ಸಾಹಿತ್ಯಕ್ಕೊಂದಿಷ್ಟು ಪಿಂಕ್ ಶೇಡ್..

‘ಸಾಹಿತ್ಯ’ ಅಂದಕೂಡಲೆ ‘ನಾವೇನೂ ಓದಲ್ಲಪ್ಪಾ, ಟೈಮೆಲ್ಲಿದೆ?’ ಎಂದು ನುಣುಚಿಕೊಳ್ಳುವ ಹೆಣ್ಣುಮಕ್ಕಳೆ ಜಾಸ್ತಿ. ಹೆಚ್ಚಿನ ಹೆಣ್ಣುಮಕ್ಕಳು ಓದಿಕೊಳ್ಳುವುದು ಅಡಿಗೆ, ಮೇಕಪ್, ಕೂದಲ ಆರೈಕೆ, ಆರೋಗ್ಯ, ಫ್ಯಾಶನ್ ಇತ್ಯಾದಿಗಳ ಬಗ್ಗೆ. ಈಗಂತೂ ಟೀವಿಯಲ್ಲೆ ಈ ಎಲ್ಲದಕ್ಕು ಪರಿಹಾರ ದೊರಕಿಬಿಡುವುದರಿಂದ ಈ ರೀತಿಯ ಓದುವಿಕೆಯೂ ಕಡಿಮೆಯಾಗುತ್ತಿದೆ. ಕೆಲವು ದಶಕಗಳ ಹಿಂದೆ ಹೆಣ್ಣುಮಕ್ಕಳ ಓದುಗವರ್ಗ ಎಷ್ಟು ದೊಡ್ಡದಾಗಿತ್ತೆಂದರೆ ಅವರಿಗಾಗಿಯೆ ಬರೆಯುವ ಲೇಖಕಿಯರ ವರ್ಗವೂ ಹುಟ್ಟಿಕೊಂಡಿತ್ತು. ಸೂಕ್ಷ್ಮವಾಗಿ ಅವಲೋಕಿಸಿದರೆ  ಎಪ್ಪತ್ತರ ದಶಕದ ಸ್ತ್ರೀವಾದದ ಕನ್ನಡೀಕೃತ ರೂಪವನ್ನು ನಾವು ಈ ಸಾಹಿತ್ಯದಲ್ಲಿ ಕಾಣಬಹುದು. ಸಾಯಿಸುತೆ, ಸಿ.ಎನ್.ಮುಕ್ತಾರಿಂದ ಹಿಡಿದು ತ್ರಿವೇಣಿ, ಅನುಪಮಾ ನಿರಂಜನರವರೆಗೆ ಸಾಕಷ್ಟು ಕಾದಂಬರಿಗಳ ಬಗ್ಗೆ ಹೆಂಗೆಳೆಯರು ಒಂದು ಕಡೆ ಸೇರಿದಾಗ ತಮ್ಮದೇ ಧಾಟಿಯಲ್ಲಿ ಚರ್ಚೆ ಮಾಡುತ್ತಿದ್ದರು. ಮಹಿಳಾಕೇಂದ್ರಿತ ಸಾಹಿತ್ಯ ಅಷ್ಟು ಜನಪ್ರಿಯವಾಗಿದ್ದದ್ದು ಇದ್ದಕ್ಕಿದ್ದಂತೆಯೆ ದಿಢೀರನೆ ಕಣ್ಮರೆಯಾಗಲು ಕಾರಣಗಳೇನು?
ಬಹುಶಃ ಆ ಒಂದು ಪೀಳಿಗೆಯ ಲೇಖಕಿಯರು ಕಣ್ಮರೆಯಾಗುತ್ತಿದ್ದಂತೆ ಅವರ ಅಭಿಮಾನಿವರ್ಗ ಬೇರೆ ಸಾಹಿತ್ಯದೆಡೆಗೆ ಮುಖ ಮಾಡಿತೇನೋ. ಮಹಿಳಾವರ್ಗದ ಹೊಸಪ್ರಜ್ಞೆಗೆ  ‘ಕೇಟರ್’ ಮಾಡುವಂತಹ ಹೊಸ ಪೀಳಿಗೆಯ ಲೇಖಕಿಯರ ಸಂಖ್ಯೆ ಕಡಿಮೆಯಿರುವದು, ಕಂಪ್ಯೂಟರ್ ಕ್ರಾಂತಿ, ಇಂಟರ್ನೆಟ್ ಸಂಭ್ರಮ, ಜಾಗತೀಕರಣದ ಆಗಮನದೊಂದಿಗೆ ಬದಲಾದ ವಿದ್ಯಾವಂತ ಹೆಣ್ಣಿನ ಪಾತ್ರಗಳು, ದೂರದರ್ಶನದ ಧಾರಾವಾಹಿಗಳು..ಹೀಗೆ ಕಾರಣ ಹುಡುಕುತ್ತ ಹೋದರೆ ಯಾವ ಕೋನದಿಂದಾದರೂ ನೋಡಬಹುದು. ಆದರೆ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ವಲಯಗಳ ಮಹಿಳಾ ಸಾಹಿತ್ಯಗಳ ಕಡೆ ಮುಖ ಮಾಡಿದರೆ ಹೊಸತೊಂದು ಬೆಳವಣಿಗೆ ಆರಂಭವಾಗಿರುವುದಷ್ಟೇ ಅಲ್ಲ, ಅಚ್ಚರಿಪಡಿಸುವ ವೇಗದಲ್ಲಿ ಬೆಳೆಯುತ್ತಿರುವುದನ್ನು ಕಾಣಬಹುದು.
ಚಿಕ್‌ಲಿಟ್.
ಏನಿದು ಚಿಕ್‌ಲಿಟ್? ಹೆಸರೇ ತಮಾಷೆಯಾಗಿದೆಯಲ್ಲ? ಅನ್ನಬಹುದು ನೀವು. ಇದರ ಹೆಸರಿನಷ್ಟೇ ಸ್ವಾರಸ್ಯಕರವಾಗಿದೆ ಇದರ ಇತಿಹಾಸ.
ಅಮೆರಿಕನ್ ಆಡುಮಾತಿನಲ್ಲಿ ಚಿಕ್ ಎಂದರೆ ಯುವತಿ ಎಂದರ್ಥ. ಲಿಟ್ ಎನ್ನುವುದು ಲಿಟರೇಚರ್ ಎಂಬ ಪದದ ಮೊಂಡುರೂಪ. ಎರಡೂ ಸೇರಿದರೆ ಚಿಕ್‌ಲಿಟ್. ಬರೆ ಬಲಿಪಶುವಾಗಿ ಮಾತ್ರ ಮಹಿಳೆಯನ್ನು ಚಿತ್ರಿಸದೆ ಆಕೆಯ ಜೀವನದ ವಿಭಿನ್ನ ಆಯಾಮಗಳನ್ನು, ಅನುಭವಗಳನ್ನು ಆಕೆಯದೆ ಭಾಷೆಯಲ್ಲಿ ದಾಖಲಿಸುವ ಸಾಹಿತ್ಯವನ್ನು ‘ಚಿಕ್‌ಲಿಟ್’ ಎಂದು ಕರೆಯಲಾಗುತ್ತದೆ. 1995ರಲ್ಲಿ ಕ್ರಿಸ್ ಮಾಜಾ ಮತ್ತು ಜೆಫ್ರೀ ಡಿಶೆಲ್ ಸಂಪಾದಿಸಿದ ‘ಚಿಕ್‌ಲಿಟ್ – ಪೋಸ್ಟ್ ಫೆಮಿನಿಸ್ಟ್ ಫಿಕ್ಷನ್’ ಎಂಬ ಸಂಕಲನದಲ್ಲಿ ಈ ಪದವನ್ನು ವಿಡಂಬನಾತ್ಮಕವಾಗಿ ಬಳಸಲಾಯಿತು. ಹೆಚ್ಚಿನ ಸ್ತ್ರೀವಾದಿಗಳು ಚಿಕ್‌ಲಿಟ್ ಬಗ್ಗೆ ಮೂಗು ಮುರಿಯುತ್ತಾರಾದರೂ ಇದು ಆಧುನಿಕ, ನಗರವಾಸಿ ಮಹಿಳೆಯ ಜೀವನವನ್ನು ವಿಶಿಷ್ಟ ರೀತಿಯಲ್ಲಿ ತೆರೆದಿಡುವ ಪ್ರಯತ್ನವಾಗಿದೆ ಎಂಬುದರ ಬಗ್ಗೆ ಎರಡು ಮಾತಿಲ್ಲ. ಸ್ತ್ರೀವಾದದ ಎಲ್ಲ ಸ್ವರೂಪಗಳಿಗೂ ಸರಿಯಾಗಿ ಹೊಂದಿಬರದ ಈ ಸಾಹಿತ್ಯಪ್ರಕಾರವನ್ನು ‘ಸ್ತ್ರೀವಾದೀ ಸಾಹಿತ್ಯದ ಎರಡನೆ ಅಲೆ’ ಎಂದು ಪರಿಗಣಿಸಲಾಗುತ್ತದೆ. ವರ್ಜೀನಿಯಾ ವುಲ್ಫಳ ‘ಎ ರೂಮ್ ಆಫ್ ಒನ್ಸ್ ಓನ್’ (ತನ್ನದೇ ಆದ ಒಂದು ಕೋಣೆ) ಎಂಬ ಕಲ್ಪನೆ ಇಲ್ಲಿ ಬೇರೊಂದು ಆಯಾಮದಲ್ಲಿ ಮಾತು ಪಡೆದುಕೊಂಡಿದೆ. ಚಿಕ್‌ಲಿಟ್‌ನ ಮೂಲ ಜೇನ್ ಆಸ್ಟಿನ್ ಕಾದಂಬರಿಗಳು ಎಂದು ಈ ಲೇಖಕಿಯರೆ ಒಪ್ಪಿಕೊಳ್ಳುತ್ತಾರೆ. ಕೆಲ ಶತಮಾನಗಳ ಹಿಂದಿನ ಹೆಣ್ಣಿನ ಸಾಮಾಜಿಕ ಜೀವನ, ಸಂಬಂಧಗಳು, ಪ್ರೇಮ, ತೊಳಲಾಟಗಳೇ ಮೊದಲಾದ ವಿಷಯಗಳ ಬಗ್ಗೆ ಸಮರ್ಥವಾಗಿ ಬರೆದ ಜೇನ್ ಆಸ್ಟಿನ್‌ಳ ಕಾದಂಬರಿಗಳನ್ನು ಓದದವರು ಕಡಿಮೆ. ಚಿಕ್‌ಲಿಟ್‌ ಇದೇ ಪರಂಪರೆಯ ಮುಂದುವರೆಯುತ್ತಿರುವ ಭಾಗವೆಂದು ವ್ಯಾಖ್ಯಾನಿಸಲಾಗುತ್ತದೆ.
ಚಿಕ್‌ಲಿಟ್‌ನ ಪ್ರಮುಖ ‘ಲಕ್ಷಣ’ಗಳು ಇಂತಿವೆ:
1. ನಾಯಕಿ ಯಾವಾಗಲೂ ಸಂಬಂಧಗಳ ನಡುವೆ ಇರುತ್ತಾಳೆ, ಪ್ರೇಮಕ್ಕಾಗಿ ಕಾತರಿಸುತ್ತಿರುತ್ತಾಳೆ, ತನ್ನ ಕನಸಿನ ಪುರುಷನನ್ನು ಭೇಟಿಯಾಗುತ್ತಾಳೆ ಅಥವಾ ಒಂದು ಕೆಟ್ಟ ಕನಸಿನಂತಹ ಪ್ರೇಮಸಂಬಂಧದಿಂದ ಹೊರಬಂದಿರುತ್ತಾಳೆ.
2. ಈ ಕಥೆಗಳು ರೊಮ್ಯಾಂಟಿಕ್ ಆಗಿರಲೇಬೇಕೆಂದೇನಿಲ್ಲ. ಇಲ್ಲಿನ ನಾಯಕಿಯ ಪ್ರೇಮ, ಲೈಂಗಿಕ ಸಂಬಂಧಗಳ ಜತೆಗೇ ಸ್ನೇಹ, ಕೌಟುಂಬಿಕ ಸಂಬಂಧಗಳು, ವೃತ್ತಿಜೀವನಗಳೂ ಅಷ್ಟೇ ಪ್ರಾಮುಖ್ಯತೆ ಹೊಂದಿರುತ್ತವೆ, ಕೆಲವೊಮ್ಮೆ ನಾಯಕಿಯ ಸಾಕುನಾಯಿ ಅಥವಾ ಬೆಕ್ಕು ಕೂಡಾ!!
3. ಸಾಧಾರಣವಾಗಿ ಆಕೆ ಸುಂದರಿಯಾಗಿರುತ್ತಾಳೆ ಮತ್ತು ಪಬ್ಲಿಕ್ ರಿಲೇಶನ್ಸ್, ಫ್ಯಾಶನ್ ಮ್ಯಾಗಜೀನ್, ಅಥವಾ ಅಡ್ವರ್ಟೈಸಿಂಗ್‌ಗೆ ಸಂಬಂಧಿಸಿದ ಕೆಲಸ ಮಾಡುತ್ತಿರುತ್ತಾಳೆ. ಅಕಸ್ಮಾತ್ ಆಕೆ ಸಾಮಾನ್ಯ ರೂಪದವಳಾಗಿದ್ದರೂ ಆಕೆಯಲ್ಲಿ ಏನೋ ಒಂದು ವೈಶಿಷ್ಟ್ಯತೆಯಿರುತ್ತದೆ.
4. ಕಥೆಯನ್ನು ಸಾಮಾನ್ಯವಾಗಿ ತಿಳಿಯಾದ, ಹಾಸ್ಯಪೂರಿತ ಶೈಲಿಯಲ್ಲಿ ನಿರೂಪಿಸಲಾಗುತ್ತದೆ. ಆಡುಭಾಷೆಯ ಬಳಕೆ ಹೆಚ್ಚು. ಕಥೆಯನ್ನು ನಾಯಕಿಯೇ ನಿರೂಪಿಸುತ್ತಾಳೆ.
5. ಕಥೆಯ ಕೊನೆಯ ಭಾಗದಲ್ಲಿ ನಾಯಕಿಯ ಕಷ್ಟಗಳೆಲ್ಲವೂ ಪರಿಹಾರವಾಗುತ್ತವೆ, ಇಲ್ಲವೇ ಆಕೆ ಜೀವನದ ಮುಖ್ಯ ಪಾಠಗಳನ್ನು ಕಲಿತುಕೊಳ್ಳುತ್ತಾಳೆ.
ಆಂಗ್ಲಸಾಹಿತ್ಯದಲ್ಲಿ ಅತ್ಯಂತ ಜನಪ್ರಿಯವಾಗಿರುವ ಚಿಕ್‌ಲಿಟ್‌ ಪುಸ್ತಕಗಳೆಂದರೆ ಹೆಲೆನ್ ಫೀಲ್ಡಿಂಗ್‌ಳ ‘ಬ್ರಿಜೆಟ್ ಜೋನ್ಸ್’ ಡೈರಿ’ ಮತ್ತು ಕ್ಯಾಂಡೇಸ್ ಬುಶ್ನೆಲ್‌ಳ ‘ಸೆಕ್ಸ್ ಎಂಡ್ ದ ಸಿಟಿ’ ಹಾಗೂ ಲಾರೆನ್ ವೀಸ್‌ಬರ್ಜರ್‌ಳ  ‘ದ ಡೆವಿಲ್ ವೇರ್ಸ್ ಪ್ರಾಡಾ’. ಈ ಮೂರೂ ಸಿನೆಮಾರೂಪಕ್ಕೆ ತರಲ್ಪಟ್ಟು ಬಹಳ ಯಶಸ್ಸು ಗಳಿಸಿವೆ. ‘ಸೆಕ್ಸ್ ಎಂಡ್ ದ ಸಿಟಿ’ ಸಿನೆಮಾರೂಪಕ್ಕೆ ಬರುವುದಕ್ಕೆ ಮುನ್ನ ಟಿವಿ ಧಾರಾವಾಹಿಯ ರೂಪದಲ್ಲಿ ಅತಿ ಹೆಚ್ಚು ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿತ್ತು. ನ್ಯೂಯಾರ್ಕ್‌ನಲ್ಲಿ ವಾಸಿಸುವ ಅಂಕಣಕಾರ್ತಿ ಕ್ಯಾರೀ ಬ್ರ್ಯಾಡ್‍ಶಾಳ ಜೀವನವನ್ನು ಆಕೆಯದೆ ಅಂಕಣಬರಹಗಳ ಮೂಲಕ ಈ ಪುಸ್ತಕವು ನಿರೂಪಿಸುತ್ತದೆ. ‘ಬ್ರಿಜೆಟ್ ಜೋನ್ಸ್ಸ್ ಡೈರಿ’ಯ ಬ್ರಿಜೆಟ್ ಲಂಡನ್‌ನಲ್ಲಿ ವಾಸಿಸುತ್ತಿದ್ದು ಆಕೆ ತನ್ನ ಪ್ರೀತಿ ಪ್ರೇಮ ಪ್ರಣಯಗಳ ಬಗ್ಗೆ ತನ್ನ ಡೈರಿಯಲ್ಲಿ ಬರೆದುಕೊಳ್ಳುತ್ತಿರುತ್ತಾಳೆ. ‘ದ ಡೆವಿಲ್ ವೇರ್ಸ್ ಪ್ರಾಡಾ’ದ ನಾಯಕಿ ಆಂಡ್ರಿಯಾ ಸ್ಯಾಕ್ಸ್ ಸಣ್ಣ ನಗರವೊಂದರಿಂದ ಬಂದವಳಾಗಿದ್ದು ನ್ಯೂಯಾರ್ಕಿನ ನ ಅತ್ಯುತ್ತಮ ಫ್ಯಾಶನ್ ಮ್ಯಾಗಜೀನ್ ‘ರನ್‌ವೇ ‘ನ ಸಂಪಾದಕಿಯಾದ ಮಿರಾಂಡಾ ಪ್ರೀಸ್ಟ್‌ಲಿಯ  ಸಹಾಯಕಿಯಾಗಿ ಕೆಲಸ ಮಾಡುತ್ತ ಆಕೆಯ ಎಲ್ಲ ಬಾಸಿಸಮ್‌ಗಳನ್ನು ಸಹಿಸಿಕೊಂಡು ತನ್ನ ಆಕಾಂಕ್ಷೆ ಮತ್ತು ವೃತ್ತಿಜೀವನಗಳ ನಡುವೆ ಹೆಣಗಾಡುತ್ತಿರುತ್ತಾಳೆ.

