ಪಡಖಾನೆಯ ಹುಡುಗಿ: ನಗು ಮತ್ತು ಸರಳ ಬದುಕು

PabloPicasso-Girl-with-Mandolin-Fanny-Tellier-1910

ಕೊರೆಯುತ್ತಿದೆ ನಿನ್ನುಸಿರು, ಸೀಳುತ್ತಿದೆ.

ಬಾರದ ನಿದ್ದೆಯ ಆವಾಹಿಸಿಕೊಳ್ಳೋಣ
ಎಂದು ತಪಸ್ಸು ಮಾಡಿದರು ಬಿಡವು
ನಿನ್ನ ಅದೃಶ್ಯ ಸುಳುಹುಗಳು.
ನಿನ್ನ ಕಣ್ಣುಗಳಲ್ಲಿ ಅರಳಿರುವುದು ಮುತ್ತುಗದ ಹೂವುಗಳೊ
ನನ್ನ ಮೇಲಿನ ದಿವ್ಯದ್ವೇಷವೊ?

***

ಮತ್ತೆ ಮರಳಿದ್ದೀ, ಎಂದಿನಂತೆಯೆ ವರುಷಗಳ ಬಳಿಕ
ಈಗ ನೆರಳುಗಳಿಲ್ಲ ನಿನ್ನ ಕಣ್ಣಡಿ.
ಅವು ಅಂದೇ ಇಂಗಿ, ನೀಗಿ ಹೋದವು
ಎಂದಿದ್ದೆ, ಈಗ ಹೊರಳಿಸದಿರು ಅವನ್ನು
ಕಾಣಲು ಬಿಡು, ದೀರ್ಘವಾಗಿ
ಈ ಬಾರಿ ಉಸುರದಿರು ನಿನ್ನ ಸುಳ್ಳುಗಳನು

***

ನೀನು ಈ ಗಾಜಿನ ಹೂಜಿಯಲಿ ತುಂಬಿರುವ
ಹೊನ್ನಬಣ್ಣದ ವಿಷವಿಪ್ಲವ.
ಗಂಟಲು ಸುಟ್ಟರೂ ಚಿಂತೆಯಿಲ್ಲ, ಗುಟುಕರಿಸಲೇಬೇಕು
ಅಮೇಲಿನ ಭ್ರಾಂತ ಸ್ಥಿತಿಯಲಿ ನೇವರಿಸಲೇಬೇಕು
ನೀನು ಕರುಣಿಸುವ ಅದ್ಭುತ ಕತ್ತಲೆಯನು
ದಹಿಸಲೇಬೇಕು, ಬೆಂದು ಕರಕಾಗುವತನಕ.

***

‘ಎಲ್ಲವೂ ಸರಳವಾಗಲು ಸಾಧ್ಯವಿಲ್ಲವೇಕೆ?’
ಎಂದು ಒರಲುವವನಿಗೇನು ಹೇಳಲಿ?
ಇದು ಅತ್ಯಂತ ಸರಳ. ಸರಳಕ್ಕಿಂತಲೂ.
ಅವರು ಬೆಲೆ ಕಟ್ಟುವರು ನನಗೆ. ನಾನು ನಗುವೆ.
ಅವರು ನುಂಗಿ ನೊಣೆಯುವರು. ನಾನು ನಗುವೆ.
ನೀನು ಮರೆಯುತ್ತ ಹೋಗುವ ಘಳಿಗೆಗಳಲ್ಲೂ ನಾನು ನಗುವೆ.

