ಮಳೆಯ ಆಹ್ಲಾದ ತುಂಬಿಕೊಂಡ ಹಾಡುಗಳು

ಮೊದಲ ಮಳೆ ಸುರಿದಾಗ

ಮನೆಯ ನುಣ್ಣನಂಗಳಕೆಲ್ಲ

ಪರಿಮಳದ ಮಾತು….

…ತೋಯ್ದು ತೊಟ್ಟಿಕ್ಕುತ್ತ ತೂಗುವ

ಬೇಸಿಗೆಯ ಚಪ್ಪರದಲ್ಲಿ

ಸ್ಥಿರಚಿತ್ರ ಕಡೆದಿಟ್ಟ ತಂಪುಗಾಳಿ                                                                                                                                                                                      

–      ಜಯಂತ ಕಾಯ್ಕಿಣಿ, ಮೂರನೇಯತ್ತೆಯ ಮೊದಲ ಮಳೆ, ರಂಗದೊಂದಿಷ್ಟು ದೂರ

ಆಗಸದಿಂದ ನಾಲ್ಕು ಹನಿ ಮಳೆ ಸುರಿಯಿತೊ ಇಲ್ಲವೊ, ಎಂದೂ ಕಣ್ಣೆತ್ತಿ ಕವಿತೆಗಳನ್ನೇ ಓದಿರದಂಥವರಿಗೂ ಕವಿಮನಸ್ಸು ಬಂದುಬಿಡುತ್ತದೆ. ಬೇಸಿಗೆಯ ತಾಪಕ್ಕೆ ಸಿಲುಕಿ ಸಣ್ಣಪುಟ್ಟದಕ್ಕೂ ಸಿಡುಕಿ ಗೊಣಗಾಡುತ್ತಿದ್ದವರೂ ಏಕ್‍ದಮ್ ’ಚಿಲ್’ ಆಗಿ ಓಡಾಡತೊಡಗುತ್ತಾರೆ. ಮಕ್ಕಳು ಅಮ್ಮಂದಿರ ಬೆಚ್ಚನೆ ಸ್ವೆಟರುಗಳ ಪ್ರೀತಿಗೆ ಒಡ್ಡಿಕೊಂಡು ಎಂದಿಗಿಂತ ಮೊದಲೇ ಕಂಬಳಿಗಳೊಳಗೆ ಸೇರಿಕೊಂಡರೆ, ಹರೆಯದ ಹುಡುಗಹುಡುಗಿಯರು ಮಳೆಯಲ್ಲಿ ಮಿಂದು ನೆಂದು ಬೆಚ್ಚಗಾಗುವ ನೆಪಗಳನ್ನೆ ಹುಡುಕತೊಡಗುತ್ತಾರೆ. ಮಳೆಯ ಟಪಟಪ ಸದ್ದು ಕೇಳುತ್ತ ನಿದ್ದೆಹೋಗುವ ನಿಶ್ಚಿಂತೆಗಿಂತ ಮಿಗಿಲಾದದ್ದೇನಿದೆ? ’ಮಳೆ’ ಎಂದ ತಕ್ಷಣ ನಮ್ಮಲ್ಲಿ ಮೂಡುವ ಭಾವಗಳ ಬಣ್ಣವೇ ಬೇರೆ. ಮಳೆಗೆ ಕರಗದ ಜೀವವೇ ಇಲ್ಲ!

ಜನಸಾಮಾನ್ಯರ ಮಳೆಯ ಬಗೆಗಿನ ಪ್ರೇಮವನ್ನು ಸಿನೆಮಾರಂಗವೂ ಚೆನ್ನಾಗಿ ಉಪಯೋಗಿಸಿಕೊಂಡಿದೆ. ಹಿಂದೀ ಸಿನೆಮಾಗಳಲ್ಲಂತೂ ಮಳೆಯನ್ನು ಹಲವಾರು ರೀತಿಗಳಲ್ಲಿ ಬಳಸಿಕೊಳ್ಳಲಾಗಿದೆ. ಹೆಚ್ಚಿಗಿನ ಹಿಂದೀ ಸಿನೆಮಾಗಳಲ್ಲಿ ಮಳೆಯನ್ನು ಬಳಸಿಕೊಂಡಿರುವುದು ನಾಯಕ-ನಾಯಕಿಯರ ನಡುವಿನ ಪ್ರೇಮವನ್ನು ತೋರ್ಪಡಿಸುವದಕ್ಕಾಗಿಯೋ ಇಲ್ಲವೆ ಹೀರೋಯಿನ್ನಳ ದೇಹಸಿರಿಯ ಪ್ರದರ್ಶನಕ್ಕಾಗಿಯೋ. ಹೆಚ್ಚಿನಪಾಲು ಈ ರೀತಿಯ ಮಳೆಸೀಕ್ವೆನ್ಸುಗಳು ಹಾಡುಗಳ ರೂಪ ಪಡೆದುಕೊಂಡಿರುವುದು ಸಾಮಾನ್ಯವಾಗಿ ಕಂಡುಬರುವಂಥದು. ಕೆಲವೊಮ್ಮೆ ಈ ’ರೈನ್ ಸಾಂಗ್’ಗಳು ಬಹಳ ಸುಂದರವಾಗಿ ಚಿತ್ರೀಕರಿಸಲ್ಪಟ್ಟು, ಉತ್ತಮ ಸಾಹಿತ್ಯ, ಸಂಗೀತ, ಹಾಡುಗಾರಿಕೆಗಳ ಮೂಲಕ ’ಕ್ಲಾಸಿಕ್’ ಸ್ಥಾನವನ್ನು ಪಡೆದುಕೊಂಡಿವೆ, ಕೆಲವು ’ಸ್ಲೀಜೀ’ ಲೆವೆಲ್ಲಿನ ಹಾಡುಗಳು ಪಡ್ಡೆಹುಡುಗರಿಗೆ ಕಚಗುಳಿಯಿಡುವಂತೆ ಮಾಡುತ್ತಲೇ ಎಲ್ಲರೂ ಗುನುಗುನಿಸುವಂತಿರುತ್ತವೆ, ಇನ್ನು ಕೆಲವು ವಿಪರೀತ ಆಘಾತಕಾರೀ ಮಟ್ಟದಲ್ಲಿದ್ದು ’ಮುಗಿದರೆ ಸಾಕು!’ ಎಂದುಕೊಳ್ಳುವಂಥ ಮುಜುಗರ ಹುಟ್ಟಿಸುತ್ತವೆ. ಹಿಂದೀ ಸಿನೆಮಾದ ಐವತ್ತರ ದಶಕದಿಂದೀಚೆಗಿನ ಕೆಲವು ಅತ್ಯುತ್ತಮ ಮಳೆಹಾಡುಗಳು ಇದೋ ನಿಮಗಾಗಿ.

೧. ಪ್ಯಾರ್ ಹುವಾ ಇಕ್‍ರಾರ್ ಹುವಾ ಹೈ: (ಸಾಹಿತ್ಯ: ಶೈಲೇಂದ್ರ, ದನಿ: ಮನ್ನಾ ಡೇ, ಲತಾ ಮಂಗೇಶ್ಕರ್, ಸಂಗೀತ: ಶಂಕರ್ ಜೈಕಿಶನ್)

ಮಳೆಹಾಡುಗಳ ಬಗ್ಗೆ ಮಾತನಾಡುವಾಗ  ’ಶ್ರೀ 420’ಯ ಈ ಸುಪ್ರಸಿದ್ಧ ಹಾಡನ್ನು ಹೆಸರಿಸದಿದ್ದರೆ ಅಪರಾಧ ಮಾಡಿದಂತೆಯೇ ಸರಿ!! 1955ರ ಈ ಚಲನಚಿತ್ರದ ಹಾಡು ಅಂದಿನ ಯುವಜನಾಂಗವನ್ನು ಹುಚ್ಚೆಬ್ಬಿಸಿದ್ದೇ ಅಲ್ಲ, ಪ್ರೇಮದ ಪರಿಭಾಷೆಯನ್ನೇ ಬದಲಿಸಿತೆಂದರೆ ತಪ್ಪಾಗದು. ಜನಪ್ರಿಯ ರಾಜ್ ಕಪೂರ್-ನರ್ಗೀಸ್ ಜೋಡಿ ಮಳೆಯಲ್ಲಿ ನಾವು ’ಅಜ್ಜನಕೊಡೆ’ ಎಂದು ಕರೆವಂಥ ದೊಡ್ಡಗಾತ್ರದ ಛತ್ರಿಯಡಿ ಪರಸ್ಪರ ದಿಟ್ಟಿಸುತ್ತ ನಡೆದುಕೊಂಡು ಹೋಗುವ ಸೀನ್ ಪ್ರೇಕ್ಷಕರ ಮನದಲ್ಲಿ ಅಳಿಸಲಾಗದ ಅಚ್ಚೊತ್ತಿತು. ಇಲ್ಲಿ ಮಳೆ ನಾಯಕ-ನಾಯಕಿಯರನ್ನು ಬೆಸೆಯುವ ಬಂಧವಾಗಿ ಕೆಲಸ ಮಾಡಿದೆ. ಜತೆಗೇ ಹಾಡಿನಲ್ಲಿ ಕಂಡುಬರುವ ಮಳೆಯಲ್ಲಿ ನೆನೆಯುತ್ತ ತನ್ನ ಚಾದುಕಾನಿನಲ್ಲಿ ತಾನೇ ಚಾ ಹೀರುತ್ತ ಕುಳಿತಿರುವ ಚಾಯ್‌ವಾಲಾ, ಮಳೆಯಲ್ಲಿ ರೇನ್‍ಕೋಟ್ ಧರಿಸಿ ಕೈಕೈಹಿಡಿದು ನಡೆದುಕೊಂಡು ಹೋಗುವ ಮಕ್ಕಳು, ಇವೆಲ್ಲ ಹಾಡಿಗೆ ವಿಶೇಷ ಮೆರುಗು ನೀಡಿದವು. ಮತ್ತೂ ಒಂದು ವಿಶೇಷವೆಂದರೆ ಇಲ್ಲಿ ಕಾಣಿಸಿಕೊಳ್ಳುವ ಮೂರೂ ಮಕ್ಕಳು ರಾಜ್‌ಕಪೂರರ ಮಕ್ಕಳು!!

೨. ಓ ಸಜ್‍ನಾ, ಬರ್‌ಖಾ ಬಹಾರ್ ಆಯಿ: (ಸಾಹಿತ್ಯ: ಶೈಲೇಂದ್ರ, ದನಿ: ಲತಾ ಮಂಗೇಶ್ಕರ್, ಸಂಗೀತ: ಸಲಿಲ್ ಚೌಧರಿ)

’ಪರಖ್’ ಚಲನಚಿತ್ರದ ಈ ಸುಮಧುರ ಗೀತೆ ಲತಾ ಮಂಗೇಶ್ಕರರ ಅತ್ಯುತ್ತಮ ಹಾಡುಗಳಲ್ಲೊಂದು ಮತ್ತು ಅವರ ಫೇವರಿಟ್ ಕೂಡಾ. 1960ರ ಬಿಮಲ್ ರಾಯ್ ನಿರ್ದೇಶನದ ಈ ಉತ್ತಮ ಚಲನಚಿತ್ರ  ಫಿಲ್ಮ್‍ಫೇರ್ ಪ್ರಶಸ್ತಿಯನ್ನು ಗಳಿಸಿಕೊಂಡಿತು. ಅದರ ಜತೆಗೇ ಈ ಹಾಡು ಕೂಡಾ ಅಜರಾಮರವಾಯಿತು. ಮಳೆಗಾಲದಲ್ಲಿ ನಮ್ಮ ಕಣ್ಣಿಗೆ ಕಾಣಬರುವ ಪ್ರಕೃತಿಯ ಬಹುತೇಕ ಅಂಶಗಳನ್ನೂ ಸುಂದರವಾಗಿ ಚಿತ್ರೀಕರಿಸಿರುವ ಈ ಹಾಡಿನಲ್ಲಿ ನಟಿ ಸಾಧನಾ ಭಾರತೀಯ ಮಹಿಳೆಯ ಸ್ನಿಗ್ಧ ಸೌಂದರ್ಯದ ಪ್ರತಿರೂಪವಾಗಿ, ಮಳೆಯಲ್ಲಿ ವಿರಹದಿಂದ ಬೇಯುವ ಪ್ರತಿಯೊಬ್ಬ ಯುವತಿಯ ಪ್ರತೀಕವಾಗಿ ಕಂಡುಬರುತ್ತಾರೆ. ಇಲ್ಲಿ ಆಕೆ ಮಳೆಯಲ್ಲಿ ನೆನೆಯುವದಿಲ್ಲ. ಮಳೆಗಾಲದ ಸೌಂದರ್ಯವನ್ನು ತನ್ನಷ್ಟಕ್ಕೆ ತಾನೇ ಆಸ್ವಾದಿಸುತ್ತ ಪ್ರೇಮಪರವಶಳಾಗುವ ಹೆಣ್ಣಿನ ಪಾತ್ರವನ್ನು ಸಾಧನಾ ಅದ್ಭುತವಾಗಿ, ಮಿತವಾಗಿ ಅಭಿನಯಿಸಿದ್ದಾರೆ.