ಈ ಪ್ರಕಾರದಲ್ಲಿ ಜನಪ್ರಿಯವಾಗಿರುವ ಇತರ ಕೆಲವು ಪುಸ್ತಕಗಳೆಂದರೆ ಸೋಫೀ ಕಿನ್ಸೆಲ್ಲಾರ ‘ಕನ್ಫೆಶನ್ಸ್ ಆಫ್ ಎ ಶೋಪಹಾಲಿಕ್, ಸಿಸಿಲಿಯಾ ಅಹೆರ್ನ್‌ರ ‘ಪಿ.ಎಸ್. ಐ ಲವ್ ಯು’, ನಿಕೋಲಾ ಕ್ರಾಸ್ ಮತ್ತು ಎಮ್ಮಾ ಮೆಕ್‌ಲಾಲಿನ್‌ರ  ‘ದ ನ್ಯಾನೀ ಡೈರೀಸ್’ ಹಾಗೂ ಜೇನ್ ಗ್ರೀನ್‌ರ ‘ಜೆಮಿಮಾ ಜೆ’. ಚೆಂದದ ಕವರ್‌ಪೇಜುಗಳನ್ನು ಹೊಂದಿರುವ ಈ ಪುಸ್ತಕಗಳು ಕಣ್ಣಿಗೆ ಹಬ್ಬ. ಹೆಣ್ಣುಮಕ್ಕಳಿಗೆ ಸಾಧಾರಣವಾಗಿ ಇಷ್ಟವಾಗುವ ಬಣ್ಣಗಳು, ಹೂವಿನ ಚಿತ್ರಗಳು, ಫ್ಯಾಶನಬಲ್ ಹೆಂಗಸರ ಚಿತ್ರಗಳು ಕಣ್ಸೆಳೆಯುವಂತಿರುತ್ತವೆ.

ಭಾರತೀಯ ಚಿಕ್‌ಲಿಟ್ ಕಳೆದ ದಶಕದಲ್ಲಿ ಅಚ್ಚರಿ ಹುಟ್ಟಿಸುವಷ್ಟು ಬೆಳವಣಿಗೆಗಳನ್ನು ಕಂಡಿದೆ. ಚಿಕ್‌ಲಿಟ್‌ನ ಈ ಉಪಪ್ರಕಾರವು ನಗರವಾಸಿ ಓದುಗವರ್ಗವನ್ನು ಹಿಂದೆಂದೂ ಇಲ್ಲದಂತೆ ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಸಫಲವಾಗಿವೆ. ಭಾರತೀಯ ಚಿಕ್‌ಲಿಟ್‌ನ ನಾಯಕಿಯರು ಇಪ್ಪತ್ತರ ಇಲ್ಲವೇ ಮೂವತ್ತರ ಹರೆಯದಲ್ಲಿದ್ದು ಕಾಸ್ಮೋಪಾಲಿಟನ್ ಸಂಸ್ಕೃತಿಯಲ್ಲಿ ಬೆಳೆದುಬಂದಿರುವ ಹೆಣ್ಣುಮಕ್ಕಳಾಗಿರುತ್ತಾರೆ. ಇವರ ವೃತ್ತಿಪರ ಜೀವನ ಮತ್ತು ಪ್ರೇಮ-ಕಾಮಗಳು ಈ ಪುಸ್ತಕಗಳ ಪ್ರಮುಖ ಥೀಮುಗಳಾಗಿವೆ. ಎಲ್ಲಾ ಪುಸ್ತಕಮನೆಗಳ ಟಾಪ್ ಟೆನ್ ಪಟ್ಟಿಯಲ್ಲಿ ಒಂದು ಚಿಕ್‌ಲಿಟ್ ಪುಸ್ತಕವಾದರೂ ಇದ್ದೇ ಇರುತ್ತದೆ.

