“ಸದ್ದಿನ ವಿಶ್ವವೊಂದು ಹೋಳಾಗುತಿರುವಾಗ..”

“ಸದ್ದಿನ ವಿಶ್ವವೊಂದು ಒಳಗೇ

ಸದ್ದಿಲ್ಲದೆ ಹೋಳಾಗುತಿರುವಾಗ

ಒಳ ಅಂಚಿನಲ್ಲಿ ತುದಿಗಾಲಿನಲಿ ನಿಂತು

ಇನಿತೂ ಹೊರಜಾರದಂತೆ ಅದರ

ನಿರಾಕಾರ ಚೂರುಗಳ ಹಿಡಿದಿಟ್ಟುಕೊಳ್ಳುವುದು”

                                                                                          – ’ವಾಕ್ ಮನ್’, ಜಯಂತ ಕಾಯ್ಕಿಣಿ                     

1

ಈಗ ಈ ಕವಿತೆಯ ಸಾಲುಗಳು ವಾಕ್ಮನ್ನಿಗೆ ಬದಲಾಗಿ ನಮ್ಮ ಲೇಟೆಸ್ಟ್ ’ಸಂಗೀತ ಸಾಧನ’ಗಳಾಗಿರುವ ಐಪಾಡ್ ಮತ್ತು ಮೊಬೈಲುಗಳಿಗೆ ಹೆಚ್ಚು ಅನ್ವಯಿಸಬಹುದು ಅಂದುಕೊಳ್ಳುತ್ತೇನೆ. ನನ್ನ ಪಾಲಿಗೆ ಮಾತ್ರ ಈ ಮೇಲಿನ ಸಾಲುಗಳು ಬಲು ಅಚ್ಚುಮೆಚ್ಚಿನವು. ತುಮಕೂರು-ಬೆಂಗಳೂರುಗಳ ನಡುವೆ ಕಳೆದ ಐದು ವರ್ಷಗಳಿಂದ ಓಡಾಡುತ್ತಿದ್ದ ನನಗೆ ನನ್ನ ಮೊಬೈಲ್ ಮತ್ತು ಹೆಡ್ ಫೋನುಗಳೇ ಸಂಗಾತಿಗಳಾಗಿದ್ದಿದ್ದು. ನನ್ನ ಮೆಚ್ಚಿನ ಸಂಗೀತ ಕೇಳುತ್ತ ಕಿಟಕಿಸೀಟಿನ ವಿಶೇಷ ಆನಂದವನ್ನು ಅನುಭವಿಸುತ್ತ ಮೌನವಾಗಿ ಪಯಣಿಸುವುದೇ ಒಂದು ರೀತಿಯ ಲಕ್ಷುರಿ. ಮನೆಯಿಂದಲೇ ಫ್ರೀಲ್ಯಾನ್ಸ್ ಕೆಲಸ ಮಾಡಿಕೊಂಡು ವಿರುದ್ಧ ಧ್ರುವಗಳೆಂಬಂತೆ ಭಾಸವಾಗುತ್ತಿದ್ದ ಬೆಂಗಳೂರು ಮತ್ತು ತುಮಕೂರ ಮನೆಗಳ ನಡುವೆ ಎಲ್ಲಿಯೂ ಸಂತುಲನ ತಪ್ಪದಂತೆ ತಕ್ಕಡಿ ತೂಗಿಸುವ ವೇಳೆಗೆ ಹೈರಾಣಾಗಿಬಿಡುತ್ತಿದ್ದೆ. ಇಂಥದರಲ್ಲಿ ಎರಡೂ ಧ್ರುವಗಳ ನಡುವಿನ ಸಂಚಾರ ಮತ್ತು ಆ ಹೊತ್ತಿಗಿನ ಸಂಗೀತವೇ ನನ್ನನ್ನು ಎಲ್ಲೋ ಸ್ಥಿಮಿತದಲ್ಲಿಟ್ಟಿತೆನ್ನಬಹುದು.

ಪ್ರಯಾಣದ ಸಮಯದಲ್ಲಿ ಯಾರೊಂದಿಗೂ ಮಾತನಾಡದಿರುವುದು ಬಹಳ ಹಳೆಯ ಅಭ್ಯಾಸ. ಇದಕ್ಕೆ ಎಲ್ಲೋ ಒಂದುಕಡೆ ನನ್ನ ಬಸ್ಸುಗಳ ಬಗೆಗಿನ ಅಲರ್ಜಿಯೇ ಕಾರಣ. ”ಪ್ರಯಾಣವನ್ನು ಬಲು ಇಷ್ಟ ಪಡುವ ಆದರೆ ಪ್ರಮುಖ ಸಂಚಾರಸಾಧನಗಳಾದ ಟ್ರೇನುಬಸ್ಸುಕಾರುಜೀಪು ಇತ್ಯಾದಿಗಳಲ್ಲಿ ಪ್ರಯಾಣಿಸುವುದನ್ನು ದ್ವೇಷಿಸುವ ಜೀವಿ’ ಎಂಬಂತಹ ವ್ಯಾಖ್ಯಾನವೇನಾದರೂ ಇದ್ದಲ್ಲಿ ಅದಕ್ಕೆ ಸುನಿಶ್ಚಿತವಾಗಿ ನನ್ನನ್ನು ಮಾತ್ರ ಉದಾಹರಣೆಯಾಗಿ ನೀಡಲಾಗುವುದೆಂದು ನಾನು ಹೇಳಬಲ್ಲೆ. ಚಿಕ್ಕವಳಿದ್ದಾಗ ಊರಿಂದ ಹೆಚ್ಚೂಕಡಿಮೆ ಎಂಟು ಕಿಲೋಮೀಟರು ದೂರವಿದ್ದ ಕಾಫೀ ರಿಸರ್ಚ್ ಸ್ಟೇಶನ್ನಿಗೆ ಹೋಗುವಷ್ಟರಲ್ಲಿ ಹೊಟ್ಟೆಯಲ್ಲಿದ್ದುನೆಲ್ಲ ಬಂದ ದಾರಿಯಿಂದಲೇ ಆಚೆ ಕಳಿಸಿ ಸುಸ್ತಾಗಿಬಿಡುತ್ತಿದ್ದೆ. ಡೀಸೆಲ್ ವಾಸನೆ ಬಂದರೇನೇ ಸಾವು ಹತ್ತಿರ ಬಂದಂತೆನಿಸಿ ಹೊಟ್ಟೆಯಲ್ಲಿ ಚಳಿ ಏಳುತ್ತಿತ್ತು. ನನ್ನ ಈ ಬೇನೆಯಿಂದ ಮಾತಾಶ್ರೀ ಪಿತಾಶ್ರೀಗಳು ಅನುಭವಿಸಿದ ವೇದನೆಗಳನ್ನು ಹೇಳಹೊರಟರೆ ಅದು ಇನ್ನೊಂದು ಪುರಾಣವೇ ಆದೀತು.

ಪಾಯಿಂಟಿಗೆ ಬರುತ್ತೇನೆ. ನನ್ನ ಥರದ ಟ್ರಾವೆಲ್ ಸಿಕ್ನೆಸ್ ಇರುವವರಿಗೆ ಹಲವಾರು ಪೇಚಾಟಗಳಿರುವವು. ನಮ್ಮಗಳಿಗೆ ಪ್ರಯಾಣದ ಸಮಯದಲ್ಲಿ ಓದಲಾಗುವುದಿಲ್ಲ. ಹೀಗಾಗಿ ಇತರರು ಬಣ್ಣಬಣ್ಣದ ಮ್ಯಾಗಜೀನುಗಳನ್ನು, ಬಿಸಿಬಿಸಿ ಸುದ್ದಿ ತುಂಬಿಕೊಂಡ ದಿನಪತ್ರಿಕೆಗಳನ್ನು ಓದುವುದ ನೋಡಿಯೂ ನೋಡದಂತೆ ಹೊಟ್ಟೆಯುರಿಸಿಕೊಂಡು ಇರಬೇಕಾಗುವುದು. ಅಕಸ್ಮಾತ್ ಆಸೆ ತಡೆಯಲಾರದೆ ಬಸ್ಟ್ಯಾಂಡಿನಲ್ಲಿ ಪುಸ್ತಕವೊಂದರೊಳಗೆ ಇಣುಕಿದರೂ ಡ್ರೈವರು ಬಂದು ಹಾರ್ನು ಹೊಡೆದತಕ್ಷಣ ಹಾರಿಬಿದ್ದು ಪುಸ್ತಕಮುಚ್ಚಿಬಿಡಬೇಕು. ಇನ್ನು ಬರೆಯುವುದಂತೂ ದೂರದ ಮಾತಾಯಿತು. ಎರಡಕ್ಷರ ಬರೆವಷ್ಟರಲ್ಲಿ ತಲೆಗೂ, ತಿರುಗುವ ಬಸ್ಸಿನ ಚಕ್ರಕ್ಕೂ ವ್ಯತ್ಯಾಸವೇ ಇರುವುದಿಲ್ಲ! ಪ್ರಯಾಣಿಸಿಕೊಂಡು ಬರೆಯಬಲ್ಲವರು ’ಸೂಪರ್ ಪವರ್’ ಹೊಂದಿರುವಂಥವರು ಎಂದು ನಾನು ದೃಢನಂಬಿಕೆ ಹೊಂದಿದ್ದೇನೆ. ಲೇಖಕ ವಸುಧೇಂದ್ರ ತಮ್ಮ ಪುಸ್ತಕವೊಂದನ್ನು ಬೆಂಗಳೂರ ಟ್ರ್ಯಾಫಿಕ್ಕಿಗೆ ಅರ್ಪಿಸಿರುವುದು ಬಹಳಷ್ಟು ಜನರಿಗೆ ತಿಳಿದಿರುವ ಸಂಗತಿಯೇ. ಕಿಟಕಿಗಳೆಲ್ಲವನ್ನೂ ಮುಚ್ಚಿಕೊಂಡು ಏ.ಸಿ. ಗಾಳಿಯನ್ನುಸಿರಾಡಿಕೊಂಡು ಇರುವಾಗ ಕಾರಿನೊಳಗೆ ವಸುಧೇಂದ್ರರ ಬದಲು ನಾನೇನಾದರೂ ಇದ್ದಿದ್ದರೆ ಡ್ರೈವರ್ ನನ್ನ ಸ್ಥಿತಿಯನ್ನು ಕಂಡು ಭಯಭೀತನಾಗಿ ಟ್ರ್ಯಾಫಿಕ್ ನಡುವೆಯೇ ನನ್ನನ್ನು ಬಿಟ್ಟು ಪರಾರಿಯಾಗುತ್ತಿದ್ದನೆನ್ನುವುದರಲ್ಲಿ ಸಂಶಯವಿಲ್ಲ.

ವಸುಧೇಂದ್ರರ ರೆಫರೆನ್ಸು ನನ್ನನ್ನು ಎರಡನೇ ಪಾಯಿಂಟಿಗೆ ಕೊಂಡೊಯ್ಯುತ್ತದೆ. ನಮ್ಮ ಥರದವರಿಗೆ ಪ್ರಯಾಣಿಸುವಾಗ ಮುಖದ ಮೇಲೆ ತಾಜಾ ಗಾಳಿ ಆಡುತ್ತ ಇರಬೇಕು. ಬಸ್ಸುಗಳಲ್ಲಿ ಕಿಟಕಿಸೀಟಿಗಾಗಿ ಎಷ್ಟೆಲ್ಲ ನಾಟಕ ಆಡಬೇಕಾಗುತ್ತದೆ. ಎಲ್ಲರೂ ಬಸ್ಸಿನಲ್ಲಿ ಸೀಟು ಸಿಕ್ಕರೆ ಸಾಕು ಎಂದು ಹತ್ತುತ್ತಿದ್ದರೆ ನಾನು ಬಸ್ಸಿನಲ್ಲಿ ಕಿಟಕಿಸೀಟು ಇದ್ದಲ್ಲಿ ಮಾತ್ರ ಹತ್ತುತ್ತೇನೆ. ಇದಕ್ಕಾಗಿ ನಾನು ಗಂಟೆಗಟ್ಟಲೆ ಕಾಯಲೂ ಸಿದ್ಧ. ಕಾರಿನೊಳಗೆ ಕೂತು ಇಗ್ನಿಷನ್ ಕೀ ತಿರುಗಿಸುವ ಮೊದಲೇ ನಾನು ಕಿಟಕಿ ತೆರೆಯಲು ವಿಲವಿಲ ಒದ್ದಾಡುವುದು ನನ್ನ ಮನೆಯವರಿಗೆ ಮಾಮೂಲಿ ವಿಷಯ. ’ಒಂದೇ ನಿಮಿಷ ಸುಮ್ಮನಿರು ಮಾರಾಯಿತಿ!’ ಎಂದು ವಿನಂತಿಸಿದರೂ ಕೇಳುವದಿಲ್ಲ. ಕಳೆದ ರಜೆಯಲ್ಲಿ ಜಾಮನಗರದಿಂದ ಅಹಮದಾಬಾದಿಗೆ ಆರು ಗಂಟೆಗಳ ಕಾಲ ವೋಲ್ವೋ ಬಸ್ಸಿನಲ್ಲಿ ಕಳೆಯಬೇಕಾಗಿ ಬಂದಾಗ ಡ್ರೈವರನು ನನಗಾಗಿ ಒಂದೈದು ಎಕ್ಸ್ ಟ್ರಾ ಸ್ಟಾಪುಗಳನ್ನು ನೀಡಬೇಕಾಗಿ ಬಂದು ಮನೆಯ ಸದಸ್ಯರೆಲ್ಲ ನಾಚಿಕೆಪಡುವಂತೆ ಆದರೂ ಬಾಕಿಯವರೆಲ್ಲ ’ಪರವಾಗಿಲ್ಲ ಬಿಡಿ, ಬಸ್ಸಿನೊಳಗೇ ಅವರು ಕಕ್ಕಿ ನಾವೆಲ್ಲ ಒದ್ದಾಡುವುದಕ್ಕಿಂತ ಆಚೆಯೇ ಬೆಟರು. ನಮಗೂ ಫ್ರೆಶ್ ಗಾಳಿ ಸಿಗುತ್ತೆ’ ಎಂದು ಮನೆಯವರನ್ನು ಸಮಾಧಾನಿಸಿದರು.

ಟ್ರೇನ್ ಪ್ರಯಾಣ ಎಂದರೆ ಅತ್ಯಂತ ಆರಾಮದಾಯಕ ಪ್ರಯಾಣ ಎಂದು ಎಲ್ಲರಿಗೂ ತಿಳಿದಿರುವ ವಿಚಾರ. ಎಂತಹ ಟ್ರ್ಯಾವೆಲ್ ಸಿಕ್ನೆಸ್ ಇರುವವರೂ ಟ್ರೇನುಗಳಲ್ಲಿ ಬೇಕಾದ್ದು ತಿಂದುಂಡುಕೊಂಡು ನಿಶ್ಚಿಂತರಾಗಿರುತ್ತಾರೆ. ಆದರೆ ನಾನು ಆ ರೆಕಾರ್ಡನ್ನೂ ಮುರಿದಿದ್ದೇನೆ ಎಂದು ಹೇಳಿಕೊಳ್ಳಬಯಸುತ್ತೇನೆ. ಟ್ರೇನುಗಳು ಯಾವ ದಿಕ್ಕಿನೆಡೆಗೆ ಧಾವಿಸುತ್ತವೋ ನನಗೆ ಅದೇ ದಿಕ್ಕಿಗೇ ಮುಖ ಮಾಡಿ ಕುಳಿತುಕೊಳ್ಳಬೇಕು. ವಿರುದ್ಧದಿಕ್ಕಿನ ಸೀಟಿನಲ್ಲಿ ಕುಳಿತೆನೋ, ಮುಗಿಯಿತು. ಹೊಟ್ಟೆಯೊಳಗಿರುವ, ಇಲ್ಲದಿರುವ ಪದಾರ್ಥಗಳೆಲ್ಲ ಡರ್ಬಿರೇಸಿನ ಕುದುರೆಗಳ ಹಾಗೆ ಸುತ್ತ ರೇಸುಹಾಕತೊಡಗುತ್ತವೆ. ಹುಬ್ಬಳ್ಳಿಯಿಂದ ವಾಪಾಸು ಬರುತ್ತಿರುವಾಗ ಒಮ್ಮೆ ಇಂಥದ್ದೊಂದು ಸೀಟಿನಲ್ಲಿಯೇ ವಿಧಿಯಿಲ್ಲದೆ ಕುಕ್ಕರಿಸಬೇಕಾಗಿ ಬಂದಿತು. ಕೆಲವೇ ಕ್ಷಣಗಳಲ್ಲಿ ನನ್ನ ಚಹರೆ ವಿಧವಿಧವಾಗಿ ಬದಲಾಗತೊಡಗಿದ್ದನ್ನು ಮಗಳು ಗಮನಿಸಿದಳು. ನನ್ನ ಮಾವನವರು ತನ್ನ ಎಲಡಿಕೆ ಸಂಚಿಯಿಂದ ನಾಲಕ್ಕು ಅಡಿಕೆತುಂಡುಗಳನ್ನು ಕೈಗೆ ಹಾಕಿ “ಅಗಿಯಮ್ಮ, ದವಡೆ ಕಚ್ಚಿ ಹಿಡಿದುಕೊ. ಸ್ವಲ್ಪ ಆರಾಮಾಗಬಹುದು.” ಅಂದರು. ಹಾಗೇ ಮಾಡಿದೆ. ಒಂದು ನಿಮಿಷ ತಲೆ ’ಗಿಮ್’ ಅಂದರೂ ಆಮೇಲೆ ನಿಜವಾಗಿಯೂ ಆರಾಮವೆನಿಸಿತು!! ಅಷ್ಟಕ್ಕೆ ಸುಮ್ಮನಿದ್ದರಾಗುತ್ತಿತ್ತು. “ಇನ್ನೊಂದ್ಸಲ್ಪ ಕೊಡ್ರಪ್ಪಾಜಿ!!” ಎಂದು ಗಲಾಟೆ ಮಾಡಿ ಇಸಿದುಕೊಂಡೆ. ಪಾವಗಡದ ಬಣ್ಣ ಏರಿಸಿದ ಗೋಟಡಿಕೆ ತುಂಡುಗಳು. ಕೊಂಚಕಾಲದಲ್ಲಿಯೇ ಮುಖವೆಲ್ಲ ಬಿಸಿಯಾಗತೊಡಗಿ ಬೆವೆತುಕೊಳ್ಳಲು ಶುರುಹಚ್ಚಿತು. ಕಿವಿಗಳು ಉಗಿಬಂಡಿಯ ಹೊಗೆಕೊಳವೆಗಳಾಗಿ ಪರಿವರ್ತನೆ ಹೊಂದಿದವು. ಕೈಕಾಲಲ್ಲಿ ಸಂಚರಿಸುವ ರಕ್ತವೆಲ್ಲ ಗುರುತ್ವವನ್ನೇ ಮರೆತು ಮುಖಕ್ಕೆ ನುಗ್ಗಿದಂತೆ ಭಾಸವಾಯಿತು. ನನ್ನವರು ಗಾಬರಿಯಾಗಿ ನನ್ನನೆಳೆದುಕೊಂಡು ಹೋಗಿ ಕೈಗೊಂದು ಪ್ಲಾಸ್ಟಿಕ್ ಕವರು ಕೊಟ್ಟು ಟಾಯ್ಲೆಟಿಗೆ ದಬ್ಬಿ ಬಾಗಿಲೆಳೆದುಕೊಂಡರು. ವಾಪಾಸು ಬರುವ ವೇಳೆಗೆ ನನಗೆ ಬೇಕಾದ ರೀತಿಯ ಆಸನ ಸಿದ್ಧವಾಗಿತ್ತು.

ಕವಿ ಕಾಯ್ಕಿಣಿಯವರು ತಮ್ಮ ’ವಾಕ್ ಮನ್’ ಕವಿತೆಯಲ್ಲಿ ಕಿವಿಗೆ ಹೆಡ್ ಫೋನ್ ಧರಿಸಿ ಸಂಗೀತ ಕೇಳುವವನನ್ನು ಕುರಿತು ತನ್ನ ಸ್ವರ ಸ್ವರ್ಗದ ಸೀಮೆಗಳನ್ನು/ಪರರಿಗೆ ಸೋಕದ ಹಾಗೆ/ತನ್ನೊಳಗೇ ಲೂಟಿ ಮಾಡಿಕೊಳ್ಳುತ್ತಿರುವ ಈತ/ಎಷ್ಟು ಸ್ವಾರ್ಥಿ/ಎಷ್ಟು ನಿರ್ಲಜ್ಜ” ಎನ್ನುತ್ತಾರೆ. ಅಷ್ಟೇ ಅಲ್ಲ, ಆತನನ್ನು ’ಮುಖಹೀನ ವಿಗ್ರಹದಂತೆ’ ಎಂದು ಬಣ್ಣಿಸುತ್ತಾರೆ. ಬಹುಶಃ ಅವರು ಈ ಕವಿತೆ ಬರೆಯುವ ಮುನ್ನ ನನ್ನನ್ನು ಭೇಟಿಯಾಗಿದ್ದಿದ್ದರೆ ಅದನ್ನು ಬೇರೆಯ ಥರವೇ ಬರೆಯುತ್ತಿದ್ದರು ಎಂದು ನನಗೆ ಖಾತ್ರಿಯಿದೆ. ಬೆಂಗಳೂರಿನಿಂದ ತುಮಕೂರಿಗೆ ನಿಯಮಿತವಾಗಿ ಓಡಾಡಬೇಕಾಗಿ ಬಂದಾಗ ನನ್ನ ತೊಂದರೆಯನ್ನು ಶೇಕಡಾ ತೊಂಭತ್ತರಷ್ಟಾದರೂ ನೀಗಿಸಿದ್ದು ನನ್ನ ’ಮೊಬೈಲ್’ ಸಂಗೀತವೇ. ಎಷ್ಟೆಷ್ಟೋ ಬೇನೆಗಳಿಗೆ ಸಂಗೀತ ಆರಾಮ ಕೊಡುತ್ತದೆ ಎಂದು ಓದಿದ್ದೇನೆ. ನನ್ನ ತೊಂದರೆಯಿದ್ದವರಿಗೆ ಸಂಗೀತ ಸಹಾಯಕವಾದದ್ದರ ಬಗ್ಗೆ ಯಾರಿಗಾದರೂ ಸಂಶೋಧನೆ ಮಾಡುವ ಆಸಕ್ತಿಯಿದ್ದಲ್ಲಿ ಅವರಿಗೆ ನಾನು ಸವಿವರ(!?!) ಮಾಹಿತಿ ನೀಡಬಲ್ಲೆ. ಜನ ನನ್ನನ್ನು ವಿಚಿತ್ರವಾಗಿ ನೋಡುತ್ತಾರೆಂದು ನನಗೇನೂ ಬೇಸರವಿಲ್ಲ. ಇದೇ ಖಾಯಿಲೆ ನನ್ನ ಅಮ್ಮನಿಗೂ ನನ್ನ ಅಜ್ಜಿಗೂ ಇರುವುದು ಎಂಬಂಥ ಸೀಕ್ರೆಟನ್ನು ಇತ್ತೀಚೆಗೆ ತಿಳಿದನಂತರ ನನ್ನಲ್ಲಿ ಅಪಾರ ಆತ್ಮವಿಶ್ವಾಸ ಮೂಡಿದೆ. ವಂಶಪರಂಪರೆಯನ್ನು ಮುಂದುವರೆಸುವುದೇನೂ ಸಾಮಾನ್ಯವಾದ ಜವಾಬ್ದಾರಿಯಲ್ಲ ನೋಡಿ.

ಕಳೆದುಕೊಳ್ಳುವಾಗಿನ ಖುಷಿ ಮತ್ತು ಪಡೆದುಕೊಳ್ಳುವಾಗಿನ ನೋವು

MysticalMistyMorning

 

“I let my head fall back, and I gazed into the Eternal Blue Sky. It was morning. Some of the sky was yellow, some the softest blue. One small cloud scuttled along. Strange how everything below can be such death and chaos and pain while above the sky is peace, sweet blue gentleness. I heard a shaman say once, the Ancestors want our souls to be like the blue sky.”  – Shannon Hale, Book Of a Thousand Days.

“ಕೊಳೆತ ಹಣ್ಣು ಬುಟ್ಟಿಯಲ್ಲಿದ್ರೆ ಅದನ್ನ ಎತ್ತಿ ಬಿಸಾಡಲ್ವ? ಹಂಗೇ ಬಿಟ್ರೆ ಅಕ್ಕಪಕ್ಕದ ಹಣ್ಣುಗಳೂ ಹಾಳಾಗ್ತವೆ ತಾನೆ? ಹಂಗೇ ಕಣ್ರಿ ಇದೂ. ಯಾಕೆ ಇಷ್ಟು ವರ್ಷ ಸುಮ್ಮನೆ ಹಿಂಸೆ, ನೋವು ಮಾಡಿಕೊಂಡಿದ್ರಿ?” ಆಕೆ ಬೈಯುತ್ತಿದ್ದರೆ ನಾನು ಇದು ಇನ್ನಾವುದಾದರೂ ಸನ್ನಿವೇಶವಾಗಿದ್ದರೆ ಎಂಥ ಫಿಲಸಾಫಿಕಲ್ ಹೊಳಹು ನೀಡುವಂತಹ ಸಲಹೆಯಲ್ಲವೆ ಎಂದು ಯೋಚಿಸುತ್ತ ಇದ್ದೆ. ನನ್ನೆರಡು ಕೈಗಳೂ ನನ್ನ ಮಂಡಿಯನ್ನು ನೋಯುವಷ್ಟು ಗಟ್ಟಿಯಾಗಿ ಅಮುಕುತ್ತಿದ್ದವು.

ನನ್ನ ಕಣ್ಣುಗಳಿಂದ ಬಳಬಳನೆ ನೀರು ಸುರಿಯುತ್ತಿತ್ತು. ಸಾಮಾನ್ಯವಾಗಿ ಇತರರು ತಡೆದುಕೊಳ್ಳಲಾಗದಷ್ಟು ನೋವನ್ನು ತಡೆದುಕೊಳ್ಳುವವಳು ನಾನು ಅನ್ನುವ ಅಹಂಕಾರವಿತ್ತು ನನಗೆ. ಆದರೆ ಹನ್ನೆರಡು ವರುಷ ನಾನು ಬೇಡಬಾರದ ನೋವು ನುಂಗಿಕೊಳ್ಳುತ್ತ ಕಾಪಾಡಿಕೊಂಡು ಬಂದಿದ್ದು ಬರೆ ನನ್ನ ಅಹಂಕಾರವನ್ನು ಮಾತ್ರ ಅನ್ನುವ ಸತ್ಯ ಹೊಳೆದ ತಕ್ಷಣ ದವಡೆ ತನ್ನಂತಾನೇ ಸಡಿಲವಾಯಿತು.

ಆಕೆ ಉಳಿ ಸುತ್ತಿಗೆಯಂಥದೇನನ್ನೊ ತಗೆದುಕೊಂಡು ಕುಟ್ಟತೊಡಗಿದರು. ಕಣ್ಣು ಮುಚ್ಚಿ ಜೋರಾಗಿ ಅರಚಿದೆ. ಬಾಯಲ್ಲಿ ಬೆಚ್ಚಗೆ ನೀರಿನಂಥದೇನೋ ಹಾರಿದಂತೆ ಅನ್ನಿಸಿತು…ಶಶಿ ಹೇಳಿದ ಮೇಲೇ ಅದು ರಕ್ತ ಎಂದು ತಿಳಿದಿದ್ದು.

ಕಿಡ್ನಿ ಟ್ರೇಯಲ್ಲಿ ಬಿದ್ದಿದ್ದ ಹಲ್ಲನ್ನೇ ಸುಮ್ಮನೆ ನೋಡಿದೆ. ನನ್ನ ಹಲವಾರು ಮೊಂಡಾಟಗಳ ಪ್ರತೀಕದಂತೆ ಕಂಡಿತು.

“ಬೇಕ ಇದು? ಕೆಲವರು ತಮ್ಮ ಜತೆಗೇ ತಗೊಂಡು ಹೋಗ್ತಾರೆ”. ಆಯಾ ನಕ್ಕಳು.

ತಲೆಯಲ್ಲಾಡಿಸಿದೆ. ಇವನ ಕಡೆ ತಿರುಗಿ, “ಮನೆಗೆ ಹೋಗೋಣ.” ಅಂದೆ.

*********

ಆಗಲೇ 2013 ಬಂದುಬಿಟ್ಟಿದೆ. ಹಲ್ಲು ಕೀಳಿಸಿದ ನಂತರ ಹಲವಾರು ಬದಲಾವಣೆಗಳಾಗಿವೆ. ಪ್ರೇಮವೊಂದು ಕಳೆದುಹೋದ ನಂತರ ನಾವು ಅದಕ್ಕೆ ಸಂಬಂಧಿಸಿದ ರುಟೀನನ್ನು ಬದಲಾಯಿಸಿಕೊಳ್ಳುವ ಹಾಗೇ..

2012ರಲ್ಲಿದ್ದಷ್ಟು ಅಂತರ್ಮುಖಿಯಾಗಿ ನಾನು ನನ್ನ ಜೀವನಕಾಲದಲ್ಲಿ ಎಂದೂ ಇದ್ದಿಲ್ಲ. ಎಲ್ಲವನ್ನೂ ಬೇಕೆಂದೇ  ಕೈಯಿಂದಾಚೆ ಜಾರಲು ಬಿಟ್ಟು ನೋಡುವುದು ಎಂಥ ಅದ್ಭುತ ಅನುಭವ! ಫೋನನ್ನು ಸುಮಾರು ಕಾಲ ಆಚೆಗೆಸೆದು ಮರೆತೇಬಿಟ್ಟಿದ್ದೆ. ಬರೆಯಲು ಸಾಧ್ಯವಾಗದೆ ಇರುವ ಹಿಂಸೆಯನ್ನು ಸಂಪೂರ್ಣವಾಗಿ ಅನುಭವಿಸಿದೆ. ಕಣ್ಣು ಇಂಗಿಹೋಗುವಷ್ಟು ಓದಿದೆ. ಎಲ್ಲ ಅವಕಾಶಗಳ ಗಂಟಲು ಹಿಸುಕಿ ಆಚೆ ಬಿಸಾಡಿದೆ. ಇದ್ದ ಎಲ್ಲದರ ಹೊರತಾಗಿಯೂ ನಾನು ಏನಾಗಿದ್ದೇನೆ ಎಂದು ಪ್ರತಿಕ್ಷಣವೂ ಗಮನಿಸಲು ತೊಡಗಿದೆ. ಕಳೆದುಹೋಗಿದ್ದ ಶಿಸ್ತನ್ನು ಮತ್ತೆ ಹೆಕ್ಕಿ ಜೋಡಿಸಿಕೊಳ್ಳತೊಡಗಿದೆ. ಇದಾವುದೂ ಚೂರೂ ಸುಲಭವಾಗಿರಲಿಲ್ಲ. ಉಹುಂ.

ಈವತ್ತು ಬೆಳಜಾವ ವಾಕಿಂಗ್ ಹೋಗುತ್ತಿದ್ದಾಗ ಪ್ರತಿದಿನವೂ ಎದುರು ಸಿಗುತ್ತಿದ್ದ ಮಹಿಳೆಯೊಬ್ಬರು ಈವತ್ತು ನಕ್ಕರು. ಹೆಣ್ಣುಮಕ್ಕಳೆಲ್ಲ ಮನೆಯೆದುರು ಥರಥರದ ರಂಗೋಲಿ ಹಾಕಿಕೊಂಡು ’ಹ್ಯಾಪಿ ನ್ಯೂ ಯಿಯರ್ 2013’ ಎಂದೆಲ್ಲ ಇಂಗ್ಲಿಷಿನಲ್ಲಿ ಮನೆಯ ಮುಂದೆ ಬರೆದುಕೊಂಡು ಸಂಭ್ರಮವಾಗಿದ್ದರು. ಈವತ್ತು ಎಂದಿಗಿಂತಲೂ ಮಂಜಿನ ಮೋಡಗಳು ಹೆಚ್ಚಾಗಿದ್ದು ಸುತ್ತಮುತ್ತಲ ಕಲ್ಲುಬೆಟ್ಟಗಳೆಲ್ಲ ಮರೆಯಾಗಿಹೋಗಿ ಕಣ್ಣೆದುರಿಗಿನ ಎಲ್ಲವೂ ಕನಸೊಂದರ ಹಾಗೆ ಅರೆಬರೆಯಾಗಿ ಹರಡಿಕೊಂಡಿತ್ತು. ಕಿತ್ತಳೆ ಬಣ್ಣದ ಸೂರ್ಯ ಮೇಲೇರಬೇಕೋ ಬೇಡವೋ ಎಂಬ ಗಲಿಬಿಲಿಯಲ್ಲಿದ್ದ. ನಾನು ಚಳಿಯಲ್ಲೂ ಯರ್ರಾಬಿರ್ರಿ ಬೆವೆತುಕೊಂಡು ಹಲ್ಲುನೋವಿಲ್ಲದ ಚಳಿಗಾಲದ ಮುಂಜಾವಕ್ಕೆ ಹೊಸ ವರ್ಷದ ಶುಭಾಶಯ ಹೇಳಿದೆ.

ಚಿತ್ರಕೃಪೆ: amritray.com

ಒಂದು ಕ್ರಿಸ್ಮಸ್ ಮರ.

ಕ್ರಿಸ್ಮಸ್ ಎಂದರೆ ಏನೋ ಸಡಗರ. ತುಂಬ ನಕ್ಷತ್ರಗಳು ಒಟ್ಟಿಗೇ ನಮ್ಮ ಸುತ್ತಮುತ್ತ ಮಿನುಗಿದ ಹಾಗೆ.. ಸಿಹಿ ಪರಿಮಳಗಳನ್ನು ಆಘ್ರಾಣಿಸುತ್ತ ನಾವು ಪಡೆಯುವ ಆನಂದದ ಹಾಗೆ..ಆಹ್ಲಾದಕರ ಸಂಗೀತವನ್ನು ಕೇಳುತ್ತ ಎಲ್ಲ ಮರೆತು ಮೈದೂಗಿದ ಹಾಗೆ.. ಸುಮಾರು ಹತ್ತು ವರುಷಗಳಿಂದ ನಾನು ಒಂದು ಮಧ್ಯರಾತ್ರಿಯ ಮಾಸ್ ಅನ್ನೂ ತಪ್ಪಿಸಿಕೊಂಡಿದ್ದೇ ಇಲ್ಲ. ದೇವರ ಬಗೆಗಿನ ನನ್ನ ಖಾಸಗೀ ನಂಬಿಕೆಗಳನ್ನೆಲ್ಲ ಮೀರಿ ನಿಲ್ಲುವ ರಾತ್ರಿಯದು.

 

     ಕ್ರಿಸ್ಮಸ್ ಅಂದಾಕ್ಷಣ ನನಗೆ ನೆನಪಾಗುವದು ಸಿಸ್ಟರ್ ಅನಾ ಮಾರ್ಥಾ ಮತ್ತು ಕ್ರಿಸ್ಮಸ್ ಮರಗಳು. ಸಿಸ್ಟರ್ ಮಾರ್ಥಾ ನನ್ನ ಮದುವೆಯ ಮೂಲಕ ನನ್ನ ಸಂಬಂಧಿ – ಒಂದು ಲೆಕ್ಕದಲ್ಲಿ ನನ್ನ ಅತ್ತೆ. ಈವತ್ತಿಗೆ ನನ್ನೊಳಗೆ ಆಧ್ಯಾತ್ಮಿಕ ಯೋಚನೆಗಳ  ಸುಳಿವೇನಾದರೂ(!?) ಇದ್ದರೆ ಅದರ ಹಿಂದಿನ ಮುಖ್ಯ ಪ್ರಭಾವ ಆಕೆಯದು. ಆಕೆ ತನ್ನ ಜೀವಮಾನದುದ್ದಕ್ಕೂ ತೀವ್ರಮಟ್ಟದ ಬ್ರಾಂಕೈಟಿಸ್ ಖಾಯಿಲೆಯಿಂದ ನರಳುತ್ತಲೇ ಇದ್ದರು. ಸಾಮಾನ್ಯ ಜನರು ತಡೆದುಕೊಳ್ಳಲು ಸಾಧ್ಯವಾಗದಂತಹ ದೈಹಿಕ ನೋವುಗಳನ್ನು ಆಕೆ ಪ್ರಾರ್ಥಿಸುತ್ತಲೇ ಮೌನವಾಗಿ ನುಂಗಿಬಿಡುತ್ತ ಇದ್ದರು. ಆಕೆ ಎಲ್ಲೇ ಇದ್ದರು ಪ್ರತಿವರ್ಷ ಆಕೆಯ ಕ್ರಿಸ್ಮಸ್ ಶುಭಾಶಯಪತ್ರ ನನ್ನ ಕೈಸೇರುವುದು. ತನ್ನ ಹತ್ತನೇ ತರಗತಿಯ ಶಿಕ್ಷಣ ಮುಗಿದಕೂಡಲೆ ಯಾವ ಪ್ರತಿರೋಧಗಳನ್ನೂ ಲೆಕ್ಕಿಸದೆ ಎಲ್ಲವನ್ನೂ ತ್ಯಜಿಸಿ ಆಶ್ರಮ ಸೇರಿದ ಆಕೆಯ ಬಗ್ಗೆ ನನಗೆ ಸದಾ ಕುತೂಹಲ. ಅವರಿಗೆ ನೂರೆಂಟು ಪ್ರಶ್ನೆ ಕೇಳಿ ಪಿರಿಪಿರಿ ಮಾಡುತ್ತಿದ್ದರು ಒಂದು ದಿನವೂ ಸಿಡುಕದೆ ಎಲ್ಲದಕ್ಕೂ ಉತ್ತರಿಸುವರು. ಕೆಲವೊಮ್ಮೆ ದಿನಗಟ್ಟಲೆ ಮೌನವಾಗಿಬಿಡುವರು. ಇಂಥವರಿಗೆ ಗಿಡಗಳೆಂದರೆ ವಿಚಿತ್ರವಾದ, ತೀರ ಲೌಕಿಕ ಅನ್ನಿಸಬಹುದಾದಂಥ ಮೋಹ. ಆಕೆಯ ಹಸಿರಿನ ಗೀಳು ಮಾತ್ರ ಯಾರಿಗೂ ಅರ್ಥವಾಗುತ್ತ ಇರಲಿಲ್ಲ. ಕೊಂಚ ಆರೋಗ್ಯವಾಗಿದ್ದರೂ ಆಶ್ರಮದ ಹೂದೋಟದಲ್ಲಿ ಕಾಲ ಕಳೆಯುವರು. ನನ್ನ ತೋಟದ ಗಿಡಗಳ ಬಗ್ಗೆ ಯಾವಾಗಲೂ ಮುತುವರ್ಜಿ ವಹಿಸಿ ಕೇಳುವ ಅವರು ನಾನು ಆಶ್ರಮಕ್ಕೆ ಭೇಟಿನೀಡಿದಾಗಲೆಲ್ಲ ಹೂಗಿಡವೊಂದರ ಕಟಿಂಗ್ ಅನ್ನು ನನ್ನ ತೋಟಕ್ಕಾಗಿ ಕೊಡುತ್ತ ಇದ್ದರು. “ಗಿಡಗಳ ಹತ್ತಿರ ಸೊಲ್ಪ ಸಮಯ ತೆಕ್ಕೊಂಡು ದಿನಾ ಕೂತುಕೊಂಡು ಮಾತನಾಡು. ನಿನ್ ಕಷ್ಟಸುಖ ಹೇಳ್ಕೋ. ಯು ವಿಲ್ ಆಲ್ವೇಸ್ ಹ್ಯಾವ್ ಅ ಬಂಚ್ ಆಫ್ ಫ್ರೆಂಡ್ಸ್ ಅರೌಂಡ್!” ಅನ್ನುವರು. ಆಗಾಗ, “ನಿನ್ ಹತ್ತಿರ ಒಂದು ಕ್ರಿಸ್ಮಸ್ ಮರ ಇಲ್ಲವಲ್ಲ!” ಎಂದು ಪೇಚಾಡಿಕೊಳ್ಳುವರು. ಆಗ ಮೈಸೂರ ಪುಟ್ಟ ಬಾಡಿಗೆಮನೆಯಲ್ಲಿದ್ದ ನಾನು ನಕ್ಕುಬಿಡುವೆ.

ಹಾಗೂ ಹೀಗೂ ನನ್ನ ಸ್ವಂತ ಮನೆಯಲ್ಲಿ ವಾಸ ಆರಂಭಿಸಿದಾಗ ಮೊದಲು ಅನ್ನಿಸಿದ್ದು – ಒಂದು ಚೆಂದದ ತೋಟ ಮಾಡಬೇಕು. ಹಿಂದೆ ಮನೆಯಲ್ಲಿ ಬಾಡಿಗೆಗಿದ್ದವರೋ, ಮನೆಯನ್ನು ದುರವಸ್ಥೆಯಲ್ಲಿ ಬಿಟ್ಟುಹೋಗಿದ್ದರು. ಎಲ್ಲ ಸರಿಪಡಿಸುವಲ್ಲಿ ಆರು ತಿಂಗಳುಗಳೇ ಕಳೆದವು. ಅದೇ ಹೊತ್ತಿಗೆ ಸಿಸ್ಟರ್ ಮಾರ್ಥಾರ ಆರೋಗ್ಯ ಕ್ಷೀಣಿಸಿತು. ಕೊನೆಯ ಬಾರಿ ಬೆಂಗಳೂರಿನ ಆಸ್ಪತ್ರೆಯಲ್ಲಿದ್ದ ಅವರನ್ನು ನೋಡಲು ಹೋದಾಗ ಅವರ ಮುಖ ಅನಾರೋಗ್ಯದಿಂದ ಊದಿಕೊಂಡು ಆಕೆ ಚೆನ್ನಾಗಿದ್ದಾರೆಂಬ ಹುಸಿಭರವಸೆ ಹುಟ್ಟಿಸುತ್ತಿತ್ತು. ನನ್ನ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡ ಸಿಸ್ಟರ್ ಮಾರ್ಥಾ ಹೇಳಿದರು – “ಈ ಸಾರಿ ಕ್ರಿಸ್ಮಸ್ ಕಾರ್ಡು ಕಳಿಸೋಕೆ ನಾನಿರಲ್ಲ ಬಿಡು”. ನನಗೂ ಪ್ರಾಯಶಃ ಹಾಗೇ ಅನ್ನಿಸಿತು. ಮೆತ್ತಗೆ ಅವರ ಕೈ ಮುಟ್ಟಿ,  “ಮನೇಲಿ ತೋಟ ಮಾಡ್ತಿದೀವಿ. ತುಂಬ ಜಾಗ ಇದೆ. ಎಲ್ಲ ನೆಟ್ಟಾದ ಮೇಲೆ ನೀವು ಒಂದು ಸಲ ಬಂದು ನೋಡಿ” ಎಂದೆ. ಅವರ ಕಣ್ಣು ಅರಳಿದವು. “ಹಾಗಿದ್ರೆ ಒಂದು ಕ್ರಿಸ್ಮಸ್ ಗಿಡ ನೆಟ್ಟುಬಿಡು, ಆಯ್ತಾ? ನಿಂಗೆ ಬಹಳ ಮರೆವು. ಕೋಪಿಷ್ಠ ಹುಡುಗಿ. ಆ ಮರದಿಂದಾನಾದರೂ ಕ್ರಿಸ್ಮಸ್‌ನ ಒಳ್ಳೇತನ ಮತ್ತೆ ನನ್ನ ಬುದ್ಧಿವಾದಗಳನ್ನ ನೆನಪಿಟ್ಟುಕೋತೀಯೇನೋ!” ಎಂದು ಕ್ಷೀಣವಾಗಿ ನಕ್ಕರು. ನಮ್ಮ ಕೆಟ್ಟ ಬುದ್ಧಿಗಳಿಂದಾಗಿಯಾದರು ನಾವು ಎಷ್ಟು ಜನರ ಹತ್ತಿರವಾಗುತ್ತೇವೆ, ಅಲ್ಲ?

      ಆಮೇಲೆ ಕೆಲವೇ ದಿನಗಳಲ್ಲಿ ತಾನು ಭವಿಷ್ಯ ನುಡಿದ ಹಾಗೆಯೇ ಸಿಸ್ಟರ್ ಮಾರ್ಥಾ ಹೊರಟುಹೋದರು. ನನ್ನ ಕುಟುಂಬ ದುಃಖತಪ್ತವಾಗಿತ್ತು. ಎಲ್ಲಕಿಂತ ಹೆಚ್ಚಾಗಿ ಅವರಿಂದಲೇ ಬಾಲ್ಯದ ತೊದಲುಹಾಡುಗಳನ್ನು, ಗಿಡಗಳ ಬಗೆಗಿನ ಪ್ರೀತಿಯನ್ನು ಕಲಿತಿದ್ದ ನನ್ನ ಪುಟ್ಟ ಮಗಳು ಮೊಟ್ಟಮೊದಲ ಬಾರಿಗೆ ಸಾವೊಂದನ್ನು ಕಂಡಿದ್ದು ಮತ್ತು ಇನ್ನಿಲ್ಲದಂತೆ ಅತ್ತಿದ್ದನ್ನು ಮರೆಯಲಾಗುವದೇ ಇಲ್ಲ. ಭಾರತದೆಲ್ಲೆಡೆಯಿಂದ ಅವರ ಶಿಷ್ಯೆಯರು ಬಂದು ಅವರ ಮರಣಯಾತ್ರೆಗೆ ತಾವೇ ಹೆಗಲುಕೊಟ್ಟರು. ಅದೊಂದು ಅಪರೂಪದ ಸನ್ನಿವೇಶ. ಸಿಸ್ಟರ್ ಮಾರ್ಥಾ ಪ್ರತಿಯೊಬ್ಬರನ್ನೂ ತಮ್ಮದೇ ಆದ ರೀತಿಯಲ್ಲಿ ಮುಟ್ಟಿದ್ದರು. ಅವರಿಗೆ ವಿದಾಯ ಹೇಳಿ ವಾಪಾಸು ಬಂದ ಮರುದಿನವೇ ಹೋಗಿ ಒಂದು ಪುಟ್ಟ ಕ್ರಿಸ್ಮಸ್ ಗಿಡವನ್ನು ಖರೀದಿಸಿ ತಂದು ತೋಟದ ನಟ್ಟನಡುವಿನಲ್ಲಿ ನೆಟ್ಟದ್ದಾಯಿತು.

 

ಒಂದೆರಡು ತಿಂಗಳು ಕಳೆದು ಕ್ರಿಸ್ಮಸ್ ಹಿಂದಿನ ದಿನ ಬಂದಿತು..ತನ್ನ ಎಂದಿನ ಆಕರ್ಷಣೆಯೊಂದಿಗೆ.. ಮಾಮೂಲಿನಂತೆ ಕ್ರಿಸ್ಮಸ್ ಕಾರ್ಡುಗಳನ್ನು ಅಂಚೆಯವ ನೀಡಿಹೋದ. ಈ ಬಾರಿ ಎಲ್ಲರ ಹೆಸರಿಗೂ ಒಂದೇ ಕೈಬರಹದ ಲಕೋಟೆಗಳಿದ್ದವು. ಯಾರಿರಬಹುದೆಂದು ಬಿಚ್ಚಿನೋಡಿದರೆ ಅಲ್ಲಿ ಸಿಸ್ಟರ್ ಮಾರ್ಥಾರ ಸಹಿಯಿತ್ತು!! ತಾನು ತೆರಳುವ ಮೊದಲೇ ಸಿಸ್ಟರ್ ಮಾರ್ಥಾ ತನ್ನ ಸಹವರ್ತಿಯೊಬ್ಬರ ಕೈಯಲ್ಲಿ ನಮ್ಮೆಲ್ಲರಿಗಾಗಿ ಶುಭಾಶಯ ಪತ್ರಗಳನ್ನು ನೀಡಿ ಸರಿಯಾದ ಸಮಯಕ್ಕೆ ಅಂಚೆಗೆ ಹಾಕುವಂತೆ ತಿಳಿಸಿದ್ದರು. ಅಂದಿನ ಕ್ರಿಸ್ಮಸ್ ನಮ್ಮೆಲ್ಲರಿಗೆ ಬಹಳ ವಿಶೇಷವಾಗಿತ್ತು. ಅಂದು ಸಿಸ್ಟರ್ ಮಾರ್ಥಾ ನಮ್ಮೊಂದಿಗಿದ್ದರು.

 

ಅವರ ನೆನಪಿನಲ್ಲಿ ನೆಟ್ಟ ಕ್ರಿಸ್ಮಸ್ ಗಿಡ ಇವತ್ತು ದೊಡ್ಡ ಮರವಾಗಿದೆ. ಬಹಳ ವರ್ಷಗಳ ನಂತರ ಅದರಡಿಯಲ್ಲಿ ಕ್ರಿಸ್ಮಸ್ ಆಚರಿಸಲು ತಯಾರಾಗುತ್ತಿದ್ದೇವೆ. ನನ್ನ ತೋಟ ನೋಡಿಕೊಳ್ಳುವ ವೆಂಕಟಮ್ಮ ಅದರ ಬಗ್ಗೆ ವಿಶೇಷ ನಿಗಾ ವಹಿಸುತ್ತಾರೆ. ಮಕ್ಕಳು ಅದರ ನೆರಳಿನಲ್ಲಿ ಆಡಿಕೊಳ್ಳುತ್ತಾರೆ. ಆಗಾಗ ಒಂದಷ್ಟು ಪಕ್ಷಿಗಳು ಬಂದು ಅದರ ಗೆಲ್ಲುಗಳ ಸುರಕ್ಷೆಯಲ್ಲಿ ಗೂಡುಕಟ್ಟಿ ಮರಿಮಾಡಿ ಹಾರಿಯೂ ಹೋಗುತ್ತವೆ.  ಕ್ರಿಸ್ಮಸ್ ಮರ ತನ್ನಪಾಡಿಗೆ ತಾನು ಆನಂದವಾಗಿ ಬೆಳೆದುಕೊಂಡಿದೆ.

    ನಾನಂದುಕೊಳ್ಳುತ್ತೇನೆ, ಸಿಸ್ಟರ್ ಮಾರ್ಥಾ ಅದರ ಜತೆ ಮಾತನಾಡುತ್ತಿರಬಹುದು.

 

ಎಲ್ಲರಿಗೂ ಕ್ರಿಸ್ಮಸ್ ಶುಭಾಶಯಗಳು.

 

ಚಿತ್ರಕೃಪೆ: http://www.digitalblasphemy.com

ಬಣ್ಣಗಳಲ್ಲಿ ಕರಗಿದವನ ಕ್ಯಾನ್ವಾಸು

ಮಿಕ್ ಡೇವಿಸ್ ನಿರ್ದೇಶನದ ಚಲನಚಿತ್ರ ‘ಮೌಡಿಗ್ಲಿಯಾನಿ’ (‘Modiglani’ –  ಇಟಾಲಿಯನ್ ಹಾಗೂ ಫ್ರೆಂಚ್ ಉಚ್ಛಾರಣೆಗೆ ಅನುಗುಣವಾಗಿ) 2004ರಲ್ಲಿ ಬಿಡುಗಡೆಯಾದಾಗ ವಿಮರ್ಶಕರೆಲ್ಲ ಅದನ್ನು ವಿಪರೀತವಾಗಿ ಟೀಕಿಸಿದರು. ಇಡೀ ಚಲನಚಿತ್ರ ಜಾಳುಜಾಳಾಗಿದೆ, ಬಿಬಿಸಿ ಚ್ಯಾನೆಲ್ಲಿಗೋಸ್ಕರ ನಿರ್ಮಿಸಿದಂತಿದೆ, ಅತಿ ಕೆಟ್ಟದಾಗಿದೆ, ಮೌಡಿಗ್ಲಿಯಾನಿಯನ್ನು ಬರೆ ಒಬ್ಬ ಹುಚ್ಚುಕಲಾವಿದನೆಂಬಂತೆ ಚಿತ್ರೀಕರಿಸಲಾಗಿದೆ – ಹೀಗೇ ಮುಂತಾದ ಹಲವಾರು ಅಪವಾದಗಳು ಚಲನಚಿತ್ರದ ಬಗ್ಗೆ ಕೇಳಿಬಂದವು. ನನ್ನ ಮಟ್ಟಿಗೆ ಹೇಳುವದಾದರೆ ಹೆಸರಾಂತ ವಿಮರ್ಶಕರ ಮಾತುಗಳನ್ನ ನಂಬಿ ನಾನು ಬಹಳ ಸಾರಿ ಮೋಸಹೋಗಿರುವದುಂಟು. ಕೆಲವರು ಒಂದು ಚಲನಚಿತ್ರವನ್ನು ಹೇಗೆಹೇಗೆಲ್ಲ ಕೆಟ್ಟಕೆಟ್ಟದಾಗಿ ಬೈಯಲು ಸಾಧ್ಯ ಅಂತ ತಿಳಿದುಕೊಳ್ಳಲು ಕೂಡ ನಾನು ಇಂತಹ ವಿಮರ್ಶೆಗಳನ್ನ ಓದಿ ತುಂಬ ಹೊತ್ತು ನಗಾಡುವುದು ಇದೆ. ನನಗೆ ಮೌಡಿಗ್ಲಿಯಾನಿಯ ಹೆಸರು ಪರಿಚಯವಾದದ್ದು ನನ್ನ ಮೆಚ್ಚಿನ ಕವಯಿತ್ರಿಯೊಬ್ಬಳು ಆತನ ಪ್ರೇಯಸಿಯಾಗಿದ್ದಳು ಅನ್ನುವ ಕಾರಣದಿಂದಾಗಿ. ಮೌಡಿಗ್ಲಿಯಾನಿ ಒಬ್ಬ ಪ್ರಖ್ಯಾತ ಕಲಾವಿದ, ವ್ಯಾನ್ಗೋನ ಜೀವನಕ್ಕೆ ಆತನ ಬದುಕನ್ನು ಹೋಲಿಸಲಾಗುತ್ತದೆ ಎಂದು ಕೂಡ ಎಲ್ಲೊ ಓದಿದೆ. ಆತನ ಕೆಲ ಚಿತ್ರಗಳ ಬಗ್ಗೆ, ಆತನ ಶೈಲಿಯ ಬಗ್ಗೆ ಕೂಡ ಕೊಂಚ ಮಾಹಿತಿ ದಕ್ಕಿತು. ಆಮೇಲೊಂದು ತಮಾಷೆಯಾಯಿತು. ಹೀಗೇ ಒಂದು ದಿನ ಚ್ಯಾನೆಲ್ ಸರ್ಫ್ ಮಾಡುತ್ತಿದ್ದಾಗ ಅದೇ ಹೆಸರಿನ ಚಲನಚಿತ್ರ ಶುರುವಾಗಿಬಿಡಬೇಕೆ? ಸುಮ್ಮನೆ ಕುತೂಹಲಕ್ಕೆ ಕೂತು ನೋಡಿದೆ. ಬರೆಯಲೆಬೇಕು ಅನ್ನಿಸಿತು.
‘ಮೌಡಿ’ ಅಂದರೆ ಫ್ರೆಂಚ್ ಭಾಷೆಯಲ್ಲಿ ‘ಶಾಪ’ ಎಂದು ಅರ್ಥ ಬರುತ್ತದಂತೆ. ಇಟಲಿಯಿಂದ ಪ್ಯಾರಿಸಿಗೆ ಬಂದು ನೆಲೆಸಿದ ಕಲಾವಿದ ಅಮೇದಿಯೋ ಕ್ಲಮೆಂತ್ ಮೌಡಿಗ್ಲಿಯಾನಿಯನ್ನು ಪ್ಯಾರಿಶಿಯನರು ‘ಮೌಡಿ’ ಎಂದೇ ಕರೆದರು. ಚಲನಚಿತ್ರ ಮೌಡಿಗ್ಲಿಯಾನಿಯ ಶಾಪಗ್ರಸ್ತ ಜೀವನದ ಕೊನೆಯ ಕೆಲ ವರುಷಗಳನ್ನು ಮಾತ್ರ ನೋಡುಗರಿಗೆ ಒದಗಿಸುತ್ತದೆ. ಚಲನಚಿತ್ರದ ಒಂದು ಫ್ಲ್ಯಾಶ್ ಮೌಡಿಗ್ಲಿಯಾನಿಯ ಹುಟ್ಟನ್ನು ತೋರಿಸುತ್ತದೆ. ಸ್ಥಳ, ಇಟಲಿದೇಶದ  ಟಸ್ಕನಿಯ ಲಿವೋರ್ನೊ. ಮೌಡಿಗ್ಲಿಯಾನಿಯ ತಂದೆ ಲೇವಾದೇವಿಯಲ್ಲಿ ದುಡ್ಡನ್ನೆಲ್ಲ ಕಳೆದುಕೊಂಡಿದ್ದಾನೆ. ಮನೆಯ ಎಲ್ಲ ವಸ್ತುಗಳನ್ನು ಹರಾಜು ಹಾಕಲು ಪೊಲೀಸರು ಮನೆಯೊಳಗೆ ನುಗ್ಗಿದ್ದಾರೆ. ಇಡಿ ಮನೆ ಖಾಲಿಯಾಗಿದೆ. ಮೌಡಿಗ್ಲಿಯಾನಿಯ ತಾಯಿಯ ಹೆರಿಗೆ ಮಂಚದ ಮೇಲೆ ಮನೆಯ ಆಳೊಬ್ಬ ಆತುರಾತುರವಾಗಿ ಬೇಕಾದ ಸಾಮಾನುಗಳನ್ನೆಲ್ಲ ಒಟ್ಟುತ್ತಿದ್ದಾನೆ. ಟಸ್ಕನಿಯ ಕಾನೂನಿನ ಪ್ರಕಾರ ಗರ್ಭಿಣಿಯ ಅಥವ ಹೆರಿಗೆಯಾಗುತ್ತಿರುವ ಹೆಂಗಸಿನ ಸಾಮಾನುಗಳನ್ನು ಸರ್ಕಾರ ವಶಪಡಿಸಿಕೊಳ್ಳುವಂತಿಲ್ಲ. ಇನ್ನೊಂದು ಫ್ಲ್ಯಾಶಿನಲ್ಲಿ ಮನೆಯ ಗೋಡೆಯ ಮೇಲೆ ಚಿತ್ರ ಬರೆದು ನುರಿತ ಕಲಾವಿದನಂತೆ ಕೆಳಗೆ ಸಹಿ ಮಾಡುವ ಪುಟ್ಟ ಅಮೇದಿಯೊ.
ಮತ್ತೆಲ್ಲ ಚಿತ್ರದುದ್ದಕ್ಕು ಕಾಣಬರುವದು ಮೊದಲನೆ ಮಹಾಯುದ್ಧ ನಂತರದ ಪ್ಯಾರಿಸ್, ಅಲ್ಲಿಯ ರಾತ್ರಿಜೀವನ, ಕಲ್ಲುಹಾಸಿನ ಬೀದಿಗಳು, ಅಲ್ಲಿನ ಕಲಾವಿದರೆಲ್ಲ ಒಟ್ಟುಸೇರುತ್ತಿದ್ದ ಸುಪ್ರಸಿದ್ಧ ಕೆಫೆ ಮತ್ತು ಮೌಡಿಗ್ಲಿಯಾನಿಯ ಅವಸಾನ. ಮೌಡಿಯ ನೋವುಗಳು ಹಲವಾರು ಬಗೆಯವು. ಬಾಲ್ಯದಿಂದಲು ಟಿ.ಬಿ.ಯಿಂದ ನರಳುತ್ತಿದ್ದ ಮೌಡಿಗ್ಲಿಯಾನಿಗೆ ತಾನು ಹೇಗಿದ್ದರು ಬೇಗದಲೆ ಸಾಯುವವ ಎಂದು ತಿಳಿದಿದ್ದು ಆತ ಹಲವಾರು ದುಶ್ಚಟಗಳಿಗೆ ತನ್ನನ್ನು ಒಡ್ಡಿಕೊಳ್ಳಲು ಕಾರಣವಾಯಿತು.  ಪ್ಯಾಬ್ಲೋ ಪಿಕಾಸೋನ ಸಮಕಾಲೀನನಾಗಿದ್ದ ಮೌಡಿಗ್ಲಿಯಾನಿಗೆ ಪಿಕಾಸೊನ ಬಗ್ಗೆ ವಿಚಿತ್ರವಾದ ಅಸಹನೆ. ಕೆಫೆ ರೊತೊಂದ್‌ನಲ್ಲಿ ಪಿಕಾಸೋನನ್ನು ಮೌಡಿಗ್ಲಿಯಾನಿ ಬಹಿರಂಗವಾಗಿ ಗೇಲಿ ಮಾಡಿದರೆ, ಪಿಕಾಸೋ ಔತಣಕೂಟವೊಂದರಲ್ಲಿ ಮೌಡಿಯನ್ನು ಕತ್ತಿಯಿಂದ ಇರಿದು ರಕ್ತಹರಿಸುವೆನೆಂದು ನಾಟಕೀಯವಾಗಿ ಘೋಷಿಸುತ್ತಾನೆ. ಇಬ್ಬರದೂ ಒಂದು ತರಹದ ಪ್ರೇಮ-ದ್ವೇಷಗಳ ಸಂಬಂಧ. ಪ್ಯಾರಿಸಿನ ಪ್ರತಿಷ್ಠಿತ ವಾರ್ಷಿಕ ಕಲಾಸ್ಪರ್ಧೆಯಲ್ಲಿ ಮೌಡಿಗ್ಲಿಯಾನಿ ಭಾಗವಹಿಸುವಂತೆ ಆತನ ಸ್ನೇಹಿತರು ಮಾಡುವ ಪ್ರಯತ್ನವೆಲ್ಲ ವ್ಯರ್ಥವಾಗುತ್ತದೆ. ಇಂಥ ಸ್ಪರ್ಧೆಗಳೆಲ್ಲ ತನ್ನ ಸಾಮಥ್ರ್ಯವನ್ನು ಅಳೆಯಲಾರವು ಎಂದು ನಂಬಿದವ ಮೌಡಿ. ತನ್ನ ಜೀವನದ ಬೆಲೆಬಾಳುವ ವರುಷಗಳನ್ನು ವ್ಯಯ ಮಾಡದಂತೆ ಪ್ರೇರೇಪಿಸಲು ಪಿಕಾಸೊ ಮೌಡಿಗ್ಲಿಯಾನಿಯನ್ನು ತನ್ನ ಕಾರಿನಲ್ಲಿ ಒಂದೆಡೆ ಕರೆದೊಯ್ಯುತ್ತಾನೆ. ವೈಭವೋಪೇತ ಬಂಗಲೆಯೊಂದನ್ನು ಪ್ರವೇಶಿಸುವ ಮೌಡಿಗ್ಲಿಯಾನಿಗೆ ಹಣ್ಣುಹಣ್ಣು ಮುದುಕನಾಗಿ ಕುಂಚ ಹಿಡಿವ ಶಕ್ತಿ ಕಳೆದುಕೊಂಡಿರುವ ಮಹಾನ್ ಕಲಾವಿದ ರೆನ್ವಾ ಕಂಡುಬರುತ್ತಾನೆ. ರೆನ್ವಾನ ಮನೆಯಿಂದ ಮರಳುವ ವೇಳೆ ಪಿಕಾಸೊ ಮತ್ತು ಮೌಡಿಗ್ಲಿಯಾನಿಯ ನಡುವೆ ನಡೆವ ಸಂಭಾಷಣೆ, ಗೇಲಿಮಾತು ಅವರ ಸಂಬಂಧದ ಪ್ರತೀಕಗಳಂತೆನ್ನಿಸುತ್ತವೆ.

ಮೌಡಿ - ನಿಜಜೀವನದ ಭಾವಚಿತ್ರ

ನಿರ್ಗತಿಕ ಕಲಾವಿದ ಸ್ನೇಹಿತರೊಂದಿಗೇ ಮಶ್ಕಿರಿ ಮಾಡಿಕೊಂಡು ಬೀದಿಬೀದಿ ತಿರುಗುವ ಮೌಡಿಗ್ಲಿಯಾನಿಯದು ನಾಳೆಯೆ ಇಲ್ಲ ಎನ್ನುವಂತೆ ಬಾಳುವ ಬೊಹೀಮಿಯನ್ ಬದುಕು. 1917ರ ಸುಮಾರಿಗೆ ಆತನಿಗೆ ಪರಿಚಯವಾದ ಹುಡುಗಿ ಝಾನ್. ಆಕೆಯ ಜತೆ ಕಳೆದ ವರುಷಗಳು ಮೌಡಿಗ್ಲಿಯಾನಿಯ ಜೀವನದ ಅತ್ಯಂತ ಪ್ರಮುಖ ಕಾಲಘಟ್ಟ. ಬೂರ್ಜ್ವಾ ಕ್ಯಾಥೊಲಿಕ್ ಕುಟುಂಬದ ಝಾನ್ ಯಹೂದಿಯಾಗಿದ್ದ ಮೌಡಿಗ್ಲಿಯಾನಿಯನ್ನು ಪ್ರೇಮಿಸಿದ್ದು, ಆತನೊಂದಿಗಿರುವುದು ಆಕೆಯ ಕುಟುಂಬದವರ ವಿರೋಧಕ್ಕೆ ಕಾರಣವಾಗುತ್ತದೆ. ಝಾನಳಿಗೆ ಒಂದು ಹೆಣ್ಣುಮಗುವೂ ಆಗುತ್ತದೆ. ಆದರೆ ಮೌಡಿಗೆ ತನ್ನ ವ್ಯಸನಗಳೇ ಹೆಚ್ಚು.  ಝಾನ್ ಆತನಿಂದ ಕೆಲಕಾಲ ದೂರವಾಗುತ್ತಾಳೆ. ಇದೇ ವೇಳೆಗೆ ಅತಿಯಾಗಿ ಮಾದಕವಸ್ತು ಸೇವಿಸಿ ಮತ್ತನಾಗಿರುವ ಮೌಡಿಯನ್ನು ಸೆರೆಮನೆಗೆ ಹಾಕಲಾಗುತ್ತದೆ. ಜತೆಗೇ ಪ್ರಿಯ ಸ್ನೇಹಿತನ ಸಾವು ಕಂಗೆಡಿಸುತ್ತದೆ. ಈ  ಸಮಯದಲ್ಲಿ ಬಿಂಬಿಸಲಾಗಿರುವ ಮೌಡಿಯ ನೋವು, ಅಸಹಾಯಕತೆಗಳಿಗೆ ಉಪಮೆಯೇ ಸಿಗದು. ಮೌಡಿಗ್ಲಿಯಾನಿಗೆ ಮಗುವನ್ನು ನೋಡಿಕೊಳ್ಳಲು ಶಕ್ತಿಯಿಲ್ಲವೆಂಬ ಕಾರಣ ನೀಡಿ ಝಾನಳ ಕುಟುಂಬ ಮಗುವನ್ನು ದೂರದೂರಿನ ಕಾನ್ವೆಂಟೊಂದಕ್ಕೆ ಸೇರಿಸುತ್ತದೆ. ಈಗ ಮೌಡಿ ಅಸಹಾಯಕ. ಹಣ ಬೇಕಾಗಿ ಬಂದಾಗ ಆತ ವಿಧಿಯಿಲ್ಲದೆ ವಾರ್ಷಿಕ ಕಲಾಸ್ಪರ್ಧೆಗೆ ಹೆಸರು ನೋಂದಾಯಿಸುತ್ತಾನೆ. ಆತನ ಹಿಂದೆಯೆ ಪಿಕಾಸೋ ಮತ್ತು ಕಲಾವಿದರ ಬಳಗದ ರಿವೆರಾ, ಸುತೀನ್ ಮುಂತಾದ ಸುಪ್ರಸಿದ್ಧ ಕಲಾವಿದರೆಲ್ಲರೂ!! ಈಗ ಮೌಡಿ ಗೆಲ್ಲಲೇಬೇಕು, ತನ್ನ ಪ್ರೀತಿಯ ಮಗಳಿಗಾಗಿ. ಪುನಹ ಗರ್ಭಿಣಿಯಾಗಿರುವ ಝಾನಳನ್ನೆ ಕ್ಯಾನ್ವಾಸಿಗೆ ಇಳಿಸುತ್ತಾನೆ. ಮೊತ್ತಮೊದಲಬಾರಿಗೆ ತನ್ನ ಜೀವನದ ಬಗ್ಗೆ ತೀವ್ರವಾಗಿ ಆಲೋಚಿಸುವ ಮೌಡಿ ಝಾನಳನ್ನು ಮದುವೆಯಾಗಲು ಬಯಸುತ್ತಾನೆ.
ಕಲಾಸ್ಪರ್ಧೆಯ ತೀರ್ಪಿನ ಸಂಜೆ. ಎಲ್ಲರ ಪೆಯಿಂಟಿಂಗುಗಳನ್ನು ತೆರೆಹಾಕಿ ಮುಚ್ಚಲಾಗಿದೆ. ತುಂಬುಗರ್ಭಿಣಿ ಝಾನ್, ಪಿಕಾಸೋ ಮುಂತಾಗಿ ಎಲ್ಲ ಕಲಾವಿದರೂ ನೆರೆದಿದ್ದಾರೆ. ಮೌಡಿ ಮಾತ್ರ ಅಲ್ಲಿ ಇಲ್ಲ. ಆತ ಮದುವೆಯ ಲೈಸೆನ್ಸಿಗಾಗಿ ನಗರಸಭೆಯ ಕಚೇರಿಗೆ ಧಾವಿಸಿದ್ದಾನೆ. ತಾನು ವಿಜಯಿಯಾಗುವ ದಿನವೇ ಝಾನಳನ್ನು ಮದುವೆಯಾಗುವ ಹಂಬಲ ಅವನದು. ಇತ್ತಕಡೆ ಇಡೀ ಪ್ಯಾರಿಸ್ ನಗರಿಯೇ ಚಿತ್ರಪಟಗಳ ತೆರೆ ಸರಿವ ಗಳಿಗೆಯನ್ನು ಉಸಿರು ಬಿಗಿಹಿಡಿದು ಕಾದಿದೆ. ಯಾರು ಗೆಲ್ಲಬಹುದು? ಮೌಡಿ ಝಾನಳನ್ನು ಮದುವೆಯಾಗುವನೆ? ದಯವಿಟ್ಟು ಚಲನಚಿತ್ರ ನೋಡಿ.
ಮೌಡಿಗ್ಲಿಯಾನಿಯ ಪಾತ್ರವಹಿಸಿರುವ ಆಂಡಿ ಗಾರ್ಶಿಯಾ ಹಾಗೂ ಪಿಕಾಸೋ ಪಾತ್ರವಹಿಸಿರುವ ಒಮಿದ್ ಜಲೀಲಿ ಉತ್ತಮವಾಗಿ ನಟಿಸಿದ್ದಾರೆ. ಝಾನಳ ಪಾತ್ರವಹಿಸಿರುವ ಎಲ್ಸಾ ಜಿಲ್ಬರ್ಸ್ಟೀನ್ ಮೌಡಿಗ್ಲಿಯಾನಿ ರಚಿಸಿರುವ ಸುಪ್ರಸಿದ್ಧ ಪೆಯಿಂಟಿಂಗಿನ ಝಾನಳಂತೆಯೆ ಕಾಣುತ್ತಾರೆ. ಸಂಗೀತ ಚಿತ್ರ ಮುಗಿದ ಮೇಲೂ ಕಾಡುತ್ತದೆ. ಕ್ಯಾಮೆರಾ ಕೆಲಸ ಉಚ್ಛ ಕ್ವಾಲಿಟಿಯದು. ಮುಖ್ಯ ಕೊರತೆ ಎಂದರೆ ಮೌಡಿಗ್ಲಿಯಾನಿಯ ಬಗ್ಗೆ ಏನೂ ಗೊತ್ತಿರದೆ ಚಿತ್ರ ನೋಡಲು ಕೂಡುವ ಪ್ರೇಕ್ಷಕರಿಗೆ ಉಂಟಾಗಬಹುದಾದ ಗೊಂದಲ. ಆತನ ವ್ಯಸನ, ವ್ಯಕ್ತಿತ್ವ ಹಾಗು ಕಲಾಶೈಲಿಗಳ ಬಗ್ಗೆ ಚಿತ್ರದಲ್ಲಿ ಹೆಚ್ಚಿನ ಮಾಹಿತಿ ಇದ್ದಿದ್ದರೆ ಚೆನ್ನಾಗಿತ್ತು ಅನ್ನಿಸುತ್ತದೆ. ತಾನು ಜೀವಿಸಿದ್ದಾಗ ಕೇವಲ ಒಂದು ಚಿತ್ರಪ್ರದರ್ಶನವನ್ನು ಮಾತ್ರ ಮಾಡಿದ್ದ, ಬಡತನದಲ್ಲಿಯೆ ಸತ್ತುಹೋದ ಮೌಡಿಗ್ಲಿಯಾನಿಯ ಚಿತ್ರಗಳಿಗೆ ಇಂದು ಮಿಲಿಯಗಟ್ಟಲೆ ಡಾಲರು ತೆತ್ತು ಕೊಳ್ಳುವವರಿದ್ದಾರೆ. ಆತನ ಮಗಳು ಝಾನ್ ಮೌಡಿಗ್ಲಿಯಾನಿಗೆ ಈ ಚಲನಚಿತ್ರವನ್ನು ಅರ್ಪಿಸಲಾಗಿದೆ.
ಚಿತ್ರಕೃಪೆ: http://www.misamcgll.ca ಮತ್ತು http://www.jokerartgallery.com

ನಾನು ಹುಡುಕುತ್ತಿದ್ದ ಹಾಡು!!

ನನ್ನ ಖುಶಿಗಳನ್ನ, ಬೇಜಾರುಗಳನ್ನ ಬಹಾಳ ದಿನಗಳಿಂದ ನನ್ನ ಹತ್ತಿರವೆ ಇಟ್ಟುಕೊಂಡು ಸಾಕಾಗಿದೆ. ನಿಮ್ಮ ಹತ್ತಿರವೂ ಹಂಚಿಕೊಳ್ಳುವಾ ಅಂತ. ಆದರೂ ಯಾಕೊ ಬ್ಲಾಗರುಗಳೂ ಸಪ್ಪೆಯಾಗಿಬಿಟ್ಟಹಾಗಿದಾರೆ. ಮುಂಚೆ ಒಂದು ಗಂಟೇಲಿ ಕಡಿಮೆ ಅಂದರು ಮೂರುನಾಕು ಹೊಸ ಪೋಸ್ಟುಗಳು ವರ್ಡ್‌ಪ್ರೆಸ್ ಡ್ಯಾಶ್‌ಬೋರ್ಡಿನಲ್ಲೆ ಕಂಡಿರೋವು. ಅದಲ್ಲದೆ ಬ್ಲಾಗ್‌ಸ್ಪಾಟಿನವು ಬೇರೆ. ಬ್ಲಾಗ್ ಲೋಕದ ಈ ನೂತನ ತಲ್ಲಣದ ಬಗ್ಗೆ ರಿಸರ್ಚ್ ಮಾಡುವಾ ಅಂತ ಯೋಚಿಸಿದರೆ ಅದರಲ್ಲಿ ಹೊಳೆದಿದ್ದು ಎರಡು ಅಥವಾ ಮೂರು ಪದಗಳು – ತಲ್ಲಣ, ತಳಮಳ ಮತ್ತು ತಲೆಮಾರು. ಇತ್ತೀಚೆಗೆ ಎಲ್ಲರೂನು ಇವುಗಳ ಸುತ್ತಲೆ ಗಿರ್ಕಿ ಹಾಕುವ ಹಾಗಿದೆ.

ತಲ್ಲಣವನ್ನು ಬಿಟ್ಟುಹಾಕಿ, ಏನಾದರು ಚಟ್‌ಪಟಾ ತಿನ್ನುವ ಅಂತ ಸಂಜೆ ಅಪರೂಪಕ್ಕೆ ಹೊರಬಿದ್ದ  ನನಗೆ ತುಮಕೂರಿನ ರಸ್ತೆಯಲ್ಲಿ ಹೊಸ ರೆಸ್ಟೊರೆಂಟೊಂದು ಕಣ್ಣಿಗೆ ಬಿತ್ತು. ಹೆಸ್ರು ’ಸಿಲ್ವರ್ ಆಪಲ್’ ಅಂತ. ಅಲ್ಲಿ ವಾಕರಿಕೆ ಬರೋವಷ್ಟು ಹಾಟ್ ಚಾಕೊಲೆಟ್ ಕೇಕ್ ತಿಂದು ಊಟ ಮಾಡಲಿಕ್ಕೇ ಆಗಲಿಲ್ಲ!! ಹಾಗೇ ಪೆಂಡಿಂಗ್ ಇದ್ದ ವ್ಯಾಸರಾಯ ಬಲ್ಲಾಳರ ಪುಸ್ತಕವೊಂದನ್ನು ಕೈಗೆತ್ತಿಕೊಂಡರೆ ನಮ್ಮ ’ಮ್ಯಾಕ್ಸಿಮಮ್ ಸಿಟಿ’ಯ ಕತೆಗಳು ಆವರಿಸಿಕೊಂಡು ಪ್ರೇತಗಳ ಹಾಗೇ ಕಾಡಲು ಶುರುವಿಟ್ಟವು. ಯಾವುದೊ ಸಿನೆಮಾದ ಬಗ್ಗೆ ಅರ್ಧ ಬರೆದು ತಲೆ ತುರಿಸಿಕೊಂಡರು ಮುಂದೆ ಹೋಗಲಾಗಲಿಲ್ಲ. ಪ್ರೋಕ್ರಾಸ್ಟಿನೇಶನ್ ಅನ್ನುವದು ಎಂಥ ಕಚಡ ರೋಗವು, ಅದರ ಆಳಗಳೇನು ಅನ್ನುವದು ಕಳೆದ ಕೆಲ ತಿಂಗಳುಗಳಲ್ಲಿ ಚೆನ್ನಾಗಿಯೇ ತಿಳಿಯಿತು. ನಾಟ್ ಎನಿಮೋರ್!! ಅಂತ ನನಗೆ ನಾನೇ ಒದ್ದುಕೊಂಡು ಮೈಕೊಡವಿ ಎದ್ದಿದೇನೆ.

ಮಾನ್ಸೂನು ಮೋಡಗಳು ಏನು ಓಡುತ್ತವಲ್ಲ, ಯಾರಿಗೊ ಅಪಾಯಿಂಟ್‌ಮೆಂಟ್ ಕೊಟ್ಟಿರುವ  ಹಾಗೆ! ಮಳೆಗಾಲದಲ್ಲಿ ಎಲ್ಲರಿಗೆ ಆಲಸ್ಯ ಬಂದರೆ, ನನಗೆ ಕೆಟ್ಟ ಉತ್ಸಾಹ!! “ನಿಂದು ವಾಟರ್ ಸೈನ್, ಅದಕ್ಕೆ ನಿಂಗೆ ನೀರಿನ ಹತ್ತಿರ ಇದ್ದರೇ ಖುಶಿ” ಅಂತ ಯಾರೊ  ಹೇಳಿದ್ದ ನೆನಪು. ಅದಕ್ಕೆ ಸರಿಯಾಗಿ ಈಗ ಶಾಲೆ ಬಿಡುವ ಸಮಯದಲ್ಲೆ ಮಳೆ ಬೇರೆ. ಅರ್ಥಾತ್  ಸೃಷ್ಟಿಯ ’ಡಿಂಗಾಲಲ ಹೊಯ್ ಹೊಯ್’ಟೈಮ್. ದಿನಾ ನೆಂದುಕೊಂಡು ಅವಳು ಖುಶಿಯಾಗಿ ಬರುವುದು. ನಾನು ಥೇಟ್ ನಮ್ಮಮ್ಮ ಮಾಡುತ್ತಿದ್ದ ಥರವೆ ಟವಲು, ಸ್ವೆಟರು ಹಿಡಿದುಕೊಂಡು ಅವಳ ಮೇಲೆ ಪೌನ್ಸ್ ಮಾಡಲು ಕಾದಿರುವುದು. ಬಲೇ ಕೆಟ್ಟ ಪಿಳ್ಳೆ ಅದು. ಪೇಂಟಿಂಗ್ ಮಾಡೋಕೆ ನೀರು ಬೇಕು ಅಂತ ಲೋಟದಲ್ಲಿ ಮಳೆ ನೀರು ಹಿಡಿಯುತ್ತ ಕೂತಿರುತ್ತೆ. ಹೋಂವರ್ಕ್ ಮಾಡ್‌ಬೇಕೂ ಅಂದ್ರೆ ಥರಾವರಿ ನಾಟಕ ಆಡತ್ತೆ. ಅಮ್ಮನ್ ಹತ್ತಿರ ಹೇಳಿದರೆ ’ಹಿಸ್ಟರಿ ರಿಪೀಟ್ಸ್’ ಅಂತ ಉದ್ಗರಿಸಿ  ’ಹಾಗೇ ಆಗಬೇಕು ಮಗಳೆ’ ಅನ್ನುವಹಾಗೆ ನಗ್ತಾರೆ. ಎಲ್ಲರು ಒಬ್ಬರಾದ ಮೇಲೊಬ್ಬರಹಾಗೆ ಸರತಿಯಲ್ಲಿದೀವಿ ಅಲ್ಲವೆ? ನನ್ನಮ್ಮ, ನಾನು, ನನ್ನ ಮಗಳು..

ಸರತಿ ಅಂದಾಗ ನೆನಪಾಯ್ತು. ನೆನ್ನೆ ನನ್ನ ಫೇವರೆಟ್ ಸೀರಿಯಲ್‌ನ ಡೌನ್‍ಲೋಡ್ ಮಾಡಿಕೊಂಡು ನೋಡುತ್ತಿದ್ದೆ. ಅದರಲ್ಲಿ ಒಂದು ಹಾಡು ತೇಲಿಬಂತು. ಅದನ್ನ ಕೇಳಿದ ಕೂಡಲೆ ಅನ್ನಿಸಿತು, ನಾನು ಇಲ್ಲಿಯತನಕ ಹುಡುಕುತ್ತಿದ್ದ ಹಾಡು ಇದೇನೆ ಅಂತ. ಸ್ವಲ್ಪ ಎಕ್ಸಾಜರೇಶನ್ ಆಯಿತು ಅಂತೀರ? ಅದು ನನ್ನ ಇನ್ನೊಂದು ಹೆಸರಲ್ಲವೆ? ಇರಲಿ. ಹಾಡಿನ ಯುಟ್ಯೂಬ್ ಲಿಂಕನ್ನ ಕೆಳಗ್ ಕೊಟ್ಟಿದೇನೆ.

ಹೇಗಿದೀರ ಎಲ್ರೂ?