ಶ್ರೀಮತಿ ಶರ್ಮಾಳ ಹುಲಿ

ಎಚ್.ಎಚ್. ಮನ್ರೋ(ಸಾಕಿ)(1870-1916)
ಮೂಲಕಥೆ: ಮಿಸೆಸ್ ಪ್ಯಾಕೆಲ್‌ಟೈಡ್ಸ್ ಟೈಗರ್
ಲೇಖಕರ ಬಗ್ಗೆ ಮಾಹಿತಿ:
‘ಸಾಕಿ’ (ಡಿಸೆಂಬರ್ 18, 1870 – ನವೆಂಬರ್ 13, 1916) ಎಂಬ ಬರಹನಾಮದಿಂದ ಪರಿಚಿತರಾಗಿರುವ ಬ್ರಿಟಿಶ್ ಬರಹಗಾರ ಹೆಕ್ಟರ್ ಹ್ಯೂ ಮನ್ರೋರ ಕಥೆಗಳು ಎಡ್ವರ್ಡಿಯನ್ ಸಮಾಜದ ವಿಡಂಬನೆ ಮಾಡುತ್ತಿದ್ದವು. ಸಣ್ಣಕಥೆಗಳ ಸರದಾರನೆಂದು ಪರಿಗಣಿಸಲಾಗುವ ಇವರನ್ನು ಓ. ಹೆನ್ರಿ ಮತ್ತು ಡೊರೋಥಿ ಪಾರ್ಕರ್‌ಗೆ ಹೋಲಿಸಲಾಗುತ್ತದೆ. ಆತ ತನ್ನ ಕಥೆಗಳ ಪಾತ್ರಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತ ಹೋಗುತ್ತಾರೆ. ‘ದ ಓಪನ್ ವಿಂಡೋ’ ಅವರ ಅತ್ಯಂತ ಪ್ರಸಿದ್ಧ ಸಣ್ಣಕಥೆ. ಆಸ್ಕರ್ ವೈಲ್ಡ್, ಲೂಯಿಸ್ ಕ್ಯಾರೊಲ್ ಮತ್ತು ರುಡ್ಯಾರ್ಡ್ ಕಿಪ್ಲಿಂಗರಿಂದ ಪ್ರಭಾವಿತರಾಗಿದ್ದ ಸಾಕಿ, ಪಿ.ಜಿ.ವೋಡ್‌ಹೌಸ್‌ರ ಮೇಲೆ ಅಪಾರ ಪ್ರಭಾವ ಬೀರಿದರು. ಕಥೆಗಳಲ್ಲದೆ ಅವರು ನಾಟಕಗಳನ್ನೂ ಬರೆದರು.

ಟೈಗರ್ ಲಿಲಿ ಹೂವು

ಒಂದು ಹುಲಿಯನ್ನು ಬೇಟೆಯಾಡಬೇಕೆನ್ನುವುದು ಶ್ರೀಮತಿ ಶರ್ಮಾಳ ಮನೋಕಾಮನೆಯೂ ಗುರಿಯೂ ಆಗಿದ್ದಿತು. ಕೊಲ್ಲುವ ಇಚ್ಛೆ ಅವಳಲ್ಲಿ ಇದ್ದಕ್ಕಿದ್ದ ಹಾಗೆ ಹುಟ್ಟಲಿಲ್ಲ ಅಥವಾ ಆಕೆ ಕಾಡನ್ನು ತೊರೆಯುವಾಗ ತಾನು ಕಂಡಿದ್ದಕ್ಕಿಂತ ಹೆಚ್ಚು ಕ್ಷೇಮವಾಗಿ, ಸಂಪೂರ್ಣವಾಗಿ ಬಿಡುವೆನೆಂದಾಗಲೀ, ಒಂದು ಕಾಡುಪ್ರಾಣಿಯನ್ನು ಕೊಂದು ಅಲ್ಲಿನ ಪ್ರತಿ ಮಿಲಿಯ ಜನಸಂಖ್ಯೆಗೆ ಇರುವ ಕಾಡುಪ್ರಾಣಿಗಳ ಒಂದು ದಶಮಾಂಶದಷ್ಟು ಭಾಗವನ್ನು ಕಡಿಮೆಗೊಳಿಸುತ್ತಿರುವೆನೆಂದಾಗಲೀ ಯೋಚನೆ ಬರಲಿಲ್ಲ. ಹುಲಿಯ ಹೆಜ್ಜೆಗಳೆಡೆ ಆಕೆಗೆ ಇದ್ದಕ್ಕಿದ್ದಂತೆ ಉಂಟಾದ ಬಲವಾದ ಸೆಳೆತಕ್ಕೆ ಮೂಲ ಕಾರಣ ಬೇರೆಯೇ ಇತ್ತು- ಕೆಲ ಸಮಯದ ಹಿಂದೆ ಶ್ರೀಮತಿ ಸುರುಚಿ ವರ್ಮಾಳನ್ನ ಅಲ್ಜೀರಿಯನ್ ವಿಮಾನಚಾಲಕನೊಬ್ಬ ಏರೋಪ್ಲೇನಿನಲ್ಲಿ ಕೂರಿಸಿಕೊಂಡು ಹನ್ನೊಂದು ಮೈಲಿ ದೂರ ಕರೆದುಕೊಂಡು ಹೋಗಿದ್ದು ಮತ್ತು ಆಕೆ ಅದರ ಸುದ್ದಿ ಬಿಟ್ಟು ಮತ್ತೇನನ್ನೂ ಮಾತನಾಡದೇ ಇದ್ದದ್ದು; ಇದಕ್ಕೆ ತಕ್ಕ ಪ್ರತ್ಯಸ್ತ್ರವೆಂದರೆ ವೈಯುಕ್ತಿಕವಾಗಿ ಶ್ರಮಪಟ್ಟು ಗಳಿಸಿದ ಹುಲಿಯ ಚರ್ಮ ಮತ್ತು ಪ್ರೆಸ್ ಚಿತ್ರಗಳ ಮಹಾಪೂರ. ಶ್ರೀಮತಿ ಶರ್ಮಾ ಈಗಾಗಲೇ ಕರ್ಜನ್ ರೋಡಿನ ತನ್ನ ಮನೆಯಲ್ಲಿ ತಾನು ವಿಶೇಷವಾಗಿ ಶ್ರೀಮತಿ ಸುರುಚಿ ವರ್ಮಾಳಿಗಾಗಿಯೇ ನೀಡಲಿರುವ ಲಂಚ್ ಪಾರ್ಟಿ, ಅಲ್ಲಿ ಪ್ರದರ್ಶಿಸಲಾಗಿರುವ ಹುಲಿಚರ್ಮದ ಕಂಬಳಿ ಎಲ್ಲರ ಮಾತಿನ ವಿಷಯವಾಗಿರುವುದು, ಇತ್ಯಾದಿಗಳ ಬಗ್ಗೆ ಸಾಕಷ್ಟು ಕಲ್ಪನೆಗಳನ್ನು ಮಾಡಿಕೊಂಡಿದ್ದಳು. ಶ್ರೀಮತಿ ಸುರುಚಿ ವರ್ಮಾಳ ಮುಂದಿನ ಹುಟ್ಟುಹಬ್ಬದಂದು ತಾನು ಆಕೆಗೆ ನೀಡಲಿರುವ ಹುಲಿಯುಗುರಿನ ಬ್ರೋಚ್‌ನ ವಿನ್ಯಾಸವನ್ನೂ ಮನಸ್ಸಿನಲ್ಲಿಯೇ ರೂಪಿಸಿಕೊಂಡಿದ್ದಳು. ಮುಖ್ಯವಾಗಿ ಹಸಿವು ಮತ್ತು ಪ್ರೇಮಗಳಿಂದ ಈ ಪ್ರಪಂಚವು ಪ್ರಭಾವಿತವಾಗಿದೆ ಎಂದು ಭಾವಿಸಲಾಗುತ್ತದೆಯಾದರೂ ಇದಕ್ಕೆ ಶ್ರೀಮತಿ ಶರ್ಮಾ ಒಂದು ಅಪವಾದವಾಗಿದ್ದಳು; ಆಕೆಯ ಚಲನವಲನಗಳು ಮತ್ತು ಉದ್ದೇಶಗಳು ಶ್ರೀಮತಿ ಸುರುಚಿ ವರ್ಮಾಳ ಬಗ್ಗೆ ಆಕೆಗಿದ್ದ ದ್ವೇಷದಿಂದ ನಿರ್ದೇಶಿಸಲ್ಪಡುತ್ತ ಇದ್ದವು.
ಪರಿಸ್ಥಿತಿಗಳು ಅನುಕೂಲಕರವಾಗಿ ಪರಿಣಮಿಸಿದವು. ಶ್ರೀಮತಿ ಶರ್ಮಾ ಹೆಚ್ಚು ಶ್ರಮಪಡದೆ ಹುಲಿಯನ್ನು ಗುಂಡಿಕ್ಕಿ ಕೊಲ್ಲುವ ಅವಕಾಶಕ್ಕಾಗಿ ಸಾವಿರ ರೂಪಾಯಿಗಳ ಬೆಲೆಸೂಚನೆ ನೀಡಿದ್ದಳು, ಮತ್ತು ಪಕ್ಕದ ಹಳ್ಳಿಯೊಂದರಲ್ಲಿಯೇ ಗೌರವಯುತವಾದ ಪೂರ್ವಚರಿತ್ರೆಯನ್ನು ಹೊಂದಿದ, ಹೆಚ್ಚುತ್ತಿದ್ದ ವಯಸ್ಸಿನ ತೊಂದರೆಗಳಿಂದಾಗಿ ಕಾಡುಪ್ರಾಣಿಗಳನ್ನು ಬೇಟೆಯಾಡುವುದನ್ನು ಬಿಟ್ಟು ಸಣ್ಣಪುಟ್ಟ ಸಾಕುಪ್ರಾಣಿಗಳಿಗೆ ತನ್ನ ಹಸಿವನ್ನು ಸೀಮಿತಗೊಳಿಸಿಕೊಂಡಿದ್ದ ಪ್ರಾಣಿಯೊಂದರ ಬೇಟೆಯನ್ನು ಎಲ್ಲರೂ ಬೆಂಬಲಿಸುತ್ತಿದ್ದಾಗಿ ತಿಳಿದುಬಂದಿತು. ಸಾವಿರ ರೂಪಾಯಿಗಳನ್ನು ಸಂಪಾದಿಸುವ ಸಂಭಾವ್ಯತೆಯು ಹಳ್ಳಿಗರ ಕ್ರೀಡಾ ಮತ್ತು ವಾಣಿಜ್ಯ ಪ್ರವೃತ್ತಿಗಳನ್ನು ಉತ್ತೇಜಿಸಿದ್ದವು; ಅಕಸ್ಮಾತ್ ಹುಲಿಯು ಹೊಸ ಬೇಟೆಗಳನ್ನು ಹುಡುಕಿಕೊಂಡು ಹೊಸ ಸ್ಥಳಗಳೆಡೆ ಅಲೆಯಲಾರಂಭಿಸಿದರೆ ಕೂಡಲೇ ಹಿಂದಿರುಗಿ ಸುದ್ದಿ ನೀಡುವ ಸಲುವಾಗಿ ಸ್ಥಳೀಯ ಕಾಡಿನ ಹೊರವಲಯದಲ್ಲಿ ಮಕ್ಕಳನ್ನು ಹಗಲೂ ರಾತ್ರಿ ಕಾವಲಿರಿಸಲಾಯಿತು, ಮತ್ತು ತಾನಿರುವ ಜಾಗದ ಬಗ್ಗೆ ಹುಲಿಯನ್ನು ಸಂತೃಪ್ತನಾಗಿರಿಸುವ ಸಲುವಾಗಿ ಕಡಿಮೆಬೆಲೆಯ ಮೇಕೆಗಳನ್ನು ಬೇಕೆಂತಲೇ ಅಜಾಕರೂಕತೆಯಿಂದ ಅಲ್ಲಿ ಇಲ್ಲಿ ಬಿಡಲಾಯಿತು. ಉಳಿದಿದ್ದ ಒಂದೇ ಒಂದು ಆತಂಕವೆಂದರೆ ಮೇಮ್‌ಸಾಹೇಬರ ಬೇಟೆಗೆ ಮುನ್ನವೇ ಹುಲಿ ತನ್ನ ಮುದಿವಯಸ್ಸಿನ ದೆಸೆಯಿಂದ ಪ್ರಾಣತೊರೆದರೆ, ಎನ್ನುವುದು. ಹೊಲಗದ್ದೆಗಳ ಕೆಲಸದ ನಂತರ ತಮ್ಮ ಮಕ್ಕಳನ್ನೆತ್ತಿಕೊಂಡು ಕಾಡು ದಾಟುತ್ತಿದ್ದ ತಾಯಂದಿರು ಎಲ್ಲಿ ಈ ಗೌರವಾನ್ವಿತ ಮಂದೆಗಳ್ಳನ ವಿಶ್ರಾಂತಿಯ ನಿದ್ದೆಯನ್ನು ಭಂಗಮಾಡುವೆವೋ ಎಂಬ ಭಯದಿಂದ ತಮ್ಮ ಹಾಡುಗಳನ್ನು ನಿಲ್ಲಿಸಿಬಿಡುತ್ತಿದ್ದರು.
ಹುಣ್ಣಿಮೆಯ, ಮೋಡರಹಿತವಾದ ಆ ಮಹಾರಾತ್ರಿಯೂ ಕೆಲದಿನಗಳಲ್ಲಿಯೇ ಆಗಮಿಸಿತು. ಅನುಕೂಲವಾದ ಜಾಗದಲ್ಲದ್ದ ಮರವೊಂದರ ಮೇಲೆ ಅಟ್ಟಣಿಗೆಯೊಂದನ್ನ ನಿರ್ಮಿಸಲಾಗಿದ್ದು, ಅದರ ಮೇಲೆ ಶ್ರೀಮತಿ ಶರ್ಮಾ ಮತ್ತು ಆಕೆಯ ಸವೇತನ ಸಂಗಾತಿ(ಪೇಯ್ಡ್ ಕಂಪ್ಯಾನಿಯನ್)ಯಾಗಿದ್ದ ಮಿಸ್ ರೇಣು ಹೊಂಚುಹಾಕುತ್ತ ಮುದುಡಿ ಕುಳಿತುಕೊಂಡಿದ್ದರು. ಸರಿಯಾದ ಅಂತರದಲ್ಲಿಯೇ ಅರೆಕಿವುಡಾಗಿದ್ದ ಹುಲಿಗೂ ನೀರವ ರಾತ್ರಿಯೊಂದರಲ್ಲಿ ಕೇಳುವಷ್ಟು ಜೋರಾಗಿ, ನಿಲ್ಲದೆಯೇ ಅರಚಬಲ್ಲ ಸಾಮರ್ಥ್ಯದ ಮೇಕೆಯೊಂದನ್ನು ಕಟ್ಟಿಹಾಕಲಾಗಿತ್ತು. ಪಕ್ಕಾ ಗುರಿಯುಳ್ಳ ರೈಫಲ್ ಮತ್ತು ಸಣ್ಣ ಸೈಜಿನ ಇಸ್ಪೀಟುಕಾರ್ಡ್‌ಗಳೊಂದಿಗೆ ಆ ಆಟಗಾರ್ತಿಯು ತನ್ನ ಶಿಕಾರಿ ಬರುವುದನ್ನೆ ಕಾಯುತ್ತಿದ್ದಳು.
“ನಮಗೇನಾದರೂ ಅಪಾಯವಾದ್ರೆ? ” ಮಿಸ್ ರೇಣು ಉಸುರಿದಳು.
ನಿಜವಾಗಿ ಆಕೆಗೆ ಕಾಡುಪ್ರಾಣಿಯ ಬಗ್ಗೆ ಕೊಂಚವೂ ಭಯವಿರಲಿಲ್ಲ, ಆದರೆ ತನಗೆ ನೀಡಲಾದ ಹಣಕ್ಕೆ ತಕ್ಕುದಾದ್ದಕ್ಕಿಂತ ಒಂದು ಅಣುವಷ್ಟು ಹೆಚ್ಚಿನ ಸೇವೆಯನ್ನು ಮಾಡಬೇಕಾಗಿ ಬರಬಹುದೆನ್ನುವುದರ ಬಗ್ಗೆ ಮಾತ್ರ ಆಕೆಗೆ ಮರಣಭೀತಿಯಿದ್ದಿತು.
“ನಾನ್ಸೆನ್ಸ್,” ಶ್ರೀಮತಿ ಶರ್ಮಾ ಹೇಳಿದಳು; “ಇದು ಬಹಳಾ ಮುದಿಯಾಗಿರೋ ಹುಲಿ. ಬಯಸಿದರೂ ಅದು ಇಲ್ಲಿಯವರೆಗೆ ಹಾರೋಕೆ ಸಾಧ್ಯವೇ ಇಲ್ಲ.”
“ಅದು ಮುದಿಹುಲಿ ಅಂತಾದ್ರೆ ನೀವು ಅದನ್ನ ಇನ್ನೂ ಕಡಿಮೆ ಬೆಲೆಗೆ ತಕ್ಕೋಬಹುದು ಅನ್ನಿಸುತ್ತೆ ನನಗೆ. ಸಾವಿರ ರೂಪಾಯಿ ಬಹಳಾನೇ ಜಾಸ್ತಿಯಾಯ್ತು.”
ರಾಷ್ಟ್ರೀಯತೆ ಅಥವಾ ಪಂಗಡಗಳು ಯಾವುದೇ ಇರಲಿ, ಮಿಸ್ ರೇಣು ಸಾಮಾನ್ಯವಾಗಿ ಹಣದ ಬಗ್ಗೆ ರಕ್ಷಿಸುವ ಹಿರಿಯಕ್ಕನ ಥರದ ಮನೋಭಾವನೆಯನ್ನ ಹೊಂದಿದ್ದಳು. ಆಕೆಯ ಉತ್ಸಾಹಪೂರ್ಣ ಮಧ್ಯಸ್ಥಿಕೆಯಿಂದಾಗಿ ಎಷ್ಟೋಸಾರಿ ದೆಹಲಿಯ ಯಾವುದೋ ಹೋಟೆಲಿನಲ್ಲಿ ಟಿಪ್ಸ್ ನೀಡುವುದರಲ್ಲಿ ಪೋಲಾಗಬಹುದಾಗಿದ್ದ ಹಣ ಉಳಿತಾಯವಾಗಿತ್ತು, ಮತ್ತು ಕಡಿಮೆ ದಯೆಯುಳ್ಳವರು ಹಣ ನೀಡುವಂತಹ ಪರಿಸ್ಥಿತಿಗಳಲ್ಲೂ ಕೂಡ ಆಕೆಯ ಬಳಿಯಿದ್ದ ಹಣ ಆಕೆಗೇ ಅಂಟಿಕೊಂಡಿರುತ್ತ ಇತ್ತು. ಮಾರುಕಟ್ಟೆಯಲ್ಲಿ ಹುಲಿಯ ಅಲ್ಪಾವಶೇಷಗಳ ಬೆಲೆಯ ತಗ್ಗುವಿಕೆಯ ಬಗ್ಗೆ ಆಕೆ ಮಾಡುತ್ತಿದ್ದ ಯೋಚನೆಗಳು ಅದೇ ಪ್ರಾಣಿ ಅಲ್ಲಿ ಪ್ರತ್ಯಕ್ಷವಾಗಿದ್ದರಿಂದಾಗಿ ಮಾಯವಾದವು. ಕಟ್ಟಿಹಾಕಿದ್ದ ಮೇಕೆಯನ್ನು ಕಾಣುತ್ತಲೆ ಹುಲಿಯು ಲಭ್ಯವಿದ್ದ ಆಡಗುದಾಣಗಳ ಉಪಯೋಗವನ್ನು ಪಡೆದುಕೊಳ್ಳುವುದರ ಬದಲಾಗಿ, ದೊಡ್ಡ ಆಕ್ರಮಣ ಮಾಡುವ ಮೊದಲು ಸಣ್ಣ ವಿಶ್ರಾಂತಿಯೊಂದನ್ನು ಪಡೆದುಕೊಳ್ಳುವ ಸಲುವಾಗಿ ತನ್ನ ನಾಲ್ಕೂ ಕಾಲುಗಳನ್ನು ಅಗಲಕ್ಕೆ ಚಾಚಿ ಬಿದ್ದುಕೊಂಡಿತು.
“ಅದಕ್ಕೆ ಖಾಯಿಲೆಯಾಗಿದೆ ಅಂತ ನಂಗನ್ನಿಸುತ್ತೆ” ಮಿಸ್ ರೇಣು ಹಿಂದಿಯಲ್ಲಿ ಜೋರಾಗಿ ಪಕ್ಕದ ಮರದ ಮೇಲೆ ಹೊಂಚುಹಾಕಿ ಕುಳಿತಿದ್ದ ಗ್ರಾಮದ ಮುಖಂಡನಿಗೆ ಕೇಳಲೆಂದು ಹೇಳಿದಳು.
“ಹುಶ್!” ಶ್ರೀಮತಿ ಶರ್ಮಾ ಹೇಳಿದಳು. ಮತ್ತು ಅದೇ ಹೊತ್ತಿಗೆ ಹುಲಿಯು ತನ್ನ ಶಿಕಾರಿಯೆಡೆ ತೆವಳಲು ಆರಂಭಿಸಿತು.
“ಈಗ, ಈಗ!” ಮಿಸ್ ರೇಣು ಸ್ವಲ್ಪ ಸಡಗರದಿಂದ ಪ್ರೋತ್ಸಾಹಿಸಿದಳು; “ಅದು ಮೇಕೆಯನ್ನ ಮುಟ್ಟಲಿಲ್ಲಾ ಅಂದರೆ ಅದಕ್ಕಾಗಿ ನಾವು ಬೆಲೆ ತೆರಬೇಕಾಗಿಲ್ಲ.” (ಮೇಕೆಯ ಬೆಲೆ ಪ್ರತ್ಯೇಕವಾಗಿತ್ತು.)
ಜೋರಾದ ಶಬ್ದದೊಡನೆ ರೈಫಲ್ ಸಿಡಿಯಿತು, ಮತ್ತು ಆ ಬೃಹತ್ ಗಾತ್ರದ ಕಂದುಹಳದಿ ಬಣ್ಣದ ಪ್ರಾಣಿಯು ಒಂದುಕಡೆಗೆ ನೆಗೆದು ಪಕ್ಕಕ್ಕೆ ಹೊರಳಿ ಸಾವಿನ ನಿಶ್ಚಲತೆಯನ್ನು ಪಡೆದುಕೊಂಡಿತು. ಕ್ಷಣವೊಂದರಲ್ಲಿ ಸಂಭ್ರಮಗೊಂಡ ಸ್ಥಳೀಯರ ಗುಂಪೊಂದು ಜಮಾಯಿಸಿ, ಅವರ ಕೂಗುಗಳಿಂದ ಹಳ್ಳಿಗೆ ಸುದ್ದಿ ತಲುಪಿ, ಹಲವಾರು ಟಾಮ್-ಟಾಮ್ಗಳನ್ನು ಬಾರಿಸುವುದರ ಮೂಲಕ ವಿಜಯೋತ್ಸವವನ್ನು ಆಚರಿಸಲಾಯಿತು. ಅವರ ವಿಜಯ ಮತ್ತು ಸಂಭ್ರಮಗಳು ಶ್ರೀಮತಿ ಶರ್ಮಾಳ ಹೃದಯದಲ್ಲಿಯೂ ಪ್ರತಿಧ್ವನಿಸಿದವು; ಕರ್ಜನ್ ರೋಡಿನ ಲಂಚ್ ಪಾರ್ಟಿ ಈಗಾಗಲೇ ಬಹಳ ಹತ್ತಿರವಾದಂತೆ ಭಾಸವಾಗತೊಡಗಿತು.
ಮೇಕೆಯು ಕೆಟ್ಟದಾದ ಬುಲೆಟ್ ಗಾಯವೊಂದರಿಂದ ಸಾವಿಗೆ ಹತ್ತಿರವಾಗಿದೆಯೆಂದೂ, ಹುಲಿಯ ಮೇಲೆ ರೈಫಲಿನ ಕೆಲಸದ ಯಾವ ನಿಶಾನೆಯೂ ಇಲ್ಲವೆಂದೂ ಕಂಡುಹಿಡಿದು ಆಕೆಯ ಗಮನ ಸೆಳೆದವಳು ಮಿಸ್ ರೇಣು ಆಗಿದ್ದಳು. ತಪ್ಪಾದ ಪ್ರಾಣಿ ಗುಂಡೇಟಿಗೆ ಗುರಿಯಾಗಿತ್ತು, ಮತ್ತು ಶಿಕಾರಿಯ ಪ್ರಾಣಿಯು ಇದ್ದಕ್ಕಿದ್ದಂತೆ ಉಂಟಾದ ರೈಫಲಿನ ಶಬ್ದಕ್ಕೆ ಬೆಚ್ಚಿ ಹೃದಯಾಘಾತದಿಂದ ಅಸುನೀಗಿತ್ತು. ಶ್ರೀಮತಿ ಶರ್ಮಾಳಿಗೆ ಈ ವಿಷಯದಿಂದ ಅಸಮಾಧಾನವುಂಟಾಯಿತಾದರೂ ಅದು ಕ್ಷಮಾರ್ಹವಾದ ತಪ್ಪಾಗಿತ್ತು, ಏನೆಂದರೂ ಹುಲಿಯು ಅವಳದಾಗಿತ್ತು, ಮತ್ತು ಸಾವಿರ ರೂಪಾಯಿಗಳನ್ನು ಪಡೆಯಲು ಕಾತುರದಿದಿದ್ದ ಗ್ರಾಮಸ್ಥರು ಆಕೆಯೇ ಹುಲಿಗೆ ಗುಂಡಿಕ್ಕಿದಳೆಂಬ ಸುಳ್ಳನ್ನು ಸಂತಸದಿಂದ ಅನುಮೋದಿಸಿದರು. ಹೇಗಿದ್ದರೂ ಮಿಸ್ ರೇಣು ಆಕೆಯ ಸವೇತನ ಸಂಗಾತಿಯಾಗಿದ್ದವಳು. ಆದ್ದರಿಂದ ಶ್ರೀಮತಿ ಶರ್ಮಾ ಹಗುರವಾದ ಹೃದಯದಿಂದ ಕ್ಯಾಮೆರಾಗಳನ್ನು ಎದುರಿಸಿದಳು ಮತ್ತು ಆಕೆಯ ಚಿತ್ರವು ‘ನವದೆಹಲಿ ವೀಕ್’ನ ‘ವಾರದ ಚಿತ್ರ’ ವಿಭಾಗದಿಂದ ತನ್ನ ಕೀರ್ತಿಯನ್ನು ಎಲ್ಲೆಡೆಗೆ ಹರಡಿತು. ಶ್ರೀಮತಿ ಸುರುಚಿ ವರ್ಮಾಳ ಬಗ್ಗೆ ಹೇಳಬೇಕೆಂದರೆ, ಆಕೆ ಹಲವಾರು ವಾರಗಳವರೆಗೆ ‘ನವದೆಹಲಿ ವೀಕ್’ ಅನ್ನು ನೋಡಲೂ ನಿರಾಕರಿಸಿದಳು ಮತ್ತು ಹುಲಿಯ ಹಲ್ಲಿನ ಬ್ರೋಚ್‌ನ ಉಡುಗೊರೆಗೆ ಪ್ರತಿಯಾಗಿ ಆಕೆ ಕಳುಹಿಸಿದ ಧನ್ಯವಾದಪತ್ರವು ಅದುಮಿಟ್ಟ ಭಾವನೆಗಳಿಗೆ ಮಾದರಿಯಾಗಿದ್ದಿತು. ಲಂಚ್ ಪಾರ್ಟಿಯನ್ನು ಆಕೆ ನಿರಾಕರಿಸಿದಳು; ಕೆಲವು ಎಲ್ಲೆಗಳನ್ನು ದಾಟಿದರೆ ಅದುಮಿಟ್ಟ ಭಾವನೆಗಳೂ ಅಪಾಯಕಾರಿಯಾಗಿಬಿಡುವ ಸಾಧ್ಯತೆಗಳಿವೆ.
ಕರ್ಜನ್ ರೋಡಿನ ಮನೆಯಿಂದ ಹುಲಿಯ ಚರ್ಮದ ಕಂಬಳಿಯು ಆಕೆಯ ಹೊಸಾ ಬಂಗಲೆಗೆ ಪಯಣಿಸಿತು ಮತ್ತು ಅಲ್ಲಿನ ಜನರ ಮೆಚ್ಚುಗೆಗೆ ಪಾತ್ರವಾಯಿತು. ಅಲ್ಲಿನ ದೊಡ್ಡ ಪಾರ್ಟಿಯೊಂದಕ್ಕೆ ಶ್ರೀಮತಿ ಶರ್ಮಾ ಡಯಾನಾ ದೇವತೆಯ ಕಾಸ್ಟ್ಯೂಮ್ ಧರಿಸಿ ಹೋದಾಗ ಅದು ಆಕೆಗೆ ತಕ್ಕುದಾಗಿ ಕಂಡಿತು. ಆದರೆ ರಾಜೀವ್ ಮೆಹ್ತಾ ಆದಿಯುಗದ ಥೀಮಿನ ಡ್ಯಾನ್ಸ್ ಪಾರ್ಟಿಯೊಂದನ್ನು ಆಯೋಜಿಸಿ ಅದರಲ್ಲಿ ಎಲ್ಲರೂ ತಾವು ಬೇಟೆಯಾಡಿದ ಪ್ರಾಣಿಗಳ ಚರ್ಮಗಳನ್ನು ಧರಿಸಬೇಕೆಂದು ಸೂಚಿಸಿದ್ದು ಆಕರ್ಷಕವಾಗಿದ್ದರೂ, ಶ್ರೀಮತಿ ಶರ್ಮಾ ನಿರಾಕರಿಸಿದಳು. “ನನ್ನ ಪರಿಸ್ಥಿತಿ ಸಣ್ಣ ಮಗುವೊಂದರ ಹಾಗಿರಬಹುದು” ರಾಜ್ ಹೇಳಿಕೊಂಡ, “ಒಂದೆರಡು ಕೆಟ್ಟ ಮೊಲದ ಚರ್ಮಗಳಷ್ಟೇ ಇರೋದು ನನ್ನ ಕೈಲಿ, ಆದರೆ,”.. ಡಯಾನಾ ದೇವತೆಯ ದೇಹದ ಅಳತೆಯ ಮೇಲೆ ಆಸೆಯ ಕಣ್ಣೋಟ ಬೀರುತ್ತ ಆತ ಹೇಳಿದ, “ನಾನೂ ಆ ನೃತ್ಯ ಮಾಡುತ್ತಿರೋ ರಶ್ಯನ್ ಯುವಕನಷ್ಟೇ ಸದೃಢನಾಗಿದೀನಿ.”
“ನಿಜವಾಗಿ ಅಲ್ಲಿ ಏನು ನಡೀತೂ ಅಂತ ಗೊತ್ತಾದರೆ ಎಲ್ಲರಿಗೂ ಎಷ್ಟು ತಮಾಷೆ ಅನ್ನಿಸಬಹುದು,” ಮಿಸ್ ರೇಣು ಆ ಪಾರ್ಟಿ ನಡೆದ ಕೆಲದಿನಗಳ ಬಳಿಕ ಹೇಳಿದಳು.
“ನೀನು ಹೇಳ್ತಾ ಇರೋದರ ಅರ್ಥವೇನು?” ಶ್ರೀಮತಿ ಶರ್ಮಾ ಆತುರವಾಗಿ ಕೇಳಿದಳು.
“ಅದೇ, ನೀವು ಮೇಕೆಗೆ ಗುಂಡುಹೊಡೆದು ಹುಲಿ ಹೆದರಿಕೊಂಡು ಸತ್ತುಹೋಯಿತಲ್ಲ,” ಮಿಸ್ ರೇಣು ತನ್ನ ಅಪ್ರಿಯವಾಗಿದ್ದರೂ ಹಿತಕರವಾಗಿದ್ದ ನಗೆಯೊಂದಿಗೆ ಹೇಳಿದಳು.
“ಯಾರೂ ಅದನ್ನ ನಂಬಲಾರರು,” ಶ್ರೀಮತಿ ಶರ್ಮಾ ಹೇಳಿದಳು. ಆಕೆಯ ಮುಖ ವಿನ್ಯಾಸಗಳಿದ್ದ ಪುಸ್ತಕವೊಂದರ ಪುಟಗಳಂತೆ ವೇಗವಾಗಿ ಬಣ್ಣ ಬದಲಾಯಿಸತೊಡಗಿತು.
“ಸುರುಚಿ ವರ್ಮಾ ನಂಬಿಯೇ ನಂಬುತ್ತಾಳೆ,” ಮಿಸ್ ರೇಣು ಹೇಳಿದಳು. ಶ್ರೀಮತಿ ಶರ್ಮಾಳ ಮುಖ ಬಿಳಿಚಿದ ಹಸಿರುವರ್ಣವನ್ನು ತಲುಪಿ ಹಾಗೇ ಉಳಿಯಿತು.
“ನೀನು ನಿಜವಾಗಿ ನನ್ನ ವಿಷಯ ಹೇಳುವುದಿಲ್ಲ ತಾನೆ?” ಆಕೆ ಕೇಳಿದಳು.
“ಹರಿಯಾಣದ ಹಳ್ಳಿಯೊಂದರ ಹತ್ತಿರ ನಾನು ವೀಕೆಂಡ್ ಕಳೆಯಲು ಕಾಟೇಜೊಂದನ್ನ ನೋಡಿದೀನಿ. ಹದಿನಾರೂವರೆ ಲಕ್ಷ ಅಷ್ಟೆ. ಒಳ್ಳೇ ಬೆಲೆ. ತಕರಾರೇ ಇಲ್ಲ. ನನ್ನ ಹತ್ತಿರ ದುಡ್ಡಿಲ್ಲ, ಅಷ್ಟೆ.”
***
ಮಿಸ್ ರೇಣುವಿನ ಮುದ್ದಾದ ವೀಕೆಂಡ್ ಕಾಟೇಜಿಗೆ ‘ಮೃಗಶಿರಾ’ ಎಂದು ಹೆಸರಿಡಲಾಗಿದ್ದು, ಬೇಸಿಗೆಯ ವೇಳೆಯಲ್ಲಿ ಅಲ್ಲಿಯ ತೋಟದ ಅಂಚುಗಳಲ್ಲಿ ಅರಳುವ ಟೈಗರ್-ಲಿಲಿ ಹೂವುಗಳು ಆಕೆಯ ಸ್ನೇಹಿತರ ಅಚ್ಚರಿ ಮತ್ತು ಮೆಚ್ಚುಗೆಗಳಿಗೆ ಪಾತ್ರವಾಗಿವೆ.
ಇದನ್ನೆಲ್ಲ ರೇಣು ಹೇಗೆ ನಿಭಾಯಿಸ್ತಾಳೋ ಎಂದು ಎಲ್ಲರೂ ಹೇಳುತ್ತಾರೆ.
ಶ್ರೀಮತಿ ಶರ್ಮಾ ಈಗ ದೊಡ್ಡಬೇಟೆಗಳಿಗೆ ಹೋಗುವುದಿಲ್ಲ.
“ಸಾಂದರ್ಭಿಕ ಖರ್ಚುಗಳು ಬಹಳ ಭಾರಿಯಾಗಿವೆ” ಆಕೆ ವಿಚಾರಿಸುವ ಸ್ನೇಹಿತರಲ್ಲಿ ತೋಡಿಕೊಳ್ಳುತ್ತಾಳೆ.
ಚಿತ್ರ ಕೃಪೆ: www.leslierohonczy.com