ಮುಂಬೈನ ಫಿಲ್ಮೋದ್ಯಮದಲ್ಲಿ ಕೆಲಸಮಾಡುತ್ತಿದ್ದು ಎಂಟಿವಿಯ ಸುಪ್ರಸಿದ್ಧ ‘ಫಿಲ್ಮೀ ಫಂಡಾ’ ಕಾರ್ಯಕ್ರಮದ ತಂಡದಲ್ಲಿದ್ದ ಬರಹಗಾರ್ತಿ ರಾಜಶ್ರೀಯವರ ‘ಟ್ರಸ್ಟ್ ಮಿ’ ಇಲ್ಲಿಯವರೆಗೆ ಭಾರತದಲ್ಲಿ ಅತಿಹೆಚ್ಚು ಮಾರಾಟವಾಗಿರುವ ಚಿಕ್‌ಲಿಟ್ ಪುಸ್ತಕ. ಇದರ ನಾಯಕಿ ಪಾರ್ವತಿ ಗಂಡಸುಜಾತಿಯಿಂದಲೇ ಬೇಸತ್ತುಹೋಗಿ ಯಾರನ್ನೂ ಪ್ರೇಮಿಸಬಾರದೆಂಬ ತೀರ್ಮಾನಕ್ಕೆ ಬಂದಿರುವಾಕೆ. ಇದಕ್ಕೆ ಬೆಂಬಲ ನೀಡಲು ಆಕೆಯ ಗೆಳತಿಯರಿದ್ದಾರೆ. ತಂದೆಯ ಸಮಾನವೆಂದು ಭಾವಿಸಿದ್ದ ಆಕೆಯ ಬಾಸ್ ಆದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಾಗ ಆಕೆ ಕೆಲಸ ಬಿಟ್ಟು ಟಿಪಿಕಲ್ ಬಾಲಿವುಡ್ ನಿರ್ದೇಶಕ ಜಾಂಬುವಂತನ ಸಹಾಯಕಿಯಾಗಿ ಕೆಲಸಕ್ಕೆ ಸೇರುತ್ತಾಳೆ. ತನ್ನ ಹಿಂದಿನ ಅನುಭವಗಳಿಂದ ತಾನು ಪಕ್ವವಾಗಿದ್ದೇನೆ, ಇನ್ನು ಮೋಸಹೋಗಲಾರೆನೆಂದು ಭಾವಿಸುವ ಪಾರ್ವತಿಯ ಜೀವನ ಚಿತ್ರನಟ ರಾಹುಲನನ್ನು ಭೇಟಿಯಾದಮೇಲೆ ಅಲ್ಲೋಲಕಲ್ಲೋಲಗಳಿಗೆ ಒಳಗಾಗುತ್ತದೆ.

ಸ್ವಾತಿ ಕೌಶಲ್‌ರ ‘ಪೀಸ್ ಆಫ್ ಕೇಕ್’ನ ನಾಯಕಿ 29 ವಯಸ್ಸಿನ ಮೀನಲ್ ಶರ್ಮಾ ಕಾರ್ಪೊರೇಟ್ ಪ್ರಪಂಚದ ಉನ್ನತ ಹುದ್ದೆಯಲ್ಲಿರುವಾಕೆ. ಆಕೆಗೆ ಒಳ್ಳೆಯ ಗಂಡನನ್ನು ಹುಡುಕಿಕೊಳ್ಳಬೇಕೆಂದು ತಾಯಿಯಿಂದ ಪ್ರತಿದಿನವೂ ಒತ್ತಡ. ಇದರ ಜತೆಗೇ ಕೆಲಸದ ಒತ್ತಡ. ಆಕೆಯ ತಾಯಿ ದಿನಪತ್ರಿಕೆಯೊಂದಲ್ಲಿ ತನ್ನ ಬಗ್ಗೆ ಜಾಹೀರಾತುಗಳನ್ನು ನೀಡಿದಾಗಲಂತೂ ಮೀನಲ್ ನಾಚಿಕೆಯಿಂದ ಕುಗ್ಗಿಹೋಗುತ್ತಾಳೆ. ಆಕೆ ಕ್ಲಬ್ಬಿಗೆ ಹೋಗುತ್ತಾಳೆ, ಕುಡಿಯುತ್ತಾಳೆ. ಹೆಣ್ಣಿನ ಆಧುನಿಕ ‘ಸಮಾನತೆ’ಯ ಪ್ರತೀಕವಾಗಿದ್ದಾಳೆ. ಆದರೂ ಭಾರತೀಯ ಸಮಾಜದಲ್ಲಿನ ಮದುವೆಗೆ ಸಂಬಂಧಿಸಿದ ನಿಗದಿತ ವಯೋಮಾನವನ್ನು ದಾಟಿರುವ ಬಗ್ಗೆ ಹೆಚ್ಚೂಕಡಿಮೆ ಪ್ರತಿದಿನವೂ ತಾಯಿಯ ಗೋಳಾಟವನ್ನು ಕೇಳಿಕೊಂಡಿರಬೇಕಾಗುತ್ತದೆ.. ಆಧುನಿಕತೆ ಸಾಂಪ್ರದಾಯಿಕತೆಯ ಎದುರಿಗೆ ತಲೆ ಬಗ್ಗಿಸತೊಡಗುತ್ತದೆ.. ಒಟ್ಟಿನಲ್ಲಿ ಭಾರತೀಯ ಮದುವೆ ಮಾರುಕಟ್ಟೆಯನ್ನು ಒಬ್ಬ ಹೆಣ್ಣಿನ ದೃಷ್ಟಿಯಿಂದ ನೋಡಿರುವ ಪುಸ್ತಕವಿದು.

ಅನುಜಾ ಚೌಹಾನ್‌ರ ‘ ದ ಜೋಯಾ ಫ್ಯಾಕ್ಟರ್’ ಇತ್ತೀಚೆಗೆ ದೊಡ್ಡ ಯಶಸ್ಸು ಗಳಿಸಿದ ಚಿಕ್‌ಲಿಟ್ ಕಾದಂಬರಿ. ಇದರ ನಾಯಕಿ ಜೋಯಾ ಸೋಲಂಕಿ ಜಾಹೀರಾತು ಏಜೆನ್ಸಿಯೊಂದರ ಗ್ರಾಹಕ ಸೇವಾ ವಿಭಾಗದ ಅಧಿಕಾರಿ. ಶಾರುಖ್ ಖಾನನ ತಂಪುಪಾನೀಯವೊಂದರ ಶೂಟಿಂಗ್ ಅನ್ನು ಬಿಟ್ಟು ಢಾಕಾಗೆ ಭಾರತೀಯ ಕ್ರಿಕೆಟ್ ಟೀಮಿನ ಚಿತ್ರಗಳನ್ನು ತೆಗೆಯಲು ಹೋಗಬೇಕಾಗಿ ಬಂದಾಗ ಆಕೆ ಸಿಡಿಮಿಡಿಗೊಂಡರೂ ವಿಧಿಯಿಲ್ಲದೆ ತೆರಳುತ್ತಾಳೆ. ಭಾರತೀಯ ಕ್ರಿಕೆಟ್ ಟೀಮ್ ವಿಶ್ವಕಪ್ ಅನ್ನು ಗೆದ್ದ ಕ್ಷಣದಲ್ಲಿಯೇ ಜೋಯಾ ಹುಟ್ಟಿದ್ದು ಎಂದು ತಿಳಿದುಬಂದಾಗ ಕ್ರಿಕೆಟ್ ಟೀಮಿನ ಆಟಗಾರರು ಅಚ್ಚರಿಗೊಳ್ಳುತ್ತಾರೆ. ಆಕೆಯೊಂದಿಗೆ ಬೆಳಗಿನ ಉಪಹಾರ ಮಾಡಿ ಆಡಿದರೆ ಜಯ ಖಚಿತವೆಂದು ಅವರೆಲ್ಲ ನಂಬತೊಡಗುತ್ತಾರೆ. ಆದರೆ ಟೀಮಿನ ನಾಯಕನಿಗೆ ಈಕೆಯ ಬಗ್ಗೆ ಅತಿಯಾದ ಅಸಡ್ಡೆ. ಇತರ ಆಟಗಾರರ ನಂಬಿಕೆ ನಿಜವಾಗುತ್ತಿದ್ದಂತೆಯೆ ಜೋಯಾ ಪ್ರಸಿದ್ಧಿ ಪಡೆದುಬಿಡುತ್ತಾಳೆ. ವಿಶ್ವಕಪ್ ಸಮಯದಲ್ಲಿ ಭಾರತೀಯ ತಂಡದ ಜತೆ ಆಕೆಯನ್ನೂ ಕರೆದೊಯ್ಯಲಾಗುತ್ತದೆ. ಎಲ್ಲರೂ ಆಕೆಯನ್ನು ತಮ್ಮ ಜಾಹೀರಾತುಗಳಲ್ಲಿ ಪ್ರದರ್ಶಿಸಲು ಹಾತೊರೆಯಲು ಆರಂಭಿಸತೊಡಗುತ್ತಾರೆ.
ಅದ್ವೈತ ಕಲಾರವರ ‘ಆಲ್ಮೋಸ್ಟ್ ಸಿಂಗಲ್’ನ 29 ವರ್ಷದ ಆಯಿಶಾ ಭಾಟಿಯಾಗೆ ತನ್ನ ಬಾಸ್ ಬಗ್ಗೆ ಗಾಸಿಪ್ ಮಾಡುವುದೆಂದರೆ ಬಲು ಇಷ್ಟ. ದಪ್ಪಗಿನ ದೇಹದ ಆಯಿಶಾಳಿಗೆ ತನ್ನ ಆಫೀಸಿನ ಸುರಸುಂದರ ಕರಣ್ ವರ್ಮಾನ ಬಗ್ಗೆ ಅತೀವ ಆಸಕ್ತಿ. ಅರೇಂಜ್ಡ್ ಮದುವೆ ಆಕೆಗಿಷ್ಟವಿಲ್ಲ. ತನಗಿಷ್ಟವಿಲ್ಲದಿದ್ದವನನ್ನು ಒಪ್ಪಿಕೊಳ್ಳುವುದು ಆಯಿಶಾಳಿಂದ ಸಾಧ್ಯವಿಲ್ಲ. ನ್ಯೂಯಾರ್ಕಿನಿಂದ ತನಗೆ ತಕ್ಕ ಗಂಡನನ್ನು ಹುಡುಕುವ ಸಲುವಾಗಿ ಬಂದ ಅನಿತಾ ಜೈನ್ ತನ್ನ ಅನುಭವಗಳನ್ನು ‘ಮ್ಯಾರೀಯಿಂಗ್ ಅನಿತಾ’ದ ಮೂಲಕ ಹಂಚಿಕೊಂಡಿದ್ದಾರೆ. ತನ್ನ ಕುಟುಂಬದ ಹಿರಿಯ ಹೆಂಗಸರ ಮೂಲಕ ಮದುವೆಯ ಪ್ರಸ್ತಾವನೆಗಳನ್ನು ಹುಡುಕುವುದು ಎಂದುಕೊಂಡಿದ್ದ ಅನಿತಾ ಭೇಟಿಯಾಗುವ ಹೆಚ್ಚಿನ ಯುವಕಯುವತಿಯರು ‘ರಾಕ್‌ಬ್ಯಾಂಡ್ ಪ್ರಿಯರೂ, ದಿನನಿತ್ಯವೂ ಬಾರ್/ಪಬ್‌ಗಳಿಗೆ ಭೇಟಿನೀಡುವವರೂ, ಲೈಂಗಿಕ ಜೀವನದಲ್ಲಿ ಯಾವುದೇ ನಿಷ್ಟೆಯನ್ನು ಹೊಂದಿಲ್ಲದವರೂ’ ಆಗಿರುವುದನ್ನು ಕಂಡು ಅಚ್ಚರಿಯಾಗುತ್ತದೆ.

