ಸಂಕೇತ್ ಅನುವಾದದಲ್ಲಿ ಎಲಿಯೆಟನ ಒಂದು ಕವಿತೆ.

 

ಜೆ. ಆಲ್‍ಫ್ರೆಡ್ ಪ್ರುಫ್ರಾಕನ ಪ್ರೇಮಗೀತೆ

“ಎಲಿಯಟ್‍ನ ಪದ್ಯಗಳನ್ನು ಜೋರಾಗಿ ಓದಬೇಕು. ದನಿ ತೆಗೆದು. ದನಿ ಏರಿಳಿಸಿ. ಅವು ದಕ್ಕುತ್ತವೋ ಇಲ್ಲವೋ ಎಂಬ ಯೋಚನೆಯಿಲ್ಲದೆ. “Do I dare?” and “Do I dare?” ಎಂದುಕೊಳ್ಳುತ್ತಲೆ ಈ ಅನುವಾದಕ್ಕಿಳಿದಿದ್ದೇನೆ.”- ಎಂದು ತನ್ನ ಅನುವಾದದ ಬಗ್ಗೆ ಬರೆದುಕೊಂಡಿದ್ದ ಗೆಳೆಯ ಸಂಕೇತ್ ಪಾಟೀಲ್. ಅವರ ಬ್ಲಾಗ್ ನನ್ನ ಅಚ್ಚುಮೆಚ್ಚಿನದು. ಇವತ್ತಿಗೂ ಅವರ ಹಾಗೆ ಬರೆಯುವವರು ಯಾರೂ ಕಾಣುತ್ತಲೆ ಇಲ್ಲವಲ್ಲ ಅನ್ನುವದು ನನ್ನ ಹಳಹಳಿಕೆ. ಬಹಳ ದಿನಗಳ ಬಳಿಕ ನನ್ನ ಮೆಚ್ಚಿನ ಕವಿತೆಗಳನ್ನ ಓದುತ್ತಿದ್ದಾಗ ಈ ಅನುವಾದದ ನೆನಪಾಯಿತು. ಲಿಂಕ್ ಕೊಡುವ ಮನಸ್ಸಿಲ್ಲವಾಗಿ ಸಂಕೇತರ ಮೂರು ಭಾಗಗಳ ಪೋಸ್ಟನ್ನು ಕಾಪಿ ಮಾಡಿ ಒಟ್ಟಿಗೇ ಇಲ್ಲಿ ಹಾಕಿದ್ದೇನೆ, ಅವರು ಕ್ಷಮಿಸುವರೆಂಬ ಭಂಡಧೈರ್ಯದಿಂದ!! ಸಂಕೇತ್ ಮತ್ತೆ ಬರೆಯುವ ಹಾಗಾದರೆ ಬ್ಲಾಗ್ ಲೋಕದ ಅದೃಷ್ಟ ಖುಲಾಯಿಸಬಹುದು!!

Ravilious talk

S’io credesse che mia risposta fosse
A persona che mai tornasse al mondo,
Questa fiamma staria senza piu scosse.
Ma perciocche giammai di questo fondo
Non torno vivo alcun, s’i’odo il vero,
Senza tema d’infamia ti rispondo.
1

ಜೀವಜಗತ್ತಿಗೆ ಮರಳುವ
ಯಾರಿಗಾದರೂ ನಾನು ಉತ್ತರವೀಯುತ್ತಿದ್ದಲ್ಲಿ
ಈ ಉರಿ ಹೀಗೆ ಮಿಣುಕದೆ ನಿಶ್ಚಲವಾಗಿರುತ್ತಿತ್ತು.
ಆದರೆ ನಾ ಕೇಳಿ ತಿಳಿದಂತೆ ಈ
ಗಹ್ವರದಿಂದ ಮರಳಿ ಹೋದವರಿಲ್ಲ.
ಅಪವಾದದ ಭಯವಿಲ್ಲದೆ
ಕೊಡುವೆ ನಿನಗುತ್ತರ

1ಡಾಂಟೆಯ ‘ಡಿವೈನ್ ಕಾಮಿಡಿ’ಯ ಇನ್ಫ಼ರ್ನೋದ ಸಾಲುಗಳಿವು. ಇದು ಗಿಡೊ ಡ ಮಾಂಟೆಫ಼ೆಲ್ಟ್ರೋ ನರಕದ ಎಂಟನೇ ವರ್ತುಲದೊಳಗಿಂದ ಹೇಳುವ ಮಾತು. ಗಿಡೊ ಡ ಮಾಂಟೆಫ಼ೆಲ್ಟ್ರೋ ಡಾಂಟೆಯ ಪ್ರಕಾರ ನರಕದ ಎಂಟನೇ ವರ್ತುಲಕ್ಕೆ ತಳ್ಳಲ್ಪಟ್ಟಿದ್ದಾನೆ. ಕಾರಣ: ದುರುದ್ದೇಶಪೂರಿತ ಸಲಹೆ. ಆದರೆ ಇಲ್ಲಿ ಮುಖ್ಯವಾದದ್ದೇನೆಂದರೆ, ಪ್ರುಫ಼್ರಾಕ್ ಮೊನೊಲಾಗ್‍ಗೆ ಸಂಬಂಧಿಸಿದಂತೆ ಈ ಸಾಲುಗಳ ವ್ಯಾಖ್ಯಾನ: ಗಿಡೊ ಅಂದುಕೊಂಡಿರುವುದೇನೆಂದರೆ ಡಾಂಟೆ ಕೂಡ ನರಕಕ್ಕೆ ತಳ್ಳಲ್ಪಟ್ಟಿದ್ದಾನೆ; ಹೀಗಾಗಿ ನಾನು ಯಾರಿಗೂ ಹೇಳಬಾರದೆಂದುಕೊಂಡಿದ್ದ ಸಂಗತಿಗಳನ್ನು ಇವನಿಗೆ ಹೇಳಬಹುದು; ಅವನು ಮರಳಿ ಹೋಗಿ ಭೂಮಿಯಲ್ಲಿ ತನ್ನ ಅಪಖ್ಯಾತಿ ಹಬ್ಬಿಸಲು ಸಾಧ್ಯವಿಲ್ಲ; ಇದೇ ರೀತಿ, ಪ್ರುಫ಼್ರಾಕ್‍ನಿಗೆ ಕೂಡ ತಾನು ಈ ಪದ್ಯದಲ್ಲಿ ಹೇಳುತ್ತಿರುವುದನ್ನು ಹೇಳುವ ಮನಸ್ಸಿರಲಿಲ್ಲ. ಇದು ಒಂದು interpretation.

 

ಹೋಗೋಣಲ್ಲ ಮತ್ತೆ, ನೀನೂ ನಾನೂ,
ಟೇಬಲ್ಲಿನ ಮೇಲೆ ಮಂಪರುಕವಿದ ಪೇಶಂಟಿನ ಹಾಗೆ ಇಳಿಸಂಜೆ
ಆಕಾಶದಗಲಕ್ಕೂ ಹರಡಿಕೊಂಡಿರುವಾಗ;
ಹೋಗೋಣಲ್ಲ, ಕೆಲ ಅರೆನಿರ್ಜನ ಓಣಿಗಳಲ್ಲಿ,
ರಾತ್ರಿಯೊಪ್ಪತ್ತಿನ ತಹತಹಿಕೆಗೆಟಕುವ ಸೋವಿ ಹೊಟೆಲುಗಳ
ಕನವರಿಕೆಯ ಮರೆಗಳಲ್ಲಿ
ಕಟ್ಟಿಗೆಹೊಟ್ಟು ಹರಡಿದ ಆಯ್‍ಸ್ಟರ್ ಕವಚಗಳ ರೆಸ್ಟೊರಾಂಟ್‍ಗಳಲ್ಲಿ.
ಕಪಟ ಉದ್ದಿಶ್ಶದ ವಾಗ್ವಾದ
-ದಿಂದ ಬಳಲಿಸುವಂಥ ಬೀದಿಗಳು
ಮೈಮೇಲೆರಗುವ ಪ್ರಶ್ನೆಯತ್ತ ಒಯ್ಯುವ ಬೀದಿಗಳು…
ಆಂಹಾ, ಕೇಳದಿರು, “ಅದೆಂಥದ್ದು?” ಎಂದು.
ಹೋಗೋಣ. ಭೇಟಿ ಕೊಡೋಣ.

ರೂಮಿನೊಳಗೆ ಹೆಂಗಸರು ಹೋಗಿಬಂದು ಮಾಡುತ್ತಾರೆ.
ಮೈಕೆಲೆಂಜೆಲೊನನ್ನು ಚರ್ಚಿಸುತ್ತಾರೆ.

ಕಿಟಕಿಗಾಜಿಗೆ ಬೆನ್ನುತಿಕ್ಕುವ ಹಳದಿಯ ಮಂಜು,
ಕಿಟಕಿಗಾಜಿಗೆ ಮುಸುಡಿಯುಜ್ಜುವ ಹಳದಿಯ ಹೊಗೆ
ಸಂಜೆಯ ಮೂಲೆಮೂಲೆಗೂ ನಾಲಗೆ ಚಾಚಿತು,
ಕೊಳಚೆಗಟ್ಟಿದ ಕೊಳಗಳ ಮೇಲೆ ಸುಳಿದಾಡಿತು,
ಚಿಮಣಿಗಳಿಂದುದುರುವ ಮಸಿಗೆ ಬೆನ್ನು ಕೊಟ್ಟಿತು,
ಜಗಲಿಯಿಂದ ಜಾರಿತು, ಒಮ್ಮೆಗೆಲೆ ಹಾರಿತು,
ಅಷ್ಟರಲ್ಲಿ, ಇದು ಅಕ್ಟೋಬರ್‌ನ ಮೆದುರಾತ್ರಿಯೆಂದು ಮನಗಂಡು,
ಮನೆಯ ಸುತ್ತ ಒಮ್ಮೆ ಸುತ್ತಿ ಉಂಗುರಾಗಿ ನಿದ್ದೆಹೋಯಿತು.

ಸಮಯವಂತೂ ಇದ್ದೇ ಇದೆ
ಕಿಟಕಿಗಾಜುಗಳ ಮೇಲೆ ಬೆನ್ನು ತಿಕ್ಕುತ್ತ
ಬೀದಿಯುದ್ದಕ್ಕೂ ತೆವಳುವ ಹಳದಿ ಹೊಗೆಗೆ;
ಸಮಯವಿದೆ, ಸಮಯವಿದೆ
ನಾವು ಕಾಣುವ ಮುಖಗಳ ಕಾಣುವ ಮತ್ತೊಂದು ಮುಖ ತಯಾರಿಸಲು;
ಸಮಯವಿದೆ ಹುಟ್ಟಿಸಲೂ ಸಾಯಿಸಲೂ,
ಪ್ರಶ್ನೆಯೊಂದನ್ನು ಎತ್ತಿ ನಿಮ್ಮ ತಟ್ಟೆಗೆ ಬಡಿಸುವ
ಕೈಗಳ ನಿತ್ಯಗಳಿಗೆ ಕೆಲಸಗಳಿಗೆ ಸಮಯವಿದೆ;
ನಿಮಗಾಗಿ ಸಮಯವಿದೆ ನನಗಾಗಿ ಸಮಯವಿದೆ
ಸಮಯವಿದೆ ನೂರಾರು ಮೀನಮೇಷಗಳಿಗೆ,
ನೂರಾರು ದರ್ಶನಗಳಿಗೆ ಸಂಸ್ಕರಣಗಳಿಗೆ
ಸಮಯವಿದೆ, ಟೋಸ್ಟು ಚಹಾ ತೊಗೊಳ್ಳುವ ಮುಂಚೆ.

ರೂಮಿನೊಳಗೆ ಹೆಂಗಸರು ಹೋಗಿಬಂದು ಮಾಡುತ್ತಾರೆ.
ಮೈಕೆಲೆಂಜೆಲೊನನ್ನು ಚರ್ಚಿಸುತ್ತಾರೆ.

ಸಮಯ ಇದ್ದೇ ಇದೆ
“ಧೈರ್ಯವಿದೆಯೇ ನನಗೆ? ಧೈರ್ಯವಿದೆಯೇ?” ಧೇನಿಸಲು
ಹಿಂದಿರುಗಿ, ಮೆಟ್ಟಲಿಳಿಯಲು, ಸಮಯವಿದೆ
ಮಧ್ಯದಲ್ಲಿ ಬೋಡಾಗುತ್ತಿರುವ ತಲೆಬಾಗಿಸಲು
(ಅವರೆನ್ನುವರು: “ಅವನ ಕೂದಲೆಷ್ಟು ಉದುರಿವೆ ನೋಡು!”)
ನನ್ನ ಮಾರ್ನಿಂಗ್ ಕೋಟು, ಗದ್ದಕ್ಕೊತ್ತಿದಂತಿರುವ ಕಾಲರು
ನೆಕ್‍ಟೈ ಸುಂದರ ಗಂಭೀರ, ಆದರೆ ಸಣ್ಣ ಪಿನ್ನಿನಿಂದ ಬಂಧಿತ
(ಅವರೆನ್ನುವರು: “ಅಯ್ಯೋ, ಅವನ ಕೈಕಾಲುಗಳೆಷ್ಟು ಬಡಕಲು!”)
ವಿಶ್ವವನು ಅಲುಗಿಸುವ
ಸಾಹಸ ಇದೆಯೇ?
ನಿಮಿಷದಲ್ಲೇ ಸಮಯವಿದೆ
ನಿರ್ಧರಿಸಲು ವಿಮರ್ಶಿಸಲು, ಮರುನಿಮಿಷದಿ ಕವುಚಿಹಾಕಲು.

ಯಾಕೆಂದರೆ ಇವರೆಲ್ಲ ನನಗೆ ಈಗಾಗಲೆ ಗೊತ್ತು, ಎಲ್ಲವೂ ಗೊತ್ತು:

ಸಂಜೆಗಳು, ನಸುಕುಗಳು, ಅಪರಾಹ್ಣಗಳು ಎಲ್ಲ ಗೊತ್ತು
ನನ್ನ ಬಾಳುವೆಯನ್ನು ಕಾಫೀ ಚಮ್ಮಚೆಗಳಿಂದ ಅಳೆದು ಸುರಿದಿದ್ದೇನೆ;
ದೂರದ ರೂಮಿನಿಂದ ಬರುತ್ತಿರುವ ಸಂಗೀತದಡಿಯಲ್ಲಿ
ನೆಲಕ್ಕಚ್ಚುತ್ತಿರುವ ದನಿಗಳ ಕೊನೆಯುಸಿರೂ ನನಗೆ ಗೊತ್ತು.
ಹೀಗಿರುವಾಗ ಹೇಗೆ ಮುಂದರಿಯಲಿ?

ಆ ಕಣ್ಣುಗಳೂ ನನಗೆ ಗೊತ್ತು, ಅವೆಲ್ಲವೂ –
ಎಲ್ಲರನ್ನೂ ಸೂತ್ರಬದ್ಧ ನುಡಿಗಟ್ಟಿನಿಂದ ಕಟ್ಟಿಹಾಕುವಂಥ ಕಣ್ಣುಗಳು,
ಹೀಗೆ ನಾನೊಂದು ಸೂತ್ರವಾದಾಗ, ಪಿನ್ನಿಗಂಟಿ ಅಸ್ತವ್ಯಸ್ತ ಬಿದ್ದಿರುವಾಗ,
ಪಿನ್ನೆರಗಿ ಗೋಡೆಗೊರಗಿ ಎತ್ತಕೆತ್ತರೆ ಹೊರಳಾಡುತ್ತಿರುವಾಗ,
ಹೇಗೆ ಶುರು ಮಾಡಲಿ, ಹೇಳಿ?
ನನ್ನ ನಿತ್ಯದ ರೀತಿಗಳ ಅರೆಬೆಂದ ದಂಡೆಗಳನ್ನು ಹೇಗೆ ಉಗಿಯಲಿ?
ಹೇಗೆ ಮುಂದರಿಯುವ ಸಾಹಸಪಡಲಿ?

ಮತ್ತೆ ನನಗೆ ಆ ಕೈಗಳೂ ಗೊತ್ತು, ಅವೆಲ್ಲವೂ –
ಕೈಗಳಲ್ಲಿರುವ ಬಳೆಗಳು, ಅಥವಾ ಬಿಳಿ ಖಾಲಿ ಕೈಗಳು
[ಆದರೆ ದೀಪದ ಬೆಳಕಿನಲ್ಲಿ ಕಂಡುಬಂದು ಕೈಕೊಡುವ ಕಂದು ಕೂದಲು!]
ಇದೇನು, ಯಾರದೋ ಬಟ್ಟೆಗಳ ಸುವಾಸನೆ
ಹೀಗೆ ನನ್ನ ದಿಕ್ಕು ತಪ್ಪಿಸುತ್ತಿದೆಯೋ?
ಟೇಬಲ್ಲಿನ ಮೇಲೆ ಒರಗಿರುವ ಕೈಗಳು, ಶಾಲು ಸುತ್ತಿಕೊಂಡಿರುವ ಕೈಗಳು.
ಮತ್ತೀಗ ಮುಂದೆ ಹೆಜ್ಜೆಯಿಡಲೆ?
ಆದರೆ.. ಎಲ್ಲಿ ಶುರು ಮಾಡಲಿ?

…….

ಮುಸ್ಸಂಜೆಗಳ ಸಂದಿಗಳಲ್ಲಿ ಹಾದುಹೋಗಿದ್ದೇನೆ,
ಕಿಟಕಿಗಳಲ್ಲಿ ಬಾಗಿ ನಿಂತ ಒಂಟಿ ಗಂಡಸರ
ಪೈಪುಗಳಿಂದೊಸರಿ ಮೇಲೆರುವ ಹೊಗೆ ನೋಡಿದ್ದೇನೆಂದು ಹೇಳಲೆ?

ನನಗೊಂದು ಜೋಡಿ ಪರಪರಕು ಉಗುರುಗಳಿರಬೇಕಿತ್ತು
ನಿ:ಶಬ್ದ ಸಮುದ್ರಗಳಡಿಯಲ್ಲಿ ಗರಗರ ತಿರುಗುತ್ತಿದ್ದೆ.

…….

ಮತ್ತೆ ಈ ಮಧ್ಯಾಹ್ನ, ಈ ಸಂಜೆ ಎಷ್ಟು ನಿರುಂಬಳ ಮಲಗಿದೆ!
ನೀಳವಾದ ಬೆರಳುಗಳಿಂದ ನೀವಿಸಿಕೊಂಡು,
ನಿದ್ರಿಸುತ್ತಿದೆ… ಸುಸ್ತಾಗಿದೆ.. ಅಥವಾ ಓತ್ಲಾ ಹೊಡೆಯುತ್ತಿದೆ,
ಫರಶಿಗಳ ಮೇಲೆ ಮೈಚಾಚಿ, ಇಲ್ಲಿಯೇ, ನಿನ್ನ ನನ್ನ ಪಕ್ಕದಲ್ಲೆ.
ಚಹಾ, ಕೇಕು, ಐಸ್‍ಕ್ರೀಮುಗಳ ನಂತರ, ಪ್ರಸಕ್ತ ಕ್ಷಣವನ್ನು
ತೀರಾ ಸಂದಿಗ್ಧಕ್ಕೆ ತಳ್ಳುವ ಚೇತನ ನನ್ನಲ್ಲಿರಲೇಬೇಕೆ?
ನಾನು ಅತ್ತುಕರೆದು ಹೊಟ್ಟೆಗಟ್ಟಿ, ಗೋಳಾಡಿ ಪ್ರಾರ್ಥಿಸಿದ್ದರೂ
ನನ್ನ [ಸ್ವಲ್ಪ ಬಕ್ಕ] ತಲೆಯನ್ನು ತಾಟಿನಲ್ಲಿ ಹೊತ್ತು ತಂದದ್ದನ್ನು ನೋಡಿದ್ದರೂ
ಹೇಳುವುದೇನೆಂದರೆ, ನಾನೇನು ಪ್ರವಾದಿಯಲ್ಲ — ಮತ್ತಿದು ದೊಡ್ಡ ಸಂಗತಿಯೂ ಅಲ್ಲ;
ನೋಡಿದ್ದೇನೆ ನನ್ನ ಶ್ರೇಷ್ಠತೆಯ ಕ್ಷಣಗಳು ಮಿಣುಗುಟ್ಟಿದ್ದನ್ನೂ,
ನೋಡಿದ್ದೇನೆ ಕೆಲಸದ ಹುಡುಗ ಸಂತತ ನನ್ನ ಕೋಟನ್ನು ಇಸಿದುಕೊಳ್ಳುವುದನ್ನು, ಮುಸಿನಗುವುದನ್ನೂ,
ಸಂಕ್ಷೇಪಿಸಿ ಹೇಳಬೇಕೆಂದರೆ – ನಾನು ಬೆಚ್ಚಿಬಿದ್ದಿದ್ದೆ.