೩. ರಿಮ್‍ಝಿಮ್ ಗಿರೆ ಸಾವನ್: (ಸಾಹಿತ್ಯ: ಯೋಗೇಶ್, ದನಿ: ಲತಾ ಮಂಗೇಶ್ಕರ್, ಸಂಗೀತ: ಆರ್.ಡಿ. ಬರ್ಮನ್)

ಅಮಿತಾಭ್, ಮೌಶುಮೀ ಚಟರ್ಜಿ ಅಭಿನಯಿಸಿರುವ ಬಾಸು ಚಟರ್ಜಿ ನಿರ್ದೇಶನದ ”ಮನ್‌‍ಜಿಲ್’(1979) ಚಲನಚಿತ್ರದಲ್ಲಿ  ಈ ಹಾಡಿನ ಎರಡು ವರ್ಶನ್‌ಗಳಿವೆ. ಒಂದನ್ನು ನಾಯಕ ಅಮಿತಾಭ್ ಸಂಗೀತದ ಮೆಹಫಿಲ್‌ನಲ್ಲಿ ಹಾಡಿದ್ದರೆ, ಇನ್ನೊಮ್ಮೆ ನಾಯಕಿ ನಾಯಕನೊಂದಿಗೆ ಮಳೆಯಲ್ಲಿ ನೆನೆಯುತ್ತಿರುವಾಗ ಹಿನ್ನೆಲೆಯಲ್ಲಿ ಅಕೆಯ ನಿವೇದನೆಯಂತೆ ಕೇಳಿಬರುತ್ತದೆ. ಇವೆರಡರಲ್ಲಿ ನನ್ನ ಮೆಚ್ಚಿನದು ಲತಾ ಹಾಡಿರುವ ಹಾಡು. ಇದರಲ್ಲಿ ನಾಯಕ, ನಾಯಕಿ ಮುಂಬಯಿಯ ಮಳೆಯಲ್ಲಿ ಪ್ರಪಂಚದ ಪರಿವೆಯೇ ಇಲ್ಲದಂತೆ ಆರಾಮವಾಗಿ ನೆನೆಯುತ್ತ ಆನಂದಿಸುತ್ತಿದ್ದಾರೆ. ಪ್ರಪಂಚವಿಡೀ ಮಳೆಗೆ ಕೊಡೆ ಹಿಡಿದುಕೊಂಡಿದ್ದರೆ ಇವರಿಬ್ಬರಿಗೆ ಮಾತ್ರ ಮಳೆಯ ಜತೆಯೇ ಹಿತವಾಗಿದೆ. ಇಲ್ಲಿ ಮಳೆಯು ನಾಯಕನ ಬಳಿಯಿರುವ ತನ್ನೊಳಗೆ ಹೊತ್ತಿಸುತ್ತಿರುವ ಬೆಂಕಿಯ ಬಗ್ಗೆ ನಾಯಕಿ ತೋಡಿಕೊಳ್ಳುತ್ತಿದ್ದಾಳೆ. ಮಳೆ, ಬೆಂಕಿ, ಗಾಳಿಗಳ ಈ ಹೊಸರೀತಿಯ ಬೆಸುಗೆಯ ಬಗ್ಗೆ ಅಚ್ಚರಿ ವ್ಯಕ್ತಪಡಿಸುವ ಈ ಹಾಡಿನ ಸಾಹಿತ್ಯ ಮತ್ತು ಚಿತ್ರೀಕರಣ ಎರಡೂ ಅತ್ಯುತ್ತಮವಾಗಿದೆ.

೪. ರಿಮ್‍ಝಿಮ್ ರಿಮ್‍ಝಿಮ್: (ಸಾಹಿತ್ಯ: ಜಾವೇದ್ ಅಖ್ತರ್, ದನಿ: ಕುಮಾರ್ ಸಾನು ಮತ್ತು ಕವಿತ ಕೃಷ್ಣಮೂರ್ತಿ, ಸಂಗೀತ: ಆರ್.ಡಿ. ಬರ್ಮನ್)

ವಿಧು ವಿನೋದ್ ಚೋಪ್ರಾ ನಿರ್ದೇಶನದ ’1942 ಎ ಲವ್ ಸ್ಟೋರಿ’ ಚಲನಚಿತ್ರದ ಈ ಹಾಡು ಭಾರತೀಯ ಚಲನಚಿತ್ರರಂಗದ ಲೆಜೆಂಡರಿ ಸಂಗೀತನಿರ್ದೇಶಕ ಆರ್. ಡಿ. ಬರ್ಮನ್‌ರ ಕೊನೆಯ ಹಾಡು ಕೂಡಾ. ಈ ಹಾಡು ಪ್ರೇಕ್ಷಕರಿಗೆ ಮೆಚ್ಚಿಗೆಯಾಗಿದ್ದು ಮುಗ್ಧಮುಖದ ನಾಯಕಿ ಮನಿಶಾ ಕೊಯಿರಾಲಾ ಮತ್ತು ನಾಯಕ ಅನಿಲ್ ಕಪೂರರ ನಡುವಿನ ಬೆಳ್ಳಿತೆರೆಯ ರೊಮ್ಯಾನ್ಸ್‍ನಿಂದಾಗಿ. ತನ್ನ ಪ್ರೇಮಿಕೆಯ ಜತೆಗಿರಬೇಕೆಂಬ ನಾಯಕನ ಕನಸು ನಿಜವಾಗಿದೆ. ಅದಕ್ಕೆ ಜತೆಯಾಗಿ ಮಳೆಯೂ ಸುರಿಯುತ್ತಿದೆ. ಇನ್ನೇನು ಬೇಕು ನಾಯಕನಿಗೆ? ತೊಂಭತ್ತರ ದಶಕದಲ್ಲಿ ಬಹಳ ಜನಪ್ರಿಯವಾದ ಹಾಡುಗಳಲ್ಲೊಂದು ಇದು. ಜಾವೇದ್ ಅಖ್ತರರ ಸಾಹಿತ್ಯ ಸರಳವೂ, ಆಪ್ತವೂ, ಕಾವ್ಯಮಯವೂ ಆಗಿದ್ದು ಬಹಳ ಪ್ರಶಂಸೆಗೊಳಗಾಯಿತು.

೫. ಭಾಗೇ ರೆ ಮನ್ ಕಹೀಂ: (ಸಾಹಿತ್ಯ: ಇರ್ಶಾದ್ ಕಾಮಿಲ್, ದನಿ: ಸುನಿಧಿ ಚೌಹಾನ್, ಸಂಗೀತ: ಸಂದೇಶ್ ಶಾಂಡಿಲ್ಯ)

ಸುಧೀರ್ ಮಿಶ್ರಾ ನಿರ್ದೇಶಿಸಿರುವ ’ಚಮೇಲಿ’ ಚಲನಚಿತ್ರದಲ್ಲಿ ಮಳೆಯದೇ ಮುಖ್ಯಪಾತ್ರ. ಮುಂಬಯಿಯ ಧಾರಾಕಾರ ಮಳೆಯ ಸಂಜೆಯೊಂದು ನಾಯಕ ಅಮನ್ ಕಪೂರ್(ರಾಹುಲ್ ಬೋಸ್) ಮತ್ತು ಕಾಮಾಟಿಪುರದ ವೇಶ್ಯೆ ಚಮೇಲಿ(ಕರೀನಾ ಕಪೂರ್)ಯರನ್ನು ಒಂದೇ ಸೂರಿನಡಿ ತಂದುನಿಲ್ಲಿಸುತ್ತದೆ. ಆಕೆಯನ್ನು ಕಂಡು ಮೊದಮೊದಲು ಅಸಹ್ಯಪಡುವ ಅಮನ್ ಆಕೆಯ ಮಾತು ಕೇಳುತ್ತ ಆಕೆಯ ಕಪ್ಪು ಪ್ರಪಂಚವನ್ನು ಕಾಣುತ್ತ ಬೆರಗಾಗತೊಡಗುತ್ತಾನೆ. ಹೀಗಿರುವಾಗ ಸುರಿವ ಮಳೆಯಲ್ಲಿ ಇದ್ದಕ್ಕಿದ್ದಹಾಗೆ ಒಂದು ಚೆಂದದ ಕನಸಿನಂತೆ ಹಾಡುತ್ತ ಸಂತಸಪಡುವ ಚಮೇಲಿ, ಆಕೆಯನ್ನು ಅಚ್ಚರಿಯಿಂದ ನೋಡುತ್ತ ಮುಗುಳ್ನಗುವ ಅಮನ್, ಮಳೆಗೆ ಸಿಲುಕಿ ಚೆಲ್ಲಾಚೆದರಾಗುವ ಜನರು, ಚಮೇಲಿಯ ಢಾಳಾಗಿ ಕಣ್ಣುಕುಕ್ಕುವ ನೀಲಿ-ಕೆಂಪು ದಿರಿಸು ಇವೆಲ್ಲವೂ ಬೆಳ್ಳಿತೆರೆಯನ್ನೇ ತೋಯಿಸಿಬಿಡುವಂತೆ ಭಾಸವಾಗುತ್ತದೆ. ಹಾಡು ಕಿವಿಗೆ ಹಿತವಾಗಿ ಮಾನ್ಸೂನಿನ ಮಳೆಯಂತೆಯೇ ಆವರಿಸಿಕೊಳ್ಳುತ್ತದೆ.

