ನನ್ನ ಮನೆಯಲ್ಲೊಂದು ಬಹಳ ಹಳೆಯ ಫೋಟೋ ಆಲ್ಬಮ್ ಇದ್ದಿತ್ತು. ಕಪ್ಪು ಬಣ್ಣದ್ದು. ಅದರ ಪುಟಗಳು ಕೂಡ ಕಪ್ಪಗೆ ಬಟ್ಟೆ ಸುತ್ತಿದ ಹಾಗೆ ದಪ್ಪಗೆ. ಪ್ರತಿ ಪುಟಗಳ ನಡುವೆಯೂ ಫೋಟೋಗಳನ್ನು ರಕ್ಷಿಸಲು ಬಟರ್ ಪೇಪರ್ ತರಹದ ಅರೆಪಾರದರ್ಶಕ ಹಾಳೆಗಳು. ಪ್ರತೀ ಪುಟದಲ್ಲೂ ಫೆವಿಕಾಲ್ ಹಾಕಿ ಅಂಟಿಸಿದ ಕಪ್ಪು-ಬಿಳುಪು ಛಾಯಾಚಿತ್ರಗಳು. ಯಾರಾದರು ನೆಂಟರಿಷ್ಟರು ಬಂದಾಗ ಅದನ್ನು ಬೀರುವಿನಿಂದ ಹೊರತೆಗೆದು ಪ್ರದರ್ಶನಕ್ಕಿಡಲಾಗುತ್ತಿತ್ತು. ಸದರಿ ನೆಂಟರು ಫೋಟೋಗಳನ್ನು ನೋಡುತ್ತ ’ಆಹಾ!’ ’ಓಹೋ!’ ಎಂದೆಲ್ಲ ಉದ್ಗರಿಸುತ್ತ ಬೇಕಾದ ಮಾಹಿತಿಗಳನ್ನೆಲ್ಲ ಪಡೆದುಕೊಳ್ಳುತ್ತ ಇರುವುದನ್ನು ನಾವು ಕೆಟ್ಟಮಕ್ಕಳು ಒಂದು ಮೂಲೆಯಲ್ಲಿ ಯಾರ ಗಮನಕ್ಕೂ ಹೆಚ್ಚು ಸಿಗದ ಹಾಗೆ ದಿಟ್ಟಿಸುತ್ತ ಕೂತಿರುತ್ತಿದ್ದೆವು. ಏಕೆಂದರೆ ಸುಮಾರು ಕೌಟುಂಬಿಕ ಸೀಕ್ರೆಟುಗಳು, ಕಥೆಗಳು ಇತ್ಯಾದಿ ಇಂಥ ಸಮಯದಲ್ಲೇ ಹೊರಬರುತ್ತಿದ್ದುದು. ನಾವಾಗೇ ಆ ಆಲ್ಬಮನ್ನು ಮುಟ್ಟಲು ಅಥವ ನೋಡಲು ಅನುಮತಿ ಇರಲಿಲ್ಲ. ಛಾಯಾಚಿತ್ರಗಳು ಆವಾಗ ಒಂದು ರೀತಿಯ ’ಫ್ಯಾಮಿಲಿ ರೆಕಾರ್ಡು’ಗಳಾಗಿದ್ದು ಅದರ ಪುಟಗಳ ನಡುವೆ ಯಾವಾಗಲೋ ತೀರಿಹೋಗಿದ್ದ ಅಥವ ದೂರದೂರುಗಳಲ್ಲಿ ಕಳೆದುಹೋಗಿದ್ದ ಹಿರೀಕರು, ಸಂಬಂಧಿಗಳು ಪರ್ಮನೆಂಟಾಗಿ ಕೈದಾಗಿದ್ದರು. ನಮ್ಮ ಕ್ರಿಮಿನಲ್ ಬುದ್ಧಿಯನ್ನೆಲ್ಲ ಉಪಯೋಗಿಸಿ ಅದನ್ನು ಹಾರಿಸಲು ಪ್ರಯತ್ನಿಸಿದಾಗಲೆಲ್ಲ ಅದುಹೇಗೋ ಅಮ್ಮನಿಗೆ ಸುಳಿವು ಹತ್ತಿ “ಆಲ್ಬಮ್ ಮುಟ್ಟಿದ್ರೆ ಹುಷಾರ್!” ಎಂದು ಕಿರುಚಿಕೊಂಡುಬಿಡುತ್ತಿದ್ದರು. ಅದನ್ನು ನೋಡಬೇಕೆಂದರೆ ಅಮ್ಮ ನಮ್ಮ ಜೊತೆಗಿರಲೇಬೇಕಿತ್ತು. ಅವರು ಪುಟಗಳನ್ನು