ಪಡಖಾನೆಯ ಹುಡುಗಿ – ಇರುಳ ನಂತರದ ಸಮಯ

ಇರುಳು ಸಂದಿತು, ಇನ್ನೇನು

ನಸುಕು ಕಳ್ಳಿಯ ರೀತಿ ಉಸಿರು ಬಿಗಿಹಿಡಿದು

ಒಳಬರುವಳು

ನನ್ನ ಕಾಲ ಬಳಿ ರಾತ್ರಿ ಉಂಡೆಸೆದ

ರೊಟ್ಟಿ ಮಾಂಸಗಳ ತುಣುಕುಗಳನ್ನಾಯುವ ಹುಡುಗ

ಕೆಟ್ಟ ಬೈಗುಳದ ಕೊಳಕು ಹಾಡು ಹಾಡುತ್ತ ಸಿಕ್ಕ

ಎಲ್ಲವನೂ ಕಣ್ಣಿಂದಲೇ ಕೊರೆಯುತ್ತ ಸಾಗುವನು

ಪರದೆಗಳ ಮೇಲಿನ ಕಲೆಗಳು

ಗೋಡೆಯ ಹಳೆ ಬಣ್ಣ

ಗಾಜಿನ ಮೇಲೆ ಕೂತ ಎಣ್ಣೆಪಸೆ

ನಿಚ್ಚಳವಾಗತೊಡಗುವವು

ಮೇಜವಾನಿಯ ಕುರ್ಚಿಗಳೂ ಯಾಕೊ

ಸೋತುಹೋದ ಮುದುಕರ ನೆನಪಿಸುವವು

ನೆನ್ನೆ ತನ್ನ ಪ್ರೇಯಸಿಯ ಧಿಕ್ಕರಿಸುವ

ಹಾಡುಗಳನುದುರಿಸುತಿದ್ದ ಕವಿಪುಂಗವನೀಗ

ತನ್ನ ಪದಗಳ ಭಾರಕ್ಕೆ ಸಿಲುಕಿ

ಮೂಗನಂತೆ ಮೈಚೆಲ್ಲಿರುವನು

ಅವನ ಮಗಳು ಬರಬಹುದು, ಹೊತ್ತೇರಿದ ಮೇಲೆ

ಹಿಂಜರಿಯುತ್ತ.. ಎಲ್ಲವನೂ ಶಪಿಸುತ್ತ..

ಮಬ್ಬಿನಲಿ ನೆನೆದ ಪಡಖಾನೆಯ

ಫಲಕವೂ ಬೀದಿಯ ಜನರಿಗೆ ಜೀರ್ಣವಾಗದು

ಇರುಳಿನ ಥಳುಕೂ ಮರೆತುಹೋಗುವುದು

ಮಿಲನದ ನಂತರ ಬರುವ ನಿದ್ದೆಯ ಹಾಗೆ.

ನಾನೊ, ಚಿಲಮಿನ ಹೊಗೆಯಂತೆ

ದಕ್ಕಿದ ಕಿಂಡಿಯಲಿ ಪಾರಾಗಿ

ಯಾವಳೊ ಛಿನಾಲಿಯ ಕತ್ತಿಗೆ

ಇಂಬಳದ ಹಾಗೆ

ನೇತುಹಾಕಿಕೊಂಡಿರಬಹುದಾದ

ಪಾಪಿಯನೆ ತಣ್ಣಗಿನ ರೋಷದೊಂದಿಗೆ ಕಾಯುವೆನು.

