ಆಕ್ಟೇವಿಯೊ ಪಾಜ್ : ಕೊನೆಯ ಮುಂಜಾವ

(ಕವಿತೆ ಒಬ್ಬೊಬ್ಬರಿಗೆ ಒಂದು ತರಹ ಕಾಣುತ್ತದೆ. ಈ ಕವಿತೆಯನ್ನ ಪೋಸ್ಟು ಮಾಡುತ್ತ ಇರುವ ಹಾಗೆಯೆ ನನಗೆ ಹೊಳೆದದ್ದು ಇದು. ಬರೆ ಚೆನ್ನಾಗಿದೆ ಅಂದುಕೊಳ್ಳುವ ಬದಲು ನೀವು ಕವಿತೆ ಓದಿ ನಿಮಗೆ ಉಂಟಾದ ಅರಿವೊ ಭಾವನೆಯೊ, ಏನೋ ಒಂದು – ಅದನ್ನೆಲ್ಲ ನನಗೇಕೆ ವಿಶ್ಲೇಷಣೆಯ ರೂಪದಲ್ಲಿ ಏಕೆ ತಿಳಿಸಬಾರದು? ವಿಮರ್ಶೆ ಕಬ್ಬಿಣದ ಕಡಲೇಕಾಯೇನಲ್ಲ ಅಂತ ಬಲವಾಗಿ ನಂಬುವವಳು ನಾನು. ಒಂದು ವಾರ ಕಾಯುತ್ತೇನೆ. ಆಮೇಲೆ ನೀವು ಕಳಿಸಿರುತ್ತೀರಲ್ಲ, ಅವನ್ನೆಲ್ಲ ಕೂಡಿಸಿ ಮುಂದಿನ ವಾರ ಇಲ್ಲಿಯೆ ಹಾಕುವಾ. ಏನೂ ಸಂಕೋಚ ಬೇಡ. ನಿಮಗನಿಸಿದ್ದನ್ನ ನೇರವಾಗಿ ಎಲ್ಲರಿಗು ಅರ್ಥವಾಗುವ ಹಾಗೆ ಬರೆದರೆ ಸಾಕು. ಕವಿತೆ ಓದಿ. ಆರಾಮವಾಗಿ ನನ್ನ ಕಮೆಂಟ್ ಬಾಕ್ಸಿನಲ್ಲಿ ಬರೆಯಿರಿ. ಕೊನೆಗೆ ನಿಮಗೇ ಆಶ್ಚರ್ಯವಾದೀತು!)

restingwoman-copy1

ಕಗ್ಗಾಡಿನಲೆಲ್ಲೊ ಕಳೆದುಹೋಗಿರುವ ನಿನ್ನ ಕೂದಲು
ನನ್ನ ಕಾಲುಗಳ ಸ್ಪರ್ಶಿಸುವ ನಿನ್ನ ಕಾಲುಗಳು
ನಿದ್ದೆಯೊಳಗೆ ನೀನು ರಾತ್ರಿಯ ಮೀರಿ ಬೆಳೆದಿರುವೆ
ಆದರು ನಿನ್ನ ಕನಸು ಕೋಣೆಯ ಮೇರೆ ದಾಟದು
ಎಷ್ಟು ಸಣ್ಣಗಿದ್ದವರು ನಾವು, ಹೇಗಾಗಿ ಹೋದೆವು?
ಹೊರಗಡೆ ಟ್ಯಾಕ್ಸಿಯೊಂದು
ಭೂತಗಳ ಹೊರೆ ಹೊತ್ತು ಸಾಗುತ್ತದೆ
ಪಕ್ಕದಲ್ಲೆ ಹರಿವ ನದಿ
ತಿರುವುಮುರುವಾಗಿಯೆ ಪ್ರವಹಿಸುತ್ತದೆ
ನಾಳೆಯೆಂಬುದು ಬರೆ ಇನ್ನೊಂದು ದಿನವಾಗುವುದೆ?