ಇಷ್ಟಕ್ಕೂ, ಹಾಗೆ ಮಾಡುವುದು ಯೋಗ್ಯವೆನ್ನಿಸಿಕೊಳ್ಳುತ್ತಿತ್ತೆ,

ಆ ಕಪ್ಪುಗಳು, ಮೊರಬ್ಬ, ಚಹಾಗಳ ನಂತರ,
ಪಿಂಗಾಣಿ ಕಪ್ಪು-ಬಸಿಗಳಲ್ಲಿ, ನಿನ್ನ ನನ್ನ ಬಗೆಗಿನ ಮಾತುಗಳಲ್ಲಿ,
ವಿಷಯದ ಕೊಂಡಿಯನ್ನು ಒಂದು ಮುಗುಳ್ನಗೆಯಿಂದ ಕಡಿದುಹಾಕುವುದು,
ಮೌಲಿಕವಾದುದಾಗುತ್ತಿತ್ತೇ,
ಇಡೀ ಬ್ರಹ್ಮಾಂಡವ ಹಿಂಡಿ ಚೆಂಡು ಮಾಡುವುದು,
ಮೈಮೇಲೆರಗುವ ಪ್ರಶ್ನೆಯತ್ತ ಉರುಳಿಸುವುದು,
“ನಾನು ಲೆಜ಼ಾರಸ್, ಸತ್ತವನೆದ್ದು ಬಂದಿದ್ದೇನೆ,
ಎಲ್ಲ ಹೇಳಲು ಮರಳಿ ಬಂದಿದ್ದೇನೆ, ನಿಮಗೆಲ್ಲ ಹೇಳಲು,” ಎಂದು ಬಿಡುವುದು,
ಅವಳ ತಲೆಗೆ ಇಂಬಿರಿಸಿ, “ನಾನು ಹೇಳಿದರರ್ಥ
ಅದಲ್ಲ, ಅದಲ್ಲವೇ ಅಲ್ಲ,” ಎಂದು ಹೇಳಬೇಕಾಗಿದ್ದಲ್ಲಿ,
ಇದೆಲ್ಲ ಬೇಕಾಗಿತ್ತೆ?

ಇಷ್ಟಕ್ಕೂ, ಹಾಗೆ ಮಾಡುವುದು ಯೋಗ್ಯವೆನ್ನಿಸಿಕೊಳ್ಳುತ್ತಿತ್ತೆ,
ಅರ್ಥಪೂರ್ಣವಾದುದಾಗುತ್ತಿತ್ತೇ?
ಸೂರ್ಯಾಸ್ತಗಳು, ಹಿತ್ತಿಲುಗಳು, ನೀರು ಚಿಮುಕಿಸಿದ್ದ ಬೀದಿಗಳು,
ಕಾದಂಬರಿಗಳು, ಚಹಾಕಪ್ಪುಗಳು, ಫರಶಿಯುದ್ದಕ್ಕೂ ತೆವಳುವ
ಸ್ಕರ್ಟುಗಳು –
ಇವು, ಹಾಗೂ ಮತ್ತಿನ್ನೆಷ್ಟೋ ಸಂಗತಿಗಳ ನಂತರ?
ನನಗನ್ನಿಸ್ಸಿದ್ದನ್ನು ಯಥಾರ್ಥ ಹೇಳುವುದು ಸಾಧ್ಯವೇ ಇಲ್ಲ!
ಆದರೆ ಒಂದು ಮಾಯಾವಿ ಲಾಟೀನು ಪರದೆಯ ಮೇಲೆ ನರನಾಡಿಗಳ ಚಿತ್ತಾರ ಎರಚಿದಂತೆ:
ತಲೆದಿಂಬನ್ನಿರಿಸಿ, ಅಥವಾ ಶಾಲನ್ನು ಕಿತ್ತೆಸೆದು,
ಕಿಟಕಿಯತ್ತ ಮುಖ ತಿರುಗಿಸಿ, “ಅಲ್ಲ, ನಾನು ಹೇಳಿದ್ದರ ಅರ್ಥ
ಅದಲ್ಲ. ಅದಲ್ಲವೇ ಅಲ್ಲ,” ಎಂದು ಹೇಳಿದ್ದರೆ,
ಆವಾಗ ಅದು ಸರಿಹೋಗುತ್ತಿತ್ತೇ?

………..

ಅಲ್ಲ! ನಾನು ಪ್ರಿನ್ಸ್ ಹ್ಯಾಮ್ಲೆಟ್ ಅಲ್ಲ, ಅದು ನನ್ನ ಸ್ವಭಾವವೇ ಅಲ್ಲ;
ನಾನೊಬ್ಬ ಸೇವಕ, ದೇವದೂತ, ಹೇಳಿದಷ್ಟು ಮಾಡುವವ,
ಪೋಷಿಸಿ ಮುಂದುವರಿಸುವುದು, ಒಂದೆರಡು ದೃಶ್ಯಗಳ ಮೊದಲು ಬರುವುದು,
ರಾಜಕುವರನಿಗೆ ಸಲಹೆ ಕೊಡುವುದು; ಸುಲಭ ಸಲಕರಣೆ, ಸಂಶಯವಿಲ್ಲ,
ಗೌರವ ಸೂಚಿಸುತ್ತ, ಕೃತಕೃತ್ಯೆಯಿಂದ ಉಪಯೋಗಕ್ಕೆ ಬರುವವ,
ಮುತ್ಸದ್ದಿ, ಜಾಗರೂಕ, ಎಲ್ಲವೂ ಕೂಲಂಕುಷ,
ಭಾಷ್ಕಳಪಂತ, ಆದರೆ ತುಸು ಸ್ಥೂಲ, ನಿಧಾನಿ
ಕೆಲವೊಮ್ಮೆ ನಿಜಕ್ಕೂ ಹಾಸ್ಯಾಸ್ಪದ
ಮತೊಮ್ಮೊಮ್ಮೆಯಂತೂ ಪೂರಾ ವಿದೂಷಕ.

ನನಗೆ ವಯಸ್ಸಾಗುತ್ತದೆ… ಮುದುಕನಾಗುತ್ತೇನೆ…
ಕೆಳಗೆ ಮಡಿಕೆ ಹಾಕಿ ಪ್ಯಾಂಟು ತೊಡುತ್ತೇನೆ.

ಕೂದಲು ಹಿಂದಕ್ಕೆ ಬಾಚಲೆ? ಪೀಚ್ ತಿನ್ನುವ ಸಾಹಸ ಮಾಡಲೆ?
ನಾನು ಬಿಳಿಯ ಫ್ಲ್ಯಾನೆಲ್ ಟ್ರೌಸರ್ಸ್ ತೊಟ್ಟು, ಬೀಚ್ ಮೇಲೆ ಓಡಾಡುವೆ.
ನಾನು ಮತ್ಸ್ಯಕನ್ನಿಕೆಯರ ಹಾಡು ಪ್ರತಿಹಾಡುಗಳನ್ನು ಕೇಳಿರುವೆ.

ನನ್ನ ಸಲುವಾಗಿ ಅವರು ಹಾಡುವರೆಂದು ನನಗನ್ನಿಸುವುದಿಲ್ಲ.

ಅವರನ್ನು ನೋಡಿದ್ದೇನೆ ಅಲೆಗಳ ಸವಾರಿ ಮಾಡುತ್ತ ಸಮುದ್ರದತ್ತ ಹೋಗುವಾಗ
ಗಾಳಿ ಬೀಸಿ ನೀರನ್ನು ಕಪ್ಪುಬಿಳುಪಾಗಿ ಹರಡುವಾಗ
ಅಲೆಗಳ ಬೆಳ್ಳನೆಯ ಕೂದಲನ್ನು ಹಿಂದೆ ಹಿಂದೆ ಹಿಕ್ಕುವಾಗ.

ತಿರುಗಿದ್ದೇವೆ ನಾವು ಸಮುದ್ರದ ಅನೇಕ ಕಕ್ಷೆಗಳಲ್ಲಿ
ಕೆಂಪು ಕಂದು ಜೊಂಡಿನ ಮಾಲೆ ಧರಿಸಿರುವ ಸಾಗರಕನ್ನಿಕೆಯರ ಸುತ್ತಲೂ
ಮನುಷ್ಯ ದನಿಗಳು ನಮ್ಮನ್ನೆಬ್ಬಿಸುವ ತನಕ, ಮುಳುಗಿಸುವ ತನಕ.

 

ಚಿತ್ರಕೃಪೆ:  ‘Afternoon Tea’, 1939, Wood engraving by James Ravilious

ದಿಲ್ ಹೂಮ್ ಹೂಮ್ ಕರೇ…

 
Life is real!  Life is earnest!
And the grave is not its goal;
Dust thou art, to dust returnest,
 Was not spoken of the soul.
(ಎಚ್. ಡಬ್ಲ್ಯು.ಲಾಂಗ್ ಫೆಲೋ,  A Psalm of Life)

“ಬ್ರಹ್ಮಪುತ್ರದ ಪ್ರೀತಿಯ ಮಗ” ಎನ್ನಿಸಿಕೊಂಡಿದ್ದ, ಭೂಪೆನ್ ಹಜಾರಿಕಾರ ನಿಧನದ ಸುದ್ದಿ ಕೇಳುತ್ತಿದ್ದಂತೆ ಅಸ್ಸಾಮಿನ ಗುವಾಹಟಿಯ ಅತ್ಯಂತ ಟ್ರೆಂಡೀ ಸ್ಥಳಗಳಲ್ಲೊಂದಾದ ಕೆಫೆ ಹೆಂಡ್ರಿಕ್ಸ್ ಈ ಮೇಲೆ ನೀಡಲಾಗಿರುವ ಕವಿತೆಯ ಕೊನೆಯೆರಡು ಸಾಲುಗಳನ್ನು ಉದ್ಧರಿಸುತ್ತ ನವೆಂಬರ್ 7ರಿಂದ 9ರವರೆಗೆ ತಾನು ಶೋಕಾಚರಣೆ ಮಾಡುತ್ತಿರುವುದಾಗಿ ಘೋಷಣೆ ಮಾಡಿತು. ಪಶ್ಚಿಮದ ಅತ್ಯಂತ ವಿವಾದಾಸ್ಪದ ಹಾಡುಗಾರನಾಗಿದ್ದು ಅಷ್ಟೇ ವಿವಾದಾಸ್ಪದವಾಗಿ ಸತ್ತುಹೋದ ಸುಪ್ರಸಿದ್ಧ ಜಿಮಿ ಹೆಂಡ್ರಿಕ್ಸನ ಹೆಸರಿಟ್ಟುಕೊಂಡ, ಯುವಪೀಳಿಗೆ ಮತ್ತು ಪಾಶ್ಚಾತ್ಯ ಸಂಗೀತವನ್ನೇ ಜೀವಾಳವಾಗಿಸಿಕೊಂಡಿರುವ ಈ ಕೆಫೆಯೆಲ್ಲಿ? ಎಂದೂ ಯಾವುದೇ ವಿವಾದಕ್ಕೆ ಗುರಿಯಾಗದೇ, ಈಶಾನ್ಯರಾಜ್ಯಗಳಿಂದ ಬಂದವರೆಂಬ ಲೇಬಲ್ಲಿಗೆ ಸಿಕ್ಕಿಹಾಕಿಕೊಳ್ಳದೆ, ತನ್ನ ನೆಲದ ಸಂಗೀತವನ್ನೇ ಉಸಿರಾಡಿಕೊಂಡು, ಶಾಂತ ನದಿಯೊಂದರಂತೆ ಪ್ರವಹಿಸುತ್ತಿದ್ದ, ಸಂತನಂತೆ ಕಾಣುತ್ತಿದ್ದ,  ಹಿರಿಯರಾದ ನಮ್ಮ ’ಭೂಪೆನ್ ದಾ’ ಎಲ್ಲಿ?

ಕವಿ, ಸಂಗೀತಕಾರ, ಹಾಡುಗಾರ, ನಿರ್ದೇಶಕ, ನಟ, ಪತ್ರಕರ್ತ, ಲೇಖಕ ಮತ್ತು ಪ್ರಸಿದ್ಧ ಚಲನಚಿತ್ರ ನಿರ್ದೇಶಕರಾಗಿದ್ದ ಡಾ. ಭೂಪೆನ್ ಹಜಾರಿಕಾರ ಮೋಡಿಯೇ ಅಂತಹದು. ಅದರಿಂದ ಬಚಾವಾಗಲು ಯಾರಿಗೂ ಸಾಧ್ಯವೇ ಇಲ್ಲ. ಈಶಾನ್ಯ ಭಾರತದ ಸಾಂಸ್ಕೃತಿಕ ರಂಗದ ಅನಭಿಷಿಕ್ತ ರಾಜನೆಂದು ಅವರನ್ನು ಕರೆಯಲಾಗುತ್ತಿತ್ತು. ಭಾರತದ ಸಾಂಸ್ಕೃತಿಕ ಮುಖ್ಯವಾಹಿನಿಯಲ್ಲಿ ಎಂದೂ ಪ್ರಮುಖವಾಗಿ ಕಾಣಬರದಿದ್ದ ಅಸ್ಸಾಮಿನ ಹೆಸರು ಮತ್ತು ಅದರ ಅಮೂಲ್ಯವಾದ ಮಣ್ಣಿನ ಸೊಗಡನ್ನು ಎಲ್ಲರೂ ಸವಿಯುವಂತೆ ಮಾಡಿದವರೇ ಭೂಪೆನ್ ದಾ.

1926ರ ಸೆಪ್ಟೆಂಬರ್ ಅಸ್ಸಾಮಿನ ತಿನ್ ಸುಕಿಯಾ ಜಿಲ್ಲೆಯ ಸಣ್ಣ ಊರಾದ ಶೊಡಿಯಾದಲ್ಲಿ ಜನಿಸಿದ ಭೂಪೆನ್ ಹಜಾರಿಕಾ ಗುವಾಹಟಿಯಲ್ಲಿ ಇಂಟರ್ ತನಕ ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಿಂದ ಪೊಲಿಟಿಕಲ್ ಸೈನ್ಸ್ ಪದವಿಯನ್ನು 1946ರಲ್ಲಿ ಪಡೆದರು. ಇವರ ಹುಟ್ಟಿದೂರಾದ ಶೊಡಿಯಾವು ಅಲ್ಲಿ ಮಾತ್ರ ಹುಟ್ಟಿ ಅರಳುವ ಸೊತ್ಫುಲ್ ಎಂಬ ಮಲ್ಲಿಗೆಯ ತರಹದ ಸುವಾಸಿತ ಪುಷ್ಪಕ್ಕೆ ಹೆಸರುವಾಸಿ. ಸೊತ್ಫುಲ್ ಎಂದರೆ ’ಆಶೀರ್ವಾದ’ ಅಥವಾ ’ಮರುಭೂಮಿಯ ಹೂವು’ ಎಂಬ ಅರ್ಥವಿದೆ. ಭೂಪೆನ್ ಹಜಾರಿಕಾ ಕೂಡ ತನ್ನೂರಿನ ಸೊತ್ಫುಲ್ ಹೂವಿನ ರೀತಿಯೇ ತನ್ನ ನೆಲದ ಪರಿಮಳವನ್ನು ಪ್ರಪಂಚದ ಉದ್ದಗಲಕ್ಕೂ ಹರಡಿದರು. ಮರುಭೂಮಿಯಲ್ಲಿ ಅರಳುವ ಹೂವಿನಷ್ಟೇ ಅಪರೂಪದ ಮನುಷ್ಯರಾಗಿ ಬೆಳೆದರು.

”ಬೆಳೆಯುವ ಸಿರಿ ಮೊಳಕೆಯಲ್ಲಿ’ ಎಂಬಂತೆ ಬಾಲಕ ಭೂಪೆನ್ ಸದಾ ಸಂಗೀತ, ಹಾಡುಗಳಲ್ಲಿ ಅಪಾರ ಆಸಕ್ತಿ ತೋರುತ್ತಿದ್ದ. ತನ್ನ ಮೊತ್ತಮೊದಲನೆಯ ಹಾಡನ್ನು ಕೇವಲ 10 ವಯಸ್ಸಿನ ಬಾಲಕನಾಗಿದ್ದಾಗ ಸ್ವತಃ ರಚಿಸಿ ಹಾಡಿದ ಈ ಅದ್ಭುತ ಪ್ರತಿಭೆ ತನ್ನ ಭವಿಷ್ಯದ ಸಾಧನೆಗಳ ಝಲಕ್ ಒಂದನ್ನು ಆಗಲೇ ನೀಡಿದ್ದ. ಇಷ್ಟೇ ಅಲ್ಲದೆ, ಅಸ್ಸಾಮಿನ ಎರಡನೇ ಟಾಕೀ ಚಲನಚಿತ್ರವಾದ 1939ರ ”ಇಂದ್ರಮಾಲತಿ’ಯಲ್ಲಿ ಬಾಲನಟನಾಗಿ ನಟಿಸಿ ಹಿನ್ನೆಲೆಗಾಯನವನ್ನೂ ಮಾಡಿದ್ದ ಭೂಪೆನ್ ಅಲ್ಲಿಂದಲೇ ಚಲನಚಿತ್ರಮಾಧ್ಯಮದ ಬಗ್ಗೆ ಒಲವು ಬೆಳೆಸಿಕೊಂಡದ್ದು. ನಂತರದ ದಶಕಗಳಲ್ಲಿ ಹಲವಾರು ಅಸ್ಸಾಮೀ ಚಲನಚಿತ್ರಗಳನ್ನು ನಿರ್ದೇಶಿಸಿದ ಭೂಪೆನ್ ದಾ  1977ರಲ್ಲಿ ಅರುಣಾಚಲ ಪ್ರದೇಶದ ಮೊತ್ತಮೊದಲ ಹಿಂದೀ ಚಲನಚಿತ್ರ ’ಮೇರಾ ಧರಮ್ ಮೇರೀ ಮಾ’ನ ನಿರ್ಮಾಪಕ, ನಿರ್ದೇಶಕ ಮತ್ತು ಸಂಗೀತನಿರ್ದೇಶಕರಾಗಿ ಕೆಲಸ ಮಾಡಿದ ಹೆಗ್ಗಳಿಕೆಯನ್ನೂ ಪಡೆದಿದ್ದಾರೆ.

ಸುಪ್ರಸಿದ್ಧ ಮಹಿಳಾ ನಿರ್ದೇಶಕಿ ಕಲ್ಪನಾ ಲಾಜ್ಮಿಯವರ ಮೇಲೆ ಭೂಪೆನ್ ದಾರ ಸಂಗೀತ ಮೋಡಿ ಮಾಡಿತ್ತು. ಅವರನ್ನು ಹಿಂದೀ ಸಿನೆಮಾರಂಗಕ್ಕೆ ಕರೆದುಕೊಂಡು ಬಂದ ಶ್ರೇಯ ಕಲ್ಪನಾರಿಗೇ ಸಲ್ಲಬೇಕು. 1986ರಲ್ಲಿ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡು ಅಂತರ್ರಾಷ್ಟ್ರೀಯ ಖ್ಯಾತಿ ಗಳಿಸಿದ ಕಲ್ಪನಾ ಲಾಜ್ಮಿಯವರ ಚಲನಚಿತ್ರವಾದ ’ಎಕ್ ಪಲ್’ಗೆ ಭೂಪೆನ್ ನಿರ್ಮಾಪಕ ಮತ್ತು ಸಂಗೀತನಿರ್ದೇಶಕರಾಗಿ ಕೆಲಸ ಮಾಡಿದರು. ಈ ಚಲನಚಿತ್ರದಲ್ಲಿ ಶಬನಾ ಆಜ್ಮಿ, ನಸೀರುದ್ದೀನ್ ಶಾಹ್ ಮತ್ತು ಫರೂಕ್ ಶೇಖ್ ನಟಿಸಿದ್ದರು. ಅಲ್ಲಿಂದಾಚೆಗೆ ಕಲ್ಪನಾರವರ ಜತೆ ಅವರ ಸಿನೆಮಾ ಒಡನಾಟವೂ ಬೆಳೆಯತೊಡಗಿತು. ಭೂಪೆನ್ ಹಜಾರಿಕಾರ ಹೆಸರನ್ನು ಮನೆಮಾತಾಗಿ ಮಾಡಿದ್ದು ಕಲ್ಪನಾ ಲಾಜ್ಮಿಯವರೇ 1993ರಲ್ಲಿ ನಿರ್ದೇಶಿಸಿದ ಮಹಾಶ್ವೇತಾದೇವಿಯವರ ಸಣ್ಣಕಥೆಯನ್ನಾಧರಿಸಿದ ಚಲನಚಿತ್ರ ’ರೂಡಾಲಿ’. ಡಿಂಪಲ್ ಕಪಾಡಿಯಾ, ರಾಜ್ ಬಬ್ಬರ್, ಅಮ್ಜದ್ ಖಾನ್ ಮತ್ತು ರಾಖೀ ಮುಂತಾದವರು ತಾರಾಗಣದಲ್ಲಿದ್ದ ಈ ಚಲನಚಿತ್ರದ ಸಂಗೀತನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದರು ಭೂಪೆನ್ ದಾ.

