ಒಂದು ಕ್ರಿಸ್ಮಸ್ ಮರ.

ಕ್ರಿಸ್ಮಸ್ ಎಂದರೆ ಏನೋ ಸಡಗರ. ತುಂಬ ನಕ್ಷತ್ರಗಳು ಒಟ್ಟಿಗೇ ನಮ್ಮ ಸುತ್ತಮುತ್ತ ಮಿನುಗಿದ ಹಾಗೆ.. ಸಿಹಿ ಪರಿಮಳಗಳನ್ನು ಆಘ್ರಾಣಿಸುತ್ತ ನಾವು ಪಡೆಯುವ ಆನಂದದ ಹಾಗೆ..ಆಹ್ಲಾದಕರ ಸಂಗೀತವನ್ನು ಕೇಳುತ್ತ ಎಲ್ಲ ಮರೆತು ಮೈದೂಗಿದ ಹಾಗೆ.. ಸುಮಾರು ಹತ್ತು ವರುಷಗಳಿಂದ ನಾನು ಒಂದು ಮಧ್ಯರಾತ್ರಿಯ ಮಾಸ್ ಅನ್ನೂ ತಪ್ಪಿಸಿಕೊಂಡಿದ್ದೇ ಇಲ್ಲ. ದೇವರ ಬಗೆಗಿನ ನನ್ನ ಖಾಸಗೀ ನಂಬಿಕೆಗಳನ್ನೆಲ್ಲ ಮೀರಿ ನಿಲ್ಲುವ ರಾತ್ರಿಯದು.

 