ಹೀಗೆ ಮಹಿಳೆಯರಿಂದ ಮಹಿಳೆಯರಿಗಾಗಿಯೇ ಹುಟ್ಟಿದ ಚಿಕ್‌ಲಿಟ್ ತನ್ನ ಕಾಲಮಾನದ ಆಧುನಿಕ ಜೀವನದ ಬಗ್ಗೆ ಬಹಳಷ್ಟನ್ನು ಹೇಳುತ್ತದೆ. ಕನ್ನಡದಲ್ಲಿ ಈ ಸಾಹಿತ್ಯಪ್ರಕಾರಕ್ಕೆ ಸಂಪೂರ್ಣವಾಗಿ ಹೊಂದುವ ರಚನೆಗಳು ಬಂದಿಲ್ಲವಾದರೂ, ಮಹಿಳೆಯರಿಂದ ಮಹಿಳೆಯರಿಗಾಗಿಯೆ ಬರೆಯಲಾದ ತಿಳಿಸಾಹಿತ್ಯ ನಮ್ಮಲ್ಲಾಗಲೇ ಬಂದುಹೋಗಿಯಾಗಿದೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು! ಇತ್ತೀಚೆಗೆ ಬ್ಲಾಗ್ ಮೂಲಕ ಕನ್ನಡದಲ್ಲಿ ಮತ್ತು ಕಂಗ್ಲೀಷಿನಲ್ಲಿ ಬರೆಯುವ ಹಲವು ಬರಹಗಾರ್ತಿಯರು ಪ್ರಜ್ಞಾಪೂರ್ವಕವಾಗಲ್ಲದಿದ್ದರೂ ಚಿಕ್‌ಲಿಟ್ ಎನ್ನಬಹುದಾದಂತಹ ಬರಹಗಳನ್ನು ಹೊರತರುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿರಿಯವರ ‘ಮಲ್ನಾಡ್ ಹುಡ್ಗಿ’, ಸೀಮಾ ಹೆಗಡೆಯವರ ‘ಐ ಆಮ್ ಥಿಂಕಿಂಗ್ ಅಲೌಡ್’, ಚಿತ್ರಾ ಕರ್ಕೇರ ಅವರ ‘ಶರಧಿ’, ಲಕ್ಷ್ಮೀಯವರ ‘ಜಿಂದಗೀ ಕಾಲಿಂಗ್’, ಶಾಂತಲಾ ಭಂಡಿಯವರ ‘ನೆನಪು ಕನಸುಗಳ ನಡುವೆ’, ಶ್ರೀಮಾತಾ ರಮಾನಂದರ ‘ಇರುವುದೆಲ್ಲವ ಬಿಟ್ಟು..’ ಮುಂತಾದವುಗಳನ್ನು ಪರಿಗಣಿಸಬಹುದು.
ಇತ್ತೀಚೆಗೆ ಬಿಡುಗಡೆಯಾದ ಚೇತನಾ ತೀರ್ಥಹಳ್ಳಿಯವರ ‘ಭಾಮಿನಿ ಷಟ್ಪದಿ’ಯನ್ನು ಚಿಕ್‌ಲಿಟ್ ಸಾಲಿಗೆ ಸೇರಿಸಬಹುದಾದರೂ ಕೆಲವೊಂದು ಬರಹಗಳು ಬಹಳ ಗಂಭೀರವಾಯಿತು ಅನ್ನಿಸುವುದೂ ನಿಜ. ತಿಳಿಹಾಸ್ಯ ಚಿಕ್‌ಲಿಟ್ ಸಾಹಿತ್ಯದ ಪ್ರಮುಖ ಲಕ್ಷಣವಾಗಿರುವುದೂ ಇದಕ್ಕೆ ಕಾರಣ. ಈ ಪುಸ್ತಕದ ಬರಹಗಳಲ್ಲಿ ಮಾತನಾಡುವ ಹಲವು ನಾಯಕಿಯರು ತಮ್ಮ ಜೀವನ, ಮದುವೆ, ಸಂಬಂಧ ಇತ್ಯಾದಿಗಳ ಬಗ್ಗೆ ಕೆಲವೊಮ್ಮೆ ತೀಕ್ಷ್ಣವಾಗಿ, ಕೆಲವೊಮ್ಮೆ ವಿಷಾದದಿಂದ, ಕೆಲವೊಮ್ಮೆ ವ್ಯಂಗ್ಯವಾಗಿ ಮಾತನಾಡುತ್ತಾರೆ. ಸಿರಿಯವರ ಹಲವು ಕಥೆಗಳು, ಬರಹಗಳು ಹೆಚ್ಚು ‘ಚಿಕ್‌ಲಿಟ್’ ಅನ್ನಿಸುವಂಥವು. ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ನಿಮ್ಮಿ ಕಾಲಂ’ ಬರಹಗಳು ಚಿಕ್‌ಲಿಟ್ ಕ್ಯಾಟಗರಿಗೆ ಹೆಚ್ಚು ಹೊಂದಿಕೊಳ್ಳುವಂಥವು. ಇದೇ ಸಮಯದಲ್ಲಿ ವೀಣಾ ಶಾಂತೇಶ್ವರರ ‘ಓ ಗಂಡಸರೇ ನೀವೆಷ್ಟು ಒಳ್ಳೆಯವರು!’ ಕೂಡ ನೆನಪಾಗದೆ ಇರದು. ಇವನ್ನೆಲ್ಲ ಬಿಟ್ಟು ಚಿಕ್‌ಲಿಟ್ ಹೆಣ್ಣನ್ನು ಅರಸಲು ಹೋದರೆ ಆಕೆಯನ್ನು ಬಹಳ ಚೆನ್ನಾಗಿ ಪ್ರತಿನಿಧಿಸುವುದು ಪೂರ್ಣಚಂದ್ರ ತೇಜಸ್ವಿಯವರು ನಳಿನೀ ದೇಶಪಾಂಡೆ ಎಂಬ ಹೆಸರಿನಿಂದ ಬರೆದ ‘ಲ್ಯಾಂಬ್ರಟಾ ವೆಸ್ಪಾ’ದ ಹುಡುಗಿಯೇ.
ಒಟ್ಟಿನಲ್ಲಿ ಹೇಳುವುದಾದರೆ ಚಿಕ್‌ಲಿಟ್ ಪ್ರಕಾರದಲ್ಲಿ ಕನ್ನಡದಲ್ಲಿನ ಸಾಧ್ಯತೆಗಳು ಸಾಕಷ್ಟಿವೆ. ಮಹಿಳಾ ಓದುಗವರ್ಗವೂ ಈ ರೀತಿಯ ಪುಸ್ತಕಗಳನ್ನು ಸಂತಸದಿಂದ ಬರಮಾಡಿಕೊಳ್ಳುವ ಚಾನ್ಸೂ ಜಾಸ್ತಿಯಿದೆ.
ಬರೆಯುವವರು ಬೇಕಷ್ಟೆ!!