ಚಿತ್ರಕೃಪೆ: http://www.robertkruh.com

Advertisements

15 thoughts on “ಪಡಖಾನೆಯ ಹುಡುಗಿ – ಇರುಳ ನಂತರದ ಸಮಯ

 1. ಒಂದು ಸ್ಥಿತಿಯನ್ನು ಹಿಡಿದುಕೊಡುವ ನಿಮ್ಮ ರೀತಿ; ಅದನ್ನು ಪದಗಳಲ್ಲಿ ಗ್ರಹಿಸಿ ಚಿತ್ರಗಳಲ್ಲಿ ಸ್ವೀಕರಿಸುವ ಮನಸ್ಸಿಗೆ ಅಷ್ಟಿಷ್ಟು ದಕ್ಕುವಾಗಲೇ ಏನೋ ಸಿಕ್ಕಿದ, ಇನ್ನೇನೋ ಕಲಕಿದ ಖುಶಿ. ಒಳ್ಳೆಯ ಕವನ. ಮುಂಜಾನೆ ಇಬ್ಬನಿಯಿಂದ ತೊಯ್ದ ಒದ್ದೆ ನೋಟದ ಎದುರು ಬೆಚ್ಚಗೆ ಕೂತು ಬಿಸಿಬಿಸಿ ಕಾಫಿ ಗುಟುಕು ಗುಟುಕಾಗಿ ಕುಡಿದ ಹಾಗಿತ್ತು….ಒಳಗಿನ ನೋಟಗಳನ್ನು ಜೀರ್ಣಿಸಿಕೊಳ್ಳಲು!

  • ನರೇಂದ್ರ,
   “At times our own light goes out and is rekindled by a spark from another person. Each of us has cause to think with deep gratitude of those who have lighted the flame within us” ಎಂದು ಅಲ್ಬರ್ಟ್ ಶ್ವೆಯಿಟ್ಸರ್ ಹೇಳುತ್ತಾನೆ. ನನ್ನ ಪಾಲಿಗೆ ನಿಮಗರಿವಿಲ್ಲದೆಯೇ ಅಂತಹ ಪ್ರೇರಣೆ ನೀಡಿದ ಕೆಲವೇ ವ್ಯಕ್ತಿಗಳಲ್ಲಿ ನೀವೊಬ್ಬರು. ನಿಮ್ಮ ಸಾಹಿತ್ಯಶ್ರದ್ಧೆ ನನಗೆ ಬಹಳಷ್ಟು ಪಾಠಗಳನ್ನು ಕಲಿಸಿದೆ. ಧನ್ಯವಾದ.

 2. ಇಷ್ಟ ಆಯಿತು. ಎಷ್ಟು ಅರ್ಥವಾಯಿತೆ೦ಬುದು ನನಗೇ ಗೊತ್ತಿಲ್ಲ 🙂 . “ಮೇಜವಾನಿಯ ಕುರ್ಚಿಗಳೂ ಯಾಕೊ
  ಸೋತುಹೋದ ಮುದುಕರ ನೆನಪಿಸುವವು..” ಓದುವಾಗ ಫ್ರೆಡಿರಿಕ್ ಬ್ಯಾಕ್ ನ ‘ಕ್ರಾಕ್'(1981) ಹದಿನೈದು ನಿಮಿಷದ ಅನಿಮೇಷನ್ ಚಿತ್ರದ ನೆನಪಾಯಿತು.

  • Crac ನೋಡಿದೆ! ನಿಜವಾಗಲೂ ಬಹಳ ಸುಂದರ ರೀತಿಯ ಅನಿಮೇಶನ್. ಅದಕ್ಕೆ ಪ್ರಶಸ್ತಿ ದೊರೆತದ್ದು ಸರಿಯೇನೇ. ನಿಮ್ಮ ಕಮೆಂಟಿನಿಂದ ಎಷ್ಟು ಪ್ರಯೋಜನವಾಯಿತು ನೋಡಿ!!

   • 🙂 ಸಮಯ ಸಿಕ್ಕರೆ ಅವನದೇ ಇನ್ನೊ೦ದು ಆಸ್ಕರ್ ಚಿತ್ರ “The Man Who Planted Trees” ನೋಡಿ. ಬರಿಯ ಮೂವತ್ತು ನಿಮಿಷಗಳು. ಮೈಯೆಲ್ಲಾ ಮಿ೦ಚು ಸ೦ಚಾರದ ಅನುಭವ ತರುವ ‘ಕ್ರಿಸ್ತೋಫರ್ ಪ್ಲಮರ್’ ಧ್ವನಿ, ನಿರೂಪಣೆ.