     ಕ್ರಿಸ್ಮಸ್ ಅಂದಾಕ್ಷಣ ನನಗೆ ನೆನಪಾಗುವದು ಸಿಸ್ಟರ್ ಅನಾ ಮಾರ್ಥಾ ಮತ್ತು ಕ್ರಿಸ್ಮಸ್ ಮರಗಳು. ಸಿಸ್ಟರ್ ಮಾರ್ಥಾ ನನ್ನ ಮದುವೆಯ ಮೂಲಕ ನನ್ನ ಸಂಬಂಧಿ – ಒಂದು ಲೆಕ್ಕದಲ್ಲಿ ನನ್ನ ಅತ್ತೆ. ಈವತ್ತಿಗೆ ನನ್ನೊಳಗೆ ಆಧ್ಯಾತ್ಮಿಕ ಯೋಚನೆಗಳ  ಸುಳಿವೇನಾದರೂ(!?) ಇದ್ದರೆ ಅದರ ಹಿಂದಿನ ಮುಖ್ಯ ಪ್ರಭಾವ ಆಕೆಯದು. ಆಕೆ ತನ್ನ ಜೀವಮಾನದುದ್ದಕ್ಕೂ ತೀವ್ರಮಟ್ಟದ ಬ್ರಾಂಕೈಟಿಸ್ ಖಾಯಿಲೆಯಿಂದ ನರಳುತ್ತಲೇ ಇದ್ದರು. ಸಾಮಾನ್ಯ ಜನರು ತಡೆದುಕೊಳ್ಳಲು ಸಾಧ್ಯವಾಗದಂತಹ ದೈಹಿಕ ನೋವುಗಳನ್ನು ಆಕೆ ಪ್ರಾರ್ಥಿಸುತ್ತಲೇ ಮೌನವಾಗಿ ನುಂಗಿಬಿಡುತ್ತ ಇದ್ದರು. ಆಕೆ ಎಲ್ಲೇ ಇದ್ದರು ಪ್ರತಿವರ್ಷ ಆಕೆಯ ಕ್ರಿಸ್ಮಸ್ ಶುಭಾಶಯಪತ್ರ ನನ್ನ ಕೈಸೇರುವುದು. ತನ್ನ ಹತ್ತನೇ ತರಗತಿಯ ಶಿಕ್ಷಣ ಮುಗಿದಕೂಡಲೆ ಯಾವ ಪ್ರತಿರೋಧಗಳನ್ನೂ ಲೆಕ್ಕಿಸದೆ ಎಲ್ಲವನ್ನೂ ತ್ಯಜಿಸಿ ಆಶ್ರಮ ಸೇರಿದ ಆಕೆಯ ಬಗ್ಗೆ ನನಗೆ ಸದಾ ಕುತೂಹಲ. ಅವರಿಗೆ ನೂರೆಂಟು ಪ್ರಶ್ನೆ ಕೇಳಿ ಪಿರಿಪಿರಿ ಮಾಡುತ್ತಿದ್ದರು ಒಂದು ದಿನವೂ ಸಿಡುಕದೆ ಎಲ್ಲದಕ್ಕೂ ಉತ್ತರಿಸುವರು. ಕೆಲವೊಮ್ಮೆ ದಿನಗಟ್ಟಲೆ ಮೌನವಾಗಿಬಿಡುವರು. ಇಂಥವರಿಗೆ ಗಿಡಗಳೆಂದರೆ ವಿಚಿತ್ರವಾದ, ತೀರ ಲೌಕಿಕ ಅನ್ನಿಸಬಹುದಾದಂಥ ಮೋಹ. ಆಕೆಯ ಹಸಿರಿನ ಗೀಳು ಮಾತ್ರ ಯಾರಿಗೂ ಅರ್ಥವಾಗುತ್ತ ಇರಲಿಲ್ಲ. ಕೊಂಚ ಆರೋಗ್ಯವಾಗಿದ್ದರೂ ಆಶ್ರಮದ ಹೂದೋಟದಲ್ಲಿ ಕಾಲ ಕಳೆಯುವರು. ನನ್ನ ತೋಟದ ಗಿಡಗಳ ಬಗ್ಗೆ ಯಾವಾಗಲೂ ಮುತುವರ್ಜಿ ವಹಿಸಿ ಕೇಳುವ ಅವರು ನಾನು ಆಶ್ರಮಕ್ಕೆ ಭೇಟಿನೀಡಿದಾಗಲೆಲ್ಲ ಹೂಗಿಡವೊಂದರ ಕಟಿಂಗ್ ಅನ್ನು ನನ್ನ ತೋಟಕ್ಕಾಗಿ ಕೊಡುತ್ತ ಇದ್ದರು. “ಗಿಡಗಳ ಹತ್ತಿರ ಸೊಲ್ಪ ಸಮಯ ತೆಕ್ಕೊಂಡು ದಿನಾ ಕೂತುಕೊಂಡು ಮಾತನಾಡು. ನಿನ್ ಕಷ್ಟಸುಖ ಹೇಳ್ಕೋ. ಯು ವಿಲ್ ಆಲ್ವೇಸ್ ಹ್ಯಾವ್ ಅ ಬಂಚ್ ಆಫ್ ಫ್ರೆಂಡ್ಸ್ ಅರೌಂಡ್!” ಅನ್ನುವರು. ಆಗಾಗ, “ನಿನ್ ಹತ್ತಿರ ಒಂದು ಕ್ರಿಸ್ಮಸ್ ಮರ ಇಲ್ಲವಲ್ಲ!” ಎಂದು ಪೇಚಾಡಿಕೊಳ್ಳುವರು. ಆಗ ಮೈಸೂರ ಪುಟ್ಟ ಬಾಡಿಗೆಮನೆಯಲ್ಲಿದ್ದ ನಾನು ನಕ್ಕುಬಿಡುವೆ.