’ದಿಲ್ ಹೂಮ್ ಹೂಮ್ ಕರೇ, ಘಬರಾಯೇ

ಘನ್ ಧಮ್ ಧಮ್ ಕರೇ, ಡರ್ ಜಾಯೇ

ಇಕ್ ಬೂಂದ್ ಕಭೀ ಪಾನೀ ಕೀ ಮೋರಿ ಅಖಿಯೋಂಸೇ ಬರ್ಸಾಯೇ’

ಈ ಸಾಲುಗಳನ್ನು ಭಾರತೀಯ ಸಿನೆಮಾದ ಯಾವ ಅಭಿಮಾನಿಯೂ ಮರೆಯಲು ಸಾಧ್ಯವೇ ಇಲ್ಲ. ಈ ಹಾಡನ್ನು ಲತಾ ಮತ್ತು ಭೂಪೆನ್ ಇಬ್ಬರೂ ಬೇರೆಬೇರೆಯಾಗಿ ಹಾಡಿದ್ದಾರೆ. ಲತಾ ಪ್ರೇಮಕ್ಕೆ ಸಿಲುಕಿದ ಹೆಣ್ಣಿನ ಸ್ನಿಗ್ಧ, ನವಿರು ಭಾವಗಳನ್ನು ತಮ್ಮ ಅಲೌಕಿಕ ದನಿಯಲ್ಲಿ ಅದ್ಭುತವಾಗಿ ವ್ಯಕ್ತಪಡಿಸಿದ್ದರೆ ಮರಳುಗಾಡಿನ ರಾತ್ರಿಗಳ ಅಂಕುಡೊಂಕುಗಳುದ್ದಕ್ಕೂ ನಿರಾಯಾಸವಾಗಿ ಸಾಗುತ್ತಿರುವಂತೆ ಭಾಸವಾಗುವ ಭೂಪೆನ್ ದಾರವರ ಕಂಚಿನಂತಹ ದನಿ ವ್ಯಕ್ತಪಡಿಸುವ ಆರ್ದ್ರತೆ ಲತಾರನ್ನೂ ನಾಚಿಸುವಂತಿದೆ. ತಮ್ಮ ಹಾಡು, ಕವಿತೆಗಳಲ್ಲಿ ಅಸ್ಸಾಮಿನ ಜಾನಪದಲೋಕದ ಹಲವಾರು ರೆಫರೆನ್ಸುಗಳನ್ನು ಬಳಸುತ್ತಿದ್ದ ಭೂಪೆನ್ ಅದರಲ್ಲಿನ ಎರಾಟಿಕ್ ಉಲ್ಲೇಖಗಳಿಂದ ಹಿಡಿದು ಪ್ರಚಲಿತ ಸಾಮಾಜಿಕ ಸಮಸ್ಯೆಗಳವರೆಗೆ ಎಲ್ಲವನ್ನೂ ಒಳಗೊಳ್ಳುವುದರಲ್ಲಿ ನಿಷ್ಣಾತರಾಗಿದ್ದರು. ಅವರ ಅತ್ಯಂತ ಪ್ರಸಿದ್ಧವಾದ ಸಂಗೀತರಚನೆಗಳಲ್ಲಿ ಐವತ್ತರ ದಶಕದ ನಿಕಟವರ್ತಿಯಾಗಿದ್ದ ಅಮೆರಿಕನ್ ನಟ, ಸಂಗೀತಗಾರ ಮತ್ತು ಸಿವಿಲ್ ರೈಟ್ಸ್ ಕಾರ್ಯಕರ್ತ ಪಾಲ್ ರೋಬ್ಸನ್ ಪರಿಚಯಿಸಿದ ಕಪ್ಪು ಅಮೆರಿಕನ್ ಆಧ್ಯಾತ್ಮಿಕವಾದದ ಸುಳುಹು ಕಾಣಸಿಗುತ್ತದೆ ಎನ್ನಲಾಗಿದೆ. ತಮ್ಮ ಜೀವನಕಾಲದುದ್ದಕ್ಕೂ ಭಾರತೀಯ ಸಿನೆಮಾಗೆ ಸಂಬಂಧಿಸಿದ ಅನೇಕ ಪ್ರತಿಷ್ಠಿತ ಹುದ್ದೆಗಳನ್ನಲಂಕರಿಸಿದ ಅವರಿಗೆ 1977ರಲ್ಲಿ ಅಸ್ಸಾಮೀ ಚಲನಚಿತ್ರ ’ಚಮೇಲಿ ಮೇಮ್ ಸಾಬ್’ಗಾಗಿ ಅತ್ಯುತ್ತಮ ಸಂಗೀತ ರಚನಾಕಾರರಿಗೆ ದೊರಕುವ ರಾಷ್ಟ್ರೀಯ ಪ್ರಶಸ್ತಿ ಲಭಿಸಿತು. ಕಳೆದ ನಲುವತ್ತು ವರ್ಷಗಳಲ್ಲಿ ಹೊರಬಂದ ಅಸ್ಸಾಮೀ ಚಲನಚಿತ್ರಗಳ ಪೈಕಿ ಅತಿಹೆಚ್ಚಿನ ಸಂಖ್ಯೆಯ ಫಿಲ್ಮುಗಳಿಗೆ ಸಂಗೀತರಚನೆ ಮಾಡಿ ಹಾಡುಹಾಡಿದ ಕೀರ್ತಿ ಭೂಪೆನ್ ದಾರವರದು.

ಹಿಂದೀ ಚಲನಚಿತ್ರಗಳಿಗೆ ಬರುವುದಾದಲ್ಲಿ ಸಾಯಿ ಪರಾಂಜಪೆಯವರ ’ಸಾಜ್’, ಕಲ್ಪನಾ ಲಾಜ್ಮಿಯವರ ’ದರ್ಮಿಯಾನ್’,”ದಮನ್’ ಮತ್ತು ’ಕ್ಯೋಂ’, ಎಮ್. ಎಫ್ ಹುಸೇನರ ’ಗಜಗಾಮಿನಿ’ ಮೊದಲಾದ ಚಲನಚಿತ್ರಗಳಿಗೆ ಸಂಗೀತರಚನೆ/ನಿರ್ದೇಶನಗಳನ್ನು ಒದಗಿಸಿದ್ದಾರೆ. 2011ರಲ್ಲಿ ಬಿಡುಗಡೆಯಾದ ಚಲನಚಿತ್ರ ’ಗಾಂಧೀ ಟು ಹಿಟ್ಲರ್’ನಲ್ಲಿಯೂ ಕೂಡ ಹಿನ್ನೆಲೆಗಾಯನ ಮಾಡಿದ್ದ ಭೂಪೆನ್ ಹಜಾರಿಕಾರಿಗೆ ತಮ್ಮ ಜೀವನಕಾಲದಲ್ಲಿ ದೊರಕಿದ ಪ್ರಶಸ್ತಿಗಳು, ಗೌರವ ಮನ್ನಣೆಗಳು ಲೆಕ್ಕವಿಲ್ಲದಷ್ಟು. ಇವುಗಳ ಪೈಕಿ ಪ್ರಮುಖವಾದುವೆಂದರೆ – ಪದ್ಮಶ್ರೀ, ಪದ್ಮಭೂಷಣ, ಸಂಗೀತ ನಾಟಕ ಅಕ್ಯಾಡೆಮಿ ಪ್ರಶಸ್ತಿ ಮತ್ತು ದಾದಾಸಾಹೇಬ ಫಾಲ್ಕೆ ಪ್ರಶಸ್ತಿಗಳು. ಮಾಸ್ ಕಮ್ಯುನಿಕೇಶನ್ನಿನಲ್ಲಿ ಪಿಎಚ್ ಡಿ ಪದವಿಯನ್ನು ಕೊಲಂಬಿಯಾ ವಿಶ್ವವಿದ್ಯಾನಿಲಯದಿಂದ ಸ್ವಂತ ಶ್ರಮದಿಂದ ಗಳಿಸಿದ್ದ ಅವರು ಆ ಕ್ಷೇತ್ರದಲ್ಲಿಯೂ ಅಪಾರ ಸಾಧನೆ ಮಾಡಿದ್ದರು. ಭೂಪೆನ್ ದಾ ಹಲವು ಕಾಲ ರಾಜಕೀಯ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದರು. ಒಬ್ಬ ಮನುಷ್ಯ ಇಷ್ಟೆಲ್ಲ ಸಾಧನೆಗಳನ್ನು ಒಂದೇ ಜೀವಿತಕಾಲದಲ್ಲಿ ಮಾಡಿರುವುದು ಮತ್ತು ಒಂದಿನಿತೂ ಹಮ್ಮಿಲ್ಲದೆ ಅಜಾತಶತ್ರುವಾಗಿ ಬಾಳಿದ್ದುದು ಎಂಥವರಲ್ಲಿಯೂ ವಿಸ್ಮಯ ಹುಟ್ಟಿಸುವಂಥದು. ಶ್ರೇಷ್ಠ ಜನರು ಸದಾ ವಿನಮ್ರರಾಗಿರುವರೆಂಬ ಲೋಕಾರೂಢಿಯ ಮಾತಿಗೆ ನಮ್ಮ ಭೂಪೆನ್ ದಾ ಅತ್ಯುತ್ತಮ ಉದಾಹರಣೆ.

ಇಂಥ ಅಪ್ರತಿಮ ಭಾರತೀಯ ನಮ್ಮನ್ನಗಲಿ ಹೋಗಿದ್ದಾರೆ. ಆದರೇನಂತೆ? ತನ್ನ ಅಪರೂಪದ ಸಂಗೀತದ ಮೂಲಕ ಅವರ ಆತ್ಮವು ಸದಾ ನಮ್ಮ ನಡುವೆ ನೆಲೆಸಿರುತ್ತದೆ. ಲಾಂಗ್ ಫೆಲೋ ತನ್ನ ಕವಿತೆಯಲ್ಲಿ “ಧೂಳು ನೀನು, ಧೂಳಿಗೇ ಮರಳಬೇಕು, ಆದರೆ ಆತ್ಮದ ಬಗ್ಗೆ ಯಾರೂ ಹೀಗೆ ಹೇಳರು “ ಎಂದಿರುವುದು ಎಷ್ಟು ಅರ್ಥಬದ್ಧ ಎನ್ನಿಸುತ್ತದೆ!

ಶ್ರೀಮತಿ ಶರ್ಮಾಳ ಹುಲಿ

ಎಚ್.ಎಚ್. ಮನ್ರೋ(ಸಾಕಿ)(1870-1916)
ಮೂಲಕಥೆ: ಮಿಸೆಸ್ ಪ್ಯಾಕೆಲ್‌ಟೈಡ್ಸ್ ಟೈಗರ್
ಲೇಖಕರ ಬಗ್ಗೆ ಮಾಹಿತಿ:
‘ಸಾಕಿ’ (ಡಿಸೆಂಬರ್ 18, 1870 – ನವೆಂಬರ್ 13, 1916) ಎಂಬ ಬರಹನಾಮದಿಂದ ಪರಿಚಿತರಾಗಿರುವ ಬ್ರಿಟಿಶ್ ಬರಹಗಾರ ಹೆಕ್ಟರ್ ಹ್ಯೂ ಮನ್ರೋರ ಕಥೆಗಳು ಎಡ್ವರ್ಡಿಯನ್ ಸಮಾಜದ ವಿಡಂಬನೆ ಮಾಡುತ್ತಿದ್ದವು. ಸಣ್ಣಕಥೆಗಳ ಸರದಾರನೆಂದು ಪರಿಗಣಿಸಲಾಗುವ ಇವರನ್ನು ಓ. ಹೆನ್ರಿ ಮತ್ತು ಡೊರೋಥಿ ಪಾರ್ಕರ್‌ಗೆ ಹೋಲಿಸಲಾಗುತ್ತದೆ. ಆತ ತನ್ನ ಕಥೆಗಳ ಪಾತ್ರಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತ ಹೋಗುತ್ತಾರೆ. ‘ದ ಓಪನ್ ವಿಂಡೋ’ ಅವರ ಅತ್ಯಂತ ಪ್ರಸಿದ್ಧ ಸಣ್ಣಕಥೆ. ಆಸ್ಕರ್ ವೈಲ್ಡ್, ಲೂಯಿಸ್ ಕ್ಯಾರೊಲ್ ಮತ್ತು ರುಡ್ಯಾರ್ಡ್ ಕಿಪ್ಲಿಂಗರಿಂದ ಪ್ರಭಾವಿತರಾಗಿದ್ದ ಸಾಕಿ, ಪಿ.ಜಿ.ವೋಡ್‌ಹೌಸ್‌ರ ಮೇಲೆ ಅಪಾರ ಪ್ರಭಾವ ಬೀರಿದರು. ಕಥೆಗಳಲ್ಲದೆ ಅವರು ನಾಟಕಗಳನ್ನೂ ಬರೆದರು.

ಟೈಗರ್ ಲಿಲಿ ಹೂವು

ಒಂದು ಹುಲಿಯನ್ನು ಬೇಟೆಯಾಡಬೇಕೆನ್ನುವುದು ಶ್ರೀಮತಿ ಶರ್ಮಾಳ ಮನೋಕಾಮನೆಯೂ ಗುರಿಯೂ ಆಗಿದ್ದಿತು. ಕೊಲ್ಲುವ ಇಚ್ಛೆ ಅವಳಲ್ಲಿ ಇದ್ದಕ್ಕಿದ್ದ ಹಾಗೆ ಹುಟ್ಟಲಿಲ್ಲ ಅಥವಾ ಆಕೆ ಕಾಡನ್ನು ತೊರೆಯುವಾಗ ತಾನು ಕಂಡಿದ್ದಕ್ಕಿಂತ ಹೆಚ್ಚು ಕ್ಷೇಮವಾಗಿ, ಸಂಪೂರ್ಣವಾಗಿ ಬಿಡುವೆನೆಂದಾಗಲೀ, ಒಂದು ಕಾಡುಪ್ರಾಣಿಯನ್ನು ಕೊಂದು ಅಲ್ಲಿನ ಪ್ರತಿ ಮಿಲಿಯ ಜನಸಂಖ್ಯೆಗೆ ಇರುವ ಕಾಡುಪ್ರಾಣಿಗಳ ಒಂದು ದಶಮಾಂಶದಷ್ಟು ಭಾಗವನ್ನು ಕಡಿಮೆಗೊಳಿಸುತ್ತಿರುವೆನೆಂದಾಗಲೀ ಯೋಚನೆ ಬರಲಿಲ್ಲ. ಹುಲಿಯ ಹೆಜ್ಜೆಗಳೆಡೆ ಆಕೆಗೆ ಇದ್ದಕ್ಕಿದ್ದಂತೆ ಉಂಟಾದ ಬಲವಾದ ಸೆಳೆತಕ್ಕೆ ಮೂಲ ಕಾರಣ ಬೇರೆಯೇ ಇತ್ತು- ಕೆಲ ಸಮಯದ ಹಿಂದೆ ಶ್ರೀಮತಿ ಸುರುಚಿ ವರ್ಮಾಳನ್ನ ಅಲ್ಜೀರಿಯನ್ ವಿಮಾನಚಾಲಕನೊಬ್ಬ ಏರೋಪ್ಲೇನಿನಲ್ಲಿ ಕೂರಿಸಿಕೊಂಡು ಹನ್ನೊಂದು ಮೈಲಿ ದೂರ ಕರೆದುಕೊಂಡು ಹೋಗಿದ್ದು ಮತ್ತು ಆಕೆ ಅದರ ಸುದ್ದಿ ಬಿಟ್ಟು ಮತ್ತೇನನ್ನೂ ಮಾತನಾಡದೇ ಇದ್ದದ್ದು; ಇದಕ್ಕೆ ತಕ್ಕ ಪ್ರತ್ಯಸ್ತ್ರವೆಂದರೆ ವೈಯುಕ್ತಿಕವಾಗಿ ಶ್ರಮಪಟ್ಟು ಗಳಿಸಿದ ಹುಲಿಯ ಚರ್ಮ ಮತ್ತು ಪ್ರೆಸ್ ಚಿತ್ರಗಳ ಮಹಾಪೂರ. ಶ್ರೀಮತಿ ಶರ್ಮಾ ಈಗಾಗಲೇ ಕರ್ಜನ್ ರೋಡಿನ ತನ್ನ ಮನೆಯಲ್ಲಿ ತಾನು ವಿಶೇಷವಾಗಿ ಶ್ರೀಮತಿ ಸುರುಚಿ ವರ್ಮಾಳಿಗಾಗಿಯೇ ನೀಡಲಿರುವ ಲಂಚ್ ಪಾರ್ಟಿ, ಅಲ್ಲಿ ಪ್ರದರ್ಶಿಸಲಾಗಿರುವ ಹುಲಿಚರ್ಮದ ಕಂಬಳಿ ಎಲ್ಲರ ಮಾತಿನ ವಿಷಯವಾಗಿರುವುದು, ಇತ್ಯಾದಿಗಳ ಬಗ್ಗೆ ಸಾಕಷ್ಟು ಕಲ್ಪನೆಗಳನ್ನು ಮಾಡಿಕೊಂಡಿದ್ದಳು. ಶ್ರೀಮತಿ ಸುರುಚಿ ವರ್ಮಾಳ ಮುಂದಿನ ಹುಟ್ಟುಹಬ್ಬದಂದು ತಾನು ಆಕೆಗೆ ನೀಡಲಿರುವ ಹುಲಿಯುಗುರಿನ ಬ್ರೋಚ್‌ನ ವಿನ್ಯಾಸವನ್ನೂ ಮನಸ್ಸಿನಲ್ಲಿಯೇ ರೂಪಿಸಿಕೊಂಡಿದ್ದಳು. ಮುಖ್ಯವಾಗಿ ಹಸಿವು ಮತ್ತು ಪ್ರೇಮಗಳಿಂದ ಈ ಪ್ರಪಂಚವು ಪ್ರಭಾವಿತವಾಗಿದೆ ಎಂದು ಭಾವಿಸಲಾಗುತ್ತದೆಯಾದರೂ ಇದಕ್ಕೆ ಶ್ರೀಮತಿ ಶರ್ಮಾ ಒಂದು ಅಪವಾದವಾಗಿದ್ದಳು; ಆಕೆಯ ಚಲನವಲನಗಳು ಮತ್ತು ಉದ್ದೇಶಗಳು ಶ್ರೀಮತಿ ಸುರುಚಿ ವರ್ಮಾಳ ಬಗ್ಗೆ ಆಕೆಗಿದ್ದ ದ್ವೇಷದಿಂದ ನಿರ್ದೇಶಿಸಲ್ಪಡುತ್ತ ಇದ್ದವು.
ಪರಿಸ್ಥಿತಿಗಳು ಅನುಕೂಲಕರವಾಗಿ ಪರಿಣಮಿಸಿದವು. ಶ್ರೀಮತಿ ಶರ್ಮಾ ಹೆಚ್ಚು ಶ್ರಮಪಡದೆ ಹುಲಿಯನ್ನು ಗುಂಡಿಕ್ಕಿ ಕೊಲ್ಲುವ ಅವಕಾಶಕ್ಕಾಗಿ ಸಾವಿರ ರೂಪಾಯಿಗಳ ಬೆಲೆಸೂಚನೆ ನೀಡಿದ್ದಳು, ಮತ್ತು ಪಕ್ಕದ ಹಳ್ಳಿಯೊಂದರಲ್ಲಿಯೇ ಗೌರವಯುತವಾದ ಪೂರ್ವಚರಿತ್ರೆಯನ್ನು ಹೊಂದಿದ, ಹೆಚ್ಚುತ್ತಿದ್ದ ವಯಸ್ಸಿನ ತೊಂದರೆಗಳಿಂದಾಗಿ ಕಾಡುಪ್ರಾಣಿಗಳನ್ನು ಬೇಟೆಯಾಡುವುದನ್ನು ಬಿಟ್ಟು ಸಣ್ಣಪುಟ್ಟ ಸಾಕುಪ್ರಾಣಿಗಳಿಗೆ ತನ್ನ ಹಸಿವನ್ನು ಸೀಮಿತಗೊಳಿಸಿಕೊಂಡಿದ್ದ ಪ್ರಾಣಿಯೊಂದರ ಬೇಟೆಯನ್ನು ಎಲ್ಲರೂ ಬೆಂಬಲಿಸುತ್ತಿದ್ದಾಗಿ ತಿಳಿದುಬಂದಿತು. ಸಾವಿರ ರೂಪಾಯಿಗಳನ್ನು ಸಂಪಾದಿಸುವ ಸಂಭಾವ್ಯತೆಯು ಹಳ್ಳಿಗರ ಕ್ರೀಡಾ ಮತ್ತು ವಾಣಿಜ್ಯ ಪ್ರವೃತ್ತಿಗಳನ್ನು ಉತ್ತೇಜಿಸಿದ್ದವು; ಅಕಸ್ಮಾತ್ ಹುಲಿಯು ಹೊಸ ಬೇಟೆಗಳನ್ನು ಹುಡುಕಿಕೊಂಡು ಹೊಸ ಸ್ಥಳಗಳೆಡೆ ಅಲೆಯಲಾರಂಭಿಸಿದರೆ ಕೂಡಲೇ ಹಿಂದಿರುಗಿ ಸುದ್ದಿ ನೀಡುವ ಸಲುವಾಗಿ ಸ್ಥಳೀಯ ಕಾಡಿನ ಹೊರವಲಯದಲ್ಲಿ ಮಕ್ಕಳನ್ನು ಹಗಲೂ ರಾತ್ರಿ ಕಾವಲಿರಿಸಲಾಯಿತು, ಮತ್ತು ತಾನಿರುವ ಜಾಗದ ಬಗ್ಗೆ ಹುಲಿಯನ್ನು ಸಂತೃಪ್ತನಾಗಿರಿಸುವ ಸಲುವಾಗಿ ಕಡಿಮೆಬೆಲೆಯ ಮೇಕೆಗಳನ್ನು ಬೇಕೆಂತಲೇ ಅಜಾಕರೂಕತೆಯಿಂದ ಅಲ್ಲಿ ಇಲ್ಲಿ ಬಿಡಲಾಯಿತು. ಉಳಿದಿದ್ದ ಒಂದೇ ಒಂದು ಆತಂಕವೆಂದರೆ ಮೇಮ್‌ಸಾಹೇಬರ ಬೇಟೆಗೆ ಮುನ್ನವೇ ಹುಲಿ ತನ್ನ ಮುದಿವಯಸ್ಸಿನ ದೆಸೆಯಿಂದ ಪ್ರಾಣತೊರೆದರೆ, ಎನ್ನುವುದು. ಹೊಲಗದ್ದೆಗಳ ಕೆಲಸದ ನಂತರ ತಮ್ಮ ಮಕ್ಕಳನ್ನೆತ್ತಿಕೊಂಡು ಕಾಡು ದಾಟುತ್ತಿದ್ದ ತಾಯಂದಿರು ಎಲ್ಲಿ ಈ ಗೌರವಾನ್ವಿತ ಮಂದೆಗಳ್ಳನ ವಿಶ್ರಾಂತಿಯ ನಿದ್ದೆಯನ್ನು ಭಂಗಮಾಡುವೆವೋ ಎಂಬ ಭಯದಿಂದ ತಮ್ಮ ಹಾಡುಗಳನ್ನು ನಿಲ್ಲಿಸಿಬಿಡುತ್ತಿದ್ದರು.
ಹುಣ್ಣಿಮೆಯ, ಮೋಡರಹಿತವಾದ ಆ ಮಹಾರಾತ್ರಿಯೂ ಕೆಲದಿನಗಳಲ್ಲಿಯೇ ಆಗಮಿಸಿತು. ಅನುಕೂಲವಾದ ಜಾಗದಲ್ಲದ್ದ ಮರವೊಂದರ ಮೇಲೆ ಅಟ್ಟಣಿಗೆಯೊಂದನ್ನ ನಿರ್ಮಿಸಲಾಗಿದ್ದು, ಅದರ ಮೇಲೆ ಶ್ರೀಮತಿ ಶರ್ಮಾ ಮತ್ತು ಆಕೆಯ ಸವೇತನ ಸಂಗಾತಿ(ಪೇಯ್ಡ್ ಕಂಪ್ಯಾನಿಯನ್)ಯಾಗಿದ್ದ ಮಿಸ್ ರೇಣು ಹೊಂಚುಹಾಕುತ್ತ ಮುದುಡಿ ಕುಳಿತುಕೊಂಡಿದ್ದರು. ಸರಿಯಾದ ಅಂತರದಲ್ಲಿಯೇ ಅರೆಕಿವುಡಾಗಿದ್ದ ಹುಲಿಗೂ ನೀರವ ರಾತ್ರಿಯೊಂದರಲ್ಲಿ ಕೇಳುವಷ್ಟು ಜೋರಾಗಿ, ನಿಲ್ಲದೆಯೇ ಅರಚಬಲ್ಲ ಸಾಮರ್ಥ್ಯದ ಮೇಕೆಯೊಂದನ್ನು ಕಟ್ಟಿಹಾಕಲಾಗಿತ್ತು. ಪಕ್ಕಾ ಗುರಿಯುಳ್ಳ ರೈಫಲ್ ಮತ್ತು ಸಣ್ಣ ಸೈಜಿನ ಇಸ್ಪೀಟುಕಾರ್ಡ್‌ಗಳೊಂದಿಗೆ ಆ ಆಟಗಾರ್ತಿಯು ತನ್ನ ಶಿಕಾರಿ ಬರುವುದನ್ನೆ ಕಾಯುತ್ತಿದ್ದಳು.
“ನಮಗೇನಾದರೂ ಅಪಾಯವಾದ್ರೆ? ” ಮಿಸ್ ರೇಣು ಉಸುರಿದಳು.
ನಿಜವಾಗಿ ಆಕೆಗೆ ಕಾಡುಪ್ರಾಣಿಯ ಬಗ್ಗೆ ಕೊಂಚವೂ ಭಯವಿರಲಿಲ್ಲ, ಆದರೆ ತನಗೆ ನೀಡಲಾದ ಹಣಕ್ಕೆ ತಕ್ಕುದಾದ್ದಕ್ಕಿಂತ ಒಂದು ಅಣುವಷ್ಟು ಹೆಚ್ಚಿನ ಸೇವೆಯನ್ನು ಮಾಡಬೇಕಾಗಿ ಬರಬಹುದೆನ್ನುವುದರ ಬಗ್ಗೆ ಮಾತ್ರ ಆಕೆಗೆ ಮರಣಭೀತಿಯಿದ್ದಿತು.
“ನಾನ್ಸೆನ್ಸ್,” ಶ್ರೀಮತಿ ಶರ್ಮಾ ಹೇಳಿದಳು; “ಇದು ಬಹಳಾ ಮುದಿಯಾಗಿರೋ ಹುಲಿ. ಬಯಸಿದರೂ ಅದು ಇಲ್ಲಿಯವರೆಗೆ ಹಾರೋಕೆ ಸಾಧ್ಯವೇ ಇಲ್ಲ.”
“ಅದು ಮುದಿಹುಲಿ ಅಂತಾದ್ರೆ ನೀವು ಅದನ್ನ ಇನ್ನೂ ಕಡಿಮೆ ಬೆಲೆಗೆ ತಕ್ಕೋಬಹುದು ಅನ್ನಿಸುತ್ತೆ ನನಗೆ. ಸಾವಿರ ರೂಪಾಯಿ ಬಹಳಾನೇ ಜಾಸ್ತಿಯಾಯ್ತು.”
ರಾಷ್ಟ್ರೀಯತೆ ಅಥವಾ ಪಂಗಡಗಳು ಯಾವುದೇ ಇರಲಿ, ಮಿಸ್ ರೇಣು ಸಾಮಾನ್ಯವಾಗಿ ಹಣದ ಬಗ್ಗೆ ರಕ್ಷಿಸುವ ಹಿರಿಯಕ್ಕನ ಥರದ ಮನೋಭಾವನೆಯನ್ನ ಹೊಂದಿದ್ದಳು. ಆಕೆಯ ಉತ್ಸಾಹಪೂರ್ಣ ಮಧ್ಯಸ್ಥಿಕೆಯಿಂದಾಗಿ ಎಷ್ಟೋಸಾರಿ ದೆಹಲಿಯ ಯಾವುದೋ ಹೋಟೆಲಿನಲ್ಲಿ ಟಿಪ್ಸ್ ನೀಡುವುದರಲ್ಲಿ ಪೋಲಾಗಬಹುದಾಗಿದ್ದ ಹಣ ಉಳಿತಾಯವಾಗಿತ್ತು, ಮತ್ತು ಕಡಿಮೆ ದಯೆಯುಳ್ಳವರು ಹಣ ನೀಡುವಂತಹ ಪರಿಸ್ಥಿತಿಗಳಲ್ಲೂ ಕೂಡ ಆಕೆಯ ಬಳಿಯಿದ್ದ ಹಣ ಆಕೆಗೇ ಅಂಟಿಕೊಂಡಿರುತ್ತ ಇತ್ತು. ಮಾರುಕಟ್ಟೆಯಲ್ಲಿ ಹುಲಿಯ ಅಲ್ಪಾವಶೇಷಗಳ ಬೆಲೆಯ ತಗ್ಗುವಿಕೆಯ ಬಗ್ಗೆ ಆಕೆ ಮಾಡುತ್ತಿದ್ದ ಯೋಚನೆಗಳು ಅದೇ ಪ್ರಾಣಿ ಅಲ್ಲಿ ಪ್ರತ್ಯಕ್ಷವಾಗಿದ್ದರಿಂದಾಗಿ ಮಾಯವಾದವು. ಕಟ್ಟಿಹಾಕಿದ್ದ ಮೇಕೆಯನ್ನು ಕಾಣುತ್ತಲೆ ಹುಲಿಯು ಲಭ್ಯವಿದ್ದ ಆಡಗುದಾಣಗಳ ಉಪಯೋಗವನ್ನು ಪಡೆದುಕೊಳ್ಳುವುದರ ಬದಲಾಗಿ, ದೊಡ್ಡ ಆಕ್ರಮಣ ಮಾಡುವ ಮೊದಲು ಸಣ್ಣ ವಿಶ್ರಾಂತಿಯೊಂದನ್ನು ಪಡೆದುಕೊಳ್ಳುವ ಸಲುವಾಗಿ ತನ್ನ ನಾಲ್ಕೂ ಕಾಲುಗಳನ್ನು ಅಗಲಕ್ಕೆ ಚಾಚಿ ಬಿದ್ದುಕೊಂಡಿತು.
“ಅದಕ್ಕೆ ಖಾಯಿಲೆಯಾಗಿದೆ ಅಂತ ನಂಗನ್ನಿಸುತ್ತೆ” ಮಿಸ್ ರೇಣು ಹಿಂದಿಯಲ್ಲಿ ಜೋರಾಗಿ ಪಕ್ಕದ ಮರದ ಮೇಲೆ ಹೊಂಚುಹಾಕಿ ಕುಳಿತಿದ್ದ ಗ್ರಾಮದ ಮುಖಂಡನಿಗೆ ಕೇಳಲೆಂದು ಹೇಳಿದಳು.
“ಹುಶ್!” ಶ್ರೀಮತಿ ಶರ್ಮಾ ಹೇಳಿದಳು. ಮತ್ತು ಅದೇ ಹೊತ್ತಿಗೆ ಹುಲಿಯು ತನ್ನ ಶಿಕಾರಿಯೆಡೆ ತೆವಳಲು ಆರಂಭಿಸಿತು.
“ಈಗ, ಈಗ!” ಮಿಸ್ ರೇಣು ಸ್ವಲ್ಪ ಸಡಗರದಿಂದ ಪ್ರೋತ್ಸಾಹಿಸಿದಳು; “ಅದು ಮೇಕೆಯನ್ನ ಮುಟ್ಟಲಿಲ್ಲಾ ಅಂದರೆ ಅದಕ್ಕಾಗಿ ನಾವು ಬೆಲೆ ತೆರಬೇಕಾಗಿಲ್ಲ.” (ಮೇಕೆಯ ಬೆಲೆ ಪ್ರತ್ಯೇಕವಾಗಿತ್ತು.)
ಜೋರಾದ ಶಬ್ದದೊಡನೆ ರೈಫಲ್ ಸಿಡಿಯಿತು, ಮತ್ತು ಆ ಬೃಹತ್ ಗಾತ್ರದ ಕಂದುಹಳದಿ ಬಣ್ಣದ ಪ್ರಾಣಿಯು ಒಂದುಕಡೆಗೆ ನೆಗೆದು ಪಕ್ಕಕ್ಕೆ ಹೊರಳಿ ಸಾವಿನ ನಿಶ್ಚಲತೆಯನ್ನು ಪಡೆದುಕೊಂಡಿತು. ಕ್ಷಣವೊಂದರಲ್ಲಿ ಸಂಭ್ರಮಗೊಂಡ ಸ್ಥಳೀಯರ ಗುಂಪೊಂದು ಜಮಾಯಿಸಿ, ಅವರ ಕೂಗುಗಳಿಂದ ಹಳ್ಳಿಗೆ ಸುದ್ದಿ ತಲುಪಿ, ಹಲವಾರು ಟಾಮ್-ಟಾಮ್ಗಳನ್ನು ಬಾರಿಸುವುದರ ಮೂಲಕ ವಿಜಯೋತ್ಸವವನ್ನು ಆಚರಿಸಲಾಯಿತು. ಅವರ ವಿಜಯ ಮತ್ತು ಸಂಭ್ರಮಗಳು ಶ್ರೀಮತಿ ಶರ್ಮಾಳ ಹೃದಯದಲ್ಲಿಯೂ ಪ್ರತಿಧ್ವನಿಸಿದವು; ಕರ್ಜನ್ ರೋಡಿನ ಲಂಚ್ ಪಾರ್ಟಿ ಈಗಾಗಲೇ ಬಹಳ ಹತ್ತಿರವಾದಂತೆ ಭಾಸವಾಗತೊಡಗಿತು.
ಮೇಕೆಯು ಕೆಟ್ಟದಾದ ಬುಲೆಟ್ ಗಾಯವೊಂದರಿಂದ ಸಾವಿಗೆ ಹತ್ತಿರವಾಗಿದೆಯೆಂದೂ, ಹುಲಿಯ ಮೇಲೆ ರೈಫಲಿನ ಕೆಲಸದ ಯಾವ ನಿಶಾನೆಯೂ ಇಲ್ಲವೆಂದೂ ಕಂಡುಹಿಡಿದು ಆಕೆಯ ಗಮನ ಸೆಳೆದವಳು ಮಿಸ್ ರೇಣು ಆಗಿದ್ದಳು. ತಪ್ಪಾದ ಪ್ರಾಣಿ ಗುಂಡೇಟಿಗೆ ಗುರಿಯಾಗಿತ್ತು, ಮತ್ತು ಶಿಕಾರಿಯ ಪ್ರಾಣಿಯು ಇದ್ದಕ್ಕಿದ್ದಂತೆ ಉಂಟಾದ ರೈಫಲಿನ ಶಬ್ದಕ್ಕೆ ಬೆಚ್ಚಿ ಹೃದಯಾಘಾತದಿಂದ ಅಸುನೀಗಿತ್ತು. ಶ್ರೀಮತಿ ಶರ್ಮಾಳಿಗೆ ಈ ವಿಷಯದಿಂದ ಅಸಮಾಧಾನವುಂಟಾಯಿತಾದರೂ ಅದು ಕ್ಷಮಾರ್ಹವಾದ ತಪ್ಪಾಗಿತ್ತು, ಏನೆಂದರೂ ಹುಲಿಯು ಅವಳದಾಗಿತ್ತು, ಮತ್ತು ಸಾವಿರ ರೂಪಾಯಿಗಳನ್ನು ಪಡೆಯಲು ಕಾತುರದಿದಿದ್ದ ಗ್ರಾಮಸ್ಥರು ಆಕೆಯೇ ಹುಲಿಗೆ ಗುಂಡಿಕ್ಕಿದಳೆಂಬ ಸುಳ್ಳನ್ನು ಸಂತಸದಿಂದ ಅನುಮೋದಿಸಿದರು. ಹೇಗಿದ್ದರೂ ಮಿಸ್ ರೇಣು ಆಕೆಯ ಸವೇತನ ಸಂಗಾತಿಯಾಗಿದ್ದವಳು. ಆದ್ದರಿಂದ ಶ್ರೀಮತಿ ಶರ್ಮಾ ಹಗುರವಾದ ಹೃದಯದಿಂದ ಕ್ಯಾಮೆರಾಗಳನ್ನು ಎದುರಿಸಿದಳು ಮತ್ತು ಆಕೆಯ ಚಿತ್ರವು ‘ನವದೆಹಲಿ ವೀಕ್’ನ ‘ವಾರದ ಚಿತ್ರ’ ವಿಭಾಗದಿಂದ ತನ್ನ ಕೀರ್ತಿಯನ್ನು ಎಲ್ಲೆಡೆಗೆ ಹರಡಿತು. ಶ್ರೀಮತಿ ಸುರುಚಿ ವರ್ಮಾಳ ಬಗ್ಗೆ ಹೇಳಬೇಕೆಂದರೆ, ಆಕೆ ಹಲವಾರು ವಾರಗಳವರೆಗೆ ‘ನವದೆಹಲಿ ವೀಕ್’ ಅನ್ನು ನೋಡಲೂ ನಿರಾಕರಿಸಿದಳು ಮತ್ತು ಹುಲಿಯ ಹಲ್ಲಿನ ಬ್ರೋಚ್‌ನ ಉಡುಗೊರೆಗೆ ಪ್ರತಿಯಾಗಿ ಆಕೆ ಕಳುಹಿಸಿದ ಧನ್ಯವಾದಪತ್ರವು ಅದುಮಿಟ್ಟ ಭಾವನೆಗಳಿಗೆ ಮಾದರಿಯಾಗಿದ್ದಿತು. ಲಂಚ್ ಪಾರ್ಟಿಯನ್ನು ಆಕೆ ನಿರಾಕರಿಸಿದಳು; ಕೆಲವು ಎಲ್ಲೆಗಳನ್ನು ದಾಟಿದರೆ ಅದುಮಿಟ್ಟ ಭಾವನೆಗಳೂ ಅಪಾಯಕಾರಿಯಾಗಿಬಿಡುವ ಸಾಧ್ಯತೆಗಳಿವೆ.
ಕರ್ಜನ್ ರೋಡಿನ ಮನೆಯಿಂದ ಹುಲಿಯ ಚರ್ಮದ ಕಂಬಳಿಯು ಆಕೆಯ ಹೊಸಾ ಬಂಗಲೆಗೆ ಪಯಣಿಸಿತು ಮತ್ತು ಅಲ್ಲಿನ ಜನರ ಮೆಚ್ಚುಗೆಗೆ ಪಾತ್ರವಾಯಿತು. ಅಲ್ಲಿನ ದೊಡ್ಡ ಪಾರ್ಟಿಯೊಂದಕ್ಕೆ ಶ್ರೀಮತಿ ಶರ್ಮಾ ಡಯಾನಾ ದೇವತೆಯ ಕಾಸ್ಟ್ಯೂಮ್ ಧರಿಸಿ ಹೋದಾಗ ಅದು ಆಕೆಗೆ ತಕ್ಕುದಾಗಿ ಕಂಡಿತು. ಆದರೆ ರಾಜೀವ್ ಮೆಹ್ತಾ ಆದಿಯುಗದ ಥೀಮಿನ ಡ್ಯಾನ್ಸ್ ಪಾರ್ಟಿಯೊಂದನ್ನು ಆಯೋಜಿಸಿ ಅದರಲ್ಲಿ ಎಲ್ಲರೂ ತಾವು ಬೇಟೆಯಾಡಿದ ಪ್ರಾಣಿಗಳ ಚರ್ಮಗಳನ್ನು ಧರಿಸಬೇಕೆಂದು ಸೂಚಿಸಿದ್ದು ಆಕರ್ಷಕವಾಗಿದ್ದರೂ, ಶ್ರೀಮತಿ ಶರ್ಮಾ ನಿರಾಕರಿಸಿದಳು. “ನನ್ನ ಪರಿಸ್ಥಿತಿ ಸಣ್ಣ ಮಗುವೊಂದರ ಹಾಗಿರಬಹುದು” ರಾಜ್ ಹೇಳಿಕೊಂಡ, “ಒಂದೆರಡು ಕೆಟ್ಟ ಮೊಲದ ಚರ್ಮಗಳಷ್ಟೇ ಇರೋದು ನನ್ನ ಕೈಲಿ, ಆದರೆ,”.. ಡಯಾನಾ ದೇವತೆಯ ದೇಹದ ಅಳತೆಯ ಮೇಲೆ ಆಸೆಯ ಕಣ್ಣೋಟ ಬೀರುತ್ತ ಆತ ಹೇಳಿದ, “ನಾನೂ ಆ ನೃತ್ಯ ಮಾಡುತ್ತಿರೋ ರಶ್ಯನ್ ಯುವಕನಷ್ಟೇ ಸದೃಢನಾಗಿದೀನಿ.”
“ನಿಜವಾಗಿ ಅಲ್ಲಿ ಏನು ನಡೀತೂ ಅಂತ ಗೊತ್ತಾದರೆ ಎಲ್ಲರಿಗೂ ಎಷ್ಟು ತಮಾಷೆ ಅನ್ನಿಸಬಹುದು,” ಮಿಸ್ ರೇಣು ಆ ಪಾರ್ಟಿ ನಡೆದ ಕೆಲದಿನಗಳ ಬಳಿಕ ಹೇಳಿದಳು.
“ನೀನು ಹೇಳ್ತಾ ಇರೋದರ ಅರ್ಥವೇನು?” ಶ್ರೀಮತಿ ಶರ್ಮಾ ಆತುರವಾಗಿ ಕೇಳಿದಳು.
“ಅದೇ, ನೀವು ಮೇಕೆಗೆ ಗುಂಡುಹೊಡೆದು ಹುಲಿ ಹೆದರಿಕೊಂಡು ಸತ್ತುಹೋಯಿತಲ್ಲ,” ಮಿಸ್ ರೇಣು ತನ್ನ ಅಪ್ರಿಯವಾಗಿದ್ದರೂ ಹಿತಕರವಾಗಿದ್ದ ನಗೆಯೊಂದಿಗೆ ಹೇಳಿದಳು.
“ಯಾರೂ ಅದನ್ನ ನಂಬಲಾರರು,” ಶ್ರೀಮತಿ ಶರ್ಮಾ ಹೇಳಿದಳು. ಆಕೆಯ ಮುಖ ವಿನ್ಯಾಸಗಳಿದ್ದ ಪುಸ್ತಕವೊಂದರ ಪುಟಗಳಂತೆ ವೇಗವಾಗಿ ಬಣ್ಣ ಬದಲಾಯಿಸತೊಡಗಿತು.
“ಸುರುಚಿ ವರ್ಮಾ ನಂಬಿಯೇ ನಂಬುತ್ತಾಳೆ,” ಮಿಸ್ ರೇಣು ಹೇಳಿದಳು. ಶ್ರೀಮತಿ ಶರ್ಮಾಳ ಮುಖ ಬಿಳಿಚಿದ ಹಸಿರುವರ್ಣವನ್ನು ತಲುಪಿ ಹಾಗೇ ಉಳಿಯಿತು.
“ನೀನು ನಿಜವಾಗಿ ನನ್ನ ವಿಷಯ ಹೇಳುವುದಿಲ್ಲ ತಾನೆ?” ಆಕೆ ಕೇಳಿದಳು.
“ಹರಿಯಾಣದ ಹಳ್ಳಿಯೊಂದರ ಹತ್ತಿರ ನಾನು ವೀಕೆಂಡ್ ಕಳೆಯಲು ಕಾಟೇಜೊಂದನ್ನ ನೋಡಿದೀನಿ. ಹದಿನಾರೂವರೆ ಲಕ್ಷ ಅಷ್ಟೆ. ಒಳ್ಳೇ ಬೆಲೆ. ತಕರಾರೇ ಇಲ್ಲ. ನನ್ನ ಹತ್ತಿರ ದುಡ್ಡಿಲ್ಲ, ಅಷ್ಟೆ.”
***
ಮಿಸ್ ರೇಣುವಿನ ಮುದ್ದಾದ ವೀಕೆಂಡ್ ಕಾಟೇಜಿಗೆ ‘ಮೃಗಶಿರಾ’ ಎಂದು ಹೆಸರಿಡಲಾಗಿದ್ದು, ಬೇಸಿಗೆಯ ವೇಳೆಯಲ್ಲಿ ಅಲ್ಲಿಯ ತೋಟದ ಅಂಚುಗಳಲ್ಲಿ ಅರಳುವ ಟೈಗರ್-ಲಿಲಿ ಹೂವುಗಳು ಆಕೆಯ ಸ್ನೇಹಿತರ ಅಚ್ಚರಿ ಮತ್ತು ಮೆಚ್ಚುಗೆಗಳಿಗೆ ಪಾತ್ರವಾಗಿವೆ.
ಇದನ್ನೆಲ್ಲ ರೇಣು ಹೇಗೆ ನಿಭಾಯಿಸ್ತಾಳೋ ಎಂದು ಎಲ್ಲರೂ ಹೇಳುತ್ತಾರೆ.
ಶ್ರೀಮತಿ ಶರ್ಮಾ ಈಗ ದೊಡ್ಡಬೇಟೆಗಳಿಗೆ ಹೋಗುವುದಿಲ್ಲ.
“ಸಾಂದರ್ಭಿಕ ಖರ್ಚುಗಳು ಬಹಳ ಭಾರಿಯಾಗಿವೆ” ಆಕೆ ವಿಚಾರಿಸುವ ಸ್ನೇಹಿತರಲ್ಲಿ ತೋಡಿಕೊಳ್ಳುತ್ತಾಳೆ.
ಚಿತ್ರ ಕೃಪೆ: www.leslierohonczy.com