(ಕವಿ: ಆಕ್ಟೇವಿಯೊ ಪಾಜ್, ‘ಸಲಮ್ಯಾಂದ್ರಾ’)
 ಚಿತ್ರಕೃಪೆ: www.graphicsoft.about.com ಕಲೆ: Merike

8 thoughts on “ಆಕ್ಟೇವಿಯೊ ಪಾಜ್ : ಕೊನೆಯ ಮುಂಜಾವ

  1. ಟೀನಾ ಮೇಡಮ್,

    ಓದುತ್ತಿದ್ದಂತೆ ಒಂದು ಕಲ್ಪನಾ ಲೋಕಕ್ಕೆ ಇಳಿದಂತೆ, ಅನೇಕ ಸ್ಥಿರ ಚಿತ್ರಗಳು ಒಂದರ ನಂತರ ಕಣ್ಣ ಮುಂದೆ ಹಾದು ಹೋದಂತೆ ಅನ್ನಿಸಿತು. “ನಿದ್ರೆಯೊಳಗೆ ನೀನು ರಾತ್ರಿ ಮೀರಿ ಬೆಳೆದಿರುವೆ ” ಈ ಪದಪ್ರಯೋಗದ ಸಾಲುಗಳು ನನಗೆ ತುಂಬಾ ಇಷ್ಟವಾಯಿತು…ಅದರೆ ಇದರ ಚಿತ್ರವನ್ನು ಕಲ್ಪಿಸಿಕೊಳ್ಳಲು ಆಗಲಿಲ್ಲ..ಒಂದು ರೀತಿಯ ಭಾವನೆ ಮಾತ್ರವೇ ಮನದಲ್ಲಿ ಹರಿದಂತಾಯಿತು….

    ಧನ್ಯವಾದಗಳು…..

  2. ಮಂಗಳಗಂಗೋತ್ರಿಯ ಪ್ರಶಾಂತ ಪರಿಸರದಲ್ಲಿ, ಭೋಜನೋತ್ತರ ಸಮಯದ ಪೀರಿಯಡ್ಡುಗಳಲ್ಲಿ ಒತ್ತಿಸಿಕೊಂಡು ಬರುವ ತೂಕಡಿಕೆಯ ನಡು,ನಡುವೆಯೇ ಪಾಜ್é್ನ ಪದ್ಯಗಳ ಬಗೆಗಿನ ಚಚರ್ೆಯ ನೆನಪಾಗುತ್ತದೆ. ದೂರದ ಮೆಕ್ಸಿಕೋದಲ್ಲಿಯೇ ಕುಳಿತು, ಅಮೇರಿಕಾದ ಹಾಥೋನರ್್ನ ಗದ್ಯ, ಯುರೋಪಿನ Yeats’ ಕಾವ್ಯ, ಭಾರತದ ವಿಶಾಖದತ್ತನ ಕಾವ್ಯ, ಪೌರಾತ್ಯ ಜಪಾನಿನ ನೋಹ್ ರಂಗಭೂಮಿ ಹೀಗೆ ಜಗತ್ತಿನ ಹತ್ತು ಹಲವು ಕಾವ್ಯಗಳ ರಸಾಯನವನ್ನ ತನ್ನ ಪದ್ಯವೊಂದರಲ್ಲೇ ಹುದುಗಿಸಿಡುತ್ತಿದ್ದ ಮಹಾನುಭವ ಈ ಎಡಪಂಥೀಯ. ನೆನಪಿಸಿದ್ದಕ್ಕೆ ಧನ್ಯವಾದಗಳು ಮೇಡಂ

  3. ನಮಸ್ತೆ,
    http://yuvakavi.ning.com : ಇದು ಕನ್ನಡದ ಯುವ ಕವಿಗಳ ತಾಣ. ಕವಿಗಳು ಕವಿತೆಗಳನ್ನು ಪ್ರಕಟಿಸಲು, ಅನಿಸಿಕೆಗಳನ್ನು ಹಂಚಿಕೊಳ್ಳಲು ಇಲ್ಲಿ ಅವಕಾಶ. ನಮ್ಮೊಡನೆ ಸೇರಿ…

    ವಂದನೆಗಳೊಂದಿಗೆ,
    ರಾಘವೇಂದ್ರ ಮಹಾಬಲೇಶ್ವರ Delete

  4. ಟೀನಾ,

    ಕವನಗಳ ವಿಶ್ಲೇಷಣೆಗೂ ನನಗೂ ಅಷ್ಟಕ್ಕಷ್ಟೆ, ಆದರೆ ಈ ಕವನವನ್ನು ಓದಿದಾಗ ಅದರ ಬಗ್ಗೆ ಯೋಚಿಸದೇ ಇರಲು ಸಾಧ್ಯವಾಗಲಿಲ್ಲ. ನನಗನ್ನಿಸಿದ್ದು ಹೀಗೆ:

