“ಸದ್ದಿನ ವಿಶ್ವವೊಂದು ಒಳಗೇ
ಸದ್ದಿಲ್ಲದೆ ಹೋಳಾಗುತಿರುವಾಗ
ಒಳ ಅಂಚಿನಲ್ಲಿ ತುದಿಗಾಲಿನಲಿ ನಿಂತು
ಇನಿತೂ ಹೊರಜಾರದಂತೆ ಅದರ
ನಿರಾಕಾರ ಚೂರುಗಳ ಹಿಡಿದಿಟ್ಟುಕೊಳ್ಳುವುದು”
– ’ವಾಕ್ ಮನ್’, ಜಯಂತ ಕಾಯ್ಕಿಣಿ
ಈಗ ಈ ಕವಿತೆಯ ಸಾಲುಗಳು ವಾಕ್ಮನ್ನಿಗೆ ಬದಲಾಗಿ ನಮ್ಮ ಲೇಟೆಸ್ಟ್ ’ಸಂಗೀತ ಸಾಧನ’ಗಳಾಗಿರುವ ಐಪಾಡ್ ಮತ್ತು ಮೊಬೈಲುಗಳಿಗೆ ಹೆಚ್ಚು ಅನ್ವಯಿಸಬಹುದು ಅಂದುಕೊಳ್ಳುತ್ತೇನೆ. ನನ್ನ ಪಾಲಿಗೆ ಮಾತ್ರ ಈ ಮೇಲಿನ ಸಾಲುಗಳು ಬಲು ಅಚ್ಚುಮೆಚ್ಚಿನವು. ತುಮಕೂರು-ಬೆಂಗಳೂರುಗಳ ನಡುವೆ ಕಳೆದ ಐದು ವರ್ಷಗಳಿಂದ ಓಡಾಡುತ್ತಿದ್ದ ನನಗೆ ನನ್ನ ಮೊಬೈಲ್ ಮತ್ತು ಹೆಡ್ ಫೋನುಗಳೇ ಸಂಗಾತಿಗಳಾಗಿದ್ದಿದ್ದು. ನನ್ನ ಮೆಚ್ಚಿನ ಸಂಗೀತ ಕೇಳುತ್ತ ಕಿಟಕಿಸೀಟಿನ ವಿಶೇಷ ಆನಂದವನ್ನು ಅನುಭವಿಸುತ್ತ ಮೌನವಾಗಿ ಪಯಣಿಸುವುದೇ ಒಂದು ರೀತಿಯ ಲಕ್ಷುರಿ. ಮನೆಯಿಂದಲೇ ಫ್ರೀಲ್ಯಾನ್ಸ್ ಕೆಲಸ ಮಾಡಿಕೊಂಡು ವಿರುದ್ಧ ಧ್ರುವಗಳೆಂಬಂತೆ ಭಾಸವಾಗುತ್ತಿದ್ದ ಬೆಂಗಳೂರು ಮತ್ತು ತುಮಕೂರ ಮನೆಗಳ ನಡುವೆ ಎಲ್ಲಿಯೂ ಸಂತುಲನ ತಪ್ಪದಂತೆ ತಕ್ಕಡಿ ತೂಗಿಸುವ ವೇಳೆಗೆ ಹೈರಾಣಾಗಿಬಿಡುತ್ತಿದ್ದೆ. ಇಂಥದರಲ್ಲಿ ಎರಡೂ ಧ್ರುವಗಳ ನಡುವಿನ ಸಂಚಾರ ಮತ್ತು ಆ ಹೊತ್ತಿಗಿನ ಸಂಗೀತವೇ ನನ್ನನ್ನು ಎಲ್ಲೋ ಸ್ಥಿಮಿತದಲ್ಲಿಟ್ಟಿತೆನ್ನಬಹುದು.