ಹಾಗೂ ಹೀಗೂ ನನ್ನ ಸ್ವಂತ ಮನೆಯಲ್ಲಿ ವಾಸ ಆರಂಭಿಸಿದಾಗ ಮೊದಲು ಅನ್ನಿಸಿದ್ದು – ಒಂದು ಚೆಂದದ ತೋಟ ಮಾಡಬೇಕು. ಹಿಂದೆ ಮನೆಯಲ್ಲಿ ಬಾಡಿಗೆಗಿದ್ದವರೋ, ಮನೆಯನ್ನು ದುರವಸ್ಥೆಯಲ್ಲಿ ಬಿಟ್ಟುಹೋಗಿದ್ದರು. ಎಲ್ಲ ಸರಿಪಡಿಸುವಲ್ಲಿ ಆರು ತಿಂಗಳುಗಳೇ ಕಳೆದವು. ಅದೇ ಹೊತ್ತಿಗೆ ಸಿಸ್ಟರ್ ಮಾರ್ಥಾರ ಆರೋಗ್ಯ ಕ್ಷೀಣಿಸಿತು. ಕೊನೆಯ ಬಾರಿ ಬೆಂಗಳೂರಿನ ಆಸ್ಪತ್ರೆಯಲ್ಲಿದ್ದ ಅವರನ್ನು ನೋಡಲು ಹೋದಾಗ ಅವರ ಮುಖ ಅನಾರೋಗ್ಯದಿಂದ ಊದಿಕೊಂಡು ಆಕೆ ಚೆನ್ನಾಗಿದ್ದಾರೆಂಬ ಹುಸಿಭರವಸೆ ಹುಟ್ಟಿಸುತ್ತಿತ್ತು. ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ ಸಿಸ್ಟರ್ ಮಾರ್ಥಾ ಹೇಳಿದರು – “ಈ ಸಾರಿ ಕ್ರಿಸ್ಮಸ್ ಕಾರ್ಡು ಕಳಿಸೋಕೆ ನಾನಿರಲ್ಲ ಬಿಡು”. ನನಗೂ ಪ್ರಾಯಶಃ ಹಾಗೇ ಅನ್ನಿಸಿತು. ಮೆತ್ತಗೆ ಅವರ ಕೈ ಮುಟ್ಟಿ,  “ಮನೇಲಿ ತೋಟ ಮಾಡ್ತಿದೀವಿ. ತುಂಬ ಜಾಗ ಇದೆ. ಎಲ್ಲ ನೆಟ್ಟಾದ ಮೇಲೆ ನೀವು ಒಂದು ಸಲ ಬಂದು ನೋಡಿ” ಎಂದೆ. ಅವರ ಕಣ್ಣು ಅರಳಿದವು. “ಹಾಗಿದ್ರೆ ಒಂದು ಕ್ರಿಸ್ಮಸ್ ಗಿಡ ನೆಟ್ಟುಬಿಡು, ಆಯ್ತಾ? ನಿಂಗೆ ಬಹಳ ಮರೆವು. ಕೋಪಿಷ್ಠ ಹುಡುಗಿ. ಆ ಮರದಿಂದಾನಾದರೂ ಕ್ರಿಸ್ಮಸ್‌ನ ಒಳ್ಳೇತನ ಮತ್ತೆ ನನ್ನ ಬುದ್ಧಿವಾದಗಳನ್ನ ನೆನಪಿಟ್ಟುಕೋತೀಯೇನೋ!” ಎಂದು ಕ್ಷೀಣವಾಗಿ ನಕ್ಕರು. ನಮ್ಮ ಕೆಟ್ಟ ಬುದ್ಧಿಗಳಿಂದಾಗಿಯಾದರು ನಾವು ಎಷ್ಟು ಜನರ ಹತ್ತಿರವಾಗುತ್ತೇವೆ, ಅಲ್ಲ?