21 thoughts on “ಸಾಹಿತ್ಯಕ್ಕೊಂದಿಷ್ಟು ಪಿಂಕ್ ಶೇಡ್..

    • Dear Rishikesh,
      I had a boss who was somewhat a shade worse than Meryl Streep’s character. It was so difficult to understand that person and I almost lost my sanity working around that person. Needless to say, I quit!! I have to admit, I learnt so much and somehow cannot hate that individual. Nevertheless, I do admire women who, like that old Jewish Hollywood writer in the movie ‘The Holiday’ observed, “had gumption”.
      Well, here is another confession. I am a major chicklit and chickflick lover. As a girl, I was a major bookworm and never the one to go shopping, discuss fashion, or indulge in gossip. My girlfriends made fun of this fact and my guyfriends always considered me to be tomboyish. Guess now after all those years, chicklit and movies make me wonder what it would have been like if I was all that!!

  1. ನಿಜ ಕನ್ನಡದಲ್ಲಿ ಇತ್ತೀಚೆಗೆ ಹೆಸರು ಮಾಡಿರುವಂತಹ ಲೇಖಕಿಯರು ಬಹಳ ಕಮ್ಮಿ..ಮಹಿಳೆಗೆ ಸಮಾನ ಸ್ಥಾನವನ್ನು ನೀಡಿರುವ ಈ ಕಾಲದಲ್ಲಿ ..ಸಾಹಿತ್ಯ ಕ್ಷೇತ್ರದಲ್ಲೂ ಮಹಿಳೆಯರು ಮಿಂಚಬೇಕಾಗಿದೆ .. ಕೇವಲ ಮಹಿಳೆಯರಿಗಾಗಿ ಮಾತ್ರ ಬರೆಯದೆ ಎಲ್ಲರಿಗೂ ಅನುಗುಣವಾಗುವಂತೆ ಬರೆಯುವ ಲೇಖಕಿಯರು ಬೇಕಾಗಿದ್ದಾರೆ.ನಿಮ್ಮ ಬರಹ ಚೆನ್ನಾಗಿದೆ …ಒಳ್ಳೆಯ , ಉಪಯುಕ್ತ ಮಾಹಿತಿಗಳನ್ನೊಳಗೊಂಡಿದೆ ..

  2. ಶ್ರೀಧರ್,
    ಮಹಿಳೆಗೆ ಸಮಾನ ಸ್ಥಾನವನ್ನೆನೋ ’ನೀಡಲಾಗಿರಬಹುದು’, ಅದರೆ ಅದು ಆಕೆಗೆ ದೊರೆತಿದೆ ಅಂತ ನನಗನ್ನಿಸುವುದಿಲ್ಲ. ಇದು ಇನ್ನೊಂದು ಚರ್ಚೆಯೇ ಆಗಿಬಿಡಬಹುದು, ಬಿಡಿ. ಮಹಿಳೆಯರು ಎಲ್ಲರಿಗೆ ಅನುಗುಣವಾಗಿ ಬರೆಯಬೇಕು ಅಂದರೆ ಅವರ ಸಾಹಿತ್ಯ ’ಮಹಿಳಾ ಸಾಹಿತ್ಯ’ ಅನ್ನುವ ಹಣೆಪಟ್ಟಿಯ ಬದಲಾಗಿ ಹೆಚ್ಚು ’ಯುನಿವರ್ಸಲ್’ ಕ್ವಾಲಿಟಿಯನ್ನ ಹೊಂದಿರಬೇಕು ಅನ್ನುವ ಅರ್ಥದಲ್ಲಿಯಾದರೆ ಅದಕ್ಕೆ ಕೆಲವು ಮಟ್ಟಿಗೆ ನನ್ನ ಸಹಮತವಿದೆ. ಆದರೆ ಮಹಿಳೆಗೆ ತನ್ನದೇ ಆದ ವಿಶಿಷ್ಟವಾದ ದೃಷ್ಟಿಕೋನವಿದೆ ಮತ್ತು ಆಕೆ ಅದನ್ನ ಅಕೆ ತನ್ನ ರೀತಿಯಲ್ಲಿ ವ್ಯಕ್ತಪಡಿಸುವುದಾದರೆ, ಅದಕ್ಕೆ ಒಂದು ಓದುಗವರ್ಗ ಹುಟ್ಟಿಕೊಂಡರೆ, ಹಾಗೆ ಯಾಕಾಗಬಾರದು? ನನ್ನ ಪ್ರಕಾರ ಬರೆಯುವ ಒಲವುಳ್ಳ ಯಾರೂ ಯಾರಿಗೂ ’ಅನುಗುಣವಾಗಿ’ ಬರೆಯುವುದಿಲ್ಲ.
    ನೀವೂ ಮಲೆನಾಡಿಗರೇ ಎಂದು ಗೊತ್ತಾಗಿ ಬಲು ಸಂತೋಷ. ನಾನೂ ಅಲ್ಲಿಂದ ಬಂದವಳೇ. ನಮ್ಮೂರಿನವರ ಜತೆ ಮಾತನಾಡುವುದು ಬಲೇಖುಶಿ. ನಿಮ್ಮ ಬ್ಲಾಗಿಗೂ ಹೋಗಿಬಂದೆ. ಬಹಳ ಚೆನ್ನಾಗಿದೆ.

    ಡಾ.ಗುರುಮೂರ್ತಿ ಹೆಗಡೆಯವರೆ,
    ನಿಮ್ಮ ಒಳ್ಳೆಯ ಮಾತುಗಳಿಗೆ ನಾನು ಋಣಿ. ನನ್ನ ಬ್ಲಾಗಿಗೆ ಭೇಟಿನೀಡುತ್ತ ಇರುವುದಕ್ಕಾಗಿ ಧನ್ಯವಾದಗಳು.