ಪುಷ್ಪವಲ್ಲಿ (ಮೂಲ – ’The Bellflower’ by Guy de Maupassant)

ಕೆಲವು ಹಳೇ ನೆನಪುಗಳು ಎಷ್ಟೊಂದು ವಿಚಿತ್ರವಾಗಿರುತ್ತವೆ ಅಲ್ವೇ? ಆಚೆಗೆ ತಳ್ಳಿಬಿಡೋಣ ಅಂದರೂ ಬಿಡದೆ ಕಾಡುತ್ತಲೆ ಇರುತ್ತವೆ! ಈಗ ನಾನು ಹೇಳೋಕೆ ಹೊರಟಿರೋ ಸಂಗತಿನೂ ಹಾಗೇನೆ, ಅದು ಎಷ್ಟು ಹಳೇದು ಅಂದರೆ ಇನ್ನೂ ಅದು ಇಷ್ಟೊಂದು ಸ್ಪಷ್ಟವಾಗಿ ನನ್ನ ನೆನಪುಗಳಿಗೆ ತಗುಲಿಹಾಕಿಕೊಂಡಿರೋದು ಯಾಕೆ ಅಂತಲೇ ನನಗೆ ಅರ್ಥವಾಗ್ತಾ ಇಲ್ಲ. ಅದಾದಮೇಲಿಂದ ನಾನು ಅದೆಷ್ಟೋ ಭೀಕರ ಘಟನೆಗಳನ್ನ ಕಣ್ಣಾರೆ ನೋಡಿದೀನಿ, ಆದರೆ ಈ ಪುಷ್ಪವಲ್ಲಿಯ ಮುಖ ದಿನಕ್ಕೊಂದು ಸಾರಿಯಾದರೂ ನನ್ನ ಕಣ್ಣೆದುರು ಬಂದೇ ಬರುತ್ತದಲ್ಲ ಅಂತನ್ನೋದು ವಿಚಿತ್ರ ಅನ್ನಿಸ್ತದೆ. ಆಕೆಯ ಮುಖ ಇನ್ನೂ ನನ್ನ ನೆನಪಲ್ಲಿ ಹಾಗೇ ಇದೆ, ನಾನು ಬಹಳಾ ವರ್ಷಗಳ ಹಿಂದೆ ಹತ್ತೋ, ಹನ್ನೆರಡೋ ವಯಸ್ಸಿನಲ್ಲಿ ಆಕೆಯನ್ನು ಕಂಡಿದ್ದ ಹಾಗೇ.
ಅವಳು ಒಬ್ಬ ದರ್ಜಿಯಾಗಿದ್ದಳು ಮತ್ತು ಪ್ರತಿ ಗುರುವಾರ ನನ್ನ ಅಪ್ಪ ಅಮ್ಮನ ಮನೆಗೆ ಅದೂ ಇದೂ ಬಟ್ಟೆ ಹೊಲಿಯುವುದಕ್ಕೋಸ್ಕರ ಬರುವಳು. ನನ್ನ ತಂದೆತಾಯಂದಿರ ಮನೆ ಹಳ್ಳಿಕಡೆಯಲ್ಲಿ ‘ತೊಟ್ಟಿಮನೆ’ ಅಂತ ಕರೀತಾರಲ್ಲ, ಆ ಥರದ ಹೆಂಚಿನ ಮನೆ. ಅದಕ್ಕೆ ಹೊಂದಿಕೊಂಡ ಹಾಗೆ ಮೂರುನಾಲ್ಕು ತೋಟಗಳಿದ್ದವು.
ನಮ್ಮ ಹಳ್ಳಿ ಸುಮಾರು ದೊಡ್ಡದೇ, ಹೆಚ್ಚೂಕಡಿಮೆ ಸಣ್ಣ ಮಾರುಕಟ್ಟೆ ಟೌನೇ ಅನ್ನಬಹುದು. ನಮ್ಮ ಮನೆಯಿಂದ ಹಳ್ಳಿಗೆ ಸುಮಾರು ನೂರು ಯಾರ್ಡ್ ಅಂತರ. ಊರ ನಟ್ಟನಡುವೆ ಒಂದು ದೇವಸ್ಥಾನ, ಭಾಳ ಹಳೇದು, ಕಲ್ಲಿನದು. ಸಮಯ ಕಳೀತಾ ಕಲ್ಲಿನ ಬಣ್ಣವೇ ಗೊತ್ತಾಗದಹಾಗೆ ಕಪ್ಪಗಾಗಿಬಿಟ್ಟಿತ್ತು.
ಸರೀ, ಪ್ರತಿ ಗುರುವಾರ ಪುಷ್ಪವಲ್ಲಿ ಬೆಳಗ್ಗೆ ಆರೂವರೆ ಏಳುಗಂಟೆಗೇ ಹಾಜರಾಗಿಬಿಡೋಳು. ಬರ್ತಾ ಇದ್ದ ಹಾಗೇ ಹೊಲಿಗೆಮೆಶೀನಿದ್ದ ರೂಮಿಗೆ ನುಗ್ಗಿ ಕೂಡಲೆ ಕೆಲಸ ಶುರುಮಾಡಿಬಿಡೋಳು. ತೆಳ್ಳಗೆ ಎತ್ತರಕ್ಕೆ ಇದ್ದ ಅವಳಿಗೆ ಗಡ್ಡ ಇತ್ತು, ಅಥವಾ ಮುಖದ ಮೇಲೆ ಹೆಚ್ಚಿಗೆ ಕೂದಲಿತ್ತು ಅನ್ನಬಹುದು. ಅಚ್ಚರಿಪಡಿಸುವಷ್ಟು ಹೆಚ್ಚಿಗೆ ಗಡ್ಡ ಇದ್ದ ಅವಳ ಮುಖದ ಮೇಲಿನ ಕೂದಲು ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಗುಂಪುಗುಂಪಾಗಿ ಯಾರೋ ಹುಚ್ಚು ಮನುಷ್ಯ ಆ ಅಗಲ ಮುಖದ ಮೇಲೆ ಕೂದಲನ್ನ ಹೊಲಿದಿರುವ ಹಾಗೆ ಬೆಳೆದುಕೊಂಡು ಮಿಲಿಟರಿ ಅಧಿಕಾರಿಯೊಬ್ಬ ಹೆಣ್ಣುವೇಷ ಹಾಕಿದ ಹಾಗೆ ಕಾಣುತ್ತ ಇತ್ತು. ಆಕೆಯ ಮೂಗಿನ ಮೇಲೂ, ಮೂಗಿನಡಿಯಲ್ಲೂ, ಮೂಗಿನ ಸುತ್ತಲೂ, ಗದ್ದದ ಮೇಲೂ, ಕೆನ್ನೆಗಳ ಮೇಲೂ ಕೂದಲಿತ್ತು ಮತ್ತು ಸಾಮಾನ್ಯವಾಗಿ ಇರುವುದಕ್ಕಿಂತ ಬಹಳ ಜಾಸ್ತಿ ದಪ್ಪ ಮತ್ತು ಉದ್ದವಿದ್ದ ಆಕೆಯ ಹುಬ್ಬುಗಳ ಕೂದಲು ಸಾಕಷ್ಟು ಬೆಳ್ಳಿಬಣ್ಣಕ್ಕೆ ತಿರುಗಿದ್ದು ಯಾರೊ ಅಲ್ಲಿ ಮಿಷ್ಟೇಕು ಮಾಡಿಕೊಂಡು ಒಂದು ಜೊತೆ ಮೀಸೆಗಳನ್ನ ಅಂಟಿಸಿದಾರೇನೋ ಅನ್ನಿಸುವ ಹಾಗೆ ಕಾಣುತ್ತಿದ್ದವು.
ಅವಳು ಕುಂಟುತ್ತಿದ್ದಳಾದರೂ ಅದು ಕುಂಟರು ಸಾಮಾನ್ಯವಾಗಿ ಕುಂಟುವ ರೀತಿಯಿರದೆ ಕುರಿಗಳು ಏನನ್ನಾದರೂ ಹತ್ತುವಾಗ ಕುಂಟುವ ರೀತಿ ಇರುತ್ತಿತ್ತು. ಸರಿಯಾಗಿರುವ ಕಾಲಿನ ಮೇಲೆ ತನ್ನ ದೊಡ್ಡ, ಕಂಪಿಸುವ ದೇಹವನ್ನು ಊರುವಾಗಲೆಲ್ಲ ಆಕೆ ಒಂದು ಬೃಹತ್ ಅಲೆಯ ಮೇಲೆ ಸವಾರಿ ಮಾಡಲು ತಯಾರಾಗುತ್ತಿರುವಳೇನೋ ಅನ್ನಿಸುವುದು, ಮತ್ತೆ ಆಕೆ ಅಚಾನಕ್ಕಾಗಿ ಯಾವುದೋ ಗಹ್ವರವೊಂದರಲ್ಲಿ ಮುಳುಗಿ ಮಾಯವಾಗುವ ಹಾಗೆ ಧುಮ್ಮಿಕ್ಕಿ ನೆಲಕ್ಕಿಳಿಯುವಳು. ಆಕೆಯ ನಡಿಗೆ ಚಂಡಮಾರುತದಲ್ಲಿ ಸಿಕ್ಕಿಹಾಕಿಕೊಂಡ ಹಡಗಿನ ಹಾಗಿರುತ್ತಿತ್ತು. ಆಕೆ ಯಾವಾಗಲೂ ತಲೆಯಮೇಲೆ ಹೊದ್ದುಕೊಂಡಿರುವ ಸೆರಗು ಪ್ರತಿಸಾರೆ ಕುಂಟುವಾಗಲೂ ಹಾರಾಡಿಕೊಂಡು ದಿಗಂತದುದ್ದಕ್ಕೂ ಉತ್ತರದಿಂದ ದಕ್ಷಿಣಕ್ಕೆ, ದಕ್ಷಿಣದಿಂದ ಮತ್ತೆ ಉತ್ತರಕ್ಕೆ ಪ್ರಯಾಣಿಸುವ ಥರ ಭಾಸವಾಗುತ್ತ ಇತ್ತು.
ನನಗೆ ಪುಷ್ಪವಲ್ಲಿಯಮ್ಮ ಅಂದರೆ ತುಂಬ ಇಷ್ಟವಿತ್ತು. ಬೆಳಗ್ಗೆ ಎದ್ದತಕ್ಷಣ ಹೊಲಿಗೆಮಿಶೀನಿನ ಕೋಣೆಗೆ ಓಡಿಹೋಗಿ ಅಲ್ಲಿ ಆಕೆ ತನ್ನ ಕಾಲಡಿ ಬೆಚ್ಚಗಾಗಲೆಂದು ಚಾಪೆಯೊಂದನ್ನಿಟ್ಟುಕೊಂಡು ಕೆಲಸದಲ್ಲಿ ನಿಮಗ್ನಳಾಗಿರುವುದನ್ನೆ ನೋಡುತ್ತ ನಿಲ್ಲುವೆ. ನಾನು ಬಂದ ತಕ್ಷಣ ಆಕೆ ನನಗೆ ಆ ಚಳಿ ತುಂಬಿದ ದೊಡ್ಡ ಕೋಣೆಯಲ್ಲಿ ಶೀತವಾಗಬಾರದೆಂದು ತನ್ನ ಚಾಪೆಯನ್ನು ಕೊಡುವಳು.
“ಇದು ನಿನ್ನ ತಲೆಯಿಂದ ರಕ್ತ ಕೆಳಗೆ ಹರಿಯೋಹಾಗೆ ಮಾಡತ್ತೆ” ಅವಳು ನನಗೆ ಹೇಳುವಳು.
ತನ್ನ ಉದ್ದುದ್ದನೆಯ, ವಕ್ರವಾದ ಪರಿಣತ ಬೆರಳುಗಳಿಂದ ಬಟ್ಟೆಯನ್ನು ಹೊಲಿಯುತ್ತ, ತನ್ನ ಕನ್ನಡಕದ ಹಿಂದಿನ ಕಣ್ಣುಗಳಿಂದ ದಿಟ್ಟಿಸುತ್ತ ಆಕೆ ನನಗೆ ಕಥೆ ಹೇಳುವಳು. ವಯಸ್ಸು ಆಕೆಯ ದೃಷ್ಟಿಯನ್ನು ಮಸುಕಾಗಿಸಿತ್ತಾದರೂ ನನಗೆ ಆಕೆಯ ಕಣ್ಣುಗಳು ಅಗಾಧವಾಗಿ, ಇರುವುದಕ್ಕಿಂತ ಎರಡುಪಟ್ಟು ದೊಡ್ಡದಾಗಿವೆಯೇನೊ ಅನ್ನಿಸುತ್ತಿದ್ದವು.
ಆಕೆ ನನಗೆ ಹೇಳುತ್ತಿದ್ದ ಸಂಗತಿಗಳು ಮತ್ತು ಅದರಿಂದ ವಿಚಲಿತವಾಗುತ್ತಿದ್ದ ನನ್ನ  ಹೃದಯವನ್ನು  ನೆನಪಿಸಿಕೊಳ್ಳುವುದಾದರೆ ಆಕೆ ವಿಶಾಲ ಹೃದಯದ ಬಡಹೆಂಗಸಾಗಿದ್ದಳು ಅನ್ನಿಸುತ್ತದೆ. ಹಳ್ಳಿಯಲ್ಲಿ ಏನೇನು ನಡೆಯುತ್ತಿತ್ತು ಎಂದು ಆಕೆ ನನಗೆ ತಿಳಿಸುವಳು. ದೊಡ್ಡಿಯಿಂದ ತಪ್ಪಿಸಿಕೊಂಡ ಹಸುವೊಂದು ಮಲ್ಲಪ್ಪನ ಮಿಲ್ಲಿನ ಬಳಿ ಮಿಶೀನು ತಿರುಗುವುದನ್ನೆ ನೋಡುತ್ತ ನಿಂತಿದ್ದಿದ್ದು, ಚರ್ಚಿನ ಗೋಪುರದ ಮೇಲೆ ಒಂದು ಮೊಟ್ಟೆ ಸಿಕ್ಕಿದ್ದು ಮತ್ತು ಅದನ್ನು ಅಲ್ಲಿಡಲು ಯಾವ ಪ್ರಾಣಿ ಅಲ್ಲಿಯವರೆಗೆ ಹೋಗಿತ್ತು ಎಂದು ಯಾರಿಗೂ ಅರ್ಥವಾಗದೇ ಇದ್ದಿದ್ದು, ಮಳೆಯಲ್ಲಿ ನೆನೆದು ಒದ್ದೆಯಾದವೆಂದು ಒಣಹಾಕಿದ್ದ ಪಿಳ್ಳಯ್ಯನ ಸಾಕ್ಸುಗಳನ್ನು ಕದ್ದುಕೊಂಡುಹೋದ ಭಿಕ್ಷುಕನನ್ನೊಬ್ಬನನ್ನು ಸುಮಾರು ಹದಿನೈದು ಮೈಲಿಗಳವರೆಗೆ ಫಾಲೋ ಮಾಡಿ ಅವನ್ನು ವಾಪಾಸು ತೆಗೆದೊಕೊಂಡು ಬಂದ ಅವನ ನಾಯಿಯ ವಿಚಿತ್ರ ಕಥೆ.. ಇಂತಹ ಕಥೆಗಳನ್ನೆಲ್ಲ ಆಕೆ ನನಗೆ ಹೇಗೆ ಹೇಳುತ್ತಿದ್ದಳೆಂದರೆ ನನ್ನ ಮನಸ್ಸಿನಲ್ಲಿ ಅವು ಮರೆಯಲಾಗದ ನಾಟಕಗಳಂತೆ, ಅದ್ದೂರಿಯಾದ ನಿಗೂಢ ಕವಿತೆಗಳಂತೆ ಮತ್ತು ಕವಿಗಳು ಹುಟ್ಟುಹಾಕಿದ ಅಪೂರ್ವ ಕಥೆಗಳಂತೆ ತೋರುತ್ತಿದ್ದವು ಮತ್ತು ಇವನ್ನೆಲ್ಲ ಸಂಜೆ ನನ್ನಮ್ಮ ನನಗೆ ಹೇಳುತ್ತಿದ್ದಳಾದರೂ ಅವು ಆ ರೈತಾಪಿ ಹೆಂಗಸು ಹೇಳುತ್ತಿದ್ದ ಸಂಗತಿಗಳ ರುಚಿ, ಸಂಪೂರ್ಣತೆ ಅಥವಾ ಚೈತನ್ಯವನ್ನು ಹೊಂದಿರಲಿಲ್ಲ.
ಇಂತಹದೇ ಒಂದು ಗುರುವಾರ ಬೆಳಿಗ್ಗೆಯಿಡೀ ವಲ್ಲಿಯಮ್ಮನ ಮಾತು ಕೇಳುತ್ತ ಕಳೆದು ತೋಟದ ಹಿಂದಿನ ಕಾಡಿನಲ್ಲಿ ಆಳುಗಳ ಜತೆ ನೆಲ್ಲೀಕಾಯಿಗಳನ್ನು ಆರಿಸಿದ ಮೇಲೆ ನನಗೆ ವಲ್ಲಿಯಮ್ಮನ ಕೋಣೆಗೆ ಮತ್ತೆ ಹೋಗಬೇಕೆನಿಸಿತು. ಆ ದಿನ ಇನ್ನೂ ನನಗೆ ನಿನ್ನೆ ನಡೆದ ಹಾಗೆ ನೆನಪಿದೆ.
ಹೊಲಿಗೆಕೋಣೆಯ ಬಾಗಿಲು ದೂಡಿದಾಗ ಆ ದರ್ಜಿ ಮುದುಕಿ ಕುರ್ಚಿಯ ಬಳಿಯ ನೆಲದ ಮೇಲೆ ಬಿದ್ದಿರುವುದು ನನಗೆ ಕಾಣಿಸಿತು. ಆಕೆಯ ಮುಖ ಬೋರಲಾಗಿತ್ತು ಮತ್ತು ಆಕೆಯ ಕೈಗಳು ಉದ್ದಕ್ಕೆ ಚಾಚಿದ್ದವು. ಆದರೆ ಒಂದು ಕೈಯಲ್ಲಿ ಸೂಜಿ ಮತ್ತು ಇನ್ನೊಂದು ಕೈಯಲ್ಲಿ ಒಂದು ಶರ್ಟು ಹಾಗೇ ಇದ್ದವು. ಆಕೆಯ ಹೆಚ್ಚು ಉದ್ದನೆಯ ಕಾಲು ಆಕೆ ಕೂತಿದ್ದ ಕುರ್ಚಿಯಡಿ ಚಾಚಿಕೊಂಡಿತ್ತು ಮತ್ತು ಆಕೆಯಿಂದ ದೂರ ಉರುಳಿಕೊಂಡು ಹೋಗಿದ್ದ ಕನ್ನಡಕ ಗೋಡೆಯ  ಬಳಿ ಹೊಳೆಯುತ್ತಿತ್ತು.
ನಾನು ಜೋರಾಗಿ ಕಿರುಚುತ್ತಾ ಅಲ್ಲಿಂದ ಓಡಿಹೋದೆ. ಅವರೆಲ್ಲ ಓಡುತ್ತ ಬಂದರು ಮತ್ತು ಕೆಲವೇ ನಿಮಿಷಗಳಲ್ಲಿ ವಲ್ಲಿಯಮ್ಮ ಸತ್ತುಹೋದರೆಂದು ನನಗೆ ತಿಳಿಸಿದರು.
ನನ್ನ ಬಾಲಹೃದಯವನ್ನು ಹಿಡಿದಲ್ಲಾಡಿಸಿದ ಆ ಅಗಾಧ, ಮನೋಭೇದಕ, ದಾರುಣವಾದ ನೋವನ್ನು ವಿವರಿಸಲಾರೆ. ನಾನು ಮೆಲ್ಲಗೆ ಹಜಾರಕ್ಕೆ ಹೋಗಿ ದೊಡ್ಡ, ಹಳೆಯ ಕುರ್ಚಿಯೊಂದರ ಆಳಗಳಲ್ಲಿ ಅವಿತು ಕೂತುಕೊಂಡು ಅಳತೊಡಗಿದೆ. ಅಲ್ಲಿಯೇ ನಾನು ಸುಮಾರುಹೊತ್ತು ಕೂತಿರಬೇಕು, ಏಕೆಂದರೆ ರಾತ್ರಿಯಾಯಿತು. ಇದ್ದಕ್ಕಿದ್ದಂತೆ ಅಲ್ಲಿಗೆ ಯಾರೋ ಒಂದು ದೀಪ ಹಿಡಿದುಕೊಂಡು ಬಂದರು..ಅವರಿಗೆ ನಾನು ಕಾಣಿಸಿರಲಿಕ್ಕಿಲ್ಲ..ಮತ್ತು ನನಗೆ ನನಗೆ ಪರಿಚಿತವಿದ್ದ ವೈದ್ಯರ ದನಿಯು ನನ್ನ ಅಪ್ಪ, ಅಮ್ಮನ ಜತೆ ಮಾತನಾಡುವುದು ನನಗೆ ಕೇಳತೊಡಗಿತು.