      ಆಮೇಲೆ ಕೆಲವೇ ದಿನಗಳಲ್ಲಿ ತಾನು ಭವಿಷ್ಯ ನುಡಿದ ಹಾಗೆಯೇ ಸಿಸ್ಟರ್ ಮಾರ್ಥಾ ಹೊರಟುಹೋದರು. ನನ್ನ ಕುಟುಂಬ ದುಃಖತಪ್ತವಾಗಿತ್ತು. ಎಲ್ಲಕಿಂತ ಹೆಚ್ಚಾಗಿ ಅವರಿಂದಲೇ ಬಾಲ್ಯದ ತೊದಲುಹಾಡುಗಳನ್ನು, ಗಿಡಗಳ ಬಗೆಗಿನ ಪ್ರೀತಿಯನ್ನು ಕಲಿತಿದ್ದ ನನ್ನ ಪುಟ್ಟ ಮಗಳು ಮೊಟ್ಟಮೊದಲ ಬಾರಿಗೆ ಸಾವೊಂದನ್ನು ಕಂಡಿದ್ದು ಮತ್ತು ಇನ್ನಿಲ್ಲದಂತೆ ಅತ್ತಿದ್ದನ್ನು ಮರೆಯಲಾಗುವದೇ ಇಲ್ಲ. ಭಾರತದೆಲ್ಲೆಡೆಯಿಂದ ಅವರ ಶಿಷ್ಯೆಯರು ಬಂದು ಅವರ ಮರಣಯಾತ್ರೆಗೆ ತಾವೇ ಹೆಗಲುಕೊಟ್ಟರು. ಅದೊಂದು ಅಪರೂಪದ ಸನ್ನಿವೇಶ. ಸಿಸ್ಟರ್ ಮಾರ್ಥಾ ಪ್ರತಿಯೊಬ್ಬರನ್ನೂ ತಮ್ಮದೇ ಆದ ರೀತಿಯಲ್ಲಿ ಮುಟ್ಟಿದ್ದರು. ಅವರಿಗೆ ವಿದಾಯ ಹೇಳಿ ವಾಪಾಸು ಬಂದ ಮರುದಿನವೇ ಹೋಗಿ ಒಂದು ಪುಟ್ಟ ಕ್ರಿಸ್ಮಸ್ ಗಿಡವನ್ನು ಖರೀದಿಸಿ ತಂದು ತೋಟದ ನಟ್ಟನಡುವಿನಲ್ಲಿ ನೆಟ್ಟದ್ದಾಯಿತು.

 

ಒಂದೆರಡು ತಿಂಗಳು ಕಳೆದು ಕ್ರಿಸ್ಮಸ್ ಹಿಂದಿನ ದಿನ ಬಂದಿತು..ತನ್ನ ಎಂದಿನ ಆಕರ್ಷಣೆಯೊಂದಿಗೆ.. ಮಾಮೂಲಿನಂತೆ ಕ್ರಿಸ್ಮಸ್ ಕಾರ್ಡುಗಳನ್ನು ಅಂಚೆಯವ ನೀಡಿಹೋದ. ಈ ಬಾರಿ ಎಲ್ಲರ ಹೆಸರಿಗೂ ಒಂದೇ ಕೈಬರಹದ ಲಕೋಟೆಗಳಿದ್ದವು. ಯಾರಿರಬಹುದೆಂದು ಬಿಚ್ಚಿನೋಡಿದರೆ ಅಲ್ಲಿ ಸಿಸ್ಟರ್ ಮಾರ್ಥಾರ ಸಹಿಯಿತ್ತು!! ತಾನು ತೆರಳುವ ಮೊದಲೇ ಸಿಸ್ಟರ್ ಮಾರ್ಥಾ ತನ್ನ ಸಹವರ್ತಿಯೊಬ್ಬರ ಕೈಯಲ್ಲಿ ನಮ್ಮೆಲ್ಲರಿಗಾಗಿ ಶುಭಾಶಯ ಪತ್ರಗಳನ್ನು ನೀಡಿ ಸರಿಯಾದ ಸಮಯಕ್ಕೆ ಅಂಚೆಗೆ ಹಾಕುವಂತೆ ತಿಳಿಸಿದ್ದರು. ಅಂದಿನ ಕ್ರಿಸ್ಮಸ್ ನಮ್ಮೆಲ್ಲರಿಗೆ ಬಹಳ ವಿಶೇಷವಾಗಿತ್ತು. ಅಂದು ಸಿಸ್ಟರ್ ಮಾರ್ಥಾ ನಮ್ಮೊಂದಿಗಿದ್ದರು.

