ಮೊದಲ ಮಳೆ ಸುರಿದಾಗ
ಮನೆಯ ನುಣ್ಣನಂಗಳಕೆಲ್ಲ
ಪರಿಮಳದ ಮಾತು….
…ತೋಯ್ದು ತೊಟ್ಟಿಕ್ಕುತ್ತ ತೂಗುವ
ಬೇಸಿಗೆಯ ಚಪ್ಪರದಲ್ಲಿ
ಸ್ಥಿರಚಿತ್ರ ಕಡೆದಿಟ್ಟ ತಂಪುಗಾಳಿ
– ಜಯಂತ ಕಾಯ್ಕಿಣಿ, ಮೂರನೇಯತ್ತೆಯ ಮೊದಲ ಮಳೆ, ರಂಗದೊಂದಿಷ್ಟು ದೂರ
ಆಗಸದಿಂದ ನಾಲ್ಕು ಹನಿ ಮಳೆ ಸುರಿಯಿತೊ ಇಲ್ಲವೊ, ಎಂದೂ ಕಣ್ಣೆತ್ತಿ ಕವಿತೆಗಳನ್ನೇ ಓದಿರದಂಥವರಿಗೂ ಕವಿಮನಸ್ಸು ಬಂದುಬಿಡುತ್ತದೆ. ಬೇಸಿಗೆಯ ತಾಪಕ್ಕೆ ಸಿಲುಕಿ ಸಣ್ಣಪುಟ್ಟದಕ್ಕೂ ಸಿಡುಕಿ ಗೊಣಗಾಡುತ್ತಿದ್ದವರೂ ಏಕ್‍ದಮ್ ’ಚಿಲ್’ ಆಗಿ ಓಡಾಡತೊಡಗುತ್ತಾರೆ. ಮಕ್ಕಳು ಅಮ್ಮಂದಿರ ಬೆಚ್ಚನೆ ಸ್ವೆಟರುಗಳ ಪ್ರೀತಿಗೆ ಒಡ್ಡಿಕೊಂಡು ಎಂದಿಗಿಂತ ಮೊದಲೇ ಕಂಬಳಿಗಳೊಳಗೆ ಸೇರಿಕೊಂಡರೆ, ಹರೆಯದ ಹುಡುಗಹುಡುಗಿಯರು ಮಳೆಯಲ್ಲಿ ಮಿಂದು ನೆಂದು ಬೆಚ್ಚಗಾಗುವ ನೆಪಗಳನ್ನೆ ಹುಡುಕತೊಡಗುತ್ತಾರೆ. ಮಳೆಯ ಟಪಟಪ ಸದ್ದು ಕೇಳುತ್ತ ನಿದ್ದೆಹೋಗುವ ನಿಶ್ಚಿಂತೆಗಿಂತ ಮಿಗಿಲಾದದ್ದೇನಿದೆ? ’ಮಳೆ’ ಎಂದ ತಕ್ಷಣ ನಮ್ಮಲ್ಲಿ ಮೂಡುವ ಭಾವಗಳ ಬಣ್ಣವೇ ಬೇರೆ. ಮಳೆಗೆ ಕರಗದ ಜೀವವೇ ಇಲ್ಲ!