ಅವರಿಗೆ ಕೂಡಲೆ ಹೇಳಿಕಳಿಸಲಾಗಿತ್ತು ಮತ್ತು ಅವರು ಸಾವಿನ ಕಾರಣವನ್ನು ವಿವರಿಸುತ್ತಿದ್ದಿದ್ದು ನನಗೇನೂ ಅರ್ಥವಾಗಲಿಲ್ಲ. ಆಮೇಲೆ ಅವರು ಕೂತುಕೊಂಡು ಕೊಂಚ ಕಾಫಿ ಮತ್ತು ಬಿಸ್ಕೀಟುಗಳನ್ನು ಸೇವಿಸಿದರು.
ಆವರು ಮಾತನಾಡುತ್ತಲೇ ಇದ್ದರು ಮತ್ತು ಅಂದು ಅವರು ಹೇಳಿದ್ದು ಸಾಯುವವರೆಗೂ ನನ್ನ ಮನಸ್ಸಿನಿಂದ ಮರೆಯಾಗಲಿಕ್ಕಿಲ್ಲ. ನಾನು ಅವರು ಹೇಳಿದ ಮಾತುಗಳನ್ನು ಅಂತೆಯೇ ಪುನರಾವರ್ತಿಸಬಲ್ಲೆ  ಅನ್ನಿಸುತ್ತದೆ ನನಗೆ.
“ಆಹ್!!” ಆತ ಹೇಳಿದರು. “ಪಾಪದ ಹೆಂಗಸು! ನಾನು ಇಲ್ಲಿಗೆ ಬಂದ ದಿನವೇ ಆಕೆ ಕಾಲು ಮುರಿದುಕೊಂಡದ್ದು. ನಾನು ಡ್ಯೂಟಿ ಮುಗಿಸಿ ಕೈತೊಳಿದಿರಲಿಕ್ಕೂ ಇಲ್ಲ, ಅರ್ಜೆಂಟಾಗಿ ಹೇಳಿಕಳಿಸಿದರು. ಬಹಳ ಕೆಟ್ಟ ಕೇಸಾಗಿತ್ತು ಅದು, ಬಹಳ ಕೆಟ್ಟದಾಗಿತ್ತು ಸ್ಥಿತಿ.”
“ಆಗ ಅವಳಿಗೆ ಹದಿನೇಳು ವರ್ಷ ಮತ್ತು ಚೆಂದದ ಹುಡುಗಿ, ಬಲು ಚೆಂದ! ಯಾರಾದರು ನಂಬ್ತಾರೆಯೆ? ನಾನು ಅವಳ ಕಥೇನ ಇದಕ್ಕೆ ಮುಂಚೆ ಹೇಳಿಯೇ ಇಲ್ಲ; ನಿಜ ಹೇಳಬೇಕೆಂದರೆ ಇದು ನನಗೆ ಮತ್ತು ಇನ್ನೊಂದು ವ್ಯಕ್ತಿಗೆ ಮಾತ್ರ ಗೊತ್ತಿರುವುದು, ಹಾಗೂ ಆ ವ್ಯಕ್ತಿ ಈಗ ಈ ಕಡೆಯಲ್ಲೆಲ್ಲು ವಾಸವಾಗಿಲ್ಲ. ಈಗ ಆಕೆ ಸತ್ತುಹೋಗಿರೋದರಿಂದ ನಾನು ಈ ವಿಷಯದ ಬಗ್ಗೆ ಮಾತನಾಡಬಹುದು ಅಂತ ಕಾಣುತ್ತೆ.
ಹಳ್ಳಿಗೆ ಆ ಅಸಿಸ್ಟೆಂಟ್ ಟೀಚರ್ ವಾಸವಾಗಿರಲು ಆಗಷ್ಟೆ ಬಂದಿದ್ದ; ನೋಡಲು ಚೆನ್ನಾಗಿದ್ದ ಅವ ಮಿಲಿಟರಿಯವನ ಹಾಗಿದ್ದ. ಎಲ್ಲ ಹುಡುಗಿಯರೂ ಅವನ ಹಿಂದೆಯೇ ಬಿದ್ದಿದ್ದರೂ ಅವನು ಮಾತ್ರ ತಾತ್ಸಾರದಿಂದಲೆ ಇದ್ದ. ಇದಲ್ಲದೆ ಅವನಿಗೆ ತನ್ನ ಮೇಲಧಿಕಾರಿಯಾಗಿದ್ದ ಶಾಲಾ ಮಾಸ್ತರ ಮುದುಕ ಗೌರೀಶನ ಬಗ್ಗೆ ಬಹಳ ಭಯವಿತ್ತು. ಈ ಗೌರೀಶ ಯಾವಾಗಲೂ ಹಾಸಿಗೆಯಿಂದೇಳುವಾಗ ಎಡಬದಿಗೇ ಏಳುತ್ತಿದ್ದ ಎನ್ನುವ ಹಾಗಿದ್ದ.
ಮುದುಕ ಗೌರೀಶ ಅದಾಗಲೇ ಈಗ ಸತ್ತುಹೋಗಿದಾಳಲ್ಲ, ಅದೇ ಪುಷ್ಪವಲ್ಲಿಯನ್ನ ಕೆಲಸಕ್ಕಿಟ್ಟುಕೊಂಡಿದ್ದ, ಅದು ಆವಾಗ ಆಕೆಯ ಹೆಸರು, ಆಮೇಲೆ ಆಕೆಗೆ ಈಗ ವಲ್ಲಿಯಮ್ಮ ಅಂತ ನೀವೆಲ್ಲ ಕರೀತೀರಲ್ಲ ಆ ಆಡ್ಡಹೆಸರು ಬಂದಿದ್ದು. ಯುವ ಅಸಿಸ್ಟೆಂಟ್ ಮಾಸ್ತರ ಈ ಚೆಂದದ ಹುಡುಗಿಯನ್ನ ತನಗಾಗಿ ಆಯ್ದುಕೊಂಡ ಮತ್ತು ಆ ಹುಡುಗಿಯೂ ಈ ತಾತ್ಸಾರಮನೋಭಾವದ ಯೋಧ ತನ್ನನ್ನು ಆಯ್ಕೆಮಾಡಿಕೊಂಡದ್ದನ್ನೆ ಗೌರವ ಎಂದು ಭಾವಿಸಿದಳು. ಏನಾದರಾಗಲಿ, ಆಕೆ ಆತನನ್ನು ಪ್ರೇಮಿಸತೊಡಗಿದಳು ಮತ್ತು ಆತ ಆಕೆಯನ್ನು ದಿನದ ಹೊಲಿಗೆ ಕೆಲಸವೆಲ್ಲ ಮುಗಿದ ನಂತರ ಶಾಲೆಯ ಹಿಂದೆಯೇ ಇದ್ದ ಹುಲ್ಲಿನ ಬಣವೆಯಲ್ಲಿ ಮೊದಲ ಬಾರಿಗೆ ಭೇಟಿಯಾಗಲು ಬರುವಂತೆ ಮನವೊಲಿಸಿದ.
ಅವಳು ಮನೆಗೆ ಹೋಗುವವಳ ಹಾಗೆ ನಟಿಸಿದಳು ಮತ್ತು ಕೆಳಗೆ ಹೋಗುವುದಕ್ಕೆ ಬದಲಾಗಿ ಅವಳು ಮೇಲೆ ಹೋಗಿ ತನ್ನ ಪ್ರಿಯತಮನಿಗಾಗಿ ಕಾಯುತ್ತ ಹುಲ್ಲಿನಲ್ಲಿ ಅಡಗಿಕೊಂಡಳು. ಕೆಲ ಸಮಯದಲ್ಲೆ ಆತನೂ ಬಂದ, ಮತ್ತು ಆಕೆಯ ಬಳಿ ಚೆಂದದ ಮಾತುಗಳನ್ನಾಡಲು ತೊಡಗಿದ. ಆಗ ಬಣವೆಯಿದ್ದ ಕೊಟ್ಟ್ತಿಗೆಯ ಬಾಗಿಲು ತೆರೆದುಕೊಂಡಿತು ಮತ್ತು ಅಲ್ಲಿ ಕಾಣಿಸಿಕೊಂಡ ಶಾಲಾ ಮಾಸ್ತರ ಕೇಳಿದ
“ಅಲ್ಲೇನು ಮಾಡ್ತಿದೀಯ ಸುಧಾಕರ?”.
ತಾನು ಸಿಕ್ಕಿಹಾಕಿಕೊಳ್ಳುವುದು ಖಚಿತವೆಂದುಕೊಳ್ಳುತ್ತ ಆ ಯುವಕ ಮಾಸ್ತರನ ಯುಕ್ತಿಯೆಲ್ಲ ಎತ್ತಲೋ ಹಾರಿಹೋಯಿತು ಮತ್ತು ಅವ ಪೆದ್ದುಪೆದ್ದಾಗಿ ಉತ್ತರಿಸಿದ: ‘ನಾನು ಹುಲ್ಲಿನ ಮೇಲೆ ಮಲಕೊಂಡು ಕೊಂಚ ವಿಶ್ರಾಂತಿ ತಗೊಳೋಣ ಅಂತ ಬಂದೆ, ಅಷ್ಟೆ ಸಾರ್.’
ಆ ಕೊಟ್ಟಿಗೆ ಬಲು ದೊಡ್ಡದಾಗಿತ್ತು ಮತ್ತೆ ಅಲ್ಲಿ ಸಿಕ್ಕಾಬಟ್ಟೆ ಕತ್ತಲಿತ್ತು. ಸುಧಾಕರ ಆ ಹುಡುಗಿಯನ್ನ ಒಂದು ಕಡೆ ದೂಕಿ ಹೇಳಿದ: ‘ಆಕಡೆಗೆ ಹೋಗಿ ಅವಿತುಕೋ. ನನ್ನ ಪರಿಸ್ಥಿತಿ ಚೆನ್ನಾಗಿಲ್ಲ, ಆದ್ರಿಂದ ದೂರ ಹೋಗಿ ಬಚ್ಚಿಟ್ಟುಕೋ’
ಈ ಪಿಸುಗುಟ್ಟುವಿಕೆಯನ್ನ ಕೇಳಿಸಿಕೊಂಡ ಶಾಲಾಮಾಸ್ತರ ಮುಂದುವರಿಸಿದ: ‘ಯಾಕೆ, ಅಲ್ಲಿ ನೀನೊಬ್ಬನೇ ಇಲ್ಲಾಂತ ಕಾಣುತ್ತೆ.’
’ನಾನೊಬ್ನೇ ಇದೀನಿ ಸಾರ್ ಇಲ್ಲಿ!’
’ಇಲ್ಲ, ಯಾಕಂದ್ರೆ ನೀನು ಮಾತಾಡ್ತಾ ಇದೀಯ.’
’ನಾನು ಆಣೆ ಮಾಡಿ ಹೇಳ್ತೀನಿ ಸಾರ್’
’ನಾನು ಬೇಗದಲೆ ಕಂಡು ಹಿಡೀತೀನಿ’  ಆ ಮುದುಕ ಹೇಳಿದ ಮತ್ತೆ ಕೊಟ್ಟಿಗೆಯ ಬಾಗಿಲಿಗೆ ಎರಡೆರಡು ಬೀಗ ಹಾಕಿ ಬೆಳಕು ತರಲು ಹೊರಹೋದ.
ಇಂಥಾ ಪರಿಸ್ಥಿತಿಗಳಲ್ಲಿ ಕೆಲವೊಮ್ಮೆ ಹೇಡಿಗಳು ಕಂಡುಬರುವ ಹಾಗೆ ಆ ಯುವಕ ತನ್ನ ಸ್ಥಿಮಿತ ಕಳೆದುಕೊಂಡು ಇದ್ದಕ್ಕಿದ್ದಹಾಗೆ ಕುಪಿತನಾಗಿ ಪದೇಪದೇ ಹೇಳತೊಡಗಿದ: ‘ಬಚ್ಚಿಟ್ಟುಕೋ, ಅವನು ನಿನ್ನನ್ನ ಕಂಡುಹಿಡೀಕೂಡದು. ನಿನ್ನಿಂದ ನನ್ನ ಜೀವನವಿಡೀ ಸಂಪಾದನೆಗೆ ಸಂಚಕಾರ ಬಂದುಬಿಡತ್ತೆ; ನಿನ್ನಿಂದಾಗಿ ನನ್ನ ವೃತ್ತಿಜೀವನವೇ ಹಾಳಾಗಿಹೋಗತ್ತೆ! ಮೊದ್ಲು ಅವಿತುಕೋ!’
ಅವರಿಗೆ ಮತ್ತೆ ಬೀಗ ತೆರೆಯುವ ಸದ್ದು ಕೇಳಿಸಿತು ಮತ್ತು ಪುಷ್ಪವಲ್ಲಿ ಬೀದಿಯ ಕಡೆಗೆ ಇದ್ದ ಕಿಟಕಿಯ ಕಡೆಗೆ ಓಡಿ ಬಲುಬೇಗನೆ ಅದನ್ನು ತೆರೆದವಳೇ ತಗ್ಗಿದ ಆದರೆ ನಿರ್ಣಾಯಕ  ದನಿಯಲ್ಲಿ ಹೇಳಿದಳು:
‘ಆತ ಹೋದ ನಂತರ ನೀನು ಬಂದು ನನ್ನನ್ನ ಕರೆದುಕೊಂಡು ಹೋಗಬೇಕು,’ ಮತ್ತೆ ಅವಳು ಹೊರಗೆ ಹಾರಿದಳು.
ಮುದುಕ ಗೌರೀಶಪ್ಪನಿಗೆ ಯಾರೂ ಕಾಣಲಿಲ್ಲ ಮತ್ತು ಅಚ್ಚರಿಪಡುತ್ತ ಆತ ಕೆಳಗೆ ಹೊರಟುಹೋದ! ಕಾಲುಗಂಟೆ ಕಳೆದನಂತರ ಸುಧಾಕರ ನನ್ನ ಹತ್ತಿರ ಬಂದವನೇ ತನ್ನ ಸಾಹಸದ ಬಗ್ಗೆ ತಿಳಿಸಿದ. ಆ ಹುಡುಗಿ ಎರಡನೆ ಮಹಡಿಯಿಂದ ಬಿದ್ದಿದ್ದರಿಂದ ಏಳಲಿಕ್ಕಾಗದೆ ಗೋಡೆಗೆ ಒರಗಿಕೊಂಡು ಕೂತೇ ಇದ್ದಳು. ನಾನು ಅವನ ಜತೆ ಆಕೆಯನ್ನ ಕರೆದುಕೊಂಡು ಹೋಗಲು ಹೋದೆ. ಮಳೆ ಜೋರಾಗಿ ಸುರಿಯುತ್ತಲೇ ಇತ್ತು ಮತ್ತು ಆ ದುರದೃಷ್ಟವಂತೆಯಾದ ಹುಡುಗಿಯನ್ನ ನನ್ನ ಮನೆಗೆ ಕರೆದುಕೊಂಡು ಬಂದೆ, ಏಕೆಂದರೆ ಆಕೆಯ ಬಲಗಾಲು ಮೂರು ಜಾಗಗಳಲ್ಲಿ ಮುರಿದುಹೋಗಿತ್ತು ಮತ್ತು ಮೂಳೆಗಳು ಮಾಂಸದಿಂದ ಈಚೆಗೆ ಬಂದುಬಿಟ್ಟಿದ್ದವು. ಅವಳು ನೋವಿನ ಬಗ್ಗೆ ಏನೂ ದೂರು ಹೇಳಲಿಲ್ಲ, ಆದರೆ ಶ್ಲಾಘನೀಯವೆನ್ನಬಹುದಾದ ತಾಳ್ಮೆಯೊಂದಿಗೆ ಉಸುರಿದಳು: ‘ನನಗೆ ಶಿಕ್ಷೆ ದೊರಕಿತು, ಒಳ್ಳೆಯ ಶಿಕ್ಷೆಯೇ ದೊರಕಿತು!’
ನಾನು ಸಹಾಯಕ್ಕಾಗಿ ಹೇಳಿಕಳಿಸಿದೆ ಮತ್ತು ಆಕೆಯ ಸ್ನೇಹಿತರನ್ನೂ ಕರೆಸಿದೆ ಮತ್ತು ಅವರಿಗೆಲ್ಲ ಆಕೆಯನ್ನು ನನ್ನ ಮನೆಯೆದುರಿಗೆ ಯಾವುದೋ ಗಾಡಿ ಗುದ್ದಿ ತಪ್ಪಿಸಿಕೊಂಡು ಹೊರಟುಹೋಯಿತೆಂದು ಎಂಥದೋ ಕಥೆಕಟ್ಟಿ ಹೇಳಿದೆ. ಅವರು ಅದನ್ನು ನಂಬಿದರು ಮತ್ತು ಪೊಲೀಸರು ಒಂದು ತಿಂಗಳವರೆಗೆ ಈ ಅಪಘಾತಕ್ಕೆ ಯಾರು ಕಾರಣರಿರಬಹುದು ಎಂದು ಹುಡುಕಾಡಿ ತಲೆಕೆಡಿಸಿಕೊಂಡರು.
ಅಷ್ಟೆ! ಈಗ ನಾನು ಹೇಳುವುದೇನೆಂದರೆ ಈ ಹುಡುಗಿ ಒಬ್ಬ ಹೀರೋಯಿನ್ ಮತ್ತು ಇತಿಹಾಸದಲ್ಲಿ ದೊಡ್ಡದೊಡ್ಡ ಸಾಧನೆ ಮಾಡಿದವರಷ್ಟು ದಮ್ ಇರುವವಳಾಗಿದ್ದಳು ಅಂತ.
ಅದು ಆಕೆಯ ಏಕೈಕ ಪ್ರೇಮಸಂಬಂಧವಾಗಿತ್ತು, ಮತ್ತು ಆಕೆ ಕುಮಾರಿಯಾಗಿಯೇ ಸತ್ತಳು. ಆಕೆ ಒಬ್ಬ ಹುತಾತ್ಮಳಾಗಿದ್ದಳು, ಒಂದು ಉದಾತ್ತ ಆತ್ಮವನ್ನು ಹೊಂದಿದ ಶ್ರೇಷ್ಠ ಹೆಣ್ಣಾಗಿದ್ದಳು! ಆಕೆಯನ್ನು ಬಹಳ ಗೌರವಿಸದೆ ಹೋಗಿದ್ದಲ್ಲಿ ನಾನು ಈ ಕಥೆಯನ್ನು ನಿಮಗೆ ಹೇಳುತ್ತಿರಲಿಲ್ಲ ಮತ್ತು ಆಕೆ ಬದುಕಿದ್ದಾಗ ಯಾರಿಗೂ ಹೇಳಲೂ ಇಲ್ಲ; ಯಾಕೆ ಅಂತ ನಿಮಗೆ ಅರ್ಥವಾಗಿರಬಹುದು.”
ವೈದ್ಯರು ಮಾತು ನಿಲ್ಲಿಸಿದರು; ಅಮ್ಮ ಅಳುತ್ತಿದ್ದಳು ಮತ್ತು ಅಪ್ಪ ಏನೋ ಹೇಳಿದ್ದು ನನಗೆ ಸರಿಯಾಗಿ ತಿಳಿಯಲಿಲ್ಲ; ಆಮೇಲೆ ಅವರೆಲ್ಲ ಕೋಣೆಯಿಂದ ಆಚೆ ಹೋದರು. ನಾನು ಕುರ್ಚಿಯ  ಮೇಲೆ ಮಂಡಿಯೂರಿ ಕುಳಿತು ಅಳುತ್ತಲೇ ಇದ್ದೆ. ಆಗಲೆ ನನಗೆ ಭಾರವಾದ ಹೆಜ್ಜೆಗಳು ಮತ್ತು ಸ್ಟೇರ್‌ಕೇಸಿಗೆ  ಏನೋ ತಗುಲುತ್ತಿರುವಹಾಗೆ ವಿಚಿತ್ರವಾದ ಸದ್ದುಗಳು ಕೇಳಿದವು.
ಅವರು ಪುಷ್ಪವಲ್ಲಿಯ ದೇಹವನ್ನು ಕೊಂಡೊಯ್ಯುತ್ತ ಇದ್ದರು.
ಚಿತ್ರಕೃಪೆ: http://www.toruiwaya.com

