
ಈ ಪ್ರಕಾರದಲ್ಲಿ ಜನಪ್ರಿಯವಾಗಿರುವ ಇತರ ಕೆಲವು ಪುಸ್ತಕಗಳೆಂದರೆ ಸೋಫೀ ಕಿನ್ಸೆಲ್ಲಾರ ‘ಕನ್ಫೆಶನ್ಸ್ ಆಫ್ ಎ ಶೋಪಹಾಲಿಕ್, ಸಿಸಿಲಿಯಾ ಅಹೆರ್ನ್‌ರ ‘ಪಿ.ಎಸ್. ಐ ಲವ್ ಯು’, ನಿಕೋಲಾ ಕ್ರಾಸ್ ಮತ್ತು ಎಮ್ಮಾ ಮೆಕ್‌ಲಾಲಿನ್‌ರ ‘ದ ನ್ಯಾನೀ ಡೈರೀಸ್’ ಹಾಗೂ ಜೇನ್ ಗ್ರೀನ್‌ರ ‘ಜೆಮಿಮಾ ಜೆ’. ಚೆಂದದ ಕವರ್‌ಪೇಜುಗಳನ್ನು ಹೊಂದಿರುವ ಈ ಪುಸ್ತಕಗಳು ಕಣ್ಣಿಗೆ ಹಬ್ಬ. ಹೆಣ್ಣುಮಕ್ಕಳಿಗೆ ಸಾಧಾರಣವಾಗಿ ಇಷ್ಟವಾಗುವ ಬಣ್ಣಗಳು, ಹೂವಿನ ಚಿತ್ರಗಳು, ಫ್ಯಾಶನಬಲ್ ಹೆಂಗಸರ ಚಿತ್ರಗಳು ಕಣ್ಸೆಳೆಯುವಂತಿರುತ್ತವೆ.
ಭಾರತೀಯ ಚಿಕ್‌ಲಿಟ್ ಕಳೆದ ದಶಕದಲ್ಲಿ ಅಚ್ಚರಿ ಹುಟ್ಟಿಸುವಷ್ಟು ಬೆಳವಣಿಗೆಗಳನ್ನು ಕಂಡಿದೆ. ಚಿಕ್‌ಲಿಟ್‌ನ ಈ ಉಪಪ್ರಕಾರವು ನಗರವಾಸಿ ಓದುಗವರ್ಗವನ್ನು ಹಿಂದೆಂದೂ ಇಲ್ಲದಂತೆ ತನ್ನೆಡೆಗೆ ಸೆಳೆದುಕೊಳ್ಳುವಲ್ಲಿ ಸಫಲವಾಗಿವೆ. ಭಾರತೀಯ ಚಿಕ್‌ಲಿಟ್‌ನ ನಾಯಕಿಯರು ಇಪ್ಪತ್ತರ ಇಲ್ಲವೇ ಮೂವತ್ತರ ಹರೆಯದಲ್ಲಿದ್ದು ಕಾಸ್ಮೋಪಾಲಿಟನ್ ಸಂಸ್ಕೃತಿಯಲ್ಲಿ ಬೆಳೆದುಬಂದಿರುವ ಹೆಣ್ಣುಮಕ್ಕಳಾಗಿರುತ್ತಾರೆ. ಇವರ ವೃತ್ತಿಪರ ಜೀವನ ಮತ್ತು ಪ್ರೇಮ-ಕಾಮಗಳು ಈ ಪುಸ್ತಕಗಳ ಪ್ರಮುಖ ಥೀಮುಗಳಾಗಿವೆ. ಎಲ್ಲಾ ಪುಸ್ತಕಮನೆಗಳ ಟಾಪ್ ಟೆನ್ ಪಟ್ಟಿಯಲ್ಲಿ ಒಂದು ಚಿಕ್‌ಲಿಟ್ ಪುಸ್ತಕವಾದರೂ ಇದ್ದೇ ಇರುತ್ತದೆ.