ಪುಷ್ಪವಲ್ಲಿ (ಮೂಲ – ’The Bellflower’ by Guy de Maupassant)

ಕೆಲವು ಹಳೇ ನೆನಪುಗಳು ಎಷ್ಟೊಂದು ವಿಚಿತ್ರವಾಗಿರುತ್ತವೆ ಅಲ್ವೇ? ಆಚೆಗೆ ತಳ್ಳಿಬಿಡೋಣ ಅಂದರೂ ಬಿಡದೆ ಕಾಡುತ್ತಲೆ ಇರುತ್ತವೆ! ಈಗ ನಾನು ಹೇಳೋಕೆ ಹೊರಟಿರೋ ಸಂಗತಿನೂ ಹಾಗೇನೆ, ಅದು ಎಷ್ಟು ಹಳೇದು ಅಂದರೆ ಇನ್ನೂ ಅದು ಇಷ್ಟೊಂದು ಸ್ಪಷ್ಟವಾಗಿ ನನ್ನ ನೆನಪುಗಳಿಗೆ ತಗುಲಿಹಾಕಿಕೊಂಡಿರೋದು ಯಾಕೆ ಅಂತಲೇ ನನಗೆ ಅರ್ಥವಾಗ್ತಾ ಇಲ್ಲ. ಅದಾದಮೇಲಿಂದ ನಾನು ಅದೆಷ್ಟೋ ಭೀಕರ ಘಟನೆಗಳನ್ನ ಕಣ್ಣಾರೆ ನೋಡಿದೀನಿ, ಆದರೆ ಈ ಪುಷ್ಪವಲ್ಲಿಯ ಮುಖ ದಿನಕ್ಕೊಂದು ಸಾರಿಯಾದರೂ ನನ್ನ ಕಣ್ಣೆದುರು ಬಂದೇ ಬರುತ್ತದಲ್ಲ ಅಂತನ್ನೋದು ವಿಚಿತ್ರ ಅನ್ನಿಸ್ತದೆ. ಆಕೆಯ ಮುಖ ಇನ್ನೂ ನನ್ನ ನೆನಪಲ್ಲಿ ಹಾಗೇ ಇದೆ, ನಾನು ಬಹಳಾ ವರ್ಷಗಳ ಹಿಂದೆ ಹತ್ತೋ, ಹನ್ನೆರಡೋ ವಯಸ್ಸಿನಲ್ಲಿ ಆಕೆಯನ್ನು ಕಂಡಿದ್ದ ಹಾಗೇ.
ಅವಳು ಒಬ್ಬ ದರ್ಜಿಯಾಗಿದ್ದಳು ಮತ್ತು ಪ್ರತಿ ಗುರುವಾರ ನನ್ನ ಅಪ್ಪ ಅಮ್ಮನ ಮನೆಗೆ ಅದೂ ಇದೂ ಬಟ್ಟೆ ಹೊಲಿಯುವುದಕ್ಕೋಸ್ಕರ ಬರುವಳು. ನನ್ನ ತಂದೆತಾಯಂದಿರ ಮನೆ ಹಳ್ಳಿಕಡೆಯಲ್ಲಿ ‘ತೊಟ್ಟಿಮನೆ’ ಅಂತ ಕರೀತಾರಲ್ಲ, ಆ ಥರದ ಹೆಂಚಿನ ಮನೆ. ಅದಕ್ಕೆ ಹೊಂದಿಕೊಂಡ ಹಾಗೆ ಮೂರುನಾಲ್ಕು ತೋಟಗಳಿದ್ದವು.
ನಮ್ಮ ಹಳ್ಳಿ ಸುಮಾರು ದೊಡ್ಡದೇ, ಹೆಚ್ಚೂಕಡಿಮೆ ಸಣ್ಣ ಮಾರುಕಟ್ಟೆ ಟೌನೇ ಅನ್ನಬಹುದು. ನಮ್ಮ ಮನೆಯಿಂದ ಹಳ್ಳಿಗೆ ಸುಮಾರು ನೂರು ಯಾರ್ಡ್ ಅಂತರ. ಊರ ನಟ್ಟನಡುವೆ ಒಂದು ದೇವಸ್ಥಾನ, ಭಾಳ ಹಳೇದು, ಕಲ್ಲಿನದು. ಸಮಯ ಕಳೀತಾ ಕಲ್ಲಿನ ಬಣ್ಣವೇ ಗೊತ್ತಾಗದಹಾಗೆ ಕಪ್ಪಗಾಗಿಬಿಟ್ಟಿತ್ತು.
ಸರೀ, ಪ್ರತಿ ಗುರುವಾರ ಪುಷ್ಪವಲ್ಲಿ ಬೆಳಗ್ಗೆ ಆರೂವರೆ ಏಳುಗಂಟೆಗೇ ಹಾಜರಾಗಿಬಿಡೋಳು. ಬರ್ತಾ ಇದ್ದ ಹಾಗೇ ಹೊಲಿಗೆಮೆಶೀನಿದ್ದ ರೂಮಿಗೆ ನುಗ್ಗಿ ಕೂಡಲೆ ಕೆಲಸ ಶುರುಮಾಡಿಬಿಡೋಳು. ತೆಳ್ಳಗೆ ಎತ್ತರಕ್ಕೆ ಇದ್ದ ಅವಳಿಗೆ ಗಡ್ಡ ಇತ್ತು, ಅಥವಾ ಮುಖದ ಮೇಲೆ ಹೆಚ್ಚಿಗೆ ಕೂದಲಿತ್ತು ಅನ್ನಬಹುದು. ಅಚ್ಚರಿಪಡಿಸುವಷ್ಟು ಹೆಚ್ಚಿಗೆ ಗಡ್ಡ ಇದ್ದ ಅವಳ ಮುಖದ ಮೇಲಿನ ಕೂದಲು ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಗುಂಪುಗುಂಪಾಗಿ ಯಾರೋ ಹುಚ್ಚು ಮನುಷ್ಯ ಆ ಅಗಲ ಮುಖದ ಮೇಲೆ ಕೂದಲನ್ನ ಹೊಲಿದಿರುವ ಹಾಗೆ ಬೆಳೆದುಕೊಂಡು ಮಿಲಿಟರಿ ಅಧಿಕಾರಿಯೊಬ್ಬ ಹೆಣ್ಣುವೇಷ ಹಾಕಿದ ಹಾಗೆ ಕಾಣುತ್ತ ಇತ್ತು. ಆಕೆಯ ಮೂಗಿನ ಮೇಲೂ, ಮೂಗಿನಡಿಯಲ್ಲೂ, ಮೂಗಿನ ಸುತ್ತಲೂ, ಗದ್ದದ ಮೇಲೂ, ಕೆನ್ನೆಗಳ ಮೇಲೂ ಕೂದಲಿತ್ತು ಮತ್ತು ಸಾಮಾನ್ಯವಾಗಿ ಇರುವುದಕ್ಕಿಂತ ಬಹಳ ಜಾಸ್ತಿ ದಪ್ಪ ಮತ್ತು ಉದ್ದವಿದ್ದ ಆಕೆಯ ಹುಬ್ಬುಗಳ ಕೂದಲು ಸಾಕಷ್ಟು ಬೆಳ್ಳಿಬಣ್ಣಕ್ಕೆ ತಿರುಗಿದ್ದು ಯಾರೊ ಅಲ್ಲಿ ಮಿಷ್ಟೇಕು ಮಾಡಿಕೊಂಡು ಒಂದು ಜೊತೆ ಮೀಸೆಗಳನ್ನ ಅಂಟಿಸಿದಾರೇನೋ ಅನ್ನಿಸುವ ಹಾಗೆ ಕಾಣುತ್ತಿದ್ದವು.
ಅವಳು ಕುಂಟುತ್ತಿದ್ದಳಾದರೂ ಅದು ಕುಂಟರು ಸಾಮಾನ್ಯವಾಗಿ ಕುಂಟುವ ರೀತಿಯಿರದೆ ಕುರಿಗಳು ಏನನ್ನಾದರೂ ಹತ್ತುವಾಗ ಕುಂಟುವ ರೀತಿ ಇರುತ್ತಿತ್ತು. ಸರಿಯಾಗಿರುವ ಕಾಲಿನ ಮೇಲೆ ತನ್ನ ದೊಡ್ಡ, ಕಂಪಿಸುವ ದೇಹವನ್ನು ಊರುವಾಗಲೆಲ್ಲ ಆಕೆ ಒಂದು ಬೃಹತ್ ಅಲೆಯ ಮೇಲೆ ಸವಾರಿ ಮಾಡಲು ತಯಾರಾಗುತ್ತಿರುವಳೇನೋ ಅನ್ನಿಸುವುದು, ಮತ್ತೆ ಆಕೆ ಅಚಾನಕ್ಕಾಗಿ ಯಾವುದೋ ಗಹ್ವರವೊಂದರಲ್ಲಿ ಮುಳುಗಿ ಮಾಯವಾಗುವ ಹಾಗೆ ಧುಮ್ಮಿಕ್ಕಿ ನೆಲಕ್ಕಿಳಿಯುವಳು. ಆಕೆಯ ನಡಿಗೆ ಚಂಡಮಾರುತದಲ್ಲಿ ಸಿಕ್ಕಿಹಾಕಿಕೊಂಡ ಹಡಗಿನ ಹಾಗಿರುತ್ತಿತ್ತು. ಆಕೆ ಯಾವಾಗಲೂ ತಲೆಯಮೇಲೆ ಹೊದ್ದುಕೊಂಡಿರುವ ಸೆರಗು ಪ್ರತಿಸಾರೆ ಕುಂಟುವಾಗಲೂ ಹಾರಾಡಿಕೊಂಡು ದಿಗಂತದುದ್ದಕ್ಕೂ ಉತ್ತರದಿಂದ ದಕ್ಷಿಣಕ್ಕೆ, ದಕ್ಷಿಣದಿಂದ ಮತ್ತೆ ಉತ್ತರಕ್ಕೆ ಪ್ರಯಾಣಿಸುವ ಥರ ಭಾಸವಾಗುತ್ತ ಇತ್ತು.
ನನಗೆ ಪುಷ್ಪವಲ್ಲಿಯಮ್ಮ ಅಂದರೆ ತುಂಬ ಇಷ್ಟವಿತ್ತು. ಬೆಳಗ್ಗೆ ಎದ್ದತಕ್ಷಣ ಹೊಲಿಗೆಮಿಶೀನಿನ ಕೋಣೆಗೆ ಓಡಿಹೋಗಿ ಅಲ್ಲಿ ಆಕೆ ತನ್ನ ಕಾಲಡಿ ಬೆಚ್ಚಗಾಗಲೆಂದು ಚಾಪೆಯೊಂದನ್ನಿಟ್ಟುಕೊಂಡು ಕೆಲಸದಲ್ಲಿ ನಿಮಗ್ನಳಾಗಿರುವುದನ್ನೆ ನೋಡುತ್ತ ನಿಲ್ಲುವೆ. ನಾನು ಬಂದ ತಕ್ಷಣ ಆಕೆ ನನಗೆ ಆ ಚಳಿ ತುಂಬಿದ ದೊಡ್ಡ ಕೋಣೆಯಲ್ಲಿ ಶೀತವಾಗಬಾರದೆಂದು ತನ್ನ ಚಾಪೆಯನ್ನು ಕೊಡುವಳು.
“ಇದು ನಿನ್ನ ತಲೆಯಿಂದ ರಕ್ತ ಕೆಳಗೆ ಹರಿಯೋಹಾಗೆ ಮಾಡತ್ತೆ” ಅವಳು ನನಗೆ ಹೇಳುವಳು.
ತನ್ನ ಉದ್ದುದ್ದನೆಯ, ವಕ್ರವಾದ ಪರಿಣತ ಬೆರಳುಗಳಿಂದ ಬಟ್ಟೆಯನ್ನು ಹೊಲಿಯುತ್ತ, ತನ್ನ ಕನ್ನಡಕದ ಹಿಂದಿನ ಕಣ್ಣುಗಳಿಂದ ದಿಟ್ಟಿಸುತ್ತ ಆಕೆ ನನಗೆ ಕಥೆ ಹೇಳುವಳು. ವಯಸ್ಸು ಆಕೆಯ ದೃಷ್ಟಿಯನ್ನು ಮಸುಕಾಗಿಸಿತ್ತಾದರೂ ನನಗೆ ಆಕೆಯ ಕಣ್ಣುಗಳು ಅಗಾಧವಾಗಿ, ಇರುವುದಕ್ಕಿಂತ ಎರಡುಪಟ್ಟು ದೊಡ್ಡದಾಗಿವೆಯೇನೊ ಅನ್ನಿಸುತ್ತಿದ್ದವು.
ಆಕೆ ನನಗೆ ಹೇಳುತ್ತಿದ್ದ ಸಂಗತಿಗಳು ಮತ್ತು ಅದರಿಂದ ವಿಚಲಿತವಾಗುತ್ತಿದ್ದ ನನ್ನ  ಹೃದಯವನ್ನು  ನೆನಪಿಸಿಕೊಳ್ಳುವುದಾದರೆ ಆಕೆ ವಿಶಾಲ ಹೃದಯದ ಬಡಹೆಂಗಸಾಗಿದ್ದಳು ಅನ್ನಿಸುತ್ತದೆ. ಹಳ್ಳಿಯಲ್ಲಿ ಏನೇನು ನಡೆಯುತ್ತಿತ್ತು ಎಂದು ಆಕೆ ನನಗೆ ತಿಳಿಸುವಳು. ದೊಡ್ಡಿಯಿಂದ ತಪ್ಪಿಸಿಕೊಂಡ ಹಸುವೊಂದು ಮಲ್ಲಪ್ಪನ ಮಿಲ್ಲಿನ ಬಳಿ ಮಿಶೀನು ತಿರುಗುವುದನ್ನೆ ನೋಡುತ್ತ ನಿಂತಿದ್ದಿದ್ದು, ಚರ್ಚಿನ ಗೋಪುರದ ಮೇಲೆ ಒಂದು ಮೊಟ್ಟೆ ಸಿಕ್ಕಿದ್ದು ಮತ್ತು ಅದನ್ನು ಅಲ್ಲಿಡಲು ಯಾವ ಪ್ರಾಣಿ ಅಲ್ಲಿಯವರೆಗೆ ಹೋಗಿತ್ತು ಎಂದು ಯಾರಿಗೂ ಅರ್ಥವಾಗದೇ ಇದ್ದಿದ್ದು, ಮಳೆಯಲ್ಲಿ ನೆನೆದು ಒದ್ದೆಯಾದವೆಂದು ಒಣಹಾಕಿದ್ದ ಪಿಳ್ಳಯ್ಯನ ಸಾಕ್ಸುಗಳನ್ನು ಕದ್ದುಕೊಂಡುಹೋದ ಭಿಕ್ಷುಕನನ್ನೊಬ್ಬನನ್ನು ಸುಮಾರು ಹದಿನೈದು ಮೈಲಿಗಳವರೆಗೆ ಫಾಲೋ ಮಾಡಿ ಅವನ್ನು ವಾಪಾಸು ತೆಗೆದೊಕೊಂಡು ಬಂದ ಅವನ ನಾಯಿಯ ವಿಚಿತ್ರ ಕಥೆ.. ಇಂತಹ ಕಥೆಗಳನ್ನೆಲ್ಲ ಆಕೆ ನನಗೆ ಹೇಗೆ ಹೇಳುತ್ತಿದ್ದಳೆಂದರೆ ನನ್ನ ಮನಸ್ಸಿನಲ್ಲಿ ಅವು ಮರೆಯಲಾಗದ ನಾಟಕಗಳಂತೆ, ಅದ್ದೂರಿಯಾದ ನಿಗೂಢ ಕವಿತೆಗಳಂತೆ ಮತ್ತು ಕವಿಗಳು ಹುಟ್ಟುಹಾಕಿದ ಅಪೂರ್ವ ಕಥೆಗಳಂತೆ ತೋರುತ್ತಿದ್ದವು ಮತ್ತು ಇವನ್ನೆಲ್ಲ ಸಂಜೆ ನನ್ನಮ್ಮ ನನಗೆ ಹೇಳುತ್ತಿದ್ದಳಾದರೂ ಅವು ಆ ರೈತಾಪಿ ಹೆಂಗಸು ಹೇಳುತ್ತಿದ್ದ ಸಂಗತಿಗಳ ರುಚಿ, ಸಂಪೂರ್ಣತೆ ಅಥವಾ ಚೈತನ್ಯವನ್ನು ಹೊಂದಿರಲಿಲ್ಲ.
ಇಂತಹದೇ ಒಂದು ಗುರುವಾರ ಬೆಳಿಗ್ಗೆಯಿಡೀ ವಲ್ಲಿಯಮ್ಮನ ಮಾತು ಕೇಳುತ್ತ ಕಳೆದು ತೋಟದ ಹಿಂದಿನ ಕಾಡಿನಲ್ಲಿ ಆಳುಗಳ ಜತೆ ನೆಲ್ಲೀಕಾಯಿಗಳನ್ನು ಆರಿಸಿದ ಮೇಲೆ ನನಗೆ ವಲ್ಲಿಯಮ್ಮನ ಕೋಣೆಗೆ ಮತ್ತೆ ಹೋಗಬೇಕೆನಿಸಿತು. ಆ ದಿನ ಇನ್ನೂ ನನಗೆ ನಿನ್ನೆ ನಡೆದ ಹಾಗೆ ನೆನಪಿದೆ.
ಹೊಲಿಗೆಕೋಣೆಯ ಬಾಗಿಲು ದೂಡಿದಾಗ ಆ ದರ್ಜಿ ಮುದುಕಿ ಕುರ್ಚಿಯ ಬಳಿಯ ನೆಲದ ಮೇಲೆ ಬಿದ್ದಿರುವುದು ನನಗೆ ಕಾಣಿಸಿತು. ಆಕೆಯ ಮುಖ ಬೋರಲಾಗಿತ್ತು ಮತ್ತು ಆಕೆಯ ಕೈಗಳು ಉದ್ದಕ್ಕೆ ಚಾಚಿದ್ದವು. ಆದರೆ ಒಂದು ಕೈಯಲ್ಲಿ ಸೂಜಿ ಮತ್ತು ಇನ್ನೊಂದು ಕೈಯಲ್ಲಿ ಒಂದು ಶರ್ಟು ಹಾಗೇ ಇದ್ದವು. ಆಕೆಯ ಹೆಚ್ಚು ಉದ್ದನೆಯ ಕಾಲು ಆಕೆ ಕೂತಿದ್ದ ಕುರ್ಚಿಯಡಿ ಚಾಚಿಕೊಂಡಿತ್ತು ಮತ್ತು ಆಕೆಯಿಂದ ದೂರ ಉರುಳಿಕೊಂಡು ಹೋಗಿದ್ದ ಕನ್ನಡಕ ಗೋಡೆಯ  ಬಳಿ ಹೊಳೆಯುತ್ತಿತ್ತು.
ನಾನು ಜೋರಾಗಿ ಕಿರುಚುತ್ತಾ ಅಲ್ಲಿಂದ ಓಡಿಹೋದೆ. ಅವರೆಲ್ಲ ಓಡುತ್ತ ಬಂದರು ಮತ್ತು ಕೆಲವೇ ನಿಮಿಷಗಳಲ್ಲಿ ವಲ್ಲಿಯಮ್ಮ ಸತ್ತುಹೋದರೆಂದು ನನಗೆ ತಿಳಿಸಿದರು.
ನನ್ನ ಬಾಲಹೃದಯವನ್ನು ಹಿಡಿದಲ್ಲಾಡಿಸಿದ ಆ ಅಗಾಧ, ಮನೋಭೇದಕ, ದಾರುಣವಾದ ನೋವನ್ನು ವಿವರಿಸಲಾರೆ. ನಾನು ಮೆಲ್ಲಗೆ ಹಜಾರಕ್ಕೆ ಹೋಗಿ ದೊಡ್ಡ, ಹಳೆಯ ಕುರ್ಚಿಯೊಂದರ ಆಳಗಳಲ್ಲಿ ಅವಿತು ಕೂತುಕೊಂಡು ಅಳತೊಡಗಿದೆ. ಅಲ್ಲಿಯೇ ನಾನು ಸುಮಾರುಹೊತ್ತು ಕೂತಿರಬೇಕು, ಏಕೆಂದರೆ ರಾತ್ರಿಯಾಯಿತು. ಇದ್ದಕ್ಕಿದ್ದಂತೆ ಅಲ್ಲಿಗೆ ಯಾರೋ ಒಂದು ದೀಪ ಹಿಡಿದುಕೊಂಡು ಬಂದರು..ಅವರಿಗೆ ನಾನು ಕಾಣಿಸಿರಲಿಕ್ಕಿಲ್ಲ..ಮತ್ತು ನನಗೆ ನನಗೆ ಪರಿಚಿತವಿದ್ದ ವೈದ್ಯರ ದನಿಯು ನನ್ನ ಅಪ್ಪ, ಅಮ್ಮನ ಜತೆ ಮಾತನಾಡುವುದು ನನಗೆ ಕೇಳತೊಡಗಿತು.