೬. ಗೀಲಾ ಗೀಲಾ ಪಾನಿ: (ಸಾಹಿತ್ಯ: ಗುಲ್ಜಾರ್, ದನಿ: ಲತಾ ಮಂಗೇಶ್ಕರ್, ಸಂಗೀತ: ವಿಶಾಲ್ ಭಾರದ್ವಾಜ್)

ರಾಮ್ ಗೋಪಾಲ್ ವರ್ಮಾ ನಿರ್ದೇಶನದ ’ಸತ್ಯಾ’ ಚಲನಚಿತ್ರದ ಈ ಹಾಡು ನನ್ನ ಪ್ರಕಾರ ಅತ್ಯಂತ ಸುಂದರವಾಗಿ ಚಿತ್ರೀಕರಿಸಲ್ಪಟ್ಟ ಮಳೆಹಾಡುಗಳಲ್ಲೊಂದು.  ನಾಯಕಿ ಊರ್ಮಿಳಾ ಮಾತೊಂಡ್ಕರ್ ಇದರಲ್ಲಿ ತಾನು ಪಕ್ಕಾ ನಾನ್-ಗ್ಲ್ಯಾಮರಸ್ ಅವತಾರದಲ್ಲಿಯೂ ಸೆನ್‍ಶ್ಯೂವಸ್ ಆಗಿ ಕಾಣಬಲ್ಲೆ ಎಂದು ತೋರಿಸಿಕೊಟ್ಟರು. ನಾಯಕಿಯ ಮೈಯನ್ನಪ್ಪುವ ಭಾರತೀಯ ಉಡುಗೆಯಾದ ಸೀರೆ ನಿಜವಾಗಿ ಎಷ್ಟು ಸುಂದರ ಎನ್ನುವದು ಈ ಹಾಡನ್ನು ನೋಡಿದರೆ ಮನವರಿಕೆಯಾದೀತು. ಮಳೆಯಲ್ಲಿ ತನ್ಮಯಳಾಗಿ ಹಾಡುವ ನಾಯಕಿ, ಮತ್ತು ಆಕೆಯನ್ನು ಕೇಳುತ್ತ ಕೂತ ಕೋಣೆಯಿಂದ ಹೊರದಿಟ್ಟಿಸುವ ನಾಯಕ – ಇವರಿಬ್ಬರ ಪ್ರಪಂಚಗಳ ನಡುವಿನ ವ್ಯತ್ಯಾಸಗಳನ್ನು ಈ ಸರಳ, ಸುಂದರ ಹಾಡಿನ ಮೂಲಕ ಕಂಡೂ ಕಾಣದಂತೆ ವ್ಯಕ್ತಪಡಿಸಲಾಗಿದೆ.

೭. ಟಿಪ್ ಟಿಪ್ ಬರ್‌ಸಾ ಪಾನೀ: (ಸಾಹಿತ್ಯ: ಆನಂದ್ ಬಕ್ಷಿ, ದನಿ: ಉದಿತ್ ನಾರಾಯಣ್ ಮತ್ತು ಅಲ್ಕಾ ಯಾಗ್ನಿಕ್, ಸಂಗೀತ: ವಿಜು ಶಾಹ್)

ಮೊಹ್ರಾ ಚಲನಚಿತ್ರದ ಈ ಹಾಡು ಇಂದಿಗೂ ಬಾಲಿವುಡ್‌ನ ಅತ್ಯಂತ ಸೆಕ್ಸೀ ಹಾಡುಗಳ ಲಿಸ್ಟಿನಲ್ಲಿ ಮುಂಚೂಣಿಯಲ್ಲಿದೆ. ಫಾರ್ ಎ ಛೇಂಜ್, ಈ ಮಳೆಯ ಸೀಕ್ವೆನ್ಸಿನಲ್ಲಿ ನಾಯಕಿ ನಾಯಕನನ್ನು ಒಲಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿರುವದನ್ನು ಮತ್ತು ಅದರಲ್ಲಿ ಯಶಸ್ವಿಯೂ ಆಗುತ್ತಿರುವದನ್ನು ಕಾಣಿಸಲಾಗಿದೆ. ನಾಯಕನೇನೋ ನೂರಾರು ಗೂಂಡಾಗಳನ್ನು ಸದೆಬಡಿಯುವವನಿರಬಹುದು. ಆದರೆ ಮಳೆ ಮತ್ತು ಹೀರೋಯಿನ್ನಿನ ಡೆಡ್ಲೀ ಕಾಂಬಿನೇಶನ್ ಅನ್ನು ನಾಯಕ ಎದುರಿಸಲು ಸಾಧ್ಯವೆ? ನಾಯಕಿ ರವೀನಾ ಮತ್ತು ನಾಯಕ ಅಕ್ಷಯ್ ಕುಮಾರರ ನಡುವಿನ ’ಕೆಮಿಸ್ಟ್ರಿ’ ಈ ಹಾಡಿನಲ್ಲಿ ಸುವ್ಯಕ್ತವಾಗಿದೆ.

೮. ಕೋಯೀ ಲಡ್‍ಕೀ ಹೈ: (ಸಾಹಿತ್ಯ: ಆನಂದ್ ಬಕ್ಷಿ, ದನಿ: ಉದಿತ್ ನಾರಾಯಣ್ ಮತ್ತು ಲತಾ ಮಂಗೇಶ್ಕರ್, ಸಂಗೀತ: ಉತ್ತಮ್ ಸಿಂಗ್)

ಸುಪರ್ ಹಿಟ್ ಸಂಗೀತಮಯ ಚಲನಚಿತ್ರವಾದ ’ದಿಲ್ ತೋ ಪಾಗಲ್ ಹೈ’ ತನ್ನ ಸಮಯದಲ್ಲಿ ಗಲ್ಲಾಪೆಟ್ಟಿಗೆಯ ಹಲವು ರೆಕಾರ್ಡುಗಳನ್ನು ಮುರಿಯಿತು. ಇದರ ಎಲ್ಲ ಹಾಡುಗಳೂ ಜನಜನಿತವಾದವು. ಮಳೆಯಲ್ಲಿ ಕುಣಿಯುವ ಮಕ್ಕಳ ಜತೆಗೇ ಕುಣಿವ ನಾಯಕ ನಾಯಕಿ ಒಬ್ಬರನ್ನೊಬ್ಬರು ಛೇಡಿಸುತ್ತಲೇ ಹತ್ತಿರವಾಗುವ ಸಂದರ್ಭ. ಇದಲ್ಲದೆ ಪಾದಕ್ಕೆ ಏಟುಮಾಡಿಕೊಂಡು ಆಸ್ಪತ್ರೆ ಸೇರಿಕೊಂಡು ದುಃಖಿತಳಾಗಿರುವ ನಾಯಕನ ಗೆಳತಿಯಲ್ಲಿ ಉತ್ಸಾಹ ತುಂಬುವ ಪ್ರಯತ್ನವೂ ಇಲ್ಲಿ ನಡೆಯುತ್ತದೆ. ಇದೆಲ್ಲವಕ್ಕೂ ಹಿನ್ನೆಲೆಯಾಗಿ ಮಳೆ. ಈ ಹಾಡಿನಲ್ಲಿ ಮಕ್ಕಳ ಮುಗ್ಧತೆ, ಪ್ರೇಮದ ಆರಂಭ ಮತ್ತು ಸ್ನೇಹದ ಬಾಂಧವ್ಯಗಳೆಲ್ಲವೂ ಒಟ್ಟಾಗಿ ಹೊಸದೊಂದು ವಾತಾವರಣವನ್ನೇ ನೇಯ್ದಿವೆ.

೯. ಬರ್‌ಸೋ ರೆ : (ಸಾಹಿತ್ಯ: ಗುಲ್ಜಾರ್, ದನಿ: ಶ್ರೇಯಾ ಘೋಷಾಲ್ ಮತ್ತು ಕೀರ್ತಿ, ಸಂಗೀತ: ಎ.ಆರ್.ರೆಹಮಾನ್)

“ಗುರು”ವನ್ನು ಮಣಿರತ್ನಂರ ಅತ್ಯುತ್ತಮ ಚಲನಚಿತ್ರಗಳಲ್ಲೊಂದು ಎಂದು ಪರಿಗಣಿಸಲಾಗುತ್ತದೆ. “ಬರ್‌ಸೋ ರೆ” ಯಲ್ಲಿ ಗುಲ್ಜಾರರ ಮಳೆಯ ಬಗೆಗಿನ ಮಗುವಿನಂತಹ ಸೆಳೆತ, ಐಶ್ವರ್ಯಾ ರೈಯ ಅಂತರ್ನಿಹಿತ ಚೆಲುವು, ಮೇಲುಕೋಟೆಯಂತಹ ಅಪರೂಪದ ಲೊಕೇಶನ್ನುಗಳ ನಿಗೂಢ ಸೌಂದರ್ಯ, ರೆಹಮಾನರ ಅಲೌಕಿಕ ಸಂಗೀತದ ಮೋಡಿ, ಮತ್ತು ಎಲ್ಲದಕಿಂತ ಹೆಚ್ಚಾಗಿ ಮಳೆಯ ಸದ್ದುಗದ್ದಲ ಎಲ್ಲವೂ ಕರಾರುವಾಕ್ಕಾಗಿ ಮೇಳೈಸಿವೆ. ಮಳೆಯಲ್ಲಿ ಕುಣಿದು ಕುಪ್ಪಳಿಸುವ ತುಂಟ ಗುಜರಾತೀ ಹುಡುಗಿಯ ಪಾತ್ರದಲ್ಲಿ ಐಶ್ವರ್ಯಾ ಈ ಹಾಡಿನ ಮೂಲಕ ಪ್ರೇಕ್ಷಕರಿಗೆ ಪರಿಚಯಿಸಲ್ಪಡುತ್ತಾರೆ. ನರ್ತಿಸುವ ನಾಯಕಿಗೂ, ಸುರಿವ ಮಳೆಗೂ ಇಲ್ಲಿ ಹೆಚ್ಚಿನ ವ್ಯತ್ಯಾಸವೇ ಕಾಣಬರದು. ಮಳೆಯ ಮತ್ತು ಹೆಣ್ಣಿನ ಲಾಸ್ಯ, ಚಂಚಲತೆ, ಸೌಂದರ್ಯಗಳ ನಡುವಿನ ಸಾಮ್ಯತೆಗಳನ್ನು ಈ ಹಾಡು ಕಾಣಿಸುತ್ತದೆ.

೧೦. ದೇಖೋ ನಾ: (ಸಾಹಿತ್ಯ: ಪ್ರಸೂನ್ ಜೋಶಿ, ದನಿ: ಸೋನು ನಿಗಮ್ ಮತ್ತು ಸುನಿಧಿ ಚೌಹಾನ್, ಸಂಗೀತ: ಜತಿನ್-ಲಲಿತ್)

“ಫನಾ” ಚಲನಚಿತ್ರದ ಈ ಹಾಡಿನಲ್ಲಿ ಮತ್ತೆ ಹಳೆಯ ಫಾರ್ಮುಲಾ  – ಮಳೆಯಲ್ಲಿ ನಾಯಕ ನಾಯಕಿಯರ ಮಿಲನ. ಇದರಲ್ಲಿ ಹೊಸದೇನಿದೆ ಎಂದು ನೀವು ಹುಬ್ಬೇರಿಸಬಹುದು. ಈ ಹಾಡಿನಲ್ಲಿ ಖ್ಯಾತ ಸಿನೆಮಾ ಛಾಯಾಗ್ರಾಹಕ ರವಿಚಂದ್ರನ್‍ರ ಮ್ಯಾಜಿಕ್ ಕೆಲಸ ಮಾಡಿದೆ. ಇಲ್ಲಿ ನಾಯಕಿ ಕಾಜೋಲಳ ಮೇಲೆ ಬೀಳುವ ಪ್ರತಿಯೊಂದು ಮಳೆಹನಿಯೂ ಪೋಣಿಸದ ಮುತ್ತಿನಂತೆ ಕಂಡುಬರುತ್ತದೆ. ನಾಯಕನ ಹಂಬಲ ಮತ್ತು ನಾಯಕಿಯ ಕಾತರ, ಭಯಗಳೊಂದಿಗೆ ಆರಂಭವಾಗುವ ಈ ಹಾಡು ಮುಗಿವುದರೊಳಗೆ ನಾಯಕನ ಮೋಡಿಗೆ ಸಿಲುಕಿದ ನಾಯಕಿ ತನ್ನ ಕಾಮನೆಗಳನ್ನು ಅಭಿವ್ಯಕ್ತಗೊಳಿಸುತ್ತಾಳೆ. ಈ ಹಾಡಿನ ಸಾಹಿತ್ಯ ಉತ್ಕೃಷ್ಟ ಮಟ್ಟದ್ದಾಗಿದ್ದು ಅಮೀರ್ ಖಾನ್ ಮತ್ತು ಕಾಜೋಲ್‌ರ ನಟನೆಯ ಬಗ್ಗೆ ಹೆಚ್ಚಿಗೆ ಹೇಳಬೇಕಾಗಿಲ್ಲ!!