ಜನಸಾಮಾನ್ಯರ ಮಳೆಯ ಬಗೆಗಿನ ಪ್ರೇಮವನ್ನು ಸಿನೆಮಾರಂಗವೂ ಚೆನ್ನಾಗಿ ಉಪಯೋಗಿಸಿಕೊಂಡಿದೆ. ಹಿಂದೀ ಸಿನೆಮಾಗಳಲ್ಲಂತೂ ಮಳೆಯನ್ನು ಹಲವಾರು ರೀತಿಗಳಲ್ಲಿ ಬಳಸಿಕೊಳ್ಳಲಾಗಿದೆ. ಹೆಚ್ಚಿಗಿನ ಹಿಂದೀ ಸಿನೆಮಾಗಳಲ್ಲಿ ಮಳೆಯನ್ನು ಬಳಸಿಕೊಂಡಿರುವುದು ನಾಯಕ-ನಾಯಕಿಯರ ನಡುವಿನ ಪ್ರೇಮವನ್ನು ತೋರ್ಪಡಿಸುವದಕ್ಕಾಗಿಯೋ ಇಲ್ಲವೆ ಹೀರೋಯಿನ್ನಳ ದೇಹಸಿರಿಯ ಪ್ರದರ್ಶನಕ್ಕಾಗಿಯೋ. ಹೆಚ್ಚಿನಪಾಲು ಈ ರೀತಿಯ ಮಳೆಸೀಕ್ವೆನ್ಸುಗಳು ಹಾಡುಗಳ ರೂಪ ಪಡೆದುಕೊಂಡಿರುವುದು ಸಾಮಾನ್ಯವಾಗಿ ಕಂಡುಬರುವಂಥದು. ಕೆಲವೊಮ್ಮೆ ಈ ’ರೈನ್ ಸಾಂಗ್’ಗಳು ಬಹಳ ಸುಂದರವಾಗಿ ಚಿತ್ರೀಕರಿಸಲ್ಪಟ್ಟು, ಉತ್ತಮ ಸಾಹಿತ್ಯ, ಸಂಗೀತ, ಹಾಡುಗಾರಿಕೆಗಳ ಮೂಲಕ ’ಕ್ಲಾಸಿಕ್’ ಸ್ಥಾನವನ್ನು ಪಡೆದುಕೊಂಡಿವೆ, ಕೆಲವು ’ಸ್ಲೀಜೀ’ ಲೆವೆಲ್ಲಿನ ಹಾಡುಗಳು ಪಡ್ಡೆಹುಡುಗರಿಗೆ ಕಚಗುಳಿಯಿಡುವಂತೆ ಮಾಡುತ್ತಲೇ ಎಲ್ಲರೂ ಗುನುಗುನಿಸುವಂತಿರುತ್ತವೆ, ಇನ್ನು ಕೆಲವು ವಿಪರೀತ ಆಘಾತಕಾರೀ ಮಟ್ಟದಲ್ಲಿದ್ದು ’ಮುಗಿದರೆ ಸಾಕು!’ ಎಂದುಕೊಳ್ಳುವಂಥ ಮುಜುಗರ ಹುಟ್ಟಿಸುತ್ತವೆ. ಹಿಂದೀ ಸಿನೆಮಾದ ಐವತ್ತರ ದಶಕದಿಂದೀಚೆಗಿನ ಕೆಲವು ಅತ್ಯುತ್ತಮ ಮಳೆಹಾಡುಗಳು ಇದೋ ನಿಮಗಾಗಿ.
೧. ಪ್ಯಾರ್ ಹುವಾ ಇಕ್‍ರಾರ್ ಹುವಾ ಹೈ: (ಸಾಹಿತ್ಯ: ಶೈಲೇಂದ್ರ, ದನಿ: ಮನ್ನಾ ಡೇ, ಲತಾ ಮಂಗೇಶ್ಕರ್, ಸಂಗೀತ: ಶಂಕರ್ ಜೈಕಿಶನ್)

ಮಳೆಹಾಡುಗಳ ಬಗ್ಗೆ ಮಾತನಾಡುವಾಗ ’ಶ್ರೀ 420’ಯ ಈ ಸುಪ್ರಸಿದ್ಧ ಹಾಡನ್ನು ಹೆಸರಿಸದಿದ್ದರೆ ಅಪರಾಧ ಮಾಡಿದಂತೆಯೇ ಸರಿ!! 1955ರ ಈ ಚಲನಚಿತ್ರದ ಹಾಡು ಅಂದಿನ ಯುವಜನಾಂಗವನ್ನು ಹುಚ್ಚೆಬ್ಬಿಸಿದ್ದೇ ಅಲ್ಲ, ಪ್ರೇಮದ ಪರಿಭಾಷೆಯನ್ನೇ ಬದಲಿಸಿತೆಂದರೆ ತಪ್ಪಾಗದು. ಜನಪ್ರಿಯ ರಾಜ್ ಕಪೂರ್-ನರ್ಗೀಸ್ ಜೋಡಿ ಮಳೆಯಲ್ಲಿ ನಾವು ’ಅಜ್ಜನಕೊಡೆ’ ಎಂದು ಕರೆವಂಥ ದೊಡ್ಡಗಾತ್ರದ ಛತ್ರಿಯಡಿ ಪರಸ್ಪರ ದಿಟ್ಟಿಸುತ್ತ ನಡೆದುಕೊಂಡು ಹೋಗುವ ಸೀನ್ ಪ್ರೇಕ್ಷಕರ ಮನದಲ್ಲಿ ಅಳಿಸಲಾಗದ ಅಚ್ಚೊತ್ತಿತು. ಇಲ್ಲಿ ಮಳೆ ನಾಯಕ-ನಾಯಕಿಯರನ್ನು ಬೆಸೆಯುವ ಬಂಧವಾಗಿ ಕೆಲಸ ಮಾಡಿದೆ. ಜತೆಗೇ ಹಾಡಿನಲ್ಲಿ ಕಂಡುಬರುವ ಮಳೆಯಲ್ಲಿ ನೆನೆಯುತ್ತ ತನ್ನ ಚಾದುಕಾನಿನಲ್ಲಿ ತಾನೇ ಚಾ ಹೀರುತ್ತ ಕುಳಿತಿರುವ ಚಾಯ್‌ವಾಲಾ, ಮಳೆಯಲ್ಲಿ ರೇನ್‍ಕೋಟ್ ಧರಿಸಿ ಕೈಕೈಹಿಡಿದು ನಡೆದುಕೊಂಡು ಹೋಗುವ ಮಕ್ಕಳು, ಇವೆಲ್ಲ ಹಾಡಿಗೆ ವಿಶೇಷ ಮೆರುಗು ನೀಡಿದವು. ಮತ್ತೂ ಒಂದು ವಿಶೇಷವೆಂದರೆ ಇಲ್ಲಿ ಕಾಣಿಸಿಕೊಳ್ಳುವ ಮೂರೂ ಮಕ್ಕಳು ರಾಜ್‌ಕಪೂರರ ಮಕ್ಕಳು!!
೨. ಓ ಸಜ್‍ನಾ, ಬರ್‌ಖಾ ಬಹಾರ್ ಆಯಿ: (ಸಾಹಿತ್ಯ: ಶೈಲೇಂದ್ರ, ದನಿ: ಲತಾ ಮಂಗೇಶ್ಕರ್, ಸಂಗೀತ: ಸಲಿಲ್ ಚೌಧರಿ)

’ಪರಖ್’ ಚಲನಚಿತ್ರದ ಈ ಸುಮಧುರ ಗೀತೆ ಲತಾ ಮಂಗೇಶ್ಕರರ ಅತ್ಯುತ್ತಮ ಹಾಡುಗಳಲ್ಲೊಂದು ಮತ್ತು ಅವರ ಫೇವರಿಟ್ ಕೂಡಾ. 1960ರ ಬಿಮಲ್ ರಾಯ್ ನಿರ್ದೇಶನದ ಈ ಉತ್ತಮ ಚಲನಚಿತ್ರ ಫಿಲ್ಮ್‍ಫೇರ್ ಪ್ರಶಸ್ತಿಯನ್ನು ಗಳಿಸಿಕೊಂಡಿತು. ಅದರ ಜತೆಗೇ ಈ ಹಾಡು ಕೂಡಾ ಅಜರಾಮರವಾಯಿತು. ಮಳೆಗಾಲದಲ್ಲಿ ನಮ್ಮ ಕಣ್ಣಿಗೆ ಕಾಣಬರುವ ಪ್ರಕೃತಿಯ ಬಹುತೇಕ ಅಂಶಗಳನ್ನೂ ಸುಂದರವಾಗಿ ಚಿತ್ರೀಕರಿಸಿರುವ ಈ ಹಾಡಿನಲ್ಲಿ ನಟಿ ಸಾಧನಾ ಭಾರತೀಯ ಮಹಿಳೆಯ ಸ್ನಿಗ್ಧ ಸೌಂದರ್ಯದ ಪ್ರತಿರೂಪವಾಗಿ, ಮಳೆಯಲ್ಲಿ ವಿರಹದಿಂದ ಬೇಯುವ ಪ್ರತಿಯೊಬ್ಬ ಯುವತಿಯ ಪ್ರತೀಕವಾಗಿ ಕಂಡುಬರುತ್ತಾರೆ. ಇಲ್ಲಿ ಆಕೆ ಮಳೆಯಲ್ಲಿ ನೆನೆಯುವದಿಲ್ಲ. ಮಳೆಗಾಲದ ಸೌಂದರ್ಯವನ್ನು ತನ್ನಷ್ಟಕ್ಕೆ ತಾನೇ ಆಸ್ವಾದಿಸುತ್ತ ಪ್ರೇಮಪರವಶಳಾಗುವ ಹೆಣ್ಣಿನ ಪಾತ್ರವನ್ನು ಸಾಧನಾ ಅದ್ಭುತವಾಗಿ, ಮಿತವಾಗಿ ಅಭಿನಯಿಸಿದ್ದಾರೆ.