ಅವರಿಗೆ ಕೂಡಲೆ ಹೇಳಿಕಳಿಸಲಾಗಿತ್ತು ಮತ್ತು ಅವರು ಸಾವಿನ ಕಾರಣವನ್ನು ವಿವರಿಸುತ್ತಿದ್ದಿದ್ದು ನನಗೇನೂ ಅರ್ಥವಾಗಲಿಲ್ಲ. ಆಮೇಲೆ ಅವರು ಕೂತುಕೊಂಡು ಕೊಂಚ ಕಾಫಿ ಮತ್ತು ಬಿಸ್ಕೀಟುಗಳನ್ನು ಸೇವಿಸಿದರು.
ಆವರು ಮಾತನಾಡುತ್ತಲೇ ಇದ್ದರು ಮತ್ತು ಅಂದು ಅವರು ಹೇಳಿದ್ದು ಸಾಯುವವರೆಗೂ ನನ್ನ ಮನಸ್ಸಿನಿಂದ ಮರೆಯಾಗಲಿಕ್ಕಿಲ್ಲ. ನಾನು ಅವರು ಹೇಳಿದ ಮಾತುಗಳನ್ನು ಅಂತೆಯೇ ಪುನರಾವರ್ತಿಸಬಲ್ಲೆ  ಅನ್ನಿಸುತ್ತದೆ ನನಗೆ.
“ಆಹ್!!” ಆತ ಹೇಳಿದರು. “ಪಾಪದ ಹೆಂಗಸು! ನಾನು ಇಲ್ಲಿಗೆ ಬಂದ ದಿನವೇ ಆಕೆ ಕಾಲು ಮುರಿದುಕೊಂಡದ್ದು. ನಾನು ಡ್ಯೂಟಿ ಮುಗಿಸಿ ಕೈತೊಳಿದಿರಲಿಕ್ಕೂ ಇಲ್ಲ, ಅರ್ಜೆಂಟಾಗಿ ಹೇಳಿಕಳಿಸಿದರು. ಬಹಳ ಕೆಟ್ಟ ಕೇಸಾಗಿತ್ತು ಅದು, ಬಹಳ ಕೆಟ್ಟದಾಗಿತ್ತು ಸ್ಥಿತಿ.”
“ಆಗ ಅವಳಿಗೆ ಹದಿನೇಳು ವರ್ಷ ಮತ್ತು ಚೆಂದದ ಹುಡುಗಿ, ಬಲು ಚೆಂದ! ಯಾರಾದರು ನಂಬ್ತಾರೆಯೆ? ನಾನು ಅವಳ ಕಥೇನ ಇದಕ್ಕೆ ಮುಂಚೆ ಹೇಳಿಯೇ ಇಲ್ಲ; ನಿಜ ಹೇಳಬೇಕೆಂದರೆ ಇದು ನನಗೆ ಮತ್ತು ಇನ್ನೊಂದು ವ್ಯಕ್ತಿಗೆ ಮಾತ್ರ ಗೊತ್ತಿರುವುದು, ಹಾಗೂ ಆ ವ್ಯಕ್ತಿ ಈಗ ಈ ಕಡೆಯಲ್ಲೆಲ್ಲು ವಾಸವಾಗಿಲ್ಲ. ಈಗ ಆಕೆ ಸತ್ತುಹೋಗಿರೋದರಿಂದ ನಾನು ಈ ವಿಷಯದ ಬಗ್ಗೆ ಮಾತನಾಡಬಹುದು ಅಂತ ಕಾಣುತ್ತೆ.
ಹಳ್ಳಿಗೆ ಆ ಅಸಿಸ್ಟೆಂಟ್ ಟೀಚರ್ ವಾಸವಾಗಿರಲು ಆಗಷ್ಟೆ ಬಂದಿದ್ದ; ನೋಡಲು ಚೆನ್ನಾಗಿದ್ದ ಅವ ಮಿಲಿಟರಿಯವನ ಹಾಗಿದ್ದ. ಎಲ್ಲ ಹುಡುಗಿಯರೂ ಅವನ ಹಿಂದೆಯೇ ಬಿದ್ದಿದ್ದರೂ ಅವನು ಮಾತ್ರ ತಾತ್ಸಾರದಿಂದಲೆ ಇದ್ದ. ಇದಲ್ಲದೆ ಅವನಿಗೆ ತನ್ನ ಮೇಲಧಿಕಾರಿಯಾಗಿದ್ದ ಶಾಲಾ ಮಾಸ್ತರ ಮುದುಕ ಗೌರೀಶನ ಬಗ್ಗೆ ಬಹಳ ಭಯವಿತ್ತು. ಈ ಗೌರೀಶ ಯಾವಾಗಲೂ ಹಾಸಿಗೆಯಿಂದೇಳುವಾಗ ಎಡಬದಿಗೇ ಏಳುತ್ತಿದ್ದ ಎನ್ನುವ ಹಾಗಿದ್ದ.
ಮುದುಕ ಗೌರೀಶ ಅದಾಗಲೇ ಈಗ ಸತ್ತುಹೋಗಿದಾಳಲ್ಲ, ಅದೇ ಪುಷ್ಪವಲ್ಲಿಯನ್ನ ಕೆಲಸಕ್ಕಿಟ್ಟುಕೊಂಡಿದ್ದ, ಅದು ಆವಾಗ ಆಕೆಯ ಹೆಸರು, ಆಮೇಲೆ ಆಕೆಗೆ ಈಗ ವಲ್ಲಿಯಮ್ಮ ಅಂತ ನೀವೆಲ್ಲ ಕರೀತೀರಲ್ಲ ಆ ಆಡ್ಡಹೆಸರು ಬಂದಿದ್ದು. ಯುವ ಅಸಿಸ್ಟೆಂಟ್ ಮಾಸ್ತರ ಈ ಚೆಂದದ ಹುಡುಗಿಯನ್ನ ತನಗಾಗಿ ಆಯ್ದುಕೊಂಡ ಮತ್ತು ಆ ಹುಡುಗಿಯೂ ಈ ತಾತ್ಸಾರಮನೋಭಾವದ ಯೋಧ ತನ್ನನ್ನು ಆಯ್ಕೆಮಾಡಿಕೊಂಡದ್ದನ್ನೆ ಗೌರವ ಎಂದು ಭಾವಿಸಿದಳು. ಏನಾದರಾಗಲಿ, ಆಕೆ ಆತನನ್ನು ಪ್ರೇಮಿಸತೊಡಗಿದಳು ಮತ್ತು ಆತ ಆಕೆಯನ್ನು ದಿನದ ಹೊಲಿಗೆ ಕೆಲಸವೆಲ್ಲ ಮುಗಿದ ನಂತರ ಶಾಲೆಯ ಹಿಂದೆಯೇ ಇದ್ದ ಹುಲ್ಲಿನ ಬಣವೆಯಲ್ಲಿ ಮೊದಲ ಬಾರಿಗೆ ಭೇಟಿಯಾಗಲು ಬರುವಂತೆ ಮನವೊಲಿಸಿದ.
ಅವಳು ಮನೆಗೆ ಹೋಗುವವಳ ಹಾಗೆ ನಟಿಸಿದಳು ಮತ್ತು ಕೆಳಗೆ ಹೋಗುವುದಕ್ಕೆ ಬದಲಾಗಿ ಅವಳು ಮೇಲೆ ಹೋಗಿ ತನ್ನ ಪ್ರಿಯತಮನಿಗಾಗಿ ಕಾಯುತ್ತ ಹುಲ್ಲಿನಲ್ಲಿ ಅಡಗಿಕೊಂಡಳು. ಕೆಲ ಸಮಯದಲ್ಲೆ ಆತನೂ ಬಂದ, ಮತ್ತು ಆಕೆಯ ಬಳಿ ಚೆಂದದ ಮಾತುಗಳನ್ನಾಡಲು ತೊಡಗಿದ. ಆಗ ಬಣವೆಯಿದ್ದ ಕೊಟ್ಟ್ತಿಗೆಯ ಬಾಗಿಲು ತೆರೆದುಕೊಂಡಿತು ಮತ್ತು ಅಲ್ಲಿ ಕಾಣಿಸಿಕೊಂಡ ಶಾಲಾ ಮಾಸ್ತರ ಕೇಳಿದ
“ಅಲ್ಲೇನು ಮಾಡ್ತಿದೀಯ ಸುಧಾಕರ?”.
ತಾನು ಸಿಕ್ಕಿಹಾಕಿಕೊಳ್ಳುವುದು ಖಚಿತವೆಂದುಕೊಳ್ಳುತ್ತ ಆ ಯುವಕ ಮಾಸ್ತರನ ಯುಕ್ತಿಯೆಲ್ಲ ಎತ್ತಲೋ ಹಾರಿಹೋಯಿತು ಮತ್ತು ಅವ ಪೆದ್ದುಪೆದ್ದಾಗಿ ಉತ್ತರಿಸಿದ: ‘ನಾನು ಹುಲ್ಲಿನ ಮೇಲೆ ಮಲಕೊಂಡು ಕೊಂಚ ವಿಶ್ರಾಂತಿ ತಗೊಳೋಣ ಅಂತ ಬಂದೆ, ಅಷ್ಟೆ ಸಾರ್.’
ಆ ಕೊಟ್ಟಿಗೆ ಬಲು ದೊಡ್ಡದಾಗಿತ್ತು ಮತ್ತೆ ಅಲ್ಲಿ ಸಿಕ್ಕಾಬಟ್ಟೆ ಕತ್ತಲಿತ್ತು. ಸುಧಾಕರ ಆ ಹುಡುಗಿಯನ್ನ ಒಂದು ಕಡೆ ದೂಕಿ ಹೇಳಿದ: ‘ಆಕಡೆಗೆ ಹೋಗಿ ಅವಿತುಕೋ. ನನ್ನ ಪರಿಸ್ಥಿತಿ ಚೆನ್ನಾಗಿಲ್ಲ, ಆದ್ರಿಂದ ದೂರ ಹೋಗಿ ಬಚ್ಚಿಟ್ಟುಕೋ’
ಈ ಪಿಸುಗುಟ್ಟುವಿಕೆಯನ್ನ ಕೇಳಿಸಿಕೊಂಡ ಶಾಲಾಮಾಸ್ತರ ಮುಂದುವರಿಸಿದ: ‘ಯಾಕೆ, ಅಲ್ಲಿ ನೀನೊಬ್ಬನೇ ಇಲ್ಲಾಂತ ಕಾಣುತ್ತೆ.’
’ನಾನೊಬ್ನೇ ಇದೀನಿ ಸಾರ್ ಇಲ್ಲಿ!’
’ಇಲ್ಲ, ಯಾಕಂದ್ರೆ ನೀನು ಮಾತಾಡ್ತಾ ಇದೀಯ.’
’ನಾನು ಆಣೆ ಮಾಡಿ ಹೇಳ್ತೀನಿ ಸಾರ್’
’ನಾನು ಬೇಗದಲೆ ಕಂಡು ಹಿಡೀತೀನಿ’  ಆ ಮುದುಕ ಹೇಳಿದ ಮತ್ತೆ ಕೊಟ್ಟಿಗೆಯ ಬಾಗಿಲಿಗೆ ಎರಡೆರಡು ಬೀಗ ಹಾಕಿ ಬೆಳಕು ತರಲು ಹೊರಹೋದ.
ಇಂಥಾ ಪರಿಸ್ಥಿತಿಗಳಲ್ಲಿ ಕೆಲವೊಮ್ಮೆ ಹೇಡಿಗಳು ಕಂಡುಬರುವ ಹಾಗೆ ಆ ಯುವಕ ತನ್ನ ಸ್ಥಿಮಿತ ಕಳೆದುಕೊಂಡು ಇದ್ದಕ್ಕಿದ್ದಹಾಗೆ ಕುಪಿತನಾಗಿ ಪದೇಪದೇ ಹೇಳತೊಡಗಿದ: ‘ಬಚ್ಚಿಟ್ಟುಕೋ, ಅವನು ನಿನ್ನನ್ನ ಕಂಡುಹಿಡೀಕೂಡದು. ನಿನ್ನಿಂದ ನನ್ನ ಜೀವನವಿಡೀ ಸಂಪಾದನೆಗೆ ಸಂಚಕಾರ ಬಂದುಬಿಡತ್ತೆ; ನಿನ್ನಿಂದಾಗಿ ನನ್ನ ವೃತ್ತಿಜೀವನವೇ ಹಾಳಾಗಿಹೋಗತ್ತೆ! ಮೊದ್ಲು ಅವಿತುಕೋ!’
ಅವರಿಗೆ ಮತ್ತೆ ಬೀಗ ತೆರೆಯುವ ಸದ್ದು ಕೇಳಿಸಿತು ಮತ್ತು ಪುಷ್ಪವಲ್ಲಿ ಬೀದಿಯ ಕಡೆಗೆ ಇದ್ದ ಕಿಟಕಿಯ ಕಡೆಗೆ ಓಡಿ ಬಲುಬೇಗನೆ ಅದನ್ನು ತೆರೆದವಳೇ ತಗ್ಗಿದ ಆದರೆ ನಿರ್ಣಾಯಕ  ದನಿಯಲ್ಲಿ ಹೇಳಿದಳು:
‘ಆತ ಹೋದ ನಂತರ ನೀನು ಬಂದು ನನ್ನನ್ನ ಕರೆದುಕೊಂಡು ಹೋಗಬೇಕು,’ ಮತ್ತೆ ಅವಳು ಹೊರಗೆ ಹಾರಿದಳು.
ಮುದುಕ ಗೌರೀಶಪ್ಪನಿಗೆ ಯಾರೂ ಕಾಣಲಿಲ್ಲ ಮತ್ತು ಅಚ್ಚರಿಪಡುತ್ತ ಆತ ಕೆಳಗೆ ಹೊರಟುಹೋದ! ಕಾಲುಗಂಟೆ ಕಳೆದನಂತರ ಸುಧಾಕರ ನನ್ನ ಹತ್ತಿರ ಬಂದವನೇ ತನ್ನ ಸಾಹಸದ ಬಗ್ಗೆ ತಿಳಿಸಿದ. ಆ ಹುಡುಗಿ ಎರಡನೆ ಮಹಡಿಯಿಂದ ಬಿದ್ದಿದ್ದರಿಂದ ಏಳಲಿಕ್ಕಾಗದೆ ಗೋಡೆಗೆ ಒರಗಿಕೊಂಡು ಕೂತೇ ಇದ್ದಳು. ನಾನು ಅವನ ಜತೆ ಆಕೆಯನ್ನ ಕರೆದುಕೊಂಡು ಹೋಗಲು ಹೋದೆ. ಮಳೆ ಜೋರಾಗಿ ಸುರಿಯುತ್ತಲೇ ಇತ್ತು ಮತ್ತು ಆ ದುರದೃಷ್ಟವಂತೆಯಾದ ಹುಡುಗಿಯನ್ನ ನನ್ನ ಮನೆಗೆ ಕರೆದುಕೊಂಡು ಬಂದೆ, ಏಕೆಂದರೆ ಆಕೆಯ ಬಲಗಾಲು ಮೂರು ಜಾಗಗಳಲ್ಲಿ ಮುರಿದುಹೋಗಿತ್ತು ಮತ್ತು ಮೂಳೆಗಳು ಮಾಂಸದಿಂದ ಈಚೆಗೆ ಬಂದುಬಿಟ್ಟಿದ್ದವು. ಅವಳು ನೋವಿನ ಬಗ್ಗೆ ಏನೂ ದೂರು ಹೇಳಲಿಲ್ಲ, ಆದರೆ ಶ್ಲಾಘನೀಯವೆನ್ನಬಹುದಾದ ತಾಳ್ಮೆಯೊಂದಿಗೆ ಉಸುರಿದಳು: ‘ನನಗೆ ಶಿಕ್ಷೆ ದೊರಕಿತು, ಒಳ್ಳೆಯ ಶಿಕ್ಷೆಯೇ ದೊರಕಿತು!’
ನಾನು ಸಹಾಯಕ್ಕಾಗಿ ಹೇಳಿಕಳಿಸಿದೆ ಮತ್ತು ಆಕೆಯ ಸ್ನೇಹಿತರನ್ನೂ ಕರೆಸಿದೆ ಮತ್ತು ಅವರಿಗೆಲ್ಲ ಆಕೆಯನ್ನು ನನ್ನ ಮನೆಯೆದುರಿಗೆ ಯಾವುದೋ ಗಾಡಿ ಗುದ್ದಿ ತಪ್ಪಿಸಿಕೊಂಡು ಹೊರಟುಹೋಯಿತೆಂದು ಎಂಥದೋ ಕಥೆಕಟ್ಟಿ ಹೇಳಿದೆ. ಅವರು ಅದನ್ನು ನಂಬಿದರು ಮತ್ತು ಪೊಲೀಸರು ಒಂದು ತಿಂಗಳವರೆಗೆ ಈ ಅಪಘಾತಕ್ಕೆ ಯಾರು ಕಾರಣರಿರಬಹುದು ಎಂದು ಹುಡುಕಾಡಿ ತಲೆಕೆಡಿಸಿಕೊಂಡರು.
ಅಷ್ಟೆ! ಈಗ ನಾನು ಹೇಳುವುದೇನೆಂದರೆ ಈ ಹುಡುಗಿ ಒಬ್ಬ ಹೀರೋಯಿನ್ ಮತ್ತು ಇತಿಹಾಸದಲ್ಲಿ ದೊಡ್ಡದೊಡ್ಡ ಸಾಧನೆ ಮಾಡಿದವರಷ್ಟು ದಮ್ ಇರುವವಳಾಗಿದ್ದಳು ಅಂತ.
ಅದು ಆಕೆಯ ಏಕೈಕ ಪ್ರೇಮಸಂಬಂಧವಾಗಿತ್ತು, ಮತ್ತು ಆಕೆ ಕುಮಾರಿಯಾಗಿಯೇ ಸತ್ತಳು. ಆಕೆ ಒಬ್ಬ ಹುತಾತ್ಮಳಾಗಿದ್ದಳು, ಒಂದು ಉದಾತ್ತ ಆತ್ಮವನ್ನು ಹೊಂದಿದ ಶ್ರೇಷ್ಠ ಹೆಣ್ಣಾಗಿದ್ದಳು! ಆಕೆಯನ್ನು ಬಹಳ ಗೌರವಿಸದೆ ಹೋಗಿದ್ದಲ್ಲಿ ನಾನು ಈ ಕಥೆಯನ್ನು ನಿಮಗೆ ಹೇಳುತ್ತಿರಲಿಲ್ಲ ಮತ್ತು ಆಕೆ ಬದುಕಿದ್ದಾಗ ಯಾರಿಗೂ ಹೇಳಲೂ ಇಲ್ಲ; ಯಾಕೆ ಅಂತ ನಿಮಗೆ ಅರ್ಥವಾಗಿರಬಹುದು.”
ವೈದ್ಯರು ಮಾತು ನಿಲ್ಲಿಸಿದರು; ಅಮ್ಮ ಅಳುತ್ತಿದ್ದಳು ಮತ್ತು ಅಪ್ಪ ಏನೋ ಹೇಳಿದ್ದು ನನಗೆ ಸರಿಯಾಗಿ ತಿಳಿಯಲಿಲ್ಲ; ಆಮೇಲೆ ಅವರೆಲ್ಲ ಕೋಣೆಯಿಂದ ಆಚೆ ಹೋದರು. ನಾನು ಕುರ್ಚಿಯ  ಮೇಲೆ ಮಂಡಿಯೂರಿ ಕುಳಿತು ಅಳುತ್ತಲೇ ಇದ್ದೆ. ಆಗಲೆ ನನಗೆ ಭಾರವಾದ ಹೆಜ್ಜೆಗಳು ಮತ್ತು ಸ್ಟೇರ್‌ಕೇಸಿಗೆ  ಏನೋ ತಗುಲುತ್ತಿರುವಹಾಗೆ ವಿಚಿತ್ರವಾದ ಸದ್ದುಗಳು ಕೇಳಿದವು.
ಅವರು ಪುಷ್ಪವಲ್ಲಿಯ ದೇಹವನ್ನು ಕೊಂಡೊಯ್ಯುತ್ತ ಇದ್ದರು.
ಚಿತ್ರಕೃಪೆ: http://www.toruiwaya.com