ನಿಮ್ಮ ನೆನಪಿನ, ನಿಮ್ಮ ಮೆಚ್ಚಿನ ಮಳೆಹಾಡುಗಳಿದ್ದಲ್ಲಿ ಹಂಚಿಕೊಳ್ಳಿರಲ್ಲ!!

ಬಣ್ಣಗಳಲ್ಲಿ ಕರಗಿದವನ ಕ್ಯಾನ್ವಾಸು

ಮಿಕ್ ಡೇವಿಸ್ ನಿರ್ದೇಶನದ ಚಲನಚಿತ್ರ ‘ಮೌಡಿಗ್ಲಿಯಾನಿ’ (‘Modiglani’ –  ಇಟಾಲಿಯನ್ ಹಾಗೂ ಫ್ರೆಂಚ್ ಉಚ್ಛಾರಣೆಗೆ ಅನುಗುಣವಾಗಿ) 2004ರಲ್ಲಿ ಬಿಡುಗಡೆಯಾದಾಗ ವಿಮರ್ಶಕರೆಲ್ಲ ಅದನ್ನು ವಿಪರೀತವಾಗಿ ಟೀಕಿಸಿದರು. ಇಡೀ ಚಲನಚಿತ್ರ ಜಾಳುಜಾಳಾಗಿದೆ, ಬಿಬಿಸಿ ಚ್ಯಾನೆಲ್ಲಿಗೋಸ್ಕರ ನಿರ್ಮಿಸಿದಂತಿದೆ, ಅತಿ ಕೆಟ್ಟದಾಗಿದೆ, ಮೌಡಿಗ್ಲಿಯಾನಿಯನ್ನು ಬರೆ ಒಬ್ಬ ಹುಚ್ಚುಕಲಾವಿದನೆಂಬಂತೆ ಚಿತ್ರೀಕರಿಸಲಾಗಿದೆ – ಹೀಗೇ ಮುಂತಾದ ಹಲವಾರು ಅಪವಾದಗಳು ಚಲನಚಿತ್ರದ ಬಗ್ಗೆ ಕೇಳಿಬಂದವು. ನನ್ನ ಮಟ್ಟಿಗೆ ಹೇಳುವದಾದರೆ ಹೆಸರಾಂತ ವಿಮರ್ಶಕರ ಮಾತುಗಳನ್ನ ನಂಬಿ ನಾನು ಬಹಳ ಸಾರಿ ಮೋಸಹೋಗಿರುವದುಂಟು. ಕೆಲವರು ಒಂದು ಚಲನಚಿತ್ರವನ್ನು ಹೇಗೆಹೇಗೆಲ್ಲ ಕೆಟ್ಟಕೆಟ್ಟದಾಗಿ ಬೈಯಲು ಸಾಧ್ಯ ಅಂತ ತಿಳಿದುಕೊಳ್ಳಲು ಕೂಡ ನಾನು ಇಂತಹ ವಿಮರ್ಶೆಗಳನ್ನ ಓದಿ ತುಂಬ ಹೊತ್ತು ನಗಾಡುವುದು ಇದೆ. ನನಗೆ ಮೌಡಿಗ್ಲಿಯಾನಿಯ ಹೆಸರು ಪರಿಚಯವಾದದ್ದು ನನ್ನ ಮೆಚ್ಚಿನ ಕವಯಿತ್ರಿಯೊಬ್ಬಳು ಆತನ ಪ್ರೇಯಸಿಯಾಗಿದ್ದಳು ಅನ್ನುವ ಕಾರಣದಿಂದಾಗಿ. ಮೌಡಿಗ್ಲಿಯಾನಿ ಒಬ್ಬ ಪ್ರಖ್ಯಾತ ಕಲಾವಿದ, ವ್ಯಾನ್ಗೋನ ಜೀವನಕ್ಕೆ ಆತನ ಬದುಕನ್ನು ಹೋಲಿಸಲಾಗುತ್ತದೆ ಎಂದು ಕೂಡ ಎಲ್ಲೊ ಓದಿದೆ. ಆತನ ಕೆಲ ಚಿತ್ರಗಳ ಬಗ್ಗೆ, ಆತನ ಶೈಲಿಯ ಬಗ್ಗೆ ಕೂಡ ಕೊಂಚ ಮಾಹಿತಿ ದಕ್ಕಿತು. ಆಮೇಲೊಂದು ತಮಾಷೆಯಾಯಿತು. ಹೀಗೇ ಒಂದು ದಿನ ಚ್ಯಾನೆಲ್ ಸರ್ಫ್ ಮಾಡುತ್ತಿದ್ದಾಗ ಅದೇ ಹೆಸರಿನ ಚಲನಚಿತ್ರ ಶುರುವಾಗಿಬಿಡಬೇಕೆ? ಸುಮ್ಮನೆ ಕುತೂಹಲಕ್ಕೆ ಕೂತು ನೋಡಿದೆ. ಬರೆಯಲೆಬೇಕು ಅನ್ನಿಸಿತು.
‘ಮೌಡಿ’ ಅಂದರೆ ಫ್ರೆಂಚ್ ಭಾಷೆಯಲ್ಲಿ ‘ಶಾಪ’ ಎಂದು ಅರ್ಥ ಬರುತ್ತದಂತೆ. ಇಟಲಿಯಿಂದ ಪ್ಯಾರಿಸಿಗೆ ಬಂದು ನೆಲೆಸಿದ ಕಲಾವಿದ ಅಮೇದಿಯೋ ಕ್ಲಮೆಂತ್ ಮೌಡಿಗ್ಲಿಯಾನಿಯನ್ನು ಪ್ಯಾರಿಶಿಯನರು ‘ಮೌಡಿ’ ಎಂದೇ ಕರೆದರು. ಚಲನಚಿತ್ರ ಮೌಡಿಗ್ಲಿಯಾನಿಯ ಶಾಪಗ್ರಸ್ತ ಜೀವನದ ಕೊನೆಯ ಕೆಲ ವರುಷಗಳನ್ನು ಮಾತ್ರ ನೋಡುಗರಿಗೆ ಒದಗಿಸುತ್ತದೆ. ಚಲನಚಿತ್ರದ ಒಂದು ಫ್ಲ್ಯಾಶ್ ಮೌಡಿಗ್ಲಿಯಾನಿಯ ಹುಟ್ಟನ್ನು ತೋರಿಸುತ್ತದೆ. ಸ್ಥಳ, ಇಟಲಿದೇಶದ  ಟಸ್ಕನಿಯ ಲಿವೋರ್ನೊ. ಮೌಡಿಗ್ಲಿಯಾನಿಯ ತಂದೆ ಲೇವಾದೇವಿಯಲ್ಲಿ ದುಡ್ಡನ್ನೆಲ್ಲ ಕಳೆದುಕೊಂಡಿದ್ದಾನೆ. ಮನೆಯ ಎಲ್ಲ ವಸ್ತುಗಳನ್ನು ಹರಾಜು ಹಾಕಲು ಪೊಲೀಸರು ಮನೆಯೊಳಗೆ ನುಗ್ಗಿದ್ದಾರೆ. ಇಡಿ ಮನೆ ಖಾಲಿಯಾಗಿದೆ. ಮೌಡಿಗ್ಲಿಯಾನಿಯ ತಾಯಿಯ ಹೆರಿಗೆ ಮಂಚದ ಮೇಲೆ ಮನೆಯ ಆಳೊಬ್ಬ ಆತುರಾತುರವಾಗಿ ಬೇಕಾದ ಸಾಮಾನುಗಳನ್ನೆಲ್ಲ ಒಟ್ಟುತ್ತಿದ್ದಾನೆ. ಟಸ್ಕನಿಯ ಕಾನೂನಿನ ಪ್ರಕಾರ ಗರ್ಭಿಣಿಯ ಅಥವ ಹೆರಿಗೆಯಾಗುತ್ತಿರುವ ಹೆಂಗಸಿನ ಸಾಮಾನುಗಳನ್ನು ಸರ್ಕಾರ ವಶಪಡಿಸಿಕೊಳ್ಳುವಂತಿಲ್ಲ. ಇನ್ನೊಂದು ಫ್ಲ್ಯಾಶಿನಲ್ಲಿ ಮನೆಯ ಗೋಡೆಯ ಮೇಲೆ ಚಿತ್ರ ಬರೆದು ನುರಿತ ಕಲಾವಿದನಂತೆ ಕೆಳಗೆ ಸಹಿ ಮಾಡುವ ಪುಟ್ಟ ಅಮೇದಿಯೊ.
ಮತ್ತೆಲ್ಲ ಚಿತ್ರದುದ್ದಕ್ಕು ಕಾಣಬರುವದು ಮೊದಲನೆ ಮಹಾಯುದ್ಧ ನಂತರದ ಪ್ಯಾರಿಸ್, ಅಲ್ಲಿಯ ರಾತ್ರಿಜೀವನ, ಕಲ್ಲುಹಾಸಿನ ಬೀದಿಗಳು, ಅಲ್ಲಿನ ಕಲಾವಿದರೆಲ್ಲ ಒಟ್ಟುಸೇರುತ್ತಿದ್ದ ಸುಪ್ರಸಿದ್ಧ ಕೆಫೆ ಮತ್ತು ಮೌಡಿಗ್ಲಿಯಾನಿಯ ಅವಸಾನ. ಮೌಡಿಯ ನೋವುಗಳು ಹಲವಾರು ಬಗೆಯವು. ಬಾಲ್ಯದಿಂದಲು ಟಿ.ಬಿ.ಯಿಂದ ನರಳುತ್ತಿದ್ದ ಮೌಡಿಗ್ಲಿಯಾನಿಗೆ ತಾನು ಹೇಗಿದ್ದರು ಬೇಗದಲೆ ಸಾಯುವವ ಎಂದು ತಿಳಿದಿದ್ದು ಆತ ಹಲವಾರು ದುಶ್ಚಟಗಳಿಗೆ ತನ್ನನ್ನು ಒಡ್ಡಿಕೊಳ್ಳಲು ಕಾರಣವಾಯಿತು.  ಪ್ಯಾಬ್ಲೋ ಪಿಕಾಸೋನ ಸಮಕಾಲೀನನಾಗಿದ್ದ ಮೌಡಿಗ್ಲಿಯಾನಿಗೆ ಪಿಕಾಸೊನ ಬಗ್ಗೆ ವಿಚಿತ್ರವಾದ ಅಸಹನೆ. ಕೆಫೆ ರೊತೊಂದ್‌ನಲ್ಲಿ ಪಿಕಾಸೋನನ್ನು ಮೌಡಿಗ್ಲಿಯಾನಿ ಬಹಿರಂಗವಾಗಿ ಗೇಲಿ ಮಾಡಿದರೆ, ಪಿಕಾಸೋ ಔತಣಕೂಟವೊಂದರಲ್ಲಿ ಮೌಡಿಯನ್ನು ಕತ್ತಿಯಿಂದ ಇರಿದು ರಕ್ತಹರಿಸುವೆನೆಂದು ನಾಟಕೀಯವಾಗಿ ಘೋಷಿಸುತ್ತಾನೆ. ಇಬ್ಬರದೂ ಒಂದು ತರಹದ ಪ್ರೇಮ-ದ್ವೇಷಗಳ ಸಂಬಂಧ. ಪ್ಯಾರಿಸಿನ ಪ್ರತಿಷ್ಠಿತ ವಾರ್ಷಿಕ ಕಲಾಸ್ಪರ್ಧೆಯಲ್ಲಿ ಮೌಡಿಗ್ಲಿಯಾನಿ ಭಾಗವಹಿಸುವಂತೆ ಆತನ ಸ್ನೇಹಿತರು ಮಾಡುವ ಪ್ರಯತ್ನವೆಲ್ಲ ವ್ಯರ್ಥವಾಗುತ್ತದೆ. ಇಂಥ ಸ್ಪರ್ಧೆಗಳೆಲ್ಲ ತನ್ನ ಸಾಮಥ್ರ್ಯವನ್ನು ಅಳೆಯಲಾರವು ಎಂದು ನಂಬಿದವ ಮೌಡಿ. ತನ್ನ ಜೀವನದ ಬೆಲೆಬಾಳುವ ವರುಷಗಳನ್ನು ವ್ಯಯ ಮಾಡದಂತೆ ಪ್ರೇರೇಪಿಸಲು ಪಿಕಾಸೊ ಮೌಡಿಗ್ಲಿಯಾನಿಯನ್ನು ತನ್ನ ಕಾರಿನಲ್ಲಿ ಒಂದೆಡೆ ಕರೆದೊಯ್ಯುತ್ತಾನೆ. ವೈಭವೋಪೇತ ಬಂಗಲೆಯೊಂದನ್ನು ಪ್ರವೇಶಿಸುವ ಮೌಡಿಗ್ಲಿಯಾನಿಗೆ ಹಣ್ಣುಹಣ್ಣು ಮುದುಕನಾಗಿ ಕುಂಚ ಹಿಡಿವ ಶಕ್ತಿ ಕಳೆದುಕೊಂಡಿರುವ ಮಹಾನ್ ಕಲಾವಿದ ರೆನ್ವಾ ಕಂಡುಬರುತ್ತಾನೆ. ರೆನ್ವಾನ ಮನೆಯಿಂದ ಮರಳುವ ವೇಳೆ ಪಿಕಾಸೊ ಮತ್ತು ಮೌಡಿಗ್ಲಿಯಾನಿಯ ನಡುವೆ ನಡೆವ ಸಂಭಾಷಣೆ, ಗೇಲಿಮಾತು ಅವರ ಸಂಬಂಧದ ಪ್ರತೀಕಗಳಂತೆನ್ನಿಸುತ್ತವೆ.