೩. ರಿಮ್‍ಝಿಮ್ ಗಿರೆ ಸಾವನ್: (ಸಾಹಿತ್ಯ: ಯೋಗೇಶ್, ದನಿ: ಲತಾ ಮಂಗೇಶ್ಕರ್, ಸಂಗೀತ: ಆರ್.ಡಿ. ಬರ್ಮನ್)

ಅಮಿತಾಭ್, ಮೌಶುಮೀ ಚಟರ್ಜಿ ಅಭಿನಯಿಸಿರುವ ಬಾಸು ಚಟರ್ಜಿ ನಿರ್ದೇಶನದ ”ಮನ್‌ಜಿಲ್’(1979) ಚಲನಚಿತ್ರದಲ್ಲಿ ಈ ಹಾಡಿನ ಎರಡು ವರ್ಶನ್‌ಗಳಿವೆ. ಒಂದನ್ನು ನಾಯಕ ಅಮಿತಾಭ್ ಸಂಗೀತದ ಮೆಹಫಿಲ್‌ನಲ್ಲಿ ಹಾಡಿದ್ದರೆ, ಇನ್ನೊಮ್ಮೆ ನಾಯಕಿ ನಾಯಕನೊಂದಿಗೆ ಮಳೆಯಲ್ಲಿ ನೆನೆಯುತ್ತಿರುವಾಗ ಹಿನ್ನೆಲೆಯಲ್ಲಿ ಅಕೆಯ ನಿವೇದನೆಯಂತೆ ಕೇಳಿಬರುತ್ತದೆ. ಇವೆರಡರಲ್ಲಿ ನನ್ನ ಮೆಚ್ಚಿನದು ಲತಾ ಹಾಡಿರುವ ಹಾಡು. ಇದರಲ್ಲಿ ನಾಯಕ, ನಾಯಕಿ ಮುಂಬಯಿಯ ಮಳೆಯಲ್ಲಿ ಪ್ರಪಂಚದ ಪರಿವೆಯೇ ಇಲ್ಲದಂತೆ ಆರಾಮವಾಗಿ ನೆನೆಯುತ್ತ ಆನಂದಿಸುತ್ತಿದ್ದಾರೆ. ಪ್ರಪಂಚವಿಡೀ ಮಳೆಗೆ ಕೊಡೆ ಹಿಡಿದುಕೊಂಡಿದ್ದರೆ ಇವರಿಬ್ಬರಿಗೆ ಮಾತ್ರ ಮಳೆಯ ಜತೆಯೇ ಹಿತವಾಗಿದೆ. ಇಲ್ಲಿ ಮಳೆಯು ನಾಯಕನ ಬಳಿಯಿರುವ ತನ್ನೊಳಗೆ ಹೊತ್ತಿಸುತ್ತಿರುವ ಬೆಂಕಿಯ ಬಗ್ಗೆ ನಾಯಕಿ ತೋಡಿಕೊಳ್ಳುತ್ತಿದ್ದಾಳೆ. ಮಳೆ, ಬೆಂಕಿ, ಗಾಳಿಗಳ ಈ ಹೊಸರೀತಿಯ ಬೆಸುಗೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸುವ ಈ ಹಾಡಿನ ಸಾಹಿತ್ಯ ಮತ್ತು ಚಿತ್ರೀಕರಣ ಎರಡೂ ಅತ್ಯುತ್ತಮವಾಗಿದೆ.