  3. ‘Almost single’ ಕಾದಂಬರಿಯನ್ನು ಓದಿದ್ದೇನೆ. ಆದರೆ ಅದಕ್ಕೆ chicklit ಎನ್ನುವ ವರ್ಗೀಕರಣ ಇರುವದು ಗೊತ್ತಿರಲಿಲ್ಲ. ಚೇತನ ಭಗತರು ಬರೆದ Two States ಕಾದಂಬರಿಯು ನಾಯಕ-ವಾಣಿಯಾಗಿದ್ದರೂ ಸಹ ನಾಯಕಿಯು chick-gal ಆಗಿರುವದರಿಂದ, ಈ ಕಾದಂಬರಿಯನ್ನು chicklit ವರ್ಗಕ್ಕೆ ಸೇರಿಸಬಹುದೇನೊ?
    ನಳಿನಿ ದೇಶಪಾಂಡೆ alias ಪೂಚಂತೇ ರಚಿಸಿದ ಲ್ಯಾಂಬ್ರಟಾ ವೆಸ್ಪಾ ಕವನ ಸೊಗಸಾಗಿದೆ.

  4. ಈ ಚಿಕ್ಲಿಟ್ ಅನ್ನುವ ಕೆಟಗರಿಯನ್ನು ನಾನು ಒಪ್ಪುವುದಿಲ್ಲ. ಸಾಮಾನ್ಯವಾಗಿ ಯಾರೇ ಬರೆದರೂ ಅದು ಅವರ ಅನುಭವಗಳ, ಜೀವನಗಳ, ಭಾವನೆಗಳ ಸುತ್ತ ಇರುತ್ತದೆ. ಅವರ ನಿಲುವಿಗೆ ನಿಲುಕುವಂತಹ, ಅವರು ಅನುಭವಿಸುವಂತಹ ಮತ್ತು ಅವರದ್ದೇ ಲೋಕದ ಕಲ್ಪನೆಗಳನ್ನು ಬರೆಯುತ್ತಾರೆ. ಸಹಜವಾಗಿ ಹೆಣ್ಣು ಎಂದಮೇಲೆ ಅವರು ಬರೆಯುವುದು ಹೆಣ್ಣು ಭಾವನೆಗಳ ಸುತ್ತವಿರುತ್ತದೆ. ಅದನ್ನೇ ಚಿಕ್ಲಿಟ್ ಎಂದು ಗುಂಪುಮಾಡುವುದಕ್ಕಾಗುವುದಿಲ್ಲ. ಅದನ್ನು ಚಿಕ್ಲಿಟ್ ಎನ್ನುವುದಾದರೆ ಗಂಡಸರು ಬರೆಯುವುದನ್ನು ’ಬುಲ್ಲಿಟ್ ’ ಅನ್ನಬಹುದಾ? 🙂 ಈ ಚಿಕ್ಲಿಟ್ ಎನ್ನುವುದು ಪಾಶ್ಚಾತ್ಯ ಸಾಹಿತ್ಯ ಕೆಟಗರಿಯ ಅನುಕರಣೆಯಷ್ಟೆ ಆಗಿದೆ. ಈ ರೀತಿ ಕ್ಲಾಸಿಫೈ ಮಾಡುವುದರಿಂದ ಹೆಣ್ಣು ಮಕ್ಕಳ ಸಾಹಿತ್ಯ ಮುಖ್ಯವಾಹಿನಿಗೆ ತಲುಪುವುದರಲ್ಲಿ ತೊಡಕಾಗಬಹುದು.

    • ಆನಂದ,
      ನೀವು ಯಾವುದೇ ಸಾಹಿತ್ಯಪ್ರಕಾರವನ್ನು ಒಪ್ಪುವುದು ಅಥವಾ ಬಿಡುವುದು ನಿಮ್ಮ ಸ್ವಂತ ನಿಲುವು. ಅದನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ.
      ಸಾಹಿತ್ಯವನ್ನು ಇಲ್ಲಿಯವರೆಗೂ ಅಧ್ಯಯನ ಮತ್ತು ದಾಖಲೆಯ ಅನುಕೂಲಕ್ಕಾಗಿ ಹಾಗೂ ಅವುಗಳ ವೈಶಿಷ್ಟ್ಯತೆಗಳಿಗೆ ಅನುಗುಣವಾಗಿ ಕ್ಯಾಟಗರಿಗಳಲ್ಲಿ ವಿಂಗಡಿಸುತ್ತಲೇ ಇರುವುದು ನಮಗೆ ಸ್ಪಷ್ಟವಾದ ವಿಷಯ. ಇಲ್ಲಿ ನಾನು ಹೇಳಲು ಹೊರಟಿರುವುದು ಹೀಗೆಯೇ ಹೊಸದಾಗಿ ನಮ್ಮ ಸಮಯದಲ್ಲಿ ಹುಟ್ಟಿಕೊಂಡು ಪ್ರವರ್ಧಮಾನಕ್ಕೆ ಬರುತ್ತಿದೆ ಎನ್ನಬಹುದಾದ ಒಂದು ಸಾಹಿತ್ಯಪ್ರಕಾರದ ಬಗ್ಗೆ ಮಾತ್ರವಷ್ಟೆ. ನೀವು ನನ್ನ ಲೇಖನವನ್ನು ಗಮನವಿಟ್ಟು ಓದಿದಿರಾದರೆ ನಾನು ಇಲ್ಲಿ ಹೆಂಗಸರು ಬರೆದಿದ್ದನ್ನೆಲ್ಲ ’ಚಿಕ್‌ಲಿಟ್’ ಎಂದು ಉಲ್ಲೇಖಿಸಿಲ್ಲ ಅನ್ನುವದನ್ನ ಕಾಣಬಹುದು. ಚಿಕ್‌ಲಿಟ್ ಅನ್ನುವದು ಒಂದು ವರ್ಗದ ಹೆಣ್ಣುಮಕ್ಕಳು ತಮ್ಮ ಇಷ್ಟದಪ್ರಕಾರ ಬರೆಯುತ್ತ ಹುಟ್ಟಿಸಿಕೊಂಡಿರುವ ಕ್ಯಾಟಗರಿ. ಇದು ಈಗಾಗಲೆ ಮಾರುಕಟ್ಟೆಯ ದೊಡ್ಡ ಟ್ರೆಂಡ್. ಇದಕ್ಕೆ ಪ್ರಪಂಚದಾದ್ಯಂತ ದೊಡ್ಡ ಓದುಗವರ್ಗವೂ ಇದೆ. ಇದು ಭಾರತದ ಮಟ್ಟಿಗೆ ಹೇಳುವದಾದರೆ ಪಾಶ್ಚಾತ್ಯ ಸಾಹಿತ್ಯದ ಅನುಕರಣೆಯೆ ಇರಬಹುದು. ಆದರೆ ನಮ್ಮ ವಿಮರ್ಶೆ, ಕಥೆ, ಕವಿತೆ ಮೊದಲಾದ ಪ್ರಕಾರಗಳಲ್ಲಿಯೂ ಪಾಶ್ಚಾತ್ಯಸಾಹಿತ್ಯದ ಪ್ರಭಾವಗಳಿರುವುದು ಸುಸ್ಪಷ್ಟ. ಇದಕ್ಕೇನೆನ್ನೋಣ? ಗಂಡಸರು ಬರೆವ ಸಾಹಿತ್ಯವನ್ನು ಅವರೇ ’ಬುಲ್‌ಲಿಟ್’ ಎಂದು ನಾಳೆ ಕರೆದುಕೊಳ್ಳಲು ಆರಂಭಿಸಿದರೆ ತಡೆಯುವವರಾರೂ ಇಲ್ಲ.(ಮುಸಿನಗುವವರು ಬಹಳ ಮಂದಿ ಇರುತ್ತಾರೆ!!) ಚಿಕ್‌ಲಿಟ್‌ನ ತರಹವೇ ’ಲ್ಯಾಡ್‍ಲಿಟ್’ ಕೂಡ ಇದೆ. ನಾವು ಉಡುಗೆತೊಡುಗೆ, ವಾಸ್ತುಶಿಲ್ಪ, ಕೆರೀರ್, ಸಿನೆಮ, ಆಟೋಟ ಇತ್ಯಾದಿಗಳಲ್ಲಿ ಪಶ್ಚಿಮದ ಅನುಕರಣೆ ಮಾಡಬಹುದು, ಆದರೆ ಚಿಕ್‌ಲಿಟ್ ಮಾತ್ರ ಅನುಕರಣೆಯಾಗಕೂಡದು. ಅಲ್ಲವೆ?
      ಇನ್ನು ನಮ್ಮಲ್ಲಿನ ಹೆಣ್ಣುಮಕ್ಕಳ ಸಾಹಿತ್ಯ, ಅವರ ನಿಜದನಿ ಯಾವುದೇ ಕ್ಯಾಟಗರಿಗೆ ಸೇರದೆಯೆ ಮುಖ್ಯವಾಹಿನಿಯನ್ನು ಎಷ್ಟರಮಟ್ಟಿಗೆ ತಲುಪಿದೆ? ನಮ್ಮಲ್ಲಿ ಇನ್ನುವರೆವಿಗೂ ’ಎಕ್ಸ್‌ಕ್ಲೂಸಿವ್’ ಆದ ಚಿಕ್‍ಲಿಟ್ ಇನ್ನುವರೆಗೂ ಬಂದಿಲ್ಲ ಅನ್ನುವದನ್ನು ನಿಮ್ಮ ಗಮನಕ್ಕೆ ತರಲಿಚ್ಛಿಸುತ್ತೇನೆ. ಹೆಣ್ಣುಮಕ್ಕಳು ಬರೆಯಲಾರಂಭಿಸಿದಾಗ ’ಅವರದೇನು ಜುಜುಬಿ ಅಡುಗೆಮನೆ ಸಾಹಿತ್ಯ!’ ಎಂದು ಮೊದಮೊದಲು ಅಸಡ್ಡೆ ಮಾಡಿದವರು ಮುಖ್ಯವಾಹಿನಿಯವರೆ ಎಂದು ನೆನಪು ಮಾಡಿಕೊಡಲೆ? ಮುಖ್ಯವಾಹಿನಿಗೆ ಸೇರುವ ತವಕದಲ್ಲಿ ಮಹಿಳಾಸಾಹಿತ್ಯ ತನ್ನತನವನ್ನು ಕಳೆದುಕೊಳ್ಳಲಾಗದು. ನಾನು ಇದೇ ಲೇಖನದಲ್ಲಿ ಉಲ್ಲೇಖಿಸಿರುವ ಹಲವಾರು ಕನ್ನಡದ ಲೇಖಕಿಯರು ನಮ್ಮ ನಾಡಿನ ಪ್ರತಿ ಮನೆಮನೆಯನ್ನೂ ತಲುಪಿದಂತಹವರು. ಮುಖ್ಯವಾಹಿನಿ ಎಂದೆನಿಸಿಕೊಳ್ಳಬೇಕಾಗಿದ್ದ ಆ ಸಾಹಿತ್ಯ ’ಮಹಿಳಾಸಾಹಿತ್ಯ’ದ ಹಣೆಪಟ್ಟಿ ಅಂಟಿಸಿಕೊಂಡು ಸೆಕೆಂಡರಿ ಸಾಹಿತ್ಯವಾಗೇ ಉಳಿದು ಮರೆಯಾಗಿಬಿಟ್ಟಿತು.
      ಚಿಕ್‌ಲಿಟ್ ಯಾವುದೇ ಬಲವಂತಕ್ಕೆ, ಯಾವುದೇ ಮಹತ್ವಾಕಾಂಕ್ಷೆಯೊಡನೆ, ಯಾವುದೋ ಒತ್ತಡದಿಂದ ಹುಟ್ಟಿದ ಸಾಹಿತ್ಯವಲ್ಲ. ಅದು ಹೆಣ್ಣುಮಗಳೊಬ್ಬಳು ತನಗೆ ಕಾಣುವ ಜೀವನವನ್ನು ತನ್ನ ರೀತಿಯಲ್ಲಿ ಬಿಂಬಿಸುವ ಒಂದು ರೀತಿಯಷ್ಟೆ. ಅದು ಮುಖ್ಯವಾಹಿನಿಗೆ ಸೇರ್ಪಡೆಯಾಗಲಿಲ್ಲವೆಂದು ಗೋಳಾಡುವವರಾರೂ ಇಲ್ಲ!!