ಮೌಡಿ - ನಿಜಜೀವನದ ಭಾವಚಿತ್ರ

ನಿರ್ಗತಿಕ ಕಲಾವಿದ ಸ್ನೇಹಿತರೊಂದಿಗೇ ಮಶ್ಕಿರಿ ಮಾಡಿಕೊಂಡು ಬೀದಿಬೀದಿ ತಿರುಗುವ ಮೌಡಿಗ್ಲಿಯಾನಿಯದು ನಾಳೆಯೆ ಇಲ್ಲ ಎನ್ನುವಂತೆ ಬಾಳುವ ಬೊಹೀಮಿಯನ್ ಬದುಕು. 1917ರ ಸುಮಾರಿಗೆ ಆತನಿಗೆ ಪರಿಚಯವಾದ ಹುಡುಗಿ ಝಾನ್. ಆಕೆಯ ಜತೆ ಕಳೆದ ವರುಷಗಳು ಮೌಡಿಗ್ಲಿಯಾನಿಯ ಜೀವನದ ಅತ್ಯಂತ ಪ್ರಮುಖ ಕಾಲಘಟ್ಟ. ಬೂರ್ಜ್ವಾ ಕ್ಯಾಥೊಲಿಕ್ ಕುಟುಂಬದ ಝಾನ್ ಯಹೂದಿಯಾಗಿದ್ದ ಮೌಡಿಗ್ಲಿಯಾನಿಯನ್ನು ಪ್ರೇಮಿಸಿದ್ದು, ಆತನೊಂದಿಗಿರುವುದು ಆಕೆಯ ಕುಟುಂಬದವರ ವಿರೋಧಕ್ಕೆ ಕಾರಣವಾಗುತ್ತದೆ. ಝಾನಳಿಗೆ ಒಂದು ಹೆಣ್ಣುಮಗುವೂ ಆಗುತ್ತದೆ. ಆದರೆ ಮೌಡಿಗೆ ತನ್ನ ವ್ಯಸನಗಳೇ ಹೆಚ್ಚು.  ಝಾನ್ ಆತನಿಂದ ಕೆಲಕಾಲ ದೂರವಾಗುತ್ತಾಳೆ. ಇದೇ ವೇಳೆಗೆ ಅತಿಯಾಗಿ ಮಾದಕವಸ್ತು ಸೇವಿಸಿ ಮತ್ತನಾಗಿರುವ ಮೌಡಿಯನ್ನು ಸೆರೆಮನೆಗೆ ಹಾಕಲಾಗುತ್ತದೆ. ಜತೆಗೇ ಪ್ರಿಯ ಸ್ನೇಹಿತನ ಸಾವು ಕಂಗೆಡಿಸುತ್ತದೆ. ಈ  ಸಮಯದಲ್ಲಿ ಬಿಂಬಿಸಲಾಗಿರುವ ಮೌಡಿಯ ನೋವು, ಅಸಹಾಯಕತೆಗಳಿಗೆ ಉಪಮೆಯೇ ಸಿಗದು. ಮೌಡಿಗ್ಲಿಯಾನಿಗೆ ಮಗುವನ್ನು ನೋಡಿಕೊಳ್ಳಲು ಶಕ್ತಿಯಿಲ್ಲವೆಂಬ ಕಾರಣ ನೀಡಿ ಝಾನಳ ಕುಟುಂಬ ಮಗುವನ್ನು ದೂರದೂರಿನ ಕಾನ್ವೆಂಟೊಂದಕ್ಕೆ ಸೇರಿಸುತ್ತದೆ. ಈಗ ಮೌಡಿ ಅಸಹಾಯಕ. ಹಣ ಬೇಕಾಗಿ ಬಂದಾಗ ಆತ ವಿಧಿಯಿಲ್ಲದೆ ವಾರ್ಷಿಕ ಕಲಾಸ್ಪರ್ಧೆಗೆ ಹೆಸರು ನೋಂದಾಯಿಸುತ್ತಾನೆ. ಆತನ ಹಿಂದೆಯೆ ಪಿಕಾಸೋ ಮತ್ತು ಕಲಾವಿದರ ಬಳಗದ ರಿವೆರಾ, ಸುತೀನ್ ಮುಂತಾದ ಸುಪ್ರಸಿದ್ಧ ಕಲಾವಿದರೆಲ್ಲರೂ!! ಈಗ ಮೌಡಿ ಗೆಲ್ಲಲೇಬೇಕು, ತನ್ನ ಪ್ರೀತಿಯ ಮಗಳಿಗಾಗಿ. ಪುನಹ ಗರ್ಭಿಣಿಯಾಗಿರುವ ಝಾನಳನ್ನೆ ಕ್ಯಾನ್ವಾಸಿಗೆ ಇಳಿಸುತ್ತಾನೆ. ಮೊತ್ತಮೊದಲಬಾರಿಗೆ ತನ್ನ ಜೀವನದ ಬಗ್ಗೆ ತೀವ್ರವಾಗಿ ಆಲೋಚಿಸುವ ಮೌಡಿ ಝಾನಳನ್ನು ಮದುವೆಯಾಗಲು ಬಯಸುತ್ತಾನೆ.
ಕಲಾಸ್ಪರ್ಧೆಯ ತೀರ್ಪಿನ ಸಂಜೆ. ಎಲ್ಲರ ಪೆಯಿಂಟಿಂಗುಗಳನ್ನು ತೆರೆಹಾಕಿ ಮುಚ್ಚಲಾಗಿದೆ. ತುಂಬುಗರ್ಭಿಣಿ ಝಾನ್, ಪಿಕಾಸೋ ಮುಂತಾಗಿ ಎಲ್ಲ ಕಲಾವಿದರೂ ನೆರೆದಿದ್ದಾರೆ. ಮೌಡಿ ಮಾತ್ರ ಅಲ್ಲಿ ಇಲ್ಲ. ಆತ ಮದುವೆಯ ಲೈಸೆನ್ಸಿಗಾಗಿ ನಗರಸಭೆಯ ಕಚೇರಿಗೆ ಧಾವಿಸಿದ್ದಾನೆ. ತಾನು ವಿಜಯಿಯಾಗುವ ದಿನವೇ ಝಾನಳನ್ನು ಮದುವೆಯಾಗುವ ಹಂಬಲ ಅವನದು. ಇತ್ತಕಡೆ ಇಡೀ ಪ್ಯಾರಿಸ್ ನಗರಿಯೇ ಚಿತ್ರಪಟಗಳ ತೆರೆ ಸರಿವ ಗಳಿಗೆಯನ್ನು ಉಸಿರು ಬಿಗಿಹಿಡಿದು ಕಾದಿದೆ. ಯಾರು ಗೆಲ್ಲಬಹುದು? ಮೌಡಿ ಝಾನಳನ್ನು ಮದುವೆಯಾಗುವನೆ? ದಯವಿಟ್ಟು ಚಲನಚಿತ್ರ ನೋಡಿ.
ಮೌಡಿಗ್ಲಿಯಾನಿಯ ಪಾತ್ರವಹಿಸಿರುವ ಆಂಡಿ ಗಾರ್ಶಿಯಾ ಹಾಗೂ ಪಿಕಾಸೋ ಪಾತ್ರವಹಿಸಿರುವ ಒಮಿದ್ ಜಲೀಲಿ ಉತ್ತಮವಾಗಿ ನಟಿಸಿದ್ದಾರೆ. ಝಾನಳ ಪಾತ್ರವಹಿಸಿರುವ ಎಲ್ಸಾ ಜಿಲ್ಬರ್ಸ್ಟೀನ್ ಮೌಡಿಗ್ಲಿಯಾನಿ ರಚಿಸಿರುವ ಸುಪ್ರಸಿದ್ಧ ಪೆಯಿಂಟಿಂಗಿನ ಝಾನಳಂತೆಯೆ ಕಾಣುತ್ತಾರೆ. ಸಂಗೀತ ಚಿತ್ರ ಮುಗಿದ ಮೇಲೂ ಕಾಡುತ್ತದೆ. ಕ್ಯಾಮೆರಾ ಕೆಲಸ ಉಚ್ಛ ಕ್ವಾಲಿಟಿಯದು. ಮುಖ್ಯ ಕೊರತೆ ಎಂದರೆ ಮೌಡಿಗ್ಲಿಯಾನಿಯ ಬಗ್ಗೆ ಏನೂ ಗೊತ್ತಿರದೆ ಚಿತ್ರ ನೋಡಲು ಕೂಡುವ ಪ್ರೇಕ್ಷಕರಿಗೆ ಉಂಟಾಗಬಹುದಾದ ಗೊಂದಲ. ಆತನ ವ್ಯಸನ, ವ್ಯಕ್ತಿತ್ವ ಹಾಗು ಕಲಾಶೈಲಿಗಳ ಬಗ್ಗೆ ಚಿತ್ರದಲ್ಲಿ ಹೆಚ್ಚಿನ ಮಾಹಿತಿ ಇದ್ದಿದ್ದರೆ ಚೆನ್ನಾಗಿತ್ತು ಅನ್ನಿಸುತ್ತದೆ. ತಾನು ಜೀವಿಸಿದ್ದಾಗ ಕೇವಲ ಒಂದು ಚಿತ್ರಪ್ರದರ್ಶನವನ್ನು ಮಾತ್ರ ಮಾಡಿದ್ದ, ಬಡತನದಲ್ಲಿಯೆ ಸತ್ತುಹೋದ ಮೌಡಿಗ್ಲಿಯಾನಿಯ ಚಿತ್ರಗಳಿಗೆ ಇಂದು ಮಿಲಿಯಗಟ್ಟಲೆ ಡಾಲರು ತೆತ್ತು ಕೊಳ್ಳುವವರಿದ್ದಾರೆ. ಆತನ ಮಗಳು ಝಾನ್ ಮೌಡಿಗ್ಲಿಯಾನಿಗೆ ಈ ಚಲನಚಿತ್ರವನ್ನು ಅರ್ಪಿಸಲಾಗಿದೆ.
ಚಿತ್ರಕೃಪೆ: http://www.misamcgll.ca ಮತ್ತು http://www.jokerartgallery.com

ಅಕ್ಕರೆಗೆ ಭೇದಭಾವವೆ? ಎಂದು ಪ್ರಶ್ನಿಸುವ ’ದ ಬ್ಲೈಂಡ್ ಸೈಡ್’

ನಿಜಜೀವನದಲ್ಲಿ ಮೈಕೆಲ್ ತನ್ನ ಅಪ್ಪ ಅಮ್ಮಂದಿರೊಂದಿಗೆ.. ಗೇಮ್ ಒಂದರ ಸಂದರ್ಭದಲ್ಲಿ..