ಮುಂಬೈನ ಫಿಲ್ಮೋದ್ಯಮದಲ್ಲಿ ಕೆಲಸಮಾಡುತ್ತಿದ್ದು ಎಂಟಿವಿಯ ಸುಪ್ರಸಿದ್ಧ ‘ಫಿಲ್ಮೀ ಫಂಡಾ’ ಕಾರ್ಯಕ್ರಮದ ತಂಡದಲ್ಲಿದ್ದ ಬರಹಗಾರ್ತಿ ರಾಜಶ್ರೀಯವರ ‘ಟ್ರಸ್ಟ್ ಮಿ’ ಇಲ್ಲಿಯವರೆಗೆ ಭಾರತದಲ್ಲಿ ಅತಿಹೆಚ್ಚು ಮಾರಾಟವಾಗಿರುವ ಚಿಕ್‌ಲಿಟ್ ಪುಸ್ತಕ. ಇದರ ನಾಯಕಿ ಪಾರ್ವತಿ ಗಂಡಸುಜಾತಿಯಿಂದಲೇ ಬೇಸತ್ತುಹೋಗಿ ಯಾರನ್ನೂ ಪ್ರೇಮಿಸಬಾರದೆಂಬ ತೀರ್ಮಾನಕ್ಕೆ ಬಂದಿರುವಾಕೆ. ಇದಕ್ಕೆ ಬೆಂಬಲ ನೀಡಲು ಆಕೆಯ ಗೆಳತಿಯರಿದ್ದಾರೆ. ತಂದೆಯ ಸಮಾನವೆಂದು ಭಾವಿಸಿದ್ದ ಆಕೆಯ ಬಾಸ್ ಆದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಾಗ ಆಕೆ ಕೆಲಸ ಬಿಟ್ಟು ಟಿಪಿಕಲ್ ಬಾಲಿವುಡ್ ನಿರ್ದೇಶಕ ಜಾಂಬುವಂತನ ಸಹಾಯಕಿಯಾಗಿ ಕೆಲಸಕ್ಕೆ ಸೇರುತ್ತಾಳೆ. ತನ್ನ ಹಿಂದಿನ ಅನುಭವಗಳಿಂದ ತಾನು ಪಕ್ವವಾಗಿದ್ದೇನೆ, ಇನ್ನು ಮೋಸಹೋಗಲಾರೆನೆಂದು ಭಾವಿಸುವ ಪಾರ್ವತಿಯ ಜೀವನ ಚಿತ್ರನಟ ರಾಹುಲನನ್ನು ಭೇಟಿಯಾದಮೇಲೆ ಅಲ್ಲೋಲಕಲ್ಲೋಲಗಳಿಗೆ ಒಳಗಾಗುತ್ತದೆ.
ಸ್ವಾತಿ ಕೌಶಲ್‌ರ ‘ಪೀಸ್ ಆಫ್ ಕೇಕ್’ನ ನಾಯಕಿ 29 ವಯಸ್ಸಿನ ಮೀನಲ್ ಶರ್ಮಾ ಕಾರ್ಪೊರೇಟ್ ಪ್ರಪಂಚದ ಉನ್ನತ ಹುದ್ದೆಯಲ್ಲಿರುವಾಕೆ. ಆಕೆಗೆ ಒಳ್ಳೆಯ ಗಂಡನನ್ನು ಹುಡುಕಿಕೊಳ್ಳಬೇಕೆಂದು ತಾಯಿಯಿಂದ ಪ್ರತಿದಿನವೂ ಒತ್ತಡ. ಇದರ ಜತೆಗೇ ಕೆಲಸದ ಒತ್ತಡ. ಆಕೆಯ ತಾಯಿ ದಿನಪತ್ರಿಕೆಯೊಂದಲ್ಲಿ ತನ್ನ ಬಗ್ಗೆ ಜಾಹೀರಾತುಗಳನ್ನು ನೀಡಿದಾಗಲಂತೂ ಮೀನಲ್ ನಾಚಿಕೆಯಿಂದ ಕುಗ್ಗಿಹೋಗುತ್ತಾಳೆ. ಆಕೆ ಕ್ಲಬ್ಬಿಗೆ ಹೋಗುತ್ತಾಳೆ, ಕುಡಿಯುತ್ತಾಳೆ. ಹೆಣ್ಣಿನ ಆಧುನಿಕ ‘ಸಮಾನತೆ’ಯ ಪ್ರತೀಕವಾಗಿದ್ದಾಳೆ. ಆದರೂ ಭಾರತೀಯ ಸಮಾಜದಲ್ಲಿನ ಮದುವೆಗೆ ಸಂಬಂಧಿಸಿದ ನಿಗದಿತ ವಯೋಮಾನವನ್ನು ದಾಟಿರುವ ಬಗ್ಗೆ ಹೆಚ್ಚೂಕಡಿಮೆ ಪ್ರತಿದಿನವೂ ತಾಯಿಯ ಗೋಳಾಟವನ್ನು ಕೇಳಿಕೊಂಡಿರಬೇಕಾಗುತ್ತದೆ.. ಆಧುನಿಕತೆ ಸಾಂಪ್ರದಾಯಿಕತೆಯ ಎದುರಿಗೆ ತಲೆ ಬಗ್ಗಿಸತೊಡಗುತ್ತದೆ.. ಒಟ್ಟಿನಲ್ಲಿ ಭಾರತೀಯ ಮದುವೆ ಮಾರುಕಟ್ಟೆಯನ್ನು ಒಬ್ಬ ಹೆಣ್ಣಿನ ದೃಷ್ಟಿಯಿಂದ ನೋಡಿರುವ ಪುಸ್ತಕವಿದು.