 3. ಟೀನಾ,

  ಬ್ಯೂಟಿ! ಮತ್ತೆ ಲವ್ಲೀ.
  ಓದಿದರೆ ಏನಾಗತ್ತೆ ಅಂತ ನರೇಂದ್ರ ಬರಿದಿದ್ದು ನಿಜ. ಚಳಿಯ ಇಬ್ಬನಿ ಬೆಳಗಲ್ಲಿ ಕೂತು ಕುಡಿದ ಕಾಫಿಯ ಆಹ್ಲಾದ ಹೊಮ್ಮಿಸುವ ಕವಿತೆ.
  ನಂಗೆ ನಿಮ್ಮ ಪಡಖಾನೆಯ ಕವಿತೆಗಳನ್ನು ಓದುವಾಗ ಬೋದಿಲೇರನದ್ದೇ ನೆನಪು.

  ಆಗ ಈಗ ಈ ಥರದ ಡೋಸ್ ಕೊಡ್ತಾ ಇರಿ ಸಾಖಿ..

  ಪ್ರೀತಿಯಿಂದ
  ಸಿಂಧು

  • ಸಿಂಧು,
   ಎಲ್ಲರೂ ಇಲ್ಲೇ ಸುತ್ತಮುತ್ತ ಇದೀರಲ್ಲ, ನನಗೆ ಅಚ್ಚರಿ!!
   ಎಲ್ಲ ಎಷ್ಟೊಂದು ಪ್ರೀತಿಯಿಂದ ಬರಮಾಡಿಕೊಳ್ತ ಇದೀರಿ, ನಾನು ಹೋಗಿಯೆ ಇರಲಿಲ್ಲ ಅನ್ನುವ ಹಾಗೆ.
   ಕೃತಜ್ಞತೆಯಿಂದ ಮೂಕಳಾಗಿದೇನೆ.
   ಬ್ಲಾಗು ಬರೆಯಲು ಶುರುಮಾಡಿದಾಗ ಆದಷ್ಟೆ ಎಕ್ಸೈಟ್‍ಮೆಂಟು ಅನಿಸ್ತಿದೆ.
   ಬರೀತೇನೆ ಇನ್ನು ಮುಂದೆ.
   ಅಕ್ಕರೆ, ಟೀನಾ.

 4. ಒಂದು ಥರಾ ಇದ್ದೂ ಇಲ್ಲದ ಹಾಗಿನ ಬಿಸಿಲು, ಚಳಿಯ ಬೆಳಗನ್ನ ಬೆಚ್ಚಗೆ ಮಾಡ್ತಾ ಇದ್ದ ಹೊತ್ತು, ಈ ಕವನ ಓದಿದೆ. ಎಂಥ ಬರ್ದಿದ್ದೀರ ಮಾರಾಯ್ರೇ!:) ಬಹಳ ಕಾಲ ಸುಮ್ಮನೆ ಕೂತದ್ದು ಯಾಕೋ?

  ಗುಂಗು ಹಿಡಿಸುವ ಸಾಲುಗಳನ್ನು ನೀಡಿದ್ದಕ್ಕೆ ಧನ್ಯವಾದಗಳು.

  • ಶ್ರೀನಿಧಿ,
   ನೀವು ಬಂದಿದ್ದು ಓದಿದ್ದು ಸಖತ್ ಖುಷಿಯಾಯ್ತು ಮಾರಾಯ್ರೆ!
   ಬಹಳ ಕಾಲ ಸುಮ್ಮನೆ ಕೂತದ್ದು ಯಾಕೋ? ಅಂತ ನನಗೆ ನಾನೆ ಕೇಳಿಕೊಳ್ತ ಇದೀನಿ.
   🙂 ಥ್ಯಾಂಕ್ಸ್ ನಾನು ಹೇಳಬೇಕು!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s