ಹುಷಾರಾಗಿ ತಿರುಗಿಸುತ್ತಿದ್ದರೆ ನಾವು ಪ್ರತಿಸಾರಿಯೂ ಹೊಸದು ಅನ್ನುವ ಹಾಗೆ ’ಬ್ಯಾ’ ಎಂದು ಬಾಯಿಬಿಟ್ಟುಕೊಂಡು ಆಲ್ಬಮನ್ನು ತಿಂದುಹಾಕುವ ಹಾಗೆ ಕಣ್ಣೊಳಗೆ ಇಳಿಸಿಕೊಳ್ಳುತ್ತಿದ್ದೆವು. ಹಾಗೆ ನೋಡುತ್ತ ಇರುವಂತೆಯೆ ನಾನು ’ಇವರು ಯಾರು? ಎಲ್ಲಿದಾರೆ? ಏನು? ಎತ್ಲಗೆ?” ಮುಂತಾಗಿ ಸಾವಿರ ಪ್ರಶ್ನೆಗಳನ್ನು ಕೇಳುತ್ತಿದ್ದುದುಂಟು. ಕೆಲವಕ್ಕೆ ಅಮ್ಮ ಉತ್ತರಿಸುವರು, ಕೆಲವು ಪ್ರಶ್ನೆಗಳು ಉತ್ತರ ಸಿಗದೆಯೆ ಸುಮ್ಮನಾಗುವವು.
ಇಂಥ ಆಲ್ಬಮಿನ ಮೂರನೇ ಪುಟದಲ್ಲಿ ಇದ್ದ ಎರಡು ಚಿತ್ರಗಳು ನನಗೆ ಬಹಳ ಅಚ್ಚುಮೆಚ್ಚು. ಮೊದಲನೆಯದು ನಾನು ಐದಾರು ತಿಂಗಳ ಮಗುವಾಗಿರುವಾಗ ಸ್ಟುಡಿಯೋ ಒಂದರ ಕುರ್ಚಿಯ ಮೇಲೆ ನನ್ನನ್ನು ಕೂರಿಸಿ ತೆಗೆದಿರುವುದು. ಕಣ್ಣಿಗೆ ಢಾಳಾಗಿ ಕಣ್ಕಪ್ಪು ಹಾಕಿಸಿಕೊಂಡು ಕಾಟನ್ ಫ್ರಾಕಿನಲ್ಲಿ ಬಹುಶಃ ಕ್ಯಾಮೆರದ ಪಕ್ಕದಲ್ಲಿಯೇ ನಿಂತಿದ್ದ ಅಮ್ಮನ ಕಡೆಗೆ ದೊಡ್ಡಕಣ್ಣು ಬಿಟ್ಟುಕೊಂಡು ನಗುತ್ತಿರುವ ಗುಂಗುರುಕೂದಲಿನ ನಾನು. ಮತ್ತೊಂದರಲ್ಲಿ ಎರಡೇ ದಿನ ವಯಸ್ಸಿನ ನನ್ನ ತಂಗಿಯನ್ನು ತೊಡೆಯ ಮೇಲೆ ಮಲಗಿಸಿಕೊಂಡಿರುವ ನನ್ನಮ್ಮ ಮತ್ತು ನಾನು. ಇದನ್ನು ನನ್ನ ಅಪ್ಪ ತೆಗೆದದ್ದು. ಆ ಚಿತ್ರದಲ್ಲಿ ಕುರ್ಚಿಯ ಮೇಲೆ ಕುಳಿತ ಅಮ್ಮನ ಹಿಂದೆ ಇಬ್ಬರು ಹೆಂಗಸರು. ಒಬ್ಬಾಕೆ ಯುವತಿ, ಒಬ್ಬಾಕೆ ನಡುವಯಸ್ಸು ದಾಟಿದ ಹಿರಿಯ ಮಹಿಳೆ. ಯಾವಾಗಲೂ ಆ ಚಿತ್ರ ತೋರಿಸುವಾಗೆಲ್ಲ ಅಮ್ಮ ಆ ಹಿರಿಯ ಹೆಂಗಸಿನ ಕಡೆ ಬೊಟ್ಟು ಮಾಡಿ “ಇವರೇನೆ ನೀನು ಹುಟ್ಟಿದಾಗ ನನ್ನ ಬಾಣಂತನ ಮಾಡಿದವರು. ಅದಕ್ಕೇ ನೀನು ಈ ಥರ ಮಾತಿನಮಲ್ಲಿ!” ಅಂದು ನಗುತ್ತಿದ್ದರು. ಅದಕ್ಕೆ ಕಾರಣವಿಲ್ಲದೇ ಇಲ್ಲ.