೪. ರಿಮ್‍ಝಿಮ್ ರಿಮ್‍ಝಿಮ್: (ಸಾಹಿತ್ಯ: ಜಾವೇದ್ ಅಖ್ತರ್, ದನಿ: ಕುಮಾರ್ ಸಾನು ಮತ್ತು ಕವಿತ ಕೃಷ್ಣಮೂರ್ತಿ, ಸಂಗೀತ: ಆರ್.ಡಿ. ಬರ್ಮನ್)

ವಿಧು ವಿನೋದ್ ಚೋಪ್ರಾ ನಿರ್ದೇಶನದ ’1942 ಎ ಲವ್ ಸ್ಟೋರಿ’ ಚಲನಚಿತ್ರದ ಈ ಹಾಡು ಭಾರತೀಯ ಚಲನಚಿತ್ರರಂಗದ ಲೆಜೆಂಡರಿ ಸಂಗೀತನಿರ್ದೇಶಕ ಆರ್. ಡಿ. ಬರ್ಮನ್‌ರ ಕೊನೆಯ ಹಾಡು ಕೂಡಾ. ಈ ಹಾಡು ಪ್ರೇಕ್ಷಕರಿಗೆ ಮೆಚ್ಚಿಗೆಯಾಗಿದ್ದು ಮುಗ್ಧಮುಖದ ನಾಯಕಿ ಮನಿಶಾ ಕೊಯಿರಾಲಾ ಮತ್ತು ನಾಯಕ ಅನಿಲ್ ಕಪೂರರ ನಡುವಿನ ಬೆಳ್ಳಿತೆರೆಯ ರೊಮ್ಯಾನ್ಸ್‍ನಿಂದಾಗಿ. ತನ್ನ ಪ್ರೇಮಿಕೆಯ ಜತೆಗಿರಬೇಕೆಂಬ ನಾಯಕನ ಕನಸು ನಿಜವಾಗಿದೆ. ಅದಕ್ಕೆ ಜತೆಯಾಗಿ ಮಳೆಯೂ ಸುರಿಯುತ್ತಿದೆ. ಇನ್ನೇನು ಬೇಕು ನಾಯಕನಿಗೆ? ತೊಂಭತ್ತರ ದಶಕದಲ್ಲಿ ಬಹಳ ಜನಪ್ರಿಯವಾದ ಹಾಡುಗಳಲ್ಲೊಂದು ಇದು. ಜಾವೇದ್ ಅಖ್ತರರ ಸಾಹಿತ್ಯ ಸರಳವೂ, ಆಪ್ತವೂ, ಕಾವ್ಯಮಯವೂ ಆಗಿದ್ದು ಬಹಳ ಪ್ರಶಂಸೆಗೊಳಗಾಯಿತು.
೫. ಭಾಗೇ ರೆ ಮನ್ ಕಹೀಂ: (ಸಾಹಿತ್ಯ: ಇರ್ಶಾದ್ ಕಾಮಿಲ್, ದನಿ: ಸುನಿಧಿ ಚೌಹಾನ್, ಸಂಗೀತ: ಸಂದೇಶ್ ಶಾಂಡಿಲ್ಯ)

ಸುಧೀರ್ ಮಿಶ್ರಾ ನಿರ್ದೇಶಿಸಿರುವ ’ಚಮೇಲಿ’ ಚಲನಚಿತ್ರದಲ್ಲಿ ಮಳೆಯದೇ ಮುಖ್ಯಪಾತ್ರ. ಮುಂಬಯಿಯ ಧಾರಾಕಾರ ಮಳೆಯ ಸಂಜೆಯೊಂದು ನಾಯಕ ಅಮನ್ ಕಪೂರ್(ರಾಹುಲ್ ಬೋಸ್) ಮತ್ತು ಕಾಮಾಟಿಪುರದ ವೇಶ್ಯೆ ಚಮೇಲಿ(ಕರೀನಾ ಕಪೂರ್)ಯರನ್ನು ಒಂದೇ ಸೂರಿನಡಿ ತಂದುನಿಲ್ಲಿಸುತ್ತದೆ. ಆಕೆಯನ್ನು ಕಂಡು ಮೊದಮೊದಲು ಅಸಹ್ಯಪಡುವ ಅಮನ್ ಆಕೆಯ ಮಾತು ಕೇಳುತ್ತ ಆಕೆಯ ಕಪ್ಪು ಪ್ರಪಂಚವನ್ನು ಕಾಣುತ್ತ ಬೆರಗಾಗತೊಡಗುತ್ತಾನೆ. ಹೀಗಿರುವಾಗ ಸುರಿವ ಮಳೆಯಲ್ಲಿ ಇದ್ದಕ್ಕಿದ್ದಹಾಗೆ ಒಂದು ಚೆಂದದ ಕನಸಿನಂತೆ ಹಾಡುತ್ತ ಸಂತಸಪಡುವ ಚಮೇಲಿ, ಆಕೆಯನ್ನು ಅಚ್ಚರಿಯಿಂದ ನೋಡುತ್ತ ಮುಗುಳ್ನಗುವ ಅಮನ್, ಮಳೆಗೆ ಸಿಲುಕಿ ಚೆಲ್ಲಾಚೆದರಾಗುವ ಜನರು, ಚಮೇಲಿಯ ಢಾಳಾಗಿ ಕಣ್ಣುಕುಕ್ಕುವ ನೀಲಿ-ಕೆಂಪು ದಿರಿಸು ಇವೆಲ್ಲವೂ ಬೆಳ್ಳಿತೆರೆಯನ್ನೇ ತೋಯಿಸಿಬಿಡುವಂತೆ ಭಾಸವಾಗುತ್ತದೆ. ಹಾಡು ಕಿವಿಗೆ ಹಿತವಾಗಿ ಮಾನ್ಸೂನಿನ ಮಳೆಯಂತೆಯೇ ಆವರಿಸಿಕೊಳ್ಳುತ್ತದೆ.