ಅನುಜಾ ಚೌಹಾನ್‌ರ ‘ ದ ಜೋಯಾ ಫ್ಯಾಕ್ಟರ್’ ಇತ್ತೀಚೆಗೆ ದೊಡ್ಡ ಯಶಸ್ಸು ಗಳಿಸಿದ ಚಿಕ್‌ಲಿಟ್ ಕಾದಂಬರಿ. ಇದರ ನಾಯಕಿ ಜೋಯಾ ಸೋಲಂಕಿ ಜಾಹೀರಾತು ಏಜೆನ್ಸಿಯೊಂದರ ಗ್ರಾಹಕ ಸೇವಾ ವಿಭಾಗದ ಅಧಿಕಾರಿ. ಶಾರುಖ್ ಖಾನನ ತಂಪುಪಾನೀಯವೊಂದರ ಶೂಟಿಂಗ್ ಅನ್ನು ಬಿಟ್ಟು ಢಾಕಾಗೆ ಭಾರತೀಯ ಕ್ರಿಕೆಟ್ ಟೀಮಿನ ಚಿತ್ರಗಳನ್ನು ತೆಗೆಯಲು ಹೋಗಬೇಕಾಗಿ ಬಂದಾಗ ಆಕೆ ಸಿಡಿಮಿಡಿಗೊಂಡರೂ ವಿಧಿಯಿಲ್ಲದೆ ತೆರಳುತ್ತಾಳೆ. ಭಾರತೀಯ ಕ್ರಿಕೆಟ್ ಟೀಮ್ ವಿಶ್ವಕಪ್ ಅನ್ನು ಗೆದ್ದ ಕ್ಷಣದಲ್ಲಿಯೇ ಜೋಯಾ ಹುಟ್ಟಿದ್ದು ಎಂದು ತಿಳಿದುಬಂದಾಗ ಕ್ರಿಕೆಟ್ ಟೀಮಿನ ಆಟಗಾರರು ಅಚ್ಚರಿಗೊಳ್ಳುತ್ತಾರೆ. ಆಕೆಯೊಂದಿಗೆ ಬೆಳಗಿನ ಉಪಹಾರ ಮಾಡಿ ಆಡಿದರೆ ಜಯ ಖಚಿತವೆಂದು ಅವರೆಲ್ಲ ನಂಬತೊಡಗುತ್ತಾರೆ. ಆದರೆ ಟೀಮಿನ ನಾಯಕನಿಗೆ ಈಕೆಯ ಬಗ್ಗೆ ಅತಿಯಾದ ಅಸಡ್ಡೆ. ಇತರ ಆಟಗಾರರ ನಂಬಿಕೆ ನಿಜವಾಗುತ್ತಿದ್ದಂತೆಯೆ ಜೋಯಾ ಪ್ರಸಿದ್ಧಿ ಪಡೆದುಬಿಡುತ್ತಾಳೆ. ವಿಶ್ವಕಪ್ ಸಮಯದಲ್ಲಿ ಭಾರತೀಯ ತಂಡದ ಜತೆ ಆಕೆಯನ್ನೂ ಕರೆದೊಯ್ಯಲಾಗುತ್ತದೆ. ಎಲ್ಲರೂ ಆಕೆಯನ್ನು ತಮ್ಮ ಜಾಹೀರಾತುಗಳಲ್ಲಿ ಪ್ರದರ್ಶಿಸಲು ಹಾತೊರೆಯಲು ಆರಂಭಿಸತೊಡಗುತ್ತಾರೆ.