ಒಬ್ಬ ಮರ್ಯಾದಸ್ಥ ಮಹಿಳೆ (A Respectable Woman – Kate Chopin)

ಕೇಟ್ ಶೋಪಿನ್(ಹುಟ್ಟುನಾಮ ಕ್ಯಾಥರೀನ್ ಓ’ಫ್ಲಾಹರ್ಟಿ, ಫೆಬ್ರುವರಿ 7, 1850 – ಆಗಸ್ಟ್  22, 1904)ಳನ್ನು 20ನೇ ಶತಮಾನದ ಸ್ತ್ರೀವಾದಿ ಲೇಖಕಿಯರಲ್ಲಿ ಅಗ್ರಗಾಮಿಯೆಂದು ಪರಿಣಿಸಲಾಗುತ್ತದೆ. ಆಕೆಯ ಪ್ರಮುಖ ಕಥೆಗಳೆಂದರೆ – ‘ಡಿಸೈರೀಸ್ ಬೇಬಿ’, ‘ದ ಸ್ಟೋರಿ ಆಫ್ ಆನ್ ಅವರ್’, ಹಾಗೂ ‘ದ ಸ್ಟಾರ್ಮ್’. ಇದಲ್ಲದೆ ಆಕೆ ಕಾದಂಬರಿಗಳನ್ನೂ ರಚಿಸಿದ್ದಾಳೆ. ಕೇಟ್‌ಳ ಕಥೆಗಳು ಅಮೆರಿಕಾದ ಲೂಯಿಸಿಯಾನಾ ಪ್ರಾಂತ್ಯದಲ್ಲಿ ಕೇಂದ್ರಿತವಾಗಿವೆ. ಆಕೆಯ ಸ್ಥಳೀಕ ಕಥಾನಿರೂಪಣಾ ಶೈಲಿ ಬಹಳ ವಿಶಿಷ್ಟವಾಗಿದೆ. ಕೇಟಳ ಸಾವಿನ ನಂತರ ಆಕೆಯನ್ನು ಅಂದಿನ ಪ್ರಮುಖ ಲೇಖಕಿಯೆಂದು ಗುರುತಿಸಲಾಯಿತು.
ಮಿಸೆಸ್ ಬರೋಡಾಗೆ ಸೊಲ್ಪ ಕೋಪ ಬಂದುಬಿಟ್ಟಿತ್ತು. ಆಕೆಯ ಗಂಡ ತನ್ನ ಸ್ನೇಹಿತನಾದ ಪೂರ್ಣಚಂದ್ರನನ್ನು ಒಂದೆರಡುವಾರ ತಮ್ಮ ಪ್ಲಾಂಟೇಶನ್ನಿನಲ್ಲಿ ಕಳೆಯೋಕೆ ಆಹ್ವಾನಿಸಿದ್ದೇ ಇದಕ್ಕೆ ಕಾರಣ.
ಆ ಚಳಿಗಾಲ ಅವರುಗಳು ತಮ್ಮ ಮನೆಯಲ್ಲಿ ಸಿಕ್ಕಾಬಟ್ಟೆ ಆದರಾತಿಥ್ಯ ನಡೆಸಿದ್ದರು ಮತ್ತು ಬೆಂಗಳೂರಿನಲ್ಲಿಯೂ ಸುಮಾರು ದಿನಗಳ ಕಾಲ ಪಾರ್ಟಿ, ಕುಡಿತ, ಅದೂ ಇದೂ ಅಂತ ಎಲ್ಲಾ ರೀತಿಯಲ್ಲಿ ವ್ಯರ್ಥವಾಗಿ ಕಳೆದಿದ್ದೂ ಆಗಿತ್ತು. ಈಗ ಆಕೆ ಕೊಂಚ ವಿಶ್ರಾಂತಿ ಮತ್ತು ಗಂಡನ ಜತೆಗೆ ಅಡ್ಡಿತಡೆಗಳಿಲ್ಲದ ಸರಸ ಸಲ್ಲಾಪದ ದಿನಗಳನ್ನ ಬಯಸಿ ಎದುರು ನೋಡುತ್ತಿದ್ದಾಗ ಆತ ಈ ಪೂರ್ಣಚಂದ್ರ ಒಂದೆರಡು ವಾರಗಳ ಕಾಲ ತಮ್ಮೊಂದಿಗೆ ಇರಲಿರುವನೆಂಬ ಸುದ್ದಿ ಕೊಟ್ಟ.
ಈ ಮನುಷ್ಯನ ಬಗ್ಗೆ ಆಕೆ ಬಹಳಷ್ಟು ಕೇಳಿದ್ದಳಾದರೂ ಆತನನ್ನು ಭೇಟಿಯಾಗಿದ್ದಿಲ್ಲ. ಕಾಲೇಜಿನಲ್ಲಿ ಆಕೆಯ ಗಂಡನ ಸಹಪಾಠಿಯಾಗಿದ್ದು ಈಗ ಪತ್ರಕರ್ತನಾಗಿದ್ದ ಪೂರ್ಣಚಂದ್ರ ಜನರ ಜತೆ ಅಷ್ಟೇನೂ ಬೆರೆಯುತ್ತಿರಲಿಲ್ಲವಾಗಿದ್ದು ಆಕೆ ಇಲ್ಲಿಯವರೆಗೆ ಆತನನ್ನು ಭೇಟಿಯಾಗದಿದ್ದುದಕ್ಕೆ ಇದ್ದ ಕಾರಣಗಳಲ್ಲಿ ಬಹುಶಃ ಒಂದಾಗಿತ್ತು ಅನ್ನಿಸುತ್ತದೆ. ಆದರೆ ತನಗೇ ಅರಿವಿಲ್ಲದ ಹಾಗೆ ಆಕೆ ಅವನ ಒಂದು ಇಮೇಜನ್ನ ತನ್ನ ಮನಸ್ಸಿನಲ್ಲಿ ಕಟ್ಟಿಕೊಂಡಿದ್ದಳು. ಆಕೆಯ ಪ್ರಕಾರ ಪೂರ್ಣಚಂದ್ರನೆಂದರೆ ಎತ್ತರವಾಗಿದ್ದು, ತೆಳ್ಳಗೆ, ಸಿನಿಕನಾಗಿರುವ, ಕನ್ನಡಕ ಹಾಕಿಕೊಂಡು ತನ್ನ ಜೇಬುಗಳೊಳಗೆ ಕೈಗಳನ್ನು ಇಳಿಬಿಟ್ಟ ಒಬ್ಬ ಮನುಷ್ಯ. ಈ ಕಲ್ಪನೆಯ ಮನುಷ್ಯ ಆಕೆಗೆ ಇಷ್ಟವೇ ಇರಲಿಲ್ಲ. ಪೂರ್ಣಚಂದ್ರ ನಿಜವಾಗಿ ತೆಳ್ಳಗಿದ್ದರೂ ಬಹಳ ಎತ್ತರವೂ ಇರಲಿಲ್ಲ ಅಥವಾ ಸಿನಿಕಪ್ರವೃತ್ತಿಯವನಾಗಿರಲಿಲ್ಲ; ಆತ ಕನ್ನಡಕ ಹಾಕುತ್ತ ಇರಲಿಲ್ಲ ಮತ್ತೆ ತನ್ನ ಕೈಗಳನ್ನ ಜೇಬುಗಳಲ್ಲಿ ಇಳಿಬಿಟ್ಟುಕೊಳ್ಳುತ್ತಲೂ ಇರಲಿಲ್ಲ. ಆತನನ್ನು ಮೊದಲಬಾರಿಗೆ ಭೇಟಿಯಾದಾಗ ಮಿಸೆಸ್ ಬರೋಡಾಗೆ ಆತ ಮೆಚ್ಚುಗೆಯಾದ ಕೂಡಾ.
ಆದರೆ ಆಕೆ ಪೂರ್ಣಚಂದ್ರನನ್ನು ಮೆಚ್ಚಿಕೊಂಡಿದ್ದು ಯಾಕೆ ಎಂದು ತನಗೆ ತಾನೇ ಪ್ರಶ್ನೆ ಹಾಕಿಕೊಳ್ಳಲು ಸೊಲ್ಪ ಪ್ರಯತ್ನಪಟ್ಟಾಗಲೂ ತೃಪ್ತಿಕರ ಉತ್ತರ ಕೊಟ್ಟುಕೊಳ್ಳುವುದು ಆಕೆಗೆ ಸಾಧ್ಯವಾಗಲಿಲ್ಲ. ಆಕೆಯ ಗಂಡ ಯಶವಂತ ಆಗಾಗ ತನ್ನಲ್ಲಿದೆ ಅಂತ ಹೇಳಿಕೊಳ್ಳುವ ಜಾಣತನ ಅಥವಾ ಭರವಸೆ ಮೂಡಿಸುವ ಗುಣಗಳನ್ನಾಗಲೀ ಈತನಲ್ಲಿ ಆಕೆಗೆ ಕಂಡುಹಿಡಿಯಲಿಕ್ಕೇ ಆಗಲಿಲ್ಲ. ಇದಕ್ಕೆ ವಿರುದ್ಧವಾಗಿ ಅತಿಥಿಯನ್ನು ಮನೆಗೆ ಹೊಂದಿಕೊಳ್ಳುವಂತೆ ಮಾಡುವ ಆಕೆಯ ಆತುರದ ಚಟಪಟ ಮಾತುಗಾರಿಕೆ ಮತ್ತು ಯಶವಂತನ ನೇರ ಮಾತುಕತೆಯ ಆತಿಥ್ಯದೆದುರು ಪೂರ್ಣಚಂದ್ರ ಮೂಕಪ್ರೇಕ್ಷಕನ ಹಾಗೆ ಕೂತೇ ಇದ್ದ. ಆಕೆಯ ಜತೆ ಆತನ ನಡವಳಿಕೆ ಒಬ್ಬ ಮಹಿಳೆ ಹೇಗೆ  ಬಯಸುವಳೋ ಹಾಗೇ ಇತ್ತಾದರೂ ಆತ ಆಕೆಯಿಂದ ಮೆಚ್ಚುಗೆ ಅಥವಾ ಗೌರವ ಪಡೆಯುವ ಯಾವ ವಿಶೇಷ ಪ್ರಯತ್ನವನ್ನೂ ಮಾಡಲಿಲ್ಲ.
ಪ್ಲಾಂಟೇಶನ್ನಿಗೆ ಬಂದು ಇರಲಾರಂಭಿಸಿದ ಮೇಲೆ ಆತನಿಗೆ ವಿಶಾಲವಾದ ಪೋರ್ಟಿಕೋದಲ್ಲಿದ್ದ ಕಾರಿಂಥಿಯನ್ ಶೈಲಿಯ ಕಂಬದ ನೆರಳಿನಲ್ಲಿ ಕೂತುಕೊಂಡು ಆರಾಮವಾಗಿ ಸಿಗಾರ್ ಸೇದುತ್ತಾ ಯಶವಂತನ ಸಕ್ಕರೆ ಬೆಳೆಯುವ ಅನುಭವಗಳ ಬಗ್ಗೆ ಆಸಕ್ತಿಯಿಂದ ಕೇಳುತ್ತಾ ಇರುವುದು ಇಷ್ಟವೇನೋ ಅನ್ನುವ ಥರ ಕಾಣತೊಡಗಿತು.
ಕಬ್ಬಿನ ಗದ್ದೆಗಳನ್ನು ಸವರುತ್ತ ಬರುವ ಸುಗಂಧಪೂರಿತ ಗಾಳಿ ಅತನನ್ನು ಬೆಚ್ಚಗೆ, ವೆಲ್ವೆಟಿನಂತೆ ಸವರಿದಾಗೆಲ್ಲ ಆತ ಆಳವಾದ ಸಂತೃಪ್ತಿಯೊಡನೆ “ಇದೇ, ಇದನ್ನೇ ನಾನು ಬದುಕು ಅಂತ ಕರೆಯೋದು,” ಎಂದು ಉಸುರುವನು. ಆತನಿಗೆ ತನ್ನ ಕಾಲುಗಳಿಗೆ ಮೈ ತಿಕ್ಕಿಕೊಳ್ಳುತ್ತ ಬಳಿ ಬರುವ ದೊಡ್ಡ ನಾಯಿಗಳ ಜತೆ ಆತ್ಮೀಯವಾಗಿ ವರ್ತಿಸುವುದು ಬಹಳ ಖುಶಿಕೊಡುತ್ತಿತ್ತು. ಮೀನು ಹಿಡಿಯುವುದು ಆತನಿಗೆ ಇಷ್ಟವಿದ್ದಹಾಗೆ ಕಾಣಲಿಲ್ಲ ಮತ್ತು ಯಶವಂತ ಮೊಲದ ಶಿಕಾರಿ ಮಾಡಲು ಕರೆದಾಗಲೂ ಅವನು ಅಂತಹಾ ಆಸಕ್ತಿಯನ್ನೇನೂ ತೋರಲಿಲ್ಲ.
ಮಿಸೆಸ್ ಬರೋಡಾಳಿಗೆ ಪೂರ್ಣಚಂದ್ರನ ವ್ಯಕ್ತಿತ್ವ ಒಗಟಿನಂತೆ ಕಂಡುಬಂದರೂ ಆಕೆಗೆ ಆತ ಇಷ್ಟವಾದ. ಆತ ಒಬ್ಬ ಪ್ರೀತಿಪಾತ್ರನಾದ, ಸೌಮ್ಯ ವ್ಯಕ್ತಿಯಾಗಿದ್ದ. ಕೆಲವು ದಿನಗಳ ನಂತರ, ಆತನನ್ನು ಮೊದಲ ದಿನ ಕಂಡಿದ್ದಕ್ಕಿಂತ ಒಂದು ಚೂರೂ ಜಾಸ್ತಿ ಅರ್ಥಮಾಡಿಕೊಳ್ಳಲು ಅಸಾಧ್ಯ ಅನಿಸಿದಾಗ ಅದರ ಬಗ್ಗೆ ವಿಚಾರಮಾಡುವುದನ್ನ ಬಿಟ್ಟರೂ ಆಕೆಯೊಳಗಿನ ಕಿರಿಕಿರಿ ಕಡಿಮೆಯಾಗಲಿಲ್ಲ. ಇದೇ ಮೂಡಿನಲ್ಲಿ ಅವಳು ತನ್ನ ಅತಿಥಿ ಮತ್ತು ಗಂಡನನ್ನು ಹೆಚ್ಚಾಗಿ ಏಕಾಂತದಲ್ಲಿರಲು ಬಿಟ್ಟು ಹೋಗಿಬಿಡುತ್ತಿದ್ದಳು. ಇದರಿಂದಲೂ ಪೂರ್ಣಚಂದ್ರನಿಗೆ ಬೇಸರವಾಗದೇ ಇರುವುದನ್ನು ಕಂಡು ಆಕೆ ಬೇಕೆಂದೇ ತನ್ನನ್ನು ಅವನ ಮೇಲೆ ಹೇರತೊಡಗಿದಳು; ಉದಾಹರಣೆಗೆ  ಆತ ಮಿಲ್ ಕಡೆಗೆ ಅಥವಾ ಆಲೆಮನೆಯ ಕಡೆಗೆ ಏಕಾಂತವಾಗಿ ವಾಕ್ ಹೊರಟಾಗ ಇವಳೂ ಜತೆಗೆ ಹೋಗುವಳು. ಆತ ತನ್ನ ಸುತ್ತ ತನಗರಿವಿಲ್ಲದೆಯೇ ನಿರ್ಮಿಸಿಕೊಂಡಿದ್ದ ಗಾಂಭೀರ್ಯವನ್ನು ಮುರಿಯಲು ಆಕೆ ಎಡೆಬಿಡದೆ ಪ್ರಯತ್ನಿಸಿದಳು.
“ಯಾವಾಗ ಹೋಗುತ್ತಾನವನು-ನಿಮ್ಮ ಸ್ನೇಹಿತ?” ಒಂದು ದಿನ ಆಕೆ ಯಶವಂತನನ್ನು ಕೇಳಿದಳು. “ನನ್ನ ಮಟ್ಟಿಗೆ ಹೇಳೋದಾದರೆ ನನಗೆ ಸಿಕ್ಕಾಬಟ್ಟೆ ಬೇಸತ್ತುಹೋಗಿದೆ ಅವನಿಂದ.”
“ಇನ್ನೊಂದು ವಾರದವರೆಗೂ ಇಲ್ಲ ಡಿಯರ್. ನಂಗೆ ಅರ್ಥವಾಗ್ತಾ ಇಲ್ಲ; ಅವನು ನಿಂಗೇನೂ ತೊಂದರೆ ಕೊಡ್ತಾ ಇಲ್ಲ.”
“ಇಲ್ಲ. ತೊಂದರೆ ಕೊಟ್ರೇ ಅವನನ್ನ ಜಾಸ್ತಿ ಮೆಚ್ಚಿಕೋಬಹುದು; ಅವನು ಬೇರೆಯೋರ ಹಾಗಿದ್ದರೆ, ನಾನು ಅವನ ಆರಾಮ ಮತ್ತೆ ಮನರಂಜನೆಗೆ ಏನಾದರೂ ಏರ್ಪಾಡು ಮಾಡುವ ಹಾಗಿದ್ದರೆ.”
ಯಶವಂತ ತನ್ನ ಮಡದಿಯ ಮುದ್ದು ಮುಖವನ್ನ ತನ್ನ ಬೊಗಸೆಯ ಮಧ್ಯ ಇರಿಸಿ ಆಕೆಯ ಯೋಚನಾಕ್ರಾಂತ ಕಣ್ಣುಗಳನ್ನು ಮೃದುವಾಗಿ ನಗುತ್ತ ದಿಟ್ಟಿಸಿದ.
ಅವರಿಬ್ಬರೂ ಮಿಸೆಸ್ ಬರೋಡಾಳ ಡ್ರೆಸಿಂಗ್ ರೂಮಿನಲ್ಲಿ ಕೊಂಚ ಆಪ್ತವಾದ ಮಾತುಕತೆ ನಡೆಸುತ್ತ ಇದ್ದರು.
“ನನ್ನ ಹೆಣ್ಣೆ, ನೀನು ಎಷ್ಟೊಂದು ಆಚ್ಚರಿ ಉಂಟುಮಾಡುತ್ತೀ,” ಆತ ಆಕೆಗೆ ಹೇಳಿದ. “ನೀನು ಮಾಮೂಲು ಪ್ರಸಂಗಗಳಲ್ಲೂ ಹೇಗೆ ನಡೆದುಕೊಳ್ತೀಯ ಅಂತ ನಾನೂ ಕೂಡ ಹೇಳೋಕೆ ಸಾಧ್ಯವಾಗೋದಿಲ್ಲ.” ಆತ ಆಕೆಗೆ ಮುತ್ತೊಂದನ್ನು ನೀಡಿ ತನ್ನ ಕಫ್ಲಿಂಕ್ ಹಾಕಿಕೊಳ್ಳಲು ಕನ್ನಡಿಯ ಕಡೆ ತಿರುಗಿಕೊಂಡ.
“ನೀನು ನೋಡು ಹೇಗಿದೀಯ,” ಆತ ಮುಂದುವರೆಸಿದ, “ಆ ಪಾಪದ ಪೂರ್ಣಚಂದ್ರನ ಬಗ್ಗೆ ಇಲ್ಲಸಲ್ಲದ ಗಲಾಟೆ ಮಾಡ್ತಾ ಇದೀಯ, ಅವ ಇದನ್ನ ಬಯಸಲಿಕ್ಕೇ ಇಲ್ಲ.”