೬. ಗೀಲಾ ಗೀಲಾ ಪಾನಿ: (ಸಾಹಿತ್ಯ: ಗುಲ್ಜಾರ್, ದನಿ: ಲತಾ ಮಂಗೇಶ್ಕರ್, ಸಂಗೀತ: ವಿಶಾಲ್ ಭಾರದ್ವಾಜ್)

ರಾಮ್ ಗೋಪಾಲ್ ವರ್ಮಾ ನಿರ್ದೇಶನದ ’ಸತ್ಯಾ’ ಚಲನಚಿತ್ರದ ಈ ಹಾಡು ನನ್ನ ಪ್ರಕಾರ ಅತ್ಯಂತ ಸುಂದರವಾಗಿ ಚಿತ್ರೀಕರಿಸಲ್ಪಟ್ಟ ಮಳೆಹಾಡುಗಳಲ್ಲೊಂದು. ನಾಯಕಿ ಊರ್ಮಿಳಾ ಮಾತೊಂಡ್ಕರ್ ಇದರಲ್ಲಿ ತಾನು ಪಕ್ಕಾ ನಾನ್-ಗ್ಲ್ಯಾಮರಸ್ ಅವತಾರದಲ್ಲಿಯೂ ಸೆನ್‍ಶ್ಯೂವಸ್ ಆಗಿ ಕಾಣಬಲ್ಲೆ ಎಂದು ತೋರಿಸಿಕೊಟ್ಟರು. ನಾಯಕಿಯ ಮೈಯನ್ನಪ್ಪುವ ಭಾರತೀಯ ಉಡುಗೆಯಾದ ಸೀರೆ ನಿಜವಾಗಿ ಎಷ್ಟು ಸುಂದರ ಎನ್ನುವದು ಈ ಹಾಡನ್ನು ನೋಡಿದರೆ ಮನವರಿಕೆಯಾದೀತು. ಮಳೆಯಲ್ಲಿ ತನ್ಮಯಳಾಗಿ ಹಾಡುವ ನಾಯಕಿ, ಮತ್ತು ಆಕೆಯನ್ನು ಕೇಳುತ್ತ ಕೂತ ಕೋಣೆಯಿಂದ ಹೊರದಿಟ್ಟಿಸುವ ನಾಯಕ – ಇವರಿಬ್ಬರ ಪ್ರಪಂಚಗಳ ನಡುವಿನ ವ್ಯತ್ಯಾಸಗಳನ್ನು ಈ ಸರಳ, ಸುಂದರ ಹಾಡಿನ ಮೂಲಕ ಕಂಡೂ ಕಾಣದಂತೆ ವ್ಯಕ್ತಪಡಿಸಲಾಗಿದೆ.
೭. ಟಿಪ್ ಟಿಪ್ ಬರ್‌ಸಾ ಪಾನೀ: (ಸಾಹಿತ್ಯ: ಆನಂದ್ ಬಕ್ಷಿ, ದನಿ: ಉದಿತ್ ನಾರಾಯಣ್ ಮತ್ತು ಅಲ್ಕಾ ಯಾಗ್ನಿಕ್, ಸಂಗೀತ: ವಿಜು ಶಾಹ್)
ಮೊಹ್ರಾ ಚಲನಚಿತ್ರದ ಈ ಹಾಡು ಇಂದಿಗೂ ಬಾಲಿವುಡ್‌ನ ಅತ್ಯಂತ ಸೆಕ್ಸೀ ಹಾಡುಗಳ ಲಿಸ್ಟಿನಲ್ಲಿ ಮುಂಚೂಣಿಯಲ್ಲಿದೆ. ಫಾರ್ ಎ ಛೇಂಜ್, ಈ ಮಳೆಯ ಸೀಕ್ವೆನ್ಸಿನಲ್ಲಿ ನಾಯಕಿ ನಾಯಕನನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿರುವದನ್ನು ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತಿರುವದನ್ನು ಕಾಣಿಸಲಾಗಿದೆ. ನಾಯಕನೇನೋ ನೂರಾರು ಗೂಂಡಾಗಳನ್ನು ಸದೆಬಡಿಯುವವನಿರಬಹುದು. ಆದರೆ ಮಳೆ ಮತ್ತು ಹೀರೋಯಿನ್ನಿನ ಡೆಡ್ಲೀ ಕಾಂಬಿನೇಶನ್ ಅನ್ನು ನಾಯಕ ಎದುರಿಸಲು ಸಾಧ್ಯವೆ? ನಾಯಕಿ ರವೀನಾ ಮತ್ತು ನಾಯಕ ಅಕ್ಷಯ್ ಕುಮಾರರ ನಡುವಿನ ’ಕೆಮಿಸ್ಟ್ರಿ’ ಈ ಹಾಡಿನಲ್ಲಿ ಸುವ್ಯಕ್ತವಾಗಿದೆ.