Pic courtesy: ‘Girl with Mandolin’ by Pablo Picasso

Advertisements

ಪಡಖಾನೆಯ ಹುಡುಗಿ – ಇರುಳ ನಂತರದ ಸಮಯ

ಇರುಳು ಸಂದಿತು, ಇನ್ನೇನು

ನಸುಕು ಕಳ್ಳಿಯ ರೀತಿ ಉಸಿರು ಬಿಗಿಹಿಡಿದು

ಒಳಬರುವಳು

ನನ್ನ ಕಾಲ ಬಳಿ ರಾತ್ರಿ ಉಂಡೆಸೆದ

ರೊಟ್ಟಿ ಮಾಂಸಗಳ ತುಣುಕುಗಳನ್ನಾಯುವ ಹುಡುಗ

ಕೆಟ್ಟ ಬೈಗುಳದ ಕೊಳಕು ಹಾಡು ಹಾಡುತ್ತ ಸಿಕ್ಕ

ಎಲ್ಲವನೂ ಕಣ್ಣಿಂದಲೇ ಕೊರೆಯುತ್ತ ಸಾಗುವನು

ಪರದೆಗಳ ಮೇಲಿನ ಕಲೆಗಳು

ಗೋಡೆಯ ಹಳೆ ಬಣ್ಣ

ಗಾಜಿನ ಮೇಲೆ ಕೂತ ಎಣ್ಣೆಪಸೆ

ನಿಚ್ಚಳವಾಗತೊಡಗುವವು

ಮೇಜವಾನಿಯ ಕುರ್ಚಿಗಳೂ ಯಾಕೊ

ಸೋತುಹೋದ ಮುದುಕರ ನೆನಪಿಸುವವು

ನೆನ್ನೆ ತನ್ನ ಪ್ರೇಯಸಿಯ ಧಿಕ್ಕರಿಸುವ

ಹಾಡುಗಳನುದುರಿಸುತಿದ್ದ ಕವಿಪುಂಗವನೀಗ

ತನ್ನ ಪದಗಳ ಭಾರಕ್ಕೆ ಸಿಲುಕಿ

ಮೂಗನಂತೆ ಮೈಚೆಲ್ಲಿರುವನು

ಅವನ ಮಗಳು ಬರಬಹುದು, ಹೊತ್ತೇರಿದ ಮೇಲೆ

ಹಿಂಜರಿಯುತ್ತ.. ಎಲ್ಲವನೂ ಶಪಿಸುತ್ತ..

ಮಬ್ಬಿನಲಿ ನೆನೆದ ಪಡಖಾನೆಯ

ಫಲಕವೂ ಬೀದಿಯ ಜನರಿಗೆ ಜೀರ್ಣವಾಗದು

ಇರುಳಿನ ಥಳುಕೂ ಮರೆತುಹೋಗುವುದು

ಮಿಲನದ ನಂತರ ಬರುವ ನಿದ್ದೆಯ ಹಾಗೆ.

ನಾನೊ, ಚಿಲಮಿನ ಹೊಗೆಯಂತೆ

ದಕ್ಕಿದ ಕಿಂಡಿಯಲಿ ಪಾರಾಗಿ

ಯಾವಳೊ ಛಿನಾಲಿಯ ಕತ್ತಿಗೆ

ಇಂಬಳದ ಹಾಗೆ

ನೇತುಹಾಕಿಕೊಂಡಿರಬಹುದಾದ

ಪಾಪಿಯನೆ ತಣ್ಣಗಿನ ರೋಷದೊಂದಿಗೆ ಕಾಯುವೆನು.

ಚಿತ್ರಕೃಪೆ: http://www.robertkruh.com

ಪಡಖಾನೆಯ ಹುಡುಗಿ- ಒಂದು ಪಶ್ಚಾತ್ತಾಪ.

1921.186[1]

ಸುಮ್ಮನೆ ಉಪಕರಿಸಲೆ ಎಂದು
ಕಾಣಲು ಬಂದರೆ
ನಿನ್ನ ಕಣ್ಣ ಬೆರಗು ಮಾತು ನುಂಗಿತು
ನಾನು ಅಡಗಲು ಜಾಗ ಹುಡುಕಿದೆ
ಬೆಳಗು ಸುಮ್ಮನೆ ಮತ್ತಿನಲ್ಲಿ
ಸುಖಿಸುತ್ತ ಕಳೆದುಹೋಯಿತು

ಅರೆಮಡಚಿದ ಹಾಸಿಗೆ
ಅವಸರದ ಉಪಚಾರ
ಬಿಕ್ಕುವಂತೆ ಹೊತ್ತಿ ಆರುವ ದೀಪ
ಮೂಲೆಯಲಿ ಮುಗುಮ್ಮಾಗಿ ಕುಳಿತ ನೀನು
ಈಗ ಮೇಣದಬತ್ತಿ ಕರಗುವಾಗ
ಅದೆಲ್ಲ ನೆನಪು, ಅರೆಸುಟ್ಟ ಹಾಗೆ.