ಒಬ್ಬ ಮರ್ಯಾದಸ್ಥ ಮಹಿಳೆ (A Respectable Woman – Kate Chopin)

ಕೇಟ್ ಶೋಪಿನ್(ಹುಟ್ಟುನಾಮ ಕ್ಯಾಥರೀನ್ ಓ’ಫ್ಲಾಹರ್ಟಿ, ಫೆಬ್ರುವರಿ 7, 1850 – ಆಗಸ್ಟ್  22, 1904)ಳನ್ನು 20ನೇ ಶತಮಾನದ ಸ್ತ್ರೀವಾದಿ ಲೇಖಕಿಯರಲ್ಲಿ ಅಗ್ರಗಾಮಿಯೆಂದು ಪರಿಣಿಸಲಾಗುತ್ತದೆ. ಆಕೆಯ ಪ್ರಮುಖ ಕಥೆಗಳೆಂದರೆ – ‘ಡಿಸೈರೀಸ್ ಬೇಬಿ’, ‘ದ ಸ್ಟೋರಿ ಆಫ್ ಆನ್ ಅವರ್’, ಹಾಗೂ ‘ದ ಸ್ಟಾರ್ಮ್’. ಇದಲ್ಲದೆ ಆಕೆ ಕಾದಂಬರಿಗಳನ್ನೂ ರಚಿಸಿದ್ದಾಳೆ. ಕೇಟ್‌ಳ ಕಥೆಗಳು ಅಮೆರಿಕಾದ ಲೂಯಿಸಿಯಾನಾ ಪ್ರಾಂತ್ಯದಲ್ಲಿ ಕೇಂದ್ರಿತವಾಗಿವೆ. ಆಕೆಯ ಸ್ಥಳೀಕ ಕಥಾನಿರೂಪಣಾ ಶೈಲಿ ಬಹಳ ವಿಶಿಷ್ಟವಾಗಿದೆ. ಕೇಟಳ ಸಾವಿನ ನಂತರ ಆಕೆಯನ್ನು ಅಂದಿನ ಪ್ರಮುಖ ಲೇಖಕಿಯೆಂದು ಗುರುತಿಸಲಾಯಿತು.
ಮಿಸೆಸ್ ಬರೋಡಾಗೆ ಸೊಲ್ಪ ಕೋಪ ಬಂದುಬಿಟ್ಟಿತ್ತು. ಆಕೆಯ ಗಂಡ ತನ್ನ ಸ್ನೇಹಿತನಾದ ಪೂರ್ಣಚಂದ್ರನನ್ನು ಒಂದೆರಡುವಾರ ತಮ್ಮ ಪ್ಲಾಂಟೇಶನ್ನಿನಲ್ಲಿ ಕಳೆಯೋಕೆ ಆಹ್ವಾನಿಸಿದ್ದೇ ಇದಕ್ಕೆ ಕಾರಣ.
ಆ ಚಳಿಗಾಲ ಅವರುಗಳು ತಮ್ಮ ಮನೆಯಲ್ಲಿ ಸಿಕ್ಕಾಬಟ್ಟೆ ಆದರಾತಿಥ್ಯ ನಡೆಸಿದ್ದರು ಮತ್ತು ಬೆಂಗಳೂರಿನಲ್ಲಿಯೂ ಸುಮಾರು ದಿನಗಳ ಕಾಲ ಪಾರ್ಟಿ, ಕುಡಿತ, ಅದೂ ಇದೂ ಅಂತ ಎಲ್ಲಾ ರೀತಿಯಲ್ಲಿ ವ್ಯರ್ಥವಾಗಿ ಕಳೆದಿದ್ದೂ ಆಗಿತ್ತು. ಈಗ ಆಕೆ ಕೊಂಚ ವಿಶ್ರಾಂತಿ ಮತ್ತು ಗಂಡನ ಜತೆಗೆ ಅಡ್ಡಿತಡೆಗಳಿಲ್ಲದ ಸರಸ ಸಲ್ಲಾಪದ ದಿನಗಳನ್ನ ಬಯಸಿ ಎದುರು ನೋಡುತ್ತಿದ್ದಾಗ ಆತ ಈ ಪೂರ್ಣಚಂದ್ರ ಒಂದೆರಡು ವಾರಗಳ ಕಾಲ ತಮ್ಮೊಂದಿಗೆ ಇರಲಿರುವನೆಂಬ ಸುದ್ದಿ ಕೊಟ್ಟ.
ಈ ಮನುಷ್ಯನ ಬಗ್ಗೆ ಆಕೆ ಬಹಳಷ್ಟು ಕೇಳಿದ್ದಳಾದರೂ ಆತನನ್ನು ಭೇಟಿಯಾಗಿದ್ದಿಲ್ಲ. ಕಾಲೇಜಿನಲ್ಲಿ ಆಕೆಯ ಗಂಡನ ಸಹಪಾಠಿಯಾಗಿದ್ದು ಈಗ ಪತ್ರಕರ್ತನಾಗಿದ್ದ ಪೂರ್ಣಚಂದ್ರ ಜನರ ಜತೆ ಅಷ್ಟೇನೂ ಬೆರೆಯುತ್ತಿರಲಿಲ್ಲವಾಗಿದ್ದು ಆಕೆ ಇಲ್ಲಿಯವರೆಗೆ ಆತನನ್ನು ಭೇಟಿಯಾಗದಿದ್ದುದಕ್ಕೆ ಇದ್ದ ಕಾರಣಗಳಲ್ಲಿ ಬಹುಶಃ ಒಂದಾಗಿತ್ತು ಅನ್ನಿಸುತ್ತದೆ. ಆದರೆ ತನಗೇ ಅರಿವಿಲ್ಲದ ಹಾಗೆ ಆಕೆ ಅವನ ಒಂದು ಇಮೇಜನ್ನ ತನ್ನ ಮನಸ್ಸಿನಲ್ಲಿ ಕಟ್ಟಿಕೊಂಡಿದ್ದಳು. ಆಕೆಯ ಪ್ರಕಾರ ಪೂರ್ಣಚಂದ್ರನೆಂದರೆ ಎತ್ತರವಾಗಿದ್ದು, ತೆಳ್ಳಗೆ, ಸಿನಿಕನಾಗಿರುವ, ಕನ್ನಡಕ ಹಾಕಿಕೊಂಡು ತನ್ನ ಜೇಬುಗಳೊಳಗೆ ಕೈಗಳನ್ನು ಇಳಿಬಿಟ್ಟ ಒಬ್ಬ ಮನುಷ್ಯ. ಈ ಕಲ್ಪನೆಯ ಮನುಷ್ಯ ಆಕೆಗೆ ಇಷ್ಟವೇ ಇರಲಿಲ್ಲ. ಪೂರ್ಣಚಂದ್ರ ನಿಜವಾಗಿ ತೆಳ್ಳಗಿದ್ದರೂ ಬಹಳ ಎತ್ತರವೂ ಇರಲಿಲ್ಲ ಅಥವಾ ಸಿನಿಕಪ್ರವೃತ್ತಿಯವನಾಗಿರಲಿಲ್ಲ; ಆತ ಕನ್ನಡಕ ಹಾಕುತ್ತ ಇರಲಿಲ್ಲ ಮತ್ತೆ ತನ್ನ ಕೈಗಳನ್ನ ಜೇಬುಗಳಲ್ಲಿ ಇಳಿಬಿಟ್ಟುಕೊಳ್ಳುತ್ತಲೂ ಇರಲಿಲ್ಲ. ಆತನನ್ನು ಮೊದಲಬಾರಿಗೆ ಭೇಟಿಯಾದಾಗ ಮಿಸೆಸ್ ಬರೋಡಾಗೆ ಆತ ಮೆಚ್ಚುಗೆಯಾದ ಕೂಡಾ.
ಆದರೆ ಆಕೆ ಪೂರ್ಣಚಂದ್ರನನ್ನು ಮೆಚ್ಚಿಕೊಂಡಿದ್ದು ಯಾಕೆ ಎಂದು ತನಗೆ ತಾನೇ ಪ್ರಶ್ನೆ ಹಾಕಿಕೊಳ್ಳಲು ಸೊಲ್ಪ ಪ್ರಯತ್ನಪಟ್ಟಾಗಲೂ ತೃಪ್ತಿಕರ ಉತ್ತರ ಕೊಟ್ಟುಕೊಳ್ಳುವುದು ಆಕೆಗೆ ಸಾಧ್ಯವಾಗಲಿಲ್ಲ. ಆಕೆಯ ಗಂಡ ಯಶವಂತ ಆಗಾಗ ತನ್ನಲ್ಲಿದೆ ಅಂತ ಹೇಳಿಕೊಳ್ಳುವ ಜಾಣತನ ಅಥವಾ ಭರವಸೆ ಮೂಡಿಸುವ ಗುಣಗಳನ್ನಾಗಲೀ ಈತನಲ್ಲಿ ಆಕೆಗೆ ಕಂಡುಹಿಡಿಯಲಿಕ್ಕೇ ಆಗಲಿಲ್ಲ. ಇದಕ್ಕೆ ವಿರುದ್ಧವಾಗಿ ಅತಿಥಿಯನ್ನು ಮನೆಗೆ ಹೊಂದಿಕೊಳ್ಳುವಂತೆ ಮಾಡುವ ಆಕೆಯ ಆತುರದ ಚಟಪಟ ಮಾತುಗಾರಿಕೆ ಮತ್ತು ಯಶವಂತನ ನೇರ ಮಾತುಕತೆಯ ಆತಿಥ್ಯದೆದುರು ಪೂರ್ಣಚಂದ್ರ ಮೂಕಪ್ರೇಕ್ಷಕನ ಹಾಗೆ ಕೂತೇ ಇದ್ದ. ಆಕೆಯ ಜತೆ ಆತನ ನಡವಳಿಕೆ ಒಬ್ಬ ಮಹಿಳೆ ಹೇಗೆ  ಬಯಸುವಳೋ ಹಾಗೇ ಇತ್ತಾದರೂ ಆತ ಆಕೆಯಿಂದ ಮೆಚ್ಚುಗೆ ಅಥವಾ ಗೌರವ ಪಡೆಯುವ ಯಾವ ವಿಶೇಷ ಪ್ರಯತ್ನವನ್ನೂ ಮಾಡಲಿಲ್ಲ.
ಪ್ಲಾಂಟೇಶನ್ನಿಗೆ ಬಂದು ಇರಲಾರಂಭಿಸಿದ ಮೇಲೆ ಆತನಿಗೆ ವಿಶಾಲವಾದ ಪೋರ್ಟಿಕೋದಲ್ಲಿದ್ದ ಕಾರಿಂಥಿಯನ್ ಶೈಲಿಯ ಕಂಬದ ನೆರಳಿನಲ್ಲಿ ಕೂತುಕೊಂಡು ಆರಾಮವಾಗಿ ಸಿಗಾರ್ ಸೇದುತ್ತಾ ಯಶವಂತನ ಸಕ್ಕರೆ ಬೆಳೆಯುವ ಅನುಭವಗಳ ಬಗ್ಗೆ ಆಸಕ್ತಿಯಿಂದ ಕೇಳುತ್ತಾ ಇರುವುದು ಇಷ್ಟವೇನೋ ಅನ್ನುವ ಥರ ಕಾಣತೊಡಗಿತು.
ಕಬ್ಬಿನ ಗದ್ದೆಗಳನ್ನು ಸವರುತ್ತ ಬರುವ ಸುಗಂಧಪೂರಿತ ಗಾಳಿ ಅತನನ್ನು ಬೆಚ್ಚಗೆ, ವೆಲ್ವೆಟಿನಂತೆ ಸವರಿದಾಗೆಲ್ಲ ಆತ ಆಳವಾದ ಸಂತೃಪ್ತಿಯೊಡನೆ “ಇದೇ, ಇದನ್ನೇ ನಾನು ಬದುಕು ಅಂತ ಕರೆಯೋದು,” ಎಂದು ಉಸುರುವನು. ಆತನಿಗೆ ತನ್ನ ಕಾಲುಗಳಿಗೆ ಮೈ ತಿಕ್ಕಿಕೊಳ್ಳುತ್ತ ಬಳಿ ಬರುವ ದೊಡ್ಡ ನಾಯಿಗಳ ಜತೆ ಆತ್ಮೀಯವಾಗಿ ವರ್ತಿಸುವುದು ಬಹಳ ಖುಶಿಕೊಡುತ್ತಿತ್ತು. ಮೀನು ಹಿಡಿಯುವುದು ಆತನಿಗೆ ಇಷ್ಟವಿದ್ದಹಾಗೆ ಕಾಣಲಿಲ್ಲ ಮತ್ತು ಯಶವಂತ ಮೊಲದ ಶಿಕಾರಿ ಮಾಡಲು ಕರೆದಾಗಲೂ ಅವನು ಅಂತಹಾ ಆಸಕ್ತಿಯನ್ನೇನೂ ತೋರಲಿಲ್ಲ.
ಮಿಸೆಸ್ ಬರೋಡಾಳಿಗೆ ಪೂರ್ಣಚಂದ್ರನ ವ್ಯಕ್ತಿತ್ವ ಒಗಟಿನಂತೆ ಕಂಡುಬಂದರೂ ಆಕೆಗೆ ಆತ ಇಷ್ಟವಾದ. ಆತ ಒಬ್ಬ ಪ್ರೀತಿಪಾತ್ರನಾದ, ಸೌಮ್ಯ ವ್ಯಕ್ತಿಯಾಗಿದ್ದ. ಕೆಲವು ದಿನಗಳ ನಂತರ, ಆತನನ್ನು ಮೊದಲ ದಿನ ಕಂಡಿದ್ದಕ್ಕಿಂತ ಒಂದು ಚೂರೂ ಜಾಸ್ತಿ ಅರ್ಥಮಾಡಿಕೊಳ್ಳಲು ಅಸಾಧ್ಯ ಅನಿಸಿದಾಗ ಅದರ ಬಗ್ಗೆ ವಿಚಾರಮಾಡುವುದನ್ನ ಬಿಟ್ಟರೂ ಆಕೆಯೊಳಗಿನ ಕಿರಿಕಿರಿ ಕಡಿಮೆಯಾಗಲಿಲ್ಲ. ಇದೇ ಮೂಡಿನಲ್ಲಿ ಅವಳು ತನ್ನ ಅತಿಥಿ ಮತ್ತು ಗಂಡನನ್ನು ಹೆಚ್ಚಾಗಿ ಏಕಾಂತದಲ್ಲಿರಲು ಬಿಟ್ಟು ಹೋಗಿಬಿಡುತ್ತಿದ್ದಳು. ಇದರಿಂದಲೂ ಪೂರ್ಣಚಂದ್ರನಿಗೆ ಬೇಸರವಾಗದೇ ಇರುವುದನ್ನು ಕಂಡು ಆಕೆ ಬೇಕೆಂದೇ ತನ್ನನ್ನು ಅವನ ಮೇಲೆ ಹೇರತೊಡಗಿದಳು; ಉದಾಹರಣೆಗೆ  ಆತ ಮಿಲ್ ಕಡೆಗೆ ಅಥವಾ ಆಲೆಮನೆಯ ಕಡೆಗೆ ಏಕಾಂತವಾಗಿ ವಾಕ್ ಹೊರಟಾಗ ಇವಳೂ ಜತೆಗೆ ಹೋಗುವಳು. ಆತ ತನ್ನ ಸುತ್ತ ತನಗರಿವಿಲ್ಲದೆಯೇ ನಿರ್ಮಿಸಿಕೊಂಡಿದ್ದ ಗಾಂಭೀರ್ಯವನ್ನು ಮುರಿಯಲು ಆಕೆ ಎಡೆಬಿಡದೆ ಪ್ರಯತ್ನಿಸಿದಳು.
“ಯಾವಾಗ ಹೋಗುತ್ತಾನವನು-ನಿಮ್ಮ ಸ್ನೇಹಿತ?” ಒಂದು ದಿನ ಆಕೆ ಯಶವಂತನನ್ನು ಕೇಳಿದಳು. “ನನ್ನ ಮಟ್ಟಿಗೆ ಹೇಳೋದಾದರೆ ನನಗೆ ಸಿಕ್ಕಾಬಟ್ಟೆ ಬೇಸತ್ತುಹೋಗಿದೆ ಅವನಿಂದ.”
“ಇನ್ನೊಂದು ವಾರದವರೆಗೂ ಇಲ್ಲ ಡಿಯರ್. ನಂಗೆ ಅರ್ಥವಾಗ್ತಾ ಇಲ್ಲ; ಅವನು ನಿಂಗೇನೂ ತೊಂದರೆ ಕೊಡ್ತಾ ಇಲ್ಲ.”
“ಇಲ್ಲ. ತೊಂದರೆ ಕೊಟ್ರೇ ಅವನನ್ನ ಜಾಸ್ತಿ ಮೆಚ್ಚಿಕೋಬಹುದು; ಅವನು ಬೇರೆಯೋರ ಹಾಗಿದ್ದರೆ, ನಾನು ಅವನ ಆರಾಮ ಮತ್ತೆ ಮನರಂಜನೆಗೆ ಏನಾದರೂ ಏರ್ಪಾಡು ಮಾಡುವ ಹಾಗಿದ್ದರೆ.”
ಯಶವಂತ ತನ್ನ ಮಡದಿಯ ಮುದ್ದು ಮುಖವನ್ನ ತನ್ನ ಬೊಗಸೆಯ ಮಧ್ಯ ಇರಿಸಿ ಆಕೆಯ ಯೋಚನಾಕ್ರಾಂತ ಕಣ್ಣುಗಳನ್ನು ಮೃದುವಾಗಿ ನಗುತ್ತ ದಿಟ್ಟಿಸಿದ.
ಅವರಿಬ್ಬರೂ ಮಿಸೆಸ್ ಬರೋಡಾಳ ಡ್ರೆಸಿಂಗ್ ರೂಮಿನಲ್ಲಿ ಕೊಂಚ ಆಪ್ತವಾದ ಮಾತುಕತೆ ನಡೆಸುತ್ತ ಇದ್ದರು.
“ನನ್ನ ಹೆಣ್ಣೆ, ನೀನು ಎಷ್ಟೊಂದು ಆಚ್ಚರಿ ಉಂಟುಮಾಡುತ್ತೀ,” ಆತ ಆಕೆಗೆ ಹೇಳಿದ. “ನೀನು ಮಾಮೂಲು ಪ್ರಸಂಗಗಳಲ್ಲೂ ಹೇಗೆ ನಡೆದುಕೊಳ್ತೀಯ ಅಂತ ನಾನೂ ಕೂಡ ಹೇಳೋಕೆ ಸಾಧ್ಯವಾಗೋದಿಲ್ಲ.” ಆತ ಆಕೆಗೆ ಮುತ್ತೊಂದನ್ನು ನೀಡಿ ತನ್ನ ಕಫ್ಲಿಂಕ್ ಹಾಕಿಕೊಳ್ಳಲು ಕನ್ನಡಿಯ ಕಡೆ ತಿರುಗಿಕೊಂಡ.
“ನೀನು ನೋಡು ಹೇಗಿದೀಯ,” ಆತ ಮುಂದುವರೆಸಿದ, “ಆ ಪಾಪದ ಪೂರ್ಣಚಂದ್ರನ ಬಗ್ಗೆ ಇಲ್ಲಸಲ್ಲದ ಗಲಾಟೆ ಮಾಡ್ತಾ ಇದೀಯ, ಅವ ಇದನ್ನ ಬಯಸಲಿಕ್ಕೇ ಇಲ್ಲ.”
“ಗಲಾಟೆ!” ಆಕೆ ತೀಕ್ಷ್ಣವಾಗಿ ನುಡಿದಳು. “ನಾನ್ಸೆನ್ಸ್! ನೀವು ಹೀಗೆ ಹೇಳಬೋದಾದ್ರೂ ಹೇಗೆ? ಗಲಾಟೇನೇ, ನಿಜ್ವಾಗ್ಲೂ! ಆದ್ರೆ ನೀವೇ ಹೇಳಿದ್ರಲ್ಲಾ, ಅವ ಬಹಳ ಜಾಣ ಅಂತ.”
“ಹೌದು, ಅವ ಜಾಣನೇ. ಆದರೆ ಪಾಪದ ಮನುಷ್ಯ, ವಿಪರೀತ ಕೆಲಸದಿಂದ ದಣಿದುಹೋಗಿದಾನೆ. ಅದಕ್ಕೇ ನಾನು ಅವನಿಗೆ ಒಂದು ವಿಶ್ರಾಂತಿ ತಗೊ ಅಂತ ಹೇಳಿದ್ದು.”
“ನೀವೇ ಹೇಳ್ತಿದ್ರಲ್ಲ, ಅವನು ಬಹಳ ಐಡಿಯಾಗಳನ್ನ ಹೊಂದಿರೋ ಮನುಷ್ಯ ಅಂತ,” ಅವಳು ಸುಮ್ಮನಾಗದೆ ಮತ್ತೆ ಕೊಂಕು ನುಡಿದಳು. “ನಾನು ಅವ ಕುತೂಹಲ ಮೂಡಿಸೋವಂಥ ವ್ಯಕ್ತಿಯಾಗಿರಬಹುದು ಅನ್ಕೊಂಡಿದ್ದೆ, ಹೋಗ್ಲಿ. ನಾನು ಬೆಳಗ್ಗೆ ನನ್ನ ಬೇಸಿಗೆಯ ಗೌನುಗಳನ್ನ ಫಿಟಿಂಗ್ ಮಾಡಿಸೋಕೆ ಸಿಟಿಗೆ ಹೋಗ್ತಿದೀನಿ. ಮಿ. ಪೂರ್ಣಚಂದ್ರ ಹೋದ ಮೇಲೆ ನನಗೆ ಸುದ್ದಿ ಕಳಿಸಿ. ನಾನು ನನ್ನ ದಾಕ್ಷಾಯಿಣಿ ಚಿಕ್ಕಮ್ಮ ಇದಾರಲ್ಲ, ಅವರ ಮನೇಲಿ ಉಳ್ಕೋತಿದೀನಿ.”