ಅದ್ವೈತ ಕಲಾರವರ ‘ಆಲ್ಮೋಸ್ಟ್ ಸಿಂಗಲ್’ನ 29 ವರ್ಷದ ಆಯಿಶಾ ಭಾಟಿಯಾಗೆ ತನ್ನ ಬಾಸ್ ಬಗ್ಗೆ ಗಾಸಿಪ್ ಮಾಡುವುದೆಂದರೆ ಬಲು ಇಷ್ಟ. ದಪ್ಪಗಿನ ದೇಹದ ಆಯಿಶಾಳಿಗೆ ತನ್ನ ಆಫೀಸಿನ ಸುರಸುಂದರ ಕರಣ್ ವರ್ಮಾನ ಬಗ್ಗೆ ಅತೀವ ಆಸಕ್ತಿ. ಅರೇಂಜ್ಡ್ ಮದುವೆ ಆಕೆಗಿಷ್ಟವಿಲ್ಲ. ತನಗಿಷ್ಟವಿಲ್ಲದಿದ್ದವನನ್ನು ಒಪ್ಪಿಕೊಳ್ಳುವುದು ಆಯಿಶಾಳಿಂದ ಸಾಧ್ಯವಿಲ್ಲ. ನ್ಯೂಯಾರ್ಕಿನಿಂದ ತನಗೆ ತಕ್ಕ ಗಂಡನನ್ನು ಹುಡುಕುವ ಸಲುವಾಗಿ ಬಂದ ಅನಿತಾ ಜೈನ್ ತನ್ನ ಅನುಭವಗಳನ್ನು ‘ಮ್ಯಾರೀಯಿಂಗ್ ಅನಿತಾ’ದ ಮೂಲಕ ಹಂಚಿಕೊಂಡಿದ್ದಾರೆ. ತನ್ನ ಕುಟುಂಬದ ಹಿರಿಯ ಹೆಂಗಸರ ಮೂಲಕ ಮದುವೆಯ ಪ್ರಸ್ತಾವನೆಗಳನ್ನು ಹುಡುಕುವುದು ಎಂದುಕೊಂಡಿದ್ದ ಅನಿತಾ ಭೇಟಿಯಾಗುವ ಹೆಚ್ಚಿನ ಯುವಕಯುವತಿಯರು ‘ರಾಕ್‌ಬ್ಯಾಂಡ್ ಪ್ರಿಯರೂ, ದಿನನಿತ್ಯವೂ ಬಾರ್/ಪಬ್‌ಗಳಿಗೆ ಭೇಟಿನೀಡುವವರೂ, ಲೈಂಗಿಕ ಜೀವನದಲ್ಲಿ ಯಾವುದೇ ನಿಷ್ಟೆಯನ್ನು ಹೊಂದಿಲ್ಲದವರೂ’ ಆಗಿರುವುದನ್ನು ಕಂಡು ಅಚ್ಚರಿಯಾಗುತ್ತದೆ.
ಹೀಗೆ ಮಹಿಳೆಯರಿಂದ ಮಹಿಳೆಯರಿಗಾಗಿಯೇ ಹುಟ್ಟಿದ ಚಿಕ್‌ಲಿಟ್ ತನ್ನ ಕಾಲಮಾನದ ಆಧುನಿಕ ಜೀವನದ ಬಗ್ಗೆ ಬಹಳಷ್ಟನ್ನು ಹೇಳುತ್ತದೆ. ಕನ್ನಡದಲ್ಲಿ ಈ ಸಾಹಿತ್ಯಪ್ರಕಾರಕ್ಕೆ ಸಂಪೂರ್ಣವಾಗಿ ಹೊಂದುವ ರಚನೆಗಳು ಬಂದಿಲ್ಲವಾದರೂ, ಮಹಿಳೆಯರಿಂದ ಮಹಿಳೆಯರಿಗಾಗಿಯೆ ಬರೆಯಲಾದ ತಿಳಿಸಾಹಿತ್ಯ ನಮ್ಮಲ್ಲಾಗಲೇ ಬಂದುಹೋಗಿಯಾಗಿದೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು! ಇತ್ತೀಚೆಗೆ ಬ್ಲಾಗ್ ಮೂಲಕ ಕನ್ನಡದಲ್ಲಿ ಮತ್ತು ಕಂಗ್ಲೀಷಿನಲ್ಲಿ ಬರೆಯುವ ಹಲವು ಬರಹಗಾರ್ತಿಯರು ಪ್ರಜ್ಞಾಪೂರ್ವಕವಾಗಲ್ಲದಿದ್ದರೂ ಚಿಕ್‌ಲಿಟ್ ಎನ್ನಬಹುದಾದಂತಹ ಬರಹಗಳನ್ನು ಹೊರತರುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿರಿಯವರ ‘ಮಲ್ನಾಡ್ ಹುಡ್ಗಿ’, ಸೀಮಾ ಹೆಗಡೆಯವರ ‘ಐ ಆಮ್ ಥಿಂಕಿಂಗ್ ಅಲೌಡ್’, ಚಿತ್ರಾ ಕರ್ಕೇರ ಅವರ ‘ಶರಧಿ’, ಲಕ್ಷ್ಮೀಯವರ ‘ಜಿಂದಗೀ ಕಾಲಿಂಗ್’, ಶಾಂತಲಾ ಭಂಡಿಯವರ ‘ನೆನಪು ಕನಸುಗಳ ನಡುವೆ’, ಶ್ರೀಮಾತಾ ರಮಾನಂದರ ‘ಇರುವುದೆಲ್ಲವ ಬಿಟ್ಟು..’ ಮುಂತಾದವುಗಳನ್ನು ಪರಿಗಣಿಸಬಹುದು.