ಪ್ರಯಾಣದ ಸಮಯದಲ್ಲಿ ಯಾರೊಂದಿಗೂ ಮಾತನಾಡದಿರುವುದು ಬಹಳ ಹಳೆಯ ಅಭ್ಯಾಸ. ಇದಕ್ಕೆ ಎಲ್ಲೋ ಒಂದುಕಡೆ ನನ್ನ ಬಸ್ಸುಗಳ ಬಗೆಗಿನ ಅಲರ್ಜಿಯೇ ಕಾರಣ. ”ಪ್ರಯಾಣವನ್ನು ಬಲು ಇಷ್ಟ ಪಡುವ ಆದರೆ ಪ್ರಮುಖ ಸಂಚಾರಸಾಧನಗಳಾದ ಟ್ರೇನುಬಸ್ಸುಕಾರುಜೀಪು ಇತ್ಯಾದಿಗಳಲ್ಲಿ ಪ್ರಯಾಣಿಸುವುದನ್ನು ದ್ವೇಷಿಸುವ ಜೀವಿ’ ಎಂಬಂತಹ ವ್ಯಾಖ್ಯಾನವೇನಾದರೂ ಇದ್ದಲ್ಲಿ ಅದಕ್ಕೆ ಸುನಿಶ್ಚಿತವಾಗಿ ನನ್ನನ್ನು ಮಾತ್ರ ಉದಾಹರಣೆಯಾಗಿ ನೀಡಲಾಗುವುದೆಂದು ನಾನು ಹೇಳಬಲ್ಲೆ. ಚಿಕ್ಕವಳಿದ್ದಾಗ ಊರಿಂದ ಹೆಚ್ಚೂಕಡಿಮೆ ಎಂಟು ಕಿಲೋಮೀಟರು ದೂರವಿದ್ದ ಕಾಫೀ ರಿಸರ್ಚ್ ಸ್ಟೇಶನ್ನಿಗೆ ಹೋಗುವಷ್ಟರಲ್ಲಿ ಹೊಟ್ಟೆಯಲ್ಲಿದ್ದುನೆಲ್ಲ ಬಂದ ದಾರಿಯಿಂದಲೇ ಆಚೆ ಕಳಿಸಿ ಸುಸ್ತಾಗಿಬಿಡುತ್ತಿದ್ದೆ. ಡೀಸೆಲ್ ವಾಸನೆ ಬಂದರೇನೇ ಸಾವು ಹತ್ತಿರ ಬಂದಂತೆನಿಸಿ ಹೊಟ್ಟೆಯಲ್ಲಿ ಚಳಿ ಏಳುತ್ತಿತ್ತು. ನನ್ನ ಈ ಬೇನೆಯಿಂದ ಮಾತಾಶ್ರೀ ಪಿತಾಶ್ರೀಗಳು ಅನುಭವಿಸಿದ ವೇದನೆಗಳನ್ನು ಹೇಳಹೊರಟರೆ ಅದು ಇನ್ನೊಂದು ಪುರಾಣವೇ ಆದೀತು.
ಪಾಯಿಂಟಿಗೆ ಬರುತ್ತೇನೆ. ನನ್ನ ಥರದ ಟ್ರಾವೆಲ್ ಸಿಕ್ನೆಸ್ ಇರುವವರಿಗೆ ಹಲವಾರು ಪೇಚಾಟಗಳಿರುವವು. ನಮ್ಮಗಳಿಗೆ ಪ್ರಯಾಣದ ಸಮಯದಲ್ಲಿ ಓದಲಾಗುವುದಿಲ್ಲ. ಹೀಗಾಗಿ ಇತರರು ಬಣ್ಣಬಣ್ಣದ ಮ್ಯಾಗಜೀನುಗಳನ್ನು, ಬಿಸಿಬಿಸಿ ಸುದ್ದಿ ತುಂಬಿಕೊಂಡ ದಿನಪತ್ರಿಕೆಗಳನ್ನು ಓದುವುದ ನೋಡಿಯೂ ನೋಡದಂತೆ ಹೊಟ್ಟೆಯುರಿಸಿಕೊಂಡು