“ಗಲಾಟೆ!” ಆಕೆ ತೀಕ್ಷ್ಣವಾಗಿ ನುಡಿದಳು. “ನಾನ್ಸೆನ್ಸ್! ನೀವು ಹೀಗೆ ಹೇಳಬೋದಾದ್ರೂ ಹೇಗೆ? ಗಲಾಟೇನೇ, ನಿಜ್ವಾಗ್ಲೂ! ಆದ್ರೆ ನೀವೇ ಹೇಳಿದ್ರಲ್ಲಾ, ಅವ ಬಹಳ ಜಾಣ ಅಂತ.”
“ಹೌದು, ಅವ ಜಾಣನೇ. ಆದರೆ ಪಾಪದ ಮನುಷ್ಯ, ವಿಪರೀತ ಕೆಲಸದಿಂದ ದಣಿದುಹೋಗಿದಾನೆ. ಅದಕ್ಕೇ ನಾನು ಅವನಿಗೆ ಒಂದು ವಿಶ್ರಾಂತಿ ತಗೊ ಅಂತ ಹೇಳಿದ್ದು.”
“ನೀವೇ ಹೇಳ್ತಿದ್ರಲ್ಲ, ಅವನು ಬಹಳ ಐಡಿಯಾಗಳನ್ನ ಹೊಂದಿರೋ ಮನುಷ್ಯ ಅಂತ,” ಅವಳು ಸುಮ್ಮನಾಗದೆ ಮತ್ತೆ ಕೊಂಕು ನುಡಿದಳು. “ನಾನು ಅವ ಕುತೂಹಲ ಮೂಡಿಸೋವಂಥ ವ್ಯಕ್ತಿಯಾಗಿರಬಹುದು ಅನ್ಕೊಂಡಿದ್ದೆ, ಹೋಗ್ಲಿ. ನಾನು ಬೆಳಗ್ಗೆ ನನ್ನ ಬೇಸಿಗೆಯ ಗೌನುಗಳನ್ನ ಫಿಟಿಂಗ್ ಮಾಡಿಸೋಕೆ ಸಿಟಿಗೆ ಹೋಗ್ತಿದೀನಿ. ಮಿ. ಪೂರ್ಣಚಂದ್ರ ಹೋದ ಮೇಲೆ ನನಗೆ ಸುದ್ದಿ ಕಳಿಸಿ. ನಾನು ನನ್ನ ದಾಕ್ಷಾಯಿಣಿ ಚಿಕ್ಕಮ್ಮ ಇದಾರಲ್ಲ, ಅವರ ಮನೇಲಿ ಉಳ್ಕೋತಿದೀನಿ.”
ಆ ರಾತ್ರಿ ಆಕೆ ಕಲ್ಲುಹಾಸಿನ ವಾಕ್‌ವೇಯ ಬದಿಯಲ್ಲಿ ದೇವದಾರು ಮರದ ಕೆಳಗಿದ್ದ ಬೆಂಚೊಂದರ ಮೇಲೆ ಒಬ್ಬಂಟಿಯಾಗಿ ಕುಳಿತುಕೊಂಡಳು.
ಆಕೆಯ ಯೋಚನೆಗಳು ಅಥವಾ ಉದ್ದೇಶಗಳು ಯಾವತ್ತೂ ಇಷ್ಟು ಗೋಜಲಾಗಿದ್ದೇ ಇಲ್ಲ. ಅವುಗಳಿಂದ ಆಕೆಗೆ ತನ್ನ ಮನೆಯನ್ನು ಬೆಳಗ್ಗೆ ಬಿಟ್ಟುಹೊರಡಬೇಕೆಂಬ ವಿಶಿಷ್ಟ ತುಡಿತವನ್ನು ಬಿಟ್ಟರೆ ಬೇರೆ ಏನನ್ನೂ ಅರಿಯಲಾಗಲೇ ಇಲ್ಲ.
ಮಿಸೆಸ್ ಬರೋಡಾಳಿಗೆ ಅಷ್ಟು ಹೊತ್ತಿಗೆ ಕಲ್ಲುಹಾದಿಯ ಮೇಲೆ ಹೆಜ್ಜೆಸಪ್ಪಳ ಕೇಳಿಬಂತು; ಅದರೆ ಕತ್ತಲೆಯಲ್ಲಿ ಸಮೀಪಿಸುತ್ತಿರುವ ಒಂದು ಸಿಗಾರಿನ ಬೆಳಕು ಮಾತ್ರ ಕಾಣುತ್ತಿತ್ತು. ಅದು ಪೂರ್ಣಚಂದ್ರನೇ ಅನ್ನುವುದು ಆಕೆಗೆ ತಿಳಿಯಿತು, ಏಕೆಂದರೆ ಯಶವಂತ ಯಾವತ್ತೂ ಸಿಗಾರ್ ಸೇದಿದವನಲ್ಲ. ಆಕೆ ಕತ್ತಲೆಯಲ್ಲಿ ಆತನ ಗಮನ ಸೆಳೆಯದಿರಲು ಪ್ರಯತ್ನಿಸಿದಳಾದರೂ ಆಕೆಯ ಬಿಳಿಯ ಗೌನ್ ಆತನಿಗೆ ಆಕೆಯ ಇರವನ್ನು ಸಾರಿತು. ಆತ ತನ್ನ ಸಿಗಾರನ್ನು ಬಿಸುಟು ಆಕೆಯ ಪಕ್ಕ ಬೆಂಚಿನ ಮೇಲೆ ಆಸೀನನಾದ, ಅಕೆ ಏನು ಹೇಳುವಳೋ ಎಂಬ ಸಂಶಯವಿಲ್ಲದವನ ಹಾಗೆ.
“ನಿಮ್ಮ ಪತಿ ಇದನ್ನು ನಿಮಗೆ ಕೊಡಲು ತಿಳಿಸಿದರು, ಮಿಸೆಸ್ ಬರೋಡಾ,” ಆತ ಆಕೆ ಯಾವಾಗಲೂ ತನ್ನ ತಲೆ ಮತ್ತು ಹೆಗಲುಗಳನ್ನು ಬೆಚ್ಚಗಿಡಲು ಬಳಸುವ ತೆಳ್ಳಗಿನ, ಬಿಳಿಯ ಸ್ಕಾರ್ಫೊಂದನ್ನು ನೀಡುತ್ತ ನುಡಿದ. ಆಕೆ ಧನ್ಯವಾದದ ಮಾತೊಂದನ್ನು ಉಸುರಿ ಸ್ಕಾರ್ಫನ್ನು ಪಡೆದುಕೊಂಡು ತನ್ನ ತೊಡೆಯ ಮೇಲಿಟ್ಟುಕೊಂಡಳು.
ಆತ ರಾತ್ರಿಯ ಹವೆ ಋತುವಿನ ಮೇಲೆ ಬೀರಬಹುದಾದ ಪ್ರತಿಕೂಲ ಪರಿಣಾಮದ ಬಗ್ಗೆ ತನ್ನ ಸಾಮಾನ್ಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ. ಆಮೇಲೆ ಕತ್ತಲೆಯೊಳಗೆ ನೆಟ್ಟದೃಷ್ಟಿಯಿಂದ ನೋಡುತ್ತಾ, ತನಗೆ ತಾನೇ ಅನ್ನುವಂತೆ ಗುಣುಗುಣಿಸಿದ:
“ದಕ್ಷಿಣ ಗಾಳಿಗಳ ರಾತ್ರಿ-ಹಲವು ಮಹಾ ನಕ್ಷತ್ರಗಳ ರಾತ್ರಿ! ಇನ್ನೂ ತಲೆದೂಗುತ್ತಿರುವ ರಾತ್ರಿ…”
ಈ ರಾತ್ರಿಯ ಬಗೆಗಿನ ಅಪೂರ್ಣ ಮಾತನ್ನು ಪೂರ್ಣಗೊಳಿಸಲು ಯತ್ನಿಸಲಿಲ್ಲ. ಆ ಮಾತು ನಿಜವಾಗಿ ಅವಳಿಗೆ ಹೇಳಿದ್ದಾಗಿರಲೂ ಇಲ್ಲ.
ಪೂರ್ಣಚಂದ್ರ ಯಾವುದೇ ಲೆಕ್ಕದಲ್ಲಿಯೂ ಸಂಕೋಚದ ಮನುಷ್ಯನಾಗಿರಲಿಲ್ಲ, ಏಕೆಂದರೆ ಆತ ಅತಿಯಾದ ಆತ್ಮಪ್ರಜ್ಞೆಯುಳ್ಳವನೂ ಆಗಿರಲಿಲ್ಲ. ಆತನ ಗಾಂಭೀರ್ಯವು ಆತನ ಮನಸ್ಥಿತಿಗಳಿಗೆ ತಕ್ಕಂತೆ ಇರುತ್ತಿತ್ತೇ ವಿನಃ ತೋರಿಕೆಯದ್ದಾಗಿರಲಿಲ್ಲ. ಮಿಸೆಸ್ ಬರೋಡಾಳ ಪಕ್ಕ, ಅಲ್ಲಿ ಕೂಳಿತುಕೊಂಡಾಗ ಆತನ ಮೌನ ಆ ಹೊತ್ತು ಕರಗಿತು.
ಆತ ಕೇಳಲು ಸಹ್ಯವಾದ ಮೆಲುವಾದ ಸಂಕೋಚಪೂರಿತ ಗಡಸುದನಿಯಲ್ಲಿ ಬಿಚ್ಚುಮನಸ್ಸಿನಿಂದ ಆತ್ಮೀಯವಾಗಿ ಮಾತನಾಡತೊಡಗಿದ. ಆತ ತಾನೂ ಯಶವಂತನೂ ಒಬ್ಬರಿಗೊಬ್ಬರು ಬಹಳ ಆತ್ಮೀಯವಾಗಿದ್ದ ಕಾಲೇಜು ದಿನಗಳ ಬಗ್ಗೆ ಮಾತನಾಡಿದ; ಗುರಿಯಿಲ್ಲದ, ಅಚ್ಚ ಮಹತ್ವಾಕಾಂಕ್ಷೆಗಳ ಮತ್ತು ವಿಶಾಲ ಉದ್ದೇಶಗಳನ್ನು ಹೊಂದಿದ್ದ ದಿನಗಳ ಬಗ್ಗೆ ಮಾತನಾಡಿದ. ಈಗ ತನ್ನಲ್ಲಿ ಏನೂ ಉಳಿದಿಲ್ಲ, ಈಗಿನ ವ್ಯವಸ್ಥೆಯ ಜತೆಗೆ ತಾತ್ವಿಕ ಹೊಂದಾಣಿಕೆ-ಅಂದರೆ ಅಸ್ತಿತ್ವಕ್ಕೆ ಅವಶ್ಯಕವಿರುವಷ್ಟು ಬಯಕೆ ಮಾತ್ರ, ಆಗೀಗ ನೈಜ ಬದುಕಿನ ಅರಿವು ತಾಕುತ್ತದೆ, ಈಗ ತಾನು ಅನುಭವಿಸುತ್ತಿರುವುದು ಅದನ್ನೇ, ಎಂದು ಹೇಳಿದ.
ಆಕೆಯ ಮನಸ್ಸಿಗೆ ಆತ ಹೇಳುತ್ತಿದ್ದ ವಿಚಾರಗಳು ಎಲ್ಲೋ ಸೊಲ್ಪ ಅರ್ಥವಾದಂತೆ ಇದ್ದವು. ಆಕೆಯ ದೇಹ ಮಾತ್ರ ಆ ಘಳಿಗೆಯಲ್ಲಿ ಎಲ್ಲವನ್ನೂ ಹಿಂದಕ್ಕೆ ತಳ್ಳಿ ಮೇಲುಗೈ ಪಡೆಯಿತು. ಆಕೆ ಆತನ ಮಾತುಗಳ ಬಗ್ಗೆ ಯೋಚನೆ ಮಾಡುತ್ತಿರಲೇ ಇಲ್ಲ, ಬದಲಾಗಿ ಆತನ ದನಿಯ ವಿವಿಧ ನಾದಗಳನ್ನು ಆಸ್ವಾದಿಸುತ್ತಿದ್ದಳು. ಆಕೆಗೆ ಕತ್ತಲೆಯಲ್ಲಿ ತನ್ನ ಕೈಚಾಚಿ ತನ್ನ ಬೆರಳುಗಳ ಸೂಕ್ಷ್ಮ ತುದಿಗಳಿಂದ ಆತನ ಮುಖವನ್ನೋ ತುಟಿಯನ್ನೋ ಸ್ಪರ್ಶಿಸುವ ಬಯಕೆಯುಂಟಾಯಿತು. ಆಕೆ ಆತನ ಬಳಿಸರಿದು ಆತನ ಕೆನ್ನೆಯ ಹತ್ತಿರ ಏನನ್ನೋ ಹೇಳಲು ಇಚ್ಚಿಸಿದಳು- ಏನೆಂದು ಆಕೆಗೆ ಅರಿವಿರಲಿಲ್ಲ- ಆಕೆ ಒಬ್ಬ ಮರ್ಯಾದಸ್ಥ ಮಹಿಳೆಯಾಗಿರದಿದ್ದರೆ ಹೇಗೆ ಮಾಡಬಹುದಾಗಿತ್ತೋ, ಥೇಟ್ ಹಾಗೆಯೇ.
ಆತನ ಹತ್ತಿರ ಸರಿಯುವ ಇಚ್ಚೆ ಹೆಚ್ಚಾಗುತ್ತ ಹೋದ ಹಾಗೆ ಆಕೆ ನಿಜವಾಗಿ ಆತನಿಂದ ದೂರ ಸರಿಯಲಾರಂಭಿಸಿದಳು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೆ, ಬಹಳ ಒರಟು ವರ್ತನೆ ಅನ್ನಿಸದಿರುವ ಹಾಗೆ, ಆಕೆ ಎದ್ದು ಆತನನ್ನು ಒಂಟಿಯಾಗಿ ಬಿಟ್ಟುಹೋದಳು.
ಆಕೆ ಮನೆಯನ್ನು ತಲುಪುವ ಮುನ್ನವೇ ಪೂರ್ಣಚಂದ್ರ ಹೊಸ ಸಿಗಾರೊಂದನ್ನು ಹಚ್ಚಿ ರಾತ್ರಿಯ ಬಗ್ಗೆ ಅಪೂರ್ಣವಾಗುಳಿದಿದ್ದ ತನ್ನ ಸಾಲುಗಳಿಗೆ ಅಂತ್ಯ ಕಾಣಿಸಿದ.
ಮಿಸೆಸ್ ಬರೋಡಾಳಿಗೆ ತನ್ನ ಸ್ನೇಹಿತನೂ ಆಗಿದ್ದ ತನ್ನ ಪತಿಗೆ ತನಗೆ ಉಂಟಾಗಿದ್ದ ಆ ತಪ್ಪುಬಯಕೆಯ ಬಗ್ಗೆ ಹೇಳಿಕೊಳ್ಳುವ ಬಲವಾದ ಪ್ರಲೋಭನೆಯುಂಟಾಯಿತು. ಆದರೆ ಆಕೆ ಈ ಪ್ರಲೋಭನೆಗೆ ಶರಣಾಗಲಿಲ್ಲ. ಒಬ್ಬ ಸಭ್ಯ ಮಹಿಳೆಯಾಗಿರುವುದರ ಜತೆಗೇ ಆಕೆ ಬಹಳ ವಿವೇಕವುಳ್ಳ ಮಹಿಳೆಯೂ ಆಗಿದ್ದಳು. ಜೀವನದ ಕೆಲವು ಯುದ್ಧಗಳನ್ನು ಒಂಟಿಯಾಗಿಯೇ ಮಾಡಬೇಕೆಂದು ಆಕೆಗೆ ಅರಿವಿತ್ತು.
ಯಶವಂತ ಮಾರನೇದಿನ ಬೆಳಗ್ಗೆ ಎದ್ದಾಗ, ಆತನ ಮಡದಿ ಆಗಲೇ ಹೊರಟುಹೋಗಿಯಾಗಿತ್ತು. ಆಕೆ ನಗರಕ್ಕೆ ಬೆಳಜಾವದ ಟ್ರೈನು ಏರಿ ಹೋಗಿದ್ದಳು. ಪೂರ್ಣಚಂದ್ರ ತನ್ನ ಮನೆಯಿಂದ ಹೋಗುವವರೆಗೂ ಆಕೆ ಮರಳಲಿಲ್ಲ.
ಮುಂದಿನ ಬೇಸಿಗೆಯಲ್ಲಿ ಆತನನ್ನು ವಾಪಾಸು ಕರೆಯಿಸಿಕೊಳ್ಳುವ ಬಗ್ಗೆ ಮಾತು ನಡೆಯಿತು. ಯಶವಂತನಿಗೆ ತುಂಬ ಆಶೆಯಿದ್ದರೂ ತನ್ನ ಮಡದಿಯ ಬಲವಾದ ವಿರೋಧಕ್ಕೆ ಆತ ಮಣಿಯಲೇಬೇಕಾಯಿತು.
ಆದರೆ, ಆ ವರ್ಷ ಮುಗಿಯುವ ಮುನ್ನವೇ, ಆಕೆಯೇ ತಾನಾಗಿ ಪೂರ್ಣಚಂದ್ರನನ್ನು ತಮ್ಮಲ್ಲಿಗೆ ಆಹ್ವಾನಿಸುವ ಬಗ್ಗೆ ಪ್ರಸ್ತಾಪ ಮಾಡಿದಳು. ಆಕೆಯ ಪತಿಗೆ ಈ ಸಲಹೆ ಆಕೆಯಿಂದ ಬಂದುದಕ್ಕೆ ಅಚ್ಚರಿಯೂ ಸಂತಸವೂ ಉಂಟಾಯಿತು.
“ನನಗೆ ತುಂಬ ಸಂತೋಷವಾಗಿದೆ, ನನ್ನ ಮುದ್ದು, ಕೊನೆಗೂ ಅವನ ಬಗ್ಗೆ ನಿನಗಿದ್ದ ದ್ವೇಷ ಕರಗಿತಲ್ಲ; ಆತ ನಿಜವಾಗಿ ಅದಕ್ಕೆ ಹಕ್ಕುದಾರನಾಗಿರಲಿಲ್ಲ.”
“ಓಹ್,” ಆಕೆ ಆತನ ತುಟಿಗಳ ಮೇಲೆ ದೀರ್ಘವಾದ, ನವಿರಾದ ಮುತ್ತೊಂದನ್ನೊತ್ತಿ ನಗುತ್ತ ಹೇಳಿದಳು, “ಈಗ ಎಲ್ಲವೂ ಕರಗಿಹೋಗಿದೆ! ನೀವೇ ನೋಡುವಿರಂತೆ. ಈ ಸಾರಿ ನಾನು ಆತನ ಬಳಿ ಬಹಳ ಚೆನ್ನಾಗಿ ನಡೆದುಕೊಳ್ತೀನಿ.”
*************