ಇತ್ತೀಚೆಗೆ ಬಿಡುಗಡೆಯಾದ ಚೇತನಾ ತೀರ್ಥಹಳ್ಳಿಯವರ ‘ಭಾಮಿನಿ ಷಟ್ಪದಿ’ಯನ್ನು ಚಿಕ್‌ಲಿಟ್ ಸಾಲಿಗೆ ಸೇರಿಸಬಹುದಾದರೂ ಕೆಲವೊಂದು ಬರಹಗಳು ಬಹಳ ಗಂಭೀರವಾಯಿತು ಅನ್ನಿಸುವುದೂ ನಿಜ. ತಿಳಿಹಾಸ್ಯ ಚಿಕ್‌ಲಿಟ್ ಸಾಹಿತ್ಯದ ಪ್ರಮುಖ ಲಕ್ಷಣವಾಗಿರುವುದೂ ಇದಕ್ಕೆ ಕಾರಣ. ಈ ಪುಸ್ತಕದ ಬರಹಗಳಲ್ಲಿ ಮಾತನಾಡುವ ಹಲವು ನಾಯಕಿಯರು ತಮ್ಮ ಜೀವನ, ಮದುವೆ, ಸಂಬಂಧ ಇತ್ಯಾದಿಗಳ ಬಗ್ಗೆ ಕೆಲವೊಮ್ಮೆ ತೀಕ್ಷ್ಣವಾಗಿ, ಕೆಲವೊಮ್ಮೆ ವಿಷಾದದಿಂದ, ಕೆಲವೊಮ್ಮೆ ವ್ಯಂಗ್ಯವಾಗಿ ಮಾತನಾಡುತ್ತಾರೆ. ಸಿರಿಯವರ ಹಲವು ಕಥೆಗಳು, ಬರಹಗಳು ಹೆಚ್ಚು ‘ಚಿಕ್‌ಲಿಟ್’ ಅನ್ನಿಸುವಂಥವು. ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ನಿಮ್ಮಿ ಕಾಲಂ’ ಬರಹಗಳು ಚಿಕ್‌ಲಿಟ್ ಕ್ಯಾಟಗರಿಗೆ ಹೆಚ್ಚು ಹೊಂದಿಕೊಳ್ಳುವಂಥವು. ಇದೇ ಸಮಯದಲ್ಲಿ ವೀಣಾ ಶಾಂತೇಶ್ವರರ ‘ಓ ಗಂಡಸರೇ ನೀವೆಷ್ಟು ಒಳ್ಳೆಯವರು!’ ಕೂಡ ನೆನಪಾಗದೆ ಇರದು. ಇವನ್ನೆಲ್ಲ ಬಿಟ್ಟು ಚಿಕ್‌ಲಿಟ್ ಹೆಣ್ಣನ್ನು ಅರಸಲು ಹೋದರೆ ಆಕೆಯನ್ನು ಬಹಳ ಚೆನ್ನಾಗಿ ಪ್ರತಿನಿಧಿಸುವುದು ಪೂರ್ಣಚಂದ್ರ ತೇಜಸ್ವಿಯವರು ನಳಿನೀ ದೇಶಪಾಂಡೆ ಎಂಬ ಹೆಸರಿನಿಂದ ಬರೆದ ‘ಲ್ಯಾಂಬ್ರಟಾ ವೆಸ್ಪಾ’ದ ಹುಡುಗಿಯೇ.
ಒಟ್ಟಿನಲ್ಲಿ ಹೇಳುವುದಾದರೆ ಚಿಕ್‌ಲಿಟ್ ಪ್ರಕಾರದಲ್ಲಿ ಕನ್ನಡದಲ್ಲಿನ ಸಾಧ್ಯತೆಗಳು ಸಾಕಷ್ಟಿವೆ. ಮಹಿಳಾ ಓದುಗವರ್ಗವೂ ಈ ರೀತಿಯ ಪುಸ್ತಕಗಳನ್ನು ಸಂತಸದಿಂದ ಬರಮಾಡಿಕೊಳ್ಳುವ ಚಾನ್ಸೂ ಜಾಸ್ತಿಯಿದೆ.
ಬರೆಯುವವರು ಬೇಕಷ್ಟೆ!!