ಇರಬೇಕಾಗುವುದು. ಅಕಸ್ಮಾತ್ ಆಸೆ ತಡೆಯಲಾರದೆ ಬಸ್ಟ್ಯಾಂಡಿನಲ್ಲಿ ಪುಸ್ತಕವೊಂದರೊಳಗೆ ಇಣುಕಿದರೂ ಡ್ರೈವರು ಬಂದು ಹಾರ್ನು ಹೊಡೆದತಕ್ಷಣ ಹಾರಿಬಿದ್ದು ಪುಸ್ತಕಮುಚ್ಚಿಬಿಡಬೇಕು. ಇನ್ನು ಬರೆಯುವುದಂತೂ ದೂರದ ಮಾತಾಯಿತು. ಎರಡಕ್ಷರ ಬರೆವಷ್ಟರಲ್ಲಿ ತಲೆಗೂ, ತಿರುಗುವ ಬಸ್ಸಿನ ಚಕ್ರಕ್ಕೂ ವ್ಯತ್ಯಾಸವೇ ಇರುವುದಿಲ್ಲ! ಪ್ರಯಾಣಿಸಿಕೊಂಡು ಬರೆಯಬಲ್ಲವರು ’ಸೂಪರ್ ಪವರ್’ ಹೊಂದಿರುವಂಥವರು ಎಂದು ನಾನು ದೃಢನಂಬಿಕೆ ಹೊಂದಿದ್ದೇನೆ. ಲೇಖಕ ವಸುಧೇಂದ್ರ ತಮ್ಮ ಪುಸ್ತಕವೊಂದನ್ನು ಬೆಂಗಳೂರ ಟ್ರ್ಯಾಫಿಕ್ಕಿಗೆ ಅರ್ಪಿಸಿರುವುದು ಬಹಳಷ್ಟು ಜನರಿಗೆ ತಿಳಿದಿರುವ ಸಂಗತಿಯೇ. ಕಿಟಕಿಗಳೆಲ್ಲವನ್ನೂ ಮುಚ್ಚಿಕೊಂಡು ಏ.ಸಿ. ಗಾಳಿಯನ್ನುಸಿರಾಡಿಕೊಂಡು ಇರುವಾಗ ಕಾರಿನೊಳಗೆ ವಸುಧೇಂದ್ರರ ಬದಲು ನಾನೇನಾದರೂ ಇದ್ದಿದ್ದರೆ ಡ್ರೈವರ್ ನನ್ನ ಸ್ಥಿತಿಯನ್ನು ಕಂಡು ಭಯಭೀತನಾಗಿ ಟ್ರ್ಯಾಫಿಕ್ ನಡುವೆಯೇ ನನ್ನನ್ನು ಬಿಟ್ಟು ಪರಾರಿಯಾಗುತ್ತಿದ್ದನೆನ್ನುವುದರಲ್ಲಿ ಸಂಶಯವಿಲ್ಲ.
ವಸುಧೇಂದ್ರರ ರೆಫರೆನ್ಸು ನನ್ನನ್ನು ಎರಡನೇ ಪಾಯಿಂಟಿಗೆ ಕೊಂಡೊಯ್ಯುತ್ತದೆ. ನಮ್ಮ ಥರದವರಿಗೆ ಪ್ರಯಾಣಿಸುವಾಗ ಮುಖದ ಮೇಲೆ ತಾಜಾ ಗಾಳಿ ಆಡುತ್ತ ಇರಬೇಕು. ಬಸ್ಸುಗಳಲ್ಲಿ ಕಿಟಕಿಸೀಟಿಗಾಗಿ ಎಷ್ಟೆಲ್ಲ ನಾಟಕ ಆಡಬೇಕಾಗುತ್ತದೆ. ಎಲ್ಲರೂ ಬಸ್ಸಿನಲ್ಲಿ ಸೀಟು ಸಿಕ್ಕರೆ ಸಾಕು ಎಂದು ಹತ್ತುತ್ತಿದ್ದರೆ ನಾನು ಬಸ್ಸಿನಲ್ಲಿ ಕಿಟಕಿಸೀಟು ಇದ್ದಲ್ಲಿ ಮಾತ್ರ ಹತ್ತುತ್ತೇನೆ. ಇದಕ್ಕಾಗಿ ನಾನು ಗಂಟೆಗಟ್ಟಲೆ ಕಾಯಲೂ ಸಿದ್ಧ. ಕಾರಿನೊಳಗೆ ಕೂತು ಇಗ್ನಿಷನ್ ಕೀ ತಿರುಗಿಸುವ ಮೊದಲೇ ನಾನು ಕಿಟಕಿ ತೆರೆಯಲು ವಿಲವಿಲ ಒದ್ದಾಡುವುದು ನನ್ನ ಮನೆಯವರಿಗೆ ಮಾಮೂಲಿ ವಿಷಯ. ’ಒಂದೇ ನಿಮಿಷ ಸುಮ್ಮನಿರು ಮಾರಾಯಿತಿ!’ ಎಂದು ವಿನಂತಿಸಿದರೂ ಕೇಳುವದಿಲ್ಲ. ಕಳೆದ ರಜೆಯಲ್ಲಿ ಜಾಮನಗರದಿಂದ ಅಹಮದಾಬಾದಿಗೆ ಆರು ಗಂಟೆಗಳ ಕಾಲ ವೋಲ್ವೋ ಬಸ್ಸಿನಲ್ಲಿ ಕಳೆಯಬೇಕಾಗಿ ಬಂದಾಗ ಡ್ರೈವರನು ನನಗಾಗಿ ಒಂದೈದು ಎಕ್ಸ್ ಟ್ರಾ ಸ್ಟಾಪುಗಳನ್ನು ನೀಡಬೇಕಾಗಿ ಬಂದು ಮನೆಯ ಸದಸ್ಯರೆಲ್ಲ ನಾಚಿಕೆಪಡುವಂತೆ ಆದರೂ ಬಾಕಿಯವರೆಲ್ಲ ’ಪರವಾಗಿಲ್ಲ ಬಿಡಿ, ಬಸ್ಸಿನೊಳಗೇ ಅವರು ಕಕ್ಕಿ ನಾವೆಲ್ಲ ಒದ್ದಾಡುವುದಕ್ಕಿಂತ ಆಚೆಯೇ ಬೆಟರು. ನಮಗೂ ಫ್ರೆಶ್ ಗಾಳಿ ಸಿಗುತ್ತೆ’ ಎಂದು ಮನೆಯವರನ್ನು ಸಮಾಧಾನಿಸಿದರು.
ಟ್ರೇನ್ ಪ್ರಯಾಣ ಎಂದರೆ ಅತ್ಯಂತ ಆರಾಮದಾಯಕ ಪ್ರಯಾಣ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಎಂತಹ ಟ್ರ್ಯಾವೆಲ್ ಸಿಕ್ನೆಸ್ ಇರುವವರೂ ಟ್ರೇನುಗಳಲ್ಲಿ ಬೇಕಾದ್ದು ತಿಂದುಂಡುಕೊಂಡು ನಿಶ್ಚಿಂತರಾಗಿರುತ್ತಾರೆ. ಆದರೆ ನಾನು ಆ ರೆಕಾರ್ಡನ್ನೂ ಮುರಿದಿದ್ದೇನೆ ಎಂದು ಹೇಳಿಕೊಳ್ಳಬಯಸುತ್ತೇನೆ. ಟ್ರೇನುಗಳು ಯಾವ ದಿಕ್ಕಿನೆಡೆಗೆ ಧಾವಿಸುತ್ತವೋ ನನಗೆ ಅದೇ ದಿಕ್ಕಿಗೇ ಮುಖ ಮಾಡಿ ಕುಳಿತುಕೊಳ್ಳಬೇಕು. ವಿರುದ್ಧದಿಕ್ಕಿನ ಸೀಟಿನಲ್ಲಿ ಕುಳಿತೆನೋ, ಮುಗಿಯಿತು. ಹೊಟ್ಟೆಯೊಳಗಿರುವ, ಇಲ್ಲದಿರುವ ಪದಾರ್ಥಗಳೆಲ್ಲ ಡರ್ಬಿರೇಸಿನ ಕುದುರೆಗಳ ಹಾಗೆ ಸುತ್ತ ರೇಸುಹಾಕತೊಡಗುತ್ತವೆ. ಹುಬ್ಬಳ್ಳಿಯಿಂದ ವಾಪಾಸು ಬರುತ್ತಿರುವಾಗ ಒಮ್ಮೆ ಇಂಥದ್ದೊಂದು ಸೀಟಿನಲ್ಲಿಯೇ ವಿಧಿಯಿಲ್ಲದೆ ಕುಕ್ಕರಿಸಬೇಕಾಗಿ ಬಂದಿತು. ಕೆಲವೇ ಕ್ಷಣಗಳಲ್ಲಿ ನನ್ನ ಚಹರೆ ವಿಧವಿಧವಾಗಿ ಬದಲಾಗತೊಡಗಿದ್ದನ್ನು ಮಗಳು ಗಮನಿಸಿದಳು. ನನ್ನ ಮಾವನವರು ತನ್ನ ಎಲಡಿಕೆ ಸಂಚಿಯಿಂದ ನಾಲಕ್ಕು ಅಡಿಕೆತುಂಡುಗಳನ್ನು ಕೈಗೆ ಹಾಕಿ “ಅಗಿಯಮ್ಮ, ದವಡೆ ಕಚ್ಚಿ ಹಿಡಿದುಕೊ. ಸ್ವಲ್ಪ ಆರಾಮಾಗಬಹುದು.” ಅಂದರು. ಹಾಗೇ ಮಾಡಿದೆ. ಒಂದು ನಿಮಿಷ ತಲೆ ’ಗಿಮ್’ ಅಂದರೂ ಆಮೇಲೆ ನಿಜವಾಗಿಯೂ ಆರಾಮವೆನಿಸಿತು!! ಅಷ್ಟಕ್ಕೆ ಸುಮ್ಮನಿದ್ದರಾಗುತ್ತಿತ್ತು. “ಇನ್ನೊಂದ್ಸಲ್ಪ ಕೊಡ್ರಪ್ಪಾಜಿ!!” ಎಂದು ಗಲಾಟೆ ಮಾಡಿ ಇಸಿದುಕೊಂಡೆ. ಪಾವಗಡದ ಬಣ್ಣ ಏರಿಸಿದ ಗೋಟಡಿಕೆ ತುಂಡುಗಳು. ಕೊಂಚಕಾಲದಲ್ಲಿಯೇ ಮುಖವೆಲ್ಲ ಬಿಸಿಯಾಗತೊಡಗಿ ಬೆವೆತುಕೊಳ್ಳಲು ಶುರುಹಚ್ಚಿತು. ಕಿವಿಗಳು ಉಗಿಬಂಡಿಯ ಹೊಗೆಕೊಳವೆಗಳಾಗಿ ಪರಿವರ್ತನೆ ಹೊಂದಿದವು. ಕೈಕಾಲಲ್ಲಿ ಸಂಚರಿಸುವ ರಕ್ತವೆಲ್ಲ ಗುರುತ್ವವನ್ನೇ ಮರೆತು ಮುಖಕ್ಕೆ ನುಗ್ಗಿದಂತೆ ಭಾಸವಾಯಿತು. ನನ್ನವರು ಗಾಬರಿಯಾಗಿ ನನ್ನನೆಳೆದುಕೊಂಡು ಹೋಗಿ ಕೈಗೊಂದು ಪ್ಲಾಸ್ಟಿಕ್ ಕವರು ಕೊಟ್ಟು ಟಾಯ್ಲೆಟಿಗೆ ದಬ್ಬಿ ಬಾಗಿಲೆಳೆದುಕೊಂಡರು. ವಾಪಾಸು ಬರುವ ವೇಳೆಗೆ ನನಗೆ ಬೇಕಾದ ರೀತಿಯ ಆಸನ ಸಿದ್ಧವಾಗಿತ್ತು.