ಬೆಂಗಳೂರಿನ ಬೀದಿಗಳಲ್ಲಿ ನಮ್ಮನಮ್ಮ ವಾಹನಗಳಲ್ಲಿ ಕೂತು ಓಡಾಡುವಾಗ ಕಳೆದುಹೋದ ಭಾವ ಹೊತ್ತು ಅದೂ ಇದೂ ಮಾರಿಕೊಂಡು ತಿರುಗಾಡುವ ಎಷ್ಟೊಂದು ಮಕ್ಕಳನ್ನು ನಾವು ನೋಡಿಲ್ಲ? ನಮ್ಮ ಮನೆಯ ಮಗು ಸಣ್ಣದೊಂದು ತರಚುಗಾಯ ಮಾಡಿಕೊಂಡರು ಒದ್ದಾಡುವ ನಾವು ತೊಂದರೆಯಲ್ಲಿರುವ ನೂರಾರು ಮಕ್ಕಳನ್ನು ಕಂಡೂ ಕಾಣದ ಹಾಗೆ ಮುಂದೆ ಸಾಗುತ್ತೇವೆ. ಪ್ರತಿದಿನ ಬೆಳಗ್ಗೆ ನಾವು ದಿನಪತ್ರಿಕೆಗಳಲ್ಲಿ ಕೊಂಚ ದುಡ್ಡು ವಿನಿಯೋಗಿಸಿ ಹಸಿದ ಮಕ್ಕಳಿಗೆ ಊಟ, ವಿದ್ಯೆ ನೀಡುವಂತೆ ಕೋರುವ ಜಾಹೀರಾತುಗಳನ್ನು ಕಾಣುತ್ತೇವೆ. ಹಾಗೇ ಮುಂದಿನ ಪುಟಕ್ಕೆ ಹೋಗುತ್ತೇವೆ. ಎಷ್ಟೋ ಮನೆಗಳಲ್ಲಿ ಸಣ್ಣ ಮಕ್ಕಳನ್ನು ಕೆಲಸಕ್ಕಿಟ್ಟುಕೊಂಡಿರುವುದನ್ನು ನೋಡಿಯೂ ನೋಡದಂತೆ ಇದ್ದುಬಿಡುತ್ತೇವೆ.  ಇಂತಹ ಮಕ್ಕಳಿಗೆಲ್ಲ ಸರಿಯಾದ ಶಿಕ್ಷಣ, ಸೂರು, ಹೊಟ್ಟೆತುಂಬ ಊಟ ದೊರಕಿದರೆ ಇವರ ನಡುವಿನಿಂದ ಅದೆಂತಹ ಪ್ರತಿಭೆಗಳು ಹೊರಹೊಮ್ಮುವವೊ? ಹೀಗೂ ಆಗಬಹುದು ಅನ್ನುವುದಕ್ಕೆ ಒಂದು ಚಲನಚಿತ್ರ ಸಾಕ್ಷಿಯಾಗಿದೆ.
ಮತ್ತು ಅದಕ್ಕೆ 2010ರ ಆಸ್ಕರ್ ಪ್ರಶಸ್ತಿ ದೊರಕಿದೆ.
‘ದ ಬ್ಲೈಂಡ್ ಸೈಡ್’ನ ಕಥೆ ನಿಜವಾಗಿ ನಡೆದಿದ್ದು. ಧೋ ಎಂದು ಸುರಿಯುತ್ತಿರುವ ಮಳೆಯಲ್ಲಿ ಒಂದು ರಾತ್ರಿ ತನ್ನ ಕುಟುಂಬದೊಂದಿಗೆ ಕಾರಿನಲ್ಲಿ ಮನೆಗೆ ವಾಪಾಸು ತೆರಳುತ್ತಿರುವ ಲೀ ಆನ್ ಮಳೆಯಲ್ಲಿ ನೆನೆದುಕೊಂಡು ಹೋಗುತ್ತಿರುವ ಕಪ್ಪು ಅಮೆರಿಕನ್ ಹುಡುಗನೊಬ್ಬನನ್ನು ಕಂಡು ಕಾರು ನಿಲ್ಲಿಸುತ್ತಾಳೆ. ಏನು ಕೇಳಿದರೂ ಉತ್ತರಿಸದ ಆ ಹುಡುಗನಿಗೆ ಅಂದು ರಾತ್ರಿ ಲೀ ಆನ್ ಮತ್ತವಳ ಪತಿ ಶಾನ್ ತಮ್ಮ ಮನೆಯಲ್ಲಿಯೇ ಆಶ್ರಯ ನೀಡುತ್ತಾರೆ. ಒಂದು ದಿನದ ಆಶ್ರಯ ಹಲವಾರು ದಿನಗಳವರೆಗೆ ಮುಂದುವರೆಯುತ್ತದೆ. ದೊಡ್ಡ ದೇಹದ ಮಗುವಾಗಿರುವ ಹುಡುಗ ಮೈಕೆಲ್ ಓಹೆರ್ ಬಗ್ಗೆ ಲೀ ಆನಳ ಭಾವನೆಗಳು ಕರುಣೆಯಿಂದ ಅಕ್ಕರೆಯೆಡೆಗೆ ಬದಲಾಗತೊಡಗುತ್ತವೆ. ಆಕೆಯ ಇಡೀ ಕುಟುಂಬ ಮೈಕೆಲನನ್ನು ತಮ್ಮ ಕುಟುಂಬದ ಸದಸ್ಯನಂತೆ ನಡೆಸಿಕೊಳ್ಳತೊಡಗುತ್ತಾರೆ. ಆತನನ್ನು ದತ್ತುತೆಗೆದುಕೊಳ್ಳಬೇಕೆಂದು ಬಯಸುವ ಲೀ ಆನ್ ಮೈಕೆಲನನ್ನು ಅಮೆರಿಕನ್ ಫುಟ್ಬಾಲ್ ಆಟದ ತರಬೇತಿಗೆ ಕರೆದೊಯ್ಯತೊಡಗುತ್ತಾಳೆ. ಅಲ್ಲಿ ಮೊದಮೊದಲು ಎಡವಿದರೂ ನಂತರ ಮೈಕೆಲ್ ತೋರಿಸುವ ಪ್ರಗತಿ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ.
ಆದರೆ ಎಲ್ಲವೂ ಅಂದುಕೊಂಡಷ್ಟು ಸುಲಭವಿಲ್ಲ.
ಹಾರ್ಲೆಮ್ಮಿನ ಕಪ್ಪು ಅಮೆರಿಕನ್ ಬೀದಿಗಳಿಂದ ಬಂದಿರುವ ಮೈಕೆಲ್ ಬಹಳ ಹಿಂಸಾಚಾರದಿಂದ ಕೂಡಿದ ದಿನಗಳನ್ನು ಕಂಡಿದ್ದವನು. ಆತನ ತಾಯಿಗೆ ಮದ್ಯಪಾನದ ವ್ಯಸನ. ಸುತ್ತಮುತ್ತಲು ದುಂಡಾವರ್ತಿ ಹುಡುಗರು. ಮೇಲಾಗಿ ಒಬ್ಬ ಶ್ರೀಮಂತವರ್ಗದ ಬಿಳಿಯ ಮಹಿಳೆ ಒಬ್ಬ ಕಪ್ಪುಜನಾಂಗದ ಹುಡುಗನನ್ನು ದತ್ತುತೆಗೆದುಕೊಳ್ಳುವುದೆಂದರೆ? ಹಲವಾರು ಹುಬ್ಬುಗಳು ಮೇಲೇರುತ್ತವೆ. ದತ್ತುತೆಗೆದುಕೊಳ್ಳುವಿಕೆಯನ್ನು ನಿರ್ವಹಿಸುವ ಮಹಿಳಾಧಿಕಾರಿಯೂ ಕೂಡ ಮೈಕೆಲ್ ಯಾವುದೋ ಒತ್ತಡದಲ್ಲಿದ್ದಾನೆಂದು,  ಮತ್ತು  ಲೀ ಆನಳ ಬಯಕೆಯ ಹಿಂದೆ ಬೇರಾವುದೋ ಲಾಭದ ದುರುದ್ದೇಶವಿದೆಯೆಂದು ಭಾವಿಸಿ ಮೈಕೆಲನ ಮೇಲೆ ಅನಾವಶ್ಯಕ ಒತ್ತಡ ಹೇರತೊಡಗುತ್ತಾಳೆ. ಮೈಕೆಲನ ಹಿಂದಿನ ಸಂಗಾತಿಗಳು ಆತನ ಬದಲಾದ ಜೀವನವನ್ನು ಕಂಡು ಹೀಯಾಳಿಸತೊಡಗುತ್ತಾರೆ. ಅವರ ಪ್ರಕಾರ ಬಿಳಿಯರು ನೀಡಿದ್ದೆಲ್ಲವೂ ಎಂಜಲೇ. ಅದನ್ನು ಸ್ವೀಕರಿಸುವುದು ಅವರಿಗೆ ಆಗಿಬರದು.
ಈ ಎಲ್ಲಾ ಅಂತರಿಕ, ಬಾಹ್ಯ ಒತ್ತಡಗಳ ನಡುವೆಯೂ ಲೀ ಆನ್ ಮತ್ತು ಮೈಕೆಲರ ನಡುವಿನ ತಾಯಿ-ಮಗನ ಬಾಂಧವ್ಯ ಗಟ್ಟಿಯಾಗಿ ಹೊರಹೊಮ್ಮುತ್ತದೆ. ಮಾನವೀಯತೆ, ಪ್ರೇಮ, ಅಕ್ಕರೆಗಳು ಬಣ್ಣ, ಜಾತಿ, ವರ್ಗ, ಧರ್ಮ ಏನನ್ನೂ ಬಯಸುವುದಿಲ್ಲ, ಎಲ್ಲವನ್ನೂ ಮೀರಿ ನಿಲ್ಲುತ್ತವೆ ಎಂಬುದನ್ನು ‘ದ ಬ್ಲೈಂಡ್ ಸೈಡ್’ ಸಫಲವಾಗಿ ತೋರುತ್ತದೆ. ಅದರ ಜತೆಗೇ ಇಂತಹ ಸಂಬಂಧಗಳನ್ನು ಪ್ರಪಂಚ ಯಾವ ರೀತಿ ಹಳದಿಕಣ್ಣಿಂದ ನೋಡುತ್ತದೆ ಎಂಬುದೂ ಇಲ್ಲಿ ವ್ಯಕ್ತವಾಗಿದೆ. ತನ್ನ ಮಗನನ್ನು ಆತನ ಪ್ರತಿಯೊಂದು ಹೆಜ್ಜೆಯಲ್ಲಿಯೂ ಬಿಡದೆ ಬೆಂಬಲಿಸುವ ಗಟ್ಟಿಮನಸ್ಸಿನ ತಾಯಿ ಲೀ ಆನಳ ಪಾತ್ರ ನಿರ್ವಹಿಸಿರುವ ನಟಿ ಸ್ಯಾಂಡ್ರಾ ಬುಲಾಕ್‌ಗೆ ಈ ಸಾರೆಯ ಆಸ್ಕರ್ ದೊರೆತಿದ್ದು ತಾಯಂದಿರಿಗೆ ದೊರೆತ ದೊಡ್ಡ ಗೌರವ ಎನ್ನಬಹುದು.
ತನ್ನ ಮಗನನ್ನು ಒಳ್ಳೆಯ ಕಾಲೇಜಿಗೆ ಸೇರಿಸುವ ಲೀ ಆನ್ ಆತನನ್ನು ಹಾಸ್ಟೆಲಿನಲ್ಲಿ ಒಂಟಿಯಾಗಿ ಬಿಟ್ಟುಹೋಗುವಾಗ ಕಾರಿನ ಬಳಿ ಒಂಟಿಯಾಗಿ ದುಖಿಸುವ ದೃಶ್ಯ ಮತ್ತು ಆಕೆಯನ್ನು ಮೈಕೆಲ್ ತನ್ನದೇ ರೀತಿಯಲ್ಲಿ ಸಂತೈಸುವ ದೃಶ್ಯಗಳು ಮನಸ್ಸಿಗೆ ತಾಗುತ್ತವೆ. ಎಲ್ಲಿಯೂ ಅತಿಯಾದ ಭಾವಾವೇಶವಿಲ್ಲದೆ ಸಮತೋಲನವನ್ನು ಕಾಪಾಡಿಕೊಂಡು ಸಾಗುವ ಚಲನಚಿತ್ರ ಮಾನವೀಯ ಸಂಬಂಧಗಳ ವೈಶಾಲ್ಯ ಮತ್ತು ಸಂಕೀರ್ಣತೆಯನ್ನು ಅವುಗಳ ಎಲ್ಲ ಬಣ್ಣಗಳೊಂದಿಗೆ ನಮ್ಮೆದುರು ಇಡುತ್ತದೆ. ಮೈಕೆಲ್ ಓಹೆರ್‌ನ ಪಾತ್ರ ವಹಿಸಿರುವ ಕ್ವಿಂಟನ್ ಏರನ್ ತನ್ನ ಮೌನದಿಂದಲೆ ಬಹಳಷ್ಟನ್ನು ಹೇಳುತ್ತಾರೆ. ಚಲನಚಿತ್ರ ಎಲ್ಲಿಯೂ ಬೇಸರ ಹುಟ್ಟಿಸದು.
ಲೀ ಆನಳಂತಹ ವೀರ ತಾಯಂದಿರಿಗೆ ವಂದನೆಗಳು.  ಆಕೆಯಂತಹವರಿಂದ ಬಹುಶಃ ನೂತನ ಸಂಸ್ಕೃತಿಗಳು ಹುಟ್ಟಿಕೊಳ್ಳುತ್ತವೆ ಮತ್ತು ಇದು ಆಕೆಯಂತಹ ಹಟಮಾರಿಗಳಿಂದ ಮಾತ್ರ ಸಾಧ್ಯ.
ಚಿತ್ರಕೃಪೆ: http://www.fanpop.com