    ಈ ಕವನದಲ್ಲಿ ನನಗೆ ಕಾಣುವುದು ನಿರಾಸೆ ಹಾಗು ವಿಷಾದ. ಅವನು ನಿದ್ದೆಮಾಡುತ್ತಿರುವ ಅವಳನ್ನು ದಿಟ್ಟಿಸುತ್ತಿದ್ದಾನೆ. ಅವಳಲ್ಲಿ ಪ್ರೀತಿಯಿದ್ದರೂ ಏನೋ ಅಸಮಾಧಾನ ಅವನನ್ನು ಕಾಡುತ್ತಿದೆ. ತನಗೆ ಅವಳ ಮೇಲಿನ ಪ್ರೀತಿ ಇಂಗಿ ಹೋಗುತ್ತಿರುವಂತೆ ಅನ್ನಿಸುತ್ತಿದೆ, ಆದರೆ ಅದನ್ನೊಪ್ಪಿಕೊಳ್ಳಲು ಕಷ್ಟವಾಗುತ್ತಿದೆ. ತಾವಿಬ್ಬರೂ ಮೊದಲು ಜೊತೆಯಾದಾಗ ಏನೆಲ್ಲ ಕನಸು ಕಟ್ಟಿದ್ದೆವು ಎಂದು ನೆನೆಸಿಕೊಳ್ಳುತ್ತಾನೆ. ಯಾವಾಗಲೋ ಅವರಿಬ್ಬರ ಕನಸುಗಳು ಬೇರೆಯಾಗಿ ಹೋಗಿ, ಅವರ ನಡುವೆ ಒಡಕು ಮೂಡಿದೆ. ತಿರುವುಮುರುವಾಗಿಯೇ ಹರಿಯುವ ನದಿಯ ಹಾಗೆ, ಅವನ ಮನಸ್ಸು ಅವರಿಬ್ಬರ ಹಿಂದಿನ ಒಮ್ಮತವಿಲ್ಲದ ದಿನಗಳ ಕಡೆಗೇ ಹೋಗುತ್ತಿದೆ. ಹೊರೆಯಾಗಿರುವ ನೆನಪುಗಳು ಅವರಿಬ್ಬರ ನಾಳೆಯ ಬಗ್ಗೆ ಆಶಾಭಾವನೆ ಹೊಂದಲು ಬಿಡುತ್ತಿಲ್ಲ.

    ನಿದ್ದೆಯೊಳಗೆ ನೀನು ರಾತ್ರಿಯ ಮೀರಿ ಬೆಳೆದಿರುವೆ
    ಆದರು ನಿನ್ನ ಕನಸು ಕೋಣೆಯ ಮೇರೆ ದಾಟದು

    ಈ ಸಾಲುಗಳನ್ನು ಹೇಗೆ ಅರ್ಥೈಸಬೇಕೆಂದು ಗೊತ್ತಾಗುತ್ತಿಲ್ಲ. ಅವಳಲ್ಲಿ ಅವನಿಗೇನೋ ಅಸಮಾಧಾನವಿದೆ ಎಂದಷ್ಟೇ ಹೇಳಬಲ್ಲೆ.

    ಸುಂದರವಾದ ಕವನವನ್ನು ಅನುವಾದಿಸಿ, ಅದರ ಬಗ್ಗೆ ನನ್ನ ಅನಿಸಿಕೆಯನ್ನು ಹಂಚಿಕೊಳ್ಳಲು ಅವಕಾಶ ಕಲ್ಪಿಸಿದ್ದಕ್ಕೆ ಥ್ಯಾಂಕ್ಸ್. ನಿಮಗೆ ಈ ಕವನ ಓದಿ ಏನನ್ನಿಸಿತು ಹೇಳಿ, ತಿಳಿಯಲು ಕುತೂಹಲವಾಗುತ್ತಿದೆ.