ಕವಿ ಕಾಯ್ಕಿಣಿಯವರು ತಮ್ಮ ’ವಾಕ್ ಮನ್’ ಕವಿತೆಯಲ್ಲಿ ಕಿವಿಗೆ ಹೆಡ್ ಫೋನ್ ಧರಿಸಿ ಸಂಗೀತ ಕೇಳುವವನನ್ನು ಕುರಿತು ತನ್ನ ಸ್ವರ ಸ್ವರ್ಗದ ಸೀಮೆಗಳನ್ನು/ಪರರಿಗೆ ಸೋಕದ ಹಾಗೆ/ತನ್ನೊಳಗೇ ಲೂಟಿ ಮಾಡಿಕೊಳ್ಳುತ್ತಿರುವ ಈತ/ಎಷ್ಟು ಸ್ವಾರ್ಥಿ/ಎಷ್ಟು ನಿರ್ಲಜ್ಜ” ಎನ್ನುತ್ತಾರೆ. ಅಷ್ಟೇ ಅಲ್ಲ, ಆತನನ್ನು ’ಮುಖಹೀನ ವಿಗ್ರಹದಂತೆ’ ಎಂದು ಬಣ್ಣಿಸುತ್ತಾರೆ. ಬಹುಶಃ ಅವರು ಈ ಕವಿತೆ ಬರೆಯುವ ಮುನ್ನ ನನ್ನನ್ನು ಭೇಟಿಯಾಗಿದ್ದಿದ್ದರೆ ಅದನ್ನು ಬೇರೆಯ ಥರವೇ ಬರೆಯುತ್ತಿದ್ದರು ಎಂದು ನನಗೆ ಖಾತ್ರಿಯಿದೆ. ಬೆಂಗಳೂರಿನಿಂದ ತುಮಕೂರಿಗೆ ನಿಯಮಿತವಾಗಿ ಓಡಾಡಬೇಕಾಗಿ ಬಂದಾಗ ನನ್ನ ತೊಂದರೆಯನ್ನು ಶೇಕಡಾ ತೊಂಭತ್ತರಷ್ಟಾದರೂ ನೀಗಿಸಿದ್ದು ನನ್ನ ’ಮೊಬೈಲ್’ ಸಂಗೀತವೇ. ಎಷ್ಟೆಷ್ಟೋ ಬೇನೆಗಳಿಗೆ ಸಂಗೀತ ಆರಾಮ ಕೊಡುತ್ತದೆ ಎಂದು ಓದಿದ್ದೇನೆ. ನನ್ನ ತೊಂದರೆಯಿದ್ದವರಿಗೆ ಸಂಗೀತ ಸಹಾಯಕವಾದದ್ದರ ಬಗ್ಗೆ ಯಾರಿಗಾದರೂ ಸಂಶೋಧನೆ ಮಾಡುವ ಆಸಕ್ತಿಯಿದ್ದಲ್ಲಿ ಅವರಿಗೆ ನಾನು ಸವಿವರ(!?!) ಮಾಹಿತಿ ನೀಡಬಲ್ಲೆ. ಜನ ನನ್ನನ್ನು ವಿಚಿತ್ರವಾಗಿ ನೋಡುತ್ತಾರೆಂದು ನನಗೇನೂ ಬೇಸರವಿಲ್ಲ. ಇದೇ ಖಾಯಿಲೆ ನನ್ನ ಅಮ್ಮನಿಗೂ ನನ್ನ ಅಜ್ಜಿಗೂ ಇರುವುದು ಎಂಬಂಥ ಸೀಕ್ರೆಟನ್ನು ಇತ್ತೀಚೆಗೆ ತಿಳಿದನಂತರ ನನ್ನಲ್ಲಿ ಅಪಾರ ಆತ್ಮವಿಶ್ವಾಸ ಮೂಡಿದೆ. ವಂಶಪರಂಪರೆಯನ್ನು ಮುಂದುವರೆಸುವುದೇನೂ ಸಾಮಾನ್ಯವಾದ ಜವಾಬ್ದಾರಿಯಲ್ಲ ನೋಡಿ.