  5. ಮರುಕೋರಿಕೆ (Pingback): ಸಾಹಿತ್ಯಕ್ಕೊಂದಿಷ್ಟು ಪಿಂಕ್ ಶೇಡ್.. | indiarrs.net Classifieds | Featured blogs from INDIA.

  6. ಟೀನಾ ಮೇಡಂ,
    ಬೇರೆಯವರು ವಿಮರ್ಶಿಸುವ ಹಾಗೆ ನನಗೆ ಮತ್ತೊಬ್ಬರ ಬರಹಗಳನ್ನು ವಿಮರ್ಶಿಸಲು ಬರುವುದಿಲ್ಲ. ನಿಮ್ಮ ಬರಹಗಳು ನಿಜಕ್ಕೂ ನನ್ನಂತಹ ಬಹಳಷ್ಟು ಮಂದಿಗೆ ಮಾದರಿಯಾಗಿವೆ ಎನ್ನಬಹುದು. “ಸಾಹಿತ್ಯಕ್ಕೊಂದು ಪಿಂಕ್ ಶೇಡ್” ಹೆಸರೇ ಸೊಗಸಾಗಿದೆ. ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲವೆಂದುಕೊಳ್ಳುತ್ತೇನೆ. ಈ “ಪಿಂಕ್” ಕಲರ್ ಉತ್ತಮ ಆರೋಗ್ಯದ ಸೂಚಕ. ಹಾಗೆಯೇ ನಿಮ್ಮ ಬರಹಗಳೂ ಕೂಡ. ಇತರ ಉದಯೋನ್ಮುಖ ಮಹಿಳಾ ಬರಹಗಾರರನ್ನು ಹುರಿದುಂಬಿಸುವಂತಿದೆ

  7. ಟೀನಾರವರೇ ನಿಮ್ಮ ಆಯ್ಕೆಯ ಬರಹಗಳು ತುಂಬ ಚೆನ್ನಾಗಿವೆ. ಯುನಿಕ್ ಆದ ನಿಮ್ಮ ಬರಹಗಳನ್ನು ಮುಂದುವರಿಸಿ. ಸ್ತ್ತೀಯರ ಸ್ವತಂತ್ರ ಅಭಿಪ್ರಾಯವನ್ನು ವ್ಯಕ್ತಪಡಿಸುವ ನಿಮ್ಮ ಬರಹಗಳು ಕನ್ನಡಕ್ಕೆ ಬೇಕೇ ಬೇಕು.

  8. ಪ್ರೀತಿಯ ಟೀನಾ, ಯಾಕೆ ನೀವು ಬ್ಲೋಗ್ ಗಳನ್ನು ಬರೆಯುತ್ತಿಲ್ಲಾ? ನಿಮ್ಮ ಬ್ಲೋಗ್ ಎಲ್ಲವನ್ನು ಹಲವು ಸಾರೇ ಓದಿ ಮುಗಿಸಿದ್ದೇನೆ ಮತ್ತು ಹೊಸ ಬರಹಕ್ಕೆ ಕಾಯುತ್ತಿದ್ದೇನೆ..

    -ಶ್ವೇತಾ

    • ಪ್ರಿಯ ಶ್ವೇತಾ,
      ಹಲವಾರು ಕಾರಣಗಳಿಂದ ಬರೆಯಲಾಗಲಿಲ್ಲ. ನಿಮ್ಮನ್ನು ಹೆಚ್ಚು ಕಾಯಿಸದೆ ಕೆಲವೇ ದಿನಗಳಲ್ಲಿ ಬ್ಲಾಗ್‍ನಲ್ಲಿ ಮತ್ತೆ ಬರೆಯಲು ಶುರುಮಾಡುವೆ. ನಿಮ್ಮ ಪ್ರೀತಿಗೆ ನಾನು ಋಣಿ. ಧನ್ಯವಾದಗಳು ಶ್ವೇತಾ!!

ನಿಮ್ಮ ಟಿಪ್ಪಣಿ ಬರೆಯಿರಿ