೮. ಕೋಯೀ ಲಡ್‍ಕೀ ಹೈ: (ಸಾಹಿತ್ಯ: ಆನಂದ್ ಬಕ್ಷಿ, ದನಿ: ಉದಿತ್ ನಾರಾಯಣ್ ಮತ್ತು ಲತಾ ಮಂಗೇಶ್ಕರ್, ಸಂಗೀತ: ಉತ್ತಮ್ ಸಿಂಗ್)

ಸುಪರ್ ಹಿಟ್ ಸಂಗೀತಮಯ ಚಲನಚಿತ್ರವಾದ ’ದಿಲ್ ತೋ ಪಾಗಲ್ ಹೈ’ ತನ್ನ ಸಮಯದಲ್ಲಿ ಗಲ್ಲಾಪೆಟ್ಟಿಗೆಯ ಹಲವು ರೆಕಾರ್ಡುಗಳನ್ನು ಮುರಿಯಿತು. ಇದರ ಎಲ್ಲ ಹಾಡುಗಳೂ ಜನಜನಿತವಾದವು. ಮಳೆಯಲ್ಲಿ ಕುಣಿಯುವ ಮಕ್ಕಳ ಜತೆಗೇ ಕುಣಿವ ನಾಯಕ ನಾಯಕಿ ಒಬ್ಬರನ್ನೊಬ್ಬರು ಛೇಡಿಸುತ್ತಲೇ ಹತ್ತಿರವಾಗುವ ಸಂದರ್ಭ. ಇದಲ್ಲದೆ ಪಾದಕ್ಕೆ ಏಟುಮಾಡಿಕೊಂಡು ಆಸ್ಪತ್ರೆ ಸೇರಿಕೊಂಡು ದುಃಖಿತಳಾಗಿರುವ ನಾಯಕನ ಗೆಳತಿಯಲ್ಲಿ ಉತ್ಸಾಹ ತುಂಬುವ ಪ್ರಯತ್ನವೂ ಇಲ್ಲಿ ನಡೆಯುತ್ತದೆ. ಇದೆಲ್ಲವಕ್ಕೂ ಹಿನ್ನೆಲೆಯಾಗಿ ಮಳೆ. ಈ ಹಾಡಿನಲ್ಲಿ ಮಕ್ಕಳ ಮುಗ್ಧತೆ, ಪ್ರೇಮದ ಆರಂಭ ಮತ್ತು ಸ್ನೇಹದ ಬಾಂಧವ್ಯಗಳೆಲ್ಲವೂ ಒಟ್ಟಾಗಿ ಹೊಸದೊಂದು ವಾತಾವರಣವನ್ನೇ ನೇಯ್ದಿವೆ.