 

ಅವರ ನೆನಪಿನಲ್ಲಿ ನೆಟ್ಟ ಕ್ರಿಸ್ಮಸ್ ಗಿಡ ಇವತ್ತು ದೊಡ್ಡ ಮರವಾಗಿದೆ. ಬಹಳ ವರ್ಷಗಳ ನಂತರ ಅದರಡಿಯಲ್ಲಿ ಕ್ರಿಸ್ಮಸ್ ಆಚರಿಸಲು ತಯಾರಾಗುತ್ತಿದ್ದೇವೆ. ನನ್ನ ತೋಟ ನೋಡಿಕೊಳ್ಳುವ ವೆಂಕಟಮ್ಮ ಅದರ ಬಗ್ಗೆ ವಿಶೇಷ ನಿಗಾ ವಹಿಸುತ್ತಾರೆ. ಮಕ್ಕಳು ಅದರ ನೆರಳಿನಲ್ಲಿ ಆಡಿಕೊಳ್ಳುತ್ತಾರೆ. ಆಗಾಗ ಒಂದಷ್ಟು ಪಕ್ಷಿಗಳು ಬಂದು ಅದರ ಗೆಲ್ಲುಗಳ ಸುರಕ್ಷೆಯಲ್ಲಿ ಗೂಡುಕಟ್ಟಿ ಮರಿಮಾಡಿ ಹಾರಿಯೂ ಹೋಗುತ್ತವೆ.  ಕ್ರಿಸ್ಮಸ್ ಮರ ತನ್ನಪಾಡಿಗೆ ತಾನು ಆನಂದವಾಗಿ ಬೆಳೆದುಕೊಂಡಿದೆ.

    ನಾನಂದುಕೊಳ್ಳುತ್ತೇನೆ, ಸಿಸ್ಟರ್ ಮಾರ್ಥಾ ಅದರ ಜತೆ ಮಾತನಾಡುತ್ತಿರಬಹುದು.

 

ಎಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳು.

 

ಚಿತ್ರಕೃಪೆ: http://www.digitalblasphemy.com

14 thoughts on “ಒಂದು ಕ್ರಿಸ್ಮಸ್ ಮರ.

  1. ಸಿಸ್ಟರ್ ಮಾರ್ಥಾ ಅವರ ಬಗ್ಗೆ ನಿಮ್ಮ ಅಭಿಮಾನ ಮತ್ತು ಪ್ರೀತಿ ತುಂಬಿತ ಲೇಖನ ತುಂಬ ಹೃದಯಸ್ಪೆರ್ಶಿಯಾಗಿತ್ತು. ಸಾತ್ವಿಕ ಕಾರಣಗಳಿಗಾಗಿ ಬರುವ ನಿಮ್ಮ ಕೋಪ ಹಾಗೇ ನಿಮ್ಮಲ್ಲಿ ಉಳಿದಿರಲಿ ಎಂದು ಹಾರೈಸುತ, ನಿಮಗೂ ನಿಮ್ಮ ಕುಟುಂಬಕ್ಕು ಕ್ರಿಸ್ ಮಸ್ ಹಬ್ಬದ ಶುಭಾಷಯಗಳು….:):)

  2. ಟೀನಾ,
    ನಿಮ್ಮ ಮೂಲಕ ಸಿಸ್ಟರ್ ಮಾರ್ಥಾ ನಮ್ಮೊಂದಿಗೆಲ್ಲ ಮಾತನಾಡಿದರಲ್ಲ….ನೆನಪುಗಳಲ್ಲೇ ವ್ಯಕ್ತಿಯೊಬ್ಬ ಮನಸ್ಸಿನಲ್ಲಿ ಮರವಾಗಿ ಹೆಮ್ಮರವಾಗಿ ಅಮರವಾಗುವ ಬೇರುಗಳನ್ನಿಳಿಸುವುದಲ್ಲವೇ….ಕ್ರಿಸ್ಮಸ್ ಹಬ್ಬದ ಶುಭಾಶಯಗಳ ಜೊತೆ ಈ ಬಾರಿ ನಾವೆಲ್ಲ ಸದ್ಭಾವನೆಯ ಕ್ರಿಸ್ಮಸ್ ಮರವದ ಜೊತೆ ನಮ್ಮ ಆಳದ ಮೌನವನ್ನು ಹಂಚಿಕೊಳ್ಳೋಣ…ಲೇಖನ ಇಷ್ಟವಾಯಿತು, ನಮ್ಮ ಕ್ರಿಸ್ಮಸ್‌ಗೆ ಅರ್ಥ ನೀಡಿತು.