ಶಿಕ್ಷಣದ ನಿಜವಾದ ಅರ್ಥ – ‘ಡೆಡ್ ಪೊಯೆಟ್ಸ್ ಸೊಸೈಟಿ’

deadpoetssociety5b15d1

Education is a progressive discovery of our own ignorance – Will Durant

’ನಾನು ಎಲ್ಲೇ ಸಿಕ್ಕಿದರು ವಂದಿಸುವುದು ಬೇಡ. ನನ್ನ ಕ್ಲಾಸಿನಲ್ಲಿ ನಿಮಗೆ ಇಷ್ಟ ಬಂದ ಕಡೆ ಕೂರಬಹುದು, ಕಾಫಿ, ಜ್ಯೂಸ್ ತರಬಹುದು, ಚ್ಯೂಯಿಂಗ್ ಗಂ ಅಗಿಯಬಹುದು. ನನ್ನ ಕ್ಲಾಸಿನಲ್ಲಿ ಹೇಗಾದರು ಇರಿ, ಆದರೆ ಪಾಠದ ಬಗ್ಗೆ ಮಾತನಾಡಲು ಆಗಲಿಲ್ಲವೆಂದರೆ ಆಚೆ ಹೊರಡಲು ತಯಾರಾಗಿರಿ.’ -ಎಂ.ಎ ಕ್ಲಾಸಿನ ಮೊದಲನೆ ದಿನ ಅಧ್ಯಾಪಕರೊಬ್ಬರು ನಮಗೆ ಹೀಗೆ ಹೇಳಿದಾಗ ನಾವು ಕಂಗಾಲಾಗಿದ್ದು ನಿಜ. ಅಲ್ಲಿಯತನಕ ‘ಗುರುವಿನ ಗುಲಾಮನಾಗುವತನಕ..’ ಅನ್ನುವ ಸಾಂಪ್ರದಾಯಿಕ ಶಿಕ್ಷಣಕ್ಕೆ ಒಗ್ಗಿಕೊಂಡಿದ್ದವರು ನಾವು. ಉತ್ತರಕ್ಕೆ ತಡವರಿಸಿದರೆ ಕೂಡಲೆ ಲೈಬ್ರರಿಗೆ ಓಡಿಹೋಗಿ ಉತ್ತರಕ್ಕೆ ರೆಫರೆನ್ಸು ಮಾಡಿಕೊಂಡು ವಾಪಾಸು ಬರಬೇಕಿತ್ತು. ಅಪ್ಪಿತಪ್ಪಿ ಅವರಿಗೆ ವಂದಿಸಿದರೆ ಮಾರನೆದಿನ ಟೀಕೆ ಕಾದಿರುತ್ತಿತ್ತು. ಅದರ ಜೊತೆಗೇ ಒಂದು ಕವಿತೆಯನ್ನು ಎಷ್ಟು ತರಹ ಓದಬಹುದು, ಒಂದು ಕಥೆ ಎಷ್ಟೆಲ್ಲ ಹೇಳದೆಯೆ ಏನೆಲ್ಲ ಹೇಳುತ್ತದೆ, ಕಾರ್ಟೂನುಗಳೂ ಉತ್ತಮ ಸಾಹಿತ್ಯವೇನೇ, ವಾಗ್ವಾದಗಳು ಜಗಳದ ರೂಪ ಪಡೆಯದೆಯೆ ಹೇಗೆ ಆರೋಗ್ಯಕರವಾಗಿರಬಹುದು, ವಿಮರ್ಶೆ ಹೇಗೆ ನಮ್ಮೆಲ್ಲರ ನಡುವಿಂದಲೆ ಹುಟ್ಟಿಬಂತು… ಹೀಗೆಲ್ಲ ಅವರ ತರಗತಿಯಲ್ಲಿ ದೊರೆತ ಶಿಕ್ಷಣ ಅಮೂಲ್ಯ. ಮೊದಮೊದಲು ಬದಲಾವಣೆಗೆ ಹೊಂದಿಕೊಳ್ಳಲು ಹಿಂಸೆಪಟ್ಟ ನಾವು ಎರಡು ವರುಷಗಳ ನಂತರ ಬೇರೆಯೆ ತರಹದ ಮನುಷ್ಯರಾಗಿ ಹೊಮ್ಮಿದ್ದು ಅಷ್ಟೇ ನಿಜ. ತನ್ನ ವಿದ್ಯಾರ್ಥಿಗಳ ಚಿಂತನೆ ಹಾಗೂ ಜೀವನವನ್ನೆ ಬದಲಿಸಿದ ಇಂತಹದೇ ಒಬ್ಬ ಅಪರೂಪದ ಅಧ್ಯಾಪಕನ ಕಥೆ ‘ಡೆಡ್ ಪೊಯೆಟ್ಸ್ ಸೊಸೈಟಿ’.

1959ರ ಕಾಲದ ಕಥೆ ಇದು. ವರ್ಮಾಂಟಿನ ವೆಲ್ಟ್ಟನ್ ಅಕ್ಯಾಡೆಮಿ ಒಂದು ಪ್ರತಿಷ್ಠಿತ ವಿದ್ಯಾಸಂಸ್ಥೆ. ಇಲ್ಲಿ ಕಲಿಯುವವರು ಅಮೆರಿಕದ ಸಿರಿವಂತ ಪರಿವಾರಗಳ ಹುಡುಗರು. ಸಂಪ್ರದಾಯ, ಘನತೆ, ಶಿಸ್ತು, ಉತ್ಕೃಷ್ಟತೆಗಳನ್ನೆ ಧ್ಯೇಯವಾಗಿರಿಸಿಕೊಂಡ ಶಾಲೆಯಲ್ಲಿ ಹೊಸದಾಗಿ ಸೇರಿಕೊಳ್ಳುವ ಹುಡುಗರು ನೀಲ್, ಟಾಡ್, ನಾಕ್ಸ್, ಚಾರ್ಲಿ, ರಿಚರ್ಡ್, ಸ್ಟೀವನ್ ಮತ್ತು ಜೆರಾರ್ಡ್. ಮೊದಲನೆ ದಿನ ಶಾಲೆಯ ಪ್ರಾಂಶುಪಾಲ ಗೇಲ್ ನೋಲನ್(ನಾರ್ಮನ್ ಲಾಯ್ಡ್) ಹುಡುಗರಿಗೆ ಅಕ್ಯಾಡೆಮಿಯ ಪಕ್ಕಾ ಸಾಂಪ್ರದಾಯಿಕ ಶಿಕ್ಷಣಕ್ರಮದ ಬಗ್ಗೆ ಪರಿಚಯ ನೀಡುತ್ತಾನೆ. ಆದರೆ ಹೊಸ ಆಂಗ್ಲ ಅಧ್ಯಾಪಕ ಜಾನ್ ಕೀಟಿಂಗ್(ರಾಬಿನ್ ವಿಲಿಯಮ್ಸ್) ಹುಡುಗರನ್ನು ತನ್ನ ವಿಚಾರಗಳಿಂದ ದಿಗ್ಮೂಢರನ್ನಾಗಿಸುತ್ತಾನೆ. ಕ್ಲಾಸಿನ ಮೊದಲನೆ ದಿನ ರಾಗವಾಗಿ ಶಿಳ್ಳೆಹಾಕುವ ಮೂಲಕ ಪಾಠವನ್ನು ಮನನ ಮಾಡಲಾಗುತ್ತದೆ. ಕವಿತೆಯ ಬಗ್ಗೆ ಆಂಗ್ಲಸಾಹಿತ್ಯ ಪರಿಣಿತನೊಬ್ಬ ಬರೆದಿರುವ ಪ್ರಬಂಧವೊಂದನ್ನು ಓದುವಂತೆ ನೀಲ್ ಗೆ ಹೇಳುವ ಜಾನ್ ಕೀಟಿಂಗ್, ಪ್ರಬಂಧದ ಗಣಿತಾತ್ಮಕ ಯಾಂತ್ರಿಕತೆಯನ್ನು ಎತ್ತಿತೋರಿಸಿ ಆ ಪ್ರಬಂಧವನ್ನು ಹರಿದುಹಾಕಲು ಹುಡುಗರಿಗೆ ತಿಳಿಸುತ್ತಾನೆ!! ವಿದ್ಯಾರ್ಥಿಗಳನ್ನು ಡೆಸ್ಕಿನ ಮೇಲೆ ಹತ್ತಿನಿಂತು ಪ್ರಪಂಚವನ್ನು ಬೇರೆಯೆ ರೀತಿಯಲ್ಲಿ ನೋಡಲು, ತಮ್ಮ ಪೂರ್ವಗ್ರಹಗಳಿಂದ ಹೊರಬರಲು ಉತ್ತೇಜಿಸುತ್ತಾನೆ. ಹುಡುಗರು ಮೊದಲು ಹಿಂಜರಿದರು ನಂತರ ಖುಶಿಯಾಗಿ ಮುಂದೆ ಬರುತ್ತಾರೆ. ಅಧಿಕಾರ ದೊರಕುವುದು ಅದನ್ನು ಚಲಾಯಿಸಲು ಮಾತ್ರವಲ್ಲ, ಅದರಿಂದ ಇತರರು ಬೆಳೆಯಲು ಮಾರ್ಗದರ್ಶನ, ಸಹಾಯ ನೀಡಬೇಕೆನ್ನುವುದು ಅವರು ಕೀಟಿಂಗನಿಂದ ಕಲಿಯುವ ಅತ್ಯಮೂಲ್ಯ ಪಾಠ.