೯. ಬರ್‌ಸೋ ರೆ : (ಸಾಹಿತ್ಯ: ಗುಲ್ಜಾರ್, ದನಿ: ಶ್ರೇಯಾ ಘೋಷಾಲ್ ಮತ್ತು ಕೀರ್ತಿ, ಸಂಗೀತ: ಎ.ಆರ್.ರೆಹಮಾನ್)

“ಗುರು”ವನ್ನು ಮಣಿರತ್ನಂರ ಅತ್ಯುತ್ತಮ ಚಲನಚಿತ್ರಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. “ಬರ್‌ಸೋ ರೆ” ಯಲ್ಲಿ ಗುಲ್ಜಾರರ ಮಳೆಯ ಬಗೆಗಿನ ಮಗುವಿನಂತಹ ಸೆಳೆತ, ಐಶ್ವರ್ಯಾ ರೈಯ ಅಂತರ್ನಿಹಿತ ಚೆಲುವು, ಮೇಲುಕೋಟೆಯಂತಹ ಅಪರೂಪದ ಲೊಕೇಶನ್ನುಗಳ ನಿಗೂಢ ಸೌಂದರ್ಯ, ರೆಹಮಾನರ ಅಲೌಕಿಕ ಸಂಗೀತದ ಮೋಡಿ, ಮತ್ತು ಎಲ್ಲದಕಿಂತ ಹೆಚ್ಚಾಗಿ ಮಳೆಯ ಸದ್ದುಗದ್ದಲ ಎಲ್ಲವೂ ಕರಾರುವಾಕ್ಕಾಗಿ ಮೇಳೈಸಿವೆ. ಮಳೆಯಲ್ಲಿ ಕುಣಿದು ಕುಪ್ಪಳಿಸುವ ತುಂಟ ಗುಜರಾತೀ ಹುಡುಗಿಯ ಪಾತ್ರದಲ್ಲಿ ಐಶ್ವರ್ಯಾ ಈ ಹಾಡಿನ ಮೂಲಕ ಪ್ರೇಕ್ಷಕರಿಗೆ ಪರಿಚಯಿಸಲ್ಪಡುತ್ತಾರೆ. ನರ್ತಿಸುವ ನಾಯಕಿಗೂ, ಸುರಿವ ಮಳೆಗೂ ಇಲ್ಲಿ ಹೆಚ್ಚಿನ ವ್ಯತ್ಯಾಸವೇ ಕಾಣಬರದು. ಮಳೆಯ ಮತ್ತು ಹೆಣ್ಣಿನ ಲಾಸ್ಯ, ಚಂಚಲತೆ, ಸೌಂದರ್ಯಗಳ ನಡುವಿನ ಸಾಮ್ಯತೆಗಳನ್ನು ಈ ಹಾಡು ಕಾಣಿಸುತ್ತದೆ.
೧೦. ದೇಖೋ ನಾ: (ಸಾಹಿತ್ಯ: ಪ್ರಸೂನ್ ಜೋಶಿ, ದನಿ: ಸೋನು ನಿಗಮ್ ಮತ್ತು ಸುನಿಧಿ ಚೌಹಾನ್, ಸಂಗೀತ: ಜತಿನ್-ಲಲಿತ್)

“ಫನಾ” ಚಲನಚಿತ್ರದ ಈ ಹಾಡಿನಲ್ಲಿ ಮತ್ತೆ ಹಳೆಯ ಫಾರ್ಮುಲಾ – ಮಳೆಯಲ್ಲಿ ನಾಯಕ ನಾಯಕಿಯರ ಮಿಲನ. ಇದರಲ್ಲಿ ಹೊಸದೇನಿದೆ ಎಂದು ನೀವು ಹುಬ್ಬೇರಿಸಬಹುದು. ಈ ಹಾಡಿನಲ್ಲಿ ಖ್ಯಾತ ಸಿನೆಮಾ ಛಾಯಾಗ್ರಾಹಕ ರವಿಚಂದ್ರನ್‍ರ ಮ್ಯಾಜಿಕ್ ಕೆಲಸ ಮಾಡಿದೆ. ಇಲ್ಲಿ ನಾಯಕಿ ಕಾಜೋಲಳ ಮೇಲೆ ಬೀಳುವ ಪ್ರತಿಯೊಂದು ಮಳೆಹನಿಯೂ ಪೋಣಿಸದ ಮುತ್ತಿನಂತೆ ಕಂಡುಬರುತ್ತದೆ. ನಾಯಕನ ಹಂಬಲ ಮತ್ತು ನಾಯಕಿಯ ಕಾತರ, ಭಯಗಳೊಂದಿಗೆ ಆರಂಭವಾಗುವ ಈ ಹಾಡು ಮುಗಿವುದರೊಳಗೆ ನಾಯಕನ ಮೋಡಿಗೆ ಸಿಲುಕಿದ ನಾಯಕಿ ತನ್ನ ಕಾಮನೆಗಳನ್ನು ಅಭಿವ್ಯಕ್ತಗೊಳಿಸುತ್ತಾಳೆ. ಈ ಹಾಡಿನ ಸಾಹಿತ್ಯ ಉತ್ಕೃಷ್ಟ ಮಟ್ಟದ್ದಾಗಿದ್ದು ಅಮೀರ್ ಖಾನ್ ಮತ್ತು ಕಾಜೋಲ್‌ರ ನಟನೆಯ ಬಗ್ಗೆ ಹೆಚ್ಚಿಗೆ ಹೇಳಬೇಕಾಗಿಲ್ಲ!!
ನಿಮ್ಮ ನೆನಪಿನ, ನಿಮ್ಮ ಮೆಚ್ಚಿನ ಮಳೆಹಾಡುಗಳಿದ್ದಲ್ಲಿ ಹಂಚಿಕೊಳ್ಳಿರಲ್ಲ!!