ಆಕೆಯದು ನಮ್ಮ ಬೀದಿಯ ಕೊನೆಯ ಪುಟ್ಟ ಹುಲ್ಲುಮಾಡಿನ ಮನೆ. ಮನೆಯ ಸುತ್ತಲೂ ರಾಶಿ ಹೂವಿನ ಗಿಡಗಳು. ಆ ಮನೆಯ ಬೇಲಿಗೇ ತಾಕಿಕೊಂಡಂತೆ ಹಲವಾರು ಕಾಫಿತೋಟಗಳು. ಆಕೆಗೆ ಒಂದಾರು ಮಕ್ಕಳು. ಬೇಕಾದಾಗ ಮಾತ್ರ ಪುಡಿಕಾಸು ಸಂಪಾದಿಸುವ ಗಂಡ. ಯಾರ ಮನೆಯಲ್ಲಿ ಹುಟ್ಟು, ಸಾವು, ಮದುವೆ, ಮುಂಜಿ ಏನೇ ಇರಲಿ, ಆಕೆ ಎಲ್ಲದಕ್ಕೂ ಹಾಜರು. ಹಾಗೆಂದೇ ಆಕೆಗೆ ಎಲ್ಲ ಮನೆಗಳ ಎಲ್ಲ ರಹಸ್ಯಗಳೂ ತಿಳಿದಿರುತ್ತಿದ್ದವು. ಆಕೆಯ ಒಂದು ಕಾಲು ವಕ್ರವಾಗಿದ್ದು ವೇಗವಾಗಿ ನಡೆಯಲು ಸಾಧ್ಯವಿರಲಿಲ್ಲ. ಆಕೆಯ ಮುಂದಿನ ಹಲ್ಲುಗಳೆಲ್ಲ ಉದ್ದುದ್ದವಾಗಿ ಬೆಳೆದುಕೊಂಡು ಯಾವಾಗಲೂ ತುಟಿಗಳೆಡೆಯಿಂದ ಹೊರಗೇ ಕಾಣುತ್ತಿರುತ್ತಿದ್ದವು. ಐದನೇ ಕ್ಲಾಸಿಗೆ ಬರುವ ವೇಳೆಗೆ ನಾನೇ ಆಕೆಗಿಂತ ಎತ್ತರವಿದ್ದೆ. ಬಹುಶಃ ಸಣ್ಣದರಿಂದ ನೋಡಿದ್ದರಿಂದಲೋ ಏನೋ ನನಗೆ ಆಕೆ ಎಂದಿಗೂ ಕುರೂಪಿಯೆನ್ನಿಸಿದ್ದೇ ಇಲ್ಲ. ಬೇರೆ ಹೆಂಗಸರು ಆಕೆಯನ್ನು ಥರಾವರಿಯಾಗಿ ಗೇಲಿ ಮಾಡಿಕೊಳ್ಳುವುದನ್ನು ಕೇಳಿದಾಗೆಲ್ಲ ನನಗೆ ಆಶ್ಚರ್ಯವೇ ಆಗುತ್ತಿದ್ದಿದ್ದು. ನಾನು ಎದುರಿಗೆ ಸಿಕ್ಕಿದಾಗೆಲ್ಲ ಆ ಕುಳ್ಳನೆಯ ಮುದುಕಿ ನನ್ನ ಮುಖವನ್ನು ಬೊಗಸೆಯಲ್ಲಿ ಹಿಡಿದು ಒಮ್ಮೆ ದೀರ್ಘವಾಗಿ ನನ್ನನ್ನು ದಿಟ್ಟಿಸುತ್ತಿತ್ತು. ಆಮೇಲೆ ನನ್ನ ಮೂಗನ್ನು ಪ್ರೀತಿಯಿಂದ ಹಿಂಡಿ ತನ್ನ ಗೊಗ್ಗರುದನಿಯಲ್ಲಿ, “ಇಂಥ ಚೆಂದುಳ್ಳಿ ಮೂಗು ನಿನ್ನ ನಸೀಬಿನಲ್ಲಿ ಬಂದಿದ್ದು ನಾನು ಮಾಡಿದ ಮಾಲೀಶಿನಿಂದಲೇ ಅಂತ ನೆನಪಿಟ್ಕೋ!” ಎಂದು ಆಜ್ಞಾಪಿಸುತ್ತಿತ್ತು. ನಾನು ಆಕೆಯ ಕಣ್ಣಿಂದ ಸೂಸುತ್ತಿದ್ದ ಅಕ್ಕರೆಯ ಭಾರದಿಂದ ಕುಗ್ಗಿಹೋಗುತ್ತಿದ್ದೆ. ಬಹಳ ಪ್ರೀತಿ ಉಕ್ಕಿದರೆ ಆಕೆಯ ತೋಟದಿಂದ ಒಂದು ಚೆಂದದ ಡಾಲಿಯಾ ಹೂವೋ, ಗುಲಾಬಿಹೂವೋ ನನ್ನ ಕೈಗೆ ಬರುತ್ತಿತ್ತು.