  3. P.S. I Love You

    ಅಯ್ಯಯ್ಯೋ, ಅಪಾರ್ಥ ಮಾಡ್ಕೋಬೇಡಿ. that’s the title of a movie which is based on a similar theme (*ing gerard butler & hilary swank). remembered when i read “ತನ್ನ ಸಹವರ್ತಿಯೊಬ್ಬರ ಕೈಯಲ್ಲಿ ನಮ್ಮೆಲ್ಲರಿಗಾಗಿ ಶುಭಾಶಯ ಪತ್ರಗಳನ್ನು ನೀಡಿ ಸರಿಯಾದ ಸಮಯಕ್ಕೆ ಅಂಚೆಗೆ ಹಾಕುವಂತೆ ತಿಳಿಸಿದ್ದರು.” good one. worth investing 1.5 hrs. you might like it coz somehow you can relate to it (i guess).

    xmas wishes.

    regs,
    -R

    • Rankusa,
      ನಾನೂ ಎರಡು ವರ್ಷ ಹಿಂದೇನೆ ಈ ಮೂವೀ ನೋಡಿ ಸಿಕ್ಕಾಪಟ್ಟೆ ಅತ್ತುಕೊಂಡು ಕೂತಿದ್ದೆ. ಪ್ರೀತಿಸಿ ಮದುವೆಯಾದೋರನ್ನ ಹೆದರಿಸೋಕೇ ಈ ಮೂವೀ ಮಾಡಿದಾರೆ ಅಂತ ನಂಗೆ ಸಂಶಯ! ಭಾರೀ ಭೀತಿ ಹುಟ್ಟತ್ತೆ ಕಣ್ರಿ.
      ಅದನ್ನ ನೋಡಿ ಸಿಸ್ಟರ್ ಮಾರ್ಥಾ ನೆನಪಾಗದೆ ಇರಲಿಲ್ಲ. ಈ ಮೂವೀ ಬರೋದಕ್ಕೆ ಕೆಲವು ತಿಂಗಳು ಮೊದಲೇ ಅವರು ತೀರಿಕೊಂಡಿದ್ದರು ಅನ್ನೋದು ಬೇರೆ ಮಾತು. ನಮಗೆ ಅವರ ಗ್ರೀಟಿಂಗ್ ಕಾರ್ಡುಗಳು ಸಿಕ್ಕಿದ್ದಾಗ ನಾವೂ ವಿಪರೀತ ಅಚ್ಚರಿಪಟ್ಟಿದ್ದೆವು.
      ಎನಿವೇ, ತ್ಯಾಂಕು ಸಾರ್ – ಬರಹವನ್ನ ಓದಿ, ಅದಕ್ಕೆ ಸಂಬಂಧಿಸಿದಂತಿರುವ ಇನ್ನೇನನ್ನೊ ನೆನಪಿಸಿಕೊಂಡು ಎಲ್ಲವನ್ನೂ ಮತ್ತೆ ಹೊಸದಾಗಿ ಕಾಣುವ ಹಾಗೆ ಮಾಡಿದ್ದಕ್ಕೆ. ಹೊಸ ವರ್ಷದ ಶುಭಾಶಯಗಳು!!
      -ಟೀನಾ.
      P.S. ಅಪಾರ್ಥ ಮಾಡಿಕೊಳ್ಳಲಿಲ್ಲ!!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s