    -ವಸುಂಧರಾ

  5. ಹಲವು ಚಿತ್ರಗಳನ್ನು ಒಮ್ಮೆಗೇ ಎದುರು ನಿಲ್ಲಿಸುವ ಸಾಮರ್ಥ್ಯವೊಂದಿದೆ.
    ಅತಾಶೆ, ಸಾವು, ನೋವು, ಜಿಗುಪ್ಸೆ ಹೀಗೆ ಹತ್ತು ಹಲವು
    ಮುಖಗಳನ್ನು ತೆರೆದಿಡುತ್ತದೆ.
    ಕಲ್ಪನಾಲೋಕದಿಂದೊಮ್ಮೆಗೇ ವಾಸ್ತವಕ್ಕೆ ಜಿಗಿಸುತ್ತದೆ,
    ಒಮ್ಮೆ ಆತ್ಮಗಳ ಮುಖಾಮುಖಿಯೆನ್ನಿಸುತ್ತದೆ,
    ನಶ್ವರ ಬದುಕಿನ ರೂಪಕದಂತೆ ತೋರುತ್ತದೆ,
    ಅತಿಮಾನಸ, ಅತಿಮಾನುಷದಂತೆ ಭಾಸವಾಗುತ್ತದೆ.

    ಒಟ್ಟಾರೆ ತೀವ್ರವಾಗಿ ಓದಿಸಿಕೊಂಡು ಬಗೆ ಬಗೆಯ
    ಗೊಂದಲಗಳನ್ನು ಸೃಷ್ಟಿಸುತ್ತದೆ.

    ಇಂಥಹ ಕ್ಲಿಷ್ಟಕರ ಪದ್ಯ ಮುಂದಿಟ್ಟ ನಿಮ್ಮ ಮೇಲೆ
    ಕೋಪದೊಂದಿಗೆ, ಖುಷಿಯಾಗುತ್ತಿದೆ.

    – ಚಂದಿನ

  6. ಚಿಕ್ಕವರಿರುವಾಗಿನ ಮುಗ್ದತೆ, ಕೈಗೆಟುಕೋ ಚಿಕ್ಕ ಚಿಕ್ಕ ವಸ್ತುಗಳೇ ಕೊಡುವ ಕ್ವಿಂಟಾಲ್ ಗಟ್ಟಲೇ ಸಂತೋಷ ದೊಡ್ಡವರಾಗಿ ಎಶ್ಟು ಸಾಧನೆ ಮಾಡಿದರೂ, ಎಷ್ಟು ಸಂಪತ್ತು-ಹೆಸರು ಗಳಿಸಿದರೂ ಸಿಗದು… ಪ್ರತಿ ಗಳಿಗೆಗೂ ಹತಾಶೆ, ವಿಷಾದ, ಅತೃಪ್ತಿ ಕಾಡಿ ಕಂಗಾಲಾಗಿಸುತ್ತದೆ… ನಾವುಗಳು ಮತ್ತದೇ ತಿರುವು ಮುರುವು, ಮತ್ತದೇ ಭಯಾನಕ ಸತ್ಯಗಳು ನಾಳೆಯೂ ಎದುರಾಗಬಹುದೇ ಎಂದು ಇವತ್ತು ಮುಗಿಯುವ ಮೊದಲೇ ಚಿನ್ತೆಗಿಳಿದುಬಿಡುತ್ತೇವೆ…. ನಮ್ಮವರ ಮೇಲೆ ಅದೆಷ್ಟು ಪ್ರೀತಿಯಿದ್ದರೂ ನಮ್ಮಲ್ಲಿನ ಅಹಮ್ಮಿನ ಭೂತ ಆ ಪ್ರೀತಿಯನ್ನು ಪ್ರೀತಿಪಾತ್ರರ ಎದುರಿಗೆ ತೋರಗೊಡಲು ಬಿಡುವುದೇ ಇಲ್ಲ…. ನನಗನಿಸಿದ್ದು ಇಷ್ಟು… ಚೆನ್ನಾಗಿದೆ.. ತುಂಬಾ ಇಷ್ಟವಾಯ್ತು…

  7. ಮರುಕೋರಿಕೆ (Pingback): ಒಂದು ಕವಿತೆ - ಆರು ಜೊತೆ ಕಣ್ಣು. « Tinazone-ಕಣ್ಣ ಕೋಣೆಯ ಕಿಟಕಿ…

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s