ನಿಜವಾದ ಅರ್ಥದಲ್ಲಿ ಬೆಳೆಯತೊಡಗುತ್ತಾರೆ ವೆಲ್ಟನಿನ ಹುಡುಗರು. ಕೀಟಿಂಗನ ಶಿಕ್ಷಣ ಅವರನ್ನು ಹೊಸದೇನನ್ನಾದರು ಮಾಡುವಂತೆ ಪ್ರೇರೇಪಿಸುತ್ತದೆ. ಕೀಟಿಂಗ್ ವೆಲ್ಟನಿನ ವಿದ್ಯಾರ್ಥಿಯಾಗಿದ್ದಾಗ ಹುಟ್ಟುಹಾಕಿದ್ದ ‘ಡೆಡ್ ಪೊಯೆಟ್ಸ್ ಸೊಸೈಟಿ’ ಎಂಬ ರಹಸ್ಯ ಸಂಘವನ್ನು ಈ ಹುಡುಗರು ಪುನರ್ರಚಿಸುತ್ತಾರೆ. ವೆಲ್ಟನಿನಲ್ಲಿ ಒಂದು ಸಣ್ಣ ಕ್ರಾಂತಿಯೇ ನಡೆದುಹೋಗುತ್ತದೆ. ಟಾಡ್ ತನಗೆ ಸರಿತೋಚದ್ದನ್ನು ನಿರಾಕರಿಸುವ ಧೈರ್ಯ ತೊರುತ್ತಲೆ ತನ್ನೊಳಗೆ ಅಡಗಿದ್ದ ಲೇಖಕನನ್ನು ಹೊರಹಾಕುತ್ತಾನೆ. ತನ್ನ ಆಲಸೀಪ್ರವೃತ್ತಿಯನ್ನು ಬಿಡುವ ಚಾರ್ಲಿ ತನ್ನ ವ್ಯಕ್ತಿಸ್ವಾತಂತ್ರ್ಯವನ್ನು ತೋರುವ ಹಂಬಲದಲ್ಲಿ ಕಾಲೇಜಿನಲ್ಲಿ ಹುಡುಗಿಯರಿಗೂ ಪ್ರವೇಶ ನೀಡಬೇಕೆಂದು ಸಾರುತ್ತಾನೆ. ನೀಲ್ ತನ್ನ ತಂದೆಯ ಇಚ್ಛೆಗೆ ವಿರುದ್ಧವಾಗಿ ಮೊದಲಸಾರಿ ಶೇಕ್ಸ್ ಪಿಯರನ ‘ಎ ಮಿಡ್ಸಮರ್ ನೈಟ್ಸ್ ಡ್ರೀಂ’ ನಾಟಕ ಸೇರಿ ಅಮೋಘವಾಗಿ ಅಭಿನಯಿಸುತ್ತಾನೆ. ನಾಕ್ಸ್ ರಮ್ಯತೆಯ ಬಗೆಗೆ ಅಡಗಿಸಿಟ್ಟಿದ್ದ ತನ್ನ ಒಲವನ್ನು ಪೋಷಿಸತೊಡಗುತ್ತಾನೆ, ಬುದ್ಧಿಜೀವಿಯಾಗಿದ್ದ ಸ್ಟೀವನ್ ತನ್ನ ಭಾವನೆಗಳನ್ನು ತೆರೆದಿಡಲು ಕಲಿಯುತ್ತಾನೆ. ಈ ಬದಲಾವಣೆಗಳು ಕಾಲೇಜಿನ ಅಧಿಕಾರದ ಚುಕ್ಕಾಣಿ ಹಿಡಿದಿರುವವರಿಗೆ ಸರಿಕಾಣುವದಿಲ್ಲ. ಚಾರ್ಲಿಯ ವಿಚಿತ್ರ ಅಪೇಕ್ಷೆಯ ಬಗ್ಗೆ ತನಿಖೆ ನಡೆಸುವ ಪಾಂಶುಪಾಲ ನೋಲನ್ ಚಾರ್ಲಿಯ ಹಿಂದೆ ಇರುವವರಾರು ಎಮದು ತಿಳಿದುಕೊಳ್ಳಲು ಯತ್ನಿಸಿ ವಿಫಲನಾಗುತ್ತಾನೆ. ನೀಲ್ ನ ತಂದೆ ಆತನನ್ನು ವೆಲ್ಟನ್ ಅಕ್ಯಾಡೆಮಿಯಿಂದ ತೆಗೆದು ಮಿಲಿಟರಿ ಕಾಲೇಜಿಗೆ ಕಳಿಸಲು ಯತ್ನಿಸಿದಾಗ ಸಹಿಸದ ನೀಲ್ ತಂದೆಯ ರಿವಾಲ್ವರ್ ಬಳಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ನೀಲ್ ನ ತಂದೆ ಆತನ ಸಾವಿನ ಬಗ್ಗೆ ಶಾಲೆಯಲ್ಲಿ ತನಿಖೆ ನಡೆಯಿಸುತ್ತಾನೆ. ನೋಲನ್ ನೀಲ್ ನ ಗೆಳೆಯ ರಿಚರ್ಡನಿಂದ ‘ಡೆಡ್ ಪೊಯೆಟ್ಸ್ ಸೊಸೈಟಿ’ಯ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳುತ್ತಾನೆ. ಕೀಟಿಂಗನನ್ನು ನೀಲ್ ನ ಸಾವಿಗೆ ಜವಾಬ್ದಾರನಾಗಿ ಮಾಡಿ ಹುದ್ದೆಯಿಂದ ಅಮಾನತುಗೊಳಿಸಲಾಗುತ್ತದೆ. ರಿಚರ್ಡನ ದ್ರೋಹದ ಬಗ್ಗೆ ತಿಳಿದು ಆತನ ಮೇಲೆ ಆಕ್ರಮಣ ಮಾಡುವ ಚಾರ್ಲಿಯನ್ನು ವೆಲ್ಟನಿನಿಂದ ಹೊರದೂಡಲಾಗುತ್ತದೆ. ಕೀಟಿಂಗನ ಪ್ರಯತ್ನ ವ್ಯರ್ಥವಾಗುವುದೆ? ವೆಲ್ಟನಿನ ಶಿಕ್ಷಣ ಸಂಪ್ರದಾಯದ ಮುಷ್ಟಿಯಲ್ಲಿ ಸಿಕ್ಕಿ ನಲುಗಿಹೋಯಿತೆ? ಮುಂತಾದ ಪ್ರಶ್ನೆಗಳು ನೋಡುಗರನ್ನು ಬಾಧಿಸುತ್ತವೆ.

ಚಲನಚಿತ್ರದ ಕೊನೆಯ ಭಾಗ. ನೋಲನ್ ಹುಡುಗರಿಗೆ ಆಂಗ್ಲ ಸಾಹಿತ್ಯ ಕಲಿಸುತ್ತಿದ್ದಾನೆ ಕೀಟಿಂಗ್ ಹರಿದುಹಾಕಲು ಉತ್ತೇಜಿಸಿದ ಪ್ರಬಂಧವನ್ನೆ ತರಗತಿಯಲ್ಲಿ ಓದಲಾಗುತ್ತಿದೆ. ಕೀಟಿಂಗ್ ತನ್ನ ವಸ್ತುಗಳನ್ನು ತೆಗೆದುಕೊಳ್ಳಲು ತರಗತಿ ಪ್ರವೇಶಿಸುತ್ತಾನೆ. ಇದ್ದಕ್ಕಿದ್ದಂತೆ ಟಾಡ್ ಎದ್ದುನಿಂತು ಕೀಟಿಂಗನಲ್ಲಿ ತಾವು ಆಡಳಿತಮಂಡಳಿಯ ಪಕ್ಷ ವಹಿಸಿದ್ದಕ್ಕಾಗಿ ಕ್ಷಮೆ ಯಾಚಿಸುತ್ತಾನೆ. ಕುಪಿತ ನೋಲನ್ ಟಾಡನಿಗೆ ಕಾಲೇಜಿನಿಂದ ಹೊರಹಾಕುವ ಬೆದರಿಕೆ ಒಡ್ಡುತ್ತಾನೆ. ಆದರೂ ಸುಮ್ಮನಾಗದ ಟಾಡನ ಜತೆಗೆ ತರಗತಿಯ ಹುಡುಗರೆಲ್ಲ ಸೇರಿಕೊಳ್ಳುತ್ತಾರೆ. ತಮ್ಮ ಡೆಸ್ಕುಗಳ ಮೇಲೆ ಹತ್ತಿನಿಂತು ಕೀಟಿಂಗನನ್ನು ‘ಓ ಕ್ಯಾಪ್ಟನ್! ಮೈ ಕ್ಯಾಪ್ಟನ್!’ (ವಾಲ್ಟ್ ವಿಟ್ಮನ್ ಲಿಂಕನನ ಬಗ್ಗೆ ಬರೆದ ಸುಪ್ರಸಿದ್ಧ ಕವಿತೆಯ ಸಾಲು) ಎಂದು ಸಂಬೋಧಿಸುತ್ತಾರೆ. ಎಲ್ಲರನ್ನೂ ಹೊರದೂಡಲು ಸಾಧ್ಯವಿಲ್ಲದಲೆ ನೋಲನ್ ಅಸಹಾಯಕನಾಗಿ ನಿಲ್ಲುತ್ತಾನೆ. ಕೀಟಿಂಗನ ಮುಖದ ಮೇಲೆ ತೆಳುನಗೆಯೊಂದು ಮೂಡುತ್ತದೆ.

ಚಿತ್ರಕೃಪೆ: www.ingebjorg.dk

’ಮಠ’ ಚಲನಚಿತ್ರ – ನನ್ನ ಕಮೆಂಟರಿ

ನಾವಡರು ಇನ್ನೇನು ನನಗೆ ಬಯ್ಯುವುದೊಂದು ಬಾಕಿ – ’ಮೂವೀಸ್ ಬಗ್ಗೆ ಇತ್ತೀಚೆಗೆ ಬರ್ದೇ ಇಲ್ವಲ್ರಿ? ಸುಮಾರು ದಿನಾ ಆಯಿತು’ ಅಂತ ಹೇಳ್ತಿದ್ರು. ನಂಗೂ ಈಗಷ್ಟೆ ಸ್ನೇಹಿತ ಸತೀಶ್ ಗೌಡ “ಸಂವಾದ ವೆಬ್ಸೈಟಿನಲ್ಲಿ ನಿಮ್ಮ ರೆವ್ಯೂ ನೋಡಿದೆ’ ಅಂತ ಮೆಸೇಜಿಸಿದರು. ಇದೇ ಸರಿಯಾದ್ ಟೈಮು ಅನ್ಕೊಂಡು ನಿಮ್ಗೂ ಲಿಂಕು ಕೊಡ್ತಿದೀನಿ,  ಮೂವೀ ನೋಡಿದೀನಿ ಅಂದಕೂಡಲೆ ಪಟ್ಟುಬಿಡದೆ ಬರೆಸಿದ ಅರೇಹಳ್ಳಿ ರವಿಯವರಿಗೆ ಧನ್ಯವಾದಗಳ ಜತೆ. ಹೇಗಿದೆ ಅಂತ ನೀವು ಹೇಳೇ ಹೇಳ್ತೀರ. ನನಗ್ಗೊತ್ತು!!