“ನೆನಪುಗಳಾಗುವ ಆಶಯದಲ್ಲಿಯೇ ನಾವು ಬದುಕುವುದು” ಎಂದು ಇಟಾಲಿಯನ್ ಕವಿ ಆಂಟೋನಿಯೋ ಪೋರ್ಶಿಯಾ ಹೇಳುತ್ತಾನೆ. ನಾವು ಬೆಳೆಯುತ್ತ ಹೋದಹಾಗೆ ಹಲವಾರು ಜನರನ್ನು ನಾವು ನಮ್ಮ ಸ್ಮೃತಿಯಿಂದ ದೂರಮಾಡಿಕೊಳ್ಳುತ್ತ ಹೋಗುತ್ತೇವೆ. ನಮ್ಮ ವರ್ತಮಾನವನ್ನು ಹೆಚ್ಚು ಶ್ಲಾಘಿಸುವುದಕ್ಕಾಗಿ, ಆಸ್ವಾದಿಸುವುದಕ್ಕಾಗಿ ಮತ್ತು ಭವಿಷ್ಯವನ್ನು ಎದುರಿಸಲು ನಮ್ಮ ಕಣ್ಣುಗಳನ್ನು ತೆರೆಯುವ ಸಲುವಾಗಿಯಾದರೂ ನಾವು ನಮ್ಮ ನೆನಪುಗಳನ್ನು ಹಸಿರಾಗಿಟ್ಟುಕೊಳ್ಳುವ ಪ್ರಯತ್ನ ಮಾಡಬೇಕು. ಕೆಲ ವರ್ಷದ ಕೆಳಗೆ ನಮ್ಮ ಆಲ್ಬಮ್ ತೇವಕ್ಕೆ ಸಿಕ್ಕಿ ಜೀರ್ಣವಾಗುವ ಪರಿಸ್ಥಿತಿಯಲ್ಲಿದೆ ಎಂದು ಅಮ್ಮ ತಿಳಿಸಿದರು. ನಾನು ಅದರಲ್ಲಿ ಸಾಕಷ್ಟು ಉಳಿದುಕೊಂದಿರುವ ಛಾಯಾಚಿತ್ರಗಳನ್ನೆಲ್ಲ ಸ್ಕ್ಯಾನ್ ಮಾಡಿಸಿ ಉಳಿಸಲು ಸಲಹೆ ನೀಡಿದೆ. ಆದಾಗಿ ಕೆಲದಿನಗಳ ನಂತರ ಅಮ್ಮ ನಮ್ಮ ಎಲ್ಲ ಹಳೆಯ ಚಿತ್ರಗಳನ್ನು ಸ್ಕ್ಯಾನ್ ಮಾಡಿಸಿ ಡಿವಿಡಿ ಕಳುಹಿಸಿದರು. ಮತ್ತವೇ ಚಿತ್ರಗಳು ನನ್ನ ಲ್ಯಾಪ್ ಟಾಪಿನ ಸ್ಕ್ರೀನಿನ ಮೇಲೆ ಮೂಡುವಾಗ ಉಂಟಾದ ಸಂತಸವನ್ನು ವರ್ಣಿಸಲು ಶಬ್ದಗಳೇ ಇಲ್ಲ. ಕಳೆದ ತಿಂಗಳು ನನ್ನ ಜೀವನದ ಮೊದಲ ಕೆಲ ತಿಂಗಳುಗಳಲ್ಲಿ ನನ್ನನ್ನು ಲಾಲಿಸಿ ಪಾಲಿಸಿ ನನ್ನ ಮೂಗನ್ನು ವಿಶೇಷವಾಗಿ ಮಾಲೀಶು ಮಾಡಿದ್ದ ಆ ಪುಟ್ಟ ಮುದುಕಿ ತೀರಿಕೊಂಡಿತು. ಕೊನೆಯ ದಿನಗಳನ್ನು ಆಕೆ ಮಂಗಳೂರಿನ ತನ್ನ ಮಗಳ ಮನೆಯಲ್ಲಿ ಬಹಳ ನೆಮ್ಮದಿಯಿಂದ ಕಳೆದರು ಎಂದು ಅಮ್ಮ ಹೇಳಿದರು.
ಚಿತ್ರಕೃಪೆ: s3.favim.com