ಆ ರಾತ್ರಿ ಆಕೆ ಕಲ್ಲುಹಾಸಿನ ವಾಕ್‌ವೇಯ ಬದಿಯಲ್ಲಿ ದೇವದಾರು ಮರದ ಕೆಳಗಿದ್ದ ಬೆಂಚೊಂದರ ಮೇಲೆ ಒಬ್ಬಂಟಿಯಾಗಿ ಕುಳಿತುಕೊಂಡಳು.
ಆಕೆಯ ಯೋಚನೆಗಳು ಅಥವಾ ಉದ್ದೇಶಗಳು ಯಾವತ್ತೂ ಇಷ್ಟು ಗೋಜಲಾಗಿದ್ದೇ ಇಲ್ಲ. ಅವುಗಳಿಂದ ಆಕೆಗೆ ತನ್ನ ಮನೆಯನ್ನು ಬೆಳಗ್ಗೆ ಬಿಟ್ಟುಹೊರಡಬೇಕೆಂಬ ವಿಶಿಷ್ಟ ತುಡಿತವನ್ನು ಬಿಟ್ಟರೆ ಬೇರೆ ಏನನ್ನೂ ಅರಿಯಲಾಗಲೇ ಇಲ್ಲ.
ಮಿಸೆಸ್ ಬರೋಡಾಳಿಗೆ ಅಷ್ಟು ಹೊತ್ತಿಗೆ ಕಲ್ಲುಹಾದಿಯ ಮೇಲೆ ಹೆಜ್ಜೆಸಪ್ಪಳ ಕೇಳಿಬಂತು; ಅದರೆ ಕತ್ತಲೆಯಲ್ಲಿ ಸಮೀಪಿಸುತ್ತಿರುವ ಒಂದು ಸಿಗಾರಿನ ಬೆಳಕು ಮಾತ್ರ ಕಾಣುತ್ತಿತ್ತು. ಅದು ಪೂರ್ಣಚಂದ್ರನೇ ಅನ್ನುವುದು ಆಕೆಗೆ ತಿಳಿಯಿತು, ಏಕೆಂದರೆ ಯಶವಂತ ಯಾವತ್ತೂ ಸಿಗಾರ್ ಸೇದಿದವನಲ್ಲ. ಆಕೆ ಕತ್ತಲೆಯಲ್ಲಿ ಆತನ ಗಮನ ಸೆಳೆಯದಿರಲು ಪ್ರಯತ್ನಿಸಿದಳಾದರೂ ಆಕೆಯ ಬಿಳಿಯ ಗೌನ್ ಆತನಿಗೆ ಆಕೆಯ ಇರವನ್ನು ಸಾರಿತು. ಆತ ತನ್ನ ಸಿಗಾರನ್ನು ಬಿಸುಟು ಆಕೆಯ ಪಕ್ಕ ಬೆಂಚಿನ ಮೇಲೆ ಆಸೀನನಾದ, ಅಕೆ ಏನು ಹೇಳುವಳೋ ಎಂಬ ಸಂಶಯವಿಲ್ಲದವನ ಹಾಗೆ.
“ನಿಮ್ಮ ಪತಿ ಇದನ್ನು ನಿಮಗೆ ಕೊಡಲು ತಿಳಿಸಿದರು, ಮಿಸೆಸ್ ಬರೋಡಾ,” ಆತ ಆಕೆ ಯಾವಾಗಲೂ ತನ್ನ ತಲೆ ಮತ್ತು ಹೆಗಲುಗಳನ್ನು ಬೆಚ್ಚಗಿಡಲು ಬಳಸುವ ತೆಳ್ಳಗಿನ, ಬಿಳಿಯ ಸ್ಕಾರ್ಫೊಂದನ್ನು ನೀಡುತ್ತ ನುಡಿದ. ಆಕೆ ಧನ್ಯವಾದದ ಮಾತೊಂದನ್ನು ಉಸುರಿ ಸ್ಕಾರ್ಫನ್ನು ಪಡೆದುಕೊಂಡು ತನ್ನ ತೊಡೆಯ ಮೇಲಿಟ್ಟುಕೊಂಡಳು.
ಆತ ರಾತ್ರಿಯ ಹವೆ ಋತುವಿನ ಮೇಲೆ ಬೀರಬಹುದಾದ ಪ್ರತಿಕೂಲ ಪರಿಣಾಮದ ಬಗ್ಗೆ ತನ್ನ ಸಾಮಾನ್ಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ. ಆಮೇಲೆ ಕತ್ತಲೆಯೊಳಗೆ ನೆಟ್ಟದೃಷ್ಟಿಯಿಂದ ನೋಡುತ್ತಾ, ತನಗೆ ತಾನೇ ಅನ್ನುವಂತೆ ಗುಣುಗುಣಿಸಿದ:
“ದಕ್ಷಿಣ ಗಾಳಿಗಳ ರಾತ್ರಿ-ಹಲವು ಮಹಾ ನಕ್ಷತ್ರಗಳ ರಾತ್ರಿ! ಇನ್ನೂ ತಲೆದೂಗುತ್ತಿರುವ ರಾತ್ರಿ…”
ಈ ರಾತ್ರಿಯ ಬಗೆಗಿನ ಅಪೂರ್ಣ ಮಾತನ್ನು ಪೂರ್ಣಗೊಳಿಸಲು ಯತ್ನಿಸಲಿಲ್ಲ. ಆ ಮಾತು ನಿಜವಾಗಿ ಅವಳಿಗೆ ಹೇಳಿದ್ದಾಗಿರಲೂ ಇಲ್ಲ.
ಪೂರ್ಣಚಂದ್ರ ಯಾವುದೇ ಲೆಕ್ಕದಲ್ಲಿಯೂ ಸಂಕೋಚದ ಮನುಷ್ಯನಾಗಿರಲಿಲ್ಲ, ಏಕೆಂದರೆ ಆತ ಅತಿಯಾದ ಆತ್ಮಪ್ರಜ್ಞೆಯುಳ್ಳವನೂ ಆಗಿರಲಿಲ್ಲ. ಆತನ ಗಾಂಭೀರ್ಯವು ಆತನ ಮನಸ್ಥಿತಿಗಳಿಗೆ ತಕ್ಕಂತೆ ಇರುತ್ತಿತ್ತೇ ವಿನಃ ತೋರಿಕೆಯದ್ದಾಗಿರಲಿಲ್ಲ. ಮಿಸೆಸ್ ಬರೋಡಾಳ ಪಕ್ಕ, ಅಲ್ಲಿ ಕೂಳಿತುಕೊಂಡಾಗ ಆತನ ಮೌನ ಆ ಹೊತ್ತು ಕರಗಿತು.
ಆತ ಕೇಳಲು ಸಹ್ಯವಾದ ಮೆಲುವಾದ ಸಂಕೋಚಪೂರಿತ ಗಡಸುದನಿಯಲ್ಲಿ ಬಿಚ್ಚುಮನಸ್ಸಿನಿಂದ ಆತ್ಮೀಯವಾಗಿ ಮಾತನಾಡತೊಡಗಿದ. ಆತ ತಾನೂ ಯಶವಂತನೂ ಒಬ್ಬರಿಗೊಬ್ಬರು ಬಹಳ ಆತ್ಮೀಯವಾಗಿದ್ದ ಕಾಲೇಜು ದಿನಗಳ ಬಗ್ಗೆ ಮಾತನಾಡಿದ; ಗುರಿಯಿಲ್ಲದ, ಅಚ್ಚ ಮಹತ್ವಾಕಾಂಕ್ಷೆಗಳ ಮತ್ತು ವಿಶಾಲ ಉದ್ದೇಶಗಳನ್ನು ಹೊಂದಿದ್ದ ದಿನಗಳ ಬಗ್ಗೆ ಮಾತನಾಡಿದ. ಈಗ ತನ್ನಲ್ಲಿ ಏನೂ ಉಳಿದಿಲ್ಲ, ಈಗಿನ ವ್ಯವಸ್ಥೆಯ ಜತೆಗೆ ತಾತ್ವಿಕ ಹೊಂದಾಣಿಕೆ-ಅಂದರೆ ಅಸ್ತಿತ್ವಕ್ಕೆ ಅವಶ್ಯಕವಿರುವಷ್ಟು ಬಯಕೆ ಮಾತ್ರ, ಆಗೀಗ ನೈಜ ಬದುಕಿನ ಅರಿವು ತಾಕುತ್ತದೆ, ಈಗ ತಾನು ಅನುಭವಿಸುತ್ತಿರುವುದು ಅದನ್ನೇ, ಎಂದು ಹೇಳಿದ.
ಆಕೆಯ ಮನಸ್ಸಿಗೆ ಆತ ಹೇಳುತ್ತಿದ್ದ ವಿಚಾರಗಳು ಎಲ್ಲೋ ಸೊಲ್ಪ ಅರ್ಥವಾದಂತೆ ಇದ್ದವು. ಆಕೆಯ ದೇಹ ಮಾತ್ರ ಆ ಘಳಿಗೆಯಲ್ಲಿ ಎಲ್ಲವನ್ನೂ ಹಿಂದಕ್ಕೆ ತಳ್ಳಿ ಮೇಲುಗೈ ಪಡೆಯಿತು. ಆಕೆ ಆತನ ಮಾತುಗಳ ಬಗ್ಗೆ ಯೋಚನೆ ಮಾಡುತ್ತಿರಲೇ ಇಲ್ಲ, ಬದಲಾಗಿ ಆತನ ದನಿಯ ವಿವಿಧ ನಾದಗಳನ್ನು ಆಸ್ವಾದಿಸುತ್ತಿದ್ದಳು. ಆಕೆಗೆ ಕತ್ತಲೆಯಲ್ಲಿ ತನ್ನ ಕೈಚಾಚಿ ತನ್ನ ಬೆರಳುಗಳ ಸೂಕ್ಷ್ಮ ತುದಿಗಳಿಂದ ಆತನ ಮುಖವನ್ನೋ ತುಟಿಯನ್ನೋ ಸ್ಪರ್ಶಿಸುವ ಬಯಕೆಯುಂಟಾಯಿತು. ಆಕೆ ಆತನ ಬಳಿಸರಿದು ಆತನ ಕೆನ್ನೆಯ ಹತ್ತಿರ ಏನನ್ನೋ ಹೇಳಲು ಇಚ್ಚಿಸಿದಳು- ಏನೆಂದು ಆಕೆಗೆ ಅರಿವಿರಲಿಲ್ಲ- ಆಕೆ ಒಬ್ಬ ಮರ್ಯಾದಸ್ಥ ಮಹಿಳೆಯಾಗಿರದಿದ್ದರೆ ಹೇಗೆ ಮಾಡಬಹುದಾಗಿತ್ತೋ, ಥೇಟ್ ಹಾಗೆಯೇ.
ಆತನ ಹತ್ತಿರ ಸರಿಯುವ ಇಚ್ಚೆ ಹೆಚ್ಚಾಗುತ್ತ ಹೋದ ಹಾಗೆ ಆಕೆ ನಿಜವಾಗಿ ಆತನಿಂದ ದೂರ ಸರಿಯಲಾರಂಭಿಸಿದಳು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗನೆ, ಬಹಳ ಒರಟು ವರ್ತನೆ ಅನ್ನಿಸದಿರುವ ಹಾಗೆ, ಆಕೆ ಎದ್ದು ಆತನನ್ನು ಒಂಟಿಯಾಗಿ ಬಿಟ್ಟುಹೋದಳು.
ಆಕೆ ಮನೆಯನ್ನು ತಲುಪುವ ಮುನ್ನವೇ ಪೂರ್ಣಚಂದ್ರ ಹೊಸ ಸಿಗಾರೊಂದನ್ನು ಹಚ್ಚಿ ರಾತ್ರಿಯ ಬಗ್ಗೆ ಅಪೂರ್ಣವಾಗುಳಿದಿದ್ದ ತನ್ನ ಸಾಲುಗಳಿಗೆ ಅಂತ್ಯ ಕಾಣಿಸಿದ.
ಮಿಸೆಸ್ ಬರೋಡಾಳಿಗೆ ತನ್ನ ಸ್ನೇಹಿತನೂ ಆಗಿದ್ದ ತನ್ನ ಪತಿಗೆ ತನಗೆ ಉಂಟಾಗಿದ್ದ ಆ ತಪ್ಪುಬಯಕೆಯ ಬಗ್ಗೆ ಹೇಳಿಕೊಳ್ಳುವ ಬಲವಾದ ಪ್ರಲೋಭನೆಯುಂಟಾಯಿತು. ಆದರೆ ಆಕೆ ಈ ಪ್ರಲೋಭನೆಗೆ ಶರಣಾಗಲಿಲ್ಲ. ಒಬ್ಬ ಸಭ್ಯ ಮಹಿಳೆಯಾಗಿರುವುದರ ಜತೆಗೇ ಆಕೆ ಬಹಳ ವಿವೇಕವುಳ್ಳ ಮಹಿಳೆಯೂ ಆಗಿದ್ದಳು. ಜೀವನದ ಕೆಲವು ಯುದ್ಧಗಳನ್ನು ಒಂಟಿಯಾಗಿಯೇ ಮಾಡಬೇಕೆಂದು ಆಕೆಗೆ ಅರಿವಿತ್ತು.
ಯಶವಂತ ಮಾರನೇದಿನ ಬೆಳಗ್ಗೆ ಎದ್ದಾಗ, ಆತನ ಮಡದಿ ಆಗಲೇ ಹೊರಟುಹೋಗಿಯಾಗಿತ್ತು. ಆಕೆ ನಗರಕ್ಕೆ ಬೆಳಜಾವದ ಟ್ರೈನು ಏರಿ ಹೋಗಿದ್ದಳು. ಪೂರ್ಣಚಂದ್ರ ತನ್ನ ಮನೆಯಿಂದ ಹೋಗುವವರೆಗೂ ಆಕೆ ಮರಳಲಿಲ್ಲ.
ಮುಂದಿನ ಬೇಸಿಗೆಯಲ್ಲಿ ಆತನನ್ನು ವಾಪಾಸು ಕರೆಯಿಸಿಕೊಳ್ಳುವ ಬಗ್ಗೆ ಮಾತು ನಡೆಯಿತು. ಯಶವಂತನಿಗೆ ತುಂಬ ಆಶೆಯಿದ್ದರೂ ತನ್ನ ಮಡದಿಯ ಬಲವಾದ ವಿರೋಧಕ್ಕೆ ಆತ ಮಣಿಯಲೇಬೇಕಾಯಿತು.
ಆದರೆ, ಆ ವರ್ಷ ಮುಗಿಯುವ ಮುನ್ನವೇ, ಆಕೆಯೇ ತಾನಾಗಿ ಪೂರ್ಣಚಂದ್ರನನ್ನು ತಮ್ಮಲ್ಲಿಗೆ ಆಹ್ವಾನಿಸುವ ಬಗ್ಗೆ ಪ್ರಸ್ತಾಪ ಮಾಡಿದಳು. ಆಕೆಯ ಪತಿಗೆ ಈ ಸಲಹೆ ಆಕೆಯಿಂದ ಬಂದುದಕ್ಕೆ ಅಚ್ಚರಿಯೂ ಸಂತಸವೂ ಉಂಟಾಯಿತು.
“ನನಗೆ ತುಂಬ ಸಂತೋಷವಾಗಿದೆ, ನನ್ನ ಮುದ್ದು, ಕೊನೆಗೂ ಅವನ ಬಗ್ಗೆ ನಿನಗಿದ್ದ ದ್ವೇಷ ಕರಗಿತಲ್ಲ; ಆತ ನಿಜವಾಗಿ ಅದಕ್ಕೆ ಹಕ್ಕುದಾರನಾಗಿರಲಿಲ್ಲ.”
“ಓಹ್,” ಆಕೆ ಆತನ ತುಟಿಗಳ ಮೇಲೆ ದೀರ್ಘವಾದ, ನವಿರಾದ ಮುತ್ತೊಂದನ್ನೊತ್ತಿ ನಗುತ್ತ ಹೇಳಿದಳು, “ಈಗ ಎಲ್ಲವೂ ಕರಗಿಹೋಗಿದೆ! ನೀವೇ ನೋಡುವಿರಂತೆ. ಈ ಸಾರಿ ನಾನು ಆತನ ಬಳಿ ಬಹಳ ಚೆನ್ನಾಗಿ ನಡೆದುಕೊಳ್ತೀನಿ.”
*************

ಗೂಡು

ny-image3etsycom

ಒಳಗಿಂದ ಒತ್ತರಿಸಿಕೊಂಡು ಬರುವ ನೋವು. ಸುತ್ತ ಅಪರಿಚಿತ ಮುಖಗಳು.
ಒಡಲು ಕಿತ್ತುಕೊಂಡು ಹೊರಗೆ ಬರಲೆಳಸುತ್ತಿದ್ದ ಮಗು.
’ಅವಳು ಈ ಮನೆ ಹೊಸಿಲು ತುಳೀಕೂಡದು!!’ ಅಪ್ಪನ ಅಬ್ಬರ.
‘ಅಮ್ಮಾಆಆಆ…’ ಅಂತ ಕೂಗಲಿಲ್ಲ ನಾನು. ಡಾಕ್ಟರಿಣಿ ‘ಅವಡುಗಚ್ಚಿ ಮುಕ್ಕಬೇಕು. ನೋವು ತಡಕೋಬೇಡ!! ಮಗೂಗೆ ಸರಿಹೋಗೊಲ್ಲ.’ ಎಂದು ಮುಂತಾಗಿ ರೇಗತೊಡಗಿದಳು. ಅವಳಿಗೇನು ತಿಳಿದೀತು? ನನಗೆ ಕೈಯೆತ್ತಿ ಬಾರಿಸಿಬಿಡೋಣೇನೊ ಅನ್ನುವಷ್ಟು ಕೋಪ. ಹೊರಗೆ ಯಾವದೊ ದೇವಸ್ಥಾನದಲ್ಲಿ ಕಾರ್ತೀಕದ ಮೊದಲದಿನವನ್ನ ಬರಮಾಡಿಕೊಳ್ಳುವ ಸಂಭ್ರಮದ ಜಾಗಟೆ.
ಡಾಕ್ಟರಿಣಿ ಮಗಳ ಕಾಲೆತ್ತಿ ನೇತಾಡಿಸಿದಳು. ಅದು ಚೆನ್ನಾಗಿ ಕಣ್ಣುಬಿಟ್ಟು ನೋಡಿತು. ತಿರುವುಮುರುವು ಪ್ರಪಂಚ. ಇವಳೂ ಇದೇ ನೋವು ತಿನ್ನಬೇಕೆ ಅಂದುಕೊಂಡೆ.
’ಅದೇನು ಹಠ ನಿಮ್ಮ ಮನೆಯವರಿಗೆ!! ಒಂದುಸಾರಿಯಾದ್ರು ಅಮ್ಮಾ ಅನ್ನಲಿಲ್ಲವಲ್ಲ!!’ ಡಾಕ್ಟರಿಣಿ ನನ್ನವನಿಗೆ ಹೇಳುತ್ತಿದ್ದಳು.
ಅದು ಹೇಗೆ ನಮ್ಮಂಥ ಮೂರು ಮಕ್ಕಳನ್ನು ಹಡೆದು ಸಾಕಿದಳೋ ಅಮ್ಮ? ನಾನು ಅಪ್ಪನ ಮೇಲಿನ ಕೋಪವನ್ನ ಅವಳ ಮೇಲೆ ಯಾಕೆ ತೀರಿಸಿಕೊಂಡೆ? ಅವಳು ಯಾವತ್ತೂ ನೀನು ಮನೆಗೆ ಬರಬೇಡ ಅನ್ನಲಿಲ್ಲ. ಅಷ್ಟಕ್ಕೂ ಅವಳಿಗೆ ನಾನು ಗರ್ಭಿಣಿ ಅಂತಲೇ ತಿಳಿಸಲಿಲ್ಲ.
ಆ ಮನೆಯನ್ನ ನಾನು ಪುನಹ ನೋಡಲಾರೆನೆನ್ನುವ ಹಳಹಳಿ ತಿನ್ನತೊಡಗಿದ್ದ ಸಮಯ. ಇವ ಕೇಳಿದ, ’ಹನಿ… ಯು ಹ್ಯಾವ್ ಟು ಡಿಸೈಡ್ ವ್ಹೇರ್ ಯು ಬಿಲಾಂಗ್.’ ನಾನು ನಿರ್ಧರಿಸಿಬಿಟ್ಟೆ. ನನ್ನದೊಂದು ಮನೆ ಸಿಕ್ಕಿತಲ್ಲ ಅನ್ನುವ ಸಡಗರ ಎಲ್ಲ ಮರೆಸಿತು. ಆಗಾಗ ರಾತ್ರಿ ಹೊತ್ತು ಚಿಕ್ಕಿಗಳನ್ನ ದಿಟ್ಟಿಸುತ್ತ ಯಾಕೆ ಬಿಕ್ಕಳಿಸುತ್ತಿದ್ದೆನೊ ತಿಳಿಯುತ್ತಿರಲಿಲ್ಲ. ಈಗ ನೋಡಿದರೆ ನಾನೆ ಅಮ್ಮನಾಗಿ ನನ್ನ ಅಮ್ಮ ಅಜ್ಜಿಯಾಗಿ ತುಂಬ ಏನೇನೋ ಆಗಿಹೋಗಿದೆ.
ವಿಪರೀತ ಹಸಿವು. ಅಮ್ಮನ ಕೈಯ ಅಡುಗೆ ನೆನಪಾಗತೊಡಗಿತು.
ಭೂತದೊಳಗೆ ಹೂತುಹೋಗಿದ್ದ ಅಜ್ಜಿಯ ಬೆಚ್ಚಗಿನ ಕೈ ಕೂಡ.

**********************

ಅಜ್ಜಿ ನನ್ನನ್ನು ಪ್ರೀತಿಯಿಂದ ‘ಶಮನ್’ ಅಂತ ಕರೀತಿದ್ದಳು. ಆ ಹೆಸರಿನ ಅರ್ಥ ಏನು, ನನ್ನನ್ನ ಯಾಕೆ ಹಾಗೆ ಕರೀತಿದ್ದಳು – ಗೊತ್ತಿಲ್ಲ. ನಾನು ನೋಡಿದಾಗೆಲ್ಲ ಆಕೆ ಮನೆಯ ಒಳಕೋಣೆಯ ಕಿಟಕೀಬದಿ ಹಾಸಿದ್ದ ಹಾಸಿಗೆಯಲ್ಲಿ ಮಲಗಿಕೊಂಡೆ ಇರುತ್ತಿದ್ದಳು. ಆಕೆಯನ್ನು ಕಂಡರೆ ’ಇವಳದ್ದೆ ಗಮ್ಮತ್ತು!’ ಅಂದುಕೊಳ್ಳುತ್ತಿದ್ದ ನನಗೆ ಸ್ವಲ್ಪ ಹೊಟ್ಟೆಯುರಿ ಕೂಡ ಆಗುತ್ತಿದ್ದುದುಂಟು. ಆಕೆಯನ್ನ ಸ್ನಾನ, ಶೌಚಾದಿಗಳಿಗೆ ಎತ್ತಿಕೊಂಡೆ ಹೋಗಬೇಕಾಗಿತ್ತು. ಅವಳಿಗೆ ಏನಾಗಿತ್ತು, ಆಕೆ ಅಮ್ಮನ ಥರ ಅಥವ ಬೇರೆ ಹೆಂಗಸರ ಥರ ಏಕಿರಲಿಲ್ಲ, ಇವೆಲ್ಲ ತಿಳಿವ ವಯಸ್ಸು ಆಗ ನನ್ನದಲ್ಲ. ನನ್ನ ಪ್ರಪಂಚ ಮನೆಯ ಹಿತ್ತಲು, ಅಂಗಳಗಳ ದಿಣ್ಣೆಗಳು ಹಾಗೂ ಮನೆಯೆದುರಿನ ಮಾವಿನತೋಪಿನ ಮರಗಳ ಸುತ್ತಮುತ್ತ ಸಿಲುಕಿಕೊಂಡು ಸಾಕಷ್ಟು ಪುಟ್ಟದಾಗಿಯೆ ಇತ್ತು.

ದಿನಕ್ಕೊಂದು ಸಾರಿಯಾದರೂ ಆಕೆಯ ಪಕ್ಕ ಹೋಗಿ ಸುಮ್ಮನೆ ಕುಳಿತುಕೊಳ್ಳುತ್ತ ಇದ್ದೆ. ಆಗೆಲ್ಲ ಆಕೆಯ ಕಣ್ಣು ಮಿನುಗುತ್ತಿದ್ದವು. ತನ್ನ ಮುರುಟಿದ ಕೈಯಲ್ಲಿ ನನ್ನ ಪುಟ್ಟ ಕೈಯನ್ನಿಟ್ಟುಕೊಂಡು ಆಕೆ ಕಥೆ ಹೇಳಲಿಕ್ಕೆ ಶುರುಮಾಡುವಳು. ನನಗೆ ಅವಳು ಯಾವಾಗಲು ಹೇಳುತ್ತಿದ್ದಿದ್ದು ಒಂದೇ ಕಥೆ. ಆ ಕಥೆಯಲ್ಲಿ ಒಂದು ಗುಬ್ಬಿ, ಒಂದು ಕಾಗೆ ಪಕ್ಕಪಕ್ಕ ಗೂಡು ಕಟ್ಟಿಕೊಂಡಿರುತ್ತಿದ್ದವು. ಕಾಗೆಯ ಗೂಡು ಉಪ್ಪಿನದು, ಗುಬ್ಬಿಯ ಗೂಡು ಕಲ್ಲಿನದಾಗಿರುತ್ತಿತ್ತು. ಇಷ್ಟರ ಸುತ್ತ ಆಕೆ ಕಥೆಯನ್ನು ಬೇರೆಬೇರೆ ಥರ ಹೆಣೆಯುತ್ತಿದ್ದಳು. ಒಂದು ಸಾರಿ ಗೂಡುಗಳಿದ್ದ ಜಾಗಕ್ಕೆ ಸುಂಟರಗಾಳಿ ಬಂದರೆ, ಇನ್ನೊಮ್ಮೆ ಮಳೆ ಸುರಿಯುತ್ತಿತ್ತು. ಒಮ್ಮೆ ಕಥೆ ಆಹಾರ ಒಟ್ಟುಹಾಕುವುದರ ಬಗ್ಗೆ ಇದ್ದರೆ ಇನ್ನೊಮ್ಮೆ ಮೈಬಗ್ಗಿಸಿ ಕೆಲಸಮಾಡುವುದರ ಬಗ್ಗೆ ಇರುತ್ತಿತ್ತು. ನಿಜ ಹೇಳಬೇಕೆಂದರೆ ನನಗೆ ಕಥೆಯಲ್ಲಿ ಆಸಕ್ತಿಯೇ ಇರುತ್ತಿರಲಿಲ್ಲ. ಅವಳ ಸುಕ್ಕುಬಿದ್ದಿದ್ದ ಕೆನ್ನೆ, ಕೈಗಳ ಚರ್ಮ, ಮಧ್ಯ ಬೈತಲೆ ತೆಗೆದ ಸಾಕಷ್ಟು ದಟ್ಟವಿದ್ದ ಬೆಳ್ಳಿಯಂಥ ಕೂದಲು, ಬೊಚ್ಚುಬಾಯಿ, ತುಟಿಯಂಚಿನಲ್ಲಿ ಸಂಗ್ರಹವಾಗುವ ಜೊಲ್ಲು – ಇವುಗಳ ಬಗೆಗೇನೆ ನನಗೆ ಹೇಳಲಾರದಷ್ಟು ಕುತೂಹಲ ಇದ್ದದ್ದು. ಕಥೆಗೆ ಅವಶ್ಯಕವಾಗಿದ್ದ ‘ಹೂಂ’ಗುಟ್ಟುವಿಕೆಯನ್ನೂ ಮರೆತು ಅವಳನ್ನೆ ದಿಟ್ಟಿಸುತ್ತ ಕುಳಿತುಬಿಡುತ್ತಿದ್ದೆ. ಆಕೆಗೂ ಅದು ಗೊತ್ತಾಗುತ್ತ ಇತ್ತೇನೊ. ಕಥೆಯನ್ನ ಅಲ್ಲಿಗೇ ನಿಲ್ಲಿಸಿ ನನ್ನ ತಲೆಯನ್ನ ಇನ್ನೊಂದು ಕೈಯಿಂದ ಮೆಲ್ಲಗೆ ನೇವರಿಸುತ್ತಿದ್ದಳು. ಆಕೆಯ ಕೈ ಯಾವಾಗಲು ಬೆಚ್ಚಗಿರುವುದು.

ಅವಳಿದ್ದಾಗ ಮನೆತುಂಬ ಹೆಂಗಸರು ಮಕ್ಕಳು, ಯಾರುಯಾರೊ. ಅವರಿಗೆಲ್ಲ ಊಟ ತಿಂಡಿ ಕಾಫಿ ಶರಬತ್ತುಗಳ ನಿರಂತರ ಪೂರೈಕೆ. ಎಲ್ಲರೂ ಅವಳಿಗೆ ಬೇಕು. ಒಂದು ಕಡೆ ಮನೆಯ ಆಥರ್ಿಕ ಪರಿಸ್ಥಿತಿ ಸರಿದೂಗಿಸಲು ಅಮ್ಮ ಹೆಣಗಾಡುತ್ತ ಇದ್ದರೆ ಇನ್ನೊಂದು ಕಡೆಯಿಂದ ಅದೆಲ್ಲ ಸೋರಿಕೊಂಡು ಹೋಗುತ್ತಲೆ ಇತ್ತು. ಹಿಂಡಿ ಬಳಿದು ಸಾರಿಸಿ ಹೋಗುವವರ ಸಂಖ್ಯೆಯೂ ಜಾಸ್ತಿ ಆಗುತ್ತಲೆ ಇತ್ತು. ಒಲೆ ಬೆಳಿಗ್ಯೆ ಹೊತ್ತಿದರೆ ಆರುತ್ತಿದ್ದಿದ್ದು ರಾತ್ರಿಯೆ. ಬಂದು ಹೋಗುವವರ ನಿರಂತರ ಮೆರವಣಿಗೆಯನ್ನು ನೋಡುತ್ತ ನಾನು ಅಜ್ಜಿಯ ಕರೀ ಮರದ ಪೆಟ್ಟಿಗೆಯ ಮೇಲೆ ಕೂತುಕೊಂಡಿರುವುದು. ಪಕ್ಕದಲ್ಲಿ ಒಂದಿಷ್ಟು ಗೊಂಬೆಗಳು. ನಾನು ಆ ವಯಸ್ಸಿನಲ್ಲಿ ಮಕ್ಕಳಿಗೆ ಸಹಜವಾಗಿರಬಹುದಾದ ಎಲ್ಲ ಕುಟಿಲತೆಯನ್ನು ಒಳಗೂಡಿಸಿಕೊಂಡು ಆಕೆ ನಿದ್ದೆಹೋಗುವುದನ್ನೆ ಕಾಯುವೆ. ಆಕೆ  ಕಣ್ಣು ಮುಚ್ಚಿಕೊಂಡ ಕೂಡಲೆ ಮೆಲ್ಲಗೆ ಪೆಟ್ಟಿಗೆಯಿಂದಿಳಿದು ಆಕೆಯ ಹಳೆಯ ಹಾಸಿಗೆಯ ಪಕ್ಕದ ಕೆಂಪು ನೆಲದ ಮೇಲೆ ಕುಳಿತು ಅವಳ ಮೂಗು, ನಿದ್ರೆಯಲ್ಲಿ ಅರೆತೆರೆದ ಬಾಯಿ, ಮುಖದ ಸುಕ್ಕಿನ ಗೆರೆಗಳು- ಎಲ್ಲವನ್ನು ಪರೀಕ್ಷಿಸುತ್ತಿದ್ದೆ. ಆಕೆ ಕಣ್ಣು ತೆರೆದ ಕೂಡಲೆ ಅಲ್ಲಿಂದೆದ್ದು ಓಟಕೀಳುತ್ತಿದ್ದೆ. ಅಜ್ಜಿಯ ಕಣ್ಣುಗಳಲ್ಲಿ ನನ್ನನ್ನು ಹೆದರಿಸುವಂತಹದೇನೊ ಇತ್ತು. ಆಕೆಯ ಕಣ್ಣುಗಳು ಗುಳಿಗಳಲ್ಲಿ ಹೂತುಹೋದ ಹಾಗೆ ಒಳಹೋಗಿಬಿಟ್ಟಿದ್ದವು.

ಹೀಗೇ ಒಂದು ಸಂಜೆ ನಾನು ಅಜ್ಜಿ ಎನ್ನುವ ಅಜ್ಜಿಯ ರೂಮಿನಿಂದ ಅಡಿಗೆ ಮನೆಗೆ ಹೋಗುತ್ತಿರುವಾಗ ’ಶಮನ್, ಇಲ್ಬಾ ಮಗಳೆ ನೋಡೋಣ!” ಎಂದು ಆಕೆ ಕರೆದಳು. ಆಕೆಯ ಬಳಿ ಕುಳಿತೆ. ಮುಂಚಿನ ಹಾಗೇ ನನ್ನ ಕೈ ಹಿಡಿದುಕೊಂಡಳು. ಅವತ್ತೂ ಅವಳ ಕೈ ಬೆಚ್ಚಗಿದ್ದರೂ ಕೊಂಚ ಜಾಸ್ತಿಯೇ ನಡುಗುತ್ತಿದ್ದ ಹಾಗೆನಿಸಿತು. ನಾನು ಕಥೆ ಹೇಳಲ? ಅಂದವಳು ನನ್ನ ಅನುಮತಿಗೂ ಕಾಯದೆ ಅದೇ ಹಳೆಯ ಕಾಗೆ ಗುಬ್ಬಿಯ ಕಥೆ ಶುರು ಹಚ್ಚಿದಳು. ಇನ್ನೂ ಕಥೆ ಮುಗಿದಿರಲಿಕ್ಕಿಲ್ಲ, ಇದ್ದಕ್ಕಿದ್ದ ಹಾಗೆ – ’ನನಗೆ ನಿದ್ದೆ ಬರ್ತದೆ ಮಗಳೆ. ಎಲ್ಲಿ, ಕಾಲ ಹತ್ತಿರ ಸರಿಯಾಗಿ ಹೊದಿಸು ನೋಡೋಣ?’ ಅಂತಂದಳು. ಅವತ್ತು ಆಕೆ ಬಹಳ ಬೇಗ ನಿದ್ದೆಹೋದಳು. ಅವತ್ತೂ ಎಂದಿನ ಹಾಗೇ ನಾನು ಅವಳನ್ನ ದೀರ್ಘವಾಗಿ ನೋಡಿದೆ. ಅವಳ ಹರವಿಕೊಂಡಿದ್ದ ಕೂದಲು ನಾವು ‘ಅಜ್ಜನಗಡ್ಡ’ ಎಂದು ಕರೆಯುತ್ತಿದ್ದ ಮಿಠಾಯಿಯ ತರಹ ಕಂಡಿತು.

ಮಾರನೆದಿನ ಬೆಳಗ್ಗೆದ್ದರೆ ಮನೆತುಂಬ ಜನ. ಅಮ್ಮ ಗೋಡೆಗೊರಗಿ ಅಳುತ್ತಿದ್ದಿದ್ದು ಕಾಣಿಸಿತು. ಯಾರೊ ನನ್ನನ್ನ ಪಕ್ಕದ ಮನೆಗೆ ಎತ್ತಿಕೊಂಡುಹೋದರು. ನನ್ನ ಮುಖ ತೊಳೆಸಿದ ಪಕ್ಕದ ಮನೆಯ ಸುಜಾತಮ್ಮ ಒಂದು ಕೋಣೆಯಲ್ಲಿ ಕೂರಿಸಿ ಬೆಲ್ಲ, ಸಿಹಿ ಹಾಲು ಕೊಟ್ಟರು. ನಾನು ಮಂಚ ಹತ್ತಿ ಕಿಟಕಿಯಿಂದ ಹೊರಗಿಣುಕಿದೆ. ಹಿತ್ತಲಿನಲ್ಲಿ ಭರ್ತಿ ಜನ. ’ಮನೆಗ್ಹೋಗ್ಬೇಕೂ!!’ ಕೂಗಾಡಲು ಶುರುಮಾಡಿದೆ. ಸುಜಾತಮ್ಮ ಹೊರಗಿನಿಂದ ಚಿಲಕ ಹಾಕಿಕೊಂಡರು. ಕೋಣೆಯ ಸಾಮಾನೆಲ್ಲ ನನ್ನ ಕೋಪಕ್ಕೆ ಸಿಕ್ಕಿ ಚೆಲ್ಲಾಡಿದವು. ನನ್ನ ರಂಪ ತಾಳಲಾಗದಲೆ ಸುಜಾತಮ್ಮನ ಮಗಳು ಚಿತ್ರಾ ಅಗುಳಿ ತೆರೆದಳು. ಮನೆಗೆ ಓಡಿಬಂದು ನೋಡುತ್ತೇನೆ. ಅಜ್ಜಿಯ ಹಾಸಿಗೆ ಕೌದಿ ಎಲ್ಲ ಸುತ್ತಿಟ್ಟಿದ್ದಾರೆ. ಆಮೇಲೆಬಹಳ ಕೂಗಾಡಿದೆನೆಂದು ಕಾಣುತ್ತದೆ. ನಿದ್ದೆ ಬಂದುಬಿಟ್ಟಿತು. ಎಚ್ಚರವಾದಾಗ ಕತ್ತಲು. ಅಮ್ಮನ ಬಳಿ ಹೋಗಿ ಕೇಳಿದೆ, ’ಅಜ್ಜಿ ಎಲ್ಲಿ?” ಅಮ್ಮ ಅಂಗಳಕ್ಕೆ ಕರೆದುಕೊಂಡುಹೋಗಿ ಆಕಾಶಕ್ಕೆ ಬೆಟ್ಟುಮಾಡಿ ತೋರಿದಳು. ರಾಶಿ ನಕ್ಷತ್ರಗಳ ನಡುವೆ ಜೋರಾಗಿ ಕಾಣುತ್ತಿದ್ದ ಚಿಕ್ಕಿಯೊಂದನ್ನು  ತೋರಿಸಿ, ’ಇನ್ಮುಂದೆ ನಿನ್ನಜ್ಜಿ ಅಲ್ಲಿರ್ತಾರೆ’ ಅಂದಳು. ನಾನು ನೋಡಿದೆ. ಆ ನಕ್ಷತ್ರಕ್ಕೆ ಅಜ್ಜನಗಡ್ಡದ ತರಹ ಕೂದಲಿಲ್ಲ, ಗುಳಿಬಿದ್ದ ಕಣ್ಣುಗಳಿಲ್ಲ, ಬೆಚ್ಚಗಿನ ಕೈಗಳಿಲ್ಲ, ಸುಕ್ಕುಬಿದ್ದ ಮುಖವಂತೂ ಇಲ್ಲವೇ ಇಲ್ಲ. ’ಇದು ಅವಳಲ್ಲವೇ ಅಲ್ಲ” ಅನ್ನಿಸಿಬಿಟ್ಟಿತು. ಆಕೆ ಸತ್ತುಹೋದ ಸುಮಾರುದಿನಗಳವರೆಗು ಮಲಗಿದಾಗೆಲ್ಲ ಆಕೆ ’ಮಗಳೇ!’ ಎಂದು ಕರೆದಹಾಗಾಗಿ ಎದ್ದು ಕೂತುಬಿಡುತ್ತಿದ್ದೆ. ’ಸತ್ತವರು ಏನಾದರು ಕೆಲಸ ಅರ್ಧಕ್ಕೆ ಬಿಟ್ಟುಹೋಗಿದ್ದರೆ ಕಾಗೆಯಾಗಿ ಹುಟ್ಟಿ ಮನೆಯ ಹತ್ತಿರವೆ ಇರ್ತಾರೆ” ಎಂದು ಮುದುಕಿ ಗುಲಾಬಿ ಹೇಳಿದ್ದು ಕೇಳಿಕೊಂಡು ಮನೆಯ ಹಿತ್ತಲಿಗೆ ಬರುವ ಕಾಗೆಗಳಲ್ಲಿ ಅಜ್ಜಿಯ ತರಹದ ಕಾಗೆಯನ್ನು ಹುಡುಕುತ್ತಿದ್ದೆ. ಇದ್ದುದರಲ್ಲಿ ನನ್ನನ್ನ ಜಾಸ್ತಿಹೊತ್ತು ದುರುಗುಟ್ಟುವ ಕಾಗೆಯೆ ಅಜ್ಜಿ ಎಂದು ನಿರ್ಧರಿಸಿ ಅದಕ್ಕೆ ಇದ್ದ ತಿಂಡಿಯನ್ನೆಲ್ಲ ತಂದುಹಾಕುತ್ತಿದ್ದೆ. ಆಕೆ ಕಾಗೆಯಾಗಿರುವುದು ನನಗೆ ಖಾತ್ರಿಯಾಗಿತ್ತು. ಅವಳು ನನಗೆ ಹೇಳುತ್ತಿದ್ದ ಕಥೆ ಪೂರ್ತಿಯಾಗಿರಲಿಲ್ಲವಲ್ಲ!!

**********************

’ಹೀಗೆ ಇವರು ಮಾಡಿದ್ರೆ ನಾಳೆ ನಮಗೆ ಚಿಪ್ಪೇ ಗತಿ! ಮನೆ ರಿಜಿಸ್ಟರ್ ಮಾಡ್ಕೊಳೋದರಲ್ಲಿ ಇಂಟರೆಸ್ಟೇ ಇಲ್ಲ. ಎಲ್ಲ ಕಾದಿದಾರೆ ಸಿಕ್ಕಿದ್ನ ಮುಕ್ಕೋಕೆ. ಈ ಮನುಷ್ಯಾನೋ, ಇರೋದನ್ನೂ ಕಳೀತೀನಿ ಅಂತ ಮನಸ್ಸು ಮಾಡ್ಬಿಟ್ಟಿದೆ!! ತಲೆಮೇಲೆ ಸೂರು ಅಂತ ಈಗೇನೋ ಇದೆ. ಅದೂ ನಾಳೆಗೆ ಇವ್ರ ಹೆಡ್ಡತನದಿಂದ ಹೊಂಟೋಗತ್ತೆ ಅಷ್ಟೆ!!’

ಕಾಲೇಜು ಮುಗಿಸಿ ಬಂದು ಕೂತು ಕಾಫಿಕುಡಿಯುತ್ತಿದ್ದವಳ ಬಳಿ ಅಮ್ಮ ಸಿಟ್ಟು ಕಾರುತ್ತಿದ್ದಳು. ಮರುದಿನ ಹಬ್ಬ. ಕಟ್ಟೆಯಲ್ಲಿ ಸಾಲಾಗಿ ಮಣ್ಣಿನ ದೀಪಗಳು ಎಣ್ಣೆಯ ದಾರಿ ಕಾದು ಕೂತಿದ್ದವು. ಅಪ್ಪ ತನ್ನ ಪಾಲಿನ ಜಗಳವಾಡಿ ಚಪ್ಪಲಿ ಮೆಟ್ಟಿಕೊಂಡು ಆಚೆ ಹೊರಟುಬಿಟ್ಟಿದ್ದ. ಅಮ್ಮನ ಒಡಲಲ್ಲಿ ಭದ್ರವಾಗಿ ಕೂತಿದ್ದ ವರುಷಗಳ ಬೆಂಕಿ ಹೊರಬರಲು ದಾರಿ ಹುಡುಕುತ್ತ ಇತ್ತು. ನಾನು ಕೊಂಚ ಸಾಂತ್ವನದ ತುಪ್ಪ ಹಾಕಿದೆ.

’ನಿನ್ನಜ್ಜಿ ಕಾಲದಿಂದಲೂ ಇದೇನೆ ಹಿಂಸೆ. ಈ ಮನೆಗೋಸ್ಕರ ಸತ್ತೆ ನಾನು. ನಾನು ಈ ಮನೆ ಹೊಸಿಲು ತುಳಿದಾಗ ಏನಿತ್ತು ನಿನ್ನಜ್ಜಿ ಹತ್ರ? ಬರೆ ನಾಲಕ್ಕು ಮಡಕೆ. ಯಾರೊ ಕೊಟ್ಟ ನಾಲಕ್ಕು ಪಿಂಗಾಣಿ ಪಾತ್ರೆ. ಒಂದೊಂದೆ ಕಾಳು ಸೇರಿಸೀ ಸೇರಿಸೀ ಇದೆಲ್ಲ ಮಾಡಿದೆ. ನಿನ್ನಜ್ಜಿ ಜಿದ್ದಿನಲ್ಲಿ ಎಲ್ಲಾರ್ನ ಮನೆಗೆ ಕರೆದೂ ಕರೆದೂ ಕೊಡೋರು. ಮನೇಲಿ ಕರೀತಿದ್ದ ಆಕಳು. ಒಂದು ತೊಟ್ಟು ಹಾಲು ಉಳಿಸ್ತ ಇರ್ಲಿಲ್ಲ ನಂಗೆ.. ದೊಡ್ಡಮಗನ ಮನೆಗೆ ಗುಟ್ಟಾಗಿ ಕಳಿಸಿಬಿಡೋರು. ನಾನು ನಿನ್ನ ಬಾಣಂತನದಲ್ಲಿ ಕುಡಿಯೋಕೆ ಹಾಲಿಲ್ಲದೆ ಕೊನೆಗೆ ವರ್ತನೆ ಹಾಕಿಸಿಕೊಳೋಕೆ ಶುರುಮಾಡಿದೆ. ಅದೇನು ಬಾಣಂತನಾ ಮಾಡಿಕೊಂಡ್ನೋ? ದುಡ್ಡು ಕೊಟ್ಟರೆ ಇಸ್ಕೋತಲೇ ಇರ್ಲಿಲ್ಲ. ದುಡಿಯೋ ಸೊಸೇ ಮೇಲೆ ಅದೇನೋ ದ್ವೇಷ. ದೇವರ ಮನೇಲಿ ಇಟ್ಟುಬಿಡ್ತಿದ್ದೆ ದುಡ್ನ. ಯಾರುಯಾರನ್ನೋ ಕೂರಿಸಿಕೊಂಡು ನನ್ನಮೇಲೆ ಗಂಟೆಗಟ್ಲೆ ಏನೇನೊ ಗುಸುಗುಸು ಅನ್ನೋರು. ನಾನು ಇವರ ಮನೆ, ಆಸ್ತಿ ಅಂತ ನೋಡಿಕೊಂಡು ಮದುವೆ ಆದೆನಂತೆ. ಅದನ್ನೆ ನೊಡೋದಾಗಿದ್ರೆ ನಿಮ್ಮಪ್ಪನೆ ಬೇಕಿತ್ತ ನನಗೆ? ಎಂಥ ಮನೆ ನನ್ನದು ಗೊತ್ತಾ? ಎಲ್ಲ ಬಿಟ್ಟು ಇಲ್ಲಿ ಬಂದರೆ ಕೊನೆಗೊಂದು ಗೂಡೂ ಇಲ್ಲದ ಹಾಗೆ ಮಾಡ್ತಿದೆ ನಿನ್ನಪ್ಪ…’

ಬತ್ತಿ ಹೊಸೆದುಕೊಂಡು ಸುಮ್ಮನೆ ಕೂತುಕೊಂಡಿದ್ದೆ. ಹೊರಗೆ ಮಕ್ಕಳು ಪಟಾಕಿ ಪಿಸ್ಟೂಲು ಹಿಡಿದುಕೊಂಡು ಪಟ್ ಪಟ್ಟೆನ್ನಿಸುತ್ತಿದ್ದವು. ಹಿಂಸೆ ಅನ್ನಿಸಿತು. ಅಲ್ಲಿಯತನಕ ಅಜ್ಜಿಯ ಸುತ್ತ ನಾನೆ ಕಟ್ಟಿಕೊಂಡಿದ್ದ ಸುಮಾರು ಕೋಟೆಕೊತ್ತಲಗಳು ಸಮಾಧಿ ಸೇರತೊಡಗಿದವು. ಮತ್ತೂ ಅಮ್ಮನ ಕೆದಕಿದೆ. ಅಜ್ಜಿ ಸತ್ತ ದಿನ ದೊಡ್ಡಪ್ಪನಿಗೂ ಅಪ್ಪನಿಗೂ ನಡೆದ ಜಗಳ, ಅದರಲ್ಲಿ ಮನೆಯ ಬಗ್ಗೆ ನಡೆದ ಮಾತುಗಳು, ಅಜ್ಜಿಗೆ ಅಮ್ಮ ಕೊಡುತ್ತಿದ್ದ ದುಡ್ಡಿನ ಬಗ್ಗೆ ಬಂದ ಹೀಯಾಳಿಕೆ, ಅಪ್ಪನ ಕೋಪ, ಅಮ್ಮನ ತಾಳ್ಮೆ…

ಸಾವಿನ ನಂತರ ಎಲ್ಲರೂ ಸೇರಿ ಅಮ್ಮನನ್ನು ದೂರವಿಟ್ಟು ಅಜ್ಜಿಯ ಪೆಟ್ಟಿಗೆ ಜಾಲಾಡಿಬಿಟ್ಟಿದ್ದರು. ಅಮ್ಮನಿಗೆ ಅಜ್ಜಿಯ ಬಟ್ಟೆಯ ತುಂಡೂ ದಕ್ಕಲಿಲ್ಲ. ಸತ್ತ ಅಜ್ಜಿ ತನ್ನ ಗೂಡು ಬಿಡಲು ಸಿದ್ಧಳಿರಲಿಲ್ಲ. ಹೋಗುವ ಮೊದಲು ಹಾಸಿಗೆಯಲ್ಲಿ ಮಲಗಿಕೊಂಡೆ ಎಲ್ಲರ ನಡುವೆ ಸುಮಾರು ಗೋಡೆಗಳನ್ನೆಬ್ಬಿಸಿಬಿಟ್ಟಿದ್ದಳು. ಎಲ್ಲರನ್ನೂ ಅವರವರ ಗೂಡುಗಳಿಗೆ ಸೇರಿಸಿ ವಾಪಾಸು ಒಂದೇ ಕಡೆ ಸೇರದ ಹಾಗೆ ನೋಡಿಕೊಂಡಿದ್ದಳು.

ಅಮ್ಮ ಗುಬ್ಬಿ, ಅಪ್ಪ ಕಾಗೆ ಅಂದುಕೊಂಡೆ. ಅಜ್ಜಿ ಇದ್ದಿದ್ದರೆ ಇವರಿಬ್ಬರನ್ನ ಪಾತ್ರಗಳನ್ನಾಗಿ ಮಾಡಿ ಯಾವ ಹೊಸ ಗೂಡಿನ ಕಥೆ ಹೇಳುತ್ತಿದ್ದಳೊ ಅಥವ ಅವಳು ಅಷ್ಟುಸಾರೆ ಹೇಳಿದ್ದು ಅವರದೆ ಕಥೆಯೊ, ಯೋಚಿಸತೊಡಗಿದೆ.

 

(ಕನ್ನಡಪ್ರಭ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾಗಿದೆ)                                    ಚಿತ್ರಕೃಪೆ: www.ny-image3.etsy.com

ನೈನಾ ಮತ್ತು ಒಂದು ಸೇಬು

f12551.jpg

ಮೇರಿ ಡಿಸೋಜರಿಗೆ ಬೆಳಜಾವದಿಂದಲು ಮೈಕೆರೆದುಕೊಳ್ಳಲೂ ಪುರುಸೊತ್ತಿಲ್ಲದಷ್ಟು ಕೆಲಸ. ಹೇಳಿಕೇಳಿ ಸ್ಕೂಲುಟೀಚರು. ಸ್ವಾತಂತ್ರ್ಯ ದಿನಾಚರಣೆಯೆಂದರೇನು ಸುಮ್ಮನೆ ಆಗಿಬಿಡುತ್ತದೆಯೆ? ಏಳುಗಂಟೆಗೆಲ್ಲ ಶಾಲೆಯಲ್ಲಿ ಕಾಣಿಸಿಕೊಳ್ಳಬೇಕು, ಒಬ್ಬೊಬ್ಬರು ಒಂದೊಂದು ಡ್ರಿಲ್ಲಿನ ಮೇಲುಸ್ತುವಾರಿ ನೋಡಿಕೊಳ್ಳಬೇಕು ಎಂದು ಯಾವಾಗಲು ಮುಖಸಿಂಡರಿಸಿಕೊಂಡೇ ಇರುವ ಹೆಡ್ಮಾಸ್ಟರಿಂದ ತಾಕೀತಾಗಿದೆ. ಮನೆಯಲ್ಲಿ ನೋಡಿದರೆ ನೀಮಾ, ನೈನಾ ಸದಾ ಸೆರಗಿಗೇ ಜೋತುಬೀಳುತ್ತವೆ. ನಿನ್ನೆ ಸಂಜೆ ನೀಮಾ ಮಾಡಿದ ರಂಪ ನೆನಪಾಗಿ ಮೇರಿ ಡಿಸೋಜರಿಗೆ ಸಿಟ್ಟಿನ ಜೊತೆಗೆ ನಗು ಉಕ್ಕುತ್ತ ಇತ್ತು. ಯಾವನೊ ಸುಡುಗಾಡು ಪರದೇಸಿ ಬುಟ್ಟಿಯಲ್ಲಿ ಒಂದಿಷ್ಟು ಸೇಬು ಹೊತ್ತುಕೊಂಡು ಮನೆಯ ಬಳಿ ಬಂದ. ಅವನನ್ನು ನೋಡಿದ್ದೆ ತಡ, ನೀಮಾ ’ಹೋ! ನಂಗೆ ಆಪಲೂಊಊ!!’ ಎಂದು ಕೂಗಾಡಲು ಶುರುಮಾಡಬೇಕ! ಶೆ!! ಎಂಥ ಮಕ್ಕಳಿವು! ಅವರಪ್ಪನ ಜೊತೆಗೆ ಎಸ್ಟೇಟಿಗೆ ಹೋಗಿ ಅಂದರು ಕೇಳುವುದಿಲ್ಲವಲ್ಲ! ಇಲ್ಲಿ ಸಂಬಳದಿಂದ ಒಂದಿಷ್ಟು ದುಡ್ಡು ಆಚೀಚೆ ಖರ್ಚು ಮಾಡಬೇಕು ಅಂದರು ಪ್ರಾಣ ಬಾಯಿಗೆ ಬರುತ್ತದೆ. ಅಪ್ಪ ಅಮ್ಮ ಶೃಂಗೇರಿಯಿಂದ ಬರುವಾಗ ನೀಮಾಳಿಗೆಂದೆ ಸೇಬು ಹೊತ್ತುಕೊಂಡು ಬರುತ್ತಾರೆ. ಗಂಡ ಅಕೌಂಟು ಕೆಲಸ ಮಾಡುವ ಸುಂಟಿಕಾನಿನಲ್ಲಾದರೆ, ಬಿಟ್ಟಿಹಣ್ಣು ಧಂಡಿಯಾಗಿ ಸಿಗುತ್ತವಲ್ಲ. ಹಾಳಾಗಲಿ ಅಂದುಕೊಂಡು ಕೊನೆಗೂ ಬರೋಬ್ಬರಿ ಚೌಕಾಶಿ ಮಾಡಿ ಒಂದು ಕೇಜಿ(ಹಯ್ಯೊ, ಮುವತ್ತೈದು ರುಪಾಯಿಗಳೆ!)ಕೊಂಡು ಒಂದು ಹಣ್ಣು ನೀಮಾಳ ಕೈಗಿಟ್ಟದ್ದಾಯಿತು. ಅವಳು ಎಲ್ಲ ಬಿಟ್ಟು ಸೀದಾ ನೈನಾಳ ಬಳಿ ಹೋಗಿ ತಂಗಿಯನ್ನು ತೊಡೆಯ ಮೇಲೆ ಕೂರಿಸಿಕೊಂಡು ಹಣ್ಣು ತಿನ್ನಿಸಲು ನೋಡುತ್ತಿದ್ದನ್ನು ಹಾಗು ನೈನಾ ’ಬೇದ, ಬೇದ’ ಎಂದು ತುಪ್ಪುವ ಹಾಗೆ ಕೆಟ್ಟಕೆಟ್ಟ ಮುಖಮಾಡುತ್ತಿದ್ದುದನ್ನು ನೋಡಿ ಎಲ್ಲರಿಗೆ ಗಮ್ಮತ್ ನಗು. ಒಂದು ವಾರದಿಂದ ನೀಮಾಳ ಕಾಟ ಜಾಸ್ತಿಯಾಗಿ ಕೆಳಪೇಟೆಯ ನರ್ಸರಿಶಾಲೆಗೆ ಬೆಳಗಿನಿಂದ ಸಂಜೆ ಕಳಿಸುವ ವ್ಯವಸ್ಥೆಯನ್ನು ಮೇರಿ ಡಿಸೋಜ ಮಾಡಿದ್ದರು. ಅವರ ಜೊತೆಗೆ ಇರುತ್ತಿದ್ದ ತಂಗಿ ಅನಿತಾ ಮಧ್ಯಾಹ್ನ ಹೋಗಿ ಬಿಸಿಬಿಸಿ ಊಟಮಾಡಿಸಿ ಬರುವದು. ನೀಮಾ ಚೂಟಿ ಬಾಲೆ. ಹೇಗೊ ಸುಮ್ಮನೆ ಹೋಗಿಬರುತ್ತ ಇತ್ತು.

ಮಾಮೂಲಾಗಿ ಮೇರಿ ಡಿಸೋಜ ಎದ್ದೇಳುವುದು ಬೆಳಗ್ಗೆ ಆರೂವರೆಗೆ. ಆದರೆ ಸ್ವಾತಂತ್ರ್ಯ ದಿನಾಚರಣೆ ಅಂದರೆ ಸುಮ್ಮನೆ ನಡೆಯುತ್ತದ? ಐದು ಗಂಟೆಗೇ ಅಲಾರ್ಮು ಹೊಡೆದುಕೊಂಡಾಗ ತನ್ನನ್ನು ಪಕ್ಕಕ್ಕೆಳೆದುಕೊಂಡ ಗಂಡನ ’ಮಲಕ್ಕೊ ಮಾರಾಯ್ತಿ’ಯನ್ನೂ ಲಕ್ಷಿಸದೆ ಮೇರಿ ದುಬುಕ್ಕನೆದ್ದು ಬಂದಿದ್ದರು. ಹಂಡೆಗೆ ಉರಿಹಾಕಿ ಬ್ರಶ್ಶು ಮಾಡುತ್ತ ಇರುವಾಗ ಪಿರಿಪಿರಿ ಮಳೆ ಹನಿಯಲು ತೊಡಗಿದ್ದನ್ನು ನೋಡಿ ’ಥು! ಇವತ್ತು ಒಳ್ಳೆ ಸ್ಯಾರಿ ಉಟ್ಟರು ವೇಸ್ಟೇ’ ಎಂದು ಗೊಣಗಿಕೊಂಡು ಆಚೀಚೆ ಓಡಾಡಿದರು. ಕೊನೆಗೆ ಕಬೋರ್ಡಿನ ಬಾಗಿಲು ತೆಗೆದು ನುಸಿಗುಳಿಗೆಯ ಪರಿಮಳವನ್ನು ಆಸ್ವಾದಿಸುತ್ತ ತಮ್ಮನ ಬ್ಯಾಪ್ಟಿಸಮ್ಮಿನ ಸಮಯದಲ್ಲಿ ಖರೀದಿಸಿದ್ದ ಪ್ರಿಂಟೆಡ್ ಶಿಫಾನ್ ಸೀರೆಯೊಂದನ್ನು (ನೆನೆದರೂ ಬೇಗ ಒಣಗುತ್ತದಲ್ಲ!) ತೆಗೆದಿಟ್ಟರು. ನೀಮಾಳನ್ನು ಆರುಗಂಟೆಗೆ ಎಬ್ಬಿಸಿ ಸ್ನಾನಮಾಡಿಸಿ ದೋಸೆ ತಿನ್ನಿಸಿದರು. ಪಿಂಕುಫ್ರಾಕಿನಲ್ಲಿ ಕಂಗೊಳಿಸುತ್ತಿದ್ದ ಮಗಳನ್ನು ನೋಡುತ್ತ ಹೆಣ್ಣುಮಕ್ಕಳು ಹ್ಯಾಗೆ ಬೆಳೆದುಬಿಡುತ್ತಾರಲ್ಲ ಅಂದುಕೊಂಡರು. ಗಂಡನಿಗೆ ಟಿಫಿನುಬಾಕ್ಸಿನಲ್ಲಿ ತಿಂಡಿಕಟ್ಟಿ, ಅನಿತಾಳಿಗೆ ಇವತ್ತು ನರ್ಸರಿಗೆ ಊಟ ಬೇಡವೆಂದೂ, ನೈನಾಳ ಬಗ್ಗೆ ಜಾಗ್ರತೆಯೆಂದೂ ತಾಕೀತು ಮಾಡಿದರು. ನೀಮಾಳ ಕೈಹಿಡಿದು ಹೊರಡುವಾಗ ಆರೂಮುಕ್ಕಾಲು. ದಾರಿಯುದ್ದ ಯುನಿಫಾರಮ್ಮು ಹಾಕಿಕೊಂಡು ಶಾಲೆಯ ಗ್ರೌಂಡಿನ ಕಡೆ ಧಾವಿಸುವ ಮಕ್ಕಳು. ಮಗಳನ್ನು ನರ್ಸರಿಗೆ ಬಿಟ್ಟು ಶಾಲೆ ತಲುಪುವುದು ಐದು ನಿಮಿಷ ಲೇಟಾಯಿತೆಂದು ಹೆಡ್ಮಾಸ್ಟರು ಎಲ್ಲರ ಮುಂದೇ ’ಮೇರಿ ಡಿಸೋಜಾ, ನೀವೇ ಹೀಗೆ ಮಾಡಿದರೆ ನಾವು ಮಕ್ಕಳಿಗೆ ಏನು ಹೇಳ್ಲಿಕ್ಕಾಗ್ತದೆ? ’ ಎಂದು ಮುಂತಾಗಿ ಉಪದೇಶ ನೀಡಿದರು. ಮೇರಿ ಡಿಸೋಜರ ಖಾಸಾ ಫ್ರೆಂಡು ಜಬೀನಾಬಾನು ಮೆಲ್ಲಗೆ ’ಇವ ಶಾಲೆಯ ಪಪ್ಪಾಯಿಗಿಡದಿಂದ ಮನೆಗೆ ಹಣ್ಣು ಸಾಗಿಸ್ತಾನೆ, ಎಸ್.ಬಿ.ಸಿ. ಮೀಟಿಂಗಿನಲ್ಲಿ ಸುಳ್ಳುಸುಳ್ಳೆ ರೀಲು ಬಿಡ್ತಾನೆ. ಆಮೇಲೆ ನಮ್ಗೆ ಹೇಳೋಕ್ಬರ್ತಾನೆ. ಬಿಡಿ, ಬೇಜಾರು ಮಾಡ್ಕೋಬೇಡಿ ಮೇರಿ’ ಎಂದು ಹೇಳಿಹೋದಳು.

ಮಳೆ ಹನಿಯುತ್ತಿದ್ದರೂ ಕಾರ್ಯಕ್ರಮ ಚೆನ್ನಾಗೇ ನಡೆಯಿತು. ಧ್ವಜಾರೋಹಣ, ಮಾಮೂಲು ಭಾಷಣ. ಮೇರಿ ಡಿಸೋಜರ ಕ್ಲಾಸಿನ ಮಕ್ಕಳ ಹೂಪ್ಸ್ ಡ್ರಿಲ್ಲು ಪ್ರೈಜು ಗಳಿಸಿಕೊಂಡಿತು. ಮಕ್ಕಳಿಗೆ ಚಾಕಲೇಟು ಹಂಚಿ ಶಾಲೆಗೆ ಬೀಗ ಹಾಕಿಸಿ ಮೇರಿ ಡಿಸೋಜ ಜಬೀನಾಬಾನುವಿನೊಂದಿಗೆ ಬೆಳಗ್ಗೆ ತನಗೆ ಹೆಡ್ಮಾಸ್ಟರು ಮಾಡಿದ ಅವಮಾನಕ್ಕೆ ಡ್ರಿಲ್ಲಿಗೆ ಬಂದ ಪ್ರೈಜು ಹೇಗೆ ತಕ್ಕ ಉತ್ತರವಾಯಿತೆಂದು ಮಾತನಾಡಿಕೊಳ್ಳುತ್ತ  ಕೆಳಪೇಟೆಯ ನರ್ಸರಿ ಶಾಲೆಯ ಕಡೆ ನಡೆದರು. ನರ್ಸರಿಯ ಬಾಗಿಲಿನಲ್ಲಿ ಆಯಾಳ ಜೊತೆ ನೀಮಾ ನಿಂತುಕೊಂಡಿರುವುದು ಕಾಣಿಸಿತು. ಸ್ವಲ್ಪ ವೇಗವಾಗಿ ಹೆಜ್ಜೆಹಾಕುತ್ತ ಬಂದ ಮೇರಿ ಡಿಸೋಜ ಅವಾಕ್ಕಾಗಿ ಹಾಗೆಯೆ ನಿಂತುಬಿಟ್ಟರು.

ಹಾಗೆ ಅವರಿಗೆ ಅಚ್ಚರಿಯಾಗುವಂತೆ ಕಂಡಿದ್ದು ನೀಮಾಳ ಕೈಲಿದ್ದ ಒಂದು ಅರ್ಧ ತಿಂದ ಸೇಬುಹಣ್ಣು. ನಾನು ಬೆಳಗ್ಗೆ ಇವಳ ಕೈಗೆ ಸೇಬು ಕೊಟ್ಟಿರಲಿಲ್ಲವಲ್ಲ! ಓಹೊ, ಶಾಲೆಯಲ್ಲಿ ಕೊಟ್ಟಿರಬೇಕು. ಅಂದುಕೊಂಡು ಕಾಂಪೌಡಿನ ಗೇಟು ದೂಕಿ ಒಳಹೋದರು. ಆಯಾಳಿಗೆ ’ಏನು, ಶಾಲೆಯಲ್ಲಿ ಸೇಬೆಲ್ಲ ಕೊಟ್ಟುಬಿಟ್ಟಿದೀರಿ!’ ಎಂದು ಸಂತಸ ವ್ಯಕ್ತಪಡಿಸಿದರು. ಆಗ ನೀಮಾ ’ಮಮ್ಮಿ, ನೈನಾ, ನೈನಾ’ ಎಂದಿತು. ’ಆಯಿತು, ನೈನಾಗೂ ಕೊಡ್ತೀಯಂತೆ, ನಡಿ ಹೋಗೋಣ’ ಎಂದು ಹೇಳುತ್ತಿದ್ದಂತೆಯೆ ಆಯಾ ಮೇರಿ ಡಿಸೋಜರ ಮಾತಿಗೆ ಅಡ್ಡಬಂದು ’ಮೇಡಮ್ಮಾರೇ, ನಿಂ ತಂಗಿ ಮಗೀನ ಕರ್ಕಂಡು ಪೇಟೆಗೆ ಬಂದಿದ್ರೂ ಅಂತ ಕಾಣ್ತದೆ. ಸಣ್ಣಮಗೀ ಒಂದು ಸೇಬಣ್ಣು ಹಿಡ್ಕಬಂದಿತ್ತು. ಬಂದಿದ್ದೆಯ ಅದುನ್ನ ನೀಮವ್ವುಗ್ ಕೊಡ್ತಾ. ನೀಮವ್ವ ಇಸ್ಕಂತಾ. ಒಂದೀಟೊತ್ತು ಕೂತಿತ್ ಕಣ್ರ. ಆಮೆಕೆ ನಿಮ್ತಂಗಿ ಬಂದ್ರೆನೋ. ಒಂಟೋತು.’ ಅಂದಳು. ಮೇರಿ ಡಿಸೋಜರಿಗೆ ಎಲ್ಲಿಲ್ಲದ ಕೋಪ. ಅಲ್ಲ, ವಯಸ್ಸಿಗೆ ಬಂದಿರುವ ಹುಡುಗಿ. ಹಾಗೆಲ್ಲ ಅಡ್ಡಾಡಬೇಡ ಎಂದು ಹೇಳಿದ್ದರೂ, ಮನೆಗೆ ಬೀಗ ಹಾಕಿಕೊಂಡು ಮಗುವನ್ನು ಕಟ್ಟಿಕೊಂಡು ಪೇಟೆ ಅಲೆಯಲು ಏನು ಧೈರ್ಯವಿರಬೇಕು ಈ ಹುಡುಗಿಗೆ! ಮನಸ್ಸಿನಲ್ಲೆ ಇವತ್ತು ಅನಿತಾಳಿಗೆ ಚೆನ್ನಾಗಿ ಬೈಯಬೇಕು ಎಂದುಕೊಂಡ ಮೇರಿ ಮಗಳನ್ನೆಳೆದುಕೊಂಡು ಮನೆಯೆಡೆಗೆ ಕಾಲುಹಾಕಲಾರಂಭಿಸಿದರು. ಮನೆ ಇನ್ನೇನು ಎರಡು ಫರ್ಲಾಂಗು ದೂರ ಅನ್ನುವಾಗ ಅಗೋ ದೂರದಲ್ಲಿ ಅನಿತಾ ಅರ್ಧ ಜೋರಾಗಿ ನಡೆಯುತ್ತ, ಅರ್ಧ ಓಡುತ್ತ ಬರುವುದು ಕಾಣಿಸಿತು. ’ಹಾಳುಹುಡುಗಿ! ಮಗುವನ್ನು ಒಂಟಿ ಬಿಟ್ಟು ಬರುತ್ತಾಳಲ್ಲ. ಇವಳ ಮಂಡೆಪೆಟ್ಟು ಬುದ್ಧಿಗಿಷ್ಟು’ ಎಂದು ಜೋರಾಗಿಯೆ ಬೈದುಕೊಂಡು ಮೇರಿ ಡಿಸೋಜ ಭರಭರ ನಡೆದರು. ಅನಿತಾ ಒಂದೇ ಸ್ಪೀಡಿನಲ್ಲಿ ಬಂದವಳೆ, ’ಅಕ್ಕ, ನೈನಾ ಎಲ್ಲಿಯೋ ಹೋಗ್ಬಿಟ್ಟಿದಾಳೆ’ ಅಂದಳು. ಮೇರಿ ಡಿಸೋಜರಿಗೆ ಎದೆ ಜೋರಾಗಿ ಹೊಡೆದುಕೊಳ್ಳಲಿಕ್ಕೆ ಶುರುವಾಯಿತು.  ’ಮಲ್ಗಿದ್ದೋಳು ಎದ್ದು ನೀಮಾ ಬಟ್ಟೆ ತೋರಿಸಿ ಗಲಾಟೆ ಮಾಡ್ತ ಇದ್ಲು. ನಾನು ಮುಖತೊಳೆಸಿ ಅವಳ ಕೈಗೆ ಒಂದು ಸೇಬಣ್ಣು ಕೊಟ್ಟು ನೀರು ಸೇದಲಿಕ್ಕಂತ ಹಿತ್ಲಿಗೆ ಹೋದೆ. ಬಂದು ನೋಡ್ತೀನಿ, ಇಲ್ಲಿ ಇರಲಿಲ್ಲ. ಮನೇಲೆ ಇರ್ಬೇಕು ಅನ್ಕೊಂಡೆ. ಆಮೇಲೆ ಸಲ್ಪ ಹೊತ್ತಾದ್ರುನು ಸೌಂಡೇ ಇಲ್ಲ. ಎಲ್ಲ ಕಡೆ ಹುಡುಕಿಬಿಟ್ಟೆ. ಎಲ್ಲು ಸಿಗ್ತಿಲ್ಲ…’ ಏನೇನೋ ಹೇಳುತ್ತಲೆ ಇದ್ದಳು ಅನಿತಾ.

ರೋಡಿನಲ್ಲಿ ನಿಂತಿದ್ದ ಮೇರಿ ಡಿಸೋಜರಿಗೆ ಹಲವಾರು ಯೋಚನೆಗಳು ಒಂದೆಸಾರಿಗೆ ಮುತ್ತಿಕೊಂಡವು. ಅದರಲ್ಲಿ ಮೊದಲನೆಯದು ಸುಂಟಿಕಾನು ಎಸ್ಟೇಟಿನ ಅಕೌಂಟು ಕ್ಲರ್ಕಾಗಿದ್ದರು ಕೋಪಬಂದಾಗ ಕುಡಿದ ಲೈನುಕೆಲಸದವರಿಗಿಂತ ವರ್ಸ್ಟಾಗಿ ಆಡುವ ತನ್ನ ಗಂಡನ ಬಗ್ಗೆಯಾಗಿತ್ತು. ಜೆರ್ರಿ ಡಿಸೋಜರ ಕೋಪವನ್ನು ಕಂಡು ಅದು ಸೈತಾನನ ಟೈಪೆಂದೂ ಸಿಟ್ಟನ್ನು ಕಂಟ್ರೋಲು ಮಾಡಬೇಕೆಂದು ಸಾಕ್ಷಾತ್ ಪಾದ್ರಿ ಪೀಟರ್ ಡಿಕುನ್ಹಾರವರೆ ಹಲವಾರು ಬಾರಿ ಹೇಳಿದ್ದರು ಜೆರ್ರಿ ಡಿಸೋಜಾ ಅದರ ಬಗ್ಗೆ ತಲೆಕೆಡಿಸಿಕೊಂಡಿದ್ದಂತೆ ಇರಲಿಲ್ಲ. ಹಾಗು ಅವರಿಗೆ ಕೋಪಬಂದಾಗ ಎದುರು ನಿಲ್ಲುವ ರಿಸ್ಕನ್ನು ಯಾರೂ ತೆಗೆದುಕೊಳ್ಳುತ್ತಲೂ ಇರಲಿಲ್ಲ. ಅಂಥವರಿಗೆ ಇದು ಗೊತ್ತಾದರೆ? ಎರಡನೆಯ ಯೋಚನೆ ಕೆಲಸಮಯದ ಹಿಂದಷ್ಟೆ ತತ್ರಬಿತ್ರ ಕಾಲುಹಾಕಿ ಈಗ ಬ್ಯಾಲೆನ್ಸು ಮಾಡಿ ನಡೆಯಲು ಕಲಿತಿದ್ದ ಎರಡೂವರೆ ವಯಸ್ಸಿನ ಮಗಳು ಎತ್ತ ಹೋಗಿದ್ದಾಳು ಎನ್ನುವುದು. ಮೂರನೆಯ ಯೋಚನೆ ಅದೆಷ್ಟು ಗೋಜಲಾಗಿತ್ತೆಂದರೆ ಅದು ಏನು ಎಂದು ಖುದ್ದು ಮೇರಿ ಡಿಸೋಜರಿಗೇ ಅರ್ಥವಾಗಲಿಲ್ಲ. ಅದೆ ವೇಳೆಗೆ ನೀಮಾ ತಾನು ತಿನ್ನುತ್ತಿದ್ದ ಸೇಬು ತೋರಿಸಿ ’ನೈನಾ’ ಅಂದಳು.

ಮೇರಿ ಡಿಸೋಜರಿಗೆ ಏನೊ ಹೊಳೆದಂತಾಗಿ, ಅನಿತಾಳಿಗೆ, ’ಅಲ್ವೇ ನೈನಾ ಸೇಬು ಹಿಡ್ಕೊಂಡು ನೀಮಾ ಹತ್ರ ಹೋಗಿದ್ಲಂತೆ ಆಮೇಲೆ ಅಲ್ಲಿಂದ..’ ಎನ್ನಲು ಪ್ರಾರಂಭಿಸಿ ಮುಂದಿನ ಸಾಧ್ಯತೆಗಳನ್ನು ಊಹಿಸಿಕೊಂಡು ನಡುಗಲಾರಂಭಿಸಿದರು. ಪುಟ್ಟಮಗು ಅದುಹೇಗೆ ಪೇಟೆಬೀದಿ ದಾಟಿಕೊಂಡು ಹೋಯಿತೊ? ಯಾರೂ ನೋಡಿರಲಿಕ್ಕಿಲ್ಲ, ಏಕೆಂದರೆ ಊರಿಗೂರೆ ಸ್ವಾತಂತ್ರ್ಯ ದಿನಾಚರಣೆ ಎಂದು ಮೈದಾನದ ಹತ್ತಿರ ಬಂದಿತ್ತು. ಕೆಳಪೇಟೆ ದಾಟಿದರೆ ರುದ್ರಾನದಿ ಸೇತುವೆ..ಏಸುವೆ!! ಎಂದುಕೊಂಡ ಮೇರಿ ಡಿಸೋಜ ತನಗೆ ನೆನಪಿದ್ದ ಪ್ರಾರ್ಥನೆಗಳನ್ನೂ ‘ಹೆಯಿಲ್ಮೇರಿ’ಗಳನ್ನೂ ಬಾಯಿಯಲ್ಲಿ ಗುಣುಗುಣಿಸಲಾರಂಭಿಸಿದರು. ಆ ಸಮಯಕ್ಕೆ ಸರಿಯಾಗಿ ಜೆರ್ರಿ ಡಿಸೋಜಾರ ಆಗಮನವಾಯಿತು.

ಮೇರಿ ಡಿಸೋಜರಿಗೆ ಭಯದಲ್ಲಿ ಒಂದು ಕ್ಷಣ ಏನು ಮಾತನಾಡಬೇಕೆಂದೆ ತೋಚಲಿಲ್ಲ. ಗಂಡನ ಕೆಂಪಾಗಲಾರಂಭಿಸಿದ್ದ ಕಣ್ಣುಗಳನ್ನೆ ನೋಡುತ್ತ ’ಹೆಹೆ, ನೈನಾ ಕಾಣ್ತಿಲ್ಲ.. ಹುಡುಕ್ತಿದೀವಿ’ ಎಂದು ಅಚಾನಕ್ಕಾಗಿ ಒದರಿ ತಮ್ಮನ್ನು ತಾವೆ ಶಪಿಸಿಕೊಂಡರು. ’ಅನಿತಾ ಫೋನು ಮಾಡಿದ್ಲು. ಆಫಿಸಿಂದ ವಾಪಸು ಬಂದೆ. ಅಲ್ಲ ನೀವು ಹೆಂಗಸರಿಗೆ ಒಂದು ಮಗೂನ ನೋಡ್ಕೊಳಕಾಗಲ್ವ? ಅದ್ಕೆ ಮನೆಲಿ ಬಿದ್ದಿರಿ, ಕೆಲಸಾನು ಬೇಡ, ಮಣ್ಣು ಬೇಡ ಅಂತೀನಿ..’ ಎಂದು ಮಾತನಾಡುತ್ತ ಜೆರ್ರಿ ಡಿಸೋಜಾ ಮೆಲ್ಲಮೆಲ್ಲನೆ ತಮ್ಮ ಸೌಂಡಿನ ವಾಲ್ಯೂಮು ಜಾಸ್ತಿಮಾಡತೊಡಗಿದರು. ಮಾಮೂಲಾಗಿ ಹೀಗಾದರೆ ಎಲ್ಲರು ಮೆಲ್ಲಮೆಲ್ಲನೆ ಜಾಗ ಖಾಲಿ ಮಾಡುವುದು ವಾಡಿಕೆ. ಆದರೆ ಮೇರಿ ಡಿಸೋಜರಿಗೆ ಇವತ್ತು ಗಂಡನ ಮಾತು ಕೇಳುತ್ತ ಎಲ್ಲಿಲ್ಲದ ಆವೇಶ ತುಂಬಿಕೊಳ್ಳಲಾರಂಭಿಸಿತು. ’ಜೆರಿ, ನೀನು ಹೀಗೆಲ್ಲ ಉಲ್ಟಸೀದ ರೋಪು ಮಾಡುದು ಬೇಡ ಆಯಿತ? ಇಷ್ಟುದಿನ ಏನು ಚನಾಗಿತ್ತ? ಮನೆರಿಪೇರಿಗೆ ಲೋನು ತೆಗಿಲಿಕ್ಕೆ ನನ್ನ ಕೆಲಸ ಬೇಕಿತ್ತಲ್ಲ ನಿನಗೆ? ನಿಮ್ಮಮ್ಮನ ಹಾಸ್ಪಿಟಲ್ ಬಿಲ್ಲು ತೀರಿಸಕ್ಕೆ ಯಾರು ಬರಬೇಕಾಗಿತ್ತು? ಬಾಕಿ ಎಲ್ಲ ಆಗಬೇಕು, ಮನೇಲಿ ಬಿದ್ದಿರಬೇಕು ಅಂದ್ರೆ ಆಗುತ್ತ? ನಾನು ಈಗ ನೈನಾ ಎಲ್ಲಿದಾಳೆ ಹುಡುಕೋಕೆ ಹೋಗ್ತಿದೀನಿ. ಜಗಳ ಮಾಡಿ ಟೈಮು ಹಾಳುಮಾಡೊದು ಬಿಟ್ಟು ಬರುದಾದ್ರೆ ಬಾ!’ ಎಂದು ಒಂದೆ ಉಸಿರಿಗೆ ಹೇಳಿ ಬ್ಯಾಗು ಬಿಸಾಕಿ ತಿರುಗಿಯೂ ನೋಡದೆ ಭರಭರನೆ ಹೋದರು. ಜೆರ್ರಿ ಏನೊ ಹೇಳಲು ಹೊರಟವರು ಬಾಯಿಮುಚ್ಚಿಕೊಂಡು ನೀಮಾಳನ್ನು ತಬ್ಬಿಕುಳಿತಿದ್ದ ಅನಿತಾಳನ್ನು ಕೆಕ್ಕರಿಸಿ ನೋಡಿ ಹೆಂಡತಿಯ ಹಿಂದೆ ಹೊರಟರು.

ಪೇಟೆಯಲ್ಲಿ ಎಲ್ಲಿಯೂ ಯಾರನ್ನು ವಿಚಾರಿಸಿದರು ಗೊತ್ತಿಲ್ಲ ಅನ್ನುವವರೆ. ಗೊತ್ತಿರುವ ಬೀದಿಗಳಲ್ಲೆಲ್ಲ ಅಲೆದು ಗಂಡಹೆಂಡತಿ ಸುಸ್ತಾದರು. ಮೇರಿ ಡಿಸೋಜ ಆಗಲೆ ಸೊರಸೊರ ಎಂದು ಪ್ರಾರಂಭಿಸಿದವರು ಜೆರ್ರಿ ’ಯೋಚನೆ ಮಾಡ್ಬೇಡ  ಮಾರಾಯಿತಿ’ ಎಂದಕೂಡಲೆ ಗೋಳೋ ಎಂದು ರೋಡುಬದಿಯಲ್ಲೆ ಕುಕ್ಕರಿಸಿ ಬಿಕ್ಕತೊಡಗಿದರು. ಎದುರಿಗೆ ಉಡುಪಿಕೆಫೆಯ ಕಾಮತರು ಮನೆಗೆ ಊಟಕ್ಕೆ ಬರುತ್ತಿದ್ದವರು ಇವರನ್ನು ನೋಡಿ ನಿಂತರು. ಜೆರ್ರಿ ಡಿಸೋಜರಿಂದ ವಿಷಯ ತಿಳಿದ ತಕ್ಷಣ ’ಹೋ, ನಿಮ್ಮ ಮಗುವಾ ಅದು? ನೀಲಿಫ್ರಾಕು ಹಾಕಿಕೊಂಡಿತ್ತಲ್ಲ? ನಾನೆ ಇಲ್ಲೆ ಗಲ್ಲಿಯ ಹತ್ತಿರ ನೋಡಿದೆ. ಯಾರ ಮಗು ನೀನು ಅಂತ ಕೇಳಿದರೆ ಕಿಟಾರಂತ ಕಿರುಚಿಕೊಂಡು ಓಡಿಹೋಯಿತು. ಅಲ್ಲಿಂದೆ ಅನ್ಕೊಂಡೆ. ಮೇಡಂ, ನಿಮ್ಥರಾನೆ ಇದೆ’ ಎಂದರು. ಗಂಡಹೆಂಡತಿ ಥ್ಯಾಂಕ್ಸುಹೇಳುವ ಗೋಜಿಗೂ ಹೋಗದೆ ಗಲ್ಲಿಯ ಹತ್ತಿರ ಓಡಿಹೋದರು.

ಗಲ್ಲಿಯಲ್ಲಿ ಯಾರೊ ಎರಡು ಮನೆಯವರಿಗೆ ಜಗಳ ಹತ್ತಿಕೊಂಡಿತ್ತು. ಎರಡೂ ಮನೆಯವರ ಹೆಂಗಸರು ಕೂದಲು ಹಿಡಿದುಕೊಂಡು ಜಗ್ಗಾಡುತ್ತಿದ್ದರೆ ಗಂಡಸರು ಅವಾಚ್ಯ ಬೈಗುಳ ಸುರಿಸುತ್ತ ಕೈಮಿಲಾಯಿಸಲು ತಯಾರಾಗುತ್ತಿದ್ದರು. ಅಲ್ಲೆ ಜಗಳ ನೋಡುತ್ತ ನೆರೆದಿದ್ದ ಗುಂಪಿನಲ್ಲಿ ಮೇರಿ ಡಿಸೋಜರಿಗೆ ನೀಮಾ ನೈನಾರ ಬಾಣಂತನ ಮಾಡಿದ್ದ ಗುಲಾಬಿಯೆಂಬ ಹಣ್ಣುಮುದುಕಿಯ ತಲೆ ಕಾಣಿಸಿತು. ಇವರನ್ನು ಕಂಡಕೂಡಲೆ ಆ ಮುದುಕಿಯೂ ಇವರನ್ನು ಹುರುಪಿನಿಂದ ಕರೆಯಿತು. ಗುಂಪಿನಲ್ಲಿ ಹೇಗೊ ಜಾಗಮಾಡಿಕೊಂಡು ಇಬ್ಬರೂ ಆಕೆಯ ಬಳಿ ಹೋದರು. ’ಗುಲಾಬಿ, ನಮ್ದು ಮಗು, ಸಣ್ಣದು, ಕಾಣತಾ ಇಲ್ಲ’ ಎಂದು ಮೇರಿ ನಿವೇದಿಸುತ್ತ ಇದ್ದರೆ ಗುಲಾಬಿ ಅದೆಲ್ಲ ಕೇಳಲೆ ಇಲ್ಲವೆಂಬ ಹಾಗೆ ಆಕೆಯ ಕೈಹಿಡಿದುಕೊಂಡು ಮನೆಯೊಳಗೆಳೆದುಕೊಂಡು ಹೋಯಿತು. ಒಳಗೆ ಅಡಿಗೆಮನೆಯ ಮೂಲೆಯಲ್ಲಿ ಅಕ್ಕಿ ಶೇಖರಿಸಲೆಂದು ಇದ್ದ ದೊಡ್ಡ ಮರದ ಸಂದೂಕವನ್ನು ತೋರಿಸಿತು. ಮೇರಿ ಡಿಸೋಜ ಆ ದಿನದಲ್ಲಿ ಎರಡನೆ ಬಾರಿ ಅವಾಕ್ಕಾಗಿ ನಿಂತುಕೊಂಡರು.

ನೈನಾ ಆ ಮರದ ಸಂದೂಕದ ಮೇಲೆ ಗುಲಾಬಿಯ ಹಳೆಸೀರೆಗಳಿಂದ ಹೊಲಿಯಲಾಗಿದ್ದ ರಜಾಯಿಯೊಂದರ ಮೇಲೆ ಮಲಗಿಕೊಂಡಿತ್ತು. ಗುಲಾಬಿಮುದುಕಿ ’ನಾನು ಪೇಟೆಯಿಂದ ಹಪ್ಪಳ ತಕೊಂಡು ಬರ್ತಾ ಇದ್ದೆ. ಇದು ನನ್ ಹಿಂದೇನೆ ಬಂದುಬಿಟ್ಟಿದೆ. ಕಟ್ಟೆಮೇಲೆ ಸುಮ್ನೆ ಕೂತಿತ್ತು. ನಾನು ನೋಡಿ ಒಳಗೆ ಕರ್ಕೊಂಡು ಹೋದೆ. ಕಡುಬು, ಬಂಗಡೆಮೀನುಸಾರು ತಿನ್ನಿಸಿದೆ. ಮಲಕ್ಕೊಂತು. ನೋಡು ಮೇರಿ, ಅದು ನನ್ನ ಮರ್ತೇ ಇಲ್ಲ…’ ಎನ್ನುತ್ತ ಇದ್ದರೆ ಡಿಸೋಜಾ ದಂಪತಿಗಳು ತಮ್ಮ ಮಗಳ ಹೊಸ ಸಾಹಸವನ್ನು ಜೀರ್ಣಿಸಲು ಪ್ರಯತ್ನಿಸುತ್ತ, ಸಂತಸಪಡಬೇಕೊ, ಹೆಮ್ಮೆ ಪಡಬೇಕೊ, ಹೆದರಿಕೊಳ್ಳಬೇಕೊ, ಅಚ್ಚರಿಪಡಬೇಕೊ ಅರಿವಾಗದೆ ಮಲಗಿರುವ ಆ ಪುಟ್ಟ ದೇಹವನ್ನೆ ಕಣ್ಣಿನಲ್ಲಿ ತುಂಬಿಕೊಳ್ಳತೊಡಗಿದರು…

ಚಿತ್ರಕೃಪೆ: http://www.emblibrary.com