ಮೊನ್ನೆ ಮೊನ್ನೆ ಗೆಳತಿಯೊಬ್ಬಳು ಒಂದು ಟೈಲರ್ ಜೋಕು ಹೇಳಿದಳು. ಒಂದೂರಿನಲ್ಲಿ ಒಬ್ಬನೇ ಒಬ್ಬ ಟೈಲರನಿದ್ದನಂತೆ. ಆತನ ಬಳಿ ಒಂದು ಮೀಟರು ಬಟ್ಟೆ ಕೊಟ್ಟರೆ ವಾಪಾಸು ಬರುತ್ತಾ ಇದ್ದಿದ್ದು ಅರ್ಧ ಮೀಟರು ಬಟ್ಟೆಯೇ. ಆತನ ಸಂಸಾರ ಬೆಳೆಯುತ್ತ ಹೋದಹಾಗೆ ಅದು ಕಾಲು ಮೀಟರಿಗೆ ಬಂದು ನಿಂತಿತು. ಜನ ರೋಸಿಹೋದರು. ಇನ್ನಾವುದೋ ಊರಿನಿಂದ ಇನ್ನೊಬ್ಬ ಟೈಲರನನ್ನು ಕರೆದು ಊರಿನಲ್ಲಿ ಸೆಟಲ್ ಮಾಡಿಸಿದರು. ಆತ ಒಂದು ಮೀಟರು ಬಟ್ಟೆ ಇಸಿದುಕೊಂಡು ಮುಕ್ಕಾಲು ಮೀಟರು ಬಟ್ಟೆ ಕೊಟ್ಟ. ಊರ ಜನ ಸೇರಿಕೊಂಡು ಜಗಳ ಮಾಡಿದರು. ಅವ ಜೋರಾಗಿ, ’ಹಯ್ಯೋ, ಅದಕ್ಯಾಕೆ ಬಡ್ಕೋತೀರಿ? ನನ್ ಮನೇಲಿ ಒಂದೇ ಕೂಸಿರೋದು. ಆ ಟೈಲರನ್ಮನೇಲಿ ಮೂರಿದಾವೆ ಗೊತ್ತಾ?’ ಅಂತನ್ನಬೇಕೆ?
ಜೋಕುಗಳು ಹಾಗಿರಲಿ, ಟೈಲರುಗಳು ನಮ್ಮ ಜೀವನದ ಅವಿಭಾಜ್ಯ ಅಂಗ ಅಂತನ್ನಬಹುದು. ಕೆಲವು ಹೆಣ್ಣುಮಕ್ಕಳಿಗೆ ರೆಡಿಮೇಡ್ ಬಟ್ಟೆ ಕೊಳ್ಳುವ ಅಭ್ಯಾಸ ಇದ್ದರೆ ಇನ್ನು ಕೆಲವರಿಗೆ ಕಂಪಲ್ಸರಿಯಾಗಿ ಕ್ಲಾಥ್ ಪೀಸುಗಳನ್ನು ಕೊಂಡುಕೊಂಡೇ ಸಲ್ವಾರ್ ಕಮೀಜ್, ಮಕ್ಕಳಿಗೆ ಫ್ರಾಕು ಇತ್ಯಾದಿ ಹೊಲಿಸುವ ಅಭ್ಯಾಸ. ಸೀರೆಯುಡುವ ಹೆಣ್ಣುಮಕ್ಕಳು ರವಿಕೆ ಹೊಲಿಸಲೇಬೇಕು. ಹೇಗಾದರೂ ಟೈಲರು ಯಾವುದೇ ರೂಪದಲ್ಲಾದರು ನಮಗೆ ಬೇಕೇಬೇಕು. ಟೈಲರ್ ಎಂದರೆ ನನಗೆ ಥಟ್ಟನೆ ನೆನಪಿಗೆ ಬರುವದು ಇಬ್ಬರು ಹೆಂಗಸರು. ನಾನು ಪುಟ್ಟ ಹುಡುಗಿಯಾಗಿದ್ದಾಗಲಿಂದ ನನಗೆ ಥರಾವರಿ ಬಟ್ಟೆ ಹೊಲಿದುಕೊಡುತ್ತಿದ್ದ ನಮ್ಮ ಬೀದಿಯ ‘ಟೇಲರಾಂಟಿ’ ಒಬ್ಬರಾದರೆ, ತನಗೆ ಗೊತ್ತಿದ್ದ ಹೊಲಿಗೆಯ ಕಾಯಕವನ್ನ ನೂರಾರು ಹೆಣ್ಣುಮಕ್ಕಳಿಗೆ ದಿನಾಲೂನೂ ಹೇಳಿಕೊಟ್ಟು ಅವರೆಲ್ಲರ ಪುಡಿಕಾಸು ಸಂಪಾದನೆಗೆ ದಾರಿಯಾಗುತ್ತಿದ್ದ ಕೆಳಗಿನ ಬೀದಿಯ ನನ್ನ ಫ್ರೆಂಡು ದೀಪಾಳ ಅಮ್ಮ. ಅದು ಬಿಟ್ಟರೆ ಶಾಲೆಯ ಯೂನಿಫಾರ್ಮ್ ಹೊಲಿಸಲಿಕ್ಕಾಗಿಯೆ ವರ್ಷಕ್ಕೊಂದಾವರ್ತಿ ನೆನಪಾಗುತ್ತಿದ್ದ ಟೈಲರಾಗಿದ್ದ ನನ್ನ ತಂಗಿಯ ಫ್ರೆಂಡು ರೇಣುವಿನ ಅಪ್ಪ. ಈ ಮೂವರಲ್ಲಿ ಅರ್ಜೆಂಟಾಗಿ ಹೊಲಿಸಬೇಕಿದ್ದ, ರಿಪೇರಿಯಾಗಬೇಕಿದ್ದ ಬಟ್ಟೆಗಳು ಟೇಲರಾಂಟಿಯ ಬಳಿ ಹೋದರೆ, ಹೊಸಾ ಡಿಸೈನು ಅವಶ್ಯವಿದ್ದ ಬಟ್ಟೆಗಳು ತಿಂಗಳ ಮೊದಲೇ ದೀಪಾಳ ಅಮ್ಮನ ಮನೆ ಸೇರುವವು. ಬಟ್ಟೆ ಕೊಡುವ, ಕೇಳುವ ನೆವದಲ್ಲಿ ನಾವು ಇವರುಗಳ ಮನೆಗಳಿಗೆ ಆಗಾಗ ಭೇಟಿನೀಡಿ ಅಲ್ಲಿ ಹೇರಳವಾಗಿ ಕಾಣಬರುತ್ತಿದ್ದ ಮಕ್ಕಳ ಜತೆ ಆಟೋಟ ಮುಗಿಸಿ ಮನೆಗೆ ಮರಳುವ ವೇಳೆಗೆ ಬೈಯಿಸಿಕೊಳ್ಳಲು ರೆಡಿಯಾಗುತ್ತಿದ್ದುದು.
ಎಲ್ಲ ಟೈಲರುಗಳೂ ನಾವು ಹೆಣ್ಣುಮಕ್ಕಳಿಗೆ ಹೊಂದಿಕೆಯಾಗುವದಿಲ್ಲ. ನಾಲಕ್ಕೈದು ಮಂದಿಯೊಡನೆ ‘ಟ್ರಯಲ್ ಎಂಡ್ ಎರರ್ ’ ನಡೆದ ನಂತರವೇನೆ ಯಾರಾದರೊಬ್ಬರು ಮನಸ್ಸಿಗೆ ಹೊಂದುವದು. ಒಂದು ಥರಾ ವಧುವರಾನ್ವೇಷಣೆ ಮಾಡಿದ ಹಾಗೇನೆ ಇದೂನೂ!! ಶಿವಮೊಗ್ಗೆಯಲ್ಲಿ ನಾನು ಓದುತ್ತಿರುವಾಗ ನಾವಿದ್ದ ಜಯನಗರದಲ್ಲಿ ಒಬ್ಬ ಟೈಲರ್ ಬಹಳ ಹೆಸರುವಾಸಿಯಾಗಿದ್ದ. ಹೆಚ್ಚಿನ ಒಳ್ಳೆಯ ಟೈಲರುಗಳೆಲ್ಲ ಗಂಡಸರೇ ಆಗಿರುವುದೊಂದು ವಿಶೇಷ ಅನ್ನಿಸತ್ತೆ ನನಗೆ. ಈತನ ಬಳಿ ಒಮ್ಮೆ ಒಬ್ಬ ಹೆಂಗಸು ಅಳತೆ ಕೊಟ್ಟು ಬಟ್ಟೆ ಹೊಲಿಸಿಕೊಂಡಳೆಂದರೆ ಮುಗಿಯಿತು, ಆತನಿಗೆ ಪುನಹ ಅಳತೆ ಕೊಡುವ ಅವಶ್ಯಕತೆಯೇ ಬರುತ್ತಿರಲಿಲ್ಲ. ಆ ಹೆಣ್ಣುಮಗಳು ದಪ್ಪಗಾದರೂ ತೆಳ್ಳಗಾದರೂ ಅಂದಾಜು ಮಾಡಿಯೇ ಈತ ಬಟ್ಟೆ ಹೊಲಿದುಕೊಡುವನು ಮತ್ತು ಅದು ಕರಾರುವಾಕ್ಕಾಗಿರುತ್ತ ಇತ್ತು!! ಜತೆಗೆ ಅತನ ಮಾತಿನ ಶೈಲಿ ಅತ್ಯಾಕರ್ಷಕ. ಒಮ್ಮೆ ಆತನ ಅಂಗಡಿಗೆ ಭೇಟಿನೀಡಿದ ಹೆಣ್ಣುಮಕ್ಕಳು ಬೇರೆಲ್ಲೂ ಹೋಗುತ್ತಿರಲಿಲ್ಲ ಎಂದು ಪ್ರತ್ಯೇಕವಾಗಿ ಹೇಳಬೇಕೆ? ಆತನ ಒಂದೇ ಒಂದು ಕೊರತೆ ಎಂದರೆ ಕಾಯಿಸುವದು. ಎಂದೂ ಹೇಳಿದ ತಾರೀಖಿಗೆ ಆತ ಬಟ್ಟೆ ಕೊಟ್ಟ ಉದಾಹರಣೆಯೇ ಇಲ್ಲ. ಯಾವಾಗ ಆತನ ಅಂಗಡಿಗೆ ಹೋದರು ಅಲ್ಲಿ ಆತನನ್ನ ಬೈದಾಡುವ ಹೆಂಗಸೊಬ್ಬಳೂ, ಅಕೆಗೆ ನಗುಮುಖದಿಂದ ಸಮಾಧಾನ ಹೇಳುವ ಟೈಲರನೂ ಕಂಡುಬರುವರು. ನಾಲಕ್ಕೈದು ಬಾರಿ ಹೋಗಿಬಂದು ಬೇಸತ್ತು ಕೆಟ್ಟದಾಗಿ ಬೈದುಕೊಂಡರೂ ಮುಂದಿನ ಸಾರೆ ಆತನ ಬಳಿಯೇ ಹೋಗುವದು ಮಾಮೂಲು.
ಮೈಸೂರಿನ ನಾವಿದ್ದ ಲಷ್ಕರ್ ಮೊಹಲ್ಲಾ ಮನೆ ಬಳಿಯ ರಫೀಕನೂ ಬಹಳ ಒಳ್ಳೆಯ ಟೈಲರನೇ. ಅದರೆ ಅವನ ಬಳಿ ಡಿಸಿಪ್ಲಿನಿನ ಕೊರತೆಯಿತ್ತು. ಒಮ್ಮೊಮ್ಮೆ ಬೆಳಗ್ಗೆ ಕೊಟ್ಟ ಬಟ್ಟೆ ಸಂಜೆಗೇ ಹೊಲಿದುಕೊಟ್ಟರೆ ಇನ್ನೊಮ್ಮೆ ಬಟ್ಟೆಯನ್ನೇ ಒಟ್ಟಿದ ರಾಶಿಯ ನಡುವೆ ಕಳೆದುಹಾಕಿ ನಮಗೇ ಹುಡುಕಲು ಹೇಳುತ್ತಿದ್ದ. ಯಾವುದೋ ಡಿಸೈನು ಹೇಳಿಹೋದರೆ ಇನ್ಯಾವುದೋ ಡಿಸೈನು ನಮ್ಮ ಕೈಗೆ ಬರುವುದು. ‘ಇದೂ ಚನ್ನಾಗಿದೆ ಬಿಡಿ ದೀದಿ’ ಎಂದು ಆತ ಹಲ್ಲು ಕಿರಿಯುವಾಗ ಆತನ ಅಂಗಡಿಗೆ ಕಲ್ಲು ಹೊಡೆಯುವಷ್ಟು ಕೋಪ ಬರುವುದು. ನನ್ನ ಮದುವೆಯ ಎಲ್ಲ ಬಟ್ಟೆಗಳನ್ನ ಮಾತ್ರ ಆತ ಶ್ರದ್ಧೆಯಿಂದ ಹೇಳಿದ ಸಮಯದೊಳಗೆ ಸುಂದರವಾಗಿ ಹೊಲಿದುಕೊಟ್ಟಿದ್ದು, ನನ್ನ ಮಗುವಿಗೆ ತಾನೇ ಡಿಸೈನು ಮಾಡಿ ಮುದ್ದಾದ ಫ್ರಾಕು, ಜಂಪರುಗಳನ್ನು ಹೊಲಿದದ್ದು ನೆನೆಸಿ ಸುಮ್ಮನಾಗುವೆ. ಆತನ ಹೊಲಿಗೆಯ ಜತೆಗೇ ಆತನ ಕುಟುಂಬದ ಕಷ್ಟಸುಖಗಳೂ ನಮ್ಮ ಮನೆ ತಲುಪುತ್ತಿದ್ದರಿಂದ ಆತನಿಗೆ ಮಾರ್ಜಿನ್.