ಕೊನೆಗೆ ನೀನು ತೆರಳಿದ ಬಳಿಕ
ಬೇಕಿತ್ತೆ ಈ ಇದೆಲ್ಲ ಎಂದು ಕೊರಗುತ್ತ
ಸುಕ್ಕಾದ ಕೌದಿಯೆತ್ತಿ ಕೊಡಹುವೆ
ಆ ಪುರಾತನ ಪ್ರೇಯಸಿ ಕಟ್ಟಿದ
ಮಂಟಪಕ್ಕಾತು ನೀ ದಿಟ್ಟಿಸಿದ ಪರಿಯ
ನೆನೆಯುತ್ತ

 ‘The Brooding Woman’ by Paul Gauguin                                                                       ಕೃಪೆ: www.worcesterart.org
 

 

ಪಡಖಾನೆಯ ಹುಡುಗಿ – ಬೆಳಕು ಮತ್ತು ಪಾಪಗಳು

woman

ನೆನ್ನೆ ನನ್ನ ಹಳೆಯ ಹೆಸರ
ಕರೆದ ನಿನ್ನ ದನಿಯಲಿ
ಅದೇ ಹೊಳಪು ಸುರಿಯಿತು
ಕಿಟಕಿಯಾಚೆ ಮಕ್ಕಳು ಸಿಕ್ಕ
ಕಾಗೆ ಬಂಗಾರ ನುರಿನುರಿದು
ಮೈತುಂಬ ಸವರುತ್ತ ನಕ್ಕರು
ನಾನೂ ಈ ಖಾಲಿ ಬಟ್ಟಲಿಗೆ
ನಿನ್ನ ಬೆಳಕ ಮೊಗೆದುಕೊಳ್ಳಲೆ
ಯೋಚನೆ ಮಾಡಿದೆ.
 ನನ್ನ ಕಿಟಕಿತುಂಬ
ಸಾಲು ಪರದೆ
ನಿನ್ನ ಹಳೆಯ ಬೆಳಕ
ಕಳೆಯಲು ಧೈರ್ಯ ಸಾಲದೆ.

***

ನೀನು ಕಲ್ಲಾದ ದಿನದಿಂದ
ಹುಡುಕೀಯ ಒಮ್ಮೆಯಾದರು
ನನ್ನ ತಪ್ಪುಗಳನೊಂದನಾದರು
ಬೇಸರಿಸಿ ಹಳಿದೀಯ ಒಮ್ಮೆ
ಹುಬ್ಬುಗಂಟಿಕ್ಕಿ ಎಂದೆ
ಬೇಕಾಗಿ ಸಾವಿರ ಪಾಪಗಳ ಮಾಡಿ
ವಿರಾಮದಲಿ ನಿನ್ನ ದಿಟ್ಟಿಸುತ
ಒಳಗೊಳಗೆ ಉಸಿರುಗಟ್ಟಿ ಹೊರಗೆ
ಹುಸಿನಗುತ ಬಣ್ಣಿಸಿ ಹೇಳುವೆ
ನಿನ್ನೊಳಗೊಂದು ಸಣ್ಣ ನಡುಕ
ಕಂಡ  ಘಳಿಗೆ
ನನಗೆ ನನ್ನ ಬೆಳಕು.

***

ನನಗೇಕೆ ನಿನ್ನ ಕೆಣಕುವ ತೆವಲು?
ಕೇಳುವರು, ಹಂಗಿಸುವರು ಜನ
ಅವರಿಗೇನು ತಿಳಿದೀತು
ಪ್ರೇಮದ್ವೇಷಗಳ ಲೆಕ್ಕಾಚಾರ?
ನನ್ನ ಅವಸಾನದಕೆ ಕಾಯುವ ನಿನ್ನ ಉತ್ತುಂಗ
ನಿನ್ನ ನೋವಲೆ ಅರಳುವ ನನ್ನ ಆತ್ಮ 
ನಿನಗಾಗಿ ನಾ ಮಾಡುವ ಪಾಪಗಳು ಹಾಗೂ
ನನಗಾಗೆ ನೀ ಸೂಸುವ ಬೆಳಕು
ಇದಕೆಲ್ಲ ಅವರು ’ಮರುಳುತನ’ವೆನ್ನುವರು
ನಮ್ಮ ಪಾಪಗಳು ಮತ್ತು ಬೆಳಕು
ಕೂಡಲು ಕಾಯುತ್ತ ಇರುವವು.

ಚಿತ್ರಕೃಪೆ: www.toruiwaya.com

ಪಡಖಾನೆಯ ಹುಡುಗಿ – ಬೆನ್ನ ತಿರುಗಿಸುವ ಪಯಣಕೆ ಮುನ್ನ

ಮತ್ತೊಮ್ಮೆ ಸಿಲುಕಿಕೊಂಡಿರುವೆ
ಹಳೆಯ ಮೋಹವೊಂದರ ತೆಕ್ಕೆಯಲಿ..
ಹಾಡುಗಳ ಹುಡುಕಿಕೊಂಡು ಹೊರಟಿರುವೆ
ಅರಿಯದ ಜಾಡುಗಳೆಡೆಯಲ್ಲಿ
ಕೆರೆದಂಡೆಯ ಮುರುಕುಮಂಟಪ
ಕುಣಿವಭಂಗಿಯ ಕಲ್ಲದೇವತೆಗಳು
ನಡುನೀರ ಬೆತ್ತಲುಗಪ್ಪು ಮರಗಳು
ಹಾದಿಬದಿ ಗುಲ್ಮೊಹರ್ ಹೂವು
ಎಲ್ಲದಕು ಕಣ್ಣರಳಿಸಿ ನಿಂತ ನಾವು
ಮೊದಲ ಬಾರಿಗೆಂಬಂತೆ ಕಣ್ಣು ತಪ್ಪಿಸುತ್ತ
ಮಾತುಮಾತಿಗೂ ಬೆವೆತು
ಬಾಯಾರಿ ತಹತಹಿಸುತ್ತ
ನಮ್ಮೊಳಗಿನ ಹಾಡುಗಳ
ಒರಟುತನ ಹುಡುಕುತ್ತ ಕಾಯುತ್ತ
ನಮ್ಮ ಸೆಡವುಗಳಿಗೆ ಹೊಸದೊಂದು
ಹೆಸರಿಡಲು ಯತ್ನಿಸುತ್ತ..
..ಹೀಗೆ ಸಿಲುಕಿಕೊಂಡಿರುವೆ
ಹಳೆಯ ಮೋಹವೊಂದರ ತೆಕ್ಕೆಯಲಿ..

ನಿನ್ನ ಒರಟು ಬೆರಳುಗಳು
ಕಿಕ್ಕಿರಿದ ಬೀದಿಗಳ ನೆವಮಾಡಿ
ನನ್ನ ಕೊರಳ ನೇವರಿಸುವಾಗ
ಈ ಹಾದಿ ಮುಗಿವುದ
ನೆನೆಸಿ ವಿಹ್ವಲಳಾಗುವೆ
ಈ ಉತ್ಕಟ ಘಳಿಗೆಗಳು, ಮಾತುಗಳು..
ನಿನ್ನುಸಿರ ಏರಿಳಿತ..
ಸುಡದೆ ಒಳಗಿಳಿಯದ ಬಟ್ಟಲು..
ಮೋಡ ಮುಸುಕಿದ ಒದ್ದೆ ಸಂಜೆ..
ಗಡಿಯಾರದೊಡನೆ ನನ್ನ ಗುದ್ದಾಟ..
ಬೆನ್ನ ತಿರುಗಿಸುವ ಪಯಣಕೆ ಮುನ್ನ
ದಯಮಾಡಿ ಹೇಳು ಇವನೆ,
ಆ ಕೊನೆಯಿರದ ಬೇಸರಗಳ ನಗರಿಗೆ
ಆ ಬಯಕೆ ತೀರದ ಬದುಕಿಗೆ
ನಾವು ತಿರುಗಿ ಹೋಗಲೆಬೇಕೆ?

 

 ಚಿತ್ರ: ನಾನೇ ಬರ್ದದ್ದು!! (ಕಾಪಿರೈಟ್ ನನ್ನದು.)

ಪಡಖಾನೆಯ ಹುಡುಗಿ – ಜೇನುಗಣ್ಣ ಹುಡುಗನಿಗೆ

ನಿನಗೆನ್ನ ಮೇಲೆ ಪ್ರೇಮವಿದೆಯೆ
ಕೇಳಲು ಸಮಯ ಸಾಲದಾಯಿತು
ನಿನ್ನ ಜೇನಕಂಗಳು
ನನ್ನೊಳಗಿಳಿವ ಪರಿಗೆ ಮರುಳಾದೆ
ಮಾತು ಮರೆತು ಹೋದವು

ಅದಕೆಂದೆ ಈಗ ಹೇಳುವೆ,

ಅಲ್ಲಿ ನೀನು ಚೆಲ್ಲಿಬಿಡುವ
ಹುಣ್ಣಿಮೆ ಬೆಳಕು ನನ್ನ
ನೀರಡಿಕೆಯನು ಹಿಗ್ಗಿಸುತ್ತದೆ

ಹಗುರಾಗಿ ನೀನು ನಕ್ಕಾಗ
ನಶೆಯೇರಿದಂತಾಗಿ
ಹಾವಿನಂತೆ
ಒಳಗೊಳಗೇ ಮಿಸುಕಾಡುವೆ

ಇಲ್ಲಿ ನಾನು ಒಂಟಿಯಾದಾಗೆಲ್ಲ
ನೀನು ಪಿಸುಗುಟ್ಟಿದಂತಾಗಿ
ಪುಳಕಗೊಳ್ಳುವೆ

ಒಮ್ಮೊಮ್ಮೆ  ನಾ ಸೋಕಿದಾಗ
ಅಪರಾಹ್ನದ ಕೊಳದಂತೆ ಮಿನುಗುವ
ನಿನ್ನ ಕಂಗಳ ನೆನೆನೆನೆದು
ಬೆವರುವೆ

ಆದರೆ,
ನಾನು ನಿಜವಾಗಿ ಕೇಳಬೇಕೆಂದಿದ್ದು
ನಿನ್ನ ಕಣ್ಣ  ಸತ್ಯಗಳು
ನಿನ್ನೂರ ಮಲೆಯ ಮರಗಳಷ್ಟೆ
ಗಟ್ಟಿಮುಟ್ಟು, ಒರಟು ಹಾಗೂ
ಪ್ರಾಮಾಣಿಕವಾಗಿರಲಿ
ಎಂದು ಮಾತ್ರ.

ಚಿತ್ರಕೃಪೆ: www.thepioneerwoman.com 

ಪಡಖಾನೆಯ ಹುಡುಗಿ ಕಳೆದ ಒಂದು ದಿನ

wwwchina-cartcom.jpg

ಹೊಸಿಲಲಿ ಮೂಡಿದ ಬಿಸಿಲ ಹೂ
ಮಾಡ ಮೂಲೆಯಲಿ
ಕಳೆದು ಹೋದ ಸಮಯ
ಸೆಖೆಯಾರಿಸದ ಪಂಖಾ
ಪಕ್ಕದ ಕೋಣೆಯ ಪರಿಚಿತ ಸಂಗೀತ
ಬಿಚ್ಚಿಟ್ಟ ಓಲೆಗಳು ಮತ್ತು
ಎಚ್ಚರದ ಅರಿವಿನೊಡನೆಯೆ
ಪಾಪದಂತೆ ಕಾಡುವ ನೀನು

ನನಗೆ ನಿನ್ನದೆ ಧ್ಯಾನ.
ಮುಡಿಬಿಚ್ಚಿ ಮೂಗಿಗಿಟ್ಟು
ನೇವರಿಸುತ್ತ ಹಠ ಮಾಡುವ
ನಿನ್ನ ಹಾಗೆ ಮೊಂಡು ಮಳೆ
ಅದಕೆ ಸಿಕ್ಕು ಚೆದುರುವ
ಮೊಗ್ಗಿನ ಹಾಗೆ ನನ್ನ ಬಿಗುಮಾನ
ಮಳೆಗೆ ಸಿಕ್ಕಿ ಮೊಗ್ಗು ಸುರಿದವು
ಇಂದು ಅಪರಾಹ್ನ

ಇನ್ನೂ ಆರಿಲ್ಲ ಒದ್ದೆ ಹೆರಳ ಪರಿಮಳ
ಕೊಂಚ ತಾಳು
ನಾನು ಹದವಾಗಲು
ಸ್ವಲ್ಪ ಸಮಯ ಬೇಕು
ಬರಿ ಮಾತೆ ಸಾಕೆ ನಿನಗೆ
ಸಂಜೆಯಾಳಕೆ ಮುಳುಗಲು?
ಬೀದಿದೀಪಗಳಿಗು ಹೇಳು
ನಮ್ಮ ಹೆಜ್ಜೆಗಳ ಸುತ್ತ
ಕೊಂಚ ಕತ್ತಲ ಹರಡಲು.

ಮಾತು ತೋಚದೆ
ದೇಶಾವರಿ ನಗುತ್ತ,
ಪಾಪಗಳ ಬಟ್ಟಲಲಿ ಸುರಿದು ಹೀರುತ್ತ
ಬಳಿ ಕೂರಲಾರೆ
ನಿನ್ನ ಚಡಪಡಿಕೆಯ ಪ್ರತಿಸಾರಿ
ಹೊಸದೆನ್ನುವಂತೆ ಸ್ವಾಗತಿಸಲಾರೆ
ನೀನು ಕೇಳುವ ಪ್ರೇಮ
ನನ್ನ ಹಳೆಯ ಪ್ರಿಯಕರ
ಕತ್ತಲಂತೆಯೆ ನಿಗೂಢವಾಗಿ
ಹುಟ್ಟಿ ದಾರಿಗಾಣದೆ
ಮರೆಯಾಗುವಂಥದು.