗೆ ಚಿತ್ರದಲ್ಲಿ ಹೆಚ್ಚಿನ ಮಾಹಿತಿ ಇದ್ದಿದ್ದರೆ ಚೆನ್ನಾಗಿತ್ತು ಅನ್ನಿಸುತ್ತದೆ. ತಾನು ಜೀವಿಸಿದ್ದಾಗ ಕೇವಲ ಒಂದು ಚಿತ್ರಪ್ರದರ್ಶನವನ್ನು ಮಾತ್ರ ಮಾಡಿದ್ದ, ಬಡತನದಲ್ಲಿಯೆ ಸತ್ತುಹೋದ ಮೌಡಿಗ್ಲಿಯಾನಿಯ ಚಿತ್ರಗಳಿಗೆ ಇಂದು ಮಿಲಿಯಗಟ್ಟಲೆ ಡಾಲರು ತೆತ್ತು ಕೊಳ್ಳುವವರಿದ್ದಾರೆ. ಆತನ ಮಗಳು ಝಾನ್ ಮೌಡಿಗ್ಲಿಯಾನಿಗೆ ಈ ಚಲನಚಿತ್ರವನ್ನು ಅರ್ಪಿಸಲಾಗಿದೆ.
ಚಿತ್ರಕೃಪೆ: http://www.misamcgll.ca ಮತ್ತು http://www.jokerartgallery.com
Truly amazing story
i liked it
ವಿಸ್ಮಯದ ಜೀವನ. ರೂಡಿಗತ ವಿಮರ್ಶಕರನ್ನು ನಂಬಬಾರದು ಎಂದಾಯಿತು.
ಸಿದ್ದ ಸೂತ್ರ ಗಳಿಗೆ ಜೋತು ಬೀಳದ ಒಂದು ಮನೋಜ್ಞ ಕತೆ
I haven’t seen this movie. Good review. Some similar movies about art obsessed people
http://www.listal.com/list/all-movies-all-about-art