ಲೇಡೀಸ್ ಟೈಲರಾಗಿರುವದು ಸುಲಭದ ಕೆಲಸವೇನಲ್ಲ. ಆತನ ಬಳಿ ಮೂರು ತರಹದ ಕ್ಲೈಂಟುಗಳು ಬರುತ್ತಾರೆ. ಮೊದಲನೆಯವರು ತೀರ ಟ್ರೆಡಿಶನಲ್ ಶೈಲಿಯ ಬಟ್ಟೆ ಬಯಸುವವರು. ಇವರನ್ನು ಸಂಭಾಳಿಸುವದು ನುರಿತ ಟೈಲರನಿಗೆ ಆರಾಮು ಕೆಲಸ. ಎರಡನೆಯ ವರ್ಗದವರು ಟೈಲರನ ಮರ್ಜಿ ಕೇಳುವವರು. ಅವರಿಗೆ ತಮಗೆ ಯಾವ ರೀತಿಯ ಬಟ್ಟೆ ಹೊಂದುತ್ತದೆ ಅಂತಲೇ ಗೊತ್ತಿರುವದಿಲ್ಲ. ಟೈಲರು ಸಜೆಸ್ಟ್ ಮಾಡಿದ್ದನ್ನೆ ತಕರಾರು ಮಾಡದೆ ಒಪ್ಪಿಕೊಂಡುಬಿಡುತ್ತಾರೆ. ಇವರು ಟೈಲರನಿಗೆ ಬಲು ಪ್ರಿಯವಾದ ಕ್ಯಾಟಗರಿ. ಇವರ ಬಳಿ ಟೈಲರನಿಗೆ ತನ್ನ ವೃತ್ತಿನೈಪುಣ್ಯವನ್ನ ಆರಾಮವಾಗಿ ಪ್ರಯೋಗಿಸುವ ಅವಕಾಶ ದೊರೆಯುತ್ತದೆ. ಮೂರನೆಯ ವರ್ಗದವರು ಬಯಸುವದು ಟ್ರೆಂಡೀ, ಫ್ಯಾಶನಬಲ್ ಬಟ್ಟೆಗಳನ್ನ. ಯಾವುದೋ ಸೀರಿಯಲ್ಲಿನಲ್ಲೋ, ಮೂವೀಯಲ್ಲೋ ನೋಡಿದ ಯಾವುದೋ ರವಿಕೆ, ಸಲ್ವಾರು, ಕುರ್ತಾ ಇವರಿಗೆ ಹಿಡಿಸಿಬಿಟ್ಟಿರುತ್ತದೆ. ಅದೇ ಡಿಜೈನು ಟೈಲರನಿಂದಲೂ ಬಯಸುತ್ತಾರೆ. ಆತನೂ ಅದೇ ಸೀರಿಯಲ್, ಸಿನೆಮಾ ನೋಡಿದ್ದರೆ ಪರವಾಯಿಲ್ಲ. ಸಾಧಾರಣವಾಗಿ ಈ ವರ್ಗದವರಿಂದ ಟೈಲರ್ ಪರದಾಡುವ ಅವಕಾಶಗಳು ಹೆಚ್ಚು. ಹೊಸ ಫ್ಯಾಶನೊಂದು ಮಾರ್ಕೆಟಿನಲ್ಲಿ ಜನಪ್ರಿಯವಾಗುತ್ತಿದ್ದಂತೆಯೆ ಟೈಲರುಗಳು ಅಪ್ಡೇಟ್, ಅಪ್ ಗ್ರೇಡ್ ಆಗದೆ ಹೋದರೆ ಔಟ್ಡೇಟೆಡ್ ಆಗುವ ಅಪಾಯಗಳೆ ಜಾಸ್ತಿ.
ಈಗೀಗ ನಗರಗಳಲ್ಲಿ ಹೆಚ್ಚಾಗಿ ಕಾಣಬರುತ್ತಿರುವ ‘ಬೂಟಿಕ್’ಗಳು ಈ ದಿಸೆಯಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ಹೊಸದಾದ ಯಾವುದೇ ಟ್ರೆಂಡಿನ ಬಟ್ಟೆ ಹೊಲಿಸಬೇಕೆ? ಬೂಟಿಕ್ಗೆ ಹೋಗಿ.’ಟೈಲರನಿಗೆ ಕೊಡುವ ಮಾಮೂಲಿ ಚಾರ್ಜಿಗಿಂತ ಮೂರರಷ್ಟು ಕೊಟ್ಟರೂ ಪರವಾಯಿಲ್ಲ, ಫ್ಯಾಶನಬಲ್ ಕಟ್ ಇರುವುದಿಲ್ಲವೆ? ನಾವು ಚೆನ್ನಾಗಿ ಕಾಣುವದಕ್ಕೆ ಬೆಲೆ ಕಟ್ಟಲಿಕ್ಕಾಗುತ್ತದೆಯೆ? ’ ಅನ್ನುತ್ತಾಳೆ ಗೆಳತಿ ಉಮಾ. ಅವಳ ಜೊತೆ ರಾಜಾಜಿನಗರದ ಹೆಸರಾಂತ ಬೂಟಿಕ್ ಒಂದಕ್ಕೆ ಭೇಟಿ ನೀಡಿದೆ. ಅದರ ಒಡತಿ ಉಮಾ ತಂದ ಬಟ್ಟೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಅದರ ಕ್ವಾಲಿಟಿಯ ಬಗ್ಗೆ ತೃಪ್ತಿ ವ್ಯಕ್ತಪಡಿಸಿದಳು. ಇನ್ಯಾರೋ ಆಗತಾನೆ ಕೊಟ್ಟುಹೋಗಿದ್ದ ಬಟ್ಟೆಯೊಂದನ್ನ ಎತ್ತಿ ತೋರಿಸಿ ”ಇದು ನೋಡಿ ಉಮಾ, ಇಂಥ ಕಚಡಾ ಕ್ವಾಲಿಟಿ ಬಟ್ಟೆ ಎಲ್ಲ ತಂದುಕೊಟ್ಟು ಚೆನ್ನಾಗಿ ಹೊಲೀರಿ ಅಂತಾರೆ, ಇವ್ರು ಫ್ಯಾಶನ್ ಅಂದ್ರೆ ಏನಂದುಕೋಬಿಟ್ಟಿರ್ತಾರೋ? ನಿಮ್ಥರಾ ಸೆನ್ಸ್ ಆಫ್ ಫ್ಯಾಶನ್ ಇರೋರು ಕಡಿಮೆ ಬಿಡಿ” ಎಂದು ಹೊಗಳಿದಾಗ ಉಮಾ ಉಬ್ಬಿಹೋದಳು! “ಫೈವ್ ಯಿಯರ್ಸಿಂದ ಉಮಾ ನಮ್ ಹತ್ರಾನೇ ಬರ್ತಿದಾರ” ಎಂದು ಆಕೆ ನನ್ನ ಬಳಿ ಹೇಳಿದಾಗಲಂತು ಉಮಾ ಇನ್ನೈದು ವರುಷ ಅಲ್ಲಿಗೇ ಹೋಗುವದು ಖಾತ್ರಿಯಾಗಿಹೋಯಿತು. ಉಮಾ ಯಾವುದೋ ಒಂದು ಡಿಸೈನು ಸೆಲೆಕ್ಟ್ ಮಾಡಿದಾಗ ಅದನ್ನು ಬೂಟಿಕಮ್ಮ ಖಡಾಖಂಡಿತವಾಗಿ ನಿರಾಕರಿಸಿ “ಇದು ನಿಮಗೊಪ್ಪೊಲ್ಲ ಬಿಡಿ ಉಮಾ. ಹೊಲಿಯೋಳು ನಾನು, ಐ ನೋ ದ ಫ್ಯಾಬ್ರಿಕ್, ನಾನು ಹೇಳ್ತೀನಿ, ನಿಮ್ಮ ಪರ್ಸನಾಲಿಟೀಗೆ ಇದೇ ಡಿಸೈನ್ ಹೊಂದೋದು” ಎಂದು ಫರ್ಮಾನು ಹೊರಡಿಸಿದ ರೀತಿಗೇ ಉಮಾ ಮರುಳಾಗಿ ಬೆಕ್ಕಿನಂತೆ ಮುದುರಿ ಹೂಂಗುಟ್ಟಿದಳು. ಹೊರಗೆ ಬಂದಮೇಲೆ “ಎಂಥ ಅಮೇಜಿಂಗ್ ಡಿಸೈನರ್ ಗೊತ್ತಾ ಅವಳು!” ಎಂದು ಉಮಾ ಹೇಳುತ್ತಿದ್ದರೆ ನನಗೆ ನಗು ಉಕ್ಕಿಬರುತ್ತಿತ್ತು. ಬೂಟಿಕಮ್ಮ ಏನೇ ಹೇಳಲಿ, ಆಕೆ ನೀಡಿದ ಬಟ್ಟೆಗಳನ್ನು ಹೊಲಿಯುವಾತನೂ ಟೈಲರನೇ. ನಮ್ಮ ಇಡೀ ಫ್ಯಾಶನ್ ಉದ್ಯಮವೇ ಇಂತಹ ಸಾವಿರಾರು ನಿಷ್ಣಾತ ಟೈಲರುಗಳನ್ನು ಅವಲಂಬಿಸಿರುವಂತಹದು.
ಇನ್ನು ಟೈಲರುಗಳ ಬಗ್ಗೆ ಸಾಹಿತ್ಯಿಕ ಉಲ್ಲೇಖಗಳೂ ಅನೇಕವಿವೆ. ಜರ್ಮನಿಯ ಪ್ರಸಿದ್ಧ ಕಥೆಯಾದ ‘ದ ಫಾಲ್ಸ್ ಪ್ರಿನ್ಸ್’ ಬಹಳ ಮಹತ್ವಾಕಾಂಕ್ಷಿಯಾದ ಯುವಟೈಲರ್ ಲಬಾಕಾನನ ಕಥೆಯಾಗಿದೆ. ತನ್ನ ಒಡೆಯನ ಮನೆಯಿಂದ ಬಹಳ ಬೆಲೆಬಾಳುವ ಬಟ್ಟೆ ಕದ್ದು ಪಲಾಯನ ಮಾಡುವ ಲಬಾಕಾನನಿಗೆ ರಾಜಕುಮಾರ ಓಮರನ ಸಖ್ಯ ದೊರೆಯುತ್ತದೆ. ತನ್ನ ತಂದೆತಾಯಂದರಿಂದ ಬಹುಕಾಲ ದೂರವಿದ್ದ ಓಮರನಿಂದ ಆತನೇ ರಾಜಕುಮಾರನೆಂದು ತೋರ್ಪಡಿಸುವ ಎಲ್ಲ ದಾಖಲೆಗಳನ್ನು ಕದ್ದುಕೊಳ್ಳುವ ಲಬಾಕಾನ ರಾಜನ ಬಳಿ ಹೊಗುತ್ತಾನೆ. ನಿಜವಾದ ಓಮರ್ ಅಲ್ಲಿ ಬಂದಾಗ ಗೊಂದಲವಾಗಿ ಇಬ್ಬರ ಮಧ್ಯೆ ನಿಜವಾದ ರಾಜಕುಮಾರ ಯಾರೆಂದು ತಿಳಿಯಲು ಸ್ಪರ್ಧೆ ಏರ್ಪಡುತ್ತದೆ. ರಾಣಿ ನಿಜವಾದ ರಾಜಕುಮಾರನಿಗೆ ಒಂದು ಪೋಷಾಕು ತಯಾರಿಸಲು ಹೇಳಿದಾಗ ಲಬಾಕಾನ ವಿಜಯಿಯಾಗುವನು. ಕೊನೆಗೆ ದೇವತೆಯೊಬ್ಬಳು ಇಬ್ಬರೆದುರಿಗೂ ಎರಡು ಪೆಟ್ಟಿಗಳನ್ನಿಟ್ಟು ಒಂದನ್ನು ಆಯ್ದುಕೊಳ್ಳಲು ಹೇಳುತ್ತಾಳೆ ಆಗ ರಾಜಕುಮಾರ ಓಮರ್ ಕೀರ್ತಿ ಮತ್ತು ವೈಭವದ ಪೆಟ್ಟಿಗೆಯನ್ನು ಆಯ್ದುಕೊಂಡರೆ, ಲಬಾಕಾನ ಐಶ್ವರ್ಯ ಮತ್ತು ಸಂತಸದ ಪೆಟ್ಟಿಗೆಯನ್ನು ತೆಗೆದುಕೊಳ್ಳುತ್ತಾನೆ. ಓಮರನ ಪೆಟ್ಟಿಗೆಯಲ್ಲಿ ಕಿರೀಟವಿದ್ದರೆ ಲಬಾಕಾನನಿಗೆ ಲಭಿಸುವದು ಸೂಜಿ ಮತ್ತು ದಾರ. ಓಮರನ ಕ್ಷಮೆಯಿಂದ ಮನೆಗೆ ಮರಳುವ ಲಬಾಕಾನ ತನ್ನ ಒಡೆಯನ ಬಟ್ಟೆ ಕದ್ದಿದ್ದಕ್ಕೆ ಶಿಕ್ಷೆ ಅನುಭವಿಸುತ್ತಾನೆ. ಮತ್ತೊಂದು ಊರಿಗೆ ಹೋಗಿ ತನ್ನ ಶ್ರಮದಿಂದ ದುಡಿದು ಗಳಿಸಲು ಆರಂಭಿಸುತ್ತಾನೆ. ಅತನ ಪೆಟ್ಟಿಗೆಯಲ್ಲಿದ್ದ ಸೂಜಿ ದಾರಗಳು ಆತನಿಗೆ ಬಟ್ಟೆ ಹೊಲಿದುಕೊಟ್ಟು ಖ್ಯಾತಿ ಗಳಿಸುವಂತೆ ಸಹಾಯ ಮಾಡುತ್ತವೆ.
ಇನ್ನು ತನ್ನ ಗಂಡ ಯೂಲಿಸಿಸ್ ಯುದ್ಧಕ್ಕೆ ಹೋದಾಗ ತನ್ನನ್ನು ಮದುವೆಯಾಗಬಂದ ಗ್ರೀಕ್ ವೀರರನ್ನು ತನ್ನ ವರುಷಗಟ್ಟಲೆ ಮುಗಿಯದ ಹೊಲಿಗೆ, ನೇಯ್ಗೆಗಳಿಂದ ದೂರವಿಟ್ಟ ಪೆನೆಲಪಿಯ ಪ್ರೇಮ ಗ್ರೀಕ್ ಸಾಹಿತ್ಯದಲ್ಲಿ ಹೆಸರುವಾಸಿಯಾಗಿದೆ. ಹ್ಯಾನ್ಸ್ ಕ್ರಿಶ್ಚಿಯನ್ ಆಂಡರ್ಸನ್ ಬರೆದಿರುವ ಸುಪ್ರಸಿದ್ಧ ಕಥೆ ‘ದ ಎಂಪರರ್ಸ್ ನ್ಯೂ ಕ್ಲೋದ್ಸ್’ ನಲ್ಲಿ ಠಕ್ಕರಿಬ್ಬರನ್ನು ತನ್ನ ಬಟ್ಟೆ ಹೊಲಿಯಲು ನಿಯಮಿಸುವ ವಿಲಾಸೀ ರಾಜನೊಬ್ಬ ಫಜೀತಿಗೊಳಗಾದ ವಿವರಣೆಯಿದೆ. ಠಕ್ಕರಿಬ್ಬರು ತಮ್ಮ ಬಳಿಯಿರುವ ವಿಶೇಷ ಬಟ್ಟೆ ಕೇವಲ ಬುದ್ಧಿವಂತರಿಗೆ ಮಾತ್ರ ಕಾಣುವದೆಂದೂ ಪೆದ್ದರಿಗೆ ಕಾಣಬರದೆಂದು ಹೇಳಿ ತಾವು ಪೆದ್ದರೆಂದು ಒಪ್ಪಿಕೊಳ್ಳಲು ರೆಡಿಯಿಲ್ಲದ ರಾಜನಾದಿಯಾಗಿ ಎಲ್ಲರಿಗೂ ಮಂಕುಬೂದಿ ಎರಚಿ ಕೊನೆಗೆ ರಾಜ ನಗ್ನನಾಗಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಾರೆ. ಮಗುವೊಂದು ಜೋರಾಗಿ ನಕ್ಕು ಎಲ್ಲರ ಪೆದ್ದುತನವನ್ನೂ ಬಯಲುಮಾಡುತ್ತದೆ. ‘ಸೀಮ್ಸ್ಟ್ರೆಸ್ ಆಫ್ ಸಾಲ್ಸ್ಬರಿ’ ಎಂಬ ಆಂಗ್ಲ ಜಾನಪದ ಕಥೆಯಲ್ಲಿ ತನ್ನ ಭಾವೀ ಪತ್ನಿಯನ್ನು ಆಯ್ಕೆ ಮಾಡಲು ಆಗಮಿಸಲಿರುವ ರಾಜಕುಮಾರನನ್ನು ಬರಮಾಡಿಕೊಳ್ಳಲು ಕಾತುರರಾದ ಆಸ್ಥಾನದ ಹೆಂಗಸರು ತಮ್ಮ ಬಟ್ಟೆ ಹೊಲಿಯಲು ಟೈಲರಳೊಬ್ಬಳನ್ನು ನೇಮಿಸುತ್ತಾರೆ. ಆಕೆಗೆ ತಮ್ಮ ಬಟ್ಟೆಗೆ ಹೆಚ್ಚುಹೆಚ್ಚು ಫ್ರಿಲ್, ಬೋ ಇತ್ಯಾದಿ ಹಾಕಿ ಸುಂದರವನ್ನಾಗಿಸಲು ಅಣತಿ ನೀಡುತ್ತಾರೆ. ಆ ಬಟ್ಟೆಗಳು ಎಷ್ಟು ಭಾರವಾಗುತ್ತವೆಂದರೆ ರಾಜಕುಮಾರ ಬಂದು ನಿಂತಾಗ ಎಲ್ಲರ ಬಟ್ಟೆಗಳೂ ಹರಿದುಹೋಗುತ್ತವೆ. ಅವರೆಲ್ಲರ ನಡುವೆ ಸರಳವಾದ ವಸ್ತ್ರಧರಿಸಿ ನಿಂತ ಟೈಲರಳೇ ಸರಿಯೆಂದು ನಿರ್ಧರಿಸಿದ ರಾಜಕುಮಾರ ಆಕೆಯನ್ನೆ ವರಿಸುತ್ತಾನೆ!!
ಫ್ಯಾಶನ್ ಶೋಗಳಲ್ಲಿ ಗೊಂಬೆಗಳ ರೀತಿ ಬಟ್ಟೆ ಧರಿಸಿ ವಯ್ಯಾರದಿಂದ ಕ್ಯಾಟ್ವಾಕ್ ಮಾಡುತ್ತ ರಾಂಪಿನ ಮೇಲೆ ಓಡಾಡುವ ಲಲನೆಯರ ಚೆಂದದ ಹಿಂದೆ ನೂರಾರು ಟೈಲರುಗಳ ಹಗಲುರಾತ್ರೆಗಳ ಶ್ರಮವಿದೆ. ಇಡೀದಿನ ಹೊಲಿಗೆ ಯಂತ್ರದೆದುರು ಕೂತು ಒಂದೇ ಸವನೆ ಹಲವಾರು ಥರದ ಬಟ್ಟೆಹೊಲಿಯುವುದು ಸುಲಭದ ಕೆಲಸವೇನಲ್ಲ. ಬೆಂಗಳೂರಿನ ಹಾಗೂ ಸುತ್ತಮುತ್ತಲ ಪ್ರದೇಶಗಳ ಟೆಕ್ಸ್ಟೈಲ್ ಹೊಲಿಗೆ ಉದ್ಯಮ ಸಾವಿರಾರು ಹೆಣ್ಣುಮಕ್ಕಳಿಗೆ ಉದ್ಯೋಗ ದೊರಕಿಸಿದೆ. ಇವರ ಬಿಡುವಿರದ ದುಡಿಮೆ, ಪಾಡುಗಳ ಬಗ್ಗೆ ಇತ್ತೀಚೆಗೆ ಜೋರಾಗಿ ಚರ್ಚೆ ಕೂಡ ನಡೆಯುತ್ತಿದೆ. ಎಷ್ಟೋ ಹೆಸರಾಂತ ಡಿಸೈನರುಗಳು ಇಂದು ತಮ್ಮ ಬ್ರ್ಯಾಂಡುಗಳಿಗಾಗಿ ಪ್ರಾದೇಶಿಕ ಟೈಲರುಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಹೆಸರು ಕಾಣದಿದ್ದರೂ ನಮ್ಮ ಟೈಲರುಗಳು ಇಂದು ಪ್ಯಾರಿಸ್, ಮಿಲಾನುಗಳವರೆಗೂ ತಮ್ಮ ನೈಪುಣ್ಯವನ್ನು ಕೊಂಡೊಯ್ದಿದ್ದಾರೆ. ಜತೆಗೇ ಜನಪ್ರಿಯವಾಗುತ್ತಿರುವ ವೈಭವೋಪೇತ ಭಾರತೀಯ ಮದುವೆಗಳ ಮೂಲಕವೂ ನಮ್ಮ ಟೈಲರುಗಳ ಕುಶಲತೆ, ನಾಜೂಕು ಎಲ್ಲದಕ್ಕೂ ಹೊಸ ಮಾರುಕಟ್ಟೆ ದೊರಕತೊಡಗಿದೆ. ಫ್ಯಾಶನ್ ಶೋಗಳಿಂದ ಹಿಡಿದು ಮದುವೆಗಳವರೆಗೂ, ನಗರಗಳಿಂದ ಹಿಡಿದು ನಮ್ಮ ಹಳ್ಳಿಯ ಬೀದಿಯವರೆಗೂ ಸರ್ವವ್ಯಾಪಿಯಾಗಿ ನಮ್ಮ ರಂಗುರಂಗಿನ ಬಟ್ಟೆಗಳಿಗೆ ತಮ್ಮ ಹೊಲಿಗೆಯ ಮೆರುಗು ನೀಡುವ ನಮ್ಮ ಟೈಲರುಗಳಿಗೊಂದು ಪುಟ್ಟ ವಂದನೆ.
.