ಪಡಖಾನೆಯ ಹುಡುಗಿ: ನಗು ಮತ್ತು ಸರಳ ಬದುಕು

PabloPicasso-Girl-with-Mandolin-Fanny-Tellier-1910

ಕೊರೆಯುತ್ತಿದೆ ನಿನ್ನುಸಿರು, ಸೀಳುತ್ತಿದೆ.

ಬಾರದ ನಿದ್ದೆಯ ಆವಾಹಿಸಿಕೊಳ್ಳೋಣ
ಎಂದು ತಪಸ್ಸು ಮಾಡಿದರು ಬಿಡವು
ನಿನ್ನ ಅದೃಶ್ಯ ಸುಳುಹುಗಳು.
ನಿನ್ನ ಕಣ್ಣುಗಳಲ್ಲಿ ಅರಳಿರುವುದು ಮುತ್ತುಗದ ಹೂವುಗಳೊ
ನನ್ನ ಮೇಲಿನ ದಿವ್ಯದ್ವೇಷವೊ?

***

ಮತ್ತೆ ಮರಳಿದ್ದೀ, ಎಂದಿನಂತೆಯೆ ವರುಷಗಳ ಬಳಿಕ
ಈಗ ನೆರಳುಗಳಿಲ್ಲ ನಿನ್ನ ಕಣ್ಣಡಿ.
ಅವು ಅಂದೇ ಇಂಗಿ, ನೀಗಿ ಹೋದವು
ಎಂದಿದ್ದೆ, ಈಗ ಹೊರಳಿಸದಿರು ಅವನ್ನು
ಕಾಣಲು ಬಿಡು, ದೀರ್ಘವಾಗಿ
ಈ ಬಾರಿ ಉಸುರದಿರು ನಿನ್ನ ಸುಳ್ಳುಗಳನು

***

ನೀನು ಈ ಗಾಜಿನ ಹೂಜಿಯಲಿ ತುಂಬಿರುವ
ಹೊನ್ನಬಣ್ಣದ ವಿಷವಿಪ್ಲವ.
ಗಂಟಲು ಸುಟ್ಟರೂ ಚಿಂತೆಯಿಲ್ಲ, ಗುಟುಕರಿಸಲೇಬೇಕು
ಅಮೇಲಿನ ಭ್ರಾಂತ ಸ್ಥಿತಿಯಲಿ ನೇವರಿಸಲೇಬೇಕು
ನೀನು ಕರುಣಿಸುವ ಅದ್ಭುತ ಕತ್ತಲೆಯನು
ದಹಿಸಲೇಬೇಕು, ಬೆಂದು ಕರಕಾಗುವತನಕ.

***

‘ಎಲ್ಲವೂ ಸರಳವಾಗಲು ಸಾಧ್ಯವಿಲ್ಲವೇಕೆ?’
ಎಂದು ಒರಲುವವನಿಗೇನು ಹೇಳಲಿ?
ಇದು ಅತ್ಯಂತ ಸರಳ. ಸರಳಕ್ಕಿಂತಲೂ.
ಅವರು ಬೆಲೆ ಕಟ್ಟುವರು ನನಗೆ. ನಾನು ನಗುವೆ.
ಅವರು ನುಂಗಿ ನೊಣೆಯುವರು. ನಾನು ನಗುವೆ.
ನೀನು ಮರೆಯುತ್ತ ಹೋಗುವ ಘಳಿಗೆಗಳಲ್ಲೂ ನಾನು ನಗುವೆ.

Pic courtesy: ‘Girl with Mandolin’ by Pablo Picasso

Advertisements

ಸಂಕೇತ್ ಅನುವಾದದಲ್ಲಿ ಎಲಿಯೆಟನ ಒಂದು ಕವಿತೆ.

 

ಜೆ. ಆಲ್‍ಫ್ರೆಡ್ ಪ್ರುಫ್ರಾಕನ ಪ್ರೇಮಗೀತೆ

“ಎಲಿಯಟ್‍ನ ಪದ್ಯಗಳನ್ನು ಜೋರಾಗಿ ಓದಬೇಕು. ದನಿ ತೆಗೆದು. ದನಿ ಏರಿಳಿಸಿ. ಅವು ದಕ್ಕುತ್ತವೋ ಇಲ್ಲವೋ ಎಂಬ ಯೋಚನೆಯಿಲ್ಲದೆ. “Do I dare?” and “Do I dare?” ಎಂದುಕೊಳ್ಳುತ್ತಲೆ ಈ ಅನುವಾದಕ್ಕಿಳಿದಿದ್ದೇನೆ.”- ಎಂದು ತನ್ನ ಅನುವಾದದ ಬಗ್ಗೆ ಬರೆದುಕೊಂಡಿದ್ದ ಗೆಳೆಯ ಸಂಕೇತ್ ಪಾಟೀಲ್. ಅವರ ಬ್ಲಾಗ್ ನನ್ನ ಅಚ್ಚುಮೆಚ್ಚಿನದು. ಇವತ್ತಿಗೂ ಅವರ ಹಾಗೆ ಬರೆಯುವವರು ಯಾರೂ ಕಾಣುತ್ತಲೆ ಇಲ್ಲವಲ್ಲ ಅನ್ನುವದು ನನ್ನ ಹಳಹಳಿಕೆ. ಬಹಳ ದಿನಗಳ ಬಳಿಕ ನನ್ನ ಮೆಚ್ಚಿನ ಕವಿತೆಗಳನ್ನ ಓದುತ್ತಿದ್ದಾಗ ಈ ಅನುವಾದದ ನೆನಪಾಯಿತು. ಲಿಂಕ್ ಕೊಡುವ ಮನಸ್ಸಿಲ್ಲವಾಗಿ ಸಂಕೇತರ ಮೂರು ಭಾಗಗಳ ಪೋಸ್ಟನ್ನು ಕಾಪಿ ಮಾಡಿ ಒಟ್ಟಿಗೇ ಇಲ್ಲಿ ಹಾಕಿದ್ದೇನೆ, ಅವರು ಕ್ಷಮಿಸುವರೆಂಬ ಭಂಡಧೈರ್ಯದಿಂದ!! ಸಂಕೇತ್ ಮತ್ತೆ ಬರೆಯುವ ಹಾಗಾದರೆ ಬ್ಲಾಗ್ ಲೋಕದ ಅದೃಷ್ಟ ಖುಲಾಯಿಸಬಹುದು!!

Ravilious talk

S’io credesse che mia risposta fosse
A persona che mai tornasse al mondo,
Questa fiamma staria senza piu scosse.
Ma perciocche giammai di questo fondo
Non torno vivo alcun, s’i’odo il vero,
Senza tema d’infamia ti rispondo.
1

ಜೀವಜಗತ್ತಿಗೆ ಮರಳುವ
ಯಾರಿಗಾದರೂ ನಾನು ಉತ್ತರವೀಯುತ್ತಿದ್ದಲ್ಲಿ
ಈ ಉರಿ ಹೀಗೆ ಮಿಣುಕದೆ ನಿಶ್ಚಲವಾಗಿರುತ್ತಿತ್ತು.
ಆದರೆ ನಾ ಕೇಳಿ ತಿಳಿದಂತೆ ಈ
ಗಹ್ವರದಿಂದ ಮರಳಿ ಹೋದವರಿಲ್ಲ.
ಅಪವಾದದ ಭಯವಿಲ್ಲದೆ
ಕೊಡುವೆ ನಿನಗುತ್ತರ

1ಡಾಂಟೆಯ ‘ಡಿವೈನ್ ಕಾಮಿಡಿ’ಯ ಇನ್ಫ಼ರ್ನೋದ ಸಾಲುಗಳಿವು. ಇದು ಗಿಡೊ ಡ ಮಾಂಟೆಫ಼ೆಲ್ಟ್ರೋ ನರಕದ ಎಂಟನೇ ವರ್ತುಲದೊಳಗಿಂದ ಹೇಳುವ ಮಾತು. ಗಿಡೊ ಡ ಮಾಂಟೆಫ಼ೆಲ್ಟ್ರೋ ಡಾಂಟೆಯ ಪ್ರಕಾರ ನರಕದ ಎಂಟನೇ ವರ್ತುಲಕ್ಕೆ ತಳ್ಳಲ್ಪಟ್ಟಿದ್ದಾನೆ. ಕಾರಣ: ದುರುದ್ದೇಶಪೂರಿತ ಸಲಹೆ. ಆದರೆ ಇಲ್ಲಿ ಮುಖ್ಯವಾದದ್ದೇನೆಂದರೆ, ಪ್ರುಫ಼್ರಾಕ್ ಮೊನೊಲಾಗ್‍ಗೆ ಸಂಬಂಧಿಸಿದಂತೆ ಈ ಸಾಲುಗಳ ವ್ಯಾಖ್ಯಾನ: ಗಿಡೊ ಅಂದುಕೊಂಡಿರುವುದೇನೆಂದರೆ ಡಾಂಟೆ ಕೂಡ ನರಕಕ್ಕೆ ತಳ್ಳಲ್ಪಟ್ಟಿದ್ದಾನೆ; ಹೀಗಾಗಿ ನಾನು ಯಾರಿಗೂ ಹೇಳಬಾರದೆಂದುಕೊಂಡಿದ್ದ ಸಂಗತಿಗಳನ್ನು ಇವನಿಗೆ ಹೇಳಬಹುದು; ಅವನು ಮರಳಿ ಹೋಗಿ ಭೂಮಿಯಲ್ಲಿ ತನ್ನ ಅಪಖ್ಯಾತಿ ಹಬ್ಬಿಸಲು ಸಾಧ್ಯವಿಲ್ಲ; ಇದೇ ರೀತಿ, ಪ್ರುಫ಼್ರಾಕ್‍ನಿಗೆ ಕೂಡ ತಾನು ಈ ಪದ್ಯದಲ್ಲಿ ಹೇಳುತ್ತಿರುವುದನ್ನು ಹೇಳುವ ಮನಸ್ಸಿರಲಿಲ್ಲ. ಇದು ಒಂದು interpretation.

 

ಹೋಗೋಣಲ್ಲ ಮತ್ತೆ, ನೀನೂ ನಾನೂ,
ಟೇಬಲ್ಲಿನ ಮೇಲೆ ಮಂಪರುಕವಿದ ಪೇಶಂಟಿನ ಹಾಗೆ ಇಳಿಸಂಜೆ
ಆಕಾಶದಗಲಕ್ಕೂ ಹರಡಿಕೊಂಡಿರುವಾಗ;
ಹೋಗೋಣಲ್ಲ, ಕೆಲ ಅರೆನಿರ್ಜನ ಓಣಿಗಳಲ್ಲಿ,
ರಾತ್ರಿಯೊಪ್ಪತ್ತಿನ ತಹತಹಿಕೆಗೆಟಕುವ ಸೋವಿ ಹೊಟೆಲುಗಳ
ಕನವರಿಕೆಯ ಮರೆಗಳಲ್ಲಿ
ಕಟ್ಟಿಗೆಹೊಟ್ಟು ಹರಡಿದ ಆಯ್‍ಸ್ಟರ್ ಕವಚಗಳ ರೆಸ್ಟೊರಾಂಟ್‍ಗಳಲ್ಲಿ.
ಕಪಟ ಉದ್ದಿಶ್ಶದ ವಾಗ್ವಾದ
-ದಿಂದ ಬಳಲಿಸುವಂಥ ಬೀದಿಗಳು
ಮೈಮೇಲೆರಗುವ ಪ್ರಶ್ನೆಯತ್ತ ಒಯ್ಯುವ ಬೀದಿಗಳು…
ಆಂಹಾ, ಕೇಳದಿರು, “ಅದೆಂಥದ್ದು?” ಎಂದು.
ಹೋಗೋಣ. ಭೇಟಿ ಕೊಡೋಣ.

ರೂಮಿನೊಳಗೆ ಹೆಂಗಸರು ಹೋಗಿಬಂದು ಮಾಡುತ್ತಾರೆ.
ಮೈಕೆಲೆಂಜೆಲೊನನ್ನು ಚರ್ಚಿಸುತ್ತಾರೆ.

ಕಿಟಕಿಗಾಜಿಗೆ ಬೆನ್ನುತಿಕ್ಕುವ ಹಳದಿಯ ಮಂಜು,
ಕಿಟಕಿಗಾಜಿಗೆ ಮುಸುಡಿಯುಜ್ಜುವ ಹಳದಿಯ ಹೊಗೆ
ಸಂಜೆಯ ಮೂಲೆಮೂಲೆಗೂ ನಾಲಗೆ ಚಾಚಿತು,
ಕೊಳಚೆಗಟ್ಟಿದ ಕೊಳಗಳ ಮೇಲೆ ಸುಳಿದಾಡಿತು,
ಚಿಮಣಿಗಳಿಂದುದುರುವ ಮಸಿಗೆ ಬೆನ್ನು ಕೊಟ್ಟಿತು,
ಜಗಲಿಯಿಂದ ಜಾರಿತು, ಒಮ್ಮೆಗೆಲೆ ಹಾರಿತು,
ಅಷ್ಟರಲ್ಲಿ, ಇದು ಅಕ್ಟೋಬರ್‌ನ ಮೆದುರಾತ್ರಿಯೆಂದು ಮನಗಂಡು,
ಮನೆಯ ಸುತ್ತ ಒಮ್ಮೆ ಸುತ್ತಿ ಉಂಗುರಾಗಿ ನಿದ್ದೆಹೋಯಿತು.

ಸಮಯವಂತೂ ಇದ್ದೇ ಇದೆ
ಕಿಟಕಿಗಾಜುಗಳ ಮೇಲೆ ಬೆನ್ನು ತಿಕ್ಕುತ್ತ
ಬೀದಿಯುದ್ದಕ್ಕೂ ತೆವಳುವ ಹಳದಿ ಹೊಗೆಗೆ;
ಸಮಯವಿದೆ, ಸಮಯವಿದೆ
ನಾವು ಕಾಣುವ ಮುಖಗಳ ಕಾಣುವ ಮತ್ತೊಂದು ಮುಖ ತಯಾರಿಸಲು;
ಸಮಯವಿದೆ ಹುಟ್ಟಿಸಲೂ ಸಾಯಿಸಲೂ,
ಪ್ರಶ್ನೆಯೊಂದನ್ನು ಎತ್ತಿ ನಿಮ್ಮ ತಟ್ಟೆಗೆ ಬಡಿಸುವ
ಕೈಗಳ ನಿತ್ಯಗಳಿಗೆ ಕೆಲಸಗಳಿಗೆ ಸಮಯವಿದೆ;
ನಿಮಗಾಗಿ ಸಮಯವಿದೆ ನನಗಾಗಿ ಸಮಯವಿದೆ
ಸಮಯವಿದೆ ನೂರಾರು ಮೀನಮೇಷಗಳಿಗೆ,
ನೂರಾರು ದರ್ಶನಗಳಿಗೆ ಸಂಸ್ಕರಣಗಳಿಗೆ
ಸಮಯವಿದೆ, ಟೋಸ್ಟು ಚಹಾ ತೊಗೊಳ್ಳುವ ಮುಂಚೆ.

ರೂಮಿನೊಳಗೆ ಹೆಂಗಸರು ಹೋಗಿಬಂದು ಮಾಡುತ್ತಾರೆ.
ಮೈಕೆಲೆಂಜೆಲೊನನ್ನು ಚರ್ಚಿಸುತ್ತಾರೆ.

ಸಮಯ ಇದ್ದೇ ಇದೆ
“ಧೈರ್ಯವಿದೆಯೇ ನನಗೆ? ಧೈರ್ಯವಿದೆಯೇ?” ಧೇನಿಸಲು
ಹಿಂದಿರುಗಿ, ಮೆಟ್ಟಲಿಳಿಯಲು, ಸಮಯವಿದೆ
ಮಧ್ಯದಲ್ಲಿ ಬೋಡಾಗುತ್ತಿರುವ ತಲೆಬಾಗಿಸಲು
(ಅವರೆನ್ನುವರು: “ಅವನ ಕೂದಲೆಷ್ಟು ಉದುರಿವೆ ನೋಡು!”)
ನನ್ನ ಮಾರ್ನಿಂಗ್ ಕೋಟು, ಗದ್ದಕ್ಕೊತ್ತಿದಂತಿರುವ ಕಾಲರು
ನೆಕ್‍ಟೈ ಸುಂದರ ಗಂಭೀರ, ಆದರೆ ಸಣ್ಣ ಪಿನ್ನಿನಿಂದ ಬಂಧಿತ
(ಅವರೆನ್ನುವರು: “ಅಯ್ಯೋ, ಅವನ ಕೈಕಾಲುಗಳೆಷ್ಟು ಬಡಕಲು!”)
ವಿಶ್ವವನು ಅಲುಗಿಸುವ
ಸಾಹಸ ಇದೆಯೇ?
ನಿಮಿಷದಲ್ಲೇ ಸಮಯವಿದೆ
ನಿರ್ಧರಿಸಲು ವಿಮರ್ಶಿಸಲು, ಮರುನಿಮಿಷದಿ ಕವುಚಿಹಾಕಲು.

ಯಾಕೆಂದರೆ ಇವರೆಲ್ಲ ನನಗೆ ಈಗಾಗಲೆ ಗೊತ್ತು, ಎಲ್ಲವೂ ಗೊತ್ತು:

ಸಂಜೆಗಳು, ನಸುಕುಗಳು, ಅಪರಾಹ್ಣಗಳು ಎಲ್ಲ ಗೊತ್ತು
ನನ್ನ ಬಾಳುವೆಯನ್ನು ಕಾಫೀ ಚಮ್ಮಚೆಗಳಿಂದ ಅಳೆದು ಸುರಿದಿದ್ದೇನೆ;
ದೂರದ ರೂಮಿನಿಂದ ಬರುತ್ತಿರುವ ಸಂಗೀತದಡಿಯಲ್ಲಿ
ನೆಲಕ್ಕಚ್ಚುತ್ತಿರುವ ದನಿಗಳ ಕೊನೆಯುಸಿರೂ ನನಗೆ ಗೊತ್ತು.
ಹೀಗಿರುವಾಗ ಹೇಗೆ ಮುಂದರಿಯಲಿ?

ಆ ಕಣ್ಣುಗಳೂ ನನಗೆ ಗೊತ್ತು, ಅವೆಲ್ಲವೂ –
ಎಲ್ಲರನ್ನೂ ಸೂತ್ರಬದ್ಧ ನುಡಿಗಟ್ಟಿನಿಂದ ಕಟ್ಟಿಹಾಕುವಂಥ ಕಣ್ಣುಗಳು,
ಹೀಗೆ ನಾನೊಂದು ಸೂತ್ರವಾದಾಗ, ಪಿನ್ನಿಗಂಟಿ ಅಸ್ತವ್ಯಸ್ತ ಬಿದ್ದಿರುವಾಗ,
ಪಿನ್ನೆರಗಿ ಗೋಡೆಗೊರಗಿ ಎತ್ತಕೆತ್ತರೆ ಹೊರಳಾಡುತ್ತಿರುವಾಗ,
ಹೇಗೆ ಶುರು ಮಾಡಲಿ, ಹೇಳಿ?
ನನ್ನ ನಿತ್ಯದ ರೀತಿಗಳ ಅರೆಬೆಂದ ದಂಡೆಗಳನ್ನು ಹೇಗೆ ಉಗಿಯಲಿ?
ಹೇಗೆ ಮುಂದರಿಯುವ ಸಾಹಸಪಡಲಿ?

ಮತ್ತೆ ನನಗೆ ಆ ಕೈಗಳೂ ಗೊತ್ತು, ಅವೆಲ್ಲವೂ –
ಕೈಗಳಲ್ಲಿರುವ ಬಳೆಗಳು, ಅಥವಾ ಬಿಳಿ ಖಾಲಿ ಕೈಗಳು
[ಆದರೆ ದೀಪದ ಬೆಳಕಿನಲ್ಲಿ ಕಂಡುಬಂದು ಕೈಕೊಡುವ ಕಂದು ಕೂದಲು!]
ಇದೇನು, ಯಾರದೋ ಬಟ್ಟೆಗಳ ಸುವಾಸನೆ
ಹೀಗೆ ನನ್ನ ದಿಕ್ಕು ತಪ್ಪಿಸುತ್ತಿದೆಯೋ?
ಟೇಬಲ್ಲಿನ ಮೇಲೆ ಒರಗಿರುವ ಕೈಗಳು, ಶಾಲು ಸುತ್ತಿಕೊಂಡಿರುವ ಕೈಗಳು.
ಮತ್ತೀಗ ಮುಂದೆ ಹೆಜ್ಜೆಯಿಡಲೆ?
ಆದರೆ.. ಎಲ್ಲಿ ಶುರು ಮಾಡಲಿ?

…….

ಮುಸ್ಸಂಜೆಗಳ ಸಂದಿಗಳಲ್ಲಿ ಹಾದುಹೋಗಿದ್ದೇನೆ,
ಕಿಟಕಿಗಳಲ್ಲಿ ಬಾಗಿ ನಿಂತ ಒಂಟಿ ಗಂಡಸರ
ಪೈಪುಗಳಿಂದೊಸರಿ ಮೇಲೆರುವ ಹೊಗೆ ನೋಡಿದ್ದೇನೆಂದು ಹೇಳಲೆ?

ನನಗೊಂದು ಜೋಡಿ ಪರಪರಕು ಉಗುರುಗಳಿರಬೇಕಿತ್ತು
ನಿ:ಶಬ್ದ ಸಮುದ್ರಗಳಡಿಯಲ್ಲಿ ಗರಗರ ತಿರುಗುತ್ತಿದ್ದೆ.

…….

ಮತ್ತೆ ಈ ಮಧ್ಯಾಹ್ನ, ಈ ಸಂಜೆ ಎಷ್ಟು ನಿರುಂಬಳ ಮಲಗಿದೆ!
ನೀಳವಾದ ಬೆರಳುಗಳಿಂದ ನೀವಿಸಿಕೊಂಡು,
ನಿದ್ರಿಸುತ್ತಿದೆ… ಸುಸ್ತಾಗಿದೆ.. ಅಥವಾ ಓತ್ಲಾ ಹೊಡೆಯುತ್ತಿದೆ,
ಫರಶಿಗಳ ಮೇಲೆ ಮೈಚಾಚಿ, ಇಲ್ಲಿಯೇ, ನಿನ್ನ ನನ್ನ ಪಕ್ಕದಲ್ಲೆ.
ಚಹಾ, ಕೇಕು, ಐಸ್‍ಕ್ರೀಮುಗಳ ನಂತರ, ಪ್ರಸಕ್ತ ಕ್ಷಣವನ್ನು
ತೀರಾ ಸಂದಿಗ್ಧಕ್ಕೆ ತಳ್ಳುವ ಚೇತನ ನನ್ನಲ್ಲಿರಲೇಬೇಕೆ?
ನಾನು ಅತ್ತುಕರೆದು ಹೊಟ್ಟೆಗಟ್ಟಿ, ಗೋಳಾಡಿ ಪ್ರಾರ್ಥಿಸಿದ್ದರೂ
ನನ್ನ [ಸ್ವಲ್ಪ ಬಕ್ಕ] ತಲೆಯನ್ನು ತಾಟಿನಲ್ಲಿ ಹೊತ್ತು ತಂದದ್ದನ್ನು ನೋಡಿದ್ದರೂ
ಹೇಳುವುದೇನೆಂದರೆ, ನಾನೇನು ಪ್ರವಾದಿಯಲ್ಲ — ಮತ್ತಿದು ದೊಡ್ಡ ಸಂಗತಿಯೂ ಅಲ್ಲ;
ನೋಡಿದ್ದೇನೆ ನನ್ನ ಶ್ರೇಷ್ಠತೆಯ ಕ್ಷಣಗಳು ಮಿಣುಗುಟ್ಟಿದ್ದನ್ನೂ,
ನೋಡಿದ್ದೇನೆ ಕೆಲಸದ ಹುಡುಗ ಸಂತತ ನನ್ನ ಕೋಟನ್ನು ಇಸಿದುಕೊಳ್ಳುವುದನ್ನು, ಮುಸಿನಗುವುದನ್ನೂ,
ಸಂಕ್ಷೇಪಿಸಿ ಹೇಳಬೇಕೆಂದರೆ – ನಾನು ಬೆಚ್ಚಿಬಿದ್ದಿದ್ದೆ.

ಇಷ್ಟಕ್ಕೂ, ಹಾಗೆ ಮಾಡುವುದು ಯೋಗ್ಯವೆನ್ನಿಸಿಕೊಳ್ಳುತ್ತಿತ್ತೆ,

ಆ ಕಪ್ಪುಗಳು, ಮೊರಬ್ಬ, ಚಹಾಗಳ ನಂತರ,
ಪಿಂಗಾಣಿ ಕಪ್ಪು-ಬಸಿಗಳಲ್ಲಿ, ನಿನ್ನ ನನ್ನ ಬಗೆಗಿನ ಮಾತುಗಳಲ್ಲಿ,
ವಿಷಯದ ಕೊಂಡಿಯನ್ನು ಒಂದು ಮುಗುಳ್ನಗೆಯಿಂದ ಕಡಿದುಹಾಕುವುದು,
ಮೌಲಿಕವಾದುದಾಗುತ್ತಿತ್ತೇ,
ಇಡೀ ಬ್ರಹ್ಮಾಂಡವ ಹಿಂಡಿ ಚೆಂಡು ಮಾಡುವುದು,
ಮೈಮೇಲೆರಗುವ ಪ್ರಶ್ನೆಯತ್ತ ಉರುಳಿಸುವುದು,
“ನಾನು ಲೆಜ಼ಾರಸ್, ಸತ್ತವನೆದ್ದು ಬಂದಿದ್ದೇನೆ,
ಎಲ್ಲ ಹೇಳಲು ಮರಳಿ ಬಂದಿದ್ದೇನೆ, ನಿಮಗೆಲ್ಲ ಹೇಳಲು,” ಎಂದು ಬಿಡುವುದು,
ಅವಳ ತಲೆಗೆ ಇಂಬಿರಿಸಿ, “ನಾನು ಹೇಳಿದರರ್ಥ
ಅದಲ್ಲ, ಅದಲ್ಲವೇ ಅಲ್ಲ,” ಎಂದು ಹೇಳಬೇಕಾಗಿದ್ದಲ್ಲಿ,
ಇದೆಲ್ಲ ಬೇಕಾಗಿತ್ತೆ?

ಇಷ್ಟಕ್ಕೂ, ಹಾಗೆ ಮಾಡುವುದು ಯೋಗ್ಯವೆನ್ನಿಸಿಕೊಳ್ಳುತ್ತಿತ್ತೆ,
ಅರ್ಥಪೂರ್ಣವಾದುದಾಗುತ್ತಿತ್ತೇ?
ಸೂರ್ಯಾಸ್ತಗಳು, ಹಿತ್ತಿಲುಗಳು, ನೀರು ಚಿಮುಕಿಸಿದ್ದ ಬೀದಿಗಳು,
ಕಾದಂಬರಿಗಳು, ಚಹಾಕಪ್ಪುಗಳು, ಫರಶಿಯುದ್ದಕ್ಕೂ ತೆವಳುವ
ಸ್ಕರ್ಟುಗಳು –
ಇವು, ಹಾಗೂ ಮತ್ತಿನ್ನೆಷ್ಟೋ ಸಂಗತಿಗಳ ನಂತರ?
ನನಗನ್ನಿಸ್ಸಿದ್ದನ್ನು ಯಥಾರ್ಥ ಹೇಳುವುದು ಸಾಧ್ಯವೇ ಇಲ್ಲ!
ಆದರೆ ಒಂದು ಮಾಯಾವಿ ಲಾಟೀನು ಪರದೆಯ ಮೇಲೆ ನರನಾಡಿಗಳ ಚಿತ್ತಾರ ಎರಚಿದಂತೆ:
ತಲೆದಿಂಬನ್ನಿರಿಸಿ, ಅಥವಾ ಶಾಲನ್ನು ಕಿತ್ತೆಸೆದು,
ಕಿಟಕಿಯತ್ತ ಮುಖ ತಿರುಗಿಸಿ, “ಅಲ್ಲ, ನಾನು ಹೇಳಿದ್ದರ ಅರ್ಥ
ಅದಲ್ಲ. ಅದಲ್ಲವೇ ಅಲ್ಲ,” ಎಂದು ಹೇಳಿದ್ದರೆ,
ಆವಾಗ ಅದು ಸರಿಹೋಗುತ್ತಿತ್ತೇ?

………..

ಅಲ್ಲ! ನಾನು ಪ್ರಿನ್ಸ್ ಹ್ಯಾಮ್ಲೆಟ್ ಅಲ್ಲ, ಅದು ನನ್ನ ಸ್ವಭಾವವೇ ಅಲ್ಲ;
ನಾನೊಬ್ಬ ಸೇವಕ, ದೇವದೂತ, ಹೇಳಿದಷ್ಟು ಮಾಡುವವ,
ಪೋಷಿಸಿ ಮುಂದುವರಿಸುವುದು, ಒಂದೆರಡು ದೃಶ್ಯಗಳ ಮೊದಲು ಬರುವುದು,
ರಾಜಕುವರನಿಗೆ ಸಲಹೆ ಕೊಡುವುದು; ಸುಲಭ ಸಲಕರಣೆ, ಸಂಶಯವಿಲ್ಲ,
ಗೌರವ ಸೂಚಿಸುತ್ತ, ಕೃತಕೃತ್ಯೆಯಿಂದ ಉಪಯೋಗಕ್ಕೆ ಬರುವವ,
ಮುತ್ಸದ್ದಿ, ಜಾಗರೂಕ, ಎಲ್ಲವೂ ಕೂಲಂಕುಷ,
ಭಾಷ್ಕಳಪಂತ, ಆದರೆ ತುಸು ಸ್ಥೂಲ, ನಿಧಾನಿ
ಕೆಲವೊಮ್ಮೆ ನಿಜಕ್ಕೂ ಹಾಸ್ಯಾಸ್ಪದ
ಮತೊಮ್ಮೊಮ್ಮೆಯಂತೂ ಪೂರಾ ವಿದೂಷಕ.

ನನಗೆ ವಯಸ್ಸಾಗುತ್ತದೆ… ಮುದುಕನಾಗುತ್ತೇನೆ…
ಕೆಳಗೆ ಮಡಿಕೆ ಹಾಕಿ ಪ್ಯಾಂಟು ತೊಡುತ್ತೇನೆ.

ಕೂದಲು ಹಿಂದಕ್ಕೆ ಬಾಚಲೆ? ಪೀಚ್ ತಿನ್ನುವ ಸಾಹಸ ಮಾಡಲೆ?
ನಾನು ಬಿಳಿಯ ಫ್ಲ್ಯಾನೆಲ್ ಟ್ರೌಸರ್ಸ್ ತೊಟ್ಟು, ಬೀಚ್ ಮೇಲೆ ಓಡಾಡುವೆ.
ನಾನು ಮತ್ಸ್ಯಕನ್ನಿಕೆಯರ ಹಾಡು ಪ್ರತಿಹಾಡುಗಳನ್ನು ಕೇಳಿರುವೆ.

ನನ್ನ ಸಲುವಾಗಿ ಅವರು ಹಾಡುವರೆಂದು ನನಗನ್ನಿಸುವುದಿಲ್ಲ.

ಅವರನ್ನು ನೋಡಿದ್ದೇನೆ ಅಲೆಗಳ ಸವಾರಿ ಮಾಡುತ್ತ ಸಮುದ್ರದತ್ತ ಹೋಗುವಾಗ
ಗಾಳಿ ಬೀಸಿ ನೀರನ್ನು ಕಪ್ಪುಬಿಳುಪಾಗಿ ಹರಡುವಾಗ
ಅಲೆಗಳ ಬೆಳ್ಳನೆಯ ಕೂದಲನ್ನು ಹಿಂದೆ ಹಿಂದೆ ಹಿಕ್ಕುವಾಗ.

ತಿರುಗಿದ್ದೇವೆ ನಾವು ಸಮುದ್ರದ ಅನೇಕ ಕಕ್ಷೆಗಳಲ್ಲಿ
ಕೆಂಪು ಕಂದು ಜೊಂಡಿನ ಮಾಲೆ ಧರಿಸಿರುವ ಸಾಗರಕನ್ನಿಕೆಯರ ಸುತ್ತಲೂ
ಮನುಷ್ಯ ದನಿಗಳು ನಮ್ಮನ್ನೆಬ್ಬಿಸುವ ತನಕ, ಮುಳುಗಿಸುವ ತನಕ.

 

ಚಿತ್ರಕೃಪೆ:  ‘Afternoon Tea’, 1939, Wood engraving by James Ravilious

ಪಡಖಾನೆಯ ಹುಡುಗಿ – ಇರುಳ ನಂತರದ ಸಮಯ

ಇರುಳು ಸಂದಿತು, ಇನ್ನೇನು

ನಸುಕು ಕಳ್ಳಿಯ ರೀತಿ ಉಸಿರು ಬಿಗಿಹಿಡಿದು

ಒಳಬರುವಳು

ನನ್ನ ಕಾಲ ಬಳಿ ರಾತ್ರಿ ಉಂಡೆಸೆದ

ರೊಟ್ಟಿ ಮಾಂಸಗಳ ತುಣುಕುಗಳನ್ನಾಯುವ ಹುಡುಗ

ಕೆಟ್ಟ ಬೈಗುಳದ ಕೊಳಕು ಹಾಡು ಹಾಡುತ್ತ ಸಿಕ್ಕ

ಎಲ್ಲವನೂ ಕಣ್ಣಿಂದಲೇ ಕೊರೆಯುತ್ತ ಸಾಗುವನು

ಪರದೆಗಳ ಮೇಲಿನ ಕಲೆಗಳು

ಗೋಡೆಯ ಹಳೆ ಬಣ್ಣ

ಗಾಜಿನ ಮೇಲೆ ಕೂತ ಎಣ್ಣೆಪಸೆ

ನಿಚ್ಚಳವಾಗತೊಡಗುವವು

ಮೇಜವಾನಿಯ ಕುರ್ಚಿಗಳೂ ಯಾಕೊ

ಸೋತುಹೋದ ಮುದುಕರ ನೆನಪಿಸುವವು

ನೆನ್ನೆ ತನ್ನ ಪ್ರೇಯಸಿಯ ಧಿಕ್ಕರಿಸುವ

ಹಾಡುಗಳನುದುರಿಸುತಿದ್ದ ಕವಿಪುಂಗವನೀಗ

ತನ್ನ ಪದಗಳ ಭಾರಕ್ಕೆ ಸಿಲುಕಿ

ಮೂಗನಂತೆ ಮೈಚೆಲ್ಲಿರುವನು

ಅವನ ಮಗಳು ಬರಬಹುದು, ಹೊತ್ತೇರಿದ ಮೇಲೆ

ಹಿಂಜರಿಯುತ್ತ.. ಎಲ್ಲವನೂ ಶಪಿಸುತ್ತ..

ಮಬ್ಬಿನಲಿ ನೆನೆದ ಪಡಖಾನೆಯ

ಫಲಕವೂ ಬೀದಿಯ ಜನರಿಗೆ ಜೀರ್ಣವಾಗದು

ಇರುಳಿನ ಥಳುಕೂ ಮರೆತುಹೋಗುವುದು

ಮಿಲನದ ನಂತರ ಬರುವ ನಿದ್ದೆಯ ಹಾಗೆ.

ನಾನೊ, ಚಿಲಮಿನ ಹೊಗೆಯಂತೆ

ದಕ್ಕಿದ ಕಿಂಡಿಯಲಿ ಪಾರಾಗಿ

ಯಾವಳೊ ಛಿನಾಲಿಯ ಕತ್ತಿಗೆ

ಇಂಬಳದ ಹಾಗೆ

ನೇತುಹಾಕಿಕೊಂಡಿರಬಹುದಾದ

ಪಾಪಿಯನೆ ತಣ್ಣಗಿನ ರೋಷದೊಂದಿಗೆ ಕಾಯುವೆನು.

ಚಿತ್ರಕೃಪೆ: http://www.robertkruh.com

ರಮೇಶ ಅರೋಲಿಯವರ ಒಂದು ಕವಿತೆ

ರಮೇಶ ಅರೋಲಿಯವರ ಈ ಕವಿತೆಯನ್ನು ಗೆಳೆಯ ಚಂದ್ರಶೇಖರ ಐಜೂರ್ ಕಳುಹಿಸಿದರು. ಇದು ಅವರ ಬ್ಲಾಗಿನಲ್ಲಿಯೂ ಕೂಡ ಪ್ರಕಟವಾಗಿದೆ.

ನಿಮ್ಮೊಂದಿಗೆ ಹಂಚಿಕೊಳ್ಳದೆ ಇರಲು ಸಾಧ್ಯವೇ ಇಲ್ಲ ಅನ್ನಿಸಿದಷ್ಟು ಇದು ನನ್ನನ್ನು ತಟ್ಟಿದ್ದರಿಂದ ಇಲ್ಲಿಯೂ ಅದನ್ನು ಹಂಚಿಕೊಳ್ಳುತ್ತಿದ್ದೇನೆ.

ದುಃಖ ದಾಖಲಿಸುವವನೆ ಇದನ್ನು ಬರೆದಿಟ್ಟುಕೊ !

ಕಟಕಟೆಯ ಕಿತಾಬಿನ ಹಾಳೆ ನಿನ್ನವು
ಹಿಡಿದ ಲೇಖನಿಯ ಶಾಯಿಗೂ ನಿನ್ನ ರಕ್ತದ ಗುಣ
ಇನ್ನು ತೀರ್ಪು ನಿನ್ನಿಚ್ಚೆಯಂತೆ ಬರೆದುಕೊಂಡಲ್ಲಿ
ಪ್ರತಿ ಸಲ ನಾನೇಕೆ ಆಶ್ಚರ್ಯಪಡಲಿ
ತಮಾಷೆಯೆಂದರೆ ಇಷ್ಟು ಹೇಳಲೂ ನಿನಗೆ
ಭದ್ರತೆ ಬೇಕು; ನನಗೋ ತುಕ್ಕು ತಕ್ಕಡಿಯ ಕೆಳಗೆ
ಪುಕ್ಕಲು ಆಯಸ್ಕಾಂತದ ನೆನಪು!
ಅದಕ್ಕೆ ಸದಾ ಹಾಲುಗಲ್ಲದ ಮೇಲೆ ನಳಿಕೆಯಿಡುವ
ನಿನ್ನ ಆದೇಶಗಳು ಎಂದೋ ಖಚಿತಪಡಿಸಿವೆ
ನನ್ನ ನಗುವಿನೆಡೆಗಿನ ನಿನ್ನ ಅವಿರತ ಗುರಿ
ದುಃಖವನು ಬರಿ ಇಮ್ಮಡಿಗೊಳಿಸುವುದೆಂದು!
ನೀನು ಕಿರುಚುವಷ್ಟು ಸಾರಿಯೂ ಮುಂದುವರೆಸುತ್ತೇನೆ
ಕಪ್ಪು ಹಲಗೆಯ ಮೇಲೆ ಆಕಾಶ ಬರೆದಿದ್ದು ನಾನೇ ; ಮತ್ತು
ನನಗೆ ಗೊತ್ತಿರುವುದು ಬರಿ ನಿಜವೆಂಬುದನು!
ಮೈದಾನಗಳು ಧಿಕ್ಕರಿಸಿದವನ ಪಾಪದ ಹೆಸರು
ಕಡಲ ಅಲೆಗಳ ಮಾತು ಬಿಡು ಮೊದಲಿನಂತೆ
ಮರೆವಿನ ಖಯಾಲಿ ಅವಕ್ಕೆ; ಆದರೆ ಈ ಸಲ
ಜಗದ ಎಂಥ ಕಲ್ಲಿನ ಮೇಲಾದರೂ ಕೆತ್ತಿಸು
ಸಿಕ್ಕ ತುಫಾಕಿಯ ಮೇಲಿನ ಬೆರಳ ನಿಶಾನೆ
ಕೇವಲ ಮೂರುವರ್ಷದ ನನ್ನದೇ ಎಂದು!
____________________________________________________
ಇತ್ತೀಚಿಗೆ ಜಿಂಬಾಬ್ವೆ ರಕ್ಷಣಾ ಪಡೆಯಿಂದ ಅಕ್ರಮವಾಗಿ ಬಂಧಿಸಲ್ಪಟ್ಟ “ಮೆಂಬರ್ಸ್ ಫಾರ್ ಡೆಮೊಕ್ರಟಿಕ್ ಚೇಂಜ್” ಮಾನವ ಹಕ್ಕುಗಳ ಸಂಘಟನೆಯ ದಂಪತಿಗಳ ಮೂರು ವರ್ಷದ ಮಗು ನಿಜೆಲ್ ಮೂಟೆ ಮಗೌ ನನ್ನು ಅಲ್ಲಿಯ ನ್ಯಾಯಾಲಯ ಅಪರಾಧಿಯೆಂದು ಗಣಿಸಿ ಮೂರು ತಿಂಗಳು ಜೈಲು ವಾಸ ನೀಡಿತ್ತು. ಮತ್ತು ಇದೀಗ “ಪ್ರಪಂಚದ ಅತಿ ಕಿರಿಯ ಉಗ್ರಗಾಮಿ “ಎಂಬ ಹಣೆ ಪಟ್ಟಿ ಹಚ್ಚಿತ್ತು. ಆದರೆ ಶಿಕ್ಷಾವಧಿ ಮುಗಿಸಿ ಮನೆ ಸೇರಿದ್ದರೂ ಮಾನಸಿಕವಾಗಿ ಜರ್ಜರಿತವಾದ ಮಗು ಸಹಜ ಸ್ಥಿತಿಗೆ ಬಂದಿಲ್ಲ. ನಗುವುದಿಲ್ಲ, ಅಪರಿಚಿತರು ಬಂದರೆ ಧಾವಿಸಿ ಅಮ್ಮನ ಹಿಂದೆ ಅಡಗಿಕೊಳ್ಳುವುದಾಗಿ ವರದಿಯಾಗಿದೆ.

ಚಿತ್ರಕೃಪೆ: http://www.fineartamerica.com

ಬೆಳಕು ಮುಗಿವ ಮುನ್ನ…

’ಚಿತ್ರಕವನ’ ಬ್ಲಾಗಿಗಾಗಿ ಹಿಂದೊಮ್ಮೆ ಬರೆದಿದ್ದ ಕವಿತೆ .. ಕೆಲವು ಸುಧಾರಣೆಗಳೊಂದಿಗೆ.

2707365339_2597b91611[1]

ಇಲ್ಲಿ ನಾನು ಪುಸ್ತಕ ದೀಪ
ಸೇರಿ ಒಂದಾಗಿ
ಕತ್ತಲೆಯ ಅನುಭೂತಿ
ಇನ್ನೇನು ಮುಗಿದೇಹೋಯಿತು ಎಣ್ಣೆ
ಅಕ್ಷರ ನುಂಗುವ
ಕಣ್ಣ ನೋಟ
ಕಾಣದ್ದ ಕಂಡುಕೊಂಡೇನೆ ನಾನು
ಎಂದಾದರು?
ಮುಗಿದು ಹೋಗಬಹುದು
ಪುಟ್ಟ ಹುಳಗಳ ಭರಾಟೆ                                                                                                                        ನನಗೆ ಆಸೆ
ಅಮ್ಮ ಎದ್ದು
ನಿದ್ದೆಯಲೆ ಮುದ್ದಾಗಿ
‘ಎಣ್ಣೆ ತುಂಬಿಸಲೆ ಮಗು?
ಮಂದವಾಗಿದೆ ಬೆಳಕು
ಕಣ್ಣಿಗೆ ಪೆಟ್ಟು
ಕಾಫಿ ಬೇಕೆ?’
ಅಂದಂತೆ
ಅನ್ನಿಸಿ
ಸುತ್ತ ನೋಡುವೆ
ಬೆನ್ನಹುರಿಯಲ್ಲೇಳುವ
ನೋವ ಅದುಮಿ
ಆಕಳಿಸಿ
ಇದೆಲ್ಲವ ಒಳಗಿಳಿಸಬೇಕು
ಜೋಪಾನವಾಗಿ
ದೀಪದಲಿ
ಬೆಳಕು ಮುಗಿವ ಮುನ್ನ.
 

 ಚಿತ್ರಕೃಪೆ: www.flickr.com ನಿಂದ

ಆಕ್ಟೇವಿಯೊ ಪಾಜ್ : ಕೊನೆಯ ಮುಂಜಾವ

(ಕವಿತೆ ಒಬ್ಬೊಬ್ಬರಿಗೆ ಒಂದು ತರಹ ಕಾಣುತ್ತದೆ. ಈ ಕವಿತೆಯನ್ನ ಪೋಸ್ಟು ಮಾಡುತ್ತ ಇರುವ ಹಾಗೆಯೆ ನನಗೆ ಹೊಳೆದದ್ದು ಇದು. ಬರೆ ಚೆನ್ನಾಗಿದೆ ಅಂದುಕೊಳ್ಳುವ ಬದಲು ನೀವು ಕವಿತೆ ಓದಿ ನಿಮಗೆ ಉಂಟಾದ ಅರಿವೊ ಭಾವನೆಯೊ, ಏನೋ ಒಂದು – ಅದನ್ನೆಲ್ಲ ನನಗೇಕೆ ವಿಶ್ಲೇಷಣೆಯ ರೂಪದಲ್ಲಿ ಏಕೆ ತಿಳಿಸಬಾರದು? ವಿಮರ್ಶೆ ಕಬ್ಬಿಣದ ಕಡಲೇಕಾಯೇನಲ್ಲ ಅಂತ ಬಲವಾಗಿ ನಂಬುವವಳು ನಾನು. ಒಂದು ವಾರ ಕಾಯುತ್ತೇನೆ. ಆಮೇಲೆ ನೀವು ಕಳಿಸಿರುತ್ತೀರಲ್ಲ, ಅವನ್ನೆಲ್ಲ ಕೂಡಿಸಿ ಮುಂದಿನ ವಾರ ಇಲ್ಲಿಯೆ ಹಾಕುವಾ. ಏನೂ ಸಂಕೋಚ ಬೇಡ. ನಿಮಗನಿಸಿದ್ದನ್ನ ನೇರವಾಗಿ ಎಲ್ಲರಿಗು ಅರ್ಥವಾಗುವ ಹಾಗೆ ಬರೆದರೆ ಸಾಕು. ಕವಿತೆ ಓದಿ. ಆರಾಮವಾಗಿ ನನ್ನ ಕಮೆಂಟ್ ಬಾಕ್ಸಿನಲ್ಲಿ ಬರೆಯಿರಿ. ಕೊನೆಗೆ ನಿಮಗೇ ಆಶ್ಚರ್ಯವಾದೀತು!)

restingwoman-copy1

ಕಗ್ಗಾಡಿನಲೆಲ್ಲೊ ಕಳೆದುಹೋಗಿರುವ ನಿನ್ನ ಕೂದಲು
ನನ್ನ ಕಾಲುಗಳ ಸ್ಪರ್ಶಿಸುವ ನಿನ್ನ ಕಾಲುಗಳು
ನಿದ್ದೆಯೊಳಗೆ ನೀನು ರಾತ್ರಿಯ ಮೀರಿ ಬೆಳೆದಿರುವೆ
ಆದರು ನಿನ್ನ ಕನಸು ಕೋಣೆಯ ಮೇರೆ ದಾಟದು
ಎಷ್ಟು ಸಣ್ಣಗಿದ್ದವರು ನಾವು, ಹೇಗಾಗಿ ಹೋದೆವು?
ಹೊರಗಡೆ ಟ್ಯಾಕ್ಸಿಯೊಂದು
ಭೂತಗಳ ಹೊರೆ ಹೊತ್ತು ಸಾಗುತ್ತದೆ
ಪಕ್ಕದಲ್ಲೆ ಹರಿವ ನದಿ
ತಿರುವುಮುರುವಾಗಿಯೆ ಪ್ರವಹಿಸುತ್ತದೆ
ನಾಳೆಯೆಂಬುದು ಬರೆ ಇನ್ನೊಂದು ದಿನವಾಗುವುದೆ?

(ಕವಿ: ಆಕ್ಟೇವಿಯೊ ಪಾಜ್, ‘ಸಲಮ್ಯಾಂದ್ರಾ’)
 ಚಿತ್ರಕೃಪೆ: www.graphicsoft.about.com ಕಲೆ: Merike

ವಾರಿಸ್ ಶಾಹನಿಗೆ ಹೀಗೆ ಹೇಳುವೆ ನಾನು

ಕವಯಿತ್ರಿ ಅಮೃತಾ ಪ್ರೀತಮರ ಪ್ರಸಿದ್ಧ ಕವಿತೆ ‘ಆಜ್ ಆಖನ್ ವಾರಿಸ್ ಶಾಹ ನೂಂ’ ನ ಕನ್ನಡ ಅನುವಾದವಿದು. ಪಂಜಾಬದ ಒಂದು ಕಾಲದ ಅತಂತ್ರ, ಸಾವುನೋವುಗಳ ಬಗ್ಗೆ ಆಕೆ ಬರೆದ ಕವಿತೆಯಿದು. ಈಗ ಇದನ್ನು ನೋಡಿದರೆ ಇಲ್ಲಿರುವ ಪಂಜಾಬ್ ಬದಲು ಭಾರತ ಎಂದು ಹಾಕಿದರೂ ವ್ಯತ್ಯಾಸವೆ ಕಾಣದು. ಕಳೆದ ಮೂರು ದಿನಗಳ ಕದನದಲ್ಲಿ ಮಡಿದ ಜೀವಗಳಿಗೆ ಈ ಕವಿತೆಯ ಮೂಲಕ ನನ್ನ ಶ್ರದ್ಧಾಂಜಲಿ. ಅನುವಾದ: ಎನ್ ಎಸ್ ತಸ್ನೀಮ್ (I Say Unto Waris Shah)

indian_woman_praying021

ವಾರಿಸ್ ಶಾಹನಿಗೆ ಹೀಗೆ ಹೇಳುವೆ ನಾನು

ಇಂದು ಬೇಡುವೆ ವಾರಿಸ್ ಶಾಹನಿಗೆ ಸಮಾಧಿಯಿಂದೆದ್ದು ಮಾತನಾಡಲು
ಕೇಳುವೆ ಪ್ರೀತಿಯ ಪುಸ್ತಕದಿಂದ ಪುಟವೊಂದ ತಿರುವಲು
ಪ್ರಸಿದ್ಧ ಪಂಜಾಬದ ಮಗಳೊಬ್ಬಳು ಅತ್ತಾಗ ಅಕೆಯ ಮೂಕರೋದನಕ್ಕೆ ನುಡಿಕೊಟ್ಟವನೆ
ಇಂದು ಲಕ್ಷಾನುಲಕ್ಷ ಹೆಂಗೆಳೆಯರು ಕಂಬನಿಗರೆವರು. ಅವರ ಶೋಕಕೆ ದನಿ ನೀಡಲು
ಎಲ್ಲಿರುವನು ವಾರಿಸ್ ಶಾಹ? ಎದ್ದೇಳು, ಓ ವ್ಯಥಿತರ ಸ್ನೇಹಿತನೆ!!
ನಿನ್ನ ಪಂಜಾಬದ ದುಸ್ಥಿತಿ ನೋಡು. ಹುಲ್ಲುಗಾವಲುಗಳಲಿ ಹೆಣಗಳು ಚದುರಿವೆ
ಕೆಂಪಗೆ ಹರಿದಿದೆ ಚೀನಾಬ ನದಿ.
ಯಾರೋ ಸುರಿದಿರುವರು ವಿಷ ಪಂಚನದಿಗಳಿಗೆ
ಈಗ ನೀರು ನಡೆಸುತಿದೆ ಮಣ್ಣಲಿ ವಿಷದ ನೀರಾವರಿ.
ಫಲವತ್ತಾಗಿದ್ದ ಭೂಮಿಯಲಿ ಎಲ್ಲೆಡೆ ಹುಟ್ಟಿಕೊಂಡಿವೆ ಅಗಣಿತ ವಿಷಸಸ್ಯಗಳು
ಕೆಂಪಗಾಗಿದೆ ದಿಗಂತ, ಮುಗಿಲು ಮುಟ್ಟಿದೆ ಶಾಪ.
ಕಾಡುಗಳ ಮೇಲೆ ಹಾದುಬರುವ ವಿಷಗಾಳಿ
ಕಾರ್ಕೋಟಕಗಳಾಗಿ ಮಾರ್ಪಡಿಸಿದೆ ಬಿದಿರ ಎಳೆಚಿಗುರುಗಳನು.
ಮುಗ್ಧ ಜನರ ವಶೀಕರಣ ಮಾಡಿ ಅವರ ಪದೇ ಪದೇ ಕಚ್ಚುವವು ಸರ್ಪಗಳು
ಕೆಲವೇ ಸಮಯದಲಿ ನೀಲಿಯಾಗಿವೆ ಪಂಜಾಬದ ಅವಯವಗಳು.
ಬೀದಿಯ ಹಾಡುಗಳು ನಿಂತುಹೋದವು, ಮುರಿದವು ತಿರುಗುತಿದ್ದ ತಕಲಿಗಳ ಚಕ್ರ
ಹುಡುಗಿಯರು ಅರಚಾಡುತ್ತ ಬಿಟ್ಟೋಡಿದರು ಅಂಗಳವನು, ಮೊಳಗುತ್ತಿದ್ದ ತಕಲಿಯ
ಶಬ್ದ ನಿಂತುಹೋಯಿತು, ಮಾಯವಾದವು ಇದ್ದಕಿದ್ದಂತೆ
ಮಧುಮಂಚಗಳಿದ್ದ ದೋಣಿಗಳು. ಮುರಿದಿದೆ ಸಶಕ್ತ ರೆಂಬೆಯೊಂದು,
ರೆಕ್ಕೆಯ ಜತೆಗೇ. ಪ್ರೇಮದ ಉಸಿರನೂದುತಿದ್ದ ಕೊಳಲು
ಅಚ್ಚರಿಗೊಂಡು ಸುಮ್ಮನಾಗಿರುವುದು.
ರಾಂಝಾನ ಸೋದರರು ಅದ ನುಡಿಸುವ
ಕಲೆಯನೆ ಮರೆತಿರುವರು. ಭೂಮಿಯ ಮೇಲೆ ಸುರಿವ ನೆತ್ತರ ಮಳೆ
ಗೋರಿಗಳಿಗೆ ಸ್ರವಿಸಿರುವುದು. ಪ್ರೇಮಕಣಿವೆಯ ರಾಜಕುವರಿಯರು
ಮಸಣಗಳಲಿ ಬಿಕ್ಕುತಲಿರುವರು. ದುರಾತ್ಮರು ಪ್ರೀತಿ, ಸೌಂದರ್ಯಗಳ
ಲೂಟಿಖೋರರಾಗಿ ಅಡ್ಡಾಡುತಿರುವರು
ಎಲ್ಲಿ ಹುಡುಕಲಿ ಇನ್ನೋರ್ವ ವಾರಿಸ್ ಶಾಹನನು?
ಇಂದು ಬೇಡಿಕೊಳುವೆ ವಾರಿಸ್ ಶಾಹನಿಗೆ
ಸಮಾಧಿಯಿಂದೆದ್ದು ಮಾತನಾಡಲು
ಪ್ರೀತಿಯ ಪುಸ್ತಕದಿಂದ ಪುಟವೊಂದ ತಿರುವಲು.

(ವಾರಿಸ್ ಶಾಹ ಹದಿನೆಂಟನೆ ಶತಮಾನದ ಪಂಜಾಬೀ ಕವಿ. ಪ್ರಪಂಚದ ಸುಪ್ರಸಿದ್ಧ ಪ್ರೇಮಕಥೆಗಳಲ್ಲೊಂದಾದ ‘ಹೀರ್’ ನ ಕರ್ತೃ.)

ಚಿತ್ರಕೃಪೆ